Tuesday, April 26, 2011
ಸಂತನ ಇನ್ನಷ್ಟು ಕತೆಗಳು....
ದೊಡ್ಡ ಮರ!
ಆಶ್ರಮದ ಆವರಣದಲ್ಲಿದ ಒಂದು ದೊಡ್ಡ ಮರ...ಗಾಳಿಗೆ ಉರುಳಿ ಬಿತ್ತು.
ಅದು ಬೀಳುವಾಗ ಸುತ್ತಮುತ್ತಲಿನ ಸಣ್ಣ ಪುಟ್ಟ ಮರಗಿಡಗಳೂ ಮುರಿದು ಬಿದ್ದವು.
ಸಂತ ಅದನ್ನು ತೋರಿಸಿ ಶಿಷ್ಯರಿಗೆ ಹೇಳಿದ
‘‘ನನ್ನಿಂದ ದೂರ ನಿಲ್ಲಿ ಎಂದು ಯಾವತ್ತೂ ನಿಮಗೆ ಯಾಕೆ ಎಚ್ಚರಿಸುತ್ತಿದ್ದೆ ಎನ್ನುವುದು ಈಗಲಾದರೂ ತಿಳಿಯಿತೆ?’’
ಜ್ಞಾನ
ಒಬ್ಬ ಶಿಷ್ಯ ತನ್ನ ತಿಳುವಳಿಕೆಯ ಕುರಿತಂತೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ತಿರುಗುತ್ತಿದ್ದ.
ಒಂದು ದಿನ ಸಂತ ಅವನನ್ನು ಕರೆದು ಕೇಳಿದ
‘‘ಬೆಳಕನ್ನು ತೋರಿಸು...ಎಲ್ಲಿದೆ....?’’
‘‘ಎಲ್ಲೆಲ್ಲೂ ಬೆಳಕಿದೆ...’’ ಶಿಷ್ಯ ವಿವರಿಸುವ ಪ್ರಯತ್ನ ಮಾಡಿದ.
‘‘ಬೆಳಕೆಲ್ಲಿ ಕಾಣುತ್ತಿದೆ? ಬೆಳಕಿನ ಮೂಲಕ ಮರ, ಗಿಡ, ಮನೆಗಳನ್ನು ಕಾಣುತ್ತಿದ್ದೇವೆಯೇ ಹೊರತು...ಬೆಳಕೆಲ್ಲಿ ಕಾಣುತ್ತಿದೆ?’’ ಸಂತ ಕೇಳಿದ.
ಶಿಷ್ಯರು ವೌನವಾದ.
ಸಂತ ಹೇಳಿದ ‘‘ನಮ್ಮ ಜ್ಞಾನ ಬೆಳಕಿನಂತೆ ಉಳಿದವುಗಳನ್ನು ಕಾಣಿಸಬೇಕೇ ಹೊರತು, ತನ್ನನ್ನು ತಾನು ಕಾಣಿಸಬಾರದು’’
ಊರು
ಆತನೊಬ್ಬ ಫಕೀರ.
ಹೀಗೆ ನಡೆಯುತ್ತಾ ಒಂದು ಊರನ್ನು ತಲುಪಿದ.
ಅಲ್ಲಿಯ ಜನರು ಕೇಳಿದರು ‘‘ನಿನ್ನ ಊರು ಯಾವುದು?’’
ಫಕೀರ ಹೇಳಿದ ‘‘ಅದನ್ನು ಹುಡುಕುತ್ತ ನಡೆಯುತ್ತಿದ್ದೇನೆ...’’
ಎಂದವನೇ ಮುಂದಕ್ಕೆ ಹೆಜ್ಜೆ ಹಾಕಿದ.
ಮನೆ
‘‘ಗುರುಗಳೇ ಶಿಕ್ಷಣ ಎಂದರೇನು?’’
‘‘ಅದೊಂದು ಪಯಣ’’
‘‘ಅದು ನಿಲ್ಲುವುದು ಯಾವಾಗ?’’
‘‘ನಾವು ನಮ್ಮ ಮನೆಯನ್ನು ಕಂಡುಕೊಂಡಾಗ. ಆದರೆ ದುರದೃಷ್ಟವಶಾತ್ ಅಂತಹದೊಂದು ಮನೆಯಿರುವುದು ನನ್ನ ಗುರುಗಳಿಗಾಗಲಿ, ನನಗಾಗಲಿ ಈವರೆಗೆ ತಿಳಿದು ಬಂದಿಲ್ಲ’’
ಹುಡುಕಾಟ
ಒಬ್ಬ ದೇವರನ್ನು ಹುಡುಕುತ್ತಾ ಸಂತನ ಬಳಿ ಬಂದ.
ಕೇಳಿದ ‘‘ಗುರುಗಳೇ ನಾನು ದೇವರನ್ನು ಹುಡುಕುತ್ತಿದ್ದೇನೆ...ನನಗೆ ದೇವರನ್ನು ಕಾಣಿಸಬಹುದೇ?’’ ಸಂತ ನಕ್ಕು ಆತನನ್ನು ಆಶ್ರಮದ ಕೆರೆಯ ಬಳಿ ಕೊಂಡೊಯ್ದ.
ಕೈ ತೋರಿಸಿ ಕೇಳಿದ ‘‘ಆ ಕೆರೆಯಲ್ಲಿರುವ ಮೀನು ಏನನ್ನು ಹುಡುಕುತ್ತಿವೆ ಗೊತ್ತೆ?’’ ಆತ ಪ್ರಶ್ನಾರ್ಥಕವಾಗಿ ನೋಡಿದ.
ಸಂತ ಹೇಳಿದ ‘‘ಆ ಮೀನುಗಳು ನೀರೆಲ್ಲಿದೆ ಎನ್ನುವುದನ್ನು ಹುಡುಕುತ್ತಿವೆ’’
ನೆರಳು
ರಣ ಬಿಸಿಲು.
ಎಲ್ಲರೂ ಆಶ್ರಮದ ಅಂಗಳದಲ್ಲಿರುವ ಮರದಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಇದ್ದಕ್ಕಿದ್ದಂತೆಯೇ ಶಿಷ್ಯನೊಬ್ಬ ಕೇಳಿದ ‘‘ಗುರುಗಳೇ, ನೆರಳೇಕೆ ಇಷ್ಟು ತಂಪಾಗಿದೆ?’’
ಸಂತ ತಂಪಾಗಿ ಹೇಳಿದ ‘‘ಯಾಕೆಂದರೆ, ಬಿಸಿಲು ತುಂಬಾ ಬಿಸಿಯಾಗಿದೆ’’
ಆಸ್ತಿ
‘‘ಗುರುಗಳೇ...ಮನುಷ್ಯ ಕಳೆದುಕೊಳ್ಳಲೇ ಬಾರದಂತಹ ಆಸ್ತಿ ಯಾವುದು...’’ ಶಿಷ್ಯ ಕೇಳಿದ.
‘‘ನಾಚಿಕೆ’’
‘‘ನಾಚಿಕೆಯನ್ನು ಕಳೆದುಕೊಂಡ ಮನುಷ್ಯ, ಎಲ್ಲವನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ’’ ಗುರುಗಳು ಹೇಳಿದರು.
Subscribe to:
Post Comments (Atom)
ಅರ್ಥ ಪೂರ್ಣವಾಗಿದೆ , ಹಂಚಿದಕ್ಕೆ ಧನ್ಯವಾದಗಳು
ReplyDeletebasheer kaaka neevu nijavagiyoo nammoorina bodilaire...
ReplyDeleteಸಲೀಂ...ನನ್ನ ಗುಜರಿ ಅಂಗಡಿಯ ಗಿರಾಕಿಯಾಗಿರೂದಕ್ಕೆ ಸ್ವಾಗತ...
ReplyDeletegirakige innastu sarakugalu bekaagive...yaavaga koduttheeri...?
ReplyDelete