Saturday, October 4, 2014

ಪಾತುಮ್ಮಜ್ಜಿಯ ದಾಹ

 ರಾತ್ರಿ ಹನ್ನೊಂದು ಗಂಟೆ ಇರಬಹುದು. ಅಮ್ಮ, ತಂಗಿಯರೆಲ್ಲ ಒಳಗೆ ನಿದ್ದೆ ಹೋಗಿದ್ದರು. ಕರೆಂಟ್ ಇಲ್ಲದ ಕಾರಣ ಚಿಮಿಣಿ ದೀಪ ಹಚ್ಚಿಟ್ಟು ನಾನು ಅದೇನೋ ಓದುತ್ತಿದ್ದೆ. ಹೋರಗೆ ಧಾರಾಕಾರ ಮಳೆ. ಅಂಗಳದ ತುಂಬಾ ನೀರು. ಆಗಲೇ ಇರಬೇಕು.... ಆ ಒದ್ದೆ ರಾತ್ರಿಯನ್ನು ಈಜಿಕೊಂಡು ಬಂದ ಕರೆ ನನ್ನನ್ನು ಬೆಚ್ಚಿ ಬೀಳಿಸಿದ್ದು. ಯಾರೋ ನನ್ನ ಹೆಸರಿಡಿದು ಕರೆಯುತ್ತಿದ್ದರು. ಬಾಗಿಲು ತಟ್ಟಿದ ಸದ್ದು ಬೇರೆ. ಒಳ ಹೊರಗೆ ಸುಳಿದಾಡುತ್ತಿದ್ದ ಚಳಿಗಾಳಿಗೆ ಚಿಮಿಣಿ ದೀಪ ಚಡಪಡಿಸುತ್ತಿತ್ತು. ನನ್ನಾಳದಲ್ಲಿ ಅವ್ಯಕ್ತ  ಭಯವೊಂದು ಭುಗ್ಗೆಂದು ಎದ್ದು, ತಳ ಸೇರಿತು. ಹೋಗಿ ಬಾಗಿಲು ತೆರೆದರೆ ಕೆಳಗಿನ ಮನೆಯ ಅದ್ದು ಚಳಿಯೋ, ಭಯವೋ ನಡುಗುತ್ತಾ ನಿಂತಿದ್ದ. ಕೊಡೆ ಬಿಡಿಸಿ ನಿಂತಿದ್ದರೂ ಅವನ ತಲೆ, ಮುಖ, ಮೈಯೆಲ್ಲ ಒದ್ದೆಯಾಗಿತ್ತು. ಅವನು ನನ್ನನ್ನು ಕಂಡದ್ದೇ ಒಂದೇ ಉಸಿರಿಗೆ ಹೇಳಿದ ‘‘ನೀರು ಬೇಕಾಗಿತ್ತು...ಝಂಝಂ ನೀರು ಬೇಕಾಗಿತ್ತು''
ಅವನ ಧ್ವನಿ ಕಂಪಿಸುತ್ತಿರುವ ರೀತಿಗೇ ನನಗೆಲ್ಲ ಅರ್ಥವಾಗಿ ಹೋಯಿತು. ಅದ್ದುವಿನ ಮುತ್ತಜ್ಜಿ ಪಾತುಮ್ಮಾದ ಸಾವಿನ ಅಂಚನ್ನು ತಲುಪಿದ್ದಾರೆ. ನನ್ನ ಝಂಝಂ ನೀರಿಗಾಗಿ ಆಕೆ ಕೊನೆಯ ಉಸಿರನ್ನು ಹೊರದಬ್ಬದೇ ಹಾಗೆ ಕಾಯುತ್ತಾ ಮಲಗಿದ್ದಾಳೆ.
ಪಾತುಮ್ಮಾದ ನಮ್ಮೂರಿನ ಅತಿ ಹಿರಿಯ ಜೀವ. ವಯಸ್ಸು ನೂರು ದಾಟಿರಬಹುದು. ಆ ಊರಿನ ಹೆಚ್ಚಿನ ತರುಣರನ್ನು ತಾಯಿಯ ಗರ್ಭದಿಂದ ಹೊರಗೆಳೆದದ್ದು, ಹುಟ್ಟಿದ ಮಗುವನ್ನು ನಲವತ್ತು ದಿನ ಮೀಯಿಸಿದ್ದು, ಸಣ್ಣ ಪುಟ್ಟ ತುಂಟ ರೋಗಗಳಿಂದ ಮಕ್ಕಳನ್ನು ತನ್ನ ಹಳ್ಳಿ ಮದ್ದಿನ ಮೂಲಕ ರಕ್ಷಿಸಿದ್ದು  ಇದೇ ಪಾತುಮ್ಮಾದ. ನಾನು ತಾಯಿಯ ಹೊಟ್ಟೆಯಿಂದ ನೇರವಾಗಿ ಪಾತುಮ್ಮನ ಬೊಗಸೆಗೆ ಬೀಳಲಿಲ್ಲವಂತೆ. ತಲೆಯನ್ನು ಉಲ್ಟಾ ಮಾಡಿ, ತಾಯಿಯ ಗರ್ಭದಿಂದ ಬರಲಾರೆ ಎಂದು ಹಟ ಹಿಡಿದಿದ್ದೆನಂತೆ. ಇದೇ ಪಾತುಮ್ಮಜ್ಜಿ ತನ್ನೆಲ್ಲ ಶ್ರಮದಿಂದ, ತಾಯಿಯ ಗರ್ಭವನ್ನು ನೀವಿ ನೀವಿ ತಲೆಯನ್ನು ಉಲ್ಟಾ ಮಾಡಿ, ಮೆಲ್ಲಗೆ ತಾಯಿಯ ಗರ್ಭದಿಂದ ಹೊರಗೆ ಜಾರಿಸಿದರಂತೆ.
‘‘ನಿನ್ನ ಹಟ ನನ್ನಲ್ಲಿ ತೋರಿಸಬೇಡ. ನೀನು ಗರ್ಭದೊಳಗೆ ಇದ್ದಾಗಲೇ ನಿನ್ನ ಆಟಕ್ಕೆ ಹೆದರಲಿಲ್ಲ. ಈಗ ಹೆದರುತ್ತೇನಾ... ಹೆಚ್ಚಿಗೆ ಮಾತನಾಡಿದರೆ ಮತ್ತೆ ತಲೆ ಉಲ್ಟಾ ಮಾಡಿ, ಅಲ್ಲಿಗೇ ವಾಪಸ್ ಕಳುಹಿಸಿಲಿಕ್ಕುಂಟು’’ ಎಂದು ಪಾತುಮ್ಮ ನನ್ನಲ್ಲಿ ಆಗಾಗ ಕೊಚ್ಚಿಕೊಳ್ಳುವುದಿತ್ತು.
ನನ್ನ ಹೊಕ್ಕಳು ಬಳ್ಳಿಯನ್ನು ಕತ್ತರಿಸಿದ್ದೂ ಆಕೆಯೇ ಅಂತೆ. ನಾನು ಅಳದೆ ಆಕೆಯನ್ನು ನೋಡಿ ನಕ್ಕೆನಂತೆ. ಅದು ನಿಜವೇ ಇರಬಹುದು. ಆಕೆ ನನ್ನ ನಲ್ವತ್ತು ದಿನ ಮೀಯಿಸಿದಳು. ಕೈ ಹಿಡಿದು ನಡೆಸಿದಳು. ರೋಗಗಳಿಂದ ರಕ್ಷಿಸಿದಳು. ಕತೆ ಹೇಳಿಕೊಟ್ಟಳು. ಪದ ಹಾಡಿ ಮಲಗಿಸಿದಳು. ಅಂತಹ ಅಜ್ಜಿಗಳಿಗೆಲ್ಲ ಅಜ್ಜಿಯೆನ್ನಬಹುದಾದ ಪಾತುಮ್ಮ ನಾಲ್ಕೆೃದು ತಿಂಗಳ ಹಿಂದೆ ನನ್ನ ಕೈಯನ್ನು ತನ್ನ ಕಂಪಿಸುವ ಕೈಗಳಲ್ಲಿ ತುಂಬಿ ಕೇಳಿದ್ದಳು. ‘ಮಗನೇ ... ನಾನು ಸಾಯುವಾಗ ಝಂಝಂ ನೀರು ಕುಡಿದು ಸಾಯಬೇಕು ಎಂದು ಆಸೆ. ಎಲ್ಲಿಂದಾದರೂ ಝಂಝಂ ನೀರು ತರಿಸಿಟ್ಟುಕೋ... ಸಾಯುವ ಮೊದಲು ನನ್ನ ಪುಳ್ಳಿ ಅದ್ದುವನ್ನು ಕಳಿಸುತ್ತೇನೆ...’’ ಇದೀಗ ಈ ಹೊತ್ತಲ್ಲದ ಹೊತ್ತಿನಲ್ಲಿ ಪಾತುಮ್ಮಾದಳ ಪುಳ್ಳಿ ಅದ್ದು ನನ್ನ ಮುಂದೆ ನಿಂತು ಝಂಝಂ ನೀರು ಕೇಳುತ್ತಿದ್ದಾನೆ.
ಸಾವಿರಾರು ವರ್ಷಗಳ ಹಿಂದೆ ಮಕ್ಕಾ ಮರುಭೂಮಿಯಲ್ಲಿ ಪ್ರವಾದಿ ಇಬ್ರಾಹೀಂರ ಪತ್ನಿ ಹಾಜಿರಾ ಎನ್ನುವ ತಾಯಿ ತನ್ನ ಮಗುವಿನ ಜೊತೆ ಮರುಭೂಮಿ ಪಾಲಾದರಂತೆ. ಆ ಮರುಭೂಮಿಯ ನಟ್ಟ ನಡುವೆ ಮಗು ಬಾಯಾರಿ ಅಳತೊಡಗಿತು. ಪತ್ನಿ ಹಾಜಿರಾಂ ಎದೆ ಹಾಲು ಬತ್ತಿ ಹೋಗಿತ್ತು. ಮಗುವಿನ ಅಳುವಿನ ಸದ್ದು ಜೋರಾದಂತೆ ಹಾಜಿರಾ ನೀರಿಗಾಗಿ ಅತ್ತಿತ್ತ ತಡಕಾಡತೊಡಗಿದರು. ಮಗುವಿನ ಅಳು ಮರುಭೂಮಿಯನ್ನು ವ್ಯಾಪಿಸತೊಡಗಿದಂತೆ ಹಾಜಿರಾ ಏಳು ಬಾರಿ ನೀರಿಗಾಗಿ ಅಲೆಯುತ್ತಾ ಸಫಾ- ಮರ್ವಾ ಪರ್ವತವನ್ನಿ ಏರಿ ಇಳಿದರಂತೆ. ಆದರೆ ಒಂದು ಹನಿ ನೀರೂ ಸಿಗಲಿಲ್ಲ. ಇತ್ತ ಮಗುವಿನ ಬಳಿ ಅಂದರೆ ಬಾಯಾರಿ ನೊಂದ ಮಗುವಿನ ಪಾದದ ಬಡಿತಕ್ಕೆ ಎದೆಯಿಂದ ಹಾಲುಕ್ಕುವಂತೆ ಮರುಭೂಮಿಯಿಂದ ನೀರಿ ಚಿಮ್ಮಿತಂತೆ. ಚಿಮ್ಮಿ ಹರಿಯ ತೊಡಗಿದ ನೀರನ್ನು ತಾಯಿ ಹಾಜಿರಾ ‘‘ಝಂಝಂ(ನಿಲ್ಲು ನಿಲ್ಲು)’’ ಎಂದು ತಡೆದು, ತನ್ನ ಮಗುವಿಗೆ ಉಣಿಸಿದರಂತೆ. ಇಂದಿಗೂ ಮಕ್ಕಾದಲ್ಲಿ ಝಂಝಂ ನೀರು ಉಕ್ಕಿ ಹರಿಯುತ್ತಿದೆ. ಹಜ್ ಯಾತ್ರೆಗೆ ಹೋದ ಎಲ್ಲ ಯಾತ್ರಿಕರೂ ಹಾಜಿರಾ ಏಳು ಬಾರಿ ಬೆಟ್ಟವೇರಿ ಇಳಿದ ಸಂಕೇತವಾಗಿ, ಸಫಾ ಮರ್ವಾವನ್ನು ನಿರ್ವಹಿಸುತ್ತಾರೆ. ಜೊತೆಗೆ ಈ ಝಂಝಂ ನೀರಿನೊಂದಿಗೆ ಮರಳುತ್ತಾರೆ. ಹಜ್ ಯಾತ್ರೆ ನಿರ್ವಹಿಸಿ ಬಂದವರ ಮನೆಯಲ್ಲಿ ಈ ಝಂಝಂ ನೀರು ಜೋಪಾನವಾಗಿರುತ್ತದೆ. ಆ ಮನೆಯ ಬಾಗಿಲು ತಟ್ಟುವ ಮರಣ ದೇವತೆಯ ಪಾದವನ್ನು ತೊಳೆಯುವುದಕ್ಕೆ. ಮರಣಯ್ಯೆಯಲ್ಲಿರುವವರ ಕೊನೆಯ ದಾಹವನ್ನು ತಣಿಸುವುದಕ್ಕಾಗಿ.
ನನ್ನ ತಾಯಿಯ ಅಣ್ಣ ಮತ್ತು ಅವರ ಪತ್ನಿ ಅಂದರೆ ಮಾವ ಮತ್ತು ಅತ್ತೆ ಹಜ್ ನಿರ್ವಹಿಸುವುದಕ್ಕೆ ಹೋದವರು ಎರಡು ತಿಂಗಳ ಹಿಂದೆ ಮರಳಿದ್ದರು. ಬಳಿಕ ನಮ್ಮ ಮನೆಗೂ ಬೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಮಕ್ಕಾದಿಂದ ತಂದ ಒಂದು ಜಪಮಣಿ ಸರ, ಸಣ್ಣದೊಂದು ನಮಾಜು ನಿರ್ವಹಿಸುವ ಚಾಪೆ ಹಾಗೂ ಒಂದು ದೊಡ್ಡ ಬಾಡಲಿಯಲ್ಲಿ ಝಂಝಂ ನೀರು ತಂದಿದ್ದರು. ಆದ ನನಗೆ ಪಾತುಮ್ಮಾದಳ ನೆನಪಾಯಿತು. ಇರಲಿ ಎಂದು ಜೋಪಾನವಾಗಿ ಇಟ್ಟಿದ್ದೆ. ನಮ್ಮ ಮನೆಯಲ್ಲಿ ಝಂಝಂ ನೀರಿರುವುದು ಹಲವರಿಗೆ ತಿಳಿದು, ತಮ್ಮ ಅಜ್ಜಿ, ತಾಯಿ... ಹೀಗೆ ಯಾರದಾದರೂ ಮರಣದ ಸುದ್ದಿಯ ಜೊತೆಗೆ ಈ ಝಂಝಂ ನೀರಿಗಾಗಿ ಬರುತ್ತಿದ್ದರು. ಇಲ್ಲ ಎನ್ನುವುದು ತೀರಾ ಕಷ್ಟವಾಗಿತ್ತು. ವಾರದ ಹಿಂದೆ ಈ ಪಾತುಮ್ಮಜ್ಜಿ ಬಂದವಳು ‘‘ಮಗನೇ... ಎಲ್ಲವನ್ನು ಕೊಟ್ಟು ಮುಗಿಸಬೇಡ... ನನಗೆ ಎರಡು ಗುಟುಕು ನೀರು ಇರಲಿ’’ ಎಂದು ಮುದ್ದಾದ ಬೊಚ್ಚು ಬಾಯಿಯಿಂದ ಪಟ್ಟ ಮಗುವಿನಂತೆ ನಕ್ಕಿದ್ದಳು.

‘‘ಆಯಿತಜ್ಜಿ ಎಂದು ಭರವಸೆ ನೀಡಿದ್ದೆ. ಮೂರು ದಿನಗಳ ಹಿಂದೆ ಪಾತುಮ್ಮಜ್ಜಿ ಕುಸಿದು ಬಿದ್ದ ಸುದ್ದಿ ಸಿಕ್ಕಿತ್ತು. ಆಕೆಯನ್ನು ನೋಡುವುದಕ್ಕೂ ಹೋಗಿದ್ದೆ. ಆಕೆ ನನ್ನನ್ನೇ ನೋಡಿ ವಿಚಿತ್ರವಾಗಿ ನಕ್ಕಿದ್ದಳು. ಆಮೇಲೆ ಆಕೆಯ ಆರೋಗ್ಯ ಕೆಡುತ್ತಾ ಬಂದಿತ್ತು.
***
‘‘ಇಲ್ಲೇ ನಿಲ್ಲು’’ ಎಂದು ಅದ್ದುವಿಗೆ ಹೇಳಿ, ನಾನು ಚಿಮಿಣಿ ಹಿಡಿದು ಒಳಕೋಣೆಗೆ ಹೋದೆ. ‘‘ಯಾರೋ ಅದು...’’ ಒಳಗಿನಿಂದ ಅಮ್ಮ ಕೇಳಿದಳು.
‘‘ಪಾತುಮ್ಮಜ್ಜಿ ಪುಳ್ಳಿ ಬಂದಿದ್ದಾನೆ... ಝಂಝಂ ನೀರು ಬೇಕಂತೆ...’’ ಎಂದೆ. ‘‘ಕೊನೆಗೂ ಮುದುಕಿಗೆ ಹೋಗುವ ಸಮಯ ಬಂತೂಂತ ಕಾಣುತ್ತದೆ...’’ ಅಮ್ಮನ ಗೊಣಗು ಕೇಳಿತು.
ನಾನು ಕೋಣೆಯ ಕಪಾಟು ತೆರೆದೆ. ಮೇಲಿನ ಚೌಕದಲ್ಲಿ ಝಂಝಂ ಬಾಟಲಿ ಹೊಳೆಯುತ್ತಿದೆ. ಕೈಗೆತ್ತಿಕೊಂಡೆ ಬಾಟಲಿ ನೋಡುತ್ತಿದ್ದಂತೆಯೇ ನನ್ನ ಹದಯ ಬಾಯಿಗೆ ಬಂತು... ಬಾಟಲಿ ಖಾಲಿಯಾಗಿತ್ತು. ಮೊನ್ನೆ ನೋಡಿದಾಗ ಬಾಟಲಿಯಲ್ಲಿ ನೀರಿತ್ತಲ್ಲ? ಬಹುಶಃ ತಂಗಿಯರು ಯಾರೋ ಕೇಳಿದರೆಂದು ಕೊಟ್ಟು ಬಿಟ್ಟರ? ಬಾಟಲಿಯ ತಳ ಒಣಗಿತ್ತು. ಯಾಕೋ ನನ್ನ ಕೈ ಕಂಪಿಸಿತು. ಗಂಟಲು ಕಟ್ಟಿದಂತಾಯಿತು. ಅದ್ದುವಿಗೆ ಏನೆಂದು ಹೇಳಲಿ? ಒಂದು ಕ್ಷಣ ಹಾಗೇ ಪಕ್ಕದ ಮಂಚದಲ್ಲಿ ಕೂತು ಬಿಟ್ಟೆ. ಅಷ್ಟೇ... ಏನೋ ಹೊಳೆಯಿತು ನನಗೆ. ಆ ಕತ್ತಲಲ್ಲಿ ಮಿಂಚೊಂದು ಸುಳಿಯುವಂತೆ. ಬಾಟಲಿಯೊಂದಿಗೆ ನೇರವಾಗಿ ಅಡುಗೆ ಕೋಣೆ ಹೊಕ್ಕೆ. ಅಲ್ಲಿ ಅಮ್ಮ ಬಾವಿಯಿಂದ ತಂದ ನೀರು ಕೊಡ ತುಂಬ ಹೊಳೆಯುತ್ತಿತ್ತು. ಅರ್ಧ ಬಾಟಲು ನೀರನ್ನು ತುಂಬಿಸಿ, ಹೊರಗೆ ಕಾಯುತ್ತಿರುವ ಅದ್ದುವಿನ ಕೈಗಿತ್ತೆ. ‘‘ಸ್ವಲ್ಪ ಉಳಿದಿತ್ತು... ತೆಗೆದುಕೋ’’ ಎಂದೆ.
***
ಮರುದಿನ ನಾನು ತಾಯಿ ಮತ್ತು ತಂಗಿಯರ ಜೊತೆಗೆ ಪಾತುಮ್ಮನ ಮನೆಗೆ ಹೋದೆ. ಮತದೇಹವನ್ನು ಮೀಯಿಸುವುದಕ್ಕೆ ಇಟ್ಟಿದ್ದರು. 

ಅದ್ದು ಯಾರಲ್ಲೋ ಹೇಳುತ್ತಿದ್ದ.‘‘...ಝಂಝಂ ನೀರು ತಂದಿದ್ದೇನೆ.... ಎಂದು ಹೇಳಿದಾಕ್ಷಣ ಅಜ್ಜಿ ಕಣ್ಣು ತೆರೆದಳು.. ಬಾಯಿಗೆ ನೀರು ಹಾಕಿದಂತೆ, ಗಳಗಳನೆ ಕುಡಿದಳು... ಆಮೇಲೆ ಮೆಲ್ಲಗೆ ‘ ಈಗ ಸಮಾಧಾನವಾಯಿತು’ ಎಂದು ಉಸುರಿದಳು... ಹಾಗೆ ಕಣ್ಣು ಮುಚ್ಚಿದವಳು ಕಣ್ಣು ತೆರೆಯಲೇ ಇಲ್ಲ....’’
ಅಮ್ಮ ಮತ್ತು ತಂಗಿ  ಪಾತುಮ್ಮಜ್ಜಿಯನ್ನು ಮೀಯಿಸುವಲ್ಲಿಗೆ ಹೋದರು. ನನಗೆ ಪಾತುಮ್ಮಜ್ಜಿಯ ಮುಖವನ್ನು ನೋಡುವ ಧೈರ್ಯವಿರಲಿಲ್ಲ. ಅಂಗಳದಲ್ಲೇ ಕರ್ಪೂರದ ವಾಸನೆಯನ್ನು ಆಘ್ರಾಣಿಸುತ್ತಾ ನಿಂತಿದ್ದೆ. ಅಷ್ಟರಲ್ಲಿ ಆಕಾಶದಿಂದ ಒಂದು ಹನಿ ನನ್ನ ಕೆನ್ನೆಯ ಮೇಲೆ ಉದುರಿತು. ಮೇಲೆ ನೋಡಿದೆ. ಇನ್ನೇನು ಸುರಿಯುವುದಕ್ಕೆ ಸಿದ್ಧವಾಗಿ ನಿಂತಿರುವ ಮೋಡಗಳು.
‘‘ಝಂ ಝಂ’’ ಎನ್ನುವ ಎರಡು ಶಬ್ದಗಳು ನನ್ನ ಅಪ್ಪಣೆಯನ್ನು ಮೀರಿ ನನ್ನ ಬಾಯಿಂದ ಉದುರಿದವು.

No comments:

Post a Comment