Sunday, October 7, 2012

ಇಂಗ್ಲಿಷ್ ವಿಂಗ್ಲಿಷ್: ಹೃದಯಸ್ಪರ್ಶಿ ಶ್ರೀದೇವಿ ಚಿತ್ರ

ಇಂಗ್ಲಿಷ್ ಇಂದು ಪ್ರತಿ ಮನೆಯನ್ನು ಪ್ರವೇಶಿಸಿದೆ. ತಂದೆ ಮಕ್ಕಳ ನಡುವೆ, ತಾಯಿ ಕುಟುಂಬದ ನಡುವೆ ಅದು ಗೋಡೆಗಳನ್ನು ಕಟ್ಟುತ್ತಿವೆ. ಸಂವಹನನದಲ್ಲೇ ಕೆಲವು ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಈ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತಲೇ, ಒಬ್ಬ ಗೃಹಿಣಿ ಇಂಗ್ಲಿಷ್ ಸವಾಲುಗಳನ್ನು ಎದುರಿಸಿ, ಮನೆಯನ್ನು ಸಮಾಜವನ್ನು ತನ್ನದನ್ನಾಗಿ ಮಾಡಿಕೊಳ್ಳುವ ಕತೆಯೇ ಶ್ರೀದೇವಿ ಕತಾನಾಯಕಿಯಾಗಿ ನಟಿಸಿರುವ ಚಿತ್ರ ‘ಇಂಗ್ಲಿಷ್ ವಿಂಗ್ಲಿಷ್’.

ಶಶಿ ಗೋಡ್‌ಬೋಲೆ ಸಾಮಾನ್ಯ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಎರಡು ಮಕ್ಕಳ ತಾಯಿ. ಅವರು ಲಾಡು ಮಾಡುವುದರಲ್ಲಿ ಪರಿಣತರು. ಲಾಡು ತಯಾರಿಕೆಯಲ್ಲಿ ಅವರು ಎಷ್ಟು ಪರಿಣತರೆಂದರೆ ಅದರ ವ್ಯಾಪಾರವನ್ನೂ ಮಾಡುತ್ತಾರೆ.ಆದರೆ ಅವರಲ್ಲಿ ಇಲ್ಲದಿರುವ ಒಂದು ಪರಿಣತಿಯೆಂದರೆ ಇಂಗ್ಲಿಷ್ ಮಾತನಾಡುವುದು. ಇದರಿಂದಾಗಿ ಆಕೆ ಸ್ವತಃ ಗಂಡ, ಮಕ್ಕಳ ಪಾಲಿಗೇ ತಮಾಷೆಯ ವಸ್ತುವಾಗುತ್ತಾಳೆ. ಗಂಡ (ಆದಿಲ್ ಹುಸೇನ್) ಮತ್ತು ಹದಿ ಹರಯದ ಮಗಳ (ನವಿಕಾ ಕೋಟಿಯ) ಜೊತೆಗೆ ಸಂಘರ್ಷಕ್ಕೂ ಕಾರಣವಾಗುತ್ತದೆ. ಇಂಗ್ಲಿಷ್ ಶ್ರೇಷ್ಠತೆಯ ಭ್ರಮೆ ಮತ್ತು ಅದರಲ್ಲಿ ಸಿಕ್ಕಿ ನಲುಗಾಡುವ ಭಾರತೀಯ ಮಹಿಳೆಯ ಹೃದಯ ಹಿಂಡುವ ಕತೆಯನ್ನು ಅತ್ಯಂತ ತಮಾಷೆಯಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಶ್ರೀದೇವಿಗಾಗಿ ಈ ಚಿತ್ರವೋ, ಅಥವಾ ಈ ಚಿತ್ರಕ್ಕಾಗಿ ಶ್ರೀದೇವಿಯೋ ಎಂಬಂತೆ ಅವಿನಾಭಾವವಾಗಿ ಗೃಹಿಣಿ ಪಾತ್ರದಲ್ಲಿ ಕರಗಿ ಹೋಗಿದ್ದಾರೆ ಶ್ರೀದೇವಿ.

ಅನಿರೀಕ್ಷಿತವಾಗಿ ಅಮೆರಿಕಕ್ಕೆ ಹೋಗುವ ಅವಕಾಶವನ್ನು ಪಡೆದ ಶಶಿ ಗೋಡ್‌ಬೋಲೆ, ಅಲ್ಲಿ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್‌ಗೆ ಸೇರುವ ಮೂಲಕ ನಿಜವಾದ ಕತೆ ತೆರೆದುಕೊಳ್ಳುತ್ತದೆ. ಅಲ್ಲಿ ಸ್ಪಾನಿಶ್ ಅಜ್ಜಿ ಇವಾ (ರುತ್ ಅಗ್ವಿಲರ್), ತಮಿಳು ಸಾಫ್ಟ್‌ವೇರ್ ಎಂಜಿನಿಯರ್ ರಾಮ (ರಾಜೀವ್ ರವೀಂದ್ರನಾಥನ್), ಚೀನೀ ಸೌಂದರ್ಯ ತಜ್ಞೆ ಯೂ ಸನ್ (ಮರಿಯಾ ರೊಮಾನೊ), ಫ್ರೆಂಚ್ ಅಡುಗೆಯವ ಲಾರಂಟ್ (ಮೆಹದಿ ನೆಬೂ), ಪಾಕಿಸ್ತಾನಿ ಕ್ಯಾಬ್ ಚಾಲಕ ಸಲ್ಮಾನ್ ಖಾನ್ (ಸುಮೀತ್ ವ್ಯಾಸ್) ಮತ್ತು ಆಫ್ರಿಕನ್ ಡ್ಯಾನ್ಸರ್ ಉಡುಂಬ್ಕೆ ಮುಂತಾದವರು ಶಶಿ ಗೋಡ್‌ಬೋಲೆಯ ಸಂಕಟದಲ್ಲಿ ಜೊತೆಯಾಗುತ್ತಾರೆ. ಇಂಗ್ಲಿಷ್ ಶಿಕ್ಷಕ ಡೇವಿಡ್ (ಕೋರಿ ಹಿಬ್ಸ್) ಮೂಲಕ ತಮ್ಮ ದೌರ್ಬಲ್ಯಗಳನ್ನು ಮೀರಿ ನಿಲ್ಲಲು ಹವಣಿಸುತ್ತಾರೆ. ಒಂದು ರೀತಿಯಲ್ಲಿ ಈ ಪಾತ್ರ, ತನ್ನ ಅಸ್ತಿತ್ವವನ್ನು ಹೊಸದಾಗಿ ಹುಡುಕಿಕೊಳ್ಳುವ ಪ್ರಯತ್ನವೂ ಆಗಿದೆ. ಗೃಹಿಣಿಯಾಗಿ ಸಂತೃಪ್ತಮನೋಭಾವದಲ್ಲಿ ಮುಗಿದು ಹೋಗಿರುವ ಪಾತ್ರ, ಇಂಗ್ಲಿಷ್ ಮೂಲಕ ಮರು ಜೀವ ಪಡೆಯುತ್ತದೆ. ಮಗಳೊಂದಿಗಿನ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವುದಕ್ಕೂ ಇದು ಸಹಾಯ ಮಾಡುತ್ತದೆ. ಉಳಿದ ಪಾತ್ರಗಳ ಮೂಲಕ ತನ್ನನ್ನು ತಾನು ಗಟ್ಟಿಗೊಳಿಸುತ್ತಾ ಹೋಗುತ್ತಾಳೆ ಶಶಿ. ಇದೊಂದು ರೀತಿಯಲ್ಲಿ ಎನ್‌ಆರ್‌ಐ ಕನಸುಗಳ ನಡುವೆ ಒದ್ದಾಡುವ ಪ್ರತಿ ಭಾರತೀಯ ಮಹಿಳೆಯ ಕತೆಯೂ ಹೌದು. ಬಹುಶಃ ಇದು ಸ್ತ್ರೀ ಸಂವೇದನೆ, ಮಹಿಳಾ ಸಬಲೀಕರಣದ ಉದ್ದೇಶ ಹೊಂದಿರುವ ಇತ್ತೀಚೆಗೆ ಬಂದ ಅತ್ಯುತ್ತಮ ಚಿತ್ರ ಎನ್ನುವುದರಲ್ಲಿ ಯಾವುದೇ ಅನುಮಾನವಲ್ಲ.

ಇದು ಗೌರಿ ಶಿಂದೆ ನಿರ್ದೇಶನದ ಮೊದಲ ಚಿತ್ರ. ಈವರೆಗೆ ಜಾಹೀರಾತು ಚಿತ್ರಗಳನ್ನು ನಿರ್ಮಿಸುತ್ತಿದ್ದ ಗೌರಿ ಈಗ ಸಿನೇಮಾ ಕತೆಗಾರ್ತಿ ಹಾಗೂ ನಿರ್ದೇಶಕಿಯಾಗಿಯೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅದರ ಫಲಿತಾಂಶವೇ ಸುಂದರ, ಸೂಕ್ಷ್ಮ ಮತ್ತು ಅತ್ಯುತ್ತಮ ಈ ಚಿತ್ರ. ಈ ಚಿತ್ರ ನಿಮ್ಮನ್ನು ನಗಿಸುತ್ತದೆ, ಅಳಿಸುತ್ತದೆ ಮತ್ತು ಚಿಂತಿಸುವಂತೆಯೂ ಮಾಡುತ್ತದೆ. ಇಲ್ಲಿನ ಯಾವ ಪಾತ್ರಗಳೂ ಕೃತಕವಾಗಿಲ್ಲ. ತೀರಾ ಸಹಜವಾಗಿ, ಮನಮುಟ್ಟುವಂತಿದೆ.

ಅಮಿತ್ ತ್ರಿವೇದಿಯ ಸಂಗೀತ ಪ್ರೇಕ್ಷಕರನ್ನು ಮತ್ತೆ ಮತ್ತೆ ಗುನುಗುಟ್ಟುವಂತೆ ಮಾಡುತ್ತದೆ. ಸಂಗೀತ ಸಹಜವಾಗಿ ಹರಿಯುತ್ತದೆ.
ಶ್ರೀದೇವಿ ಚಿತ್ರದ ಆಧಾರಸ್ತಂಭ. ಕಾತರತೆ, ಕೋಪ, ಅಹಂಕಾರ, ದುಃಖ, ಆಕರ್ಷಣೆ ಯಾವುದೇ ಇರಲಿ, ನಟಿ ಮಾತುಗಳಿಂದ ಅಥವಾ ಮಾತುಗಳಿಲ್ಲದೆಯೂ ಭಾವನೆಗಳನ್ನು ಲೀಲಾಜಾಲವಾಗಿ ಹರಿಯಬಿಡುತ್ತಾರೆ. 15 ವರ್ಷಗಳ ಬಿಡುವಿನ ಬಳಿಕ ಬೆಳ್ಳಿ ತೆರೆಗೆ ಬಂದಿರುವ ಶ್ರೀದೇವಿಯ ನಟನೆ ಇಲ್ಲಿ ಅದ್ಭುತವಾಗಿದೆ. ಎಷ್ಟೆಂದರೆ ಚಿತ್ರ ಮುಗಿದ ತುಂಬಾ ಹೊತ್ತಿನ ಬಳಿಕವೂ ನೀವು ಅದೇ ಗುಂಗಿನಲ್ಲಿರುತ್ತೀರಿ.

1 comment:

  1. Looking forward to seeing both OMG and English Vinglish...good review..

    ReplyDelete