Thursday, December 15, 2011

ಬಾಗಿಲು ಮತ್ತು ಇತರ ಕತೆಗಳು

ಹಕ್ಕಿ ಮತ್ತು ಗರಿ
ಆದಿ ಅಂತ್ಯವಿಲ್ಲದ ದಿಗಂತವದು. ಬಾನಾಡಿಗಳು ಅದಾಗಲೇ ತಮ್ಮ ತಮ್ಮ ಗುರಿ ಹಿಡಿದು ಗೂಡು ಬಿಟ್ಟು ತೆರಳುತ್ತಿದ್ದವು. ಪ್ರಕೃತಿ ಅದನ್ನು ಸಂಭ್ರಮದಿಂದ ವೀಕ್ಷಿಸುತ್ತಿತ್ತು. ಹಕ್ಕಿಗಳು ಶೀಘ್ರ ಗುರಿ ತಲುಪಲಿ ಎಂದು ಹಾರೈಸುತ್ತಿದ್ದವು.
ಹೀಗೆ, ದಿಗಂತದಲ್ಲಿ ಹಕ್ಕಿಯೊಂದು ರೆಕ್ಕೆ ಬಿಚ್ಚಿ ಹಾರಿ ಹೋಗುತ್ತಿರುವ ಸಂದರ್ಭ, ರಭಸಕ್ಕೆ ಹಕ್ಕಿಯ ಗರಿಯೊಂದು ಉದುರಿ ಬಿತ್ತು. ಗರಿ ಸ್ವ್ವತಂತ್ರವಾಗಿ ಆಕಾಶದಲ್ಲಿ ತೇಲತೊಡಗಿತ್ತು.
ಗರಿ ಹೇಳಿಕೊಂಡಿತು ‘ನಾನೀಗ ಸ್ವತಂತ್ರ. ಹಕ್ಕಿಯ ಹಂಗಿಲ್ಲದೆ ಹಾರಾಡುತ್ತಿದ್ದೇನೆ’
ಗಾಳಿಯಲ್ಲಿ ತೇಲಾಡುತ್ತಾ ಹಕ್ಕಿಯನ್ನು ನೋಡಿ ಗರಿ ಹಂಗಿಸಿತು ‘ನನ್ನ ಸಂಗಾತಿಗಳನ್ನು ರೆಕ್ಕೆಯಂತೆ ಬಳಸಿ, ನೀನು ಆಕಾಶದಲ್ಲಿ ಹಾರಾಡುತ್ತಾ ಮೆರೆದೆ. ನಮ್ಮನ್ನು ಮರೆತೆ. ಈಗ ನೋಡು... ನನಗೀಗ ನಿನ್ನ ಹಂಗಿಲ್ಲ. ಎಲ್ಲಾ ಗರಿಗಳು ನನ್ನಂತೆಯೇ ಸ್ವತಂತ್ರವಾದರೆ ನಿನಗೆಲ್ಲಿ ಅಸ್ತಿತ್ವ’
ಮತ್ತೆ ಜೋರಾಗಿ ಪ್ರಕೃತಿಗೆ ಕೂಗಿ ಹೇಳಿತು ‘ನೋಡಿರಿ, ನೋಡಿರಿ ನಾನೀಗ ಸ್ವತಂತ್ರವಾಗಿ ಹಾರಾಡುತ್ತಿದ್ದೇನೆ. ನದಿಗಳೇ ನೋಡಿ, ನನ್ನ ದೆಸೆಯಿಂದ ಹಕ್ಕಿ ಹಾರುತ್ತಿದ್ದರೂ, ನೀವೆಲ್ಲ ಹಕ್ಕಿಯನ್ನೇ ಕೊಂಡಾಡಿದಿರಿ. ಈಗ ನೋಡಿ...’ ಆದರೆ ಗಾಳಿ ನಿಧಾನವಾಗಿ ಕಡಿಮೆಯಾಯಿತು. ಗರಿ ನಿಧಾನವಾಗಿ ನೆಲವನ್ನಪ್ಪಿತು. ಮತ್ತೆ ಅಲ್ಲಿಂದ ನೆಗೆದು ಹಾರುವುದಕ್ಕೆ ಯತ್ನಿಸಿತು. ಊಹುಂ...ಆಗುತ್ತಿಲ್ಲ. ಅದೆಷ್ಟು ಪ್ರಯತ್ನಿಸಿದರೂ ಹಾರುವುದಕ್ಕಾಗುತ್ತಿಲ್ಲ... ಗರಿ ಅಸಹಾಯಕತೆಯಿಂದ ಮೇಲೆ ನೋಡಿತು. ಅಲ್ಲಿ ಹಕ್ಕಿ ಸದ್ದು ಗದ್ದಲವಿಲ್ಲದೆ ಹಾರುತ್ತಾ ಹಾರುತ್ತಾ, ತನ್ನ ಗುರಿಯೆಡೆಗೆ ಸಾಗುತ್ತಿತ್ತು.

ಬಾಗಿಲು
ಒಬ್ಬ ಫಕೀರ ಶ್ರೀಮಂತನ ಮಹಲಿಗೆ ಬಂದವನು ಅಂಗಳದಲ್ಲಿ ನಿಂತು ಆ ಮನೆಯನ್ನೇ ನೋಡುತ್ತಿದ್ದ.
ಶ್ರೀಮಂತ ಅಚ್ಚರಿಯಿಂದ ಕೇಳಿದ ‘‘ಏನು ನೋಡುತ್ತಿರುವೆ?’’
‘‘ನಿನ್ನ ಮನೆಯ ಹೆಬ್ಬಾಗಿಲನ್ನು’’
ಶ್ರೀಮಂತ ಹೆಮ್ಮೆಯಿಂದ ಹೇಳಿದ ‘‘ಅದು ತೇಗದ ಮರದಿಂದ ಮಾಡಿದ ಬಲಿಷ್ಠ ಬಾಗಿಲು...’’
‘‘ಯಾರಿಗೆ ಹೆದರಿ ಈ ಬಾಗಿಲನ್ನು ತಯಾರಿಸಿದ್ದೀಯ?’’
‘‘ಕಳ್ಳಕಾಕರಿಗೆ ಹೆದರಿ...’’
‘‘ನೀನು ಯಾವಾಗ ಈ ಬಲಿಷ್ಟ ಬಾಗಿಲನ್ನು ತಯಾರಿಸಬೇಕೆಂದು ತೀರ್ಮಾಸಿದ್ದೆಯೋ ಆಗಲೇ ಕಳ್ಳ ನಿನ್ನ ಮನೆಯನ್ನು ಪ್ರವೇಶಿಸಿಯಾಗಿದೆ ಅವನನ್ನು ಮನೆಯೊಳಗಡೆ ಬಿಟ್ಟು ಬಾಗಿಲು ಭದ್ರ ಪಡಿಸಿ, ನೀನು ಹೊರಗೆ ಬಂದು ನಿಂತಿದ್ದೀಯ’’
ಎಂದವನೇ ಫಕೀರ ಮುಂದೆ ನಡೆದ.

ಹೆಸರು
ಅವನು ಓಡೋಡಿ ಬಂದ.
‘‘ಗುರುಗಳೇ ನನಗೆ ಗಂಡು ಮಗು ಹುಟ್ಟಿದೆ. ಸುಂದರವಾದ ಒಂದು ಹೆಸರನ್ನು ಹೇಳಿ’’
ಸಂತ ನುಡಿದ ‘‘ಸುಂದರವಾದ ಹೆಸರುಗಳಿಲ್ಲ. ಸುಂದರವಾದ ಮನುಷ್ಯರಿದ್ದಾರೆ. ಆ ಮಗುವಿನಿಂದಾಗಿಯೇ ಹೆಸರು ಸುಂದರವಾಗುತ್ತದೆ. ಹೋಗು, ಆ ಮಗುವನ್ನು ಹೆತ್ತ ತಾಯಿಯಲ್ಲಿ ಕೇಳು. ಅವಳ ಆಸೆಯಂತೆ ಹೆಸರನ್ನಿಡು’’

ನಗು
ಅವರೆಲ್ಲ ಹಿರಿಯರು, ಶ್ರೀಮಂತರು, ಅಧಿಕಾರಿಗಳು...ಎಲ್ಲರೂ ಮುಂಜಾನೆ ಆ ಮೈದಾನದಲ್ಲಿ ಸೇರಿ ಜೋರಾಗಿ ನಗುವಿನ ವ್ಯಾಯಾಮ ಮಾಡುತ್ತಿದ್ದರು. ಬಾರದ ನಗುವನ್ನು ಎಲ್ಲರೂ ಸೇರಿ ಜೋರಾಗಿ ನಗುವುದಕ್ಕೆ ಪ್ರಯತ್ನಿಸುತ್ತಿದ್ದರು. ಆ ನಗುವಿನಿಂದ ಅವರ ಆರೋಗ್ಯ ಉತ್ತಮವಾಯಿತೋ ಗೊತ್ತಿಲ್ಲ. ಪಕ್ಕದ ಗುಡಿಸಲಿನ ಮಕ್ಕಳು ಅವರನ್ನು ನೋಡಿ ನಕ್ಕು ನಕ್ಕು ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಂಡರು.

ಸ್ನೇಹಿತರು
‘‘ಸುಮ್ನೆ ಸ್ನೇಹಿತರ ಜೊತೆ ಅಲೆಯುತ್ತಿದ್ದೀಯಲ್ಲ, ಯಾವ ಲಾಭಕ್ಕಾಗಿ ಅವರನ್ನು ಜೊತೆ ಸೇರಿಸ್ಕೊಂಡಿದ್ದೀಯ?’’
ತಂದೆ ಮಗನ ಮುಂದೆ ಸಿಟ್ಟಿನಿಂದ ಕಿರುಚಿದ.
‘‘ನನ್ನಿಂದ ಯಾವ ಲಾಭವೂ ಇಲ್ಲದಿದ್ದರೂ ಅವರು ನನ್ನ ಜೊತೆಗಿದ್ದಾರೆ. ಅದಕ್ಕಾಗಿ ನಾನೂ ಅವರ ಜೊತೆಗಿದ್ದೇನೆ’’ ಮಗ ತಣ್ಣಗೆ ಹೇಳಿದ.

ಆಳ
‘‘ನೀರು ಆಳವಿದೆಯೆ?’’ ಆತ ಕೇಳಿದ.
ನೀರಲ್ಲಿದ್ದವ ‘‘ಇಲ್ಲ’’ ಎಂದ.
ಆತ ನೀರಿಗೆ ಹಾರಿದ. ನೋಡ ನೋಡುತ್ತಿದ್ದಂತೆ ಆತ ಮುಳುಗ ತೊಡಗಿದ ‘‘ಏನ್ರೀ...ಆಳವಿಲ್ಲ ಎಂದ್ರಿ...?’’
‘‘ಈಜಲು ಗೊತ್ತಿರುವವನ ಆಳಕ್ಕೂ, ಗೊತ್ತಿಲ್ಲದವನ ಆಳಕ್ಕೂ ವ್ಯತ್ಯಾಸವಿದೆ. ನನಗೆ ಈಜಲು ಗೊತ್ತಿದೆ’’

ಉಪ್ಪು
ಮದುವೆಯ ಊಟ ಭರ್ಜರಿಯಾಗಿತ್ತು.
ಯಾರೋ ಜೋರಾಗಿ ಹೇಳಿದರು ‘‘ಉಪ್ಪು ಜಾಸ್ತಿಯಾಗಿದೆ...’’
ಇನ್ನಾರೋ ವಿನಯದಿಂದ ಉತ್ತರಿಸಿದರು ‘‘ಮದುವೆ ಹೆಣ್ಣಿನ ತಂದೆಯ ಕಣ್ಣೀರು ಒಂದಿಷ್ಟು ಹೆಚ್ಚು ಬಿದ್ದಿರಬೇಕು. ಕ್ಷಮಿಸಿ ಬಿಡಿ. ಯಾವುದೇ ತಕರಾರು ಮಾಡದೇ ದಯವಿಟ್ಟು ಊಟ ಮುಗಿಸಿ’’

ವರದಿ
‘‘ನಗರದಲ್ಲಿ ಕೋಮುಗಲಭೆ, ಇಬ್ಬರ ಬರ್ಬರ ಕೊಲೆ’’
ವರದಿಗಾರ ಸುದ್ದಿ ಮಾಡುತ್ತಿದ್ದ.
ಇನ್ನೊಬ್ಬ ಕೇಳಿದ ‘‘ಅಂತದ್ದು ಯಾವುದೂ ನಡೆದಿಲ್ಲವಲ್ಲ?’’
‘‘ಇದು ಪ್ರಕಟವಾದ ಬಳಿಕ ನಡೆಯುತ್ತೆ. ಸುಮ್ಮನೆ ತಲೆಕೆಡಿಸಿಕೊಳ್ಳಬೇಡ’’ ವರದಿಗಾರ ಉತ್ತರಿಸಿದ.

1 comment:

  1. ಕಥೆಯೆಂದರೆ ನನ್ನ ಪ್ರಕಾರ ಒಗಟಿನಂತೆ ನಮ್ಮನ್ನು ಕಾಡಬೇಕು, ಅಂತಹ ಕಥೆಗಳನ್ನೂ ಕವನಗಳನ್ನೂ ಬರೆಯುವ ನಿಮ್ಮ ಬರವಣಿಗೆ ಇಷ್ಟವಾಯ್ತು...
    -ವೇಣು

    ReplyDelete