Monday, April 18, 2011

ಗೆಳೆಯನಿಗೊಂದು ಮುನ್ನುಡಿ.....


ಮುಂಬಯಿಯ ಕನ್ಡಡದ ಓಣಿಗಳಲ್ಲಿ ನನ್ನನ್ನು ಕೈ ಹಿಡಿದು ನಡೆಸಿದ ಸಾ. ದಯಾ ಅಥವಾ ದಯಾನಂದ ಸಾಲಿಯಾನ್ ನನಗೆ ಬರೇ ಗೆಳೆಯ ಮಾತ್ರವಲ್ಲ. ನನ್ನ ಅಣ್ಣ...ನನ್ನ ತಂದೆ...ನನ್ನ ಗುರು ಎಲ್ಲವೂ. ಒಂದು ಮರದ ನೆರಳಿನಂತೆ ಅವನ ಸ್ನೇಹ, ವಾತ್ಸಲ್ಯ ಈಗಲೂ, ಈ ಮಂಗಳೂರಿನ ಸುಡು ಬಿಸಿಲಿನಲ್ಲೂ ನನ್ನನ್ನು ತಂಪಾಗಿಟ್ಟಿದೆ. ಮುಂಬೈ ಬಿಟ್ಟು ಬಂದು 13 ವರ್ಷ ಕಳೆದಿದೆ. ಈಗಲೂ ವಾರಕ್ಕೊಮ್ಮೆಯಾದರೂ ಸಾ. ದಯಾನ ಕರೆ ಬರುತ್ತದೆ. ‘‘ಹೇಗಿದ್ದೀರಾ...ಏನಾದ್ರು ಬರೆದ್ರಾ...’’ ಎಂದು ಕೇಳುವುದನ್ನು ಒಂದು ಕರ್ತವ್ಯವೆಂಬಂತೆ ನಿಭಾಯಿಸುತ್ತಾ ಬರುತ್ತಿದ್ದಾನೆ. ಮೂರು ವರ್ಷಗಳ ಹಿಂದೆ ಸಾ. ದಯಾನ ‘ಒಸರ್’ ಎನ್ನುವ ತುಳು ನಾಟಕಕ್ಕೆ ನಾನು ಮುನ್ನುಡಿ ಬರೆದಿದ್ದೆ. ಮುನ್ನುಡಿಯ ನೆಪದಲ್ಲಿ ನಾನು ಬರೆದದ್ದು ನನ್ನ ಮತ್ತು ದಯಾನ ನಡುವಿನ ಸ್ನೇಹದ ಕುರಿತು. ಅದನ್ನು ನಿಮ್ಮೆದುರು ತೋಡಿಕೊಳ್ಳಬೇಕು ಅನ್ನಿಸಿದೆ. ಆದುದರಿಂದ ಆ ‘ಮುನ್ನುಡಿ’ಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಜೊತೆಗೆ ಸಾ. ದಯಾನ ಒಂದು ಪೋಟೋವನ್ನೂ ಲಗತ್ತಿಸಿದ್ದೇನೆ.ಚಿತ್ರದಲ್ಲಿ ದಯಾ ಮತ್ತು ಅವರ ಬಾಳ ಸಂಗಾತಿ ನಯನ ಮುದ್ದಣಮನೋರಮೆ ರೂಪಕದಲ್ಲಿ ನಟಿಸುತ್ತಿದ್ದಾರೆ.ಆತ್ಮೀ
ದಯಾ,
ಏಕಾಏಕಿ ನೀನು, ನಿನ್ನ ತುಳು ನಾಟಕದ ಪ್ರತಿಯೊಂದನ್ನು ಮುಂದಿಟ್ಟು ಮುನ್ನುಡಿ ಬರೆದುಕೊಡು ಎಂದರೆ ಏನಾಗಬೇಕೋ, ಅದೇ ಆಗಿದೆ. ತುಳು ಸಾಹಿತ್ಯದಲ್ಲಿ (ಮಾತನಾಡುವುದನ್ನು ಬಿಟ್ಟು), ಜೊತೆಗೆ ನಾಟಕ ಕ್ಷೇತ್ರ(ಪ್ರೇಕ್ಷಕನಾಗಿರುವುದನ್ನು ಹೊರತು ಪಡಿಸಿ)ದಲ್ಲಿ ಏನೇನೂ ಮಾಡಿ ಗೊತ್ತಿಲ್ಲದ ನಾನೇ ಈ ಮುನ್ನುಡಿ ಬರೆಯಬೇಕೆನ್ನುವುದು ನಿನ್ನ ಆಸೆಯಾದರೆ, ಸ್ನೇಹಿತ ಎನ್ನುವ ಒಂದೇ ಒಂದು ಅರ್ಹತೆ ಮುನ್ನುಡಿ ಬರೆಯಲು ಸಾಕಾಗುತ್ತದೆಯೆಂದಾದರೆ, ನಾನದನ್ನು ಖಂಡಿತಾ ಬರೆದೇನು.

ನಾನು ಬದುಕಿದ ಐದು ವರ್ಷಗಳ ನನ್ನ ಮುಂಬೈಯಲ್ಲಿ ಮನಸ್ಸಿಗೆ ತಂಪೆನಿಸುವ ನಿನ್ನ ನಗುವೂ ಸೇರಿಕೊಂಡಿದೆ. ಇಷ್ಟು ದಿನಗಳ ಬಳಿಕವೂ ಮುಂಬೈಯ ನೆನಪುಗಳ ‘ಒಸರ್’ ಉಕ್ಕಿ ಬರುತ್ತಲೇ ಇರುವುದಕ್ಕೆ ನೀನು ತೋರಿಸಿದ ಸ್ನೇಹ, ನಿನ್ನ ಮನೆಯಲ್ಲಿ ಅಮ್ಮನ ಕೈಯಿಂದ ಉಂಡ ಕೈ ತುತ್ತು ಕೂಡ ಕಾರಣವಿರಬೇಕು. ಗಡಗುಟ್ಟುವ ರೈಲುಗಳ ಸದ್ದುಗದ್ದಲ, ಮುಖಕ್ಕೆ ರಾಚುವ ಧೂಳು, ಉಸಿರುಗಟ್ಟುವ ಜನಸಂದಣಿಯ ಮಧ್ಯೆ ನಾವು ಒಂದಿಷ್ಟು ಗೆಳೆಯರು ಬಿಡುವು ಮಾಡಿಕೊಂಡು ಕರ್ನಾಟಕ ಸಂಘದಲ್ಲಿ ಕೂತು ನಾಟಕ ನೋಡಿದ್ದು, ನಾಟಕ ಆಡಿದ್ದು, ‘ಗಂಗಾವಿಹಾರ್’ ಹೊಟೇಲ್‌ನ ಮೂಲೆಯೊಂದನ್ನು ಆರಿಸಿ, ಕಟ್ಟಿಂಗ್ ಚಹಾ ಬರುವವರೆಗೆ ನಮ್ಮ ನಮ್ಮ ಕವಿತೆಗಳನ್ನು ಬಿಡಿಸಿ ವಾಚಿಸುತ್ತಾ, ವಾಹ್...ವಾಹ್ ಎಂದು ಒಬ್ಬರ ಬೆನ್ನನ್ನು ಇನ್ನೊಬ್ಬರು ತಟ್ಟಿದ್ದು, ಮುಂಬೈ ಚುಕ್ಕಿ ಸಂಕುಲ ಎಂಬೊಂದು ಸಂಘಟನೆ ಕಟ್ಟಿ, ತಿಂಗಳಿಗೆ ಒಂದಿಷ್ಟು ದುಡ್ಡನ್ನು ಅದಕ್ಕೆ ಹಾಕಿ, ಯಾವನೋ ಒಬ್ಬನ ಮಾತು ಕೇಳಿ ಆತನ ಫೈನಾನ್ಸ್‌ನಲ್ಲಿ ಆ ಹಣವನ್ನಿಟ್ಟು ಮೋಸ ಹೋಗಿ ಪೆಚ್ಚಾಗಿ ನಕ್ಕಿದ್ದು, ಕರ್ನಾಟಕ ಸಂಘದ ಅಖಿಲ ಭಾರತ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತಿರಥ, ಮಹಾರಥರೆಲ್ಲ ತಮ್ಮ ತಮ್ಮ ತಂಡವನ್ನು ಕಟ್ಟಿ ಸ್ಪರ್ಧೆಗಿಳಿದಾಗ ನಿನ್ನ ಸಾರಥ್ಯದಲ್ಲಿ ನಾಟಕದ ಗಂಧಗಾಳಿಯಿಲ್ಲದ ನಾವೊಂದಿಷ್ಟು ಗೆಳೆಯರು ರಂಗಭೂಮಿಯೇರಿ, ಸ್ಪರ್ಧೆಗಿಳಿದು ತೃತೀಯ ಬಹುಮಾನ ಪಡೆದು ರಂಗನಟರೆನಿಸಿ ಕಣ್ಣು ಮಿಟುಕಿಸಿದ್ದು...

ದಯಾ, ಇವುಗಳನ್ನೆಲ್ಲ ಬರೆಯದೆ ನಿನ್ನ ಒಸರ್ ನಾಟಕಕ್ಕೆ ಬರೆಯುವ ನನ್ನ ಮುನ್ನುಡಿ ಪೂರ್ತಿಯಾಗುವುದಿಲ್ಲ. ಈ ನಾಟಕದ ಕೊನೆಯಲ್ಲಿ ಪಾತ್ರವೊಂದು ಹೇಳುವಂತೆ ‘‘ನರಮಾನಿ ಪ್ರತಿ ಒರಿಲಾ ಒಂಜತ್ತ್ ಒಂಜಿ ವಿದಟ್ಟ್ ಒಸರಿಜ್ಜಾಂದಿ ಪೊಟ್ಟುಗ್ಗೆಲ್ ಆದುಪ್ಪುವೆರ್. ಐಕ್ ಒಸರ್ ಕೊರ್ಪಿನ ಶಕ್ತಿ ನಮ್ಮುಲಾಯಿಡುಂಡು ಪನ್ಪಿ ಪಾತೆರ ನಂಕ್ ಕೈ ಮೀರ್ದ್‌ ಪೋಯಿ ಬೊಕ್ಕನೆ ಗೊತ್ತಾಪಿನಿ’’(ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ವಿಧದಲ್ಲಿ ಒಸರಿಲ್ಲದ ಪಾಳುಬಾವಿಯೇ ಆಗಿರುತ್ತಾನೆ. ಅದಕ್ಕೆ ಒಸರ್ ಕೊಡುವ ಶಕ್ತಿ ನಮ್ಮಿಳಗೆಯೇ ಇದೆ ಎನ್ನುವ ಸಂಗತಿ ನಮಗರಿವಾಗುವುದು ಕೈ ಮೀರಿದ ಬಳಿಕವಷ್ಟೇ). ಮುಂಬೈಯಲ್ಲಿದ್ದಷ್ಟು ದಿನ ನನ್ನ ಜೀವ ದ್ರವ ಬತ್ತಿ ಹೋಗದಂತೆ ನೀವೆಲ್ಲ ಜೊತೆಗಿದ್ದಿರಿ. ಎಂಥವರ ಜೀವ ಚೈತನ್ಯವನ್ನೂ ಹೀರಿ ತೆಗೆದು ಪಾಳುಬಾವಿಯಾಗಿಸಬಲ್ಲ ಮುಂಬೈ ಶಹರದಲ್ಲಿ, ಅದೆಷ್ಟೋ ಸಮಯದಿಂದ ಇರುವ ನೀವೆಲ್ಲ, ನಿಮ್ಮ ನಿಮ್ಮ ಜೀವದ್ರವವನ್ನು ಉಳಿಸಿಕೊಂಡು ಬದುಕುತ್ತಿರುವ ರೀತಿ, ಒಳಗೊಳಗೆ ಒಣಗಿಹೋಗುತ್ತಿರುವ ಈ ಮಂಗಳೂರೆಂಬ ಊರಿನಲ್ಲಿ ಬದುಕುತ್ತಿರುವ ನನಗೆ ನಿಜಕ್ಕೂ ಸ್ಫೂರ್ತಿ.

‘ಜಾತ್ರೆಯ ಮರುದಿನ’ ನಿನ್ನ ಮೊದಲ ಕವನ ಸಂಕಲನವಾದರೂ, ಈಗಾಗಲೇ ಹಲವು ಕತೆಗಳನ್ನು ನೀನು ಬರೆದಿದ್ದರೂ ನಿನ್ನ ನಿಜವಾದ ಕ್ಷೇತ್ರ ರಂಗಭೂಮಿಯೇ. ನೀನು ಯಾವುದೋ ದೊಡ್ಡ ನಾಟಕ ಸಂಸ್ಥೆಗಳಲ್ಲಿ ತರಬೇತು ಪಡೆದವನಲ್ಲದಿರಬಹುದು. ಖ್ಯಾತ ನಿರ್ದೇಶಕರ ಗರಡಿಯಲ್ಲಿ ಪಳಗಿದವನೂ ಅಲ್ಲದಿರಬಹುದು. ಆದರೆ ರೈಲಿನ ಓಟದ ಲಯದಿಂದ ನಾಟಕದ ನಡೆಯನ್ನು, ಕಾರ್ಖಾನೆಗಳ ಶಿಳ್ಳೆಯಿಂದ ಸಂಗೀತವನ್ನೂ, ಧಾರಾವಿಯ ಗಲ್ಲಿಗಳಿಂದ ಬದುಕನ್ನು ಗ್ರಹಿಸಿಕೊಂಡವನು. ಮುಂಬೈಯ ರಾತ್ರಿ ಶಾಲೆಗಳ ಪ್ರಾರ್ಥನೆಗಳು ನಿನಗೆ ಬಾಯಿಪಾಠವಿದೆ. ರಾತ್ರಿ ಶಾಲೆಯಿಂದ ಹೊರಬಂದ ನೂರಾರು ನಕ್ಷತ್ರಗಳೇ ನಿನ್ನ ಮುಂಬೈಯ ಸಂಗಾತಿಗಳು. ಒಬ್ಬ ಕತೆಗಾರನಾಗಲು, ಕವಿಯಾಗಲು, ನಾಟಕಗಾರನಾಗಲು ಇದಕ್ಕಿಂತ ಆಚೆ ಇನ್ನೇನು ಬೇಕು? ಅಖಿಲ ಭಾರತ ಮಟ್ಟದ ನಾಟಕ ಸ್ಪರ್ಧೆಯೊಂದಕ್ಕೆ ನೀನು ನಾಟಕ ಮಾಡಲೆಂದು ‘ಗರ್ಭ’ವನ್ನು ಬರೆದು ಸಂಘಟಕರ ಕೈಯಲ್ಲಿಟ್ಟಾಗ, ಅಲ್ಲಿರುವ ನಾಟಕ ನಿರ್ದೇಶಕರೊಬ್ಬರು ‘ಈ ನಾಟಕದಲ್ಲಿ ರಂಗಚಲನೆಗೆ ಅವಕಾಶವೇ ಇಲ್ಲ’ ಎಂದು ಘೋಷಿಸಿ, ಹಸ್ತಪ್ರತಿಯನ್ನು ಕಸದ ಬುಟ್ಟಿಗೆ ಹಾಕಲು ಹೊರಟಾಗ ನೀನು ಒಂದು ರೀತಿ ಹಟದಲ್ಲಿಯೇ ಅವಕಾಶ ಗಿಟ್ಟಿಸಿಕೊಂಡೆ. ಬೇಕಾದರೆ ಒಳ್ಳೆಯ ಕಲಾವಿದರನ್ನು ಹಾಕಿ ಆ ನಾಟಕವನ್ನು ನೀನು ನಿರ್ದೇಶಿಸಬಹುದಿತ್ತು. ಆದರೆ ನಾಟಕದ ಗಂಧಗಾಳಿಯಿಲ್ಲದ ನನ್ನಂತಹ ಕೆಲವು ಪೆದ್ದುಗಳನ್ನು ರಂಗಭೂಮಿ ಹತ್ತಿಸಿದೆ. ‘ಗರ್ಭ’ ನಾಟಕ ನಿರ್ದೇಶಕರು ಹೇಳಿದಂತೆ ಸಂಭಾಷಣೆಯಲ್ಲಿ ಆರಂಭವಾಗಿ ಸಂಭಾಷಣೆಯಲ್ಲಿಯೇ ಮುಗಿಯುವ ನಾಟಕವಾಗಿತ್ತು. ಹಲವು ಚೂರುಗಳನ್ನು ಕೊಲಾಜ್ ತರ ಅಂಟಿಸಿ ನಾಟಕ ಮಾಡಿದ್ದೆ. ಎಲ್ಲ ತರ್ಕಗಳನ್ನು ಮೀರಿದ್ದು ಅದು. ಆದರೆ ನಿನ್ನ ಕೈಯಲ್ಲಿ ಅರಳಿದ ಆ ನಾಟಕ ಹೇಗೆ ಚಲನೆಯನ್ನು ಪಡೆಯಿತು ನೋಡು. ಸುಮಾರು 30ಕ್ಕೂ ಅಧಿಕ ನಾಟಕಗಳಲ್ಲಿ ನಿನ್ನ ‘ಗರ್ಭ’ ತೃತೀಯ ಬಹುಮಾನ ಪಡೆಯಿತು. ಅದೂ ಬಹುಮಾನ ಪಡೆದ ಮುಂಬೈಯ ಏಕೈಕ ನಾಟಕ. ಸಂಗೀತ, ಬೆಳಕಿಗೂ ವಿಶೇಷ ಬಹುಮಾನ.

ನಾನು ಮುಂಬೈಗೆ ಬರುವ ಮೊದಲೇ ನಿನ್ನ ‘ನಕ್ಷತ್ರಗಳನ್ನು ಹಿಡಿಯುವವರು’ ನಾಟಕ ಪ್ರದರ್ಶನಗೊಂಡಿತ್ತು. ಆ ಬಳಿಕ ಹಲವು ಸಂಗೀತ ರೂಪಕಗಳು, ಅನಂತರ ಗರ್ಭ, ತುಳುನಾಟಕಗಳಾದ ಉಬರ್, ಒಸರ್ ಹೀಗೆ...ನೀನೇ ಬರೆದು, ನೀನೇ ನಿರ್ದೇಶಿಸಿ ಮುಂಬೈ ಕನ್ನಡಿಗರ ಮುಂದೆ ಪ್ರದರ್ಶನಕ್ಕಿಟ್ಟೆ. ಅದು ಯಾವ ಧೈರ್ಯವೋ, ಸ್ನೇಹಿತರನ್ನೆಲ್ಲ ನಿನ್ನ ನಾಟಕದ ಪಾತ್ರಧಾರಿಗಳನ್ನಾಗಿ ಮಾಡಿದೆ. ‘‘ದಯಾ ಒಂದಿಷ್ಟು ರಿಹರ್ಸಲ್ ಆದ್ರೂ ಸರಿ ಮಾಡ್ಸೂ...’’ ಎಂದು ಎಚ್ಚರಿಸಿದರೆ ತಣ್ಣಗೆ ನಗುತ್ತಿದ್ದೆ. ನಾಟಕದ ದಿನ ಮಾತ್ರ ಒದ್ದಾಡುತ್ತಿದ್ದೆ. ‘ತಲೆನೋವೂರಿ...’ ಎಂದು ನಿನ್ನ ಸೋಡಾ ಗ್ಲಾಸನ್ನು ಒಮ್ಮೆ ಕಣ್ಣಿಂದ ತೆಗೆದು ಉಜ್ಜಿ, ಹಣೆಯನ್ನೊಮ್ಮೆ ಒತ್ತಿ ಹಿಡಿಯುತ್ತಿದ್ದೆ. ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ ನನಗೆ.

ನಿನ್ನ ಎಲ್ಲ ಅಪ್ರಕಟಿತ ನಾಟಕಗಳನ್ನೂ ನಾನು ಓದಿದ್ದೇನೆ. ಅದರಲ್ಲಿ ಬಾಲಿಶತನವನ್ನು, ಮುಗ್ಧತೆಯನ್ನು, ಪ್ರಾಮಾಣಿಕತೆಯನ್ನು, ಓದುಗನಾಗಿ, ಜೊತೆಗೆ ಪ್ರೇಕ್ಷಕನಾಗಿ ಗುರುತಿಸಿದ್ದೇನೆ. ನಿನ್ನ ನಾಟಕದ ಪಾತ್ರಗಳು ಕತೆಗೆ ತಕ್ಕಂತೆಯೇ ಮಾತನಾಡಬೇಕೆಂದಿಲ್ಲ. ಅದು ತೋಚಿದಾಗ ತೋಚಿದಂತೆ ಮಾತನಾಡುವವುಗಳು. ಅದಕ್ಕೆ ಯಾವ ರಂಗಭೂಮಿಯ, ಕಥೆಯ ನೈಯ್ಗೆಯ ಹಂಗಿಲ್ಲ. ಗಂಭೀರವಾಗಿ ಬದುಕಿನ ಬಗ್ಗೆ ಚರ್ಚಿಸುತ್ತಿರುವ ಪಾತ್ರಗಳು ಏಕಾಏಕಿ ಬಾಲ್ಯವನ್ನು ನೆನೆದು ಅಂಬೆಗಾಲಿಟ್ಟು ನಡೆಯತೊಡಗುತ್ತವೆ. ‘ಗೋರಿ ಗೊಬ್ಬುಗನಾ?’ ಎಂದು ಗೋರಿ ಆಟಕ್ಕೆ ಇಳಿಯುತ್ತವೆ. ‘‘ಮದಿಮೆದ ಗೊಬ್ಬು ಗೊಬ್ಬುಗನಾ?’’ ಎಂದು ಕೇಳಿ ಮದುವೆಯ ಆಟ ಆಡುತ್ತವೆ. ಆದರೆ ಆಟ ಮತ್ತು ಬದುಕು ನಾಟಕದ ಯಾವುದೋ ಒಂದು ಎಳೆಯಲ್ಲಿ ಸಂದಿಸುತ್ತವೆ. ನೀನು ನಿನ್ನ ನಾಟಕಕ್ಕೆ ಆಯ್ಕೆ ಮಾಡಿಕೊಳ್ಳುವ ವಸ್ತುವೂ ಅಂತಹದೇ. ಅದನ್ನು ನಾಟಕ ಮಾಡುವುದಾದರೂ ಹೇಗೆ ಎಂದು ನಿರ್ದೇಶಕನೊಬ್ಬ ತಲೆಕೆಡಿಸಿಕೊಳ್ಳಬೇಕು. ಗರ್ಭ ನಾಟಕ ನಾಲ್ಕು ಪಾತ್ರಗಳ ಒಟ್ಟಾರೆ ಕನವರಿಕೆಗಳು ಅಷ್ಟೆ. ‘ಉಬರ್’ ತುಳು ನಾಟಕವಂತೂ ಒಂದು ಹೆಣ್ಣಿನ ದುರಂತವನ್ನು ವಸ್ತು ಮಾಡಿಕೊಂಡಿದೆ. ಲೈಂಗಿಕವಾಗಿ ಹತಾಶಳಾದ ಹೆಣ್ಣಿನ ಕತೆ ಅದು.ಈ ನಾಟಕವನ್ನು ನೋಡಿ ಹಿರಿಯ ನಟರೊಬ್ಬರು ಇನ್ನೊಂದು ತುಂಬಿದ ಸಭೆಯಲ್ಲಿ ಶ್ಲಾಘಿಸಿದ್ದರೆ, ಇನ್ನೊಬ್ಬ ಹಿರಿಯ ಕವಿಗಳು ನಾಟಕ ನೋಡಿ ‘ಇದು ಸಂಸಾರಸ್ಥರು ನೋಡುವ ನಾಟಕವಲ್ಲ’ ಎಂದು ಕಿಡಿಯಾಗಿದ್ದರು. ಆ ನಾಟಕಕ್ಕೆ ತಮ್ಮ ಸಂಸಾರವನ್ನು ಕರೆದುಕೊಂಡು ಬಂದು ಅವರು ತೀವ್ರ ಮುಜುಗರ ಅನುಭವಿಸಿದ್ದರು.

‘ಒಸರ್’ ಇಂತಹದೇ ಒಂದು ಸಂಕೀರ್ಣ ನಾಟಕ. ಮೇಲ್ನೋಟಕ್ಕೆ ರಘು ಎನ್ನುವ ಯುವಕನ ಲೈಂಗಿಕ ಶೂನ್ಯತೆಯ ಸುತ್ತ ಸುತ್ತಿದರೂ, ಮೂರು ಜೀವಗಳು ಬದುಕಲು ಬೇಕಾದ ಜೀವದ್ರವವನ್ನು ಉಳಿಸಿಕೊಳ್ಳಲು ಒದ್ದಾಡುವುದೇ ಕತೆಯ ವಸ್ತು. ಕತೆಯ ಪ್ರಧಾನ ಪಾತ್ರವಾದ ‘ಆಕೆ’ಗೆ ಕಿರಣ್ ಎನ್ನುವ ತಮ್ಮನೇ ಬದುಕಿನ ಜೀವದ್ರವ. ಕಿರಣನಿಗೂ ಅಷ್ಟೇ. ತನ್ನವರೆಂದು ಇರುವುದು ಆಕೆಯೊಬ್ಬಳೇ. ಇಬ್ಬರಿಗೂ ಒಬ್ಬರನ್ನೊಬ್ಬರು ಕಳೆದುಕೊಳ್ಳುವ ಭಯ. ಯಾಕೆಂದರೆ ಹುಟ್ಟಿನ ಮೂಲಕ ಅವರಿಬ್ಬರು ಅಕ್ಕ-ತಮ್ಮ ಎಂದು ಗುರುತಿಸಿಕೊಂಡವರಲ್ಲ. ಮುಂಬೈಯ ಶಹರದ ಒಂದು ಆಕಸ್ಮಿಕದಲ್ಲಿ ಪರಸ್ಪರ ಸಂಧಿಸಿದವರವರು. ಜೊತೆಗೆ ಇವರನ್ನು ಸುತ್ತಿಕೊಂಡಿರುವ ಇನ್ನೊಂದು ಪಾತ್ರ ರಘು. ತಾನೊಬ್ಬ ಪಾಳುಬಾವಿ, ಷಂಡ ಎಂದು ತಿಳಿದುಕೊಂಡ ರಘುವಿನಲ್ಲಿ ಮತ್ತೆ ಜೀವದ್ರವವನ್ನು ಉಕ್ಕಿಸುತ್ತೇನೆ ಎಂದು ಹೊರಡುವ ಆಕೆ, ಕೊನೆಯಲ್ಲಿ ಆತನನ್ನೇ ಕಳೆದುಕೊಳ್ಳಬೇಕಾಗುತ್ತದೆ. ಚೂರು ಚೂರಾಗಿ ಬಿದ್ದ ಘಟನೆಗಳನ್ನೆಲ್ಲ ಇಲ್ಲಿ ಕತೆಗಾರನ ಪಾತ್ರಧಾರಿ ಒಂದೆಡೆ ಸೇರಿಸಲು ಪ್ರಯತ್ನಿಸುತ್ತಾನೆ.

ದಯಾ, ನೀನು ಬಳಸಿದ ತುಳು ಭಾಷೆ ಈ ನಾಟಕದ ಹೆಗ್ಗಳಿಕೆಗಳಲ್ಲಿ ಒಂದು. ತುಳು ಮಣ್ಣಿನ ಸೊಗಡಿನೊಂದಿಗೆ ಇಲ್ಲಿನ ಸಂಭಾಷಣೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ನಾಟಕವನ್ನು ಮುನ್ನಡೆಸಲು ನೀನು ಅಲ್ಲಲ್ಲಿ ತುಳು ರೂಪಕಗಳನ್ನೇ ಬಳಸಿದ್ದಿ. ದೂರದ ಶಹರದಲ್ಲಿದ್ದರೂ, ನಿನ್ನ ಸೃಜನಶೀಲತೆಯ ತಾಯಿ ಬೇರು ದಕ್ಷಿಣ ಕನ್ನಡದ ಮಣ್ಣನ್ನೇ ಅರಸಿಹೋಗಿದೆ ಎನ್ನುವುದನ್ನು ಇದು ಹೇಳುತ್ತದೆ.

ನಿನಗೆ ನಾಟಕ ಹವ್ಯಾಸವೇ ಹೊರತು ವೃತ್ತಿಯಲ್ಲ. ಎಂದೂ ನೀನದನ್ನು ಹಮ್ಮು, ಬಿಮ್ಮು, ಪ್ರಸಿದ್ಧಿ, ಸುದ್ದಿಗಳ ಮಾಧ್ಯಮವಾಗಿ ಸ್ವೀಕರಿಸಿದವನಲ್ಲ. ಹಲವು ಗಡಿಬಿಡಿ, ಒತ್ತಡಗಳ ನಡುವೆ ಈ ನಾಟಕದ ನೆರಳಲ್ಲಿ ಒಂದಿಷ್ಟು ನಿಂತು, ವಿಶ್ರಮಿಸಿ ನಿಟ್ಟುಸಿರನ್ನು ಚೆಲ್ಲುವುದಷ್ಟೇ ಗುರಿ ಮಾಡಿಕೊಂಡವನು. ಆ ಮೂಲಕ ಬದುಕಿನ ಒಸರ್ ಬತ್ತಿ ಹೋಗದಂತೆ ನೋಡಿಕೊಳ್ಳುತ್ತಿರುವವನು. ಒಸರ್ ಅಂತಹ ಪ್ರಯತ್ನಗಳಲ್ಲಿ ಒಂದು ಎಂದು ನಾನು ತಿಳಿದುಕೊಂಡಿದ್ದೇನೆ. ನಾಟಕ ಬರೆಯುವ, ನಾಟಕ ಆಡಿಸುವ ನಿನ್ನ ಒಳಗಿನ ತುಡಿತ ಎಂದಿಗೂ ಬತ್ತದಿರಲಿ. ನಿನ್ನ ಸೃಜನಶೀಲತೆಯ ಬಾವಿ ಎಂದಿಗೂ ತುಂಬಿಕೊಂಡೇ ಇರಲಿ.

4 comments:

 1. ನಿಮ್ಮ ಸ್ನೇಹ ಚಿರಾಯುವಾಗಲಿ.

  ReplyDelete
 2. bmbasheer12@gmail.comApril 19, 2011 at 3:47 AM

  thank u sathish

  ReplyDelete
 3. ಸಜ್ಜನರಾದ ಸಾ. ದಯಾ ಬಗ್ಗೆ ಓದಿ ಸಂತಸವಾಯ್ತು.. ರಂಗಭೂಮಿ-ಸಾಹಿತ್ಯದ ಬಗೆಗಿನ ಅವರ ಕಳಕಳಿ ಮತ್ತು ನಿಮ್ಮಿಬ್ಬರ ಸ್ನೇಹ ಶಾಶ್ವತವಾಗಿರಲಿ.

  ಅವಿನಾಶ್

  ReplyDelete