Wednesday, November 12, 2014

ಇಂತಿ ನಮಸ್ಕಾರಗಳು: ಅವರ ತಲೆ-ಇವರ ದೇಹಗಳ ನಡುವೆ

 ‘ಇಂತಿ ನಮಸ್ಕಾರಗಳು’ ಕನ್ನಡದ ಖ್ಯಾತ ಲೇಖಕ ನಟರಾಜ್ ಹುಳಿಯಾರ್ ಅವರು ಬರೆದಿರುವ ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ. ಪಿ. ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಅವರು ಕನ್ನಡ ಸಾಹಿತ್ಯ ಕಂಡ ಎರಡು ವಿಸ್ಮಯಗಳು. ಈ ಎರಡೂ ಲೇಖಕರು ಒಬ್ಬರ ಜೊತೆ ಇನ್ನೊಬ್ಬರು ಇದ್ದೂ ಇಲ್ಲದಂತೆ ಬದುಕಿದರು. ಪರಸ್ಪರರಿಗೆ ಹೆದರಿಕೊಂಡು, ಪರಸ್ಪರ ಹೆಮ್ಮೆಪಟ್ಟುಕೊಂಡು, ಪರಸ್ಪರ ವಿಮರ್ಶೆಗೊಳಪಡಿಸಿಕೊಳ್ಳುತ್ತಾ ಸಮಕಾಲೀನರಾಗಿ ಬದುಕಿದವರು ಡಿ. ಆರ್. ನಾಗರಾಜ್ ಮತ್ತು ಲಂಕೇಶ್. ಒಂದು ರೀತಿಯಲ್ಲಿ ಲಂಕೇಶ್ ಅವರು ನಾಗರಾಜ್ ಜೊತೆಗೆ ಅಂತರ ಕಾಯುತ್ತಾ ಬರೆದರು. ಹಾಗೆಯೇ ನಾಗರಾಜ್ ಕೂಡ ಲಂಕೇಶ್ ಜೊತೆಗೆ ಒಂದು ಅಂತರವನ್ನು ಕೊನೆಯವರೆಗೂ ಉಳಿಸಿಕೊಂಡರು. ಹೀಗಿದ್ದರೂ ಅವರು ಪರಸ್ಪರ ದೂರವಾಗಲು ಯಾವತ್ತೂ ಇಷ್ಟಪಡಲಿಲ್ಲ.

ಈ ಎರಡು ದಿಗ್ಗಜರ ಜೊತೆಗೆ ಒಬ್ಬ ಸೃಜನಶೀಲ ಯುವ ಬರಹಗಾರ ಸಿಕ್ಕಿ ಹಾಕಿಕೊಂಡರೆ ಆತ ತನ್ನ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವುದಕ್ಕಿಂತ ಮುದುಡಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಆದರೆ ನಟರಾಜ್ ಹುಳಿಯಾರ್ ಅದಕ್ಕೆ ಅವಕಾಶ ಕೊಡದೆ, ಈ ಎರಡು ದೈತ್ಯ ಪ್ರತಿಭೆಗಳ ಜೊತೆಗೆ ತನ್ನತನವನ್ನು ಉಳಿಸಿಕೊಳ್ಳಲು ಏಗಾಡಿದವರು. ಈ ಎರಡೂ ಮೇಷ್ಟ್ರುಗಳು ತಮ್ಮನ್ನು ಆಹುತಿ ತೆಗೆದುಕೊಳ್ಳದ ಹಾಗೆ ಕೊನೆಯವರೆಗೂ ಜಾಗರೂಕತೆಯಿಂದ ತನ್ನ ಸೃಜನಶೀಲ ಚಟುವಟಿಕೆಗಳಿಗೆ ಪೂರಕವಾಗಿ ಆ ಬೆಂಕಿಯ ಕಾವನ್ನು ತಮ್ಮದಾಗಿಸುತ್ತಾ  ಬಂದವರು. ಒಂದೆಡೆ ನಾಗರಾಜ್ ಅವರ ಮೆದುಳು ಮತ್ತು ಲಂಕೇಶ್ ಅವರ ದೇಹ ಎರಡನ್ನೂ ತನ್ನದಾಗಿಸಿಕೊಳ್ಳುವ ಹಪಹಪಿಕೆ ಅವರ ಬಹುತೇಕ ಬರಹಗಳಲ್ಲಿ ಕಾಣುತ್ತದೆ. ‘ಗಾಳಿ-ಬೆಳಕು’ ಅಂಕಣವನ್ನು ನಟರಾಜ್ ಅವರು ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಇತ್ತೀಚೆಗೆ ಅದು ಸಂಕಲನವಾಗಿ ಹೊರಬಂದಿದೆ. ಅಲ್ಲಿನ ಬರಹಗಳಲ್ಲಿ ಇಬ್ಬರೂ ಮೇಧಾವಿಗಳ ಪ್ರಭಾವ, ಪರಿಣಾಮಗಳು ಎದ್ದು ಕಾಣುತ್ತವೆ. ಹಾಗೆಯೇ ಅದರಿಂದ ಕಳಚಿಕೊಳ್ಳುವ ಹವಣಿಕೆ ಕೂಡ. ಗಿರೀಶ್ ಕಾರ್ನಾಡರ ಹಯವದನ ನಾಟಕದಲ್ಲಿ ಪದ್ಮಿನಿ ಎನ್ನುವ ಕಥಾನಾಯಕಿ ಕಪಿಲನ ದೇಹ ಮತ್ತು ದೇವದತ್ತನ ತಲೆ ಎರಡನ್ನೂ ತನ್ನದಾಗಿಸಿಕೊಂಡು ಪೂರ್ಣತೆಯನ್ನು ಪಡೆಯುವ ವಿಫಲ ಹೋರಾಟದಂತೆಯೇ ಇದು. ಈ ಹೋರಾಟದಲ್ಲೇ ಅವರ ಬರಹಗಳು ತನ್ನತನವನ್ನು ಕಂಡುಕೊಳ್ಳುತ್ತವೆ.


 ಮೇಲಿನೆಲ್ಲ ಕಾರಣಗಳಿಂದ ನಟರಾಜ್ ಹುಳಿಯಾರ್ ಅವರು ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಅವರನ್ನು ಹೇಗೆ ನೋಡುತ್ತಾರೆ ಎನ್ನುವುದು ಹೆಚ್ಚು ಕುತೂಹಲವನ್ನು ಹುಟ್ಟಿಸುತ್ತದೆ. ಎರಡು ಬೆಂಕಿಯ ಕುಲುಮೆಯ ನಡುವೆ ತನ್ನನ್ನು ತಾನು ಸುಟ್ಟು ಹೋಗದಂತೆ ಕಾಪಾಡಿಕೊಳ್ಳುತ್ತ ಅವರ ಕಾವನ್ನು ತನ್ನದಾಗಿಸಿಕೊಂಡ ನಟರಾಜ್ ಕಥಾನಕ ನಿಜಕ್ಕೂ ಎಲ್ಲ ಸೃಜನಶೀಲ ಬರಹಗಾರರಿಗೂ ಒಂದು ಕೈ ದೀವಿಗೆಯಾಗಬಹುದು. ನಾಗರಾಜ್ ಮತ್ತು ಲಂಕೇಶ್ ಬರಹಗಳಿಗೆ ಒಂದು ಒಳ್ಳೆಯ ಪ್ರವೇಶವಾಗಿಯೂ ಈ ಕತಿಯನ್ನು ನಾವು ಸ್ವೀಕರಿಸಬಹುದು. ಲಂಕೇಶ್ ಮತ್ತು ನಾಗರಾಜ್ ಎಂಬ ಎರಡು ಮಾರ್ಗಗಳು ಸೇರುವ ಕೊಂಡಿಗಳನ್ನು ಗುರುತಿಸುತ್ತಲೇ ಅದು ಪ್ರಜ್ಞೆಗೆ ಮಾತ್ರ ಸೀಮಿತವಾಗಿದೆ ಎನ್ನುವೂದನ್ನೂ ನಟರಾಜ್ ಉಲ್ಲೇಖಿಸುತ್ತಾರೆ. ಬಹುಶಃ ನಟರಾಜ್ ಅಂತಹ ಒಂದು ಪ್ರಮುಖ ಕೊಂಡಿಯಾಗಿಯೂ ನಮಗಿಲ್ಲಿ ಭಾಸವಾಗುತ್ತಾರೆ.

 ಈ ಕೃತಿಯಲ್ಲಿ ಸುಮಾರು 11 ಅಧ್ಯಾಯಗಳನ್ನು ಲಂಕೇಶರಿಗೂ, 13 ಅಧ್ಯಾಯಗಳನ್ನು ಡಿ. ಆರ್. ನಾಗರಾಜರಿಗೂ ಮೀಸಲಿಟ್ಟಿದ್ದಾರೆ ಹುಳಿಯಾರ್. ಲಂಕೇಶರ ಕೃತಿಗಳನ್ನು ಪರಿಚಯಿಸುತ್ತಲೇ ಅದರೊಳಗಿನ ಪಾತ್ರಗಳ ಮೂಲಕ ಲಂಕೇಶರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ವಸಾಹತು ಶಾಹಿಯನ್ನು ಹಾಗೂ ದೇಶೀ ಲೋಕಗಳನ್ನು ಗ್ರಹಿಸುವ ಆಳವಾದ ಬೌದ್ಧಿಕ ಚಿಂತನೆಯನ್ನು ಬೆಳೆಸಿದ ಡಿ. ಆರ್. ನಾಗರಾಜ್ ಎನ್ನುವ ಗುರುವಿನ ಕುರಿತಂತೆ ಬರೆಯುವಾಗಲೂ ಅವರು, ಒಂದು ಅಂತರವನ್ನು ಇಟ್ಟುಕೊಂಡೇ ಬರೆಯುತ್ತಾರೆ. ಎಲ್ಲೂ ಭಾವನಾತ್ಮಕವಾಗಿ ಕೊಚ್ಚಿ ಹೋಗದೆ ಅಥವಾ ತನ್ನನ್ನು ಉಳಿಸಿಕೊಳ್ಳುವ ಭರದಲ್ಲಿ ಬರಹಗಳನ್ನು ಬರೇ ವರದಿಯಾಗಿಯೂ ಉಳಿಸಿಕೊಳ್ಳದೇ ಹೊಸ ಕಥನ ಶೈಲಿಯ ಮೂಲಕ ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಅವರನ್ನು ಪರಿಚಯಿಸುತ್ತಾರೆ. ನಟರಾಜ್ ಅವರೇ ಹೇಳುವ ರೀತಿಯಲ್ಲಿ ಈ ಕೃತಿ ವಿವಿಧ ಪ್ರಕಾರಗಳು ಬೆರೆತ ಆಧುನಿಕೋತ್ತರ ಸಾಂಸ್ಕೃತಿಕ ಕಾದಂಬರಿಯೂ ಹೌದು. ಲಂಕೇಶ್ ಮತ್ತು ನಾಗರಾಜ್ ಅವರ ಕುರಿತಂತೆ ಹೊಸ ಓದಿಗೆ ನಿಮ್ಮನ್ನು ಈ ಕತಿ ಎಳೆಯುತ್ತದೆ. ಅದುವೇ ಈ ಕೃತಿಯ ಹೆಚ್ಚುಗಾರಿಕೆ. ಪಲ್ಲವ ಪ್ರಕಾಶನ ಹೊರತಂದಿರುವ ಈ ಪುಸ್ತಕದ  ಮುಖಬೆಲೆ 180 ರೂ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ-94803 53507

No comments:

Post a Comment