Saturday, May 7, 2011

ಅನಿ ಮತ್ತು ದೇವರು!
















ಈ ಅನಿ ನನ್ನ ಆತ್ಮೀಯರೊಬ್ಬರ ಮಗ. ಮೊನ್ನೆ ಫೇಸ್‌ಬುಕ್‌ನಲ್ಲಿ ಅಚಾನಕ್ಕಾಗಿ ಸಿಕ್ಕಿ ‘ಹಾಯ್ ಬಶೀರ್ ಮಾಮ’ ಅಂದ. ಚೆಂದವಾಗಿ ಚಿತ್ರ ಬಿಡಿಸುವ, ಡ್ಯಾನ್ಸ್ ಕಲಿತಿರುವ ಅನಿ ಈಗ ದೂರದ ಸಿಂಗಾಪುರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾನೆ. ಫೇಸ್‌ಬುಕ್‌ನಲ್ಲೇ ಒಂದಿಷ್ಟು ಮಾತನಾಡಿದೆವು. ತಾನೇ ಬರೆದ ಒಂದು ಇಂಗ್ಲಿಷ್ ಥೀಸಿಸ್‌ನ್ನು ಕಳುಹಿಸಿದ. ನನ್ನ ಇಂಗ್ಲಿಷ್ ಅಷ್ಟಕ್ಕಷ್ಟೇ. ಆದರೂ ಅದನ್ನು ಓದಿದೆ. ‘ಅಪ್ಪಟ ಮಾನವೀಯ ಸಂದೇಶ’ವೊಂದು ಆ ಥೀಸಿಸ್‌ನಲ್ಲಿ ಬಚ್ಚಿಟ್ಟುಕೊಂಡಿರುವುದು ಮತ್ತು ನಾನು ‘ಮಗು’ವೆಂದು ಭಾವಿಸಿದ ಅನಿ ಇದನ್ನೆಲ್ಲ ಯೋಚಿಸುತ್ತಿರುವುದು ನೋಡಿ ನನಗೆ ಅಚ್ಚರಿಯಾಯಿತು. ಕನ್ನಡಕ್ಕೆ ತರಲು ಪ್ರಯತ್ನಿಸಿ ಕೈ ಬಿಟ್ಟೆ. ಈ ಅನಿ ಅಥವಾ ಅನಿರುದ್ಧ ಹಿಂದೊಮ್ಮೆ ತಮಾಷೆಗೆಂದು ಫೋನಿನಲ್ಲಿ ‘‘ಹಲೋ...ಮಗು, ನಾನು ದೇವರು ಮಾತನಾಡುತ್ತಿದ್ದೇನೆ’’ ಎಂದು ನನ್ನನ್ನು ದಂಗು ಬಡಿಸಿದ್ದ. ಆ ದಿನ ರಾತ್ರಿ ಯಾಕೋ ನಾನು ದಟ್ಟ ವಿಷಾದದಲ್ಲಿ ಒಂದು ಕವಿತೆ ಬರೆದಿದೆ.(ಸುಮಾರು ಹತ್ತು ವರ್ಷದ ಹಿಂದೆ). ಬಳಿಕ ಅದು ಪಿ. ಲಂಕೇಶರ ‘ಲಂಕೇಶ್ ಪತ್ರಿಕೆ’ಯಲ್ಲ್ಲಿ ಪ್ರಕಟಗೊಂಡಿತು. ಮೊನ್ನೆ ಫೇಸ್‌ಬುಕ್‌ನಲ್ಲಿ ಅನಿ ಆ ಕವಿತೆಯನ್ನು ನೆನೆಸಿಕೊಂಡ. ನಾನು ಎರಡು ವರ್ಷ ಕೊಡಗಿನಲ್ಲಿದ್ದಾಗ ಅನಿ ಮತ್ತು ಅವನ ತಂದೆ, ತಾಯಿಯರು ನನಗೆ ತೋರಿಸಿದ ಪ್ರೀತಿಯ ನೆನಪಿಗಾಗಿ ಆ ಕವಿತೆಯನ್ನು ಇಲ್ಲಿ ನಿಮ್ಮಾಂದಿಗೆ ಹಂಚಿಕೊಂಡಿದ್ದೇನೆ. ಕವಿತೆಯ ಹೆಸರು ‘ಅನಿ ಮತ್ತು ದೇವರು’.


ನೀನು ನನ್ನ ದೇವರೇ
ಯಾಕಾಗಬಾರದಿತ್ತು ಎಂದು
ಒಂದು ರಾತ್ರಿಯಿಡೀ ಅತ್ತು ಬಿಟ್ಟೆ!

ನನ್ನೆದೆಯಲ್ಲೊಂದು ಮಗು
ತಾಯ ಹಾಲಿಲ್ಲದೆ
ಬಾಯಾರಿ ಕಾಯುತ್ತಿತ್ತು
ಮಗುವೇ...ಎಂಬ ಕರೆಗೆ ತಲ್ಲಣಿಸಿದ
ಮಗುವಿನ ದುರಾಸೆಯನ್ನು
ಕ್ಷಮಿಸಿ ಬಿಡು

ಅಸಂಖ್ಯ ಹಗಲುಗಳನ್ನು ತೋಡಿ
ದಫನಗೈದ ನನ್ನ ದೇವರುಗಳನ್ನು ನೋಡು
ಸ್ಮಶಾನದಂತಿರುವ ಇರುಳಲ್ಲಿ
ನಿನ್ನ ಕರೆ
ಮಾತ್ರ ಆಸರೆ!

ಸದ್ದಡಗಿದ ನನ್ನ ಉಲ್ಲಾಸಗಳು
ವೌನದ ತೆಕ್ಕೆಯಲ್ಲಿ
ಜೋಲಾಡುವ ಬಾವಲಿಗಳು
ಹಗಲ ಯಜಮಾನಿಕೆಯನ್ನು ತಿರಸ್ಕರಿಸಿ
ರಾತ್ರಿಯನ್ನು ತಬ್ಬಿಕೊಂಡ ಬಡಪಾಯಿಗಳು

ಇನ್ನೆಂದಾದರೊಮ್ಮೆ
ಬರಬಹುದಾದ ಕರೆಯ
ಅಕ್ಕರೆಗಾಗಿ ಇರುಳ
ಹೊದ್ದುಕೊಂಡು ಸಕಲ ಜಗತ್ತಿನ ಜತೆಗೆ
ಕಾಯುವೆ ಮಗುವೆ....

No comments:

Post a Comment