Tuesday, October 21, 2014

ನುಡಿಸಿರಿ ಮತ್ತು ವಿಚಾರವಾದಿಗಳ ಬೆಕ್ಕಿನ ಬಿಡಾರ!

 
ಒಬ್ಬ ಲೇಖಕನಿಗೆ, ಚಿಂತಕನಿಗೆ ವೇದಿಕೆ ಎಂದರೆ ಏನು? ಅದೊಂದು ಸ್ಥಾನವೆ? ಅದೊಂದು ಗೌರವವೆ? ಅಥವಾ ತನ್ನೊಳಗಿನ ವಿಚಾರಗಳನ್ನು ತೆರೆದಿಡಲು ಅವನಿಗೆ ದಕ್ಕಿದ ಒಂದು ಮಾಧ್ಯಮವೆ? ನುಡಿಸಿರಿಯಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ಭಾಗವಹಿಸುತ್ತಿರುವ ಬಗ್ಗೆ ಕೆಲವು ಗೆಳೆಯರು ನಡೆಸುತ್ತಿರುವ ದಾಳಿಯನ್ನು ನೋಡಿ ನನ್ನನ್ನು ಕಾಡಿದ ಪ್ರಶ್ನೆ ಇದು. ನನಗೆ ಸಿದ್ದಲಿಂಗಯ್ಯ ಯಾವ ವೇದಿಕೆಯನ್ನು ಏರಿದರು, ಯಾರ ವೇದಿಕೆಯನ್ನು ಏರಿದರು ಎನ್ನುವುದು ಮುಖ್ಯವಾಗುವುದಿಲ್ಲ. ಅವರು ಆ ವೇದಿಕೆಯಲ್ಲಿ ನಿಂತು ಏನನ್ನು ಮಾತನಾಡಿದರು ಎನ್ನುವುದಷ್ಟೇ ಮುಖ್ಯ. ಸಹಸ್ರಾರು ಜನರು ಸೇರಿರುವ ನುಡಿಸಿರಿ ವೇದಿಕೆಯಲ್ಲಿ ನಿಂತು ಸಿದ್ದಲಿಂಗಯ್ಯ ದಲಿತಪರ, ಪ್ರಗತಿಪರ, ಶೋಷಿತರ ಪರ ಮಾತುಗಳನ್ನು ಆಡಿದರೆ ಅದು ಅವರು ಯಾವುದೋ ಪ್ರಗತಿಪರ ವೇದಿಕೆಯಲ್ಲಿ ನಿಂತು ಆಡುವುದಕ್ಕಿಂತ ಹೆಚ್ಚು ಅರ್ಥಪೂರ್ಣ. ಯಾಕೆಂದರೆ, ಅಂತಹ ಮಾತುಗಳು ತಲುಪಬೇಕಾದವರನ್ನು ಮೊದಲು ತಲುಪಬೇಕು. ಸಿದ್ದಲಿಂಗಯ್ಯ ನುಡಿಸಿರಿ ವೇದಿಕೆಯಲ್ಲಿ ಅದನ್ನು ತಲುಪಿಸಲಿ ಎಂದು ನಾನು ಆಶಿಸುತ್ತೇನೆ.

 ನುಡಿಸಿರಿಯಲ್ಲಿ ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರು ಭಾಗವಹಿಸಿ ಆಡಿದ ಮಾತುಗಳನ್ನು ನಾನು ಕೇಳಿದ್ದೇನೆ. ಕನ್ನಡದ ಸಂಸ್ಕೃತಿ ದುರ್ಯೋಧನ ಸಂಸ್ಕೃತಿ ಎಂದು, ಸ್ನೇಹ, ಛಲ, ಶೌರ್ಯಗಳನ್ನು ಹೊಸ ಪರಿಭಾಷೆಯಲ್ಲಿ ಅವರು ವಿವರಿಸಿದ್ದರು. ಹಾಗೆಯೇ ದಸರಾ ಸಮಾರಂಭವನ್ನು ಉದ್ಘಾಟಿಸಿ ಅವರು ಆಡಿದ ಮಾತುಗಳನ್ನೂ ಕೇಳಿದ್ದೇನೆ. ಅಲ್ಲಿ ಸೇರಿದ ಅಷ್ಟೂ ಜನರನ್ನು ದಂಗುಬಡಿಸುವಂತೆ, ಹಿಂಸೆಯ ಮೌಲ್ಯವನ್ನು ಪ್ರತಿಪಾದಿಸುವ ವಿಜಯದಶಮಿ ಆಚರಣೆಯ ಬಗ್ಗೆಯೇ ಪ್ರಶ್ನೆ ಎತ್ತಿದ್ದರು. ಈ ಮಾತುಗಳನ್ನು ವಿಚಾರವಾದಿಗಳ ವೇದಿಕೆಯಲ್ಲಿ ನಿಂತು ಆಡುವುದಕ್ಕಿಂತ, ಪುರೋಹಿತ ಶಾಹಿಗಳ ವೇದಿಕೆಯಲ್ಲಿ ನಿಂತು ಆಡುವುದಕ್ಕೆ ಹೆಚ್ಚು ಧೈರ್ಯಬೇಕು. ಶಕ್ತಿ ಬೇಕು. ವೈದಿಕ ಮೌಲ್ಯಗಳನ್ನು ನಂಬಿದವರು, ಆ ನಂಬಿಕೆಗೆ ಮೋಸ ಹೋದವರು ಸಹಿತ ಲಕ್ಷೋಪಲಕ್ಷ ಜನರು ಸೇರಿದ ವೇದಿಕೆಯಲ್ಲಿ ನಿಂತು ಇಂತಹ ಮಾತುಗಳನ್ನು ಆಡಿದರೆ ಅವು ಹೆಚ್ಚು ಪ್ರಯೋಜನಕಾರಿ. ಈ ಮಾತುಗಳಿಂದ ಬೆರಳೆಣಿಕೆಯ ಜನರು ಪ್ರಭಾವಿತರಾದರೂ ಸಾಕು, ಅದು ಮುಂದಿನ ದಿನಗಳಲ್ಲಿ ವೈಚಾರಿಕತೆಗೆ ಹೊಸ ದಿಕ್ಕನ್ನು ನೀಡಬಹುದು. ಆದರೆ ವಿಚಾರವಾದಿಗಳದ್ದು ಇತ್ತೀಚಿನ ದಿನಗಳಲ್ಲಿ ಬೆಕ್ಕಿನ ಬಿಡಾರವಾಗುತ್ತಿದೆ. ತಮ್ಮ್ನ ಸುತ್ತ ತಾವೇ ಬೇಲಿಯನ್ನು ಕಟ್ಟಿ, ಗೆರೆಗಳನ್ನು ಹಾಕಿಕೊಂಡು ಬಹುದೊಡ್ಡ ಸಂಖ್ಯೆಯ ಜನರನ್ನು ತನ್ನ ವಿಚಾರಗಳಿಂದ ದೂರವಿಡುತ್ತಿದ್ದಾರೆ. ತನ್ನ ವಿಚಾರಗಳನ್ನು ಹಂಚಿಕೊಳ್ಳಲು ಎಲ್ಲ ಮಾಧ್ಯಮಗಳನ್ನೂ ಶಕ್ತವಾಗಿ ಬಳಸಿಕೊಳ್ಳುತ್ತಾ, ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾದವರು, ಇದು ಯಾರ ಪತ್ರಿಕೆ, ಇದು ಯಾರ ವೇದಿಕೆ ಎಂದು ಮೂಸಿ ನೋಡುತ್ತಾ, ಹೊಸ ರೂಪದ ಅಸ್ಪಶ್ಯತೆಯೊಂದನ್ನು ಹುಟ್ಟು ಹಾಕುತ್ತಿದ್ದಾರೆ. ಇದರ ಸಂಪೂರ್ಣ ಲಾಭವನ್ನು ವೈದಿಕಶಾಹಿ, ಪುರೋಹಿತಶಾಹಿ ಶಕ್ತಿಗಳು ತಮ್ಮದಾಗಿಸಿಕೊಳ್ಳುತ್ತಿವೆ.

ಹಾಗೆ ನೋಡಿದರೆ ಇಂದು ವೈದಿಕರು, ಉದ್ಯಮಿಗಳು ಆಕ್ರಮಿಸಿಕೊಳ್ಳದ ಒಂದೇ ಒಂದು ವೇದಿಕೆ ನಮ್ಮಲ್ಲಿಲ್ಲ. ಕನ್ನಡಸಾಹಿತ್ಯ ಪರಿಷತ್ ಹಮ್ಮಿಕೊಳ್ಳುವ ಸಾಹಿತ್ಯ ಸಮ್ಮೇಳನಗಳೂ ಇಂದು ವೈದಿಕ ಸಮ್ಮೇಳನಗಳಾಗಿ ಪರಿವರ್ತನೆಯಾಗುತ್ತಿವೆ. ನಾವೇ ಒಂದಷ್ಟು ಸಮಾನಮನಸ್ಕರು ಹಮ್ಮಿಕೊಂಡ ಸಮ್ಮೇಳನ ತನ್ನ ಉದ್ದೇಶವನ್ನು ಸಂಪೂರ್ಣವಾಗಿ ಸಾಧಿಸಿಕೊಳ್ಳುವುದಿಲ್ಲ. ನಾವೇ ಆಡಿದ ಮಾತುಗಳನ್ನು ನಾವೇ ಕುಳಿತು ಕೇಳಿ, ಎದ್ದು ಬಂದಂತೆ ಇದು. ಅದೇ ಸಂದರ್ಭದಲ್ಲಿ ಯಾರೋ ಒಬ್ಬ ಒಂದೈವತ್ತು ಸಾವಿರ ಜನರನ್ನು ಸೇರಿಸಿ ಒಬ್ಬ ವಿಚಾರವಾದಿಗೆ ವೇದಿಕೆ ಕೊಟ್ಟಾಗ, ತಾನು ಭಾಗವಹಿಸುವುದಿಲ್ಲ ಎಂದರೆ ಅದರಿಂದ ನಷ್ಟ ಯಾರಿಗೆ? ಒಬ್ಬ ಭಾಷಣಕಾರ ಅಲ್ಲಿ ನರ್ತಿಸುವುದಕ್ಕೋ, ಮನರಂಜಿಸುವುದಕ್ಕೋ ವೇದಿಕೆ ಏರುವುದಿಲ್ಲ. ಅವನು ಆ ವೇದಿಕೆಯೇರಿ, ಆ ವೇದಿಕೆಯ ಮನಸ್ಥಿತಿಗೆ ಸಂಬಂಧ ಪಡದ ಹೊಸ ವಿಷಯವೊಂದನ್ನು ಮುಂದಿಟ್ಟಾಗ ಸೇರಿದ ಯುವಕರಲ್ಲಿ ನಾಲ್ಕು ಜನ ಆಲಿಸಿ ಅದನ್ನು ಒಪ್ಪಿಕೊಂಡರೂ ಅದು ಸಮಾಜಕ್ಕೆ ಸಿಗುವ ಅತಿ ದೊಡ್ಡ ಲಾಭ. ವೈಚಾರಿಕತೆ ಜನಸಾಮಾನ್ಯರಿಂದ ದೂರದಲ್ಲಿ ಬೆಕ್ಕಿನ ಬಿಡಾರ ಕಟ್ಟಿಕೊಂಡು ತಮಗೆ ತಾವೇ ಬದುಕಿಕೊಳ್ಳುತ್ತಿರುವಾಗ ಆರೆಸ್ಸೆಸ್‌ನಂತಹ ಸಂಘಟನೆಗಳು ಏನೇನೂ ತಿಳಿಯದ ಹುಡುಗರನ್ನು ಒಟ್ಟುಗೂಡಿಸಿ ಕಬಡ್ಡಿ ಆಡಿಸುತ್ತಾ, ಮೊಸರುಕುಡಿಕೆ ಆಡಿಸುತ್ತಾ ತನ್ನ ಆಲೋಚನೆಗಳನ್ನು ಬಿತ್ತುತ್ತವೆ. ಯಾವ ವಿಚಾರಗಳನ್ನು ಹಂಚಲು ಯಾವ ವೇದಿಕೆ ಏರುವುದಕ್ಕೂ ಅವರು ಅಂಜುವುದಿಲ್ಲ. ಆದರೆ, ಇತ್ತೀಚಿನ ವೈಚಾರಿಕ ಚಿಂತಕರು ಮಾತ್ರ ಎಲ್ಲಿ ತಮ್ಮ್ನ ವೈಚಾರಿಕ ಇಸ್ತ್ರಿ, ಮಡಿ ಹಾಳಾಗಿ ಬಿಡುತ್ತದೆಯೋ ಎಂಬ ಆತಂಕದಲ್ಲಿದ್ದಾರೆ.

 ಯಾವುದಾದರೂ ವೇದಿಕೆ ಏರುವುದಕ್ಕೆ ಅವಕಾಶ ಸಿಕ್ಕಿದರೆ ಅವರ ಎಂಜಲೆಲೆ ನೆಕ್ಕುವುದಕ್ಕೆ ಸಿದ್ಧರಿರುವ, ತನ್ನ ವಿಚಾರಗಳನ್ನು ಮಾರಿಬಿಡುವ ಒಂದು ವರ್ಗವಿದೆ. ಅವರ ಕುರಿತಂತೆ ನಾನಿಲ್ಲಿ ಮಾತನಾಡುತ್ತಿಲ್ಲ. ತಮ್ಮ ವಿಚಾರಗಳನ್ನು ಹಂಚಲು ವೇದಿಕೆಗಾಗಿ ಕಾಯುತ್ತಿರುವ ಚಿಂತಕರು, ನಾಯಕರು ನಮ್ಮ ನಡುವೆ ಸೃಷ್ಟಿಯಾಗಬೇಕು ಎನ್ನುವುದು ನನ್ನ ಬಯಕೆ. ನುಡಿಸಿರಿಯ ಅಸಂಖ್ಯ ಜನರ ನಡುವೆ, ನುಡಿಸಿರಿಯೊಳಗಿರುವ ವಿಪರ್ಯಾಸಗಳನ್ನು ಹೇಳುವ ಧೈರ್ಯವುಳ್ಳ ಚಿಂತಕರು ಬೇಕಾಗಿದ್ದಾರೆ. ಯಾಕೆಂದರೆ ಇಂದು ಹೊಸ ತಲೆಮಾರಿನ ಹೊಸ ಹುಡುಗರಿಗೆ ವೈಚಾರಿಕ, ಪ್ರಗತಿಪರ ಚಿಂತನೆ ದಕ್ಕದಂತೆ ಕೋಟೆ ಕಟ್ಟುವ ಪ್ರಯತ್ನವೊಂದು ನಡೆಯುತ್ತಿದೆ. ಅಂತಹ ಕೋಟೆಗಳನ್ನು ಮುರಿದು ಅವರೆಡೆಗೆ ತಮ್ಮ ಆಲೋಚನೆಗಳನ್ನು ಹೊತ್ತುಕೊಂಡು ಹೋಗುವ ಬರಹಗಾರರು ಹುಟ್ಟಬೇಕಾಗಿದೆ. ಅಂತಹವರು ಯಾವ ವೇದಿಕೆಯೇರಿದರೂ, ಆ ವೇದಿಕೆಯನ್ನೇ ತಮಗೆ ಪೂರಕವಾಗಿ ಬದಲಾಯಿಸಿ ಬಿಡುತ್ತಾರೆ. ತನಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಇಡೀ ವೇದಿಕೆಯನ್ನು ತನಗೆ ಪೂರಕವಾಗಿ ಸಿದ್ದಲಿಂಗಯ್ಯ ಪರಿವರ್ತಿಸಬೇಕು ಎಂದು ಎಲ್ಲ ವಿಚಾರವಾದಿಗಳು ಅವರಿಗೆ ಒತ್ತಡ ಹೇರಬೇಕೇ ವಿನಃ ಅವರನ್ನು ವ್ಯಂಗ್ಯ ಮಾಡುತ್ತಾ, ತಮಾಷೆ ಮಾಡುತ್ತಾ ಕಾಲಹರಣ ಮಾಡುವುದಲ್ಲ. ನುಡಿಸಿರಿ ಎಂದಲ್ಲ, ಯಾವುದೇ ವೇದಿಕೆಯನ್ನು ನಮಗೆ ಪೂರಕವಾಗಿ ಬಳಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಇಂದು ವಿಚಾರವಾದಿಗಳು ಒಟ್ಟು ಸೇರಿ ನಡೆಸುವ ಸಮ್ಮೇಳನದಲ್ಲಿ ಶ್ರೀಸಾಮಾನ್ಯರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಆದುದರಿಂದ ಎಲ್ಲಿ ಶ್ರೀಸಾಮಾನ್ಯರಿರುತ್ತಾರೆಯೋ ಆ ವೇದಿಕೆಯನ್ನು ಹುಡುಕಿಕೊಂಡು ಹೋಗುವ ಪ್ರಯತ್ನ ನಡೆಯಬೇಕಾಗಿದೆ. ಹಾಗೆಯೇ ಅಲ್ಲಿ ಭಾಗವಹಿಸುವ ಚಿಂತಕರಿಗೆ, ವೇದಿಕೆಯನ್ನು ಸದ್ಬಳಕೆ ಮಾಡಲು ಒತ್ತಡಹೇರುವ ಕೆಲಸ ಹೆಚ್ಚು ಹೆಚ್ಚು ನಡೆಯಬೇಕು. ಈ ಹಿನ್ನೆಲೆಯಲ್ಲಿ ನಾನು ನುಡಿಸಿರಿಗೆ ಶುಭಾಶಯ ಹೇಳುವುದಿಲ್ಲ. ಆದರೆ ಅದರಲ್ಲಿ ಭಾಗವಹಿಸುತ್ತಿರುವ ಸಿದ್ದಲಿಂಗಯ್ಯನವರಿಗೆ ಶುಭಾಶಯ ಸಲ್ಲಿಸುತ್ತೇನೆ. ಅವರಿಂದ ವಿಶೇಷವಾದುದನ್ನು ನಿರೀಕ್ಷಿಸುತ್ತೇನೆ.

22 comments:

 1. ಪ್ರಗತಿಪರ ಎನಿಸಿಕೊಂಡ ಲೇಖಕ,ಕಲಾವಿದ, ಚಿಂತಕರನ್ನು ಶಕ್ತಿಕೇಂದ್ರಗಳು ಕರೆದು ಮಣೆ ಹಾಕುವುದು ತಮ್ಮ ಪ್ರಗತಿಪರ ವಿಚಾರಗಳನ್ನು 'ಸಾವಿರಾರು' ಜನರಿಗೆ ತಲುಪಿಸಲೆಂದು ಕೊಡುವ 'ಅವಕಾಶ'ವಲ್ಲ. ವಿರೋಧವನ್ನು ಮೆತ್ತಗಾಗಿಸಿ ಕಲ್ಚರ್ ಮಾಡಲು ಬಳಸುವ 'ಕೋ ಆಪ್ಷನ್' ಎನ್ನುವ ಬಹು ಹಳೆಯ ವಿಧಾನ. ವೈಚಾರಿಕ ಗೊಂದಲ, ನಿಲುವುಗಳ ಸಂಕರ ಮತ್ತು ಗುರಿಯನ್ನು ಮಸುಕಾಗಿಸುವ ದೃಷ್ಟಿದೋಷ ಇದರಿಂದಾಗುವ ಲಾಭ. ರಾಮಕೃಷ್ಣ ಹೆಗಡೆ ಸರಕಾರ ನಮ್ಮ ಪ್ರಗತಿಪರರಿಗೆ, ಸಿದ್ಧರಾಮಯ್ಯ ಸರಕಾರ ನಮ್ಮ ಕ್ರಾಂತಿಕಾರಿ ಲೇಖಕರಿಗೆ, ಹಾಡುಗಾರರಿಗೆ ಮಾಡಿದ್ದು ಇದನ್ನೇ. ಆಸೆಬುರುಕರ ನಾಡಿ ಆಳ್ವರಸರಿಗೆ ಚೆನ್ನಾಗಿ ಗೊತ್ತು. ಗಾಳಿ ಬಂದಾಗ ತೂರಿಕೊಳ್ಳುವವರೆಲ್ಲಾ ಯಾರಡಿಗೆ ಬೇಕಾದರೂ ತೂರಿಕೊಳ್ಳಲಿ..."ಹಾರಿರೋ ಜೊಳ್ಳುಗಳಿರಾ..." ಎಂದು ಹೇಳಿಕೊಳ್ಳುತ್ತಾ ಮುಂದೆ ಸಾಗೋಣ.

  ReplyDelete
  Replies
  1. "ವೈಚಾರಿಕ ಗೊಂದಲ, ನಿಲುವುಗಳ ಸಂಕರ ಮತ್ತು ಗುರಿಯನ್ನು ಮಸುಕಾಗಿಸುವ ದೃಷ್ಟಿದೋಷ ಇದರಿಂದಾಗುವ ಲಾಭ."

   you are right sir. Exactly what has happened with Basheer is this.

   Delete
 2. ವೈದಿಕ ಸಂಸ್ಕೃತಿ ಬಗ್ಗೆ ಬಶೀರ್ ಅವರಿಗೆ ಇರುವ ಮತೀಯ ಸ್ವರೂಪದ ದ್ವೇಷವನ್ನು ಕಂಡು ಭಯಭೀತನಾಗಿದ್ದೇನೆ. ಬಷೀರ್ ಅವರೇ, ನಿಮ್ಮಂತಹ ಜವಾಬ್ದಾರಿಯುತ ಪತ್ರಕರ್ತರು ಮತೀಯ ದ್ವೇಷವನು ಹರಡುವ ಕೆಲಸ ಮಾಡಬಾರದು.

  ReplyDelete
 3. Laxminarayana Vn ಅವರಿಗೆ ಅವರ ಉದ್ದೇಶವಾದರೆ, ನಮಗೆ ನಮ್ಮ ಉದ್ದೇಶ. ನಾವದನ್ನು ಗೌರವ, ಸನ್ಮಾನ ಎಂದು ತಿಳಿದು ಕೊಳ್ಳದೆ ನಮ್ಮ ವಿಚಾರಗಳನ್ನು ತಲುಪಿಸಲು ಸಿಕ್ಕಿದ ಮಾಧ್ಯಮ ಎಂದು ತಿಳಿದು ಕೊಳ್ಳ ಬೇಕು ಎನ್ನೋದು ನನ್ನ ಇಂಗಿತ. ಸಿದ್ದಲಿಂಗಯ್ಯ ನುಡಿಸಿರಿಯ ಬಲೆಗೆ ಬೀಳದೆ, ತನ್ನ ವಿಚಾರಗಳನ್ನು ಹೇಳಲು ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎನ್ನೋದು ನನ್ನ ಆಶಯ. ಹೌದು. ನುದಿಸಿರಿಯಂಥ ಸಮ್ಮೇಳನ ಒಂದು ಚಕ್ರವ್ಯೂಹ. ಒಳಗೆ ಹೋದಷ್ಟು ಸುಲಭದಲ್ಲಿ ಹೊರಗೆ ಬರಲು ಸಾಧ್ಯವಿಲ್ಲ. ಅದರೊಳಗೇ ವಿಚಾರವಾದಿ ಇಲ್ಲವಾಗಿ ಹೋಗಬಹುದು ಎನ್ನೋ ಭಯ ನನಗೂ ಇದೆ. ಆದರೆ ಅದರ ಒಳ ಹೊಕ್ಕು ಹೊರ ಬರುವ ಶಕ್ತಿಯನ್ನು ವಿಚಾರವಾದಿಗಳು ನಮ್ಮದಾಗಿಸಿ ಕೊಳ್ಳಬೇಕು. ನನ್ನ ವಿಚಾರ ದುರ್ಬಲವಾಗಿ ಬಿಡಬಹುದು ಎನ್ನೋ ಭಯದಿಂದ ಎಲ್ಲ ಬಾಗಿಲುಗಳನ್ನು ಮುಚ್ಚಿ ಬದುಕುವಂಥಹ ಸ್ಥಿತಿ ವಿಚಾರವಾದಿಗಳದ್ದು ಆಗಬಾರದು

  ReplyDelete
  Replies
  1. ಬಷೀರ್ ಅವರಿಗೂ ನುಡಿಸಿರಿಯ ಕಾಂಚಾಣದ ಮೋಹ ಹುಟ್ಟಿತ್ತಲ್ಲ! ಕುರುಡು ಕಾಂಚಾಣ! -- ನಾಗರಾಜ್

   Delete
 4. ನಾನೇನು ಆ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ. ಇಂದಿನ ಸಂದರ್ಭದಲ್ಲಿ, ನುಡಿಸಿರಿಯಂತಹ ಸಮ್ಮೇಳನಗಳು ನಮ್ಮನ್ನು ಕರೆದು ಸವಾಲು ಹಾಕಿದಾಗ, ಆ ಸವಾಲನ್ನು ಸ್ವೀಕರಿಸಿ, ಆ ವೇದಿಕೆಯನ್ನು ನಮಗೆ ಪೂರಕವಾಗಿ ಬಳಸಿ ಕೊಳ್ಳುವ ಅಗತ್ಯವನ್ನು ಸ್ಪಷ್ಟವಾಗಿ ಬರೆದಿದ್ದೇನೆ. ಅಷ್ಟೇ.

  ReplyDelete
  Replies
  1. ನೀವು ಭಾಗವಹಿಸುತ್ತಿಲ್ಲ, ಏಕೆಂದರೆ ಆಳ್ವಾ ಈ ವರ್ಷ ನಿಮ್ಮನ್ನು ಆಹ್ವಾನಿಸಿಲ್ಲ. ಮುಂದಿನ ವರ್ಷವಾದರೂ ಅವರು ಆಹ್ವಾನಿಸಿ ಸನ್ಮಾನ ಮಾಡಲಿ ಎಂಬ ಆಸೆಯಿಂದ ನೀವು ಆಳ್ವಾ ಅವರಿಗೆ ಆಲಿವ್ ಬ್ರಾಂಚ್ ಕೊಡುತ್ತಿದ್ದೀರಿ, ಸಿದ್ದಲಿಂಗಯ್ಯನವರ ನೆಪದಲ್ಲಿ. ನಿಮ್ಮ ಮನದ ಅಳಲು ಆಳ್ವಾ ಅವರಿಗೆ ಅರ್ಥವಾಗಲಿ ಅಂತ ಲೇಖನ ಬರೆದಿದ್ದೀರಿ. ಗುಡ್ ಪ್ಲಾನ್! ಮುಂದಿನ ವರ್ಷದ ಚೋಸನ್ ಅತಿಥಿ ಆಗುವುದಕ್ಕೆ ಎಲ್ಲ ಸಿದ್ಧತೆ ನಡೆಸಿದ್ದೀರಿ. -- ನಾಗರಾಜ್

   Delete
  2. ನಾಗರಾಜ್, ನೀವು ಅಭಿಪ್ರಾಯ ಪಟ್ಟ ಹಾಗೆ ಬಷೀರ್ ಕಾಂಚಾಣದ ಆಸೆಯಿಂದ ಈ ಲೇಖನ ಬರೆದಿಲ್ಲ. ಸಿದ್ದಲಿಂಗಯ್ಯನ ಬಗ್ಗೆ ಹೇಳಲಾಗದು, ಬಷೀರ್ ಗಂತೂ ಸದ್ಯಕ್ಕೆ ಆಳ್ವಾ ಕಾಂಚಾಣದ ಆಸೆ ಇಲ್ಲ. ಆದರೆ ಪ್ರಗತಿಪರರ ಮನಸ್ಸಿನಲ್ಲಿ ಮೇಲಿನ ಲೇಖನ ಅನೇಕ ಪ್ರಶ್ನೆಗಳನ್ನೂ ಅನುಮಾನಗಳನ್ನೂ ಹುಟ್ಟಿಸಿದೆ. ಆದುದರಿಂದ ಪ್ರಗತಿಪರರು ಬಷೀರನ ನಡೆನುಡಿಗಳನ್ನು ಇನ್ನಷ್ಟು ಎಚ್ಚರದಿಂದ ಭೂತಕನ್ನಡಿಯಲ್ಲಿಟ್ಟು ನೋಡುತ್ತಾರೆ ಎಂಬುದು ದಿಟ. ಲಕ್ಷ್ಮೀನಾರಾಯಣನ ಪಾಯಿಂಟನ್ನು ಡಿಸ್ಮಿಸ್ ಮಾಡಿದಷ್ಟು ಸುಲಭವಲ್ಲ. -- ಹರಪನಹಳ್ಳಿ

   Delete
  3. "ಇನ್ನು ಮುಂದೆ ನಮ್ಮ ವಿಚಾರಗಳನ್ನು ಹೇಳಲು
   ವಿಶ್ವ ಹಿಂದೂ ಪರಿಷತ್, ಆರ್ ಎಸ್ ಎಸ್ , ಭಜರಂಗದಳದ
   ಸಭೆಗಳಿಗೆ ಸಕ್ರೀಯವಾಗಿ ತೊಡಗಿಸಲು ತೀರ್ಮಾನಿಸಿದ್ದೇನೆ
   ಅಖಿಲ ಭಾರತ ಮಟ್ಟದಲ್ಲಿ ಭಾಗವತ್, ಮೋದಿ ಜೊತೆ ಮಾತುಕತೆ ನಡೆದಿದೆ
   ಮುಂದೆ ಅಲ್ಲಿ ಸಕ್ರೀಯನಾಗುತ್ತೇನೆ "

   ಸಾರ್ ಇದು ಸತ್ಯವಾ?!!

   Delete
 5. Basheer sir you have changed a lot these days! Don't know why.

  ReplyDelete
 6. ಬಷೀರ್ ಅವರಿಗೆ-- ಈ ಹಿಂದೆ ಬರಗೂರು ರಾಮಚಂದ್ರಪ್ಪನವರು 'ವಿಜಯದಶಮಿ'ಯ ಆಚರಣೆಯ ನಿರರ್ಥಕತೆಯನ್ನು ಪುರೋಹಿತಶಾಹಿ,ವೈದಿಕಶಾಹಿ ವೇದಿಕೆಯಿಂದಲೇ ಹೇಳಿದ್ದರೂ ಸಹ ಜನಗಳು ಪ್ರತಿವರ್ಷ ಅದನ್ನು ಆಚರಿಸುತ್ತಲೇ ಇದ್ದಾರೆ. ಈ ಸಲವೂ ದಸರಾ ಹಬ್ಬವನ್ನು ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲೇ ಇನ್ನೊಬ್ಬ ವಿಚಾರವಾದಿ,ಪ್ರಗತಿಪರ ಚಿಂತಕ,ಬುದ್ಧಿಜೀವಿ ಗಿರೀಶ್ ಕಾರ್ನಾಡರು ಉದ್ಘಾಟಿಸಿದರು. ಮುಂದಿನ ವರ್ಷ ಇನ್ನೊಬ್ಬರು ವಿಚಾರಾವಾದಿ,ಚಿಂತಕರು .... ಹೀಗೆ ಈ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ. ಈಗ 'ನುಡಿ ಸಿರಿ'ಯಲ್ಲಿ ಸಿದ್ದಲಿಂಗಯ್ಯನವರು ದೀಪಾವಳಿ,ಮುಂದೆ ಬರಲಿರುವ ಸಂಕ್ರಾತಿ,ಉಗಾದಿ ........ ಇವೆಲ್ಲದರ ಆಚರಣೆಯ ನಿರರ್ಥಕತೆಯನ್ನು ಬಣ್ಣಿಸಬಹುದು. ಆದರೂ ಜನಗಳು ಆ ಹಬ್ಬವನ್ನು ಆಚರಿಸುವುದನ್ನು ಬಿಡುವುದಿಲ್ಲವಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಆ ವೇದಿಕೆಯಲ್ಲಿ ಭಾಷಣ ಮಾಡಿದಾಕ್ಷಣ ಏನೋ ಆಗಿ ಬಿಡುತ್ತದೆ ಎಂಬ ಮಾತುಗಳೇ ಹಾಸ್ಯಾಸ್ಪದವಾಗಬುದು. ಈ ಹಿಂದೆ ಬರಗೂರು ಮತ್ತು ಸಿದ್ದಲಿಂಗಯ್ಯನವರು ಕರ್ನಾಟಕ ಸರ್ಕಾರದ ಕೃಪಾ ಪೋಷಿತ ನಾಟಕ ಮಂಡಳಿಯ ಸದಸ್ಯರಾಗಿದ್ದವರು. ಅಲ್ಲಿ ಮಾತಾಡಲು ಸಾಕಷ್ಟು ಅವಕಾಶಗಳು,ವೇದಿಕೆಗಳೂ ಇದ್ದವು. ಆದರೂ ಜನಗಳು ಬದಲಾಗಲೇ ಇಲ್ಲ!!!. ಇದು ನಿರಂತರ ಸತ್ಯ. ಯಾವ ವೇದಿಕೆ ಎಂಬುದಲ್ಲ. -----ಎಂ ಎ ಶ್ರೀರಂಗ ಬೆಂಗಳೂರು

  ReplyDelete
  Replies
  1. ಇದು ಪ್ರಗತಿಪರರ ವೇದಿಕೆ. ನಿಮ್ಮಂತಹ ಭೈರಪ್ಪ ಅನುಯಾಯಿಗಳಿಗೆ ಇಲ್ಲಿ ಜಾಗವಿಲ್ಲ. ಬರಗೂರು ಸಿದ್ದಲಿಂಗಯ್ಯನವರ ಯೋಗ್ಯತೆ ಏನು ಅಂತ ನಿಮ್ಮಿಂದ ನಾವು ಕಲಿಯಬೇಕಿಲ್ಲ.

   Delete
  2. Anonymous ಅವರಿಗೆ---ನಾನು ಬರಗೂರು ಮತ್ತು ಸಿದ್ದಲಿಂಗಯ್ಯ ಅವರ ಬಗ್ಗೆ ಹೇಳಿದ್ದು ಸುಳ್ಳೇ? ಆ ನಿಜವನ್ನು ಹೇಳಿದ ಮಾತ್ರಕ್ಕೆ ತಮಗೆ ಏಕೆ ಕೋಪ? ನನ್ನನ್ನು ಭೈರಪ್ಪನವರ ಅನುಯಾಯಿ ; ಪ್ರಗತಿಪರರ ವೇದಿಕೆಯಲ್ಲಿ ನನ್ನಂತಹವರಿಗೆ ಜಾಗವಿಲ್ಲ ಎಂದು ಹಂಗಿಸಿದ್ದೀರಿ. ನಾನು ನಿಮ್ಮ ಜತೆ ಆ ವೇದಿಕೆಯಲ್ಲಿ ಜಾಗ ಪಡೆಯಲು ಸ್ಪರ್ಧೆಗೆ ನಿಂತಿಲ್ಲ. ನನಗೆ ಭೈರಪ್ಪನವರ ಸಾಹಿತ್ಯ,ಅವರ ನಡೆ ನುಡಿಗಳು ಮೆಚ್ಚಿಗೆ ಪಡುವಂತಹವೇ. ನನಗೇನೂ ಬೇಸರವಿಲ್ಲ. ನಿಮಗೊಂದು ವಿಷಯ ತಿಳಿಸಲು ಇಷ್ಟಪಡುತ್ತೇನೆ. ಅಮೆರಿಕಾದಲ್ಲಿ ನಡೆಯುವ Akka ಸಮ್ಮೇಳನಕ್ಕೆ ಅವರನ್ನು ಆಹ್ವಾನಿಸಿದಾಗ ಅದರ ಆಯೋಜಕರು ಭೈರಪ್ಪನವರಿಗೆ ನೀವು ಒಂದು ಪತ್ರ ಕೊಡಿ ನಾವು ಕರ್ನಾಟಕ ಸರ್ಕಾರದಿಂದ ನಿಮಗೆ ಅಮೆರಿಕಾಕ್ಕೆ ಬಂದು ಹೋಗುವ ಟಿಕೆಟ್ ನ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದಾಗ ಭೈರಪ್ಪನವರು ಒಪ್ಪಲಿಲ್ಲ. ನಾನು ಸರ್ಕಾರದ ಟಿಕೆಟ್ ನಲ್ಲಿ ಬರಲಾರೆ. ಅದು ನನ್ನ policy. ನಿಮಗೆ ನಾನು ಬರಬೇಕು ಅಂತ ಇಷ್ಟವಿದ್ದರೆ ನೀವೇ ಟಿಕೆಟ್ ಕಳಿಸಿ ಬರುತ್ತೇನೆ ಎಂದರು. ಅಂದಿನಿಂದ Akka ದವರು ಭೈರಪ್ಪನವರನ್ನು ಆಹ್ವಾನಿಸುವಾಗ ಅದೇ ರೀತಿ ನಡೆಯುತ್ತಾ ಬಂದಿದ್ದಾರೆ. ಸರ್ಕಾರದ ಟಿಕೆಟ್ ಎಂದರೆ ಏನು ಅರ್ಥ ಎಂದು ತಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ. ಅದು ನನ್ನಂತಹ,ನಿಮ್ಮಂತಹ ಸಾವಿರಾರು ಜನಗಳ ತೆರಿಗೆ ಹಣ ಅಲ್ಲವೇ? ವೇದಿಕೆಗಳಿಂದ ಬೆಂಕಿ ಉಂಡೆ ಅಂತಹ 'ಪ್ರಗತಿ ಪರ' ಭಾಷಣ ಮಾಡುವುದು ಮುಖ್ಯವೋ ನಮ್ಮ ನಮ್ಮ ನಡೆ ನುಡಿ ಮುಖ್ಯವೋ? ಸಿದ್ದಲಿಂಗಯ್ಯನವರ ಆತ್ಮ ಕಥೆ ಊರು ಕೇರಿ ಭಾಗ ೧ ಮತ್ತು ೨ ಓದಿದರೆ ಅವರು ನೀವೆಲ್ಲಾ ಭಾವಿಸಿರುವಂತಹ ಪ್ರಗತಿಪರತೆಯ definitionಗೆ ಅದು ಹೊಂದುವುದಿಲ್ಲ ಎಂದು ತಿಳಿಯುತ್ತದೆ. ನುಡಿಸಿರಿಯಲ್ಲಿ ಈಗಾಗಲೇ ಭೈರಪ್ಪನವರು ಮಾತಾಡಿ ಬಂದು ಆಗಿದೆ. ನುಡಿಸಿರಿಯವರಿಗೆ 'ಪ್ರತಿಗಾಮಿ' ,'ಪ್ರಗತಿಗಾಮಿ' ಇತ್ಯಾದಿಗಳನ್ನು ಕಟ್ಟಿಕೊಂಡು ಏನಾಗಬೇಕಿದೆ? ಅವರು ಯಾರನ್ನು ಮೆಚ್ಚಿಸಬೇಕಾಗಿದೆ? ಅವರಿಗೆ ಈ ಸಲ ಯಾರು ಬೇಕೆಂದು ಎಂದು ಅನಿಸುತ್ತದೋ ಅವರನ್ನು ಕರೆಯುತ್ತಾರೆ. ತಾವು Anonymous ಎಂದು ತಮ್ಮ ಚಹರೆಯನ್ನು ಏಕೆ ಮರೆಮಾಚಿದ್ದೀರಿ? ಮರೆಯಲ್ಲಿ ನಿಂತು ಟೀಕೆ ಮಾಡುವುದು ಪ್ರಗತಿಪರತೆಯ ಲಕ್ಷಣವೇ?--ಎಂ ಎ ಶ್ರೀರಂಗ ಬೆಂಗಳೂರು.

   Delete
  3. ಬಷೀರ್, ನಿಮ್ಮ ಸಮರ್ಥನೆಗೆ ಭೈರಪ್ಪನವರ ಖಾಸಾ ಶಿಷ್ಯರೇ ಮುಂದೆ ಬಂದಿರುವುದನ್ನು ನೋಡಿದರೆ ತಿಳಿಯುತ್ತದೆ ನೀವೀಗ ಯಾವ ಪಾಳಯದಲ್ಲಿ ಇದ್ದೀರಿ ಅಂತ! -- ನಾಗರಾಜ್

   Delete
  4. Anonymous ಮುಖವಾಡದ ಹಿಂದೆ ಇರುವ ನಾಗರಾಜ್ ಎಂಬ ನಾಮಾಂಕಿತರಿಗೆ -- ಬಷೀರ್ ಅವರು ತಮ್ಮ ಸ್ವಂತ ಬ್ಲಾಗಿನಲ್ಲಿ ಓದುಗರ ಪ್ರತಿಕ್ರಿಯೆಗೆ ಮುಕ್ತ ಅವಕಾಶ ನೀಡಿದ್ದಾರೆ. ಬಷೀರ್ ಅವರ ಇದೇ ಲೇಖನ ಇಲ್ಲೇ ಪಕ್ಕದಲ್ಲೇ ಇರುವ ಇನ್ನೊಂದು ಬ್ಲಾಗಿನಲ್ಲೂ ಪ್ರಕಟವಾಗಿದೆ. ಅದು ದಿನದ ಮೂರೂ ಹೊತ್ತೂ ತಾನು 'ಪ್ರಗತಿಪರ' ಎಂದು ಕಹಳೆ ಊದುತ್ತಿರುತ್ತದೆ. ಆದರೆ ಓದುಗರ ಪ್ರತಿಕ್ರಿಯೆಗೆ ಅಲ್ಲಿ ಅವಕಾಶವೇ ಇಲ್ಲ. ಓದುಗರ ಅಭಿಪ್ರಾಯ ಸ್ವಾತಂತ್ರ್ಯವನ್ನೇ ಹತ್ತಿಕ್ಕಿರುವ ಅವರಿಗಿಂತ ಬಷೀರ್ ಅವರು ಉತ್ತಮರು. ಅವರನ್ನು ಕುಚೋದ್ಯಮಾಡುವುದರಿಂದ 'ಪ್ರಗತಿಪರರು' ಎಂಬ ಪ್ರಭೇದಕ್ಕೆ ನಾನು ಸೇರಿದ್ದೇನೆ ಎಂದು ನೀವು ಹೆಮ್ಮೆ ಪಟ್ಟುಕೊಳ್ಳುವುದನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ನಡೆ ನುಡಿಗೆ ಬೇಡದ ಪ್ರಗತಿಪರತೆಗೆ ಕಿಲುಬು ಕಾಸಿನ ಬೆಲೆಯಿಲ್ಲ. ---ಎಂ ಎ ಶ್ರೀರಂಗ ಬೆಂಗಳೂರು

   Delete
  5. ನಿಮ್ಮಂತಹ ವೈದಿಕ ವೈರಸುಗಳು ಪ್ರಗತಿಪರ ವೇದಿಕೆಗಳಲ್ಲೂ ಸಿಕ್ಕಾಪಟ್ಟೆ ಲದ್ದಿ ಹಾಕಿರುವುದರಿಂದಲೇ ಲಡಾಯಿ ಬ್ಲಾಗಿನಲ್ಲಿ ನಿಮ್ಮಂತಹವರಿಗೆ ಪ್ರವೇಶ ನಿಷೇಧಿಸಲಾಗಿದೆ. -- ನಾಗರಾಜ್

   Delete
  6. ನಾಗರಾಜ್ ಅವರಿಗೆ-- ನಾನು ಲಡಾಯಿ ಬ್ಲಾಗ್ ಅನ್ನು ಒಂದೂವರೆ ವರ್ಷದಿಂದ ಪ್ರತಿದಿನ ನೋಡುತ್ತಿದ್ದೇನೆ. . ಇಷ್ಟು ದಿನಗಳಲ್ಲಿ ಒಂದೇ ಒಂದು ಸಾರಿ ನಿಮ್ಮಂತಹ 'ಪ್ರಗತಿಪರ ಪ್ಯಾರಾಸೈಟ್' ಗಳ ಪ್ರತಿಕ್ರಿಯೆಯೂ ಅಲ್ಲಿ ಪ್ರಕಟವಾಗಿಲ್ಲ. . ನನ್ನಂತಹ ವೈದಿಕ ವೈರಸ್ಸುಗಳ ಪ್ರತಿಕ್ರಿಯೆಯನ್ನು delete ಮಾಡುವ ಅಧಿಕಾರ ಆ ಬ್ಲಾಗಿನ ಮಾಡರೇಟರ್ ಅವರಿಗೆ ಇದ್ದೇ ಇದೆ. ಆದರೆ ತಮ್ಮಂತಹವರದ್ದೂ ಏಕೆ ಅಲ್ಲಿ ಪ್ರಕಟವಾಗುವುದಿಲ್ಲ? ನಿಮ್ಮಂತಹವರೆ ಇನ್ನೊಬ್ಬ ಪ್ರಗತಿಪರರು 'ಲಡಾಯಿ' ಬ್ಲಾಗಿನ ಪೋಸ್ಟ್ ಗಳ ಭಾಗಗಳನ್ನು ವೈದಿಕಶಾಹಿ ಬ್ಲಾಗ್ ಎಂದು ಅವರೇ ಜರಿಯುವ ಮತ್ತೊಂದು ಬ್ಲಾಗಿನಲ್ಲಿ copy paste ಮಾಡಿ ಆ ಲೇಖನಗಳನ್ನು ಹೊಗಳಿ ಅಲ್ಲಿ ತಮ್ಮ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ಗುಜರಿ ಅಂಗಡಿಯ ಜತೆಗೆ ಲಡಾಯಿ ಬ್ಲಾಗ್ ನಲ್ಲಿ .ಪ್ರಕಟವಾಗಿರುವ ಬಷೀರ್ ಅವರ ಈ ಲೇಖನವನ್ನೂ ಸಹ ಆ ಪ್ರಗತಿಪರರು ಲಡಾಯಿ ಬ್ಲಾಗ್ ನ ಹೆಸರನ್ನು ಮಾತ್ರ ಹೇಳಿ ಆ ವೈದಿಕಶಾಹಿ ಬ್ಲಾಗಿನಲ್ಲಿ ಪ್ರಸ್ತಾಪಿಸಿ ತಮ್ಮ ಪ್ರತಿಕ್ರಿಯೆ ಬರೆದಿದ್ದಾರೆ. ಅದೇ ಕೆಲಸವನ್ನು ಅವರು ಲಡಾಯಿ ಬ್ಲಾಗಿನಲ್ಲೇ ಮಾಡಬಹುದಿತ್ತಲ್ಲ! ಏಕೆ ಮಾಡಲಿಲ್ಲ?!! ವೈದಿಕಶಾಹಿ ಬ್ಲಾಗ್ ಏಕೆ ಬೇಕಾಯಿತು? ಏಕೆಂದರೆ ಅಲ್ಲಿ ಗುಜರಿ ಅಂಗಡಿ ಬ್ಲಾಗ್ ನಲ್ಲಿ ಇರುವ ಹಾಗೇ ಪ್ರತಿಕ್ರಿಯೆಗಳಿಗೆ ತೆರೆದ ಬಾಗಿಲು. ನಿಮ್ಮ ಪ್ರಗತಿಪರತೆಯ model is outdated. ಮೊದಲು ನಮ್ಮ ಸುತ್ತಾ ಮುತ್ತಾ ಏನು ನಡೆಯುತ್ತಿದೆ ಎಂಬುದನ್ನು ಅಭ್ಯಾಸ ಮಾಡಿ. ಆ ಮೇಲೆ ಇನ್ನೊಬ್ಬರನ್ನು ಜರಿಯುವ ಕೆಲಸ ಪ್ರಾರಂಭಿಸಿ.ಡಿ ಆರ್ ನಾಗರಾಜ್ ಅವರು ತಮ್ಮ ಒಂದು ಲೇಖನದಲ್ಲಿ 'ಜೀವನವನ್ನು ಬಹಳ ಸಾರಿ ವಸ್ತುನಿಷ್ಠವಾಗಿ ನೋಡುವವರು ಸಂಪ್ರದಾಯ ನಿಷ್ಠರು' ಎಂದು ಹೇಳಿದ್ದಾರೆ. ಡಿ ಆರ್ ಅವರು ನಿಮಗಿಂತ ಹೆಚ್ಚು ಪ್ರಗತಿಪರರು. ಅದರಲ್ಲಿ ಯಾವ ಅನುಮಾನವಿಲ್ಲ.

   Delete
  7. ಲಡಾಯಿ ಬ್ಲಾಗಿನ ನಿರ್ವಾಹಕ ನಾನಲ್ಲ, ಬಸು ಅವರು. ದಯವಿಟ್ಟು ಅವರಿಗೇ ನಿಮ್ಮ ಪ್ರಶ್ನೆಗಳನ್ನು ಕೇಳಿ. ಲಡಾಯಿ ಪರವಾಗಿ ನಿಮ್ಮ ಜೊತೆ ಲಡಾಯಿ ಮಾಡುವ ಅಗತ್ಯ ನನಗಿಲ್ಲ ಎಂದು ಭಾವಿಸಿದ್ದೇನೆ.

   ಪ್ರಗತಿಪರರ ಬಗ್ಗೆ ವೈದಿಕರಿಗೆ ಇರುವ ತಿರಸ್ಕಾರ ಹಾಗೂ ವೈಮನಸ್ಯ ನನಗೆ ಗೊತ್ತಿಲದೇ ಇಲ್ಲ. ಪ್ರಗತಿಪರತೆಯ ಮಾಡೆಲ್ ಬಗ್ಗೆ ನಿಮ್ಮಿಂದ ಸರ್ಟಿಫಿಕೇಟ್ ನಿರೀಕ್ಷಿಸುತ್ತಿಲ್ಲ. -- ನಾಗರಾಜ್
   -- ನಾಗರಾಜ್

   Delete
  8. "ಮೊದಲು ನಮ್ಮ ಸುತ್ತಾ ಮುತ್ತಾ ಏನು ನಡೆಯುತ್ತಿದೆ ಎಂಬುದನ್ನು ಅಭ್ಯಾಸ ಮಾಡಿ."

   ಏ ವೋಗಯ್ಯ ಭಾಗವತ! ಮಲ್ಲೇಶ್ವರದ ದೇವಸ್ಥಾನದಲ್ಲಿ ಮಾಡು ನಿನ್ನ ಹರಿಕತೆ.

   Delete
  9. ನಾಗರಾಜ್ ಅವರಿಗೆ-- ಲಡಾಯಿ ಬ್ಲಾಗ್ ಹೆಸರನ್ನು ಮೊದಲಿಗೆ ಪ್ರಸ್ತಾಪಿಸಿದವರು ನೀವೇ ನಾನಲ್ಲ. ನಾನು ಪಕ್ಕದಲ್ಲೇ ಇರುವ ಇನ್ನೊಂದು ಬ್ಲಾಗ್ ಎಂದಷ್ಟೇ ಹೇಳಿದ್ದೆ. ಲಡಾಯಿ ಬ್ಲಾಗ್ ನ ನಿರ್ವಾಹಕರು ತಾವಲ್ಲ ಎಂದು ನನಗೆ ಗೊತ್ತಿದೆ. ಲಡಾಯಿ ಬಸು ಅವರಿಗೇ ಪ್ರತಿಕ್ರಿಯೆಗಳನ್ನು ಏಕೆ ಪ್ರಕಟಿಸುತ್ತಿಲ್ಲ ಎಂದು personal ಆಗಿ email ಸಹ ನಾನು ಕಳಿಸಿದ್ದು ಆಗಿದೆ. ಅದೆಲ್ಲಾ ಮುಗಿದ ಕತೆ. ಇನ್ನು ಸರ್ಟಿಫಿಕೇಟ್ ವಿಷಯ-- ಅದು ಇದ್ದ ವಿಷಯ ಹೇಳಿದ್ದಷ್ಟೇ. ಪ್ರಗತಿಪರತೆಗೆ ಸರ್ಟಿಫಿಕೇಟ್ ಇಲ್ಲ. ನಮ್ಮ ನಡೆ ನುಡಿಯೇ ಸರ್ಟಿಫಿಕೇಟ್.

   Anonymous ಎಂಬ ಮುಖವಾಡದ ಹಿಂದೆ ನಿಂತಿರುವ ಮತ್ತೊಬ್ಬರು ಮಹಾನುಭಾವರಿಗೆ---ಕಟಕಿ,ವ್ಯಂಗ್ಯ, ಕುಹಕದ ಮಾತಾಡುವುದು ಅಸಹಾಯಕತೆಯ ಲಕ್ಷಣ. ಬುದ್ಧಿವಂತಿಕೆಯ ಲಕ್ಷಣವಲ್ಲ. ನಿಮ್ಮ ವ್ಯಕ್ತಿತ್ವ ಯಾವ ಮಾದರಿಯದು ಎಂಬುದನ್ನು ನಿಮ್ಮ ಮಾತುಗಳೇ ಹೇಳುತ್ತಿವೆ. ಮಾತು ಸೋತಾಗ ಬುದ್ಧಿ ಮಂಕಾದಾಗ ನಮ್ಮಿಂದ ಹೊರಬರುವ ಆರ್ತನಾದ ಅದು. --ಎಂ ಎ ಶ್ರೀರಂಗ ಬೆಂಗಳೂರು

   Delete
  10. ಅಯ್ನೋರೆ, ನಿಮ್ಮ ಪಾದಗಳನ್ನ ಜೆರಾಕ್ಸ್ ಮಾಡಿ ಕಳ್ಸಿ, ಗೋಡೆಗೆ ಜಡಿದು ದಿನಾ ಕುಂಕುಮ ಹೂವ ಇಟ್ಟು ಪೂಜೆ ಮಾಡಿ ಪುಣ್ಯ ಪಡೀತೀವಿ!

   Delete
 7. ನಾಡಿನ ಅಧಿಕಾರವು ಕಾಂಗ್ರೆಸ್ ಪಕ್ಷದ ಕೈಯಿಂದ ಭಾಜಪದ ಕಮಲಕ್ಕೆ ಹಸ್ತಾಂತರವಾಗುತ್ತಿದ್ದ ಹಾಗೆ ಪ್ರಗತಿಪರ ಎಂದು ಕರೆದುಕೊಳ್ಳುತ್ತಿದ್ದ ಅನೇಕರ ಬಣ್ಣ ಬದಲಾಗುತ್ತಿದೆ. ಅಧಿಕಾರವುಳ್ಳವರ ಡೊಗ್ಗು ಸಲಾಂ ಹಾಕದ ಹೊರತು ಇವರುಗಳ ಬೇಳೆ ಬೇಯುವುದಿಲ್ಲ. ಇಂದು ನುಡಿಸಿರಿಯ ಪರವಾಗಿ ಬರೆಯುತ್ತಿರುವವರು ನಾಳೆ ಶಾಲೆಗಳಲ್ಲಿ ವಂದೇ ಮಾತರಂ ಅನ್ನು ಕಡ್ಡಾಯ ಮಾಡತಕ್ಕದ್ದು ಅಂತ ಬರೆದರೂ ಆಶ್ಚರ್ಯ ಪಡಬೇಕಿಲ್ಲ. -- ಸಿದ್ದಮುಖಿ

  ReplyDelete