Thursday, February 27, 2014

ಜೈ ಹಿಂದ್ ಘೋಷಣೆಯ ಹಿಂದಿರುವ ಜೈನುಲ್ ಆಬಿದೀನ್

 

 ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ಬಳಿಕವೂ ಸ್ವಾತಂತ್ರ ಚಳವಳಿಯಲ್ಲಿ ಬಳಸಲಾದ ಘೋಷಣೆಗಳು ಇಂದಿಗೂ ವಿವಿಧ ರಾಜಕೀಯ ರೂಪಗಳಲ್ಲಿ ವರ್ತಮಾನವನ್ನು ಕಾಡುತ್ತಲೇ ಬರುತ್ತಿದೆ. ಅವು ಈ ದೇಶವನ್ನು ಒಂದಾಗಿಸುವುದಕ್ಕೆ ಸ್ಫೂರ್ತಿಯಾಗಬೇಕಾಗಿತ್ತು. ದುರದೃಷ್ಟವಶಾತ್ ರಾಜಕೀಯ ಶಕ್ತಿಗಳು ಅವುಗಳನ್ನು ತಮ್ಮ ಸ್ವಾರ್ಥ ಉದ್ದೇಶಕ್ಕೆ ಬಳಸಿಕೊಳ್ಳುತ್ತಿವೆ. ‘ವಂದೇ ಮಾತರಂ’ ಘೋಷಣೆಯನ್ನು ಆರೆಸ್ಸೆಸ್ ಜನರು ಅದು ಹೇಗೆ ವಿರೂಪಗೊಳಿಸಿದರು ಎನ್ನುವುದನ್ನು ನಾವು ನೋಡಿದ್ದೇವೆ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಎಲ್ಲರನ್ನು ಒಗ್ಗೂಡಿಸಲು ಬಳಸಲಾಗಿದ್ದ ವಂದೇಮಾತರಂ ಘೋಷಣೆಯನ್ನು ಇಂದು ಕೆಲವು ಶಕ್ತಿಗಳು ಹಿಂದೂ-ಮುಸ್ಲಿಮರನ್ನು ಒಡೆಯಲು ಬಳಸುತ್ತಿದ್ದಾರೆ. ಬಂಕಿಮಚಂದ್ರ ಚಟರ್ಜಿ ತನ್ನ ಆನಂದ ಮಠ ಕಾದಂಬರಿಯಲ್ಲಿ ‘ವಂದೇಮಾತರಂ’ ಹಾಡನ್ನು ಬಳಸಿದ್ದರು. ಅದರಲ್ಲಿ ಮ್ಲೇಚ್ಛರನ್ನು ಅಥವಾ ಮುಸ್ಲಿಮರನ್ನು ಕೊಂದು ಹಾಕಲು ಆನಂದ ಮಠದ ಉಗ್ರವಾದಿ ಸನ್ಯಾಸಿಗಳು ಈ ಹಾಡನ್ನು ಬಳಸುತ್ತಾರೆ. ಇದೊಂದು ದುರ್ಗೆಯ ಆರಾಧನೆಯೂ ಆಗಿದೆ. ಆದರೆ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ‘ವಂದೇ ಮಾತರಂ’ ಘೋಷಣೆ ಬೇರೆ ಅರ್ಥದಲ್ಲಿ ಬಳಸಲ್ಪಟ್ಟಿತು.

ಅಂತೆಯೇ ‘ಅಲ್ಲಾಹು ಅಕ್ಬರ್’ ಎನ್ನುವ ಘೋಷಣೆ ಮುಸ್ಲಿಮರಿಗೆ ಸೀಮಿತವಾದುದೇನೋ ಹೌದು. ಆದರೆ ಖಿಲಾಫತ್‌ಚಳವಳಿ ಮತ್ತು ಇನ್ನಿತರ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಈ ‘ಅಲ್ಲಾಹು ಅಕ್ಬರ್’ ಎನ್ನುವ ಘೋಷಣೆಯ ಜೊತೆ ಜೊತೆಗೇ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಮದ್ರಸದ ಉಲೇಮಾಗಳೂ ಈ ‘ಅಲ್ಲಾಹು ಅಕ್ಬರ್’ ಅಂದರೆ ‘ದೇವರಷ್ಟೇ ದೊಡ್ಡವನು’ ಎನ್ನುವ ಘೋಷಣೆಯನ್ನು ಬಳಸಿಕೊಂಡು ಬ್ರಿಟಿಷರ ವಿರುದ್ಧ ನಿಂತರು.
‘ಇಂಕ್ವಿಲಾಬ್ ಜಿಂದಾಬಾದ್’ ಭಗತ್ ಸಿಂಗ್ ಸಮಕಾಲೀನರು ಉದ್ಗರಿಸಿದ ಘೋಷಣೆ. ಆದರೆ ಇಂದು ಈ ಘೋಷಣೆ ಕೇವಲ ಕಮ್ಯುನಿಷ್ಟರಿಗೆ ಸೀಮಿತಗೊಂಡಿದೆ. ಕ್ರಾಂತಿ ಚಿರಾಯುವಾಗಲಿ ಎನ್ನುವುದು ಎಂದೆಂದಿಗೂ, ಎಲ್ಲೆಲ್ಲೂ ಸಲ್ಲಬಹುದಾದ ಘೋಷಣೆಯಾಗಿದೆ. ಆದರೆ ಈ ಘೋಷಣೆಯನ್ನೂ ರಾಜಕೀಕರಣ ಗೊಳಿಸಲಾಗಿರುವುದು ವಿಪರ್ಯಾಸ.

ಅಂತೆಯೇ ನಮ್ಮ ನಡುವೆ ಇನ್ನೊಂದು ಘೋಷಣೆ ಚಿರಸ್ಥಾಯಿಯಾಗಿ ಉಳಿದಿದೆ. ಅದುವೇ ‘ಜೈಹಿಂದ್’. ಈ ಘೋಷಣೆಯನ್ನು ಸ್ಮರಿಸುವಾಗ ನಮ್ಮ ಕಣ್ಮುಂದೆ ನಿಲ್ಲುವವರು ನೇತಾಜಿ ಸುಭಾಶ್ ಚಂದ್ರಭೋಸ್. ಆದರೆ ಈ ಘೋಷಣೆಗೆ ಅತ್ಯಂತ ಕುತೂಹಲಕರವಾದ ಹಿನ್ನೆಲೆಯಿದೆ. ಈ ಹಿನ್ನೆಲೆ ಒಂದು ಕೃತಿಯ ಮೂಲಕ ಹೊರ ಬಿದ್ದಿದೆ. ಆ ಕೃತಿಯ ಹೆಸರು ‘ಲೆಜೆಂಡೋಟ್ಸ್ ಆಫ್ ಹೈದರಾಬಾದ್’. ಹಿರಿಯ ನಿವೃತ್ತ ಐಎಎಸ್ ಅಧಿಕಾರಿಯೂ ಆಗಿರುವ ನರೇಂದ್ರ ಲೂಥೆರ್ ಹೊರ ತಂದಿರುವ ಈ ಕೃತಿ, ಇತಿಹಾಸದ ಧೂಳಿನಲ್ಲಿ ಮುಚ್ಚಿ ಹೋಗಿರುವ ಹತ್ತು ಹಲವು ಕುತೂಹಲಕಾರಿ ಸಂಗತಿಗಳನ್ನು ಹೊರಗೆ ತಂದಿದೆ. ಅವುಗಳಲ್ಲಿ ‘ಜೈ ಹಿಂದ್’ ಘೋಷಣೆಯ ಹಿಂದಿರುವ ಕುತೂಹಲಕಾರಿ ಅಂಶವೂ ಒಂದು.

ಜೈ ಹಿಂದ್ ಘೋಷಣೆಯನ್ನು ತನ್ನ ಹೋರಾಟದ ಪ್ರಧಾನ ಅಸ್ತ್ರವಾಗಿ ಮಾಡಿಕೊಂಡವರು ನೇತಾಜಿ ಸುಭಾಶ್ ಚಂದ್ರಭೋಸ್. ಭಾರತೀಯರಿಗೆ ಭಾರತೀಯ ರೀತಿಯಲ್ಲೇ ಶುಭಾಶಯವನ್ನು ಹೇಳಲು ನೇತಾಜಿ ‘ಜೈಹಿಂದ್’ ಘೋಷಣೆಯನ್ನು ಜರ್ಮನಿಯಲ್ಲಿ ಬಳಸಿಕೊಂಡರು. ಆದರೆ ಅವರಿಗೆ ಈ ಘೋಷಣೆಯ ಸಲಹೆಯನ್ನು ನೀಡಿದ್ದು ಅವರ ಪ್ರೀತಿಯ ಶಿಷ್ಯ, ಐಎನ್‌ಎಯ ಪ್ರಧಾನ ಭಾಗವಾಗಿದ್ದ ಜೈನುಲ್ ಆಬಿದೀನ್ ಹಸನ್ ಅವರು.

ಜೈನುಲ್ ಆಬಿದೀನ್ ಅವರು ನೇತಾಜಿಯನ್ನು ಸೇರಿಕೊಂಡ ಸಂದರ್ಭವೇ ಅವಿಸ್ಮರಣೀಯವಾದುದು. ಜೈನುಲ್ ಆಬಿದೀನ್ ಅವರು ಹೈದರಾಬಾದಿನ ಕಲೆಕ್ಟರ್ ಒಬ್ಬರ ಪುತ್ರ. ಎಂಜಿನಿಯರಿಂಗ್ ಕಲಿಕೆಗಾಗಿ ಜರ್ಮನಿಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ ನೇತಾಜಿ ಸುಭಾಶ್ ಚಂದ್ರ ಭೋಸ್ ಜರ್ಮನಿಯಲ್ಲಿ ಬ್ರಿಟಿಷರ ವಿರುದ್ಧ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು. ಅದಕ್ಕಾಗಿ ಜರ್ಮನಿಯಲ್ಲಿರುವ ಭಾರತೀಯರನ್ನು ಸಂಘಟಿಸುತ್ತಿದ್ದರು. ಹೀಗಿರುವಾಗ, ವಿದ್ಯಾರ್ಥಿಯಾಗಿರುವ ಆಬಿದೀನ್ ಅವರು ಸುಭಾಶ್‌ಚಂದ್ರ ಬೋಸ್ ಅವರಿಂದ ತೀವ್ರ ಪ್ರಭಾವಕ್ಕೊಳಗಾದರು. ಗಡಿಪಾರಿಗೊಳಗಾಗಿರುವ ಭಾರತೀಯ ಕೈದಿಗಳನ್ನು ಸಂಘಟಿಸಿ ನೇತಾಜಿ ಸಭೆ ನಡೆಸುತ್ತಿದ್ದಾಗ ಅದರಲ್ಲಿ ಆಬಿದೀನ್ ಭಾಗವಹಿಸಿದರು. ಅಂದು ಅವರು ನೇತಾಜಿಯವರನ್ನು ಭೇಟಿ ಮಾಡಿದರು ‘‘ನನ್ನ ಕಾಲೇಜು ವಿದ್ಯಾಭ್ಯಾಸ ಮುಗಿದದ್ದೇ, ನಿಮ್ಮ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ’’ ಎಂದು ಆಬಿದೀನ್ ನೇತಾಜಿಯಲ್ಲಿ ಕೇಳಿಕೊಂಡರಂತೆ. ಆದರೆ ನೇತಾಜಿಯವರು ಆಬಿದೀನ್ ಮಾತನ್ನು ಒಪ್ಪಲಿಲ್ಲ ‘‘ಶಾಲೆ, ಕಾಲೇಜು ಎಂದು ಸಣ್ಣ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಂಡರೆ, ದೊಡ್ಡ ವಿಷಯಗಳನ್ನು ಯೋಚಿಸಲೂ ಸಾಧ್ಯವಿಲ್ಲ. ನನ್ನ ಹೋರಾಟಕ್ಕೆ ಕೈಜೋಡಿಸುವ ಬಯಕೆಯಿದ್ದರೆ, ದೇಶಕ್ಕಾಗಿ ಹೋರಾಡುವ ಆಸೆಯಿದ್ದರೆ ಅದು ಈ ಕ್ಷಣದಿಂದಲೇ ಶುರುವಾಗಲಿ’’ ಎಂದು ಕರೆ ನೀಡಿದರು. ಅಷ್ಟೇ. ಆಬಿದೀನ್ ತನ್ನ ಕಾಲೇಜನ್ನು ತ್ಯಜಿಸಿ, ನೇತಾಜಿಯವರ ಸೇನೆಯನ್ನು ಸೇರಿಕೊಂಡರು.

ಅಷ್ಟೇ ಅಲ್ಲ, ನೇತಾಜಿಯವರ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು. ಐಎನ್‌ಎಯಲ್ಲಿ ಅವರು ಮೇಜರ್ ಆಗಿ ದುಡಿದರು. ರಣಭೂಮಿಯಲ್ಲಿ ಹೋರಾಡಿದರು. ತನ್ನ ಸೇನೆಯಲ್ಲಿ ಭಾರತೀಯತೆಯನ್ನು ಉದ್ದೀಪಿಸುವ ಶುಭಾಶಯ ಘೋಷಣೆಯೊಂದು ಇದೇ ಸಂದರ್ಭದಲ್ಲಿ ಸುಭಾಶ್ ಚಂದ್ರ ಭೋಸರಿಗೆ ಬೇಕಾಗಿತ್ತು. ಆಗ ಸೇನೆಯಲ್ಲಿರುವ ಹಲವರು ಹಲವು ಸಲಹೆಗಳನ್ನು ನೀಡಿದರು. ಜೈನುಲ್ ಆಬಿದೀನ್ ಹಸನ್ ಮೊದಲು ‘ಹಲೋ’ ಎನ್ನುವ ಘೋಷಣೆಯ ಸಲಹೆ ನೀಡಿದರು. ಆದರೆ ಅದು ನೇತಾಜಿಗೆ ಸಮ್ಮತವಾಗಲಿಲ್ಲ.

ಇದಾದ ಬಳಿಕ ಆಬಿದೀನ್ ‘ಜೈ ಹಿಂದ್’ ಘೋಷಣೆಯನ್ನು ಪ್ರಸ್ತಾಪ ಮಾಡಿದರು. ಇದು ನೇತಾಜಿಗೆ ಭಾರೀ ಇಷ್ಟವಾಯಿತು. ಮಾತ್ರವಲ್ಲ, ಐಎನ್‌ಎಯ ಸಾಹಸಗಾಥೆಯಲ್ಲಿ ಜೈ ಹಿಂದ್ ಘೋಷಣೆ ಕೊನೆಯವರೆಗೂ ಉಳಿಯಿತು ಮತ್ತು ಇಂದಿಗೂ ಆ ಪದ ಅನುರಣಿಸುತ್ತಲೇ ಇದೆ. ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಐಎನ್‌ಎ ಸೇನೆ ಬರ್ಮಾ ಗಡಿ ದಾಟಿ ಇಂಫಾಲ ತಲುಪುವ ಹೊತ್ತಿನಲ್ಲಿ, ತಂಡದಲ್ಲಿದ್ದ ಜೈನುಲ್ ಆಬಿದೀನ್ ಹಸನ್ ತೀವ್ರಗಾಯಗೊಂಡರು. ಆ ಘರ್ಷಣೆಯಲ್ಲಿ ಅವರು ಅಂಗವಿಕಲರಾದರು.
ಇಂದು ಜೈನುಲ್ ಆಬಿದೀನ್ ಹಸನ್‌ರಂತಹ ನೂರಾರು ಯೋಧರ ‘ಜೈಹಿಂದ್’ ಉದ್ಗಾರಗಳನ್ನು ದೇಶ ಮರೆತು ಬಿಡುತ್ತಿದೆ. ಆ ದೇಶಪ್ರೇಮಿಗಳ ನೆನಪನ್ನು ಅಳಿಸುವ ಪ್ರಜ್ಞಾಪೂರ್ವಕ ಕೆಲಸವೂ ನಡೆಯುತ್ತಿದೆ. ಬದಲಿಗೆ ದೇಶದ ಸ್ವಾತಂತ್ರ್ಯದ ಹೋರಾಟಲ್ಲಿ ಯಾವ ಪಾತ್ರವೂ ಇಲ್ಲದ ಆರೆಸ್ಸೆಸ್‌ನ ನಾಯಕರನ್ನು ಮುನ್ನೆಲೆಗೆ ತರುವ ಕೃತ್ಯ ಜರಗುತ್ತಿದೆ. ಇದು ದೇಶದ ದುರಂತವೇ ಸರಿ.

ಅಂದ ಹಾಗೆ ಪಾಕಿಸ್ತಾನ ರಚನೆಯಾಗುವ ಸಂದರ್ಭದಲ್ಲೂ ಆಳದಲ್ಲಿ ಜಿನ್ನಾ ಅವರಿಗೆ ಅದು ಜಾತ್ಯತೀತ ರಾಷ್ಟ್ರವಾಗಿರಬೇಕು ಎನ್ನುವ ಆಶಯವಿತ್ತು. ಇದನ್ನೇ ಅಡ್ವಾಣಿಯವರು ಪಾಕಿಸ್ತಾನದಲ್ಲಿ ಹೇಳಿದ್ದರು. ಪಾಕಿಸ್ತಾನದ ಮೊತ್ತ ಮೊದಲ ರಾಷ್ಟ್ರಗೀತೆಯನ್ನು ಜಿನ್ನಾ ಅವರು ಲಾಹೋರ್‌ನ ಜಗನ್ನಾಥ್ ಆಝಾದ್ ಕೈಯಲ್ಲಿ ಬರೆಸಿದರು. ಸುಮಾರು ಒಂದೂವರೆ ವರ್ಷಗಳ ಕಾಲ ಪಾಕಿಸ್ತಾನ ಇದನ್ನು ರಾಷ್ಟ್ರಗೀತೆಯಾಗಿ ಒಪ್ಪಿಕೊಂಡಿತ್ತು. ಈ ಗೀತೆಯನ್ನು ಬರೆಯಲು ಜಗನ್ನಾಥ್ ಅವರಿಗೆ ಜಿನ್ನಾ ಅವರು ಐದು ದಿನಗಳಷ್ಟನ್ನೇ ನೀಡಿದ್ದರಂತೆ. ಈ ಐದು ದಿನಗಳ ಒತ್ತಡದಲ್ಲಿ ಹಾಡನ್ನು ಬರೆದರೂ ನಾನು ಪಾಕಿಸ್ತಾನದ ರಾಷ್ಟ್ರಗೀತೆಗೆ ನ್ಯಾಯವನ್ನು ನೀಡಿದ್ದೆ ಎನ್ನುತ್ತಾರೆ ಜಗನ್ನಾಥ್ ಆಝಾದ್. ಆದರೆ ಉತ್ತರ ಪಂಜಾಬ್ ಮತ್ತು ಇನ್ನಿತರ ಕಡೆ ಹಿಂಸೆ ವ್ಯಾಪಿಸಿದಂತೆ ಜಗನ್ನಾಥ್ ಆಝಾದ್ ಭಾರತಕ್ಕೆ ವಲಸೆ ಬಂದರು. ಪಾಕಿಸ್ತಾನ ಸ್ವತಂತ್ರಗೊಂಡ ಒಂದೂವರೆ ವರ್ಷದೊಳಗೆ ಪಾಕಿಸ್ತಾನದಲ್ಲಿ ಈ ರಾಷ್ಟ್ರಗೀತೆ ಬದಲಾಯಿತು. ಇದೆಲ್ಲವನ್ನು ನಾವು ಯಾಕೆ ಮತ್ತೆ ಮತ್ತೆ ನೆನೆಯಬೇಕೆಂದರೆ ಈ ದೇಶ ಯಾವುದೇ ಒಂದು ಧರ್ಮ ಅಥವಾ ಜಾತಿಯಿಂದ ನಿರ್ಮಾಣವಾದುದಲ್ಲ.

ಎಲ್ಲ ಜಾತಿ ಧರ್ಮಗಳ ಜನರ ಕೊಡುಗೆಗಳಿಂದ, ವೈವಿಧ್ಯ ಭಾರತವಾಗಿ ಅರಳಿದೆ ನಮ್ಮ ನೆಲ. ಬಹುತ್ವವೇ ಇದರ ವೈಶಿಷ್ಟ. ಈ ವೈಶಿಷ್ಟವನ್ನು ಅಳಿಸುವ ಪ್ರಯತ್ನ ಕೆಲವು ಶಕ್ತಿಗಳಿಂದಾಗುತ್ತಿದೆ. ಆ ಶಕ್ತಿಯನ್ನು ವಿಫಲಗೊಳಿಸಿ, ದೇಶವನ್ನು ಒಂದಾಗಿ ಉಳಿಸಬೇಕೆಂದರೆ, ಇಂತಹ ನೆನಪುಗಳನ್ನು ನಾವು ಸದಾ ಹಸಿರಾಗಿ ಇಟ್ಟುಕೊಳ್ಳಬೇಕು.

ಜೈಹಿಂದ್ ಎನ್ನುವ ಘೋಷಣೆಯೊಂದಿಗೆ ತನ್ನ ಬದುಕನ್ನೇ ದೇಶಕ್ಕಾಗಿ ಅರ್ಪಿಸಿದ ಜೈನುಲ್ ಆಬಿದೀನ್ ಹಸನ್, ಹಾಗೆಯೇ ಜಿನ್ನಾ ಅವರ ಆತ್ಮೀಯರಾಗಿದ್ದುಕೊಂಡು ಪಾಕಿಸ್ತಾನಕ್ಕೆ ತುಂಬು ಹೃದಯದೊಂದಿಗೆ ರಾಷ್ಟ್ರಗೀತೆಯನ್ನು ಬರೆದುಕೊಟ್ಟ ಜಗನ್ನಾಥ್ ಆಝಾದ್ ಇಂತಹ ಹೆಸರುಗಳ ನೂಲುಗಳಿಂದ ನಾವು ಹರಿದ ಭಾಗಗಳಿಗೆ ಮತ್ತೆ ತೇಪೆ ಹಾಕಬೇಕು. ಹಿಂದು, ಮುಸ್ಲಿಮ್, ಬ್ರಾಹ್ಮಣ, ದಲಿತ ಇತ್ಯಾದಿಗಳೆಲ್ಲ ವೈವಿಧ್ಯವಾಗಿಯಷ್ಟೇ ನಮ್ಮ ನಡುವೆ ಇರಲಿ. ಅದು ನಮ್ಮನ್ನು ಪರಸ್ಪರ ಒಡೆಯದಿರಲಿ. ಬದಲಿಗೆ ನಮ್ಮನ್ನು ಇನ್ನಷ್ಟು ಒಂದಾಗಿಸುವುದಕ್ಕೆ ಆ ಅಸ್ಮಿತೆಗಳು ನೆಪವಾಗಲಿ.

4 comments:

  1. lovely writeup Bhasheer.....yellaru odabekaada lekhana

    ReplyDelete
  2. ಬಷೀರ್ ಅವರಿಗೆ--- 'ವಂದೇಮಾತರಂ' ನಲ್ಲಿ ಹಿಂದೂ ದೇವತೆಗಳ (ತಾವೇ ಹೇಳಿರುವಂತೆ ದುರ್ಗೆ ಇತ್ಯಾದಿ)ಹೆಸರು ಬರುತ್ತದೆಂದೂ, ಅದಕ್ಕೆ ಗೌರವ ಸಲ್ಲಿಸಿವುದು ತಮ್ಮ ಧರ್ಮಕ್ಕೆ ವಿರುದ್ಧವೆಂದೂ ಒಬ್ಬರು ಮುಸ್ಲಿಂ ಸಂಸದರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ತಮಗೆ ನೆನಪಿರಬಹುದು. ಆ ದಿನ ಪಾರ್ಲಿಮೆಂಟ್ ಕಲಾಪ ಮುಗಿದ ಮೇಲೆ ವಂದೇಮಾತರಂ ಗೀತೆಗೆ ಎಲ್ಲಾ ಸಂಸದರು ಎದ್ದು ನಿಂತು ಗೌರವ ಸೂಚಿಸುತ್ತಿದ್ದಾಗ ಈ ಸಂಸದರು ತಮ್ಮ ಖುರ್ಚಿ ಬಿಟ್ಟು ಮೇಲೇಳಲಿಲ್ಲ. ಆ ಸುದ್ದಿ ಮತ್ತು ಫೋಟೋ ಪತ್ರಿಕೆಗಳಲ್ಲಿ,ಟಿವಿ ಸುದ್ದಿ ವಾಹಿನಿಗಳಲ್ಲಿ ಬಂದಿತ್ತು.
    --ಎಂ ಎ ಶ್ರೀರಂಗ ಬೆಂಗಳೂರು.

    ReplyDelete