Wednesday, October 24, 2012

ಕ್ಷಮಿಸಿ ಬಿಡಿ...ನಿಮ್ಮ ತಟ್ಟೆಯನ್ನು ಎಂಜಲಾಗಿಸಿ ಬಿಟ್ಟೆ

ತೀರಾ ಸಣ್ಣವನಾಗಿದ್ದಾಗಿನ ನೆನಪುಗಳು ಇವು. ಆಗೆಲ್ಲ ಹೆಚ್ಚಿನ ಮದುವೆ ಸಮಾರಂಭಗಳಲ್ಲಿ ಅಥವಾ ಮನೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ನಾವು ಉಣ್ಣುತ್ತಿದ್ದ ಕ್ರಮಗಳು ಈಗಲೂ ನನ್ನನ್ನು ತಟ್ಟುತ್ತಿದೆ. ಆಗ ಈಗಿನಂತೆ ಬಾಡಿಗೆ ತಟ್ಟೆಗಳು, ಬಾಡಿಗೆ ಟೇಬಲ್‌ಗಳಿರಲಿಲ್ಲ. ಒಂದು ಮನೆಯಲ್ಲಿ ಸಮಾರಂಭ ನಡೆಯಬೇಕಾದರೆ ಹತ್ತು ಮನೆಯ ತಟ್ಟೆಗಳನ್ನು, ಹತ್ತು ಮನೆಯ ಟೇಬಲ್ ಕುರ್ಚಿಗಳನ್ನು ಸಂಗ್ರಹಿಸಿ ತರಬೇಕಾಗುತ್ತಿತ್ತು. ಅದು ಮದುವೆ ಮನೆಯೇ ಇರಲಿ. ಒಂದು ತಟ್ಟೆಯ ಊಟವನ್ನು ಇಬ್ಬರು ಹಂಚಿಕೊಂಡು ಉಣ್ಣುತ್ತಿ ದ್ದೆವು. ಅಲ್ಲಿ ಎಂಜಲಿನ ಸಮಸ್ಯೆಯೇ ಕಾಡುತ್ತಿರಲಿಲ್ಲ. ಟೇಬಲಿನ ಅಕ್ಕಪಕ್ಕ ಕುರ್ಚಿ ಹಾಕಲಾಗುತ್ತಿತ್ತು. ಯಾರೋ ಪರಿಚಿತ ಅಥವಾ ಅಪರಿಚಿತ. ಸಂಬಂಧಿಕನಾಗಬೇಕಾಗಿಲ್ಲ. ಗುರುತು ಪರಿಚಯವೂ ಇರಬೇಕಾಗಿರಲಿಲ್ಲ. ಇಬ್ಬರಿಗೆ ಒಂದು ತಟ್ಟೆ. ಆ ತಟ್ಟೆಯಲ್ಲಿದ್ದ ಅನ್ನವನ್ನು ಸಾರು ಕಲೆಸಿ ನಾವು ಹಂಚಿ ಉಣ್ಣುತ್ತಿದ್ದೆವು. ಉಣ್ಣುತ್ತಾ ಉಣ್ಣುತ್ತಾ ಪರಸ್ಪರ ಪರಿಚಯ ಮಾಡಿಕೊಳ್ಳುತ್ತಿದ್ದೆವು. ಅನ್ನ ಮುಗಿದಾಗ ನಾವು ಜೊತೆಯಾಗಿಯೇ ಹಾಕಿಸಿ ಕೊಂಡು ಮತ್ತೆ ಅದನ್ನು ಹಂಚಿಕೊಂಡು ತಿಂದು ಏಳುತ್ತಿದ್ದೆವು. ಕೆಲವೊಮ್ಮೆ ನಮ್ಮ ಎದುರಿನ ವ್ಯಕ್ತಿ ಹೊಟ್ಟೆ ಬಾಕನಾಗಿದ್ದರೆ ಹಾಗೂ ನಾವು ಸಂಕೋಚದ ವ್ಯಕ್ತಿಯಾಗಿದ್ದರೆ ಅದು ಇನ್ನಷ್ಟು ತಮಾಷೆಯ ಕತೆಯಾಗುತ್ತಿತ್ತು. ಒಟ್ಟಿನಲ್ಲಿ ಬಾಲ್ಯದ ಎಂಜಲು ಅನ್ನ ನನ್ನನ್ನು ಮನುಷ್ಯನಾಗಿ ಬೆಳೆಯುವಲ್ಲಿ ಒಂದಿಷ್ಟಾದರೂ ತನ್ನ ಕಾಣಿಕೆಯನ್ನು ನೀಡಿದೆ ಎಂದು ಭಾವಿಸಿದ್ದೇನೆ. ನಾನು ಬೆಳೆದಂತೆ ಈ ಕ್ರಮ ಅಳಿದೇ ಹೋಯಿತು. ಈಗೆಲ್ಲ ಬಾಡಿಗೆ ಬಟ್ಟಲು, ಬಫೆ ಪದ್ಧತಿ ಕಡ್ಡಾಯವಾಗಿದೆ. ನನಗೆ ನನ್ನ ಈ ಬಾಲ್ಯದ ಎಂಜಲು ಊಟ ನೆನಪಾಗಿದ್ದು ಇತ್ತೀಚೆಗೆ ಪೇಜಾವರಶ್ರೀಗಳ ಒಂದು ಹೇಳಿಕೆಯಿಂದ. ಅವರು ಮಡೆಸ್ನಾನವನ್ನು ಸಮರ್ಥಿಸುವುದಕ್ಕಾಗಿ ಒಂದೇ ಬಟ್ಟಲಲ್ಲಿ ಉಣ್ಣುವುದನ್ನು ಗುರಾಣಿಯಾಗಿ ಬಳಸಿಕೊಂಡರು. ನನಗೆ ಈ ಹೋಲಿಕೆಯಿಂದ ನೋವಾದರೂ, ಪೇಜಾವರಶ್ರೀಗಳ ಹತಾಶೆಯ ಕುರಿತಂತೆ ಸಣ್ಣದೊಂದು ಅನುಕಂಪ ಹುಟ್ಟಿತು. ಮಡೆಸ್ನಾನ ಮತ್ತು ಈ ಹಂಚಿಕೊಂಡು ಉಣ್ಣುವ ಕ್ರಮದಲ್ಲಿ ಇರುವ ಅಜಗಜಾಂತರವನ್ನು ಅವರು ಅರಿಯಲು ವಿಫಲರಾದರೋ, ಅಥವಾ ಅರಿತೂ ಅಂತಹದೊಂದು ಹೇಳಿಕೊಟ್ಟರೋ ಎಂಬ ಬಗ್ಗೆ ನನಗೆ ಗೊಂದಲವಿದೆ. ಮಡೆಸ್ನಾನ ಪರೋಕ್ಷವಾಗಿ ಒಂದು ಸಮುದಾಯದ ಅಥವಾ ಒಂದು ಜಾತಿಯ ಜನರ ಎಂಜಲನ್ನು ಶ್ರೇಷ್ಠವೆಂದು ಪ್ರತಿಪಾದಿಸುತ್ತದೆ. ಆದರೆ ಒಂದೇ ತಟ್ಟೆಯಲ್ಲಿ ಇಬ್ಬರು ಜೊತೆಯಾಗಿ ಉಣ್ಣುವಾಗ ನಮ್ಮಲ್ಲಿ ಪರಸ್ಪರರ ಎಂಜಲಿನ ಕುರಿತಂತೆ ಮೇಲು-ಕೀಳುಗಳಿರಲಿಲ್ಲ. ಹಸಿವೆ ಅಲ್ಲಿ ಪ್ರಧಾನ ಪಾತ್ರವನ್ನು ವಹಿಸಿತ್ತು. ಹಂಚಿ ಉಣ್ಣು ವುದು ಎರಡನೆಯದು. ಇದನ್ನು ಸಹೋದರತೆ, ಸಮಾನತೆ ಎಂಬಿತ್ಯಾದಿ ಸಾಲುಗಳಿಗೆ ಜೋಡಿಸಲು ಇಷ್ಟಪಡುವುದಿಲ್ಲ. ಈ ಪದಗಳ ಅರಿವೇ ಇಲ್ಲದೆ ನಾವು ಅಂದು ಜೊತೆ ಜೊತೆಯಾಗಿ ಉಣ್ಣುತ್ತಿದ್ದೆವು. ಅದನ್ನು ನೆನೆದಾಗ ಇಂದು ರೋಮಾಂಚನ ವಾಗುತ್ತದೆ. ಕೆಲವೊಮ್ಮೆ ಯಾರೋ ಉಣ್ಣುವಾಗ ಅವರ ತಟ್ಟೆಗೆ ತನ್ನ ಎಂಜಲು ಕೈಯನ್ನು ಹಾಕಿ ಬಿಡಬೇಕು ಎನ್ನುವ ಆಸೆ ಉಕ್ಕಿ ಬರುತ್ತದೆ.

 ತಾಯಿಯ ಎಂಜಲಿನಿಂದಲೇ ಜೀವಪಡೆದ ನಾವೆಲ್ಲ, ಒಂದಲ್ಲ ಒಂದು ರೀತಿಯಲ್ಲಿ ಇನ್ನೊಬ್ಬರ ಎಂಜಲಿನ ಜೊತೆಗೇ ಬದುಕುತ್ತಿರುವವರು. ಅದು ಸಂಗಾತಿಯ ಎಂಜಲಾಗಿರಬಹುದು. ಆಗಷ್ಟೇ ಹುಟ್ಟಿದ ಹಸುಗೂಸಿನ ಜೇನಿನಂತಹ ಎಂಜಲಾ ಗಿರಬಹುದು. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಎಂಜಲಿಗೆ ಅಂಜಿದ ಸಂದರ್ಭದಲ್ಲಿ ಮನುಷ್ಯನ ನಡುವೆ ಕಂದರಗಳು, ಜಾತಿಗಳು, ಧರ್ಮಗಳು ನಿರ್ಮಾಣವಾಗುತ್ತವೆ. ಬಾಲ್ಯದಲ್ಲಿ (ಅಂದು) ಯಾವ ಅಂಜಿಕೆಯೂ ಇಲ್ಲದೆ ಐಸ್‌ಕ್ಯಾಂಡಿಗಳ ಜೊತೆಗೆ, ಬೊಂಬಾಯಿ ಮಿಠಾಯಿಗಳೊಂದಿಗೆ, ಗೋಲಿ ಸೋಡಾಗಳ ಜೊತೆಗೆ ನಾವು ನಮ್ಮ ಗೆಳೆಯ ರೊಂದಿಗೆ ಎಂಜಲುಗಳನ್ನು ಯಾವ ಅಡ್ಡಿ, ಆತಂಕಗಳಿಲ್ಲದೆ ಹಂಚಿಕೊಳ್ಳುತ್ತಿದ್ದೆವು. ಇಂದು ನೀಟಾಗಿ ಯೂನಿಫಾರಂ ಹಾಕಿಕೊಂಡಿರುವ ಮಕ್ಕಳು ಶಾಲೆಯಲ್ಲಿ ಒಂದೇ ಐಸ್‌ಕ್ಯಾಂಡಿಯನ್ನು ಹಂಚಿಕೊಂಡು ತಿನ್ನುತ್ತಾರೆ ಎನ್ನುವ ಭರವಸೆ ನನಗಿಲ್ಲ. ಯಾಕೆಂದರೆ ಅವರ ಬಾಲ್ಯಕ್ಕೆ ಹಿರಿಯರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಿರಿಯರ ಹಸ್ತಕ್ಷೇಪ ವೆಂದರೂ ಒಂದು ರೀತಿಯ ಎಂಜಲೇ ಆಗಿದೆ. ಅವರು ತಮ್ಮ ಬೆನ್ನಲ್ಲಿ ಹೊತ್ತುಕೊಂಡಿರುವ ಜಾತಿ, ಧರ್ಮಗಳನ್ನು ಮಕ್ಕಳ ಮುಗ್ಧ ಬಾಲ್ಯಕ್ಕೆ ಎಂಜಲಾಗಿಸಿದ್ದಾರೆ. ಆದರೂ ಈ ಎಂಜಲು ಎರಡು ಸಂದರ್ಭಗಳಲ್ಲಿ ನನ್ನನ್ನು ಕಾಡಿದ್ದನ್ನು, ನನ್ನಲ್ಲಿ ಪಾಪಪ್ರಜ್ಞೆಯನ್ನು ಬಿತ್ತಿದ್ದನ್ನು, ಇಂದಿಗೂ ತಪ್ಪಿಸ್ಥನಂತೆ ನನ್ನನ್ನು ಕೊರಗುವಂತೆ ಮಾಡಿದ್ದನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸುತ್ತಿದೆ.

ಮೊದಲನೆಯದು ನಡೆದದ್ದು ಮುಂಬಯಿ ಯಲ್ಲಿ. ನಾನು ಕನ್ನಡ ಎಂ.ಎ. ಕಲಿಯುವುದಕ್ಕಾಗಿ ಮುಂಬೈ ಸೇರಿದ ಸಂದರ್ಭದಲ್ಲಿ ಘಟನೆ ಇದು. ಮುಂಬೈಯಲ್ಲಿ ಒಂದು ಕನ್ನಡ ದೈನಿಕ ನನಗೆ ಆಶ್ರಯ ನೀಡಿತ್ತು. ಬಿಎ ಮುಗಿಸಿದ ನನಗೆ ಕನ್ನಡ ಸಾಹಿತ್ಯದಲ್ಲಿ ಎಂಎ ಮಾಡಬೇಕೆಂಬ ಕನಸನ್ನು ಸಾಧಿಸಲು ಉಳಿದ ಒಂದೇ ದಾರಿಯಾಗಿತ್ತು ಮುಂಬೈ. ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಅಂದಿನ ಮುಖ್ಯಸ್ಥರಾಗಿ ನನ್ನದೇ ಊರಿನ ತಾಳ್ತಜೆ ವಸಂತ ಕುಮಾರ್ ಇದ್ದರು. ನಮ್ಮ ಊರಿನ ಶ್ರೀನಿಧಿ ಯುವಕ ಮಂಡಲದಲ್ಲಿ ಸಕ್ರಿಯರಾಗಿದ್ದ ಚಂದ್ರಶೇಖರ ಪಾಲೆತ್ತಾಡಿ ಯವರು ಮುಂಬೈಯ ಕನ್ನಡ ದೈನಿಕವೊಂದರ ಸಂಪಾದಕರಾಗಿದ್ದರು. ಮುಂಬೈಗೆ ತೆರಳುವಾಗ ನನಗೆ ನೆನಪಾದ ಒಂದೇ ಒಂದು ಹೆಸರು ಪಾಲೆತ್ತಾಡಿಯವರದು. ‘ನಾನು ಬರಲಾ?’ ಎಂದಾಗ ಎರಡು ಮಾತನಾಡದೆ ‘ಬಾ’ ಎಂದರು. ಮುಂದೆ ಆ ಪತ್ರಿಕೆಯಲ್ಲಿ ಆಶ್ರಯ ಪಡೆದು ಸುಮಾರು ಐದು ವರ್ಷ ಬದುಕಿನ ಮಹತ್ವದ ಘಟ್ಟವನ್ನು ಕಳೆದಿದ್ದೇನೆ. ಕಲಿತಿದ್ದೇನೆ. ಎರಡು ವರ್ಷ ಎಂಎ ಮುಗಿದು, ಬಳಿಕ ಸುಮಾರು ಮೂರು ವರ್ಷ ಅದೇ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ನಿರ್ವಹಿಸಿದೆ. ಆ ಸಂದರ್ಭ ದಲ್ಲೇ ನನಗೆ ಟಿಬಿ ಅಟ್ಯಾಕ್ ಆಗಿದ್ದು. ಬಹುಶಃ ಅಂಬಿಗನಿಲ್ಲದ ಒಂದು ಪುಟ್ಟ ದೋಣಿಯೇರಿ, ನನಗೆ ದೋಚಿದ ದಿಕ್ಕಿಗೆ, ನನಗೆ ತೋಚಿದಂತೆ ಉಟ್ಟು ಹಾಕುತ್ತಾ ಮುಂದೆ ಸಾಗುತ್ತಿದ್ದವನ ಮುಂದೆ ಬಿರುಗಾಳಿ ಎರಗಿದಂತಾಗಿತ್ತು. ವಿಚಿತ್ರ ವೆಂದರೆ, ಆ ಟಿಬಿಯನ್ನಿಟ್ಟುಕೊಂಡು ಕವಿತೆಗಳನ್ನು ಬರೆಯುತ್ತಿದ್ದೆ. ಮುಂಬಯಿ ಕರ್ನಾಟಕ ಸಂಘದಲ್ಲಿ ಸಕ್ರಿಯನಾಗಿದ್ದೆ. ನಾಟಕ, ಶಿಬಿರ ಸೇರಿದಂತೆ ಯಾವುದೇ ಕನ್ನಡ ಕಾರ್ಯಕ್ರಮಗಳಿರಲಿ ಸಕ್ರಿಯನಾಗಿ ಓಡಾಡುತ್ತಿದ್ದೆ. ಇದೇ ಸಂದರ್ಭ ದಲ್ಲಿ ನನ್ನ ಮೊತ್ತ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು’ನ್ನು ಯಶವಂತ ಚಿತ್ತಾಲರು ಬಿಡುಗಡೆ ಮಾಡಿದರು. ಕನ್ನಡ ಚಟುವಟಿಕೆಗಳ ಜೊತೆಜೊತೆಗೇ ಈ ರೋಗವನ್ನು ಎದುರಿಸುತ್ತಾ ಬಂದೆ. ಸುಮಾರು ಎರಡು ವರ್ಷಗಳ ಹೋರಾಟದಲ್ಲಿ ನಾನು ಗೆದ್ದೆ. ಸಿಡಿಲು ಬಿದ್ದ ಮರದಂತಾಗಿದ್ದ ನಾನು ಮತ್ತೆ ಚಿಗುರಿ ಕೊಳ್ಳತೊಡಗಿದೆ.(ಈಗಂತೂ ದೇಹಗಾತ್ರದಲ್ಲಿ ನಳನಳಿಸುವ ಅಶ್ವತ್ಥ ಮರವನ್ನು ಮೀರಿಸಿದ್ದೇನೆ ಬಿಡಿ). ಇಂತಹ ಸಂದರ್ಭದಲ್ಲೇ ನನ್ನ ಕೈಯಲ್ಲೊಂದು ತಪ್ಪು ನಡೆದು ಹೋಯಿತು.
 
 ನಾವೊಂದಿಷ್ಟು ಜನ ಒಂದೇ ಕೊಠಡಿಯಲ್ಲಿ ಒಟ್ಟಿಗೆ ಊಟವನ್ನು ಮಾಡುತ್ತಿದ್ದೆವು. ಅಡುಗೆ ಯನ್ನು ತಯಾರಿಸುವುದಕ್ಕೂ ಒಬ್ಬರು ಸಿಬ್ಬಂದಿಯಿದ್ದರು. ಒಮ್ಮೆಯೇನಾಯಿತೆಂದರೆ, ನಾವೆಲ್ಲರೂ ಉಣ್ಣುತ್ತಿದ್ದಾಗ ನನ್ನ ಗೆಳೆಯನೊಬ್ಬ ಬಂದ. ಅಲ್ಲಿ ಬೇರೆ ತಟ್ಟೆಯೇ ಇರಲಿಲ್ಲ. ಅಷ್ಟರಲ್ಲಿ ನಾನು ಉಂಡ ನನ್ನ ತಟ್ಟೆಯನ್ನು ತೊಳೆದು ಆತನಿಗೆ ನೀಡಿದೆ. ಆತ ಬೇಡ ಬೇಡ ಎಂದ. ಬಳಿಕ ಇನ್ನೊಬ್ಬನ ತಟ್ಟೆಯನ್ನು ತೊಳೆದು ಅನ್ನ ಹಾಕಿಸಿಕೊಂಡ. ಅದೇನೂ ದೊಡ್ಡ ವಿಷಯ ವಾಗಿರಲಿಲ್ಲ. ಅದೊಂದು ಆಕಸ್ಮಿಕವೂ ಆಗಿರಬಹುದು. ಆದರೆ ಅಂದು ಮಲಗಿದ ಬಳಿಕ ಮಧ್ಯರಾತ್ರಿ ಎಚ್ಚರದಲ್ಲಿ ನನ್ನೊಳಗೆ ಆ ಘಟನೆ ಧಿಗ್ಗನೆ ಮರುಕಳಿಸಿತು. ‘ಆತನೇಕೆ ನನ್ನ ತಟ್ಟೆಯನ್ನು ನಿರಾಕರಿಸಿದ?’ ಎಂಬ ದುಷ್ಟ ತರ್ಕವೊಂದು ನನ್ನಲ್ಲಿ ತಲೆಯೆತ್ತಿತ್ತು. ನನ್ನ ಅನಾರೋಗ್ಯವೇ ತಟ್ಟೆಯನ್ನು ಸ್ವೀಕರಿಸದಂತೆ ಅವನನ್ನು ತಡೆಯಿತು ಎನ್ನುವುದು ನನಗೆ ಆ ಕತ್ತಲಲ್ಲಿ ಹೊಳೆಯಿತು. ಟಿಬಿಯೆನ್ನುವುದು ಸಾಂಕ್ರಾಮಿಕ ರೋಗ. ಅದು ಇನ್ನೊಬ್ಬರಿಗೆ ಹರಡದಂತೆ ಜಾಗರೂಕತೆವಹಿಸುವುದು ಆ ರೋಗ ಬಾಧಿತನ ದೊಡ್ಡ ಕರ್ತವ್ಯ. ಅದನ್ನು ನಾನು ಮರೆತಿದ್ದೆ. ತಟ್ಟೆಯನ್ನು ತೊಳೆದರೂ ಅದು ಸಂಪೂರ್ಣ ಸುರಕ್ಷಿತವೆನ್ನುವಂತಿರಲಿಲ್ಲ. ನಾನು ಭಾರೀ ದೊಡ್ಡ ತಪ್ಪು ಮಾಡಿದ್ದೆ. ಮುಂದೆ ಆ ಕುರಿತಂತೆ ನಾನು ಹೆಚ್ಚು ಜಾಗರೂಕನಾದೆ. ಆದರೂ ಯಾವುದೋ ಮಧ್ಯರಾತ್ರಿಯ ಕನಸಿನಲ್ಲಿ ಆ ತಪ್ಪು ಈಗಲೂ ನನ್ನೊಳಗೆ ಸಣ್ಣಗೆ ಕದಲುತ್ತದೆ. ನೋವು ಕೊಡುತ್ತದೆ. ಇನ್ನೊಂದು ಘಟನೆ ನಾನು ಮುಂಬಯಿ ಯಿಂದ ಆರೋಗ್ಯವಂತನಾಗಿ ಊರಿಗೆ ಮರಳಿ, ಮಂಗಳೂರಿನ ಇನ್ನೊಂದು ರಾಜ್ಯಮಟ್ಟದ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರನಾಗಿ, ಹಿರಿಯ ಉಪಸಂಪಾದಕನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ನಡೆದದ್ದು. ನನ್ನ ಗೆಳೆಯರಲ್ಲಿ, ಆತ್ಮೀಯರಲ್ಲಿ ಹಲವು ಹಿರಿಯರೂ ಇದ್ದಾರೆ. ಅವರಲ್ಲಿ ಒಬ್ಬರು ತುಂಬಾ ಮುಖ್ಯರಾದವರು.. ಅವರು ಅತಿ ಸಾಂಪ್ರದಾಯಿಕ ಕುಟುಂಬವನ್ನು ಹೊಂದಿದವರು ಮತ್ತು ಸಂಪ್ರದಾಯವನ್ನು ಬಲವಾಗಿ ನಂಬಿದವರು ಕೂಡ. ನನ್ನನ್ನು ನಾನು ಮುಸ್ಲಿಂ ಎಂದು ನಂಬಿದ ಹಾಗೆ, ಅವರು ತಮ್ಮ ಜಾತಿಯನ್ನು ‘ಬ್ರಾಹ್ಮಣ’ ಎಂದು ನಂಬಿದವರು. ಆದರೆ ಅವರ ಮನೆಯ ಪ್ರತಿ ದೀಪಾವಳಿ, ಯುಗಾದಿಗಳಿಗೆ ನನಗೆ ಆಹ್ವಾನವಿತ್ತು. ಅವರ ಮನೆಯವರೂ ಸೇರಿದಂತೆ ಎಲ್ಲರೂ ನನ್ನನ್ನು ತುಂಬಾ ಇಷ್ಟಪಡುವರು. ನಾನು ಕೂಡ ಅವರನ್ನು ತುಂಬಾ ಇಷ್ಟ ಪಡುತ್ತಿದ್ದೆ. ಈಗಲೂ ಇಷ್ಟ ಪಡುತ್ತಿದ್ದೇನೆ.

 ಬಹುಶಃ ಅದು ದೀಪಾವಳಿಯ ಹಬ್ಬವಿರ ಬೇಕು. ನನ್ನನ್ನು ಹಾಗೂ ನನ್ನ ಓರ್ವ ವಿಚಾರವಂತ ಹಿರಿಯ ಗೆಳೆಯರನ್ನೂ ಅವರು ರಾತ್ರಿಯ ಊಟಕ್ಕೆ ಕರೆದಿದ್ದರು. ನನ್ನ ವಿಚಾರವಾದಿ ಗೆಳೆಯರು ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಾದರೂ ಬ್ರಾಹ್ಮಣ್ಯವನ್ನು ಶತಾಯಗತಾಯ ವಿರೋಧಿಸುವವರು. ನಾವು ಜೊತೆಯಾಗಿಯೇ ಆ ಹಿರಿಯರ ಮನೆಗೆ ಊಟಕ್ಕೆ ತೆರಳಿದೆವು. ಎಂದಿನಂತೆ, ಸಾಹಿತ್ಯ, ವರ್ತಮಾನ ಮಾತುಕತೆಗಳೆಲ್ಲ ಮುಗಿಯುವಷ್ಟರಲ್ಲಿ ನನ್ನ ಹಿರಿಯ ಗೆಳೆಯರ ಪತ್ನಿ ಊಟಕ್ಕೆ ಸಿದ್ಧತೆ ನಡೆಸಿದರು. ನಾವೆಲ್ಲ ಕೈ ಕಾಲು ತೊಳೆದು ಡೈನಿಂಗ್ ಟೇಬಲ್‌ನಲ್ಲಿ ಕುಳಿತೆವು. ಹಿರಿಯ ಗೆಳೆಯರು ಅವರ ಪತ್ನಿ, ಮಕ್ಕಳೂ ಪರಿವಾರದ ಸಹಿತ ಕುಳಿತಿದ್ದರು. ನನ್ನ ಪಕ್ಕದಲ್ಲೇ ನನ್ನ ವಿಚಾರವಾದಿ ಗೆಳೆಯರೂ ಆಸೀನರಾಗಿದ್ದರು. ಡೈನಿಂಗ್ ಟೇಬಲಲ್ಲಿ ಅನ್ನ, ಸಾಂಬಾರು, ಹೋಳಿಗೆ ಇತ್ಯಾದಿ ಇತ್ಯಾದಿಗಳಿದ್ದವು. ನಾವೇ ಸೌಟುಗಳಲ್ಲಿ ಬಡಿಸಿ ತಟ್ಟೆಗೆ ಹಾಕಿಕೊಳ್ಳಬೇಕು. ಅನ್ನವನ್ನು ಬೇಗ ಉಂಡು ಮುಗಿಸಿದ ನಾನು, ಏಕಾಏಕಿ ನನ್ನ ಎಂಜಲು ಕೈಯಲ್ಲೇ ಹೋಳಿಗೆಯಿರುವ ತಟ್ಟೆಗೆ ಕೈ ಹಾಕಿ ಒಂದು ಹೋಳಿಗೆಯನ್ನು ನನ್ನ ತಟ್ಟೆಗೆ ಹಾಕಿಕೊಂಡೆ. ತುಂಬಾ ಚೆನ್ನಾದ ಹೋಳಿಗೆ. ‘‘ತುಂಬಾ ಚೆನ್ನಾಗಿದೆ ಸಾರ್, ಹೋಳಿಗೆ ಹಾಕಿಕೊಳ್ಳಿ...’’ ಎಂದು ನಾನೇ ಆ ಹಿರಿಯ ಗೆಳೆಯರಿಗೂ, ಅವರ ಮನೆಯವರಿಗೂ ಒತ್ತಾಯಿಸಿದೆ. ನನ್ನ ವಿಚಾರವಾದಿ ಗೆಳೆಯರು ತಕ್ಷಣ ಎರಡು ಹೋಳಿಗೆ ಹಾಕಿಕೊಂಡು ಪ್ರತಿಕ್ರಿಯಿಸಿದರು. ಇಡೀ ಊಟ ಮುಗಿದರೂ ಮನೆಯವರಾರೂ ತಮ್ಮ ತಟ್ಟೆಗೆ ಹೋಳಿಗೆ ಹಾಕಿಕೊಳ್ಳಲೇ ಇಲ್ಲ. ನನ್ನ ಗಮನಕ್ಕೂ ಅದು ಬಂದಿರಲಿಲ್ಲ. ಗಮನಿಸಬೇಕಾದ ದೊಡ್ಡ ವಿಷಯವೂ ಅದಾಗಿರಲಿಲ್ಲ.

 ಆದರೆ ಅಂದು ಮಧ್ಯರಾತ್ರಿ ಆ ಘಟನೆಯೂ ಧಿಗ್ಗನೆ ನನ್ನ ನಿದ್ದೆಯ ಮೇಲೆ ಎರಗಿ ಬಿಟ್ಟಿತು. ‘ಅಷ್ಟೂ ಹೋಳಿಗೆ ಅಲ್ಲಿದ್ದರೂ ಅವರೇಕೆ ಒಂದನ್ನೂ ತೆಗೆದುಕೊಳ್ಳಲಿಲ್ಲ? ನಾನು ಅಷ್ಟೂ ಒತ್ತಾಯಿಸಿದರೂ ಅವರೇಕೆ ಪ್ರತಿಕ್ರಿಯಿಸಲಿಲ್ಲ?’ ಯೋಚಿಸುತ್ತಾ ಹೋದಂತೆ ನಾನು ಮಾಡಿದ ತಪ್ಪು ನನಗೆ ಹೊಳೆದು ಬಿಟ್ಟಿತು. ಅದು ನಿಜವಾಗಿರಬಹುದು. ಅಥವಾ ನನ್ನ ದುಷ್ಟ ಕಲ್ಪನೆಯೇ ಆಗಿರಬಹುದು. ಆದರೆ ಅಂದು ರಾತ್ರಿ ಅವರು ಆ ಸಿಹಿ ಊಟವನ್ನು ತ್ಯಜಿಸಿದ್ದು ನನ್ನ ತಪ್ಪಿನಿಂದಲೇ ಇರಬಹುದು ಎಂದು ದುಷ್ಟ ಮನಸ್ಸು ಈವರೆಗೂ ನಂಬಿಕೊಂಡೇ ಇದೆ. ಕೆಲವೊಮ್ಮೆ ನಮ್ಮೆಲ್ಲ ಸ್ನೇಹ, ಆತ್ಮೀಯತೆಯ ಬಲವೂ ಈ ಸಂಪ್ರದಾಯ, ನಂಬಿಕೆಗಳನ್ನು ಮುರಿದು ಮುಂದೆ ಹೋಗಲು ಸಾಕಾಗುವುದಿಲ್ಲ. ದೀಪಾವಳಿಯ ದಿನ ಅವರ ಬಾಯಿಯಿಂದ ಹೋಳಿಗೆಯ ಸಿಹಿಯನ್ನು ಕಸಿದುಕೊಂಡ ನನ್ನ ಅಪರಾಧ, ಬೇಜವಾಬ್ದಾರಿ ಈಗಲೂ ನನ್ನನ್ನು ಕಾಡುತ್ತಿದೆ. ಉಳಿದ ಅಷ್ಟೂ ಹೋಳಿಗೆಗಳನ್ನು ಅವರೇನು ಮಾಡಿರಬಹುದು? ಹೊರಗೆ ಎಸೆದಿರಬಹುದೆ? ಅವರ ಮನೆಯ ನಾಯಿಗೆ ಹಾಕಿರಬಹುದೆ? ಕೆಲಸದಾಳಿಗೆ ಕೊಟ್ಟಿರಬಹುದೆ? ಇಂತಹ ಕೆಟ್ಟ ತರ್ಕಗಳ ಮೂಲಕ ‘ಮಾಡಿದ ತಪಿ’್ಪಗಾಗಿ ನನ್ನನ್ನು ನಾನೇ ಹಲವು ಬಾರಿ ನೋಯಿಸಿಕೊಂಡಿದ್ದೇನೆ. ಈಗಲೂ ನನಗೆ ಪ್ರೀತಿ ಪಾತ್ರರೇ ಆಗಿರುವ ಆ ಹಿರಿಯ ಗೆಳೆಯರ ಸಾತ್ವಿಕ ಮುಖವನ್ನು ನೋಡುತ್ತಾ ನಾನು ಒಮ್ಮಾಮ್ಮೆ ತಲೆತಗ್ಗಿಸಿಕೊಳ್ಳುತ್ತೇನೆ. ಈಗಲೂ ಅವರು ಆಗಾಗ ಊಟಕ್ಕೆ ಕರೆಯುತ್ತಾರೆ. ಆದರೆ ಆ ಅಗ್ನಿಪರೀಕ್ಷೆಯನ್ನು ಗೆಲ್ಲುವ ಧೈರ್ಯಸಾಲದೆ ನಾನು ನಯವಾಗಿ ನಿರಾಕರಿಸುತ್ತೇನೆ.

No comments:

Post a Comment