Saturday, October 20, 2012

ಒಂದು ಮಿನಿ ಕಥೆ: ಮದಿರಂಗಿ ಕನಸು!

ತಾಹಿರಾಳಿಗೆ ಬುಧವಾರ ಮದುವೆ. ಸೋಮವಾರ ಆಕೆಯ ಮದಿರಂಗಿ ರಾತ್ರಿ. ಸೋಮವಾರ ಬೆಳಗ್ಗೆ ಒಂದು ಸಮಸ್ಯೆ ಎದುರಾಯಿತು? ಮದಿರಂಗಿ ಹಚ್ಚುವವರಾರು? ತಾಹಿರಾ ಮತ್ತು ಆಕೆಯ ಗೆಳತಿಯರು ಅದಾಗಲೇ ಮದಿರಂಗಿ ಯಾರು ಹಚ್ಚುವುದು ಎನ್ನುವುದನ್ನು ಮೊದಲೇ ನಿರ್ಧರಿಸಿ ಬಿಟ್ಟಿದ್ದರು. ಆಕೆಯ ಕಾಲೇಜು ಸಹಪಾಠಿ ಸೀಮಾ ಮದಿರಂಗಿ ಹಚ್ಚುವುದು ಎಂದು ಎರಡು ವರ್ಷಗಳ ಹಿಂದೆ, ಅಂತಿಮ ಬಿ. ಎ. ಓದುತ್ತಿದ್ದಾಗಲೇ ಅವರೆಲ್ಲಾ ನಿರ್ಧರಿಸಿ ಬಿಟ್ಟಿದ್ದರು. ಸೀಮಾ ಕಾಲೇಜಲ್ಲೆಲ್ಲ ಮದಿರಂಗಿ ಹಚ್ಚುವುದರಲ್ಲಿ ನಿಸ್ಸೀಮಳಾಗಿದ್ದಳು. ಹುಡುಗರೂ ತಮ್ಮ ಅಂಗೈಯನ್ನು ಬಿಡಿಸಿ, ಆಕೆಯ ಮುಂದೆ ಕುಕ್ಕರಗಾಲಲ್ಲಿ ಕೂರುವಷ್ಟು ಚೆನ್ನಾಗಿ ಮದಿರಂಗಿ ಬಳ್ಳಿಗಳನ್ನು ಬಿಡಿಸುವ ಸೀಮಾ, ‘ಲೇ ನಿನ್ನ ಮದುವೆಗೆ ನಾನು ಎಲ್ಲಿದ್ದರೂ ಬಂದು ಮದಿರಂಗಿ ಹಚ್ಚುವೆ. ನಿನಗೆ ಮಾತ್ರವಲ್ಲ, ನಿನ್ನನ್ನು ಕಟ್ಟಿಕೊಳ್ಳುವ ಆ ಅವನಿದ್ದಾನಲ್ಲ...ಅವನ ಕೈಗೂ ಹಚ್ಚುವೆ...ಪ್ರಾಮಿಸ್’’ ಎಂದಿದ್ದಳು ಸೀಮಾ. ಕಾಲೇಜು ಮುಗಿದ ಬಳಿಕ ಆಕೆ ಕುಟುಂಬದೊಂದಿಗೆ ದಿಲ್ಲಿ ಸೇರಿದ್ದಳು. ಇದೀಗ ಇಂದು ಮುಂಜಾನೆ ಅವಳ ಅನಿರೀಕ್ಷಿತ ಫೋನ್ ಅವರ ಕನಸುಗಳ ಮೇಲೆ ಎರಗಿತ್ತು. ಅವಳ ತಂದೆಗೆ ಹೃದಯಾಘಾತವಾಗಿ, ಐಸಿಯು ಸೇರಿದ್ದ ಹಿನ್ನೆಲೆಯಲ್ಲಿ ಬರಲಾಗುವುದಿಲ್ಲ ಎಂದು ಬಿಟ್ಟಿದ್ದಳು. ತಾಹಿರಾ ಮತ್ತು ಆಕೆಯ ಗೆಳತಿಯರಲ್ಲಿ ಇಲ್ಲದ ಆತಂಕ. ಒಂದು ಗೆಳತಿಯ ತಂದೆಗೆ ಹೃದಯಾಘಾತ. ಇನ್ನೊಂದು ತಾಹಿರಾಳಿಗೆ ಮದಿರಂಗಿ ಹಚ್ಚುವವರಾರು?
ಆಗ ಸಲಹೆಯಿತ್ತವಳು ಜಮೀಳಾ. ‘‘ಲೇ...ನೀನು ಒಪ್ಪುವುದಾದರೆ ಒಬ್ಬ ಅದ್ಭುತವಾಗಿ ಮದಿರಂಗಿ ಹಚ್ಚುವವನನ್ನು ನಾನು ನೋಡಿಟ್ಟಿದ್ದೇನೆ....’’
‘‘ಯಾರೆ ಅವನು? ನಿನ್ನ ಮಿಂಡನ?...’’ ಜುಬ್ಬಿ ಅವಳ ಸೊಂಟಕ್ಕೆ ಚಿವುಟಿದಳು.
‘‘ತಾಹಿರನ ತಂದೆ, ತಾಯಿಗೆ ಗೊತ್ತಾಗಬಾರದು...ಗೆಳತಿಯ ಮನೆಗೆ ಹೋಗಿ ಮದಿರಂಗಿ ಇಡುವುದು ಅಂತ ಹೇಳಬೇಕು...ನಿಮಗೆಲ್ಲ ಓಕೆ ಆದ್ರೆ ಸರಿ...’’
 ಎಲ್ಲರೂ ‘ಓಕೆ’ ಅಂದರು. ಇಂತಹ ಸಾಹಸಗಳೆಂದರೆ ತಾಹಿರಾ ಮತ್ತು ಗೆಳತಿಯರಿಗೆ ತುಂಬಾ ಇಷ್ಟ. ಪ್ರತಿ ಶುಕ್ರವಾರ ಮಧ್ಯಾಹ್ನ ಕ್ಲಾಸಿಗೆ ಚಕ್ಕರ್ ಹಾಕಿ ಆಡ್‌ಲ್ಯಾಬ್ಸ್‌ನಲ್ಲಿ ಪಿಕ್ಚರ್ ನೋಡುವವರು. ಶುಕ್ರವಾರ ಅವರು ಬುರ್ಖಾ ಧರಿಸಿ ಬಂದರು ಎಂದರೆ, ಅವರ ಕ್ಲಾಸ್‌ಮೇಟ್‌ಗಳಾದ ಆಸಿಫ್, ಮಹಮ್ಮದ್ ಇವರಿಗೆಲ್ಲ ಕೂಡಲೇ ಅರ್ಥವಾಗಿ ಬಿಡುತ್ತಿತ್ತು. ಇವರದೇನೋ ವಿಶೇಷ ಕಾರ್ಯಕ್ರಮ ಇದೆ ಎಂದು. ಕಾಲೇಜಿನುದ್ದಕ್ಕೂ ಇಂತಹ ಹತ್ತು ಹಲವು ಸಾಹಸಗಳು ಮಾಡಿ ತಂದೆ ತಾಯಿ, ಗೆಳೆಯರಿಂದ ಬೈಗಳು ತಿನ್ನುತ್ತಾ ಬಂದ ಹುಡುಗಿಯರ ಗುಂಪು ಅದು.

ಕೊನೆಗೂ ಮದಿರಂಗಿ ವಿಷಯದಲ್ಲಿ ಎಲ್ಲರೂ ಜಮೀಳಾ ಮಾತಿಗೆ ಒಪ್ಪಿದರು. ತಾಹಿರಾ ತನ್ನ ತಾಯಿಯ ಒಪ್ಪಿಗೆಯನ್ನು ಪಡೆದಳು. ಕಾರು ಚಲಾಯಿಸುವುದು ಜಮೀಳಾ ಎಂದಾಯಿತು. ತಾಹಿರಾ, ಜುಬ್ಬಿ ಹಿಂದಿನ ಸೀಟು ಏರಿದರು. ಕಾರು ನೇರವಾಗಿ, ಸಿಟಿಸೆಂಟರ್ ಮಾಲ್ ಮುಂದೆ ನಿಂತಿತು. ಜಮೀಳಾ, ಜುಬ್ಬಿ, ತಾಹಿರಾ ಮೂವರು ಮಾಲ್‌ನ ಗ್ರೌಂಡ್ ಫ್ಲೋರ್‌ಗೆ ಬಂದರು. ನೋಡಿದರೆ ಅಲ್ಲೇ ಒಂದು ಮೂಲೆಯಲ್ಲಿ ಒಬ್ಬ ತರುಣ ಕೂತಿದ್ದ. ಮೂವರು ಆ ಕಡೆಗೆ ಜರಗಿದರು. ಮೊದಲು ಅವನನ್ನು ನೋಡಿದ್ದು ತಾಹಿರಾ. ಬಲಿಷ್ಠ ಮೈಕಟ್ಟಾದರೂ ಮುಖದಲ್ಲೊಂದು ಮುಗ್ಧ ಕಳೆ. ಚಿಟ್ಟೆಯ ರೆಕ್ಕೆಯಂತೆ ಪಟಪಟಿಸುವ ರೆಪ್ಪೆಗಳ ಮರೆಯಲ್ಲಿರುವ ಅವನ ವಿಶಾಲ ಕಣ್ಣಿನ ಆಳ ಅವಳನ್ನು ಅವಳನ್ನು ಸೆಳೆದಂತಾಯಿತು. ಚಿಗುರು ಮೀಸೆ, ಮತ್ತು ಚಿಗುರು ಗಡ್ಡ! ಅವನು ಪ್ರಶ್ನಾರ್ಥಕವಾಗಿ ಅವರೆಡೆಗೆ ನೋಡಿದ್ದೇ ಜಮೀಳಾ ಅವನೆಡೆಗೆ ಮುಗುಳ್ನಗೆ ಚೆಲ್ಲಿದಳು. ಅವನು ತನ್ನ ಮುಂದೆ ಬಣ್ಣ ಬಣ್ಣದ ಮಂದಿರಂಗಿ ವಿನ್ಯಾಸಗಳನ್ನು ಹರಡಿ ಕುಳಿತಿದ್ದ. ಜಮೀಳಾ ಆ ವಿನ್ಯಾಸದ ಕಡೆಗೆ ಕಣ್ಣಾಯಿಸಿದಳು. ತಾಹಿರಾ ಅವನನ್ನು ಇದೀಗ ಇನ್ನಷ್ಟು ಹತ್ತಿರದಲ್ಲಿ ನೋಡುತ್ತಿದ್ದಳು. ಬಲಿಷ್ಟ ತೋಳುಗಳು. ಅದಕ್ಕೆ ಪೂರಕವಾಗಿ ನೀಲಿ ಜೀನ್ಸ್ ಮತ್ತು ಬೂದು ಟೀಶರ್ಟ್ ಧರಿಸಿದ್ದ. ಅವಳು ಅವನ ಮುಂದಿರುವ ಮಣೆಯಲ್ಲಿ ಕುಳಿತಳು. ಅಕ್ಕಪಕ್ಕ ಜುಬ್ಬಿ, ಜಮೀಳಾ ಕೂತರು. ತಾಹಿರಾ ಕೈ ಚಾಚಿದಳು. ಅವನು ತನ್ನ ವಿಶಾಲ ಕೈಗಳಿಂದ ಅವಳ ಕೈಗಳನ್ನು ತೆಗೆದುಕೊಂಡ. ಅವಳ ಬರಿಗೈಯನ್ನು ಮೆಲ್ಲಗೆ ಸವರಿದ. ಅವಳಿಗೆ ಒಂದು ಸಣ್ಣ ಮುಜುಗರ. ಯಾಕೋ ಕೈಯನ್ನು ಹಿಂದೆಗೆಯಲು ಪ್ರಯತ್ನಿಸಿದಳು. ಆದರೆ ಅವನು ಅದನ್ನು ಬಿಗಿಯಾಗಿ ಹಿಡಿದಿದ್ದ. ನಿಧಾನಕ್ಕೆ ಅವನು ಅವಳ ಕೈಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡ. ಅವಳಿಗೆ ಮೈಯೆಲ್ಲ ಸಣ್ಣಗೆ ಕಂಪಿಸಿದ ಅನುಭವ. ಆದರೆ ಅವನು ಇದನ್ನೆಲ್ಲ ಗಮನಿಸಿದಂತಿಲ್ಲ. ಮದಿರಂಗಿಯ ಟ್ಯೂಬನ್ನು ತೆಗೆದುಕೊಂಡ. ನೋಡನೋಡುತ್ತಿದ್ದಂತೆ ಮರಗಿಡ, ಬಳ್ಳಿ, ಹೂವುಗಳು ಅವಳ ಅಂಗೈಯಲ್ಲಿ ಅರಳತೊಡಗಿದವು. ಮೂವರು ಹುಡುಗಿಯರು ಅದನ್ನು ಅಚ್ಚರಿಗಣ್ಣಲ್ಲಿ ನೋಡುತ್ತಿದ್ದರು. ಗದ್ದಲಗಳಿಂದ ತುಂಬಿದ ಆ ಮಾಲ್‌ನಲ್ಲಿ ಆ ಮದಿರಂಗಿ ಹಚ್ಚುವ ಅಷ್ಟೂ ಸಮಯ ಗಾಢವಾದ ವೌನ ಕವಿದು ಬಿಟ್ಟಿತ್ತು. 

ಇದ್ದಕ್ಕಿದ್ದಂತೆಯೇ ಅವನು ‘‘ಸರಿ, ಆಯ್ತು’’ ಎಂದಾಗ ಒಮ್ಮೆಲೆ ಯಾವುದೋ ಲೋಕದಿಂದ ಎಸೆಯಲ್ಪಟ್ಟವರಂತೆ ಆ ಮೂವರು ಹುಡುಗಿಯರು ಬೆಚ್ಚಿದರು. ಆಮೇಲೆ ಯಾರಲ್ಲೂ ಮಾತುಗಳಿಲ್ಲ. ತಾಹಿರಾಳ ಹಣೆ ತುಂಬಾ ಬೆವರು. ಅವನ ತೊಡೆ ಮೇಲಿದ್ದ ಕೈಯನ್ನು ಎತ್ತಲು ಹೋದರೆ ಅದು ಅಲ್ಲಿಗೇ ಅಂಟಿದಂತಿತ್ತು. ಜುಬ್ಬಿ ಮೆಲ್ಲಗೆ ಆ ಕೈಯನ್ನು ಎತ್ತಿ ತನ್ನ ಕೈಗೆ ತೆಗೆದುಕೊಂಡಳು. ಮದಿರಂಗಿಯ ಜೊತೆ ಜೊತೆಗೇ ಅವಳು ಮದುಮಗಳಂತೆ ನಾಚಿಕೊಂಡಳು. ಅವಳ ಮುಖವಿಡೀ ಕೆಂಪಾಗಿತ್ತು. ಜಮೀಳಾ ಕಾರು ಕೀ ಯೊಂದಿಗೆ ಮುಂದೆ ಹೊರಟಳು. ಜುಬ್ಬಿ ಮತ್ತು ತಾಹಿರಾ ನಿಧಾನಕ್ಕೆ ಹೊರಡಲು ಸಿದ್ಧರಾದರು. ಮದಿರಂಗಿ ಹಚ್ಚಿದ ಎರಡೂ ಕೈಗಳನ್ನೂ ತಾಹಿರಾ ಜೋಪಾನ ಮಾಡಿದಳು. ಸುಮಾರು ಅರ್ಧ ಗಂಟೆ ಕೂತಿದ್ದರಿಂದಲೋ ಏನೋ, ತಾಹಿರಾಳ ಕಾಲು ಜುಮುಗುಡುತ್ತಿತ್ತು. ಅವನ ತೊಡೆಯ ಬಿಸಿ ಅಂಗೈಯ ಹಿಂದೆ ಇನ್ನೂ ಉಳಿದು ಬಿಟ್ಟಿದೆ ಅನ್ನಿಸಿತು. ಇನ್ನೇನು ಸಿಟಿಸೆಂಟರ್ ಮಾಲ್‌ನಿಂದ ಹೊರಗೆ ಹೆಜ್ಜೆಯಿಡಬೇಕು ಎನ್ನುವಷ್ಟರಲ್ಲಿ, ತಾಹಿರಾ ಕೇಳಿದಳು ‘‘ಅವನು ನನ್ನೆಡೆಗೆ ನೋಡುತ್ತಿದ್ದಾನೆಯೇ...?’’ ತಪ್ಪಿ ಅವಳ ಬಾಯಿಯಿಂದ ಮಾತು ಉದುರಿ ಬಿಟ್ಟಿತ್ತು.
‘‘ಯಾರೆ?’’ ಜುಬ್ಬಿ ಕೇಳಿದಳು.
ಉತ್ತರಕ್ಕೆ ಕಾಯದೆ ತಾಹಿರಾ ತಿರುಗಿ ನೋಡಿದಳು. ದೂರದಲ್ಲಿ ಅವನು, ಹೌದು ಅದು ಅವನೇ...ಬಾಗಿ, ಅದು ಯಾವುದೋ ಹುಡುಗಿಗೆ ಮದಿರಂಗಿ ಹಚ್ಚುವುದರಲ್ಲಿ ತನ್ಮಯವಾಗಿದ್ದ.
ಒಮ್ಮೆಲೆ ಗೊಂದಲಗೊಂಡ ತಾಹಿರಾ ಜುಬ್ಬಿಯ ಕಡೆಗೆ ನೋಡಿದಳು. ಅವಳ ದೃಷ್ಟಿ ಇನ್ನೆಲ್ಲೋ ಇತ್ತು. ತಾಹಿರಳಿಗೇಕೋ ಅಳು ಉಮ್ಮಳಿಸಿ ಬಂದಂತಾಯಿತು. ಜುಬ್ಬಿಗೆ ಗೊತ್ತಾಗಿ ಬಿಡಬಹುದು ಎಂದು ಅದನ್ನೇ ಅಲ್ಲಿಗೇ ನುಂಗಿಕೊಂಡಳು. ಅಷ್ಟರಲ್ಲಿ ಜಮೀಳಾ ಓಡೋಡಿಕೊಂಡು ಬಂದಳು.
‘‘ಲೇ...ನಿನ್ನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆಯಂತೆ....ನಿನ್ನ ಭಾವಿ ಗಂಡ ಲೈನಲ್ಲಿದ್ದಾನೆ...ತೆಗೆದುಕೊ’’ ಏದುಸಿರು ಬಿಡುತ್ತಾ ನುಡಿದಳು. ಆದರೆ ಮದಿರಂಗಿ ಹಚ್ಚಿದ ಎರಡೂ ಕೈಗಳು ಆ ಮೊಬೈಲ್ ಎತ್ತುವುದಕ್ಕೆ ಅಸೃಶ್ಯವಾಗಿವೆ. ಜುಬ್ಬಿ ಮೊಬೈಲ್‌ನ್ನು ತಾಹಿರಾಳ ಕಿವಿಗಿಟ್ಟಳು.
‘‘ಹಲೋ...ಅಸ್ಸಲಾಂ ಅಲೈಕುಂ...’’ ಎಂದು ಹೇಳುವುದಕ್ಕೆ ಪ್ರಯತ್ನಿಸಿದಳು ತಾಹಿರಾ. ಯಾಕೋ ಧ್ವನಿಯೇ ಹೊರಡುತ್ತಿಲ್ಲ. ‘‘ಯಾಕೆ ಆರೋಗ್ಯ ಸರಿಯಿಲ್ವಾ...’’ ಆ ಕಡೆಯಿಂದ ಭಾವೀ ಪತಿಯ ಮೃದು ಮಾತು ಕೇಳಿದ್ದೇ ತಾಹಿರಾ ಗಳಗಳನೆ ಅಳ ತೊಡಗಿದಳು.

1 comment:

  1. ಬಶೀರ್‍ ಜೀ ಕಥೆಯ ನಿರೂಪಣೆ ತುಂಬಾ ಇಷ್ಟವಾಯ್ತು ಆದರೆ,ಅದೇಕೋ ತೀರಾ ಸ್ಪಷ್ಟವಾಗಿ ಅರ್ಥವಾಗುತ್ತಿಲ್ಲ....ಮದುಮಗಳಿಗೂ ಆ ಮೆಹಂದಿ ಹಚ್ಚುವವನಿಗೂ ಮೊದಲೇ ಪರಿಚಯವಿತ್ತೇ ಅಥವಾ ಅದು ಮೊದಲ ಸಲದ ಆಕರ್ಶಣೆ,ಗೊಂದಲಗಳೋ...ದಯವಿಟ್ಟು ತಿಳಿಸಿ..

    ನಮಸ್ತೆ...

    ReplyDelete