Wednesday, November 16, 2011

ನನ್ನನ್ನು ‘ಬ್ಯಾರಿ’ ಎಂದು ಕರೆದರೆ ಹುಷಾರ್!

ರಾಜ್ಯ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಘೋಷಿಸಿದ ಸಂದರ್ಭದಲ್ಲಿ ಬರೆದ ಲೇಖನ ಇದು.

ಬ್ಯಾರಿಗಳಿಗೊಂದು ಸಾಹಿತ್ಯ ಅಕಾಡಮಿ ದೊರಕಿದ ಸುದ್ದಿ ಕೇಳಿ ರೋಮಾಂಚಿತನಾದವನಲ್ಲಿ ನಾನೂ ಒಬ್ಬ. ಅದಕ್ಕೆ ಕಾರಣ ನಾನೊಬ್ಬ ಬ್ಯಾರಿ ಸಮುದಾಯದಲ್ಲಿ ಹುಟ್ಟಿದವನು ಎನ್ನುವುದಷ್ಟೇ ಆಗಿರಲಿಲ್ಲ. ‘ಬ್ಯಾರಿ’ ಎನ್ನುವ ಶಬ್ದ ಕಳೆದ ಮೂರು ದಶಕಗಳಿಂದ ಸಾಮಾಜಿಕವಾಗಿ ಅನುಭವಿಸಿಕೊಂಡು ಬಂದ ಕೀಳರಿಮೆ ತುಳಿತ, ಅವಮಾನಗಳ ಕುರಿತಂತೆ ಅರಿವಿರುವವರೆಲ್ಲರಿಗೂ, ಈ ಸುದ್ದಿ ರೋಮಾಂಚನ ತರಿಸಬಲ್ಲುದು. ಕಳೆದ ಮೂರು ದಶಕಗಳಲ್ಲಿ ‘ಬ್ಯಾರಿ’ ಎನ್ನುವ ಶಬ್ದ ಬಳಕೆಯಾಗುತ್ತಿದ್ದುದು ಕರಾವಳಿ ಮುಸ್ಲಿಮರನ್ನು ಅವಮಾನಿಸುವುದಕ್ಕಾಗಿ ಮಾತ್ರವಾಗಿತ್ತು. ‘ಬ್ಯಾರಿ ಬುದ್ದಿ ತೋಜ್ಪಾವೊಡ್ಚಿ (ಬ್ಯಾರಿ ಬುದ್ದಿ ತೋರಿಸಬೇಡ)’ ‘ಮಲ್ಲ ಬ್ಯಾರಿ ಮಾರಾಯ (ಭಯಂಕರ ಬ್ಯಾರಿ ಮಾರಾಯ)’, ‘ದಾನೆಂಬೆ ಬ್ಯಾರಿ (ಏನೋ ಬ್ಯಾರಿ)’ ಮೊದಲಾದ ಪದಗಳು ಕರಾವಳಿಯ ಜನಜೀವನದಲ್ಲಿ ಹೇಗೆ ಅವಿನಾಭಾವವಾಗಿ ಸೇರಿಕೊಂಡಿದ್ದವೋ ಅದನ್ನು ಪ್ರತಿರೋಧಿಸುವ ಆತುರದಲ್ಲಿ ಕರಾವಳಿಯ ಮುಸ್ಲಿಮರು ಕೂಡ ಆ ಐಡೆಂಟಿಟಿಯನ್ನು ಅಷ್ಟೇ ತೀವ್ರವಾಗಿ ತಿರಸ್ಕರಿಸುತ್ತಿದ್ದರು. ‘ಬ್ಯಾರೀಂದ್ ಪನೋಡ್ಚಿ (ಬ್ಯಾರೀಂತ ಕರೀಬೇಡ)’ ‘ನನೋರ ಬ್ಯಾರೀಂದ್ ಪನ್‌ಗೆ’ (ಧೈರ್ಯ ಇದ್ರೆ ಇನ್ನೊಮ್ಮೆ ಬ್ಯಾರೀಂತ ಹೇಳು)?’ ‘ಅಂವ ಬ್ಯಾರೀಂತ ಕರ್ದ, ಅದಕ್ಕೆ ಹೊಡ್ದೆ’ ‘ಸಾರ್, ‘ಇವ ನನ್ನನ್ನು ಬ್ಯಾರೀಂತ ಕರೀತಿದ್ದಾನೆ’ ಹೀಗೆ ಬ್ಯಾರಿ ಎಂಬ ‘ಐಡೆಂಟಿಟಿ’ಯ ಅವಮಾನದಿಂದ ಪಾರಾಗುವುದಕ್ಕೆ ಒಂದು ತಲೆಮಾರು ಸಾಕಷ್ಟು ಹೆಣಗಾಡಿದೆ. ತನ್ನದೇ ಅಸ್ಮಿತೆಯ ವಿರುದ್ಧ ಹೋರಾಡಿ ಆ ತಲೆಮಾರಿನ ಜನರು ಹುತಾತ್ಮರಾಗಿದ್ದಾರೆ. ತನ್ನದೇ ನೆರಳನ್ನು ತನ್ನ ಶತ್ರುವೆಂಬಂತೆ ಭಾವಿಸಿ, ಅದರಿಂದ ಪಲಾಯನ ಮಾಡಲು ಪ್ರಯತ್ನಿಸಿದ, ವಿಫಲವಾದ ಈ ತಲೆಮಾರಿನ ದುರಂತ ಹೃದಯವಿದ್ರಾವಕವಾದುದು.

ಒಂದೆಡೆ ಈ ತಲೆಮಾರಿಗೆ ತಾವು ಆಡುವ ಭಾಷೆ ಒಂದು ಸ್ವತಂತ್ರ ಭಾಷೆ ಎಂಬ ಅರಿವೇ ಇದ್ದಿರಲಿಲ್ಲ. ‘ನಿಮ್ಮ ಮಾತೃಭಾಷೆ ಯಾವುದು?’ ಎಂದು ಯಾರಾದರೂ ಕೇಳಿದರೆ ಅವರು ‘ಮಲಯಾಳಂ’ ಎಂದು ಹೇಳುತ್ತಿದ್ದರು. ಇತ್ತ ಮಲಯಾಳಂ ಮಾತನಾಡುವವರು ಆ ಭಾಷೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ‘ಬ್ಯಾರಿ’ ಎನ್ನುವ ಪದಕ್ಕೆ ಅಂಜುತ್ತಾ ಬದುಕುತ್ತಿದ್ದ ಈ ತಲೆಮಾರಿಗೆ ತಮ್ಮ ಭಾಷೆಯನ್ನು ‘ಬ್ಯಾರಿ ಭಾಷೆ ’ ಎಂದು ಕರೆಯುವುದಕ್ಕೆ ಧೈರ್ಯ ಸಾಲುತ್ತಿರಲಿಲ್ಲ. ಈ ಭಾಷೆಯನ್ನು ಕರಾವಳಿಯ ಒಂದು ಪ್ರದೇಶದ ಜನರು ‘ನಕ್ಕ್‌ನಿಕ್ಕ್’ ಭಾಷೆ ಎಂದು ಕರೆಯುತ್ತಿದ್ದರು. ‘ನಕ್ಕ್-ನಿಕ್ಕ್’ ಅಂದರೆ ‘ನನಗೆ-ನಿನಗೆ’ ಎಂದರ್ಥ. ಇದೊಂದು ರೀತಿಯಲ್ಲಿ ಒಂದು ಭಾಷೆಯನ್ನು ‘ಸಾರ್ವತ್ರಿಕ’ವಾಗಿಸುವಲ್ಲಿರುವ ಭಯವನ್ನು, ಕೀಳರಿಮೆಯನ್ನು ಎತ್ತಿ ತೋರಿಸುತ್ತದೆ. ‘ನನಗೆ ಮತ್ತು ನಿನಗೆ’ ಮಾತ್ರ ಅನ್ವಯವಾಗುವ ಒಂದು ಭಾಷೆಯಿದ್ದರೆ ಅದು ‘ಬ್ಯಾರಿ ಭಾಷೆ’ ಮಾತ್ರ ಎಂದು ಹೇಳಬೇಕು. ಒಂದು ಕಡೆ ತನ್ನ ಭಾಷೆಯನ್ನು ಮಲಯಾಳಂ ಎಂದು ಕರೆಯುತ್ತಲೇ ‘ಮಲಯಾಳಂ ಅಂದರೆ ಮಲಯಾಳಂ ಅಲ್ಲ. ಸ್ವಲ್ಪ ವ್ಯತ್ಯಾಸವಿದೆ..’ ಎಂಬಿತ್ಯಾದಿ ಸಮರ್ಥನೆಗಳನ್ನು ವ್ಯಾಖ್ಯಾನಗಳನ್ನು ನೀಡುತ್ತಾ, ತನ್ನದೇ ಭಾಷೆಯ ಕುರಿತು ಒಂದು ತಲೆಮಾರು ಕೀಳರಿಮೆಯಿಂದ ಬದುಕುತ್ತಾ ಬಂತು. ಅನ್ಯಭಾಷಿಕರ ನಡುವೆ ಇಬ್ಬರು ಬ್ಯಾರಿ ಭಾಷೆಯಲ್ಲಿ ಮಾತನಾಡಿದರೆ, ಅದನ್ನು ನೋಡಿ ತಮಾಷೆ ಮಾಡುವ ಸಮುದಾಯದ ನಡುವೆ ಬ್ಯಾರಿಗಳ ಒಂದು ತಲೆಮಾರು ಬದುಕಿದೆ, ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ಕಡತಗಳಲ್ಲಿ ಬ್ಯಾರಿಗಳು ತಮ್ಮ ಭಾಷೆಯ ಹೆಸರನ್ನು ‘ಮಲಯಾಳಂ’ ಎಂದು ಬರೆಯುತ್ತಿದ್ದರು. ಆದರೆ ಅವರು ಮಲಯಾಳಿಗಳಾಗಿರದೆ, ಕರಾವಳಿಯ ತುಳು ಮಣ್ಣಿನ ಮುಸ್ಲಿಮರೇ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಮಲಯಾಳಿಗಳಿಂದ ಈ ಸಮುದಾಯ ಮತ್ತು ಅವರು ಆಡುವ ಭಾಷೆ ತಿರಸ್ಕೃತವಾಗಿದ್ದವು. ಜೊತೆಗೆ, ತಮ್ಮದೇ ನೆಲದ ಜನರಿಂದಲೂ ತಮ್ಮ ಭಾಷೆ ಮತ್ತು ಐಡೆಂಟಿಟಿಯ ಕಾರಣಕ್ಕಾಗಿ ಅವರು ಅವಮಾನಿತರಾಗಿ ಬದುಕಬೇಕಾಗಿತ್ತು. ಕರಾವಳಿಯ ಮುಸ್ಲಿಮರನ್ನು ನಿಂದಿಸಬೇಕೆಂದರೆ ‘ಸೂ..ಮಗ, ಬೇ.. ಬೋ...ಮಗ’,ಇತ್ಯಾದಿಗಳನ್ನು ಬಳಸಬೇಕೆಂದಿರಲಿಲ್ಲ. ‘ಬ್ಯಾರಿ!’ ಎಂದರೆ ಸಾಕಿತ್ತು. ಬ್ಯಾರಿಗಳು ತಮ್ಮ ಮಸೀದಿಗಳಲ್ಲಿ ‘ವೌಲ್ವಿ’ಗಳಿಂದ ಧರ್ಮ ಪ್ರವಚನ ಮಾಡಿಸಬೇಕೆಂದರೆ ಕೇರಳದಿಂದಲೇ ಮುಸ್ಲಿಯಾರುಗಳನ್ನು ತರಿಸುತ್ತಿದ್ದರು. ಯಾಕೆಂದರೆ ‘ಧರ್ಮಪ್ರವಚನ’ ಬ್ಯಾರಿ ಭಾಷೆಯಲ್ಲಿ ಮಾಡುವುದು ಅವರಿಗೆ ನಿಲುಕುವ ವಿಷಯವಾಗಿರಲಿಲ್ಲ. ‘ಗಂಭೀರ ಮತ ಪ್ರಸಂಗ’ ಏನಿದ್ದರೂ ಅದು ‘ಗಂಭೀರ ಮಲಯಾಳಂ’ನಲ್ಲೇ ನಡೆಯಬೇಕು ಎಂದು ಅವರು ನಂಬಿದ್ದರು. ಧಾರ್ಮಿಕ ವಿಷಯಗಳನ್ನು ಮಲಯಾಳಂನಲ್ಲೇ ಮುಸ್ಲಿಯಾರುಗಳು ಬೋಧಿಸುತ್ತಿದ್ದ ಕಾಲವಿತ್ತು. ಬ್ಯಾರಿ ಭಾಷೆಯನ್ನು ಅಲ್ಲಿ ಬಳಸಲಾಗುತ್ತಿರಲಿಲ್ಲ. ತಮ್ಮದಲ್ಲದ, ಅರ್ಥವಾಗದ ‘ಕಠಿಣ ಮಲಯಾಳಂ’ನಲ್ಲೇ ವಿದ್ಯಾರ್ಥಿಗಳು ಧಾರ್ಮಿಕ ವಿಷಯಗಳನ್ನು ಕಲಿಯುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾರಿ ಭಾಷೆಗೆ ಲಿಪಿಯಿಲ್ಲ. ಬ್ಯಾರಿ ಭಾಷೆಯನ್ನು ಬರೆಯುವುದಕ್ಕೆ ಬಳಕೆ ಮಾಡುವ ಸಂದರ್ಭವೇ ತೀರ ಕಡಿಮೆಯಿತ್ತು. ಆದುದರಿಂದಲೇ ಲಿಪಿಯ ಕುರಿತಂತೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಮದರಸಗಳ ಲೆಕ್ಕಪತ್ರಗಳನ್ನೆಲ್ಲ ಕನ್ನಡದಲ್ಲೇ ಬರೆಯಲಾಗುತ್ತಿತ್ತು. ಬ್ಯಾರಿಗಳು ಮನೆಯಲ್ಲಿ ಬ್ಯಾರಿ ಭಾಷೆ, ಹೊರಗೆ ತುಳು ಭಾಷೆ, ಶಾಲೆ, ಕಚೇರಿಗಳಲ್ಲಿ ಕನ್ನಡ ಹೀಗೆ ಒಂದೇ ಸಂದರ್ಭದಲ್ಲಿ ಹಲವು ಭಾಷೆಗಳನ್ನು ಕಲಿಯಬೇಕಾದ, ಹಲವು ಭಾಷೆಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿತ್ತು. ಇಷ್ಟು ಅವಮಾನ, ಪ್ರತಿಕೂಲ ಪರಿಸ್ಥಿತಿಯ ನಡುವೆ ಒಂದು ಭಾಷೆ ಉಳಿದು ಬೆಳೆದು, ಇದೀಗ ಸರಕಾರದಿಂದ ಸಾಹಿತ್ಯ ಅಕಾಡೆಮಿಯನ್ನು ತನ್ನದಾಗಿಸಿಕೊಂಡಿರುವುದು, ಆ ಭಾಷೆಯ ಸಾಮರ್ಥ್ಯವನ್ನು ಎತ್ತಿ ಹಿಡಿಯುತ್ತದೆ.

ಹಾಗೆಂದು ಬ್ಯಾರಿಗಳು ತಲೆ ತಲಾಂತರದಿಂದ ಹೀನಾಯವಾಗಿ ಬದುಕಿಕೊಂಡು ಬಂದವರಲ್ಲ ಎನ್ನುವುದು ಕೂಡ ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಬರೇ 60 ವರ್ಷಗಳ ಹಿಂದೆ ಬ್ಯಾರಿಗಳು ತುಳು ನಾಡಿನಲ್ಲಿ ಅತ್ಯುನ್ನತ ಬದುಕನ್ನು ಬಾಳಿದವರು. ವ್ಯಾಪಾರ, ಯುದ್ದ, ಬೇಟೆ, ಪಾಳೇಗಾರಿಕೆ, ಶ್ರೀಮಂತಿಕೆ ಎಲ್ಲ ದಿಕ್ಕಿನಲ್ಲೂ ಅವರು ಕರಾವಳಿಯ ಉಳಿದ ತುಳುವರಿಗೆ ನೇರ ಸ್ಪರ್ಧೆಯನ್ನು ನೀಡಿದವರು. ಸೀದಿ ಬ್ಯಾರಿ, ಪೊಡಿಯ ಬ್ಯಾರಿ, ಉಸ್ಮಾನ್ ಬ್ಯಾರಿ ಇಂತಹ ಹೆಸರುಗಳಿಗೆ ಒಂದು ಕಾಲದಲ್ಲಿ ತುಳುವರು ಬಾಗಿ ‘ಸಲಾಂ’ಹೇಳುತ್ತಿದ್ದ ಕಾಲ ಅದು. ರಾಣಿ ಅಬ್ಬಕ್ಕ ದೇವಿಯ ಸೈನ್ಯದಲ್ಲಿ ಬ್ಯಾರಿ ಸೈನಿಕರ ಪಾತ್ರ ವರ್ಣಿಸಳಸದಳವಾದುದು. ಅಬ್ಬಕ್ಕನ ಬೆಂಗಾವಲಾಗಿ ನಿಂತವರು ಬ್ಯಾರಿಗಳು. ‘ಎಣ್ಬೂರಿನ’ ಜೈನ ಅರಸರ ಜೊತೆಗೂ ಬ್ಯಾರಿಗಳ ಸಂಬಂಧ ಅನ್ಯೋನ್ಯವಾಗಿತ್ತು. ಪ್ರತಿ ಊರಲ್ಲೂ ಒಬ್ಬ ಬ್ಯಾರಿ ಪಾಳೇಗಾರನಿದ್ದ. ಒಂದು ಕಾಲದಲ್ಲಿ ಬ್ಯಾರಿಗಳು ಭಾರೀ ದಿನಸಿ ವ್ಯಾಪಾರಿಗಳಾಗಿದ್ದರೆ, ಸ್ಥಳೀಯ ಕೊಂಕಣಿಗಳು ಅವರ ಬಂಡಸಾಲೆಗಳಲ್ಲಿ ಲೆಕ್ಕ ಬರೆಯುತ್ತಿದ್ದರು. ‘ಬ್ಯಾರ್ಲು ಬರೊಂದುಲ್ಲೆರ್ (ಬ್ಯಾರಿಗಳು ಬರುತ್ತಿದ್ದಾರೆ)’ ಎನ್ನುವ ಮಾತು, ಸುತ್ತಲಿನ ಜನರನ್ನು ಸಂಚಲನಗೊಳಿಸುತ್ತಿತ್ತು. ತುಳುವರ ಬದುಕಿನಲ್ಲಿ ಬ್ಯಾರಿಗಳನ್ನು ಕಳೆದರೆ, ತುಳುವರಿಗೆ ಅಸ್ತಿತ್ವವೇ ಇದ್ದಿರಲಿಲ್ಲ. ತುಳು ಪಾಡ್ದನಗಳಲ್ಲಿ ಜಾನಪದಗಳಲ್ಲಿ ಬ್ಯಾರಿಗಳ ಪ್ರಸ್ತಾಪವಿದೆ. ಬಪ್ಪನಾಡಿನಲ್ಲಿ ‘ಬಪ್ಪಬ್ಯಾರಿ’ಯ ಆರ್ಥಿಕ ಸಹಾಯದಿಂದಲೇ ಅಲ್ಲಿಯ ಇಡೀ ಊರು ಅಭಿವೃದ್ಧಿಗೊಂಡಿರುವುದು ಇತಿಹಾಸ. ಅಂದಿನ ಬ್ಯಾರಿಗಳು ತಮ್ಮ ಹೆಸರಿನೊಂದಿಗೆ ಕಡ್ಡಾಯವಾಗಿ ‘ಬ್ಯಾರಿ’ ಎನ್ನುವ ಐಡೆಂಟಿಟಿಯನ್ನು ಸೇರಿಸುತ್ತಿದ್ದರು. ಅದು ಅವರಿಗೆ ಸಮಾಜದಲ್ಲಿ ಘನತೆಯನ್ನು, ಗೌರವವನ್ನು ನೀಡುತ್ತಿತ್ತು. ನೀವು ಎಪ್ಪತ್ತರ ದಶಕದ ಹಿಂದಿನ ಕರಾವಳಿಯ ಯಾವ ಕಡತಗಳಲ್ಲಿ ನೋಡಿದರೂ, ಸ್ಥಳೀಯ ಮುಸ್ಲಿಮರ ಹೆಸರಿನ ಮುಂದೆ ‘ಬ್ಯಾರಿ’ ಎಂದು ಉಲ್ಲೇಖಿಸಿರುವುದನ್ನು ಕಾಣಬಹುದು. ಬ್ಯಾರಿಗಳು ಬ್ರಿಟಿಷರೊಂದಿಗೆ ಮಾತ್ರವಲ್ಲ, ಸ್ಥಳೀಯ ಪುರೋಹಿತಶಾಹಿಗಳೊಂದಿಗೆ, ಪಾಳೇಗಾರರೊಂದಿಗೂ ಸಡ್ಡು ಹೊಡೆದಿದ್ದರು. ಧರ್ಮಸ್ಥಳದ ಹೆಗಡೆ ಕುಟುಂಬದ ವಿರುದ್ಧವೂ ಕೋರ್ಟು, ನ್ಯಾಯ ಎಂದು ಅಲೆದಾಡಿ ಗೆದ್ದ ಅದೆಷ್ಟೋ ಬ್ಯಾರಿಗಳಿದ್ದಾರೆ. ಬ್ಯಾರಿಗಳೊಂದಿಗೆ ಜಿದ್ದಿಗೆ ಬೀಳಲು ಜನರು ಹೆದರುತ್ತಿದ್ದ ಕಾಲ ಅದು.

ಅತಂಹದೊಂದು ಸಮುದಾಯಕ್ಕೆ ಇದ್ದಕ್ಕಿದ್ದಂತೆಯೇ ಯಾಕೆ ಗ್ರಹಣ ಬಡಿಯಿತು? ಅನಂತರದ ಕೆಲವು ತಲೆಮಾರುಗಳು ಯಾಕೆ ತಮ್ಮ ಹೆಸರಿಗೆ ಅಂಜುವಂತಹ ಪರಿಸ್ಥಿತಿ ಎದುರಾಯಿತು?ಇದು ಅತ್ಯಂತ ಕುತೂಹಲಕರವಾಗಿದೆ. ಕಾಲ ಹೇಗೆ ಉರುಳಿತೆಂದರೆ, ಬ್ಯಾರಿಗಳ ಭಂಡಸಾಲೆಯಲ್ಲಿ ಲೆಕ್ಕ ಬರೆಯುತ್ತಿದ್ದವರೆಲ್ಲ ಕ್ರಮೇಣ ಪ್ರಬಲರಾದರು. ಹೆಸರುವಾಸಿಗಳಾಗಿದ್ದ ಬ್ಯಾರಿಗಳ ನಂತರದ ತಲೆಮಾರು ಲೆಕ್ಕ ಬರೆಯುತ್ತಿದ್ದವರನ್ನೇ ಒಡೆಯರೆಂದು ಕರೆಯುವ ಪರಿಸ್ಥಿತಿ ಎದುರಾಯಿತು. ತುಳುನಾಡಿನಲ್ಲಿ ಬ್ರಾಹ್ಮಣ್ಯದ ಪ್ರವೇಶವಾದಂತೆ ಕ್ರಮೇಣ ಬ್ಯಾರಿಗಳು ತುಳುವರಿಗೆ ಅನ್ಯರಾಗತೊಡಗಿದರು. ಬ್ಯಾರಿಗಳ ಅತಿ ಆತ್ಮವಿಶ್ವಾಸ, ‘ಒಂದಾನೊಂದು ಕಾಲದಲ್ಲಿ ನನ್ನಜ್ಜನಿಗೊಂದಾನೆಯಿತ್ತು’ ಎನ್ನುವ ಒಣ ಹುಂಬತನ, ಪಾಳೇಗಾರಿಕೆಯ ಕಾಲದ ಆ ‘ಭ್ರಮೆ’ಗಳಿಂದ ಹೊರಬರಲು ಸಿದ್ಧವಿಲ್ಲದ ಅನಂತರದ ಪೀಳಿಗೆ ಸಮಾಜದಲ್ಲಿ ತಮಾಷೆಗೆ ಗುರಿಯಾಯಿತು. ಶಿಕ್ಷಣದಿಂದ ವಂಚಿತವಾದ ಈ ಪೀಳಿಗೆಗೆ, ಕೈ ತಪ್ಪಿದ ‘ತರವಾಡು ಅಂತಸ್ತಿ’ನಿಂದ ಏಕಾಏಕಿ ಮೀನು ಮಾರುವುದು, ಗುಜರಿ ಹೆಕ್ಕುವುದು ಇತ್ಯಾದಿಯೇ ಅನಿವಾರ್ಯವಾಯಿತು. ಬ್ಯಾರಿಗಳನ್ನು ಏಕಾಏಕಿ ಆಹುತಿ ತೆಗೆದುಕೊಂಡ ಬಡತನ, ನಾಯಕತ್ವದ ಕೊರತೆ ಅವರನ್ನು ಅತಂತ್ರವನ್ನಾಗಿಸಿದವು. ಅವರ ಅಸಹಾಯಕತೆಯನ್ನು ಚೆನ್ನಾಗಿಯೇ ಬಳಸಿಕೊಂಡ ‘ಮೇಲ್ವರ್ಗ’ ಬ್ಯಾರಿಗಳನ್ನು ಕಳ್ಳರನ್ನಾಗಿಯೂ, ಕಾಮುಕನ್ನಾಗಿಯೂ ಬಿಂಬಿಸುವ ಪ್ರಯತ್ನ ನಡೆಸಿತು. ಅದರ ಪರಿಣಾಮ ಎಷ್ಟು ತೀವ್ರವಾಯಿತೆಂದರೆ ಒಂದು ತಲೆಮಾರು ತನ್ನ ಭಾಷೆ, ಐಡೆಂಟಿಟಿಗಾಗಿ ನಾಚಿಕೊಳ್ಳುವಷ್ಟು. ಇದರಿಂದಾಗಿ ಬ್ಯಾರಿ ಭಾಷೆ, ಸಂಸ್ಕೃತಿಯೊಳಗೆ ಅಡಕವಾಗಿದ್ದ ಜಾನಪದಗಳು, ಸಾಹಿತ್ಯಗಳು ಸಂಪೂರ್ಣ ಅವಜ್ಞೆಗೊಳಗಾದವು.

ಇಂತಹ ಒಂದು ಭಾಷೆ ಏಕಾಏಕಿ ಆತ್ಮವಿಶ್ವಾಸದೊಂದಿಗೆ ತಲೆ ಎತ್ತಿ ನಿಂತುದು 90ರ ದಶಕದಲ್ಲಿ. ಕೆಲವು ಬ್ಯಾರಿ ಸಾಹಿತಿಗಳು, ಮುಖಂಡರು ಒಂದಾಗಿ ‘ನಾವೆಲ್ಲ ಬ್ಯಾರಿಗಳು’ ಎಂದು ಘೋಷಿಸಿಕೊಂಡುದು ತುಳುನಾಡಿನ ಜನರಿಗೆ ಅಚ್ಚರಿಯನ್ನು ತಂದಿತ್ತು. ಅಷ್ಟೇ ಅಲ್ಲ, ಬ್ಯಾರಿ ಸಮುದಾಯದ ಜನರಿಗೆ ಇದು ಮೊತ್ತ ಮೊದಲ ಬಾರಿಗೆ ‘ತಮಾಷೆ’ಯಾಗಿ ಕಂಡಿತ್ತು. ಆದರೆ ಕೆಲವು ಮುಖಂಡರು ಸೇರಿ ಮೊತ್ತ ಮೊದಲ ಬ್ಯಾರಿ ಸಮಾವೇಶ ಮಾಡಿದಾಗ, ಅದರಲ್ಲಿ ಸರ್ವ ಬ್ಯಾರಿಗಳು ಒಂದಾಗಿ ತಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸಿದಾಗ ಕರಾವಳಿಯ ಇತರ ಮೇಲ್ವರ್ಣಿಯ ತುಳುವರು ‘ಅಪರಾಧಿಗಳಂತೆ’ ತಲೆ ತಗ್ಗಿಸಿದರು. ಆ ಒಂದು ಸಮ್ಮೇಳನದಲ್ಲಿ ಬ್ಯಾರಿ ಭಾಷೆ, ಸಮುದಾಯ ತನ್ನ ಅವಮಾನ, ಕೀಳರಿಮೆ ಇತ್ಯಾದಿಗಳನ್ನು ಕೊಡವಿ ತಲೆಯೆತ್ತಿ ನಿಂತಿತು. ಅನಂತರ ಬ್ಯಾರಿಗಳು ಮಾಡಿದ ಎಲ್ಲ ಸಮಾವೇಶಗಳು ಉಳಿದ ಸಮಾವೇಷಗಳಿಗೆ ಒಂದು ಮಾದರಿಯಂತಿದ್ದವು. ಪ್ರಪ್ರಥಮ ಬ್ಯಾರಿ ಸಮ್ಮೇಳನದಲ್ಲಿ ಸಭಿಕರಲ್ಲೊಬ್ಬನಾಗಿ ನಾನೂ ಭಾಗವಹಿಸಿದ್ದೆ. ರೋಮಾಂಚಿತನಾಗಿದ್ದೆ. ಈ ಸಮ್ಮೇಳನ ನಡೆದ ಬರೇ ಹತ್ತು ವರ್ಷಗಳಲ್ಲಿ ಬ್ಯಾರಿ ಭಾಷೆ ತನ್ನದೇ ಆದ ಒಂದು ಅಕಾಡಮಿಯನ್ನು ಸರಕಾರದಿಂದ ಗಿಟ್ಟಿಸಿಕೊಂಡಿತು. ಬ್ಯಾರಿ ಭಾಷೆಗೆ ಯಾಕೆ ಅಕಾಡಮಿ ನೀಡುವುದು? ಎಂದು ಕೇಳಿದವರೇ ಬ್ಯಾರಿಗಳ ಒಂದು ಕಾಲದ ಹೀನಾಯ ಸ್ಥಿತಿಗೆ ಕಾರಣರಾದವರು ಎನ್ನುವುದನ್ನು ನಾನಿಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

ಬ್ಯಾರಿ ಭಾಷೆಗೆ ಅಕಾಡಮಿ ನೀಡುವ ಮೂಲಕ 12 ಲಕ್ಷಕ್ಕೂ ಅಧಿಕ ಜನರಿರುವ ಒಂದು ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರಕಾರ ಮಾಡಿದೆ. ಒಂದು ಕಾಲದಲ್ಲಿ ಅವಮಾನ, ಕೀಳರಿಮೆಯ ಬದುಕನ್ನು ಸವೆಸಿದ ಸಮುದಾಯಕ್ಕೆ ನ್ಯಾಯವನ್ನು ನೀಡುವ ಪ್ರಯತ್ನ ಇದಾಗಿದೆ. ಆದುದರಿಂದ ಬ್ಯಾರಿಗಳ ಸಂಭ್ರಮದಲ್ಲಿ ಕರಾವಳಿಯ ತುಳುವರು ಮಾತ್ರವಲ್ಲ ಇಡೀ ಕನ್ನಡಿಗರೇ ಪಾಲುಗೊಳ್ಳಬೇಕು. ಅವರಿಗೆ ಮಾರ್ಗದರ್ಶನವನ್ನು ನೀಡಬೇಕು. ಈ ಮೂಲಕ, ಬ್ಯಾರಿ ಸಮುದಾಯಕ್ಕೆ ಈವರೆಗೆ ಆದ ಅನ್ಯಾಯಕ್ಕೆ ಪಶ್ಚಾತ್ತಾಪ ಪಡಬೇಕು.6 comments:

 1. ಲೇಖನ ಚೆನ್ನಾಗಿದೆ. ಈ ಒಂದು ತಾರತಮ್ಯದ ಅನುಭವ ಕೇವಲ ಕರಾವಳಿ ಪ್ರದೇಶದಲ್ಲಿ ಮಾತ್ರ ಇತ್ತೆಂದು ನನ್ನ ಭಾವನೆ ('ನಾನೊಬ್ಬ ಬ್ಯಾರಿ' ಎಂದರೆ ನಮ್ಮ ಭಾಗದಲ್ಲಿ 'ಅದು ಯಾವ ಜಾತಿ' ಎಂದು ಕೇಳುತ್ತಾರೆ!). ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು ಪ್ರಾಂತ್ಯದಲ್ಲಿನ ಬ್ಯಾರಿಗಳಿಗೆ ಈ ಒಂದು ಅನುಭವ ಬಹುಶ್ಯಹಾ ಆಗಿದ್ದಿಲ್ಲ. ತುಳುನಾಡಿನಲ್ಲಿನ ಕೋಮುತಿಕ್ಕಾಟದಲ್ಲಿ ಹುಟ್ಟಿಕೊಂಡ ವಿಚಿತ್ರವಿದು.

  ReplyDelete
 2. chennagide lekhana basheer bai. 2009 ra bhandarkar's colej na varsha patrikeyalli byari bhasheya 2 lekhana nodidde. Adre idra bagge ariviralilla. Olle mahitige vandane

  ReplyDelete
 3. ಬಷೀರ್ ಸರ್, ಬ್ಯಾರಿ ಭಾಷೆಯ ಲಿಪಿ ಚಿತ್ರ ಈ ಲೇಖನದೊಂದಿಗೆ ಹಾಕಿದ್ದರೆ ಓದುಗರಿಗೆ ಇನ್ನೂ ಈ ಭಾಷೆಯ ಬಗ್ಗೆ ತಿಳಿಯಬಹುದು.

  ReplyDelete
 4. ಬ್ಯಾರಿ ಭಾಷೆಗೆ ಲಿಪಿ ಇಲ್ಲ. ಅದು ಮೌಖಿಕ ಭಾಷೆ. ಲಿಪಿಯ ಅಗತ್ಯ ಬಿದ್ದಾಗ ಕನ್ನಡವನ್ನೇ ಬಳಸುತ್ತಾರೆ.

  ReplyDelete
 5. ನಮಗಿಲ್ಲಿ ಏನು ಸರಿಯಾಗಿ.. ಅರ್ಥ ಆಗುತ್ತಾ ಇಲ್ಲ... ಇದನ್ನ ಯಾವ ರೀತಿಯ ಚಿಂತನೆಯಲ್ಲಿ ಓದಬೇಕು... ಸ್ವಲ್ಪ ಸರಳವಾದ ವಿವರಣೆ ನೀಡುತ್ತೀರಾ..
  ಇದನ್ನು ಎರಡು ಸರಿ ಓದಿದೆವು... ಆದರೆ ನಮಗಿದು ಕೇವಲ ಕಥೆಯ ರೂಪದಲ್ಲಿ ಅರ್ಥವಾಗಿದೆ .. ವಿಷಯ ಮಾತ್ರ ತಲೆ ಕೆಡಿಸುತ್ತಿದೆ.. ಬ್ಯಾರಿ ಎಂಬುದು ಏನು.. ?
  ಭಾಷೆಯೇ , ಜಾತಿಯೇ , ಅಥವಾ ಮುಸಲ್ಮಾನರಲ್ಲಿನ ಒಂದು ಒಳ ಜಾತಿಯೇ.. ?
  ನಿಮ್ಮ ಲೇಖನದಿಂದ ಏನು ಅರ್ಥ ಆಯಿತು ಅಂತ ಹೇಳೋದು ಈಗ ಗೊಂದಲಮಯವಾಗಿದೆ... ಸ್ವಲ್ಪ ನಮ್ಮ ಸಂದೇಹಗಳಿಗೆ ವಿವರಣೆ ನೀಡಿದರೆ.. ಮತ್ತೊಮ್ಮೆ ಈ ಲೇಖನ ಅರ್ಥ ಮಾಡಿಕೊಂಡು ಪ್ರತಿಕ್ರಿಯೆ ನೀಡುವೆವು... ತಪ್ಪು ತಿಳಿಯಬೇಡಿ ... ನಮಗನ್ನಿಸಿದ್ದು ಹೇಳಿದ್ದೇವೆ ಅಷ್ಟೇ.. :)

  ReplyDelete
 6. naavu "koDagu MaDikeri"yinda prathama byari haaDu caset hiDiduknoDu ondu byari casete kaaryakrama haaki mangaLoorige hogi alliya "udayavaaNi "yalli advertisement kottevu.neevu heLidante aavaaga mangaLoorina kelavu byarigaLige, byaari pudiyo paatnga (Byari hosa haaDugaLu)emba sheeshrike ishtavaagiralilla.
  nanna abhipraaydalli,aa kaaryakramada nantharave byarigaLu byari samaavesha mattitara kaaryakramagaLannu hammikondu tamma bhaasheya bagge gourava hondalu kaaraaNavaagirabahudu.
  Qamar.

  ReplyDelete