Sunday, October 12, 2014

ಲೈಬ್ರರಿಯಿಂದ ಆಯ್ದ ಪದ್ಯಗಳು


ಕೆಲವರ ಮನೆಯ
ಲೈಬ್ರರಿಗಳು
ಅವರ ಡೈನಿಂಗ್ ಟೇಬಲ್
ಮೇಲಿರುವ ಪ್ಲಾಸ್ಟಿಕ್
ಬಾಳೆಹಣ್ಣುಗಳಂತೆ
ಆಕರ್ಷಿಸುತ್ತವೆ

ಮನೆಗೊಂದು ಲೈಬ್ರರಿ ಬೇಕು
ಎಂದು ಕಪಾಟು ತುಂಬಾ
ಪುಸ್ತಕಗಳ ತಂದು ಸುರಿದೆ
ಇದೀಗ ಜಿರಳೆಗಳೆಲ್ಲ
ಪಂಡಿತರಂತೆ ಮನೆ ತುಂಬಾ
ಓಡಾಡುತ್ತಿವೆ

ಶ್ರೀಮಂತನ ಮನೆಯ
ಕಪಾಟಿನಲ್ಲಿ ಆರಾಧಿಸಲ್ಪಡುವ
ಗೋಕಾಕರ ಮಹಾ ಕಾವ್ಯದ
ದರದಲ್ಲಿ
ಬಡ ಓದುಗನೊಬ್ಬ ದೇವನೂರರ
ಎಲ್ಲ ಕೃತಿಗಳನ್ನು ಕೊಂಡು ಓದಬಹುದಿತ್ತು

ಬಡ ಓದುಗನ ಮುಂದೆ
ಇದು ನನ್ನ ಲೈಬ್ರರಿ ಎಂದು ಕೊಚ್ಚಿಕೊಳ್ಳುವ
ಶ್ರೀಮಂತನಿಗೆ ಗೊತ್ತಿಲ್ಲ
ಆ ಕಪಾಟು ಲೇಖಕರ ಗೋರಿ
ಎನ್ನೋದು

ನನ್ನ ಲೈಬ್ರರಿಯಲ್ಲಿ
ಅವಳಿಗಿಷ್ಟವಾದುದು
ಅಡುಗೆ ಪುಸ್ತಕ ಮಾತ್ರ!
ಸಾಹಿತ್ಯಕ್ಕೆ ಅನ್ನದ  ಪರಿಮಳವಿದೆ
ಎನ್ನೋದನ್ನು ಸಾಬೀತು
ಮಾಡಿದ್ದಾಳೆ ಅವಳು

ಮನೆಯಲ್ಲಿ ಅಡುಗೆ ಅನಿಲ
ಮುಗಿದಾಗೆಲ್ಲ
ಅವಳು ನನ್ನ ಲೈಬ್ರರಿ ಮುಂದೆ
ಅನುಮಾನಾಸ್ಪದವಾಗಿ ಓಡಾಡುವಾಗ
ನನಗೆ ಭಯವಾಗುತ್ತದೆ

No comments:

Post a Comment