Saturday, October 25, 2014

ಮುರುಗದಾಸ್ ಬೀಸಿದ ಕತ್ತಿ

ತುಪಾಕಿ ನಿರೀಕ್ಷೆಯ ಗುರಿಯನ್ನು ಮುಟ್ಟಲಿಲ್ಲ ಎನ್ನುವ ಕಾರಣಕ್ಕೋ ಏನೋ ಇದೀಗ ನಿರ್ದೇಶಕ ಮುರುಗದಾಸ್ ‘ಕತ್ತಿ’ ಬೀಸಿದ್ದಾರೆ. ಅದು ಕೆಲವರ ಕುತ್ತಿಗೆಯನ್ನು ಸವರಿಕೊಂಡು ಹೋಗಿರುವುದು ಈ ಬಾರಿಯ ವಿಶೇಷ. ಸಾಧಾರಣವಾಗಿ ಮುರುದಾಸ್ ಚಿತ್ರದಲ್ಲಿ ಯಥೇಚ್ಛ ಮನರಂಜನೆಗಳಿರುತ್ತವೆ. ಘಜನಿ ಚಿತ್ರ ಮುರುಗದಾಸ್ ಅವರನ್ನು ಭಿನ್ನ ನಿರ್ದೇಶಕನ ಸಾಲಲ್ಲಿ ನಿಲ್ಲಿಸಿತು. ಒಂದು ಮಾಮೂಲಿ ಕಮರ್ಶಿಯಲ್ ಚಿತ್ರವನ್ನು ಹೊಸ ಬಗೆಯ ನಿರೂಪಣೆಯ ಮೂಲಕ ಜನರಿಗೆ ನೀಡಿದರು. ಅಂದಿನಿಂದ ಮುರುಗದಾಸ್ ಏನು ಮಾಡಿದರೂ, ಅದರಲ್ಲಿ ಒಂದಿಷ್ಟು ವಿಶೇಷಗಳಿರುತ್ತವೆ ಎಂದು ಅವರ ಅಭಿಮಾನಿಗಳು ನಂಬಿಕೊಂಡು ಬಂದಿದ್ದಾರೆ. ಆದರೆ ‘ಏಳಾಂ ಅರಿವು’ ಚಿತ್ರ ಹುಟ್ಟು ಹಾಕಿದ ನಿರೀಕ್ಷೆ ಠುಸ್ ಆಯಿತು. ಕೆಲ ಸಮಯದ ಹಿಂದೆ ಬಂದ ತುಪಾಕಿ ಅಥವಾ ಬಾಲಿವುಡ್‌ನ ಹಾಲಿಡೇ ಚಿತ್ರವೂ ನಿರೀಕ್ಷೆಯನ್ನು ತಲುಪಲಿಲ್ಲ. ಈ ಕಾರಣದಿಂದ, ಕತ್ತಿ ಚಿತ್ರವಾದರೂ ಮುರುಗದಾಸ್‌ನನ್ನು ಮೇಲೆತ್ತಬಹುದೇ ಎಂದು ಅವರ ಅಭಿಮಾನಿಗಳು ಕುತೂಹಲದಲ್ಲಿದ್ದರು. ಇದೀಗ ಎಲ್ಲರ ಕುತೂಹಲವನ್ನು ತಣಿಸುವಂತೆ, ಕತ್ತಿ ಜನಮನ ಗೆಲ್ಲುತ್ತಿದೆ.

     ಮೊತ್ತ ಮೊದಲು ಹೇಳಬೇಕಾಗಿರುವುದು, ಕತ್ತಿ ಒಂದು ಅಪ್ಪಟ ಕಮರ್ಶಿಯಲ್ ಚಿತ್ರ. ಆದರೆ ಇದರ ಜೊತೆಗೆ ಇನ್ನೊಂದು ಧನಾತ್ಮಕ ಅಂಶವವಿದೆ. ಮುರುಗದಾಸ್ ವರ್ತಮಾನವನ್ನು ಕಾಡುತ್ತಿರುವ, ಜ್ವಲಂತ ವಸ್ತುವೊಂದನ್ನು ಈ ಚಿತ್ರಕ್ಕಾಗಿ ಎತ್ತಿಕೊಂಡಿದ್ದಾರೆ. ಈ ನೆಲದ ರೈತರ ಬಗ್ಗೆ, ಅವರ ವಿರುದ್ಧ ಸಂಚು ಹೂಡುತ್ತಿರುವ ಮಲ್ಟಿ ನ್ಯಾಶನಲ್ ಕಂಪನಿಗಳ ಬಗ್ಗೆ ಒಂದು ಕಮರ್ಶಿಯಲ್ ಚಿತ್ರದ ಮೂಲಕ ಮಾತನಾಡಲು ಒಂದಿಷ್ಟು ಧೈರ್ಯ ಬೇಕು. ಆ ಧೈರ್ಯವನ್ನು ತೋರಿಸಿದ್ದಾರೆ ನಿರ್ದೇಶಕರು. ಚಿತ್ರ ಆರಂಭವಾಗುವುದು ಮಾಮೂಲಿ ಕಮರ್ಶಿಯಲ್ ಶೈಲಿಯಲ್ಲೇ. ಸಣ್ಣ ಪುಟ್ಟ ಪಿಕ್‌ಪಾಕೆಟ್‌ಗಳನ್ನು ಮಾಡುತ್ತಾ ಕೊಲ್ಕತ್ತಾದ ಜೈಲು ಸೇರಿರುವ ಕದಿರೇಶ ಅಥವಾ ಕತ್ತಿ ಜೈಲಿನಿಂದ ಪರಾರಿಯಾಗುವಲ್ಲಿಂದ. ಪೊಲೀಸರು ಈತನನ್ನು ತೀವ್ರವಾಗಿ ಹುಡುಗಾಡುತ್ತಿರುವಾಗ ಅವನಿಗೆ ಮುಖಾಮುಖಿಯಾಗುವುದು ಇವನದೇ ರೂಪವುಳ್ಳ ಜೀವಾನಂದ. ಗೂಂಡಾಗಳ ಗುಂಡಿನೇಟಿಗೆ ಸಿಕ್ಕಿ ಸಾವು ಬದುಕಿನ ನಡುವೆ ಒದ್ದಾಡುತ್ತಿರುವ ಜೀವಾನಂದನನ್ನು ಆಸ್ಪತ್ರೆಗೆ ಒಯ್ಯುವ ಕೆಲಸವನ್ನು ಕತ್ತಿ ಮಾಡುತ್ತಾನೆ. ಇದೇ ಸಂದರ್ಭದಲ್ಲಿ ಕೊಲ್ಕತ್ತಾ ಪೊಲೀಸರು ಈತನನ್ನು ಹುಡುಕುತ್ತಾ ತಮಿಳುನಾಡಿಗೆ ಬಂದಿರುವುದು ತಿಳಿದು ಬಿಡುತ್ತದೆ. ಪೊಲೀಸರಿಂದ ಪಾರಾಗಲು, ಗಂಭೀರ ಸ್ಥಿತಿಯಲ್ಲಿರುವ ಜೀವಾನಂದನ ಪಕ್ಕ ತನ್ನ ಪರ್ಸ್ ಹಾಗೂ ಸೊತ್ತುಗಳನ್ನು ಇಟ್ಟು, ಆತನ ಪರ್ಸ್‌ನ್ನು ತಾನು ತೆಗೆದುಕೊಳ್ಳುತ್ತಾನೆ. ಜೀವಾನಂದನಾಗಿ ಆತನ ಗ್ರಾಮಕ್ಕೆ ಹೋಗುತ್ತಾನೆ. ಇಲ್ಲಿಂದ ನಿಜವಾದ ಕತೆ ಪ್ರಾರಂಭವಾಗುತ್ತದೆ. ಜೀವನಂದನ ಬದುಕು ಕತ್ತಿಯನ್ನು ಹೊಸ ಮನುಷ್ಯನನ್ನಾಗಿ ಮಾರ್ಪಡಿಸುತ್ತದೆ. ಜೀವಾನಂದ ಅರ್ಧದಲ್ಲಿ ನಿಲ್ಲಿಸಿದ ಹೋರಾಟಕ್ಕೆ ಇವನಿಂದ ಜೀವ ಬರುತ್ತದೆ.


ತನ್ನೂತು ಗ್ರಾಮವನ್ನು ಮುಂದಿಟ್ಟುಕೊಂಡು ನಿರ್ದೇಶಕರು ಮಲ್ಟಿನ್ಯಾಶನಲ್ ಕಂಪೆನಿಗಳು ಮತ್ತು ಅವುಗಳ  ಹಿಂದೆ ಬಾಲಗಳಾಗಿ ಚೇಲಗಳಾಗಿ ಅಲೆಯುತ್ತಿರುವ ಮೀಡಿಯಾ ಹಾಗೂ ಮೆಟ್ರೋ ಜನರ ವಿರುದ್ಧ ಯುದ್ಧ ಸಾರುತ್ತಾರೆ. ಕತ್ತಿ ಆ ಯುದ್ಧದ ನೇತೃತ್ವವನ್ನು ವಹಿಸುತ್ತಾನೆ. ಇಡೀ ಚಿತ್ರದಲ್ಲಿ ಮೀಡಿಯಾಗಳ ಸುದ್ದಿ ದಾಹ ಮತ್ತು ಅದರ ಹಿಂದಿರುವ ಕ್ರೌರ್ಯವನ್ನು ಎದೆ ಝಲ್ಲೆನ್ನುವಂತೆ ನಿರ್ದೇಶಕರು ಹೇಳುತ್ತಾರೆ. ರೈತರ ಸಂಕಟಗಳು, ಪ್ರತಿಭಟನೆ, ಅಸಹಾಯಕತೆ ಇವೆಲ್ಲವುಗಳನ್ನು ಮನಮುಟ್ಟುವಂತೆ ನಿರೂಪಿಸುತ್ತಾ ಹೋಗುತ್ತಾರೆ ಮುರುದಾಸ್. ಹಾಗೆಂದು ಚಿತ್ರ ಮಾಸ್ ಪ್ರೇಕ್ಷಕರಿಗೂ ಮೋಸ ಮಾಡುವುದಿಲ್ಲ. ವಿಜಯ್ ಅವರ ಆಕ್ಷನ್‌ಗಳು, ಮಂಗಚೇಷ್ಠೆಗಳು ಇದರಲ್ಲೂ ಮುಂದುವರಿಯುತ್ತವೆ. ನಾಯಕಿ ಶಮಂತಾಗೆ ಇಲ್ಲಿ ವಿಶೇಷ ಅವಕಾಶಗಳಿಲ್ಲ. ಮಲ್ಟಿ ನ್ಯಾಶನಲ್ ಕಂಪೆನಿಯ ಮುಖ್ಯಸ್ಥನಾಗಿ ನೀಲ್ ನಿತಿನ್ ಮುಖೇಶ್ ಚಿತ್ರಕ್ಕೆ ಇನ್ನಷ್ಟು ಪೂರಕವಾಗಿ ಕೆಲಸ ಮಾಡಿದ್ದಾರೆ. ಪಾತ್ರಕ್ಕೆ ಒಪ್ಪುವ ಮೈಕಟ್ಟು ಮತ್ತು ಗಾಂಭೀರ್ಯ ಮುಖೇಶ್ ಅವರದು. ನಾಯಕ ಪಾತ್ರಗಳಿಗಿಂತ ಖಳ ಪಾತ್ರಗಳಿಗೇ ನಾನು ಸೈ ಎನ್ನುವುದನ್ನು ಕತ್ತಿ ಚಿತ್ರದಲ್ಲಿ ಮುಖೇಶ್ ತೋರಿಸಿಕೊಟ್ಟಿದ್ದಾರೆ.
ಇಡೀ ಚಿತ್ರದ ಹೆಗ್ಗಳಿಕೆ ಕುತೂಹಲಕಾರಿ ನಿರೂಪಣೆ. ಹಾಗೂ ವರ್ತಮಾನಕ್ಕೆ ಪೂರಕವಾಗಿ ಅವರು ಆಯ್ದುಕೊಂಡಿರುವ ಕಥಾವಸ್ತು. ಆದರೆ ಇದರ ನಡುವೆಯೂ ನಾಯಕ ನಟ ವಿಜಯ್‌ಗಾಗಿ ನಿರ್ದೇಶಕರು ಹಲವು ರಾಜಿಗಳನ್ನು ಮಾಡಿಕೊಂಡಿದ್ದಾರೆ. ಮಾಸ್ ಚಿತ್ರ ಇದಾಗಿರೋದರಿಂದ ಅಗತ್ಯಕ್ಕೆ ತಕ್ಕಂತೆ, ಡ್ಯಾನ್ಸ್, ರೋಮಾನ್ಸ್‌ಗಳನ್ನು ತುರುಕಿಸಿದ್ದಾರೆ. ಅದೇನೇ ಇರಲಿ, ಇಡೀ ಚಿತ್ರ ರಾಜಕಾರಣಿಗಳಿಗೆ, ಮೀಡಿಯಾಗಳಿಗೆ ಮತ್ತು ಭಾರೀ ಉದ್ಯಮಿಗಳಿಗೆ ಇರಿಸು ಮುರಿಸು ಉಂಟು ಮಾಡಿರೋದಂತೂ ಸತ್ಯ. ಇಂತಹದೊಂದು ವಸ್ತುವನ್ನು ಆಯ್ದು ಚಿತ್ರವಾಗಿಸಿದ್ದಕ್ಕೆ ಮುರುಗದಾಸ್ ಅವರನ್ನು ಅಭಿನಂದಿಸಬೇಕಾಗಿದೆ.

No comments:

Post a Comment