Wednesday, December 28, 2011

ರಕ್ತ ಮತ್ತು ಇತರ ಕತೆಗಳು


ಭಯ
ಒಬ್ಬ ಭಯೋತ್ಪಾದಕ.
ಆತ್ಮಹತ್ಯೆಗೆ ಸಿದ್ಧನಾಗುತ್ತಿದ್ದ.
ಮೈ ತುಂಬಾ ಬಾಂಬುಗಳು.
ಅವನ ಮಕ್ಕದಲ್ಲೇ ಪುಟಾಣಿ ಮಗುವೊಂದು ಆಡುತ್ತಿತ್ತು.
ಮಗು ಇದ್ದಕ್ಕಿದ್ದಂತೆಯೇ ಅವನತ್ತ ನೋಡಿತು.
ಕಣ್ಣಿಗೆ ಕಣ್ಣು ಸೇರಿಯೇ ಬಿಟ್ಟಿತು.
ಆತ ಭಯದಿಂದ ಸಣ್ಣಗೆ ನಡುಗಿ ಬಿಟ್ಟ.

ಒಂದು ಕನಸು
ಒಂದು ಕನಸು ಆಶ್ರಯಕ್ಕಾಗಿ ಬೀದಿ ಬೀದಿ ಅಲೆಯುತ್ತಿತ್ತು. ಆ ಊರಿನ ಶ್ರೀಮಂತನೊಬ್ಬನ ಮನೆಯ ಬಾಗಿಲನ್ನು ತಟ್ಟಿತು. ‘‘ನಾನೊಂದು ಕನಸು. ನನಗೆ ಆಶ್ರಯ ಕೊಡುವೆಯ?’’ ಶ್ರೀಮಂತನಲ್ಲಿ ಕೇಳಿತು.
ಶ್ರೀಮಂತ ಸಿಟ್ಟಿನಿಂದ ಹೇಳಿದ ‘‘ನಿನ್ನಂತಹ ಕನಸುಗಳಿಗೆ ನನ್ನ ಅರಮನೆಯಲ್ಲಿ ಜಾಗವಿಲ್ಲ’’ ಎಂದು ಹೊರಗಟ್ಟಿದ.
ಆ ಕನಸು ಅದೇ ಬೀದಿಯ ಭಿಕ್ಷುಕನೊಬ್ಬನ ಬಳಿಕ ಆಶ್ರಯ ಕೇಳಿತು ‘‘ನಾನೊಂದು ಕನಸು. ನನಗೆ ಆಶ್ರಯ ಕೊಡುವೆಯ?’’ ಭಿಕ್ಷುಕ ತನ್ನ ಗುಡಿಸಲಲ್ಲಿ ಆ ಕನಸಿಗೆ ಆಶ್ರಯ ಕೊಟ್ಟ.
ಕನಸು ಆ ಗುಡಿಸಲಲ್ಲಿ ಬೆಳೆಯಿತು. ಕನಸು ಬೆಳೆದಂತೆ ಆ ಭಿಕ್ಷುಕನೂ ಬೆಳೆದ. ಇತ್ತ ಕನಸನ್ನು ಹೊರ ಹಾಕಿದ ಶ್ರೀಮಂತ ಸಿಡಿಲಿಗೆ ಸಿಲುಕಿದ ಮರದಂತೆ ಬಾಡತೊಡಗಿದ. ನಿಧಾನಕ್ಕೆ ಬಿಕಾರಿಯೇ ಆದ.

ರಕ್ತ
ಕುರಿ ಕಡಿಯುತ್ತಿದ್ದ ಕಟುಕನಲ್ಲಿ ಆತ ಕೇಳಿದ
‘‘ಇದರ ರಕ್ತ ನೋಡಿ ನಿನಗೆ ಏನೂ ಅನ್ನಿಸುತ್ತಿಲ್ಲವೆ?’’
‘‘ಇಲ್ಲ, ಯಾಕೆಂದರೆ ಹಸಿದ ನನ್ನ ಮಕ್ಕಳ ಕಣ್ಣೀರಿನ ಬಣ್ಣ ರಕ್ತಕ್ಕಿಂತಲೂ ಕೆಂಪಗಿದೆ’’ ಕಟುಕ ಉತ್ತರಿಸಿದ.

ಕನಸು
ಒಬ್ಬ ಸುಂದರವಾದ ಕನಸು ಕಾಣುತ್ತಿದ್ದ.
ಇದ್ದಕ್ಕಿದ್ದಂತೆಯೇ ಯಾರೋ ಕರೆದರು. ನೋಡಿದರೆ ಪತ್ನಿ.
‘‘ಛೇ, ಕನಸನ್ನು ಕೆಡಿಸಿಬಿಟ್ಟೆ’’ ಗಂಡ ಕಿಡಿಯಾಗಿ ಹೇಳಿದ.
‘‘ಕನಸು ನಿಮ್ಮನ್ನು ಕೆಡಿಸುವುದಕ್ಕಿಂತ ಕನಸನ್ನು ನಾನು ಕೆಡಿಸುವುದೇ ವಾಸಿ. ಕಚೇರಿಗೆ ಹೊತ್ತಾಯಿತು ಏಳಿ’’ ಪತ್ನಿ ಖಾರವಾಗಿ ಉತ್ತರಿಸಿದಳು.

ಹೀಗೊಂದು ಪತ್ರ 
ಸಾಧಾರಣವಾಗಿ ಆತ ಇಮೇಲ್ ಮೂಲಕ, ಮೊಬೈಲ್‌ಗಳ ಮೂಲಕವೇ ಮಿತ್ರರ ಸಂದೇಶಗಳನ್ನು ಸ್ವೀಕರಿಸುವುದು. ಹೀಗಿರುವಾಗ ಒಂದು ದಿನ ಆತನಿಗೆ ಇನ್‌ಲೇಂಡ್ ಲೆಟರ್‌ನಲ್ಲಿ ಒಂದು ಪತ್ರ ಬಂತು.
ಅರೆ! ನನಗೆ ಪೋಸ್ಟ್ ಮೂಲಕ ಪತ್ರವೆ? ಯಾರಿಂದ? ಎಲ್ಲಿಂದ? ಅವನಿಗೆ ಅಚ್ಚರಿಯಾಯಿತು.
ಪೋಸ್ಟ್‌ಮೇನನ್ನು ನೋಡಿದ. ಒಣಗಿದ ಮುಖ. ಆತ ಪೋಸ್ಟ್‌ಮೇನ್‌ಗೆ ಹೇಳಿದ ‘‘ನನಗೆ ಪತ್ರ ಬರೆಯುವವರು ಯಾರೂ ಇಲ್ಲ’’
 ಪೋಸ್ಟ್ ಮೇನ್ ಉತ್ತರಿಸಿದ ‘‘ಇತ್ತೀಚೆಗೆ ನಮ್ಮ ಕಚೇರಿಯಿಂದ ರವಾನಿಸಲು ಪತ್ರಗಳೇ ಇಲ್ಲ. ಹೀಗೆ ಆದರೆ ನನ್ನ ಕೆಲಸವೇ ಹೋಗಿ ಬಿಡುತ್ತೆ. ಆದುದರಿಂದ ನಾನೇ ಎಲ್ಲ ವಿಳಾಸ ಹುಡುಕಿ ಪತ್ರ ಬರೆಯುತ್ತಿದ್ದೇನೆ. ಪ್ಲೀಸ್ ತಗೊಳ್ಳಿ...’’

ಉದ್ಧಾರ
ತನ್ನ ವರ್ಗಾವಣೆಗಾಗಿ ಮೇಷ್ಟ್ರು ರಾಜಕಾರಣಿಯಾಗಿರುವ ತನ್ನ ಶಿಷ್ಯನ ಮನೆ ಬಾಗಿಲನ್ನು ತುಳಿದರು.
ರಾಜಕಾರಣಿ ವ್ಯಂಗ್ಯದಿಂದ ಕೇಳಿದ ‘‘ಏನು ಸಾರ್? ಈ ಜನ್ಮದಲ್ಲಿ ಉದ್ಧಾರವಾಗೋದಿಲ್ಲ ಅಂತ ಶಾಲೆಯಲ್ಲಿ ಎಲ್ಲರೆದುರು ಹೇಳ್ತಾ ಇದ್ದಿರಿ?’’
ಮೇಷ್ಟ್ರು ತಣ್ಣಗೆ ಹೇಳಿದರು ‘‘ಎಲ್ಲಿ ಉದ್ಧಾರ ಆಗಿದ್ದೀಯ? ರಾಜಕಾರಣಿಯಾಗಿದ್ದೀಯೆ ಹೊರತು, ಉದ್ಧಾರ ಎಲ್ಲಿ ಆಗಿದ್ದಿ?’’
ಹಾಗೆಂದು ಮೇಷ್ಟ್ರು ಬಂದ ದಾರಿಯಲ್ಲೇ ವಾಪಾಸಾದರು.

ಗೊತ್ತಿಲ್ಲ
‘‘ಎಲ್ಲಿಗೆ ಹೊರಟಿದ್ದೀಯ?’’
‘‘ಒಂದಿಷ್ಟು ಖರೀದಿ ಮಾಡುವುದಕ್ಕಿತ್ತು. ಶಾಪಿಂಗ್‌ಗೆಂದು ಮಾಲ್ ಕಡೆ ಹೊರಟಿದ್ದೇನೆ’’
‘‘ಏನು ಖರೀದಿಸುವುದಕ್ಕೆ ಹೊರಟಿದ್ದೀಯ?’’
‘‘ಗೊತ್ತಿಲ್ಲ, ಶಾಪಿಂಗ್ ಮಾಲ್‌ನಲ್ಲಿ ಏನೇನಿದೆ ಎಂದು ನೋಡಿ ಖರೀದಿಸಲಿದ್ದೇನೆ’’

ಬಾಕ್ಸಿಂಗ್
ಇಬ್ಬರೂ ಬಾಕ್ಸಿಂಗ್ ಕಲಿಗಳು.
ಕಣದಲ್ಲಿ ಪರಸ್ಪರ ಹೋರಾಡುತ್ತಿದ್ದರು.
ಜನರು ಹುಚ್ಚೆದ್ದು ಕುಣಿದು, ಪ್ರೋತ್ಸಾಹಿಸುತ್ತಿದ್ದರು.
ಮೊದಲ ಬಾಕ್ಸರ್ ಎರಡನೆಯವನಿಗೆ ಬಲವಾಗಿ ಗುದ್ದಿದ.
ಎರಡನೆಯ ವ್ಯಕ್ತಿ ಆ ಏಟಿನ ಆಘಾತಕ್ಕೆ ತತ್ತರಿಸಿದ. ಅವನ ಮೂಗಿನಿಂದ ರಕ್ತ ಒಸರತೊಡಗಿತು.
ಏನನ್ನಿಸಿತೋ, ಮೊದಲನೆ ಬಾಕ್ಸರ್ ಮೆಲ್ಲಗೆ ಹೇಳಿಯೇ ಬಿಟ್ಟ ‘‘ನೋವಾಯಿತೇ...ಕ್ಷಮಿಸಿ ಬಿಡು’’
ಎರಡನೆಯಾತ ನೋವಿನಲ್ಲಿ ಮುಲುಗುತ್ತಾ ನುಡಿದ ‘‘ನೀನು ಮೊದಲು ನೀಡಿದ ಪೆಟ್ಟಿಗಿಂತಲೂ ಹೆಚ್ಚು ತೀಕ್ಷ್ಣವಾಗಿದೆ ನಿನ್ನ ಕ್ಷಮೆ’’

ಮೊಬೈಲು
ಮನೆಗೆ ತಂದ ಮೊಬೈಲನ್ನು ಹೆಂಡತಿ ಮಕ್ಕಳಿಗೆ ಪರಿಚಯಿಸುತ್ತಿದ್ದ
‘‘ಇದನ್ನು ಮೊಬೈಲು ಎಂದು ಕರೆಯುತ್ತಾರೆ. ಎಷ್ಟು ದೂರವಿದ್ದವರೊಂದಿಗೂ ಇದರಲ್ಲಿ ಮಾತನಾಡಬಹುದು...ಪ್ರಪಂಚದ ಎಲ್ಲೇ ಇದ್ದರೂ ಅವರೊಂದಿಗೆ ಮಾತನಾಡಬಹುದು’’ ಮಗ ಮೂಲೆಯಲ್ಲಿ ಕುಳಿತಿದ್ದ ತಾಯಿಗೆ ಕೂಗಿ ಹೇಳಿದ.
‘‘ಇನ್ನಾದರೂ ನನ್ನೊಟ್ಟಿಗೆ ಸರಿಯಾಗಿ ಮಾತನಾಡಬಹುದಲ್ಲ ಮಗ’’ ತಾಯಿ ಸಂಭ್ರಮದಿಂದ ಕೇಳಿದಳು.
ಮಗ ತಲೆತಗ್ಗಿಸಿದ.

1 comment:

  1. ಹಾಗೆ ಸುಮ್ಮಸುಮ್ಮನೆ ಮನಸ್ಸನ್ನು ತಟ್ಟಿ ಬಿಡುವ ಸಣ್ಣ ಸಣ್ಣ ಕತೆಗಳು.... ಸುಮ್ಮನೆ ಎಂದುಕ್ಕೊಂಡು ಓದಿದರೂ ಚಿಂತನೆಗೆ ಹಚ್ಚುತ್ತದೆ....
    ಮೊಬೈಲು ಅನ್ನುವ ಕೊನೆ ಕತೆಯಂತೂ ಕಣ್ಣು ತೇವಗೊಳಿಸುತ್ತದೆ..

    ಎಲ್ಲವೂ ಚೆನ್ನಾಗಿದೆ ....i liked very much...

    ReplyDelete