Thursday, April 14, 2011

ನನ್ನಜ್ಜನಜ್ಜನಜ್ಜನ ಮತಾಂತರ ಪ್ರಸಂಗ















ನನ್ನಜ್ಜನಜ್ಜನಜ್ಜನನ್ನು ಖಡ್ಗದಿಂದ
ಮತಾಂತರಗೊಳಿಸಿದರು!

ನನ್ನಜ್ಜನಜ್ಜನಜ್ಜ ತನ್ನ ಕೇರಿಗೆ ಮಹಾರಾಜನಾಗಿದ್ದ
ಶ್ರೀಗಳು ಅವನ ತಲೆಗೆ ಹೇಲಿನ ಬುಟ್ಟಿಯ
ಕಿರೀಟವನ್ನಿಟ್ಟು ಪಟ್ಟಾಭಿಷೇಕ ಮಾಡಿದ್ದರು

ಸರ್ವಾಲಂಕಾರ ಭೂಷಿತನಾಗಿದ್ದ ನನ್ನಜ್ಜನಜ್ಜನಜ್ಜನ
ಕೈಕಾಲುಗಳನ್ನು ಪಳಪಳನೆ ಮಿಂಚುವ ಸರಪಳಿಗಳಿಂದ
ಅಲಂಕರಿಸಲಾಗಿತ್ತು
ಅವನ ಬೆಲೆಬಾಳುವ ಕೈಕಡಗಗಳನ್ನು ನೀವು ನೋಡಬೇಕಾಗಿತ್ತು?
ಯಾವ ಸುತ್ತಿಗೆಯೂ ಭೇದಿಸಲರಿಯದ ಕೋಳಗಳು
ನನ್ನಜ್ಜನಜ್ಜನಜ್ಜನನ್ನು ಹಾವಿನಂತೆ ಸುತ್ತಿಕೊಂಡಿದ್ದರೆ
ಆತ ನಂಜುಂಡನಂತೆ ಕಣ್ಮುಚ್ಚಿ ಕುಣಿಯುತ್ತಿದ್ದನಂತೆ...

ರಾಜರಿಗೆ ರಾಜನಾಗಿದ್ದ ನನ್ನಜ್ಜನಜ್ಜನಜ್ಜನಿಗೆ
ಉಣ್ಣುವುದಕ್ಕೆ ಪ್ರತ್ಯೇಕ ತಟ್ಟೆ,
ಹರಡಿ ನಿಂತ ಆಕಾಶದಂತಿರುವ
ವಿಶಾಲ ಎದೆಗೆ ಹೊದಿಸುವುದಾದರೂ ಹೇಗೆ ಬಟ್ಟೆ?

ಅವನಿಗೂ ಒಂದು ಸಮಸ್ಯೆಯಿತ್ತು
ಆನೆಯ ಸೊಂಡಿಲಿನಂತಹ ಆತನ ತೋಳು
ನಿಗುರಿ ನಿಲ್ಲುವ ಮಾಂಸಖಂಡಗಳು...
ಅವನ್ನೆಲ್ಲ ಕಷ್ಟದಿಂದ ಅದುಮಿಟ್ಟು
ಅವನು ನಡುಬಾಗಿ ನಿಂತರೆ
ಅದೆಂತಹ ನಯ...ವಿನಯ...ರಾಜಕಳೆ!
ತೂಗಿದಂತೆ ಬಾಳೆ...ಏಲಕ್ಕಿ ಬೆಳೆ!

ಆದರೂ ಅವನ ಮುಟ್ಟಲು ಅವರೆಲ್ಲರಿಗೂ ಭಯ
ಯಾಕೆಂದರೆ ರಾಜರ ರಾಜನಾದ ನನ್ನಜ್ಜನಜ್ಜನಜ್ಜನಿಗೆ
ಶ್ರೀಗಳು ನೀಡಿದ್ದರು ಅಭಯ!
ಇಂತಹ ಅವನನ್ನು ಖಡ್ಗದ ಮೊನೆಯಿಂದ
ಮತಾಂತರಗೊಳಿಸಿ ಬಿಟ್ಟರು!

ಅವರು ಎಲ್ಲಿಂದ ಬಂದರು?
ಹಿಮಾಲಯವನ್ನು ಕೊರೆದು ಬಂದರೋ...
ಅರಬೀ ಸಮುದ್ರದ ಅಲೆಗಳನ್ನು ಹೆಡೆಮುರಿ ಕಟ್ಟಿ ಬಂದರೋ...
ಅಥವಾ ಹಿಂದೂಸ್ತಾನವೆನ್ನುವ
ಭೂ ಖಂಡದ ತೊಡೆಯನ್ನು ತುಂಡರಿಸಿ ಬಂದರೋ
ಹರಡಿ ನಿಂತ ಮರುಭೂಮಿಯ ಎದೆಯನ್ನು ಸೀಳಿ ಬಂದರೋ?
ಅಂತೂ ಅವರು ನನ್ನಜ್ಜನಜ್ಜನಜ್ಜನ ಕೇರಿಯನ್ನೇ
ಹುಡುಕಿಕೊಂಡು ಬಂದರು...

ಅವರ ಖಡ್ಗದ ಒಂದೇ ಏಟಿಗೆ
ಆತನ ತಲೆಯ ಮೇಲೆ ರಾರಾಜಿಸುತ್ತಿದ್ದ
ಕಿರೀಟ ಮುರಿದು ಬಿತ್ತು
ಅವನ ಶೃಂಗರಿಸಿದ್ದ ಆಭರಣಗಳ ಕಡಿದೆಸೆದರು
ಒಂದೊಂದು ಬೀಸಿಗೆ ನಯ-ವಿನಯಗಳ
ರುಂಡಮುಂಡಗಳು ಬೇರ್ಪಟ್ಟವು
ತಲೆತಲಾಂತರಗಳಿಂದ ಅವನ ಆಸ್ತಿಯಾಗಿದ್ದ
ತಟ್ಟೆಯನ್ನೇ ಸೀಳಿದರು...
ಕಪ್ಪುಮೋಡಗಳು ದಟ್ಟೈಸಿದ್ದ ಅವನ ವಿಶಾಲ ಎದೆಯ ಮೇಲೆ
ಖಡ್ಗ ಕೋಲ್ಮಿಂಚಿನಂತೆ ಎರಗಿತು
ರಕ್ತ ಮಳೆಯಂತೆ ಭೋರ್ಗರೆಯಿತು

ನನ್ನಜ್ಜನಜ್ಜನಜ್ಜನದೋ ದೊಡ್ಡ ದಂಡು
ತಲೆ ತಲಾಂತರಗಳಿಂದ ಪೇಜಾವರ ಶ್ರೀಗಳ
ಉಪ್ಪುಂಡು ಹುರಿಗೊಂಡ ದೇಹ
ಅಷ್ಟು ಸುಲಭದಲ್ಲಿ ಸೋಲೊಪ್ಪುವವನಲ್ಲ ಆತ
ಗಂಗಾನದಿಯಂತೆ ಹರಿದವು ಕೇರಿ ತುಂಬಾ ರಕ್ತ

ಆತ ತನ್ನ ಮೌನದ ತಿಜೋರಿಯಲ್ಲಿ
ಮಾತುಗಳೆಂಬ ಮುತ್ತು ರತ್ನಗಳನ್ನು ಭದ್ರವಾಗಿಟ್ಟಿದ್ದ!
ಅದರ ಕೀಲಿಕೈಯನ್ನು ಜೋಪಾನವಾಗಿ
ಶ್ರೀಗಳ ಕೈಗೆ ಒಪ್ಪಿಸಿದ್ದ!
ಖಡ್ಗ ಹಿರಿದು ಬಂದವರೋ ಕ್ರೂರಿಗಳು
ತಿಜೋರಿಯನ್ನು ಒಡೆದರು
ಯಾವ ಶಬ್ದಗಳೂ ಒಳಸಾಗದಂತೆ ತಡೆದಿದ್ದ
ತಮಟೆಯನ್ನು ಹರಿದರು!!

ಎಲ್ಲಕ್ಕಿಂತ ದೊಡ್ಡ ದುರಂತವೊಂದು ನಡೆದು ಹೋಯಿತು
ಅವರು ನನ್ನಜ್ಜನಜ್ಜನಜ್ಜನನ್ನು ಮುಟ್ಟಿ ಬಿಟ್ಟರು!
ನಾಡು-ಕೇರಿ ಒಂದಾಗಿ ಬಿಟ್ಟಿತ್ತು
ರಾಜಪದವಿಯ ಏರಿ ಕುಳಿತಿದ್ದ ಆತ
ಒಮ್ಮೆಲೆ ಬೀದಿಗೆ ಬಿದ್ದಿದ್ದ
ನನ್ನಜ್ಜನಜ್ಜನಜ್ಜ ಸಾಮಾನ್ಯ ಮನುಷ್ಯನಾಗಿ ಬಿಟ್ಟಿದ್ದ!
ಅಯ್ಯೋ! ಆತನನ್ನು ಖಡ್ಗದ ಮೊನೆಯಿಂದ
ಮನುಷ್ಯನಾಗಿ ಮತಾಂತರಗೊಳಿಸಿ ಬಿಟ್ಟರು!

ದುರಂತದ ನೆನಪಿಗಾಗಿ...
ಕೇರಿಯಲ್ಲಿ ಗಂಗಾನದಿಯಂತೆ ಹರಿಯುತ್ತಿದ್ದ
ರಕ್ತದಿಂದ ಖಡ್ಗವನ್ನು ಶುಚಿಗೊಳಿಸಿ
ನನ್ನಜ್ಜ ಜೋಪಾನವಾಗಿಟ್ಟುಕೊಂಡ
ತಲೆ ತಲಾಂತರಗಳಿಂದ ಬಂದ ಖಡ್ಗ
ಇದೀಗ ನನ್ನ ಪಿತ್ರಾರ್ಜಿತ ಆಸ್ತಿ
ಬೆನ್ನೆಲುಬಿನಂತೆ....
ಬೆನ್ನ ಹಿಂದೆ ಧರಿಸಿಕೊಂಡಿದ್ದೇನೆ

ಸುದ್ದಿ ಬಂದಿದೆ...
ಶ್ರೀಗಳು ಮತ್ತೆ
ನನ್ನಜ್ಜನಜ್ಜನಜ್ಜನ ಕಿರೀಟದೊಂದಿಗೆ
ನನ್ನ ಪಟ್ಟಾಭಿಷೇಕಕ್ಕೆ ಬರುತ್ತಿದ್ದಾರೆ...
ಕಳೆದುಕೊಂಡ ನನ್ನ ಕೇರಿಯನ್ನು ನನಗೆ
ಮರಳಿಸಲು ಬಯಸಿದ್ದಾರೆ...

ನನ್ನ ಬೆನ್ನೆಲುಬನ್ನು ಇಂದ್ರಾಯುಧದಂತೆ
ಕೈಯಲ್ಲಿ ಧರಿಸಿಕೊಂಡು ಕಾಯುತ್ತಿದ್ದೇನೆ ನಾನು...
ಅವರ ಬರವಿಗಾಗಿ...!!

4 comments:

  1. ನಿಮ್ಮಜ್ಜ ನಜ್ಜನ ತಲೆ ಮೇಲೆ ಇದ್ದ ಹೇಲು ಇತ್ತೀಚಿಗೆ ನಿಮ್ಮ ಆಲೋಚನೆಯಲ್ಲಿ ತುಂಬಿದೆ ಅನ್ನಿಸುತ್ತೆ.
    ನಿಮ್ಮ ಮಾತು ಕೇಳುತ್ತಿದ್ದರೆ ಬಾಯಿಯಲ್ಲೂ ಅದೇ ಇರುವಂತಿದೆ.
    ದ್ವೇಷದಿಂದ ಮುಂಡೆ ತನ್ನ ತುರುಬು ನೆನೆಸಿಕೊಂಡಂತೆ ಯಾವುದೋ ಹಳೆಯ ಕಥೆಯನ್ನೇ ಹೇಳುತ್ತಾ
    ಜಾತಿ ಜಾತಿಗಳ ನಡುವೆ ಕೋಮು ಕೋಮುಗಳ ನಡುವೆ...ಧರ್ಮ ಧರ್ಮಗಳ ನಡುವೆ ಜಗಳ ತಂದಿಡುವ ನೀವು
    ಎಷ್ಟು ಉತ್ತಮರು ಎಂಬುದನ್ನು ಎದೆ ಮುಟ್ಟಿ ಕೇಳಿಕೊಳ್ಳಿ

    ReplyDelete
  2. Wonderful… marvelous!!! can be defined as an endeavour to inculcate the depth of Homer, wit of Wole Soyinka, satire of John Donne and the intelligence of Pejawar seer together! Hats off basher bhai… The best from you!

    ReplyDelete
  3. Nimagyake e dhwesha? banni mattomme Hindu aagi.. elli shukravarada namaz na kattalegalilla, belge 5 ghantege kiruchuva avashakate ella.. devastanakke hogale bekamba kattu padugalilla.. jihad, dharma alisi hogute anno bhaya elle.. neevu brahmanaragabeke? hagiddare aagi yaru beda annutare? yavudannu neevu dharma annuthiro adhu dharma allave alla.. yochisi.. nimage bittiddu.. howdu neevyake islam dharmada huluku gala bagge bareyolla? mathandateye?

    ReplyDelete