Monday, April 11, 2011

ಸಂತನ ಕತೆಗಳು...

ಪ್ರಶ್ನೆ

ಸಂತ ಕೇಳಿದ
‘ಏನಾದರೂ ಪ್ರಶ್ನೆಗಳಿವೆಯೆ?’’
ಶಿಷ್ಯರು ಒಟ್ಟಾಗಿ ಹೇಳಿದರು ‘‘ಇಲ್ಲ ಗುರುಗಳೇ’’
ಸಂತ ಸಿಟ್ಟಿನಿಂದ ಕೇಳಿದ ‘‘ನಿಮ್ಮಲ್ಲಿ ಪ್ರಶ್ನೆಗಳು ಹುಟ್ಟದೇ ಇರುವಷ್ಟು ಕೆಟ್ಟದಾಗಿತ್ತೆ ನನ್ನ ಉಪನ್ಯಾಸ?’’

ಮೋಕ್ಷ
‘‘ಗುರುಗಳೇ ಮನುಷ್ಯ ಮೋಕ್ಷವನ್ನು ಪಡೆಯಬೇಕಾದರೆ ಏನು ಮಾಡಬೇಕು?’’ ಶಿಷ್ಯ ಕೇಳಿದ
‘‘ಮೊದಲು ಆತ ಮನುಷ್ಯನಾಗಿ ಹುಟ್ಟಬೇಕು’’ ಸಂತ ತಣ್ಣಗೆ ಹೇಳಿದ.

ತಪ್ಪು
ಆತ ಬಂದು ಸಂತನಲ್ಲಿ ಹೇಳಿದ
‘‘ಗುರುಗಳೇ...ನಾನು ಜೀವನದಲ್ಲಿ ಒಂದೇ ಒಂದು ತಪ್ಪೂ ಮಾಡಿಲ್ಲ...ನನ್ನನ್ನು ನಿಮ್ಮ ಶಿಷ್ಯನಾಗಿ ಸ್ವೀಕರಿಸುತ್ತೀರಾ?’’
‘‘ನೀನೇಕೆ ತಪ್ಪು ಮಾಡಿಲ್ಲ?’’ ಸಂತ ಅಚ್ಚರಿಯಿಂದ ಕೇಳಿ, ಮುಂದುವರಿಸಿದ ‘‘ಹೋಗು, ತಪ್ಪು ಮಾಡಿ ಬಾ...ನಾನು ನಿನ್ನನ್ನು ತಿದ್ದುತ್ತೇನೆ’’
ಪಕ್ಕದಲ್ಲಿದ್ದ ಶಿಷ್ಯ ಕೇಳಿದ ‘‘ಗುರುಗಳೇ ಹಾಲಿನಂತಹ ಮನಸ್ಸನ್ನು ಯಾಕೆ ಕೆಡಿಸಲು ಹೊರಟಿದ್ದೀರಿ?’’
‘‘ಹಾಲನ್ನು ಕೆಡಿಸಿದರೆ ಮಾತ್ರ ಅದರಿಂದ ಮೊಸರು, ಬೆಣ್ಣೆ, ತುಪ್ಪಗಳನ್ನು ತೆಗೆಯಲು ಸಾಧ್ಯ’’ ಸಂತ ನಕ್ಕು ಉತ್ತರಿಸಿದ.

ಹಲ್ಲಿನ ವೈದ್ಯ
ಒಬ್ಬ ದೇವರನ್ನು ಒಲಿಸಲು ಘೋರ ತಪಸ್ಸು ಮಾಡ ತೊಡಗಿದ. ಹಲವು ವರ್ಷಗಳು ತಪಸ್ಸಿನಲ್ಲಿ ಕಳೆದ. ಒಂದು ದಿನ ಆತನಿಗೆ ದೇವರು ಒಲಿದ.
ಪ್ರತ್ಯಕ್ಷನಾದ ದೇವರು ‘‘ಮಗು, ನಿನಗೆ ಏನು ವರ ಬೇಕು?’’ ಎಂದು ಕೇಳಿದ.
ಆತನೋ ದೇವರನ್ನು ನೋಡುತ್ತಾ ಕಕ್ಕಾ ಬಿಕ್ಕಿ.
ಏನನ್ನು ಕೇಳಬೇಕೆಂದೇ ಆತನಿಗೆ ತಿಳಿಯುತ್ತಿಲ್ಲ ಅದಕ್ಕಾಗಿ ಯಾವ ಸಿದ್ಧತೆ, ಆಲೋಚನೆಯನ್ನೇ ಮಾಡಿಕೊಂಡಿರಲಿಲ್ಲ. ಏನನ್ನಾದರೂ ಕೇಳಬೇಕು. ಇಲ್ಲವಾದರೆ ದೇವರು ತಕ್ಷಣ ಮಾಯವಾಗಿ ಬಿಡುತ್ತಾನೆ. ಅಷ್ಟರಲ್ಲಿ ಹಲ್ಲು ‘ಛಳ್’ ಎಂದು ನೋವು ಕೊಟ್ಟಿತು. ಅವನಿಗೆ ತನ್ನ ಹಲ್ಲು ನೋವು ನೆನಪಿಗೆ ಬಂತು.
ಚಡಪಡಿಸುತ್ತಾ ಆತ ಕೇಳಿದ ‘‘ದೇವರೇ...ನನ್ನ ಹಲ್ಲು ನೋವು ವಾಸಿ ಮಾಡು’’
ದೇವರು ‘ತಥಾಸ್ತು’ ಎಂದು ನಕ್ಕು ಮಾಯವಾದ.
ಈ ಕತೆಯನ್ನು ತನ್ನ ಶಿಷ್ಯರಿಗೆ ಹೇಳಿ ಮುಗಿಸಿದ ಸಂತ ನುಡಿದ ‘‘ಅನೇಕ ಸಂದರ್ಭಗಳಲ್ಲಿ ನಾವು ನಮ್ಮ ದೇವರನ್ನು ನಮಗೆ ತಿಳಿಯದೆಯೇ ಹಲ್ಲಿನ ವೈದ್ಯನ ಮಟ್ಟಕ್ಕೆ ಇಳಿಸಿ ಬಿಡುತ್ತೇವೆ’’

ಕಿವುಡ
ಒಂದು ಮರ.
ದಿನವೂ ಫಲ ಕೊಡುವ ಮರ.
ನೆರಳು ಕೊಡುವ ಮರ.
ತನ್ನ ಮಡಿಲಲ್ಲಿ ತಂಗಿದವರ ಹಣೆಯ ಬೆವರನ್ನು ಒರೆಸಿ ತಣ್ಣನೆಯ ಗಾಳಿಯಿಂದ ಲಾಲಿ ಹಾಡುವ ಮರ.
ಇಂತಹ ಮರ ಒಂದು ದಿನವೂ ಮಾತನಾಡಿಲ್ಲ. ಮರಕ್ಕೆ ಜೀವವಿರುವುದು ನಿಜವಾದರೆ ಅದೇಕೆ ಮಾತನಾಡುವುದಿಲ್ಲ.
ಈ ಪ್ರಶ್ನೆಯನ್ನು ಶಿಷ್ಯನೊಬ್ಬ ಸಂತನ ಮುಂದಿಟ್ಟ.
ಸಂತ ನಕ್ಕು ಮರು ಪ್ರಶ್ನಿಸಿದ ‘‘ಹುಟ್ಟು ಕಿವುಡನೊಬ್ಬ ‘ಈ ಜಗತ್ತು ಯಾಕೆ ಇಷ್ಟು ವೌನವಾಗಿದೆ’ ಎಂಬ ಪ್ರಶ್ನೆಯನ್ನು ಕೇಳಿದರೆ ನಾನೇನು ಉತ್ತರ ಹೇಳಲಿ?’’

ದಾರಿ
ಅವನು ದೇವರನ್ನು ತಲುಪುವ ದಾರಿಗಾಗಿ ಒದ್ದಾಡುತ್ತಿದ್ದ. ಹಲವು ಧರ್ಮಗಳನ್ನು ಸ್ವೀಕರಿಸಿದ. ದೇವನಿಗೆ ವಂಚಿಸಲಾಗದೆ ಆ ಧರ್ಮಗಳಿಂದ ಕಳಚಿಕೊಂಡ. ತನ್ನನ್ನು ಆವರಿಸಿದ ಮರ-ಗಿಡ-ಬೆಳಕು-ಗಾಳಿ-ಪರಿಮಳ-ಶಬ್ದ-ಹಸಿವು-ತಿಳಿವು ಈ ಎಲ್ಲವುಗಳನ್ನು ಪ್ರತಿ ದಿನ ಅನುಭವಿಸುತ್ತಾ, ಅದರ ಋಣಭಾರದಲ್ಲಿ ಕುಸಿದು ಹೋಗುತ್ತಿದ್ದ ಆತ. ದೇವರನ್ನು ಆರಾಧಿಸುವ ದಾರಿ ಹುಡುಕುತ್ತಾ ಹುಡುಕುತ್ತಾ ಸಂತನನ್ನು ತಲುಪಿಚದ.
ಸಂತ ದೇವರನ್ನು ಒಲಿಸುವ ಶ್ಲೋಕ, ಮಂತ್ರಗಳನ್ನು, ಕ್ರಮಗಳನ್ನು ತನಗೆ ಹೇಳಿಕೊಡಬಹುದೆಂಬ ಆಸೆಯಿಂದ ಆತ ಸಂತನ ಹಿಂದೆ ಅಲೆಯ ತೊಡಗಿದ. ಸಂತ ಮಾಡುವ ಕೆಲಸಗಳಿಗೆ ಅವನು ಸಹಾಯ ಮಾಡತೊಡಗಿದ. ಗಿಡಗಳಿಗೆ ನೀರು ಸುರಿಯುವುದು, ಹಸುವಿಗೆ ಹುಲ್ಲು, ಸೊಪ್ಪು ತರುವುದು, ಚಿಕಿತ್ಸೆಗಾಗಿ ಬಂದ ರೋಗಿಗಳ ಆರೈಕೆ ಮಾಡುವುದು ಹೀಗೆ....
ಆದರೆ ಅವನು, ದೇವರಿಗಾಗಿ ಏನನ್ನೂ ಮಾಡಲಿಲ್ಲವಲ್ಲ ಎಂದು ಸದಾ ಕೊರಗುತ್ತಿದ್ದ. ಒಂದು ದಿನ ಸಂತ ಮರದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅವನು ಕೇಳಿದ ‘‘ಗುರುಗಳೇ ದೇವರನ್ನು ಆರಾಧಿಸಲು ನನಗೆ ಯಾವುದಾದರೂ ಶ್ಲೋಕವನ್ನು, ದಾರಿಯನ್ನು ಹೇಳಿಕೊಡಿ....’’
ಸಂತ ಅವನನ್ನೇ ತದೇಕ ಚಿತ್ರದಿಂದ ನೋಡಿದ. ಬಳಿಕ ನಕ್ಕು ತಲೆ ಸವರಿ ಹೇಳಿದ ‘‘ನಿನ್ನ ಮುಂದಿರುವ ಈ ಕಾಲುದಾರಿ ಇದೆಯಲ್ಲ...ಅದೇ ನೀನು ದೇವರೆಡೆಗೆ ಸಾಗುವ ದಾರಿ...’’
ಆ ದಾರಿಯನ್ನು ನೋಡಿ ಆತ ಹೇಳಿದ ‘‘ಗುರುಗಳೇ...ಇದು ನಮ್ಮ ಆಶ್ರಮದ ಹಟ್ಟಿಯ ದಾರಿ...’’
‘‘ಹೌದು...ಈ ದಾರಿಯಲ್ಲಿ ನಡೆ. ಹಟ್ಟಿಯಲ್ಲಿ ಹಸುಗಳು ಹಸಿದಿವೆ. ಅದಕ್ಕೆ ಹುಲ್ಲು ಹಾಕು’’ ಹೀಗಂದ ಸಂತ ಕಣ್ಮುಚ್ಚಿ ನಿದ್ರಿಸತೊಡಗಿದ.

ಬಡವರು!
ಆತ ರೈತ. ವರ್ಷವಿಡೀ ದುಡಿದು ಭತ್ತ ಬೆಳೆಸಿದ. ಗೋಣಿ ತುಂಬಾ ಅಕ್ಕಿ ಹೊತ್ತುಕೊಂಡು ಸಂತೆಗೆ ನಡೆದ ಯಾಕೋ ಅಕ್ಕಿಗೆ ಬೆಲೆಯೇ ಇಲ್ಲ. ಮಾರಿದ. ಮನೆಗೆ ಮರಳಿದ. ‘‘ಹಸಿವಾಗುತ್ತಿದೆ, ಅನ್ನ ಬಡಿಸು’’ ಎಂದು ಪತ್ನಿಗೆ ಕೂಗಿದ.
‘‘ಮನೆಯಲ್ಲಿ ಅಕ್ಕಿ ಮುಗಿದು ದಿನಗಳಾಗಿವೆ’’ ಅವಳು ನಿಟ್ಟುಸಿರಿಟ್ಟು ನುಡಿದಳು.
ಆತ ಕಾರ್ಮಿಕ. ಒಂದು ಸುಂದರ ಮನೆಯನ್ನು ಕಟ್ಟುತ್ತಿದ್ದ. ಹದಿನಾರು ಕೋಣೆಗಳ ಮನೆ. ಒಂದು ಬೃಹತ್ ವರಾಂಡ. ಎರಡು ಅಂತಸ್ತು. ಡೈನಿಂಗ್ ಹಾಲ್, ಗೆಸ್ಟ್ ರೂಂ...ಹೀಗೆ ಬೃಹತ್ ಮನೆಯಾಗಿತ್ತು. ಕೊನೆಗೂ ಕಟ್ಟಿ ಮುಗಿಸಿದ.
‘‘ಅಬ್ಬಾ! ಕೊನೆಗೂ ಮನೆ ಕಟ್ಟಿ ಮುಗಿಯಿತು’’ ಎಂದು ನಿಟ್ಟುಸಿರಿಟ್ಟ. ಕೆಲಸ ಮುಗಿದ ಬಳಿಕ, ರಾತ್ರಿ ಎಲ್ಲಿ ನಿದ್ರಿಸಲಿ ಎಂದು ನಗರದ ಬಸ್‌ನಿಲ್ದಾಣವನ್ನು ಹುಡುಕತೊಡಗಿದ.
ಅವಳು ಆಗಷ್ಟೇ ಹದಿನೈದು ಸುಂದರ ಕುಲಾವಿಯನ್ನು ಹೆಣೆದು ಮುಗಿಸಿ, ತನ್ನ ಮನೆಯ ಯಜಮಾನಿಗೆ ತಂದುಕೊಟ್ಟಳು. ಆ ಮೇಲೆ ನೆಲ ನೋಡುತ್ತಾ ‘‘ಹಳೆಯ ಬಟ್ಟೆ ಏನಾದರೂ ಇದ್ದರೆ ಕೊಡಿ ಅಮ್ಮ. ನನ್ನ ಮಗುವಿಗೆ ಒಂದೇ ಒಂದು ಬಟ್ಟೆಯೂ ಇಲ್ಲ’’ ಎಂದು ಪಿಸುಗುಟ್ಟಿದಳು.

5 comments:

  1. ಬಷೀರ್ ಸರ್, ರಿಯಲಿ ನೈಸ್ ಫಿಲಾಸಫಿಕಲ್ ಸ್ಟೋರಿಸ್. ಮತ್ತಷ್ಟು ಇದ್ದರೆ ಪ್ರಕಟಿಸಿ.

    ReplyDelete
  2. Not Bad.... Good Stories.... ಖುಷಿ ಕೊಡುತ್ತವೆ. ಮೂಲ ಯಾವುದು?

    ReplyDelete
  3. awesome.....where is such type of santa..?

    ReplyDelete