Sunday, November 23, 2014

ಇಂಟರ್‌ಸ್ಟೆಲ್ಲಾರ್: ಅಂತರಿಕ್ಷದಲ್ಲಿ ಭಾವನೆಗಳ ತಾಕಲಾಟ...

ಭೂಮಿ ಮರಣ ಶಯ್ಯೆಯಲ್ಲಿ ಮಲಗಿದೆ. ಮನುಷ್ಯನ ಎಲ್ಲ ತಂತ್ರಜ್ಞಾನಗಳು, ಯಂತ್ರಗಳು ಅಸಹಾಯಕವಾಗಿವೆ. ಎಲ್ಲಿ ನೋಡಿದರಲ್ಲಿ ಧೂಳು. ಮನುಷ್ಯನಿಗೆ ಬೇಕಾಗಿರುವುದು ಕೇವಲ ಆಹಾರ ಮಾತ್ರ. ಅದಕ್ಕಾಗಿ ಕೃಷಿಕರನ್ನಷ್ಟೇ ಭೂಮಿ ತನ್ನ ಕಟ್ಟ ಕಡೆಯ ದಿನಗಳಲ್ಲಿ ನಂಬಿ ಕೊಂಡಿದೆ. ಎಂಜಿನಿಯರ್‌ಗಳು ಅದಕ್ಕೆ ಬೇಡವಾಗಿದೆ. ವ್ಯವಸ್ಥೆಗೆ  ಅತ್ಯುತ್ತಮ ಕೃಷಿಕರು ಬೇಕು. ರೋಗ ಪೀಡಿತ ಭೂಮಿಯ ಒಡಲೊಳಗಿಂದ ಆಹಾರ ಬೆಳೆಗಳನ್ನು ಹೊರತೆಗೆಯುವ ಅನಕ್ಷರಸ್ಥ ರೈತರು ಮಾತ್ರ ಅದರ ತಕ್ಷಣದ ಆವಶ್ಯಕತೆ. ಇಂತಹದೊಂದು ಸಂದರ್ಭವನ್ನಿಟ್ಟುಕೊಂಡು ‘ಇಂಟರ್‌ಸ್ಟೆಲ್ಲರ್’ ಸಿನೆಮಾದ ಕತಾವಸ್ತುವನ್ನು ಹೆಣೆಯಲಾಗಿದೆ. 

ಇಂತಹ ಹೊತ್ತಿನಲ್ಲಿ ತಂತ್ರಜ್ಞಾನದ ಕುರಿತಂತೆ ಇನ್ನೂ ಭರವಸೆಯನ್ನು, ಆಸಕ್ತಿಯನ್ನು ಉಳಿಸಿಕೊಂಡಿರುವ ಕೂಪರ್(ಮಕಾನಹೆ) ಮತ್ತು ಆತನ ಮಗಳು ಮರ್ಫ್(ಫಾಯ್) ಅಪ್ರಸ್ತುತರಾಗಿ ಬದುಕುತ್ತಿದ್ದಾರೆ. ಆದರೆ ಅವರ ಹುಡುಕಾಟ ಅವರ ಬದುಕಿನಲ್ಲಿ ಹೊಸ ಜಗತ್ತೊಂದನ್ನು ತೆರೆಯುತ್ತದೆ. ಕೂಪರ್‌ಗೆ ಅನಿರೀಕ್ಷಿತವಾಗಿ ಬಾಹ್ಯಾಕಾಶ ಯಾನದ ಅವಕಾಶವನ್ನು ತೆರೆದು ಕೊಡುತ್ತದೆ. ಇದೇ ಸಂದರ್ಭದಲ್ಲಿ ಬಾಲಕಿ ಮರ್ಫ್‌ಗೆ ಸಿಗುವ ಅಗೋಚರ ಸಂಕೇತಗಳು ಭೂಮಿಯ ಅಳಿದುಳಿದ ಭರವಸೆಯಾಗಿ ಕಾಣಿಸಿಕೊಳ್ಳುತ್ತದೆ. ಒಂದೆಡೆ ಹೊಸ ಮನುಕುಲದ ಉಳಿವಿಗಾಗಿ ಹೊಸ ಗ್ರಹವನ್ನು ಹುಡುಕುತ್ತಾ ಗ್ಯಾಲಕ್ಸಿಯಾಚೆಗೆ ಹೊರಟಿರುವ ಗಗನಯಾತ್ರಿಗಳ ತಂಡ. ಮಗದೊಂದೆಡೆ ತಂದೆಯನ್ನು ಹೋಗದಂತೆ ತಡೆಯುವಲ್ಲಿ ವಿಫಲಳಾಗಿ, ಆತನ ನಿರೀಕ್ಷೆಯಲ್ಲಿ ಹೊಸತೊಂದರ ಹುಡುಕಾಟದಲ್ಲಿರುವ ಮಗಳು. ಇವರಿಬ್ಬರ ನಡುವಿನ ಭಾವನಾತ್ಮಕ ಸಂಬಂಧವನ್ನು ತೆರೆದಿಡುವ ಚಿತ್ರವಾಗಿ ಇಂಟರ್‌ಸ್ಟೆಲ್ಲರ್ ನಮ್ಮನ್ನು ಸೆಳೆಯುತ್ತದೆ. 

ಇತ್ತೀಚೆಗೆ ಬಾಹ್ಯಾಕಾಶಯಾನಕ್ಕೆ ಸಂಬಂಧಿಸಿದ ಚಿತ್ರಗಳು ಸಾಲು ಸಾಲಾಗಿ ಬರುತ್ತಿವೆ. ಗ್ರಾವಿಟಿಯಂತೂ ಅಂತಹ ಉತ್ತಮ ಚಿತ್ರಗಳಲ್ಲಿ ಒಂದು. ಇಂಟರ್‌ಸ್ಟೆಲ್ಲರ್ ಚಿತ್ರ ಅಂತಹ ಹಲವು ಬಾಹ್ಯಾಕಾಶ ಸಂಬಂಧಿ ಚಿತ್ರಗಳ ಕೊಂಡಿಯನ್ನು ತನ್ನೊಳಗೆ ಇರಿಸಿಕೊಂಡಿದೆ. ಈ ಹಿಂದೆ ತೆರೆಕಂಡ ವಿವಿಧ ವೈಜ್ಞಾನಿಕ ಚಿತ್ರಗಳನ್ನು ಒಟ್ಟಿಗೆ ನೋಡಿದ ಅನುಭವವನ್ನು ‘ಇಂಟರ್‌ಸ್ಟೆಲ್ಲರ್’ ನೀಡುತ್ತದೆ.ಈ ಚಿತ್ರದಲ್ಲಿ ‘2001: ಎ ಸ್ಪೇಸ್ ಒಡೆಸ್ಸಿ ’ಚಿತ್ರದ ದಟ್ಟ ಛಾಯೆ ಕಾಣುತ್ತದೆ. ಜೊತೆಜೊತೆಗೆ ಕಂಟ್ಯಾಕ್ಟ್, ಗ್ರಾವಿಟಿ ಚಿತ್ರಗಳೂ ನೆನಪಾಗುತ್ತವೆ. ಇಂಟರ್‌ಸ್ಟೆಲ್ಲರ್ ಮೂಲಕ ನಿರ್ದೇಶಕ ನೊಲಾನ್ ಪ್ರೇಕ್ಷಕರಲ್ಲಿ ಬಾಹ್ಯಾಕಾಶದ ಬಗ್ಗೆ ಕುತೂಹಲವನ್ನು ಕೆರಳಿಸುವಲ್ಲಿ ಸಫಲರಾಗಿದ್ದಾರೆ. ಒಂದು ವೈಜ್ಞಾನಿಕ ಕಥಾಪ್ರಧಾನ ಚಿತ್ರದಲ್ಲೂ ಮಾನವೀಯ ಸಂಬಂಧಗಳನ್ನು ಎಷ್ಟು ಸುಂದರ ವಾಗಿ ಹಾಗೂ ನವಿರಾಗಿ ತೋರಿಸ ಬಹುದೆಂಬುದನ್ನು ಅವರು ಈ ಚಿತ್ರದಲ್ಲಿ ಸಾಬೀತುಪಡಿಸಿದ್ದಾರೆ.ಅತ್ಯದ್ಭುತ ದೃಶ್ಯವೈಭವದ ಜೊತೆ ಸಮರ್ಥ ಕತೆ, ಪ್ರತಿಭಾವಂತ ತಾರೆಯರ ಭಾವಪೂರ್ಣ ಅಭಿನಯ ಇವೆಲ್ಲವೂ ಇಂಟರ್‌ಸ್ಟೆಲ್ಲರ್‌ನ್ನು, ಒಂದು ನೋಡಬಹುದಾದ ಚಿತ್ರವಾಗಿ ಪರಿವರ್ತಿಸಿದೆ. ಇಡೀ ಚಿತ್ರದ ಕುತೂಹಲಕಾರಿ ಘಟ್ಟವೆಂದರೆ, ಭೂಮಿಯಾಚೆಗಿರುವ ತಂದೆ ಮತ್ತೆ ಮಗಳನ್ನು ಸೇರುತ್ತಾನೆಯೋ ಇಲ್ಲವೋ ಎನ್ನುವುದು. ಚಿತ್ರದ ಕ್ಲೈಮಾಕ್ಸ್ ಕೂಡ ಹೃದಯಂಗಮವಾಗಿದೆ. ಮನುಷ್ಯ ಸಂಬಂಧಗಳನ್ನು ಎತ್ತಿ ಹಿಡಿಯುವಂತಿದೆ.

 ಆದರೆ ಇಡೀ ಭೂಮಿಯನ್ನು ತಂತ್ರಜ್ಞಾನದ ಅಡಿಯಾಳನ್ನಾಗಿ ಈ ಚಿತ್ರ ನೋಡುತ್ತದೆ. ಕೂಪರ್‌ನನ್ನು ಈ ತಂತ್ರಜ್ಞಾನದ ಪ್ರತಿನಿಧಿಯಾಗಿ ವೈಭವೀಕರಿಸುತ್ತದೆಯೋ ಎಂಬ ಅತೃಪ್ತಿ ಕಾಡುತ್ತದೆ. ಕೃಷಿಯೇ ಅಂತಿಮವೆನ್ನುವ ಸ್ಥಿತಿಯನ್ನು ಒಪ್ಪಿಕೊಳ್ಳುವ ದಿನಗಳ ಕಡೆಗೆ ವಾಲುವ ಭೂಮಿಯನ್ನು ಇನ್ನಷ್ಟು ಮಾನವೀಯ ನೆಲೆಯಲ್ಲಿ ಕಟ್ಟಿಕೊಡುವ ಅವಕಾಶ ನಿರ್ದೇಶಕನಿಗಿತ್ತು. ಆದರೆ ಚಿತ್ರದ ಗುರಿ ಬಾಹ್ಯಾಕಾಶವೇ ಆಗಿರುವುದರಿಂದ ಭೂಮಿಯ ಕೆಲವು ವಾಸ್ತವಗಳನ್ನು ನಿರ್ದೇಶಕರು ಉದ್ದೇಶಪೂರ್ವಕವಾಗಿ ಬದಿಗೆ ಸರಿಸುತ್ತಾರೆ ಎನ್ನಿಸುತ್ತದೆ.  ಚಿತ್ರದ ಮಿತಿಯೂ ಇದೇ ಆಗಿದೆ. ಅನ್ನದಾತ ರೈತರು ಮುಖ್ಯ ಎನ್ನುವುದನ್ನು ಭೂಮಿ ಒಪ್ಪಿಕೊಳ್ಳುವ ಸಂದರ್ಭವನ್ನು ಭೂಮಿಯ ಸೋಲು ಎಂದು ನಿರ್ದೇಶಕರು ಚಿತ್ರಿಸಲು ಹೊರಟಿರುವುದು ಚಿತ್ರದ ವೈಫಲ್ಯವೂ ಆಗಿದೆ.

 ನಾಸಾದ ಮಾಜಿ ಪೈಲಟ್ ಆಗಿ ಕೂಪರ್ ಪಾತ್ರದಲ್ಲಿ ಮ್ಯಾಕ್ ಹೃದಯಂಗಮವಾಗಿ ನಟಿಸಿದ್ದಾರೆ. ಮರ್ಫ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಫಾಯ್ ಈ ಚಿತ್ರದ ಇನ್ನೊಂದು ಹೆಗ್ಗಳಿಕೆ. ಕೂಪರ್ ಜೊತೆಗಿರುವ ಗಗನಯಾತ್ರಿಕರಾದ ಅಮೆಲಿಯಾ (ಹ್ಯಾತ್‌ವೆ), ರೊಮಿಲ್ಲಿ (ಗ್ಯಾಸಿ), ಡೊಯ್ಲಾ (ಬೆಂಟ್ಲೆ) ಕೂಡ ತಮ್ಮ ಪಾತ್ರಕ್ಕೆ ನ್ಯಾಯವನ್ನು ಕೊಟ್ಟಿದ್ದಾರೆ. 169 ನಿಮಿಷಗಳ ಈ ಚಿತ್ರವು ನಿಧಾನಗತಿಯಲ್ಲಿ ಸಾಗುತ್ತಿದೆಯೇನೋ ಎಂದು ಅಲ್ಲಲ್ಲಿ ಅನ್ನಿಸುತ್ತದೆ. ಚಿತ್ರದಲ್ಲಿ ಅದ್ಬುತವಾದ ವಿಶ್ಯುವಲ್ ಎಫೆಕ್ಟ್ (ದೃಶ್ಯ ಪರಿಣಾಮ)ಗಳಿವೆ. ಐಮ್ಯಾಕ್ಸ್ ತಂತ್ರಜ್ಞಾನದ ಪರದೆಯಲ್ಲಿ ಇಂಟರ್‌ಸ್ಟೆಲ್ಲರ್ ವೀಕ್ಷಿಸಿದಲ್ಲಿ ಅದರ ಅನುಭವವೇ ಬೇರೆ. ಹ್ಯಾನ್ಸ್‌ಝಿಮ್ಮರ್ ಅವರ ಹಿನ್ನೆಲೆ ಸಂಗೀತ, ಚಿತ್ರಕ್ಕೆ ವಿಶಿಷ್ಟವಾದ ಮೆರುಗನ್ನು ನೀಡುತ್ತದೆ. ಒಮ್ಮೆ ನೋಡಲೇ ಬೇಕಾದ ಚಿತ್ರ ಇಂಟರ್‌ಸ್ಟೆಲ್ಲರ್.

3 comments:

  1. http://9gag.com/gag/aPyoPqq?ref=fb.s

    ReplyDelete
  2. http://img-9gag-ftw.9cache.com/photo/aPyoPqq_700b.jpg

    ReplyDelete
  3. ಆದರೂ ನನಗೆ ನೊಲಾನ್ ರ ಇನ್ಸೆಪ್ಷನ್ ನೀಡಿದ ಖುಷಿ ಇದರಿಂದ ಸಿಗಲಿಲ್ಲ ಸರ್.....

    ReplyDelete