Monday, February 17, 2014

ಕುಂವೀ ಮಾತುಗಳ ಹಿಂದಿನ ವಿರೋಧಾಭಾಸಗಳು...

ಜ್ಞಾನಪೀಠದ ಕುರಿತಂತೆ ತಾನೇಕೆ ಅಸಹನೆಯಿಂದ ಮಾತನಾಡಿದೆ ಎನ್ನುವುದನ್ನು ಕುಂ.ವೀ. ಅವರು ಈಗಾಗಲೇ ವಿವಿಧ ಮಾಧ್ಯಮಗಳಲ್ಲಿ ತೋಡಿಕೊಂಡಿದ್ದಾರೆ. ಇಷ್ಟಾದ ಬಳಿಕವೂ ಕುಂ.ವೀ. ವ್ಯಕ್ತಪಡಿಸಿದ ಟೀಕೆಗಳು ಸಮರ್ಥನೀಯವೆಂದು ಅನ್ನಿಸದೇ ಇರುವುದಕ್ಕೆ ಮುಖ್ಯ ಕಾರಣ ಅವರದೇ ಮಾತುಗಳಲ್ಲಿರುವ ವಿರೋಧಭಾಸಗಳು. ಏಕಾಏಕಿ ಜ್ಞಾನಪೀಠ ಪ್ರಶಸ್ತಿ ಟೀಕೆ, ಚರ್ಚೆಗೆ ಅರ್ಹವಾಗುವಷ್ಟು ತುರ್ತು ಸಂದರ್ಭ ನಮ್ಮ ನಡುವೆ ಇದೆಯೆ? ಎನ್ನುವುದನ್ನು ಕೇಳಿಕೊಂಡಷ್ಟು, ಜ್ಞಾನಪೀಠ ಕುರಿತಂತೆ ಕುಂವೀ ಮಾತುಗಳು ಪ್ರಜ್ಞಾಪೂರ್ವಕವಾಗಿ ಸಷ್ಟಿಯಾದವುಗಳು ಎಂದೇ ನನಗನ್ನಿಸುತ್ತದೆ.
ಅಂದಿನ ಸಭೆಯಲ್ಲಿ ಜ್ಞಾನಪೀಠದ ಕುರಿತಂತೆ ಮಾತುಗಳು ಯಾಕೆ ಹುಟ್ಟಿಕೊಂಡವು ಎನ್ನುವುದಕ್ಕೆ ಅವರು ನೀಡುವ ಮುಖ್ಯ ಕಾರಣ ಮೂರು. 1. ಪ್ರತಿ ಸಭೆಯಲ್ಲಿ ಕುಂವೀ ಅವರಿಗೂ ಜ್ಞಾನಪೀಠ ಸಿಗಲಿ ಎಂಬ ಹಾರೈಕೆ ಸಿಟ್ಟಿಗೆ ಕಾರಣವಾಯಿತು. 2. ಶಾಲಾ ಕಾಲೇಜುಗಳಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಫೋಟೋಗಳನ್ನು ಛಾಪಿಸಿ, ಇವರೇ ಅಂತಿಮ ಎಂದು ಘೋಷಿಸುವುದು ಎಷ್ಟು ಸರಿ? ಇವರಿಗಿಂತ ಬೇರೆ ಲೇಖಕರಿಲ್ಲವೆ? ಎಂಬ ಭಾವನೆ ಮಕ್ಕಳಲ್ಲಿ ಮೂಡುವುದಿಲ್ಲವೆ ಎಂಬ ಕುಂವೀ ಅನಿಸಿಕೆ. 3. ಅನಂತಮೂರ್ತಿಯವರು ವಶೀಲಿ ಬಾಜಿ ಮೂಲಕವೇ ಆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
  ಕುಂ. ವೀ. ಅವರ ಮೂರೂ ಅಸಹನೆಗಳೂ ಸಕಾರಣವುಳ್ಳದ್ದೇ. ಇದರಲ್ಲಿ ಎರಡು ಮಾತಿಲ್ಲ. ಆದರೆ ಕುಂವೀ ಅವರು ಜ್ಞಾನಪೀಠವನ್ನು ಸಾರಾಸಗಟಾಗಿ ತಿರಸ್ಕರಿಸಿಲ್ಲ ಎನ್ನುವುದೂ ಇದೇ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಒಂದು ಪ್ರಶಸ್ತಿಯನ್ನು ನಾನ್ಸೆನ್ಸ್ ಎಂದು ಕರೆದು, ಮಗದೊಂದೆಡೆ ಪಡೆದ ಇಬ್ಬರನ್ನು ಅಪಾತ್ರರು ಎಂದೂ ಪ್ರತ್ಯೇಕಿಸಿದ ಬಳಿಕ, ಆ ಪ್ರಶಸ್ತಿಯನ್ನೇ ಕುಂವೀ ನೀವಾಳಿಸಿಬಿಡಬೇಕಾಗುತ್ತದೆ. ಆದರೆ ಜ್ಞಾನಪೀಠ ಸಿಕ್ಕಿದರೆ ಬೇಕು ಎನ್ನುವ ಒಳಆಸೆಯೂ ಅವರಲ್ಲಿದೆ. ನನಗೆ ಸಿಕ್ಕಿದರೆ ಬೇಡ ಎಂದು ಬಹಿರಂಗವಾಗಿ ಹೇಳುವ ಯಾವ ಗಟ್ಟಿತನವನ್ನು ಅವರು ಪ್ರದರ್ಶಿಲ್ಲ್ಲ. ಶಾಲೆಯ ಗೋಡೆಯ ಮೇಲಿರುವ ಸಾಹಿತಿಗಳನ್ನು ನೋಡಿ ಸಾಹಿತಿಗಳನ್ನು ನಿರ್ಧರಿಸುವ ಸಮಯ ಪ್ರೌಢಶಾಲಾ ಕಾಲಕ್ಕೆ ಮುಗಿಯುತ್ತದೆ. ಬೆಳೆಯುತ್ತಾ ಹೋದ ಹಾಗೆ ನಾವು ಫೋಟಗಳನ್ನು ಪಕ್ಕಕ್ಕಿಟ್ಟು ಪುಸ್ತಕಗಳನ್ನು ಎತ್ತಿಕೊಳ್ಳುತ್ತೇವೆ. ಅಲ್ಲಿ ನಮ್ಮ ಲೇಖಕರನ್ನು ಹುಡುಕುತ್ತೇವೆ. ಜ್ಞಾನಪೀಠ ಸಿಕ್ಕಿಲ್ಲವೆಂದು ಭೈರಪ್ಪ ಅಭಿಮಾನಿಗಳೇನು ನಮ್ಮ ನಡುವೆ ಕಮ್ಮಿಯಿದ್ದಾರೆಯೆ? ಜ್ಞಾನಪೀಠ ಪ್ರಶಸ್ತಿಗಿಂತ ದೊಡ್ಡದು ನನಗೆ ಕುಂವೀ ಅವರ ಬರಹ. ಅದು ನನ್ನ ಒಳಗಿನ ಚೇತನವನ್ನು ಬೆಚ್ಚಗಿಟ್ಟಿದೆ. ನನ್ನನ್ನು ಬೆಳೆಸಿದೆ. ಒಂದು ಪ್ರಶಸ್ತಿ ಸಿಕ್ಕಿತೆನ್ನುವ ಕಾರಣಕ್ಕಾಗಿ ಯಾರೂ ಒಬ್ಬ ಲೇಖಕನನ್ನು ಇಷ್ಟ ಪಡುವುದಿಲ್ಲ. ಪ್ರಶಸ್ತಿ ಲೇಖಕನ ಪ್ರತಿಷ್ಠೆಯನ್ನು ಹೆಚ್ಚಿಸಬಹುದು. ಪ್ರಶಸ್ತಿ ಸಿಕ್ಕಿದ ಕಾರಣಕ್ಕಾಗಿ ಓದುಗನಿಗೆ ಯಾವ ಲೇಖಕನೂ ಮಹತ್ವದವನಾಗುವುದಿಲ್ಲ. ತಾನು ಇಷ್ಟ ಪಟ್ಟ ಲೇಖಕನಿಗೆ ಪ್ರಶಸ್ತಿ ಸಿಕ್ಕಿದರೆ ಓದುಗನಿಗೆ ಸಂತೋಷವಾಗುತ್ತದೆ. ಕುಂವೀಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದರೆ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ, ಆದರೆ ನನಗಂತೂ ಖುಷಿಯಾಗುತ್ತೆ. ಯಾಕೆಂದರೆ ಅವರ ಕೆಲವು ಕೃತಿಗಳು ನನಗೆ ತುಂಬಾ ಇಷ್ಟ. ನನಗೆ ಇಷ್ಟವಾದವರಿಗೆ ಗೌರವ ಸಿಕ್ಕಿದರೆ ಅದು ಹೆಮ್ಮೆಯ ಸಂಗತಿ. ಆದರೆ ಇಲ್ಲಿ ಜ್ಞಾನಪೀಠದ ಬಗ್ಗೆ ಅಸಹನೆ ಪಡುತ್ತಲೇ ಕುಂವೀ ಒಳಗೊಳಗೆ ಅದು ತನಗೆ ಸಿಗಬೇಕಾಗಿತ್ತು, ಇನ್ನಾರೋ ಲಾಬಿ ಮಾಡಿ ಅದನ್ನು ಕಿತ್ತುಕೊಂಡಿದ್ದಾರೆ ಎಂಬ ರೀತಿಯಲ್ಲಿ ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಾರೆ. ಇದು ಒಬ್ಬ ಸಜನಶೀಲ ಲೇಖಕನಿಗೆ ಒಪ್ಪುವಂತಹದಲ್ಲ.
    ಅನಂತಮೂರ್ತಿಯ ವಿಚಾರಧಾರೆಗಳ ಕುರಿತಂತೆ ಟೀಕೆಗಳು ಹೊಸತೇನಲ್ಲ. ಲಂಕೇಶರಿಂದಲೂ ತೀವ್ರ ಟೀಕೆಗೊಳಗಾದವರು ಅನಂತಮೂರ್ತಿ. ಆದರೆ ಅದಕ್ಕೆ ಕಾರಣ ಜ್ಞಾನಪೀಠ ಅಲ್ಲ. ಕೆಲವು ಸಾಂಸ್ಕೃತಿಕ ಚರ್ಚೆಗಳ ಸಂದರ್ಭಗಳಲ್ಲಿ ಎದುರಾದ ಭಿನ್ನಮತ ಅವರ ನಡುವೆ ಬಿರುಕನ್ನು ತಂದಿತ್ತು. ಈಗಲೂ ಅನಂತಮೂರ್ತಿಯವರನ್ನು ಅತಿ ಹೆಚ್ಚು ಇಷ್ಟ ಪಡುವವರೂ, ಅವರೊಳಗಿನ ವಿಚಾರಗಳ ಕುರಿತಂತೆ ಭಿನ್ನಮತವನ್ನು ಹೊಂದಿಯೇ ಇದ್ದಾರೆ. ಇದು ಕನ್ನಡ ಸಾಹಿತ್ಯ ಲೋಕಕ್ಕೇ ಗೊತ್ತಿರುವುದು. ಅನಂತಮೂರ್ತಿಯನ್ನು ಸಂಪೂರ್ಣ ಒಪ್ಪಿಕೊಳ್ಳುವುದು ಕಷ್ಟ. ಹಾಗೆಯೇ ಅನಂತಮೂರ್ತಿಯವರನ್ನು ತಿರಸ್ಕರಿಸುವುದು ಅದಕ್ಕಿಂತ ಹೆಚ್ಚು ಕಷ್ಟ. ಸದ್ಯದ ಸಂದರ್ಭದಲ್ಲಿ ಅನಂತಮೂರ್ತಿ ತನ್ನ ಅನಿಸಿಕೆಗಳನ್ನು ಹೇಳಲು, ಒಬ್ಬಂಟಿಯಾಗಲು ಯಾವ ರೀತಿಯಲ್ಲೂ ಅಂಜಿಕೆ ವ್ಯಕ್ತಪಡಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ದರ್ಪಗಳನ್ನು ಅಷ್ಟೇ ತೀವ್ರವಾಗಿ ಪ್ರತಿರೋಧಿಸಿದವರು ಅನಂತಮೂರ್ತಿ. ಕುಂವೀ ಅವರು ಹೇಳಿದಂತೆಯೇ ಈ ಇಳಿವಯಸ್ಸಿನಲ್ಲೂ ಅನಂತಮೂರ್ತಿಯವರಲ್ಲಿ ಆನೆಯ ಶಕ್ತಿಯಿದೆ. ಬಹುಶಃ ಅದು ಹೊರಗಿನಿಂದ ಬಂದಿರುವುದಲ್ಲ, ಒಳಗಿನಿಂದ ಬಂದಿರುವುದು ಎಂದು ನನಗೆ ಅನ್ನಿಸುತ್ತದೆ. ಈ ಹೊತ್ತಿನಲ್ಲೂ ಅವರು ನಳನಳಿಸುವ ಆರೋಗ್ಯದಿಂದಿದ್ದರೆ ಅದಕ್ಕೂ ಅದೇ ಕಾರಣ. ತಾನು ನಂಬಿದ್ದನ್ನು ಅವರು ಹೇಳುತ್ತಾರೆ. ಹೀಗಿರುವಾಗ, ಅನಂತಮೂರ್ತಿಯವರ ಯಾವುದಾದರೂ ವಿಚಾರಗಳನ್ನು ಖಂಡಿಸಿ ಕುಂವೀ ಏರು ಧ್ವನಿಯಲ್ಲಿ ಮಾತನಾಡಿದ್ದರೆ ಅದು ಕುಂವೀ ವ್ಯಕ್ತಿತ್ವಕ್ಕೆ ಒಪ್ಪುವಂತಿರುತ್ತಿತ್ತು. ಅನಂತಮೂರ್ತಿಯವರೂ ಆ ಚರ್ಚೆಯಲ್ಲಿ, ಜಗಳದಲ್ಲಿ ಭಾಗಿಯಾಗುತ್ತಿದ್ದರೋ ಏನೋ. ಆದರೆ ನಾಡಿನ ಯಾವೊಂದು ಸಂಕಟದ ಸಂದರ್ಭದಲ್ಲೂ ಮಾತನಾಡದ ಕುಂವೀ ಇದೀಗ ಎಂದೋ ಸಿಕ್ಕಿದ ಜ್ಞಾನಪೀಠವನ್ನು ಹಿಡಿದುಕೊಂಡು ಒಬ್ಬ ಹಿರಿಯ ಸಾಹಿತಿಯ ಮೈಮೇಲೆ ಬೀಳುವುದು ಕ್ರೌರ್ಯವಾಗಿ ಬಿಡುತ್ತದೆ.
ಇಷ್ಟಕ್ಕೂ ಅನಂತಮೂರ್ತಿ, ಕಾರ್ನಾಡ್ ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ಅನಂತಮೂರ್ತಿ ಸಂಸ್ಕಾರ, ಭಾರತೀಪುರಗಳಂತಹ ಕಾದಂಬರಿಗಳ ಜೊತೆ ಜೊತೆಗೇ ವೈಚಾರಿಕ ಚಿಂತನೆಗಳಿಗೆ ರಾಷ್ಟ್ರಮಟ್ಟದಲ್ಲಿ ಹೊಸ ದಿಕ್ಕನ್ನು ಕೊಟ್ಟವರು. ಚರ್ಚೆಗಳನ್ನು ಹುಟ್ಟಿಸಿ ಹಾಕಿದವರು. ಇದನ್ನೆಲ್ಲ ನಾವು ಮರೆಯುವುದಕ್ಕಾಗುವುದಿಲ್ಲ. ಕೆಲವೊಮ್ಮೆ ಅವರ ವಿಚಾರಗಳು ನಮ್ಮನ್ನು ಏಕಾಏಕಿ ಗೊಂದಲಗೊಳಿಸುತ್ತವೆ ಎನ್ನುವುದೂ ಅಷ್ಟೇ ಸತ್ಯ. ಆ ಕಾರಣಕ್ಕಾಗಿಯೇ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ ಮತ್ತು ಎದುರಿಸುತ್ತಲೇ ಇದ್ದಾರೆ. ಗಿರೀಶ್ ಕಾರ್ನಾಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಟಕ ಮಾತ್ರವಲ್ಲ, ಸಿನಿಮಾ, ವಿಚಾರಗಳಿಗಾಗಿ ಗುರುತಿಸಿದ ‘ಪ್ರತಿಷ್ಠಿತ’ ಜಾಣ, ಬುದ್ಧಿವಂತ ಲೇಖಕ. ಪ್ರತಿಷ್ಠಿತ ಎನ್ನುವುದನ್ನು ನಾನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ. ಯಾಕೆಂದರೆ, ಕರ್ನಾಟಕ ವೈವಿಧ್ಯಮಯ ಲೇಖಕರನ್ನು ಹೊಂದಿದೆ. ಲಂಕೇಶ್ ಅವರಿಗೆ ಲಂಕೇಶ್ ಸಾಟಿ. ಅಂತೆಯೇ ಅನಂತಮೂರ್ತಿ ಲಂಕೇಶರಿಗೆ ಸಮಾಂತರವಾಗಿರುವ ನದಿಯ ಇನ್ನೊಂದು ಪಾತ್ರ. ಹಾಗೆಯೇ ಕಾರ್ನಾಡ್ ಕೂಡ. ಈ ವೈವಿಧ್ಯತೆ ನಮ್ಮ ನಾಡಿಗೆ, ನಮ್ಮ ಸಾಹಿತ್ಯಕ್ಕೆ ಬೇಕು. ಕಾರ್ನಾಡ್ ಆ ವೈವಿಧ್ಯತೆಯ ಭಾಗ. ಸಿನಿಮಾ ನಿರ್ದೇಶಕರಾಗಿ, ನಟರಾಗಿ ಅವರು ಸಾಧಿಸಿದ ಸಾಧನೆ ವಿಶಿಷ್ಟ್ನವಾದುದು. ಅಂತಾರಾಷ್ಟ್ರೀಯ ವರ್ಚಸ್ಸಿರುವ ಲೇಖಕ ಅವರು. ಜ್ಞಾನಪೀಠಕ್ಕೆ ಮುನ್ನವೇ ಅವರು ತಮ್ಮ ಕ್ಷೇತ್ರದಲ್ಲಿ ಮಿಂಚಿದವರು. ಆನಂತರ ಅವರಿಗೆ ಜ್ಞಾನಪೀಠ ಸಿಕ್ಕಿತು. ಲಾಬಿಯಿಂದಲೇ ಸಿಕ್ಕಿತು ಎಂದೇ ಇಟ್ಟುಕೊಳ್ಳೋಣ. ಅರೆ! ರಾಷ್ಟ್ರಮಟ್ಟದಲ್ಲಿ ಅದೆಷ್ಟೋ ಹಿರಿಯ, ವರ್ಚಸ್ಸುಳ್ಳ ಸಾಹಿತಿಗಳ ನಡುವೆ ನಮ್ಮ ಸಾಹಿತಿಗಳು ಲಾಬಿ ಮಾಡಬಲ್ಲರು ಎನ್ನುವುದು ಸಣ್ಣ ವಿಷಯವೇನೂ ಅಲ್ಲ. ಇಂದು ಕನ್ನಡ ಶಾಸ್ತ್ರೀಯ ಭಾಷೆಯಾಗಬೇಕು ಎನ್ನುವಾಗ ಮೇಲಿನ ಎಲ್ಲಾ ಜ್ಞಾನಪೀಠರ ಪಟ್ಟಿಯನ್ನೂ ಕೇಂದ್ರದ ಮುಂದೆ ಪ್ರದರ್ಶಿಸಿತು. ಹಲವು ಅಂಶಗಳನ್ನು ಮುಂದಿಟ್ಟುಕೊಂಡು ಸರಕಾರ ಲಾಬಿ ಮಾಡಿತು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಾಹಿತ್ಯ, ಕಲೆ, ಭಾಷೆಗಳಿಗಾಗಿ ಲಾಬಿ ಮಾಡುವವರಿದ್ದರೆ ಅದೂ ನಮ್ಮ ಹೆಗ್ಗಳಿಕೆಯೇ ಸರಿ.
  ಕುಂವೀ ಅವರ ಮೂರನೆಯ ಅಸಮಾಧಾನ, ಶಾಲಾ ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ಬರೇ ಈ ಎಂಟು ಲೇಖಕರ ಫೋಟೋಗಳನ್ನು ತೂಗು ಹಾಕುವುದರ ಬಗ್ಗೆ. ಈ ಕಚೇರಿಗಳಲ್ಲಿ, ಶಾಲೆಗಳಲ್ಲಿ, ಬಸ್‌ಗಳಲ್ಲಿ ಫೋಟೋಗಳನ್ನು ತೂಗು ಹಾಕುವುದೇ ನನ್ನ ದಷ್ಟಿಯಲ್ಲಿ ಮಹಾಪರಾಧ. ಈ ಫೋಟೋಗಳು ನಿಧಾನಕ್ಕೆ ಒಂದು ಅಭಿಪ್ರಾಯವನ್ನ್ನು ರೂಪುಗೊಳಿಸುತ್ತವೆ. ಕುಂವೀ ಹೇಳಿದ ಮಾತಿನಲ್ಲಿ ಸತ್ಯವಿದೆ. ಆದರೆ ಈಗ ಇರುವ ಎಂಟು ಫೋಟೋಗಳು ಕನ್ನಡ ಸಾಹಿತ್ಯದ ಹರಿವನ್ನು ಪ್ರಾತಿನಿಧಿಕವಾಗಿ ತೋರಿಸುತ್ತವೆ ಎನ್ನುವುದನ್ನು ಮರೆಯಬಾರದು. ನವೋದಯವನ್ನು ಪ್ರತಿನಿಧಿಸಿ ಕುವೆಂಪು ಇದ್ದಾರೆ. ಆ ಬಳಿಕದ ದಿನಗಳನ್ನು ಸ್ಮರಿಸಲು ಮಾಸ್ತಿ, ಬೇಂದ್ರೆ, ಗೋಕಾಕ್‌ನಂಥವರೂ ಇದ್ದಾರೆ. ಹಾಗೆಯೇ ಆಧುನಿಕ ಕಾಲಘಟ್ಟವನ್ನು ಸ್ಮರಿಸಲು ಅನಂತಮೂರ್ತಿ, ಕಾರ್ನಾಡ್ ಇದ್ದಾರೆ. ಆದರೂ ಮಕ್ಕಳ ಮನಸ್ಸಿನಲ್ಲಿ ಈ ಸಾಹಿತಿಗಳ ಕುರಿತಂತೆ ಪೂರ್ವಾಗ್ರಹವನ್ನು ಈ ಫೋಟೋಗಳು ಬಿತ್ತಬಹುದು. ಈ ಲೇಖಕರಷ್ಟೇ ಕನ್ನಡದ ಅಧಿಪತಿಗಳು ಎಂದು ಅವರನ್ನು ತಪ್ಪು ದಾರಿಯೆಡೆಗೆ ಕೊಂಡೊಯ್ಯಬಹುದು ಎಂದು ಕುಂವೀ ಭಾವಿಸುತ್ತಾರೆ. ಆ ಕಾರಣಕ್ಕೆ ಈ ಎಲ್ಲ ಫೋಟೋಗಳನ್ನು ತೆಗೆಯಬೇಕು ಎಂದು ಕುಂವೀ ಹೇಳಿದರೆ ಅದನ್ನು ನಾನು ಬೆಂಬಲಿಸುತ್ತೇನೆ. ಆದರೆ ಕುಂವೀ ಅವರಿಗೆ ಗೊತ್ತೇ ಇರುವ ಒಂದು ಸಂಗತಿ ಇಂದು ಶಾಲೆಯ ಒಳಗೆ ಮತ್ತು ಶಾಲೆಯ ಅಂಗಳಗಳಲ್ಲಿ ನಡೆಯುತ್ತಿದೆ. ಅದೇನೆಂದರೆ ಕೆಲವು ರಾಜಕೀಯ ಅಜೆಂಡಾಗಳು ತಮ್ಮ ತಮ್ಮ ವಿಚಾರಧಾರೆಗಳನ್ನು ತುರುಕಲು ಯತ್ನಿಸುತ್ತಿರುವುದು. ಈ ಎಂಟು ಫೋಟೋಗಳನ್ನು ಕಿತ್ತೊಗೆಯೋದು ಸುಲಭ. ಆದರೆ ನಾಳೆ ಈ ಎಂಟು ಫೋಟೋಗಳಿರುವ ಜಾಗದಲ್ಲಿ ಯಾವ ಫೋಟೋಗಳು ಬಂದು ಕುಳಿತುಕೊಳ್ಳುತ್ತವೆ ಎನ್ನುವುದರ ಕುರಿತಂತೆ ಕುಂವೀ ಅವರಿಗೆ ಅರಿವಿದೆಯೆ? ಅಥವಾ ಈ ಎಂಟು ಫೋಟೋಗಳ ಮಧ್ಯೆ ಇನ್ನಷ್ಟು ಫೋಟೋಗಳು ಬಂದು ಕೂರಬೇಕು ಎಂದೇ ಇಟ್ಟುಕೊಳ್ಳೋಣ. ಆಗ ನನ್ನ ಅಥವಾ ಕುಂವೀ ಮನದಲ್ಲಿರುವ ಫೋಟೋಗಳೇ ಬೇರೆಯಾಗಿರುತ್ತವೆ. ಉದಾಹರಣೆಗೆ ಅಲ್ಲಿ ಇನ್ನಷ್ಟು ಪೋಟೋಗಳು ಎಂದಾಗ ನನಗೆ ದೇವನೂರು, ಕುಂವೀ, ನಿಸಾರ್ ಅಹಮದ್, ಕಣವಿ, ಜಿಎಸ್‌ಎಸ್, ಬೊಳುವಾರು, ಸಾರಾ ಅಬೂಬಕರ್ ಮೊದಲಾದವರ ಚಿತ್ರಗಳು ಕಣ್ಣಲ್ಲಿ ಮೂಡುತ್ತವೆ. ಆದರೆ ಇಂದು ಶಾಲೆಗಳಲ್ಲಿರುವ ಶಿಕ್ಷಕರು ಎಂತೆಂತಹ ಕೊಳೆದ ರಾಜಕೀಯ ಅಜೆಂಡಾಗಳನ್ನು ಹೊತ್ತವರಿದ್ದಾರೆ ಎನ್ನುವುದನ್ನು ನಾನಿಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಇನ್ನಷ್ಟು ಫೋಟೋಗಳು ಇಡಬೇಕೆಂದಾಗ, ಆ ಸಾಲಿನಲ್ಲಿ ಮೊತ್ತ ಮೊದಲಾಗಿ ಬಂದು ವಕ್ಕರಿಸುವುದು ಆವರಣ, ಕವಲುವಿನಂತಹ ಮನುಷ್ಯ ವಿರೋಧಿ ಬರಹಗಳನ್ನು ಬರೆದ ಭೈರಪ್ಪರ ಫೋಟೋ. ಬಳಿಕ, ಹೊ.ವೆ. ಶೇಷಾದ್ರಿ, ಗೊಳ್ವಾಳ್ಕರ್, ವೀರಸಾವರ್ಕರ್ ಬಂದು ಕೂತರೂ ಅದರಲ್ಲಿ ಅಚ್ಚರಿಯಿಲ್ಲ.
ವಿವೇಕಾನಂದರನ್ನು ಕಲಿಸುವ ನೆಪದಲ್ಲಿ ಮನುಶಾಸ್ತ್ರದ ಪಾಠಗಳನ್ನು ಇಂದು ಶಾಲೆಗಳಲ್ಲಿ ಕಲಿಸುವ ಪ್ರಯತ್ನ ನಡೆಯುತ್ತಿದೆ. ನಾವಿಂದು ದೊಡ್ಡ ಧ್ವನಿಯಲ್ಲಿ ಒಟ್ಟಾಗಿ ಮಾತನಾಡಬೇಕಾದುದು ಇದರ ಕುರಿತಂತೆ. ಹಾಗೆಯೇ ಈ ಎಂಟು ಫೋಟೋಗಳನ್ನು ತೆಗೆಯುವುದೇನೋ ಸರಿ.. ಹಾಗೆಯೇ ಆ ಜಾಗದಲ್ಲಿ ಇನ್ನಾವ ಫೋಟೋಗಳೂ ಬಂದು ಕೂರದ ಹಾಗೆಯೂ ನಾವು ಜಾಗರೂಕತೆ ವಹಿಸಬೇಕಾಗುತ್ತದೆ. ಯಾಕೆಂದರೆ ಎಲ್ಲಿ ಜಾಗ ಖಾಲಿ ಇದೆಯೋ ಅಲ್ಲಿ ಮನು ವಾದಿಗಳು ತಮ್ಮದನ್ನು ತುರುಕಲು ತುದಿಗಾಲಿನಲ್ಲಿ ನಿಂತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಮತ್ತೆ ಅವರ ಕೈವಶವಾಗಬಾರದು. ಆದುದರಿಂದ ಆ ಫೋಟೋಗಳನ್ನು ಕಿತ್ತು ಹಾಕುವುದರ ಜೊತೆ ಜೊತೆಗೇ ಆ ಜಾಗದಲ್ಲಿ ಬರೇ ಗಾಂಧಿ ಮತ್ತು ಅಂಬೇಡ್ಕರ್ ಅವರ ಫೋಟೋವನ್ನಷ್ಟೇ ಪ್ರತಿಷ್ಠಾಪಿಸಬೇಕು. ಹೀಗೆ ಒತ್ತಾಯಿಸುವ ದಿಟ್ಟತನ ಕುಂವೀ ಅವರಲ್ಲಿ ಇರಬೇಕಾಗಿತ್ತು ಎನ್ನೋದು ನನ್ನಂಥಹ ಕೆಲವರ ಆಶಯ.
   ಇದು ಇಲ್ಲಿಗೆ ಮುಗಿಯಬೇಕಾಗಿಲ್ಲ. ಕನ್ನಡ ರಾಜ್ಯೋತ್ಸವದಂತಹ ನಾಡಹಬ್ಬಗಳಲ್ಲಿ ಹೇಗೆ ವೈದಿಕ ಸಂಕೇತಗಳು ತುರುಕಲ್ಪಟ್ಟಿವೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ನಾಡಿನ ರೂಪಕವಾಗಿ ಸರಕಾರಿ ಶಾಲೆಗಳಲ್ಲಿ ದುರ್ಗೆಯ, ಚಾಮುಂಡೇಶ್ವರಿಯ ಪೋಟೋಗಳನ್ನಿಟ್ಟು, ಅದರ ಮುಂದೆ ಬ್ರಾಹ್ಮಣರ ಕೈಯಿಂದ ತೆಂಗಿನಕಾಯಿ ಒಡೆಸುವ, ಮಂಗಳಾರತಿ ಎತ್ತುವ ಕಾರ್ಯಕ್ರಮಗಳೂ ಜರಗುತ್ತಿವೆ. ರಾಷ್ಟ್ರೀಯ ಸಂಕೇತಗಳ ಬದಲಾಗಿ, ಅಲ್ಲಿ ವೈದಿಕ ಸಂಕೇತಗಳನ್ನು ತುರುಕುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿವೆ. ಶಾಲೆಯೆನ್ನುವುದು ಎಲ್ಲ ಜಾತಿ ಧರ್ಮಗಳು ಒಟ್ಟು ಸೇರುವ ಬಯಲು. ಅಲ್ಲಿ ಇಂತಹ ಸಂಕೇತಗಳನ್ನು, ಫೋಟೋಗಳನ್ನು ತಂದಿಟ್ಟು ಕೆಲವರನ್ನು ಅನ್ಯರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಶಾಲೆಗಳಲ್ಲಿ ನಡೆಯುತ್ತಿರುವ ಇಂತಹ ಗಂಭೀರ ಪ್ರಮಾದಗಳನ್ನು ಬದಿಗಿಟ್ಟು ಬರೇ ಎಂಟು ಫೋಟೋಗಳು ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಬಹುದು ಎಂಬ ರೀತಿಯಲ್ಲಿ ಕುಂವೀ ಆತಂಕ ವ್ಯಕ್ತಪಡಿಸುವುದು ನಿಜಕ್ಕೂ ಅಚ್ಚರಿಯೇ ಸರಿ.
ಅಷ್ಟೇ ಅಲ್ಲ, ಬೆಂಗಳೂರಿನ ಹೆಚ್ಚಿನ ಸರಕಾರಿ ಕಚೇರಿಗಳನ್ನೊಮ್ಮೆ ಕುಂವೀ ಅವರು ಕಣ್ಣು ಬಿಟ್ಟು ನೋಡಲಿ. ಅಲ್ಲಿ ಪ್ರತಿಷ್ಠಾಪನೆಗೊಂಡಿರುವ ವೈದಿಕ ದೇವರ ಫೋಟೋಗಳು ಏನನ್ನು ಪ್ರತಿಪಾದಿಸುತ್ತವೆ? ಸಂವಿಧಾನವೇ ದೇವರು ಎಂದು ತಿಳಿದುಕೊಂಡ ಕಚೇರಿಗಳಲ್ಲಿ ಪ್ರತಿವಾರ ಪೂಜೆಗಳು, ಹೋಮ ಹವನಗಳು ನಡೆಯುತ್ತವೆ. ತಮ್ಮ ಕೆಲಸದ ಅವಧಿಯಲ್ಲಿ ಗಂಟೆ ಬಾರಿಸಿ, ಪ್ರಸಾದ ಹಂಚುತ್ತಿರುತ್ತಾರೆ. ಇಂದು ನಾವು ಆದ್ಯತೆಯಿಂದ ಮಾತನಾಡಬೇಕಾದುದು ಇವುಗಳ ಕುರಿತಂತೆ. ಆ ಫೋಟೋಗಳನ್ನು ಕಿತ್ತೆಸೆದು ಅಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಫೋಟೋಗಳನ್ನು ಪ್ರತಿಷ್ಠಾಪಿಸುವ ಕಡೆಗೆ ನಾವು ಹೊರಳಬೇಕು. ಇದು ಸಾಧ್ಯವಾಗಬಹುದೆ?
  ಕುಂವೀ ಮಾತುಗಳು ಸಂಘಪರಿವಾರಕ್ಕೆ ಯಾಕೆ ಇಷ್ಟವಾಗುತ್ತದೆ ಎಂದರೆ, ಕುಂವೀ ಅವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಸಂಘಪರಿವಾರಕ್ಕೆ ಲಾಭವಾಗುವ ಕೆಲವು ಮಾರ್ಗಗಳನ್ನು ತೆರೆದಿಟ್ಟಿದ್ದಾರೆ. ಮುಖ್ಯವಾಗಿ ಜ್ಞಾನಪೀಠಿಗಳ ಸಾಲಿನಲ್ಲಿ ಆವರಣ, ಕವಲು ಎಂಬಂತಹ ಆರೆಸ್ಸೆಸ್‌ನ ಅಜೆಂಡಾಗಳನ್ನೇ ಕಾದಂಬರಿ ರೂಪದಲ್ಲಿ ಬರೆದ ಭೈರಪ್ಪನ್ನು ಪ್ರತಿಷ್ಠಾಪಿಸುವುದಕ್ಕೆ ಸಾಧ್ಯವಾಗುತ್ತದೆ. ಈಗಾಗಲೇ ಕೆಲವು ಪತ್ರಿಕೆಗಳು ಜ್ಞಾನಪೀಠಕ್ಕೆ ಪರ್ಯಾಯವಾಗಿ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಮುಂದೆ ತರಲು ಕಾರ್ಯಯೋಜನೆಯನ್ನು ಹಾಕಿಕೊಂಡಿವೆ. ಸಾಹಿತ್ಯದಲ್ಲಿ ಬಲಪಂಥೀಯ, ಎಡಪಂಥೀಯ ಎನ್ನುವುದು ಇರಬಾರದು ನಿಜ. ಆದರೆ ಮನುಷ್ಯ ಪರ, ಮನುಷ್ಯ ವಿರೋಧಿ ಎನ್ನುವುದು ಸದ್ಯಕ್ಕೆ ಇಲ್ಲ ಎನ್ನಲು ಸಾಧ್ಯವೆ? ಆವರಣ ಒಂದು ಸಮುದಾಯದ ಕುರಿತಂತೆ ವ್ಯಕ್ತಪಡಿಸುವ ಹಸಿ ಹಸಿ ದ್ವೇಷ, ಹಾಗೆಯೇ ಕವಲು ಕಾದಂಬರಿ ಹೆಣ್ಣಿನ ಕುರಿತಂತೆ ತಳೆದ ತಾತ್ಸಾರವನ್ನು ಇಲ್ಲ ಎಂದು ಅಲ್ಲಗಳೆಯಲು ಸಾಧ್ಯವೆ? ಇಂದು ಜ್ಞಾನಪೀಠವನ್ನು ನಾನು ಇಷ್ಟಪಡುವುದಕ್ಕೆ ಒಂದು ಬಲವಾದ ಕಾರಣ, ಅದು ಭೈರಪ್ಪರಿಗೆ ಸಿಕ್ಕಿಲ್ಲ ಎನ್ನುವುದು. ಪರ್ವ, ಗಹಭಂಗ ಬರೆದ ಭೈರಪ್ಪರನ್ನು ಇಷ್ಟಪಡುತ್ತಲೇ ಅವರಿಗೆ ಜ್ಞಾನಪೀಠ ದೊರಕಬಾರದು ಎಂದು ಬಯಸುತ್ತೇನೆ. ಯಾಕೆಂದರೆ ಹಾಗೆ ದೊರಕಿದ್ದೇ ಆದಲ್ಲಿ, ಅವರ ಆವರಣ, ಕವಲು ಮೊದಲಾದ ಕತಿಗಳೂ ಸಮರ್ಥಿಸಲ್ಪಡುತ್ತವೆ. ಅದು ಮುಂದಿನ ಸಾಹಿತ್ಯದ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಸಾಧ್ಯತೆಯಿದೆ. ಈ ಎಲ್ಲ ಹಿನ್ನೆಲೆಗಳಿಂದಲೇ, ಇಂತಹ ಒಳ ರಾಜಕಾರಣಕ್ಕೆ ಕುಂವೀ ಮಾತುಗಳು ಬಲಿಯಾಗಬಾರದು ಎಂದು ನಾನು ಅವರ ಹೇಳಿಕೆಗಳನ್ನು ಬಲವಾಗಿ ಖಂಡಿಸಿದ್ದೇನೆ. ಈಗಲೂ ಖಂಡಿಸುತ್ತೇನೆ.

2 comments:

  1. ನಿಮ್ಮ ಲೇಖನದಲ್ಲಿನ ಒಂದೆರೆಡು ವಿಷಯಗಳ ಬಗ್ಗೆ --
    ೧. (ಜ್ಞಾನಪೀಠಕ್ಕೆ ಪರ್ಯಾಯವಾಗಿ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಮುಂದೆ ತರಲು ಕೆಲವು ಪತ್ರಿಕೆಗಳು ಕಾರ್ಯಯೋಜನೆ ಹಾಕಿಕೊಂಡಿವೆ) --ಈ ಎರಡೂ ಪ್ರಶಸ್ತಿಗಳನ್ನು ಕೊಡುತ್ತಿರುವವರು ಖಾಸಗಿ ಸಂಸ್ಥೆ/ಟ್ರಸ್ಟ್ ನವರು . ಸರ್ಕಾರದ್ದಾದರೆ ಒಂದರ ಬದಲು ಮತ್ತೊಂದನ್ನು ಮೇಲೆ ತಂದು ಕೂರಿಸಲು ಹುನ್ನಾರಗಳು, ರಾಜಕೀಯ ಒತ್ತಡಗಳು ನಡೆಯಬಹುದೇನೋ? ಖಾಸಗಿಯವರಿಗೆ ಅಂತಹ ದರ್ದುಗಳಿವೆಯೇ? ಅಥವಾ ಭೈರಪ್ಪನವರು ಬಲಪಂಥೀಯರು, ಸಂಘಪರಿವಾರದ ಮನೋಭಾವನೆ ಇರುವವರು ಎಂಬ ಭಾವನೆ ಇರುವುದರಿಂದ ಇಲ್ಲಿ "ಮೋದಿ ಫ್ಯಾಕ್ಟರ್" ಏನಾದರೂ ಕೆಲಸ ಮಾಡಿರಬಹುದೇ? ಎಷ್ಟೆಂದರೂ ಪತ್ರಿಕೆಗಳು ಖಾಸಗಿಯವರದ್ದು/ಬಂಡವಾಳಶಾಹಿಗಳದ್ದು ಅಲ್ಲವೇ?
    ೨. ಇದುವರೆಗೆ ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿಲ್ಲ. ಮುಂದೆ ಬರುತ್ತದೋ ಇಲ್ಲವೋ ಗೊತ್ತಿಲ್ಲ. ತಮ್ಮ ಲೇಖನದ "ಧ್ವನಿ"ಯ ಪ್ರಕಾರ (ಪರ್ವ ಮತ್ತು ಗೃಹಭಂಗ ಬಿಟ್ಟು) ಅವರ ಇತರೆ ಪ್ರತಿಗಾಮಿ/ಮಾನವ ವಿರೋಧಿ ಕೃತಿಗಳು ಈಗಾಗಲೇ ತಮ್ಮ effect ಮಾಡಿದ್ದಾಗಿದೆ. ಜ್ಞಾನಪೀಠ ಬಂದರೆ ಮುಂದಿನ ಸಾಹಿತ್ಯದ ವಿಧ್ಯಾರ್ಥಿಗಳು ಯಾವ ರೀತಿ ದಾರಿ ತಪ್ಪುತ್ತಾರೆ?
    -ಮು ಅ ಶ್ರೀರಂಗ ಬೆಂಗಳೂರು

    ReplyDelete
  2. ಬಷೀರ್ ಅವರೇ ನಿಮ್ಮ ವಿಚಾರಗಳನ್ನು ಒಪ್ಪತಕ್ಕದ್ದೇ ಆದರೆ ನಿಮ್ಮ ಎಲ್ಲಾ ಲೇಖನಗಳಲ್ಲೂ ಅನಾವಶ್ಯಕವಾಗಿ ಸಂಘ ಪರಿವಾರವನ್ನು ಮತ್ತು ಪರೋಕ್ಷವಾಗಿ ಹಿಂದೂ ಧರ್ಮವನ್ನು ಅದೇಕೆ ಟೀಕಿಸುತ್ತೀರೋ ಅರ್ಥವಾಗುತ್ತಿಲ್ಲ. ಸರ್ಕಾರಿ ಕಛೇರಿಗಳಲ್ಲಿ ದೇವರ ಫೋಟೋಕ್ಕೆ ಪೂಜೆ ಮಾಡಿ ಪ್ರಸಾದ ಹಂಚುವುದು ತಪ್ಪೆಂದಾದರೆ, ಶುಕ್ರವಾರದ ನಮಾಜಿಗೆ ಹೋಗುವ ಮುಸಲ್ಮಾನ ಬಂಧುಗಳ ಬಗೆಗೇಕೆ ಅಕ್ಷೇಪಣೆಯನ್ನು ಹೇಳುವ ಧೈರ್ಯ ನಿಮಗಿಲ್ಲ? ಶಾದಿ ಭಾಗ್ಯದಂತಹ ಮುಸ್ಲಮರಿಗೇ ಪ್ರತ್ಯೇಕವಾಗಿ ಇರುವ ಸರ್ಕಾರದ ಸವಲತ್ತುಗಳ ಬಗೆಗೆ ನೀವೇಕೆ ಅಕ್ಷೇಪಣೆ ಎತ್ತುವುದಿಲ್ಲ? ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ ನಿಜವಾದ ಮಾನವತಾವಾದಿಗಳೇ!

    ReplyDelete