Saturday, November 12, 2011

ರಾಕ್‌ಸ್ಟಾರ್: ಎಲ್ಲ ಗೋಡೆಗಳನ್ನು ಒಡೆದು ಪ್ರೀತಿ, ಸಂಗೀತದೆಡೆಗೆ.....

ಪ್ರೀತಿ, ಸಂಗೀತ ಮತ್ತು ಬದುಕು ಇವುಗಳನ್ನು ವಿಭಿನ್ನವಾಗಿ ಕಟ್ಟಿಕೊಡುವ ಇಮ್ತಿಯಾಝ್ ಅಲಿ ಅವರ ಇನ್ನೊಂದು ಪ್ರಯತ್ನ ‘ರಾಕ್‌ಸ್ಟಾರ್’. ಜಬ್ ವಿ ಮೆಟ್ ಮತ್ತು ಲವ್ ಆಜ್, ಕಲ್‌ನಿಂದ ಇನ್ನೊಂದು ಹಂತ ಬೆಳೆದಿದ್ದಾರೆ ನಿರ್ದೇಶಕರು. ಎಲ್ಲ ಗೋಡೆಗಳನ್ನು ಒಡೆದು ಒಂದಾಗಲು ಹಂಬಲಿಸುವ ಪ್ರೀತಿ ಮತ್ತು ಸಂಗೀತ! ಹಾಗೆಯೇ ಅದರ ಬೆನ್ನು ಹತ್ತಿ ಹರಾಜಕ ಬದುಕನ್ನು ಅಪ್ಪಿಕೊಳ್ಳುವ ರಾಕ್‌ಸ್ಟಾರ್. ಒಂದು ಅರ್ಥದಲ್ಲಿ ಇಲ್ಲಿ ಕತೆಯೇ ಇಲ್ಲ. ಬರೇ ಭಾವನೆಗಳನ್ನೇ ಸಿನಿಮಾವಾಗಿಸಿದ್ದಾರೆ. ರಾಕ್‌ಸ್ಟಾರ್‌ನ ಕೈಬೆರಳ ಸ್ಪರ್ಶದಿಂದ ಆರೋಗ್ಯಪೂರ್ಣವಾಗುವ ನಾಯಕಿ. ನಾಯಕಿಯ ಹಂಬಲಿಕೆಯಿಂದಲೇ ತನ್ನ ಸಂಗೀತದ ತೀವ್ರತೆಯನ್ನು ಮುಟ್ಟುವ ರಾಕ್‌ಸ್ಟಾರ್. ಆಧುನಿಕ ಮನಸ್ಸುಗಳ ತಳಮಳ, ಮಿಡಿತಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಚಿತ್ರದಲ್ಲಿದೆ. ಒಂದು ರೀತಿಯಲ್ಲಿ ತಂತಿಯ ಮೇಲೆ ನಡೆದಿದ್ದಾರೆ ಇಮ್ತಿಯಾಝ್. ತುಸು ಕಾಲು ಜಾರಿದರೂ ಪ್ರಪಾತಕ್ಕೆ. ಒಬ್ಬ ಖ್ಯಾತ ಸಂಗೀತಗಾರನಾಗಬೇಕಾದರೆ ಆತ ಬದುಕಿನಲ್ಲಿ ನೋವು ತಿನ್ನುವುದು ಅತ್ಯಗತ್ಯವೆ? ಅವನ ಬದುಕು ಅರಾಜಕವಾಗುವುದು ಅನಿವಾರ್ಯವೆ? ಮಧ್ಯಮ ವರ್ಗದಿಂದ ಬಂದ ಜನಾರ್ದನ್ ಜಖರ್ ಗಿಟಾರ್ ಹಿಡಿದು ಅದರಿಂದ ಸಂಗೀತವನ್ನು ಹೊರಡಿಸಲು ಪ್ರಯತ್ನಿಸುವಾಗ ಅವನಿಗೆ ಸಿಗುವ ಸಲಹೆ ಇದು. ಯಾವುದೇ ಸಂಗೀತಗಾರನ ಹಿನ್ನೆಲೆಯನ್ನು ನೋಡು. ಅವನೊಬ್ಬ ಭಗ್ನ ಪ್ರೇಮಿಯಾಗಿರುತ್ತಾನೆ. ಅವನ ಬದುಕು ನೋವಿನ ಕುಲುಮೆಯಿಂದ ಎದ್ದು ಬಂದಿರುತ್ತದೆ. ಆ ಭಗ್ನ ಹೃದಯದಿಂದ ಸಂಗೀತ ಹುಟ್ಟುತ್ತದೆ. ದಿಲ್ಲಿ ಯುನಿವರ್ಸಿಟಿಯ ಕ್ಯಾಂಟೀನ್‌ನಲ್ಲಿ ಸಮೋಸಾ ಜೊತೆಗೆ ಚಟ್ನಿಗಾಗಿ ಗದ್ದಲ ಎಬ್ಬಿಸುವ ಜನಾರ್ದನ್‌ಗೆ ಇದು ದೊಡ್ಡ ಸಮಸ್ಯೆಯಾಗುತ್ತದೆ. ನೋವುಗಳಿಲ್ಲದಿರುವುದೇ ಅವನ ನೋವುಗಳಿಗೆ ಕಾರಣ. ತಾನು ಸಂಗೀತಗಾರನಾಗಬೇಕಾದರೆ ನೋವುಗಳು ಬೇಕು. ಅದರ ಹುಡುಕಾಟದಲ್ಲಿ ಮತ್ತಷ್ಟು ಹಾಸ್ಯಾಸ್ಪದನಾಗುತ್ತಾ ಹೋಗುತ್ತಾನೆ ಜನಾರ್ದನ್.

ಹೀರಾ ಎನ್ನುವ ಕಾಲೇಜಿನ ಸ್ಟಾರ್ ಹುಡುಗಿಯನ್ನು ಪ್ರೇಮಿಸುವುದಕ್ಕೆ ಹೊರಟು, ಭಗ್ನ ಪ್ರೇಮಿಯಾಗಲು ಯತ್ನಿಸುತ್ತಾನೆ. ಆದರೆ ಕ್ಯಾಂಟೀನ್ ಮಾಲಕ ಮಾತ್ರ ಆತನಿಗೆ ಛೀಮಾರಿ ಹಾಕುತ್ತಾನೆ. ‘ನೀನು ನಿಜಕ್ಕೂ ಆ ಹುಡುಕಿಯನ್ನು ಪ್ರೀತಿಸಿದ್ದಿದ್ದರೆ ಇಲ್ಲಿ ಚಟ್ನಿಗಾಗಿ ಜಗಳ ಮಾಡುತ್ತಾ ಕಾಲ ಹರಣ ಮಾಡುತ್ತಿರಲಿಲ್ಲ’ ಎನ್ನುತ್ತಾನೆ. ಆದರೆ ಪ್ರೀತಿಯ ಕುರಿತ ಈ ಹುಡುಗಾಟವೇ ಆ ಹುಡುಗಿಯನ್ನು ಅವನಿಗೆ ಹತ್ತಿರವಾಗಿಸುತ್ತದೆ. ಹೀರಾ ಮೇಲ್ದರ್ಜೆಯ ಹುಡುಗಿ ಎನ್ನುವುದು ಜನಾರ್ದನ್ ಕಲ್ಪನೆ. ಆದರೆ ಆ ಕಲ್ಪನೆಯನ್ನು ಒಂದು ದಿನ ಹೀರಾ ಒಡೆದು ಹಾಕುತ್ತಾಳೆ. ತನಗೆ ದಿಲ್ಲಿಯ ಕಳಪೆ ಥಿಯೇಟರ್‌ನಲ್ಲಿ ‘ಜಂಗ್ಲಿಜವಾನಿ’ ಎನ್ನುವ ಕಳಪೆ ಚಿತ್ರ ನೋಡಬೇಕಾಗಿದೆ. ಹೋಗೋಣವೆ? ಎಂದು ನಾಯಕನಲ್ಲಿ ಕೇಳುತ್ತಾಳೆ. ಇಲ್ಲಿಂದ ಅವರ ಸ್ನೇಹ ತೆರೆದುಕೊಳ್ಳುತ್ತದೆ. ದಿಲ್ಲಿಯ ಕತ್ತಲ ಮೂಲೆಗಳಲ್ಲಿ ಬಚ್ಚಿಟ್ಟುಕೊಂಡಿರುವ ಗಂಧೀ ಬದುಕಿನಲ್ಲಿರುವ ಸ್ವಾತಂತ್ರವನ್ನು ಅವರಿಬ್ಬರು ಕದ್ದು ಮುಚ್ಚಿ ಅನುಭವಿಸುತ್ತಾರೆ. ಹೆಂಡ ಕುಡಿಯುತ್ತಾರೆ. ಹೋಗಬಾರದ, ನೋಡಬಾರದ ಸ್ಥಳಗಳನ್ನೆಲ್ಲ ನೋಡುತ್ತಾರೆ. ಹೀರಾಳ ಮದುವೆ ದಿನ ಹತ್ತಿರವಾಗುತ್ತದೆ. ಆಕೆಯ ಮದುವೆಯಲ್ಲಿ ಪಾಲ್ಗೊಳ್ಳಲು ನಾಯಕ ಕಾಶ್ಮೀರಕ್ಕೆ ತೆರಳುತ್ತಾನೆ. ಅಲ್ಲಿ ತಾನವಳನ್ನು ಕಳೆದುಕೊಳ್ಳುತ್ತಿರುವುದು ಅವನಿಗೆ ಮನವರಿಕೆಯಾಗುತ್ತದೆ. ಮದಿರಂಗಿ ಹಾಕಿದ ಕೈಗಳನ್ನು ಮುಂದಿಟ್ಟು ತನ್ನನ್ನು ತಬ್ಬಿಕೋ ಎಂದು ಅವಳು ಹೇಳುತ್ತಾಳೆ. ನಾಯಕ ಮೆದುವಾಗಿ ತಬ್ಬಿಕೊಳ್ಳುತ್ತಾಳೆ. ‘‘ಇನ್ನೂ ಗಟ್ಟಿಯಾಗಿ’’ ಎನ್ನುತ್ತಾಳೆ ಮದುಮಗಳು.

ಅಲ್ಲಿಂದ ಮರಳಿದ ಜನಾರ್ದನ್ ನಿಧಾನಕ್ಕೆ ಮನೆಯಲ್ಲೂ ತಿರಸ್ಕೃತನಾಗುತ್ತಾ ಹೋಗುತ್ತಾನೆ. ಗಿಟಾರ್ ಅವನ ಜೊತೆಯಾಗುತ್ತಾನೆ. ಕಳ್ಳತನದ ಸುಳ್ಳು ಆರೋಪ ಹೊತ್ತು ಮನೆಯಿಂದ ಹೊರಗಟ್ಟಿದಾಗ ಅವನು ದಿಲ್ಲಿಯ ದರ್ಗಾ ಸೇರುತ್ತಾನೆ. ಅಲ್ಲಿ ಹಾಡುತ್ತಾ ಕಾಲ ಕಳೆಯುತ್ತಾನೆ. ಬದುಕು ಅವನನ್ನು ತಿರಸ್ಕರಿಸಿದಂತೆ, ಸಂಗೀತ ಅವನೊಳಗೆ ತೀವ್ರಗೊಳ್ಳುತ್ತಾ ಹೋಗುತ್ತದೆ. ಮುಂದೆ ವಿದೇಶದಲ್ಲಿ ಹೀರಾಳನ್ನು ಅವನು ಮತ್ತೆ ಭೇಟಿ ಮಾಡುತ್ತಾನೆ. ಕಟ್ಟುಪಾಡಿನ ಜಗತ್ತಿನಲ್ಲಿ ಅವಳು ಬಂಧಿಯಾಗಿರುತ್ತಾಳೆ. ಆರೋಗ್ಯ ಕೆಟ್ಟಿರುತ್ತದೆ. ಮಾನಸಿಕ ವೈದ್ಯರನ್ನು ಬೇಟಿಯಾಗಲೆಂದು ಹೊರಟಾಗ ನಾಯಕ ಎದುರಾಗುತ್ತಾನೆ. ನಾಯಕನ ಭೇಟಿಯಿಂದ ಆಕೆ ಮತ್ತೆ ಅರಳುತ್ತಾಳೆ. ಇನ್ನೊಮ್ಮೆ ಆಕೆಯನ್ನು ಅವಳ ಮನೆಯಲ್ಲಿ ಭೇಟಿ ಮಾಡುವ ಪ್ರಯತ್ನ ಅವನನ್ನು ಅಪರಾಧಿಯನ್ನಾಗಿಸುತ್ತದೆ. ಇದು ಜಾರ್ಡನ್‌ಗೆ ಹೊಸ ಇಮೇಜ್ ನೀಡುತ್ತದೆ. ಆತ ಜೈಲು ಸೇರುತ್ತಾನೆ. ಜೈಲಿನಿಂದ ಬಿಡುಗಡೆಯ ಹಂಬಲ ಅವನ್ನು ಇನ್ನಷ್ಟು ಸಂಗೀತದ ಆಳಕ್ಕೆ ಒಯ್ಯುತ್ತದೆ. ‘‘ಈ ನಗರದಲ್ಲಿ ಒಮ್ಮೆ ದಟ್ಟ ಕಾಡಿತ್ತು. ಇಲ್ಲಿರುವ ಮರಗಳನ್ನು ಕಡಿದು ನಗರ ಮಾಡಲಾಯಿತು. ಮರವನ್ನು ಕಡಿಯುವಾಗ ಎರಡು ಜೋಡಿ ಪಾರಿವಾಳಗಳು ಇಲ್ಲಿಂದ ಹಾರಿ ಹೋದವು. ಅದನ್ನು ಯಾರಾದರೂ ಕಂಡಿರಾ...’’ ಸಂಗೀತಗಾರನ ಬಿಡುಗಡೆಯ ಹಂಬಲ. ಎಲ್ಲ ಗೋಡೆಗಳನ್ನು ಮುರಿದು ಪ್ರೀತಿಯಲ್ಲಿ ಒಂದಾಗುವ ತಹತಹಿಕೆ...ಸದ್ದಾಹಕ್ ಹಾಡು...ನಾಯಕನ ಒಳಗಿನ ಸ್ವಾತಂತ್ರದ ಕನಸುಗಳಿಗೆ ರೆಕ್ಕೆ ಕಟ್ಟುತ್ತದೆ. ನಾಯಕನ ವರ್ಚಸ್ಸಿಗೆ ಕಪ್ಪು ಬಣ್ಣ ಬಳಿದಂತೆ ಆತನ ಅಭಿಮಾನಿಗಳು ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತಾರೆ. ನಾಯಕ ಜರ್ಝರಿತನಾದಷ್ಟು ಆತನ ಸಂಗೀತ ಉತ್ಕಟ ಹಂತವನ್ನು ತಲುಪುತ್ತದೆ.

ಎಲ್ಲ ಸಭ್ಯ, ಸಂಪ್ರದಾಯದ ಗೋಡೆಗಳನ್ನು ಒಡೆದು ನಾಯಕನ ಸ್ಪರ್ಶಕ್ಕೆ ಹಂಬಲಿಸುವ ಹೀರಾ...ಹಾಗೆಯೇ ಆ ಬೆಂಕಿಯ ಪ್ರೀತಿಯಲ್ಲಿ ಧಗಧಗಿಸುವ ನಾಯಕನ ಸಂಗೀತ ಇವನ್ನು ಇಟ್ಟುಕೊಂಡು ಇಮ್ತಿಯಾಝ್ ಅಲಿ ಮಾಡಿರುವ ಪ್ರಯತ್ನವನ್ನು ನಾವು ಮೆಚ್ಚಬೇಕಾಗಿದೆ. ರಣ್‌ಬೀರ್ ಕಪೂರ್‌ಗೆ ಇದೊಂದು ವಿಭಿನ್ನ ಅವಕಾಶ. ಮುಗ್ಧ ವಿದ್ಯಾರ್ಥಿಯಾಗಿಯೂ, ರಾಕ್‌ಸ್ಟಾರ್ ಆಗಿಯೂ ಕಪೂರ್ ಮಿಂಚುತ್ತಾರೆ. ಹೀರಾ ಪಾತ್ರದಲ್ಲಿ ನರ್ಗೀಸ್ ಫಖ್ರಿ ಪರವಾಗಿಲ್ಲ ಎನ್ನುವಂತೆ ನಟಿಸಿದ್ದಾರೆ. ಎ. ಆರ್. ರಹಮಾನ್ ಸಂಗೀತ ಚಿತ್ರದ ಧ್ವನಿಯಾದರೆ, ಅನಿಲ್ ಮೆಹ್ತಾ ಅವರ ಕ್ಯಾಮರಾವರ್ಕ್ ಒಟ್ಟು ಚಿತ್ರದ ದೇಹ. ತುಡಿಯುವ ಪ್ರೇಮ ಚಿತ್ರದ ಆತ್ಮ.

ಹಾಗೆಂದು ಚಿತ್ರ ಪರಿಪೂರ್ಣವಾಗಿದೆ ಎಂದರ್ಥವಲ್ಲ. ಚಿತ್ರವನ್ನು ಇನ್ನಷ್ಟು ತೀವ್ರವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಗಂಧಿ ಜಗತ್ತಿನ ಪರಿಚಯ ನಿರ್ದೇಶಕರಿಗೆ ತುಸು ಕಡಿಮೆ ಅನ್ನಿಸುತ್ತದೆ. ಸುಂದರ ಕಾಶ್ಮೀರವನ್ನು ಕಟ್ಟಿಕೊಡುವಷ್ಟು ಉತ್ಸಾಹ ಆ ಗಂಧೀ ಜಗತ್ತನ್ನು ಕಟ್ಟಿಕೊಡುವಲ್ಲಿ ಕ್ಯಾಮರಾಗಳಿಗಿದ್ದಂತಿಲ್ಲ. ನಾಯಕಿಯ ಅಭಿನಯ ಇನ್ನಷ್ಟು ಪಕ್ವವಾಗಬೇಕಾಗಿತ್ತು ಅನ್ನಿಸುತ್ತದೆ. ತಣ್ಣಗೆ ಜುಳು ಜುಳು ಹರಿಯುವ ಈ ಚಿತ್ರದಲ್ಲಿ ವಿಶೇಷ ತಿರುವುಗಳಿಲ್ಲ. ಆದರೆ ವಿಭಿನ್ನ ದೃಷ್ಟಿಯಿದೆ. ಅದಕ್ಕಾಗಿ ನಿರ್ದೇಶಕರನ್ನು ಅಭಿನಂದಿಸಬೇಕು.

3 comments:

  1. ಇಂತಹ ಸಿನೇಮಾಗಳು ಹೆಚ್ಚಾದಂತ ಪ್ರೀತಿ-ಪ್ರೇಮಗಳ ವರ್ತುಲಗಳಲ್ಲಿ ಸಿಲುಕಿಕೊಳ್ಳಲು ಹದಿ ಹರೆಯದವರಿಗೆ ಹೊಸ ಆವಿಷ್ಕಾರ ಮಾಡಿ ಒಪ್ಪಿಸಿದಂತಿದೆ. ಸಿನೇಮಾ ಗೆಲ್ಲಬೇಕಾದರೆ ಸಮಾಜ ಮತ್ತು ಮನುಷ್ಯರ ದೌರ್ಬಲ್ಯಗಳನ್ನು ಕತೆಯಾಗಿಸಬೇಕು. ಅದು ಈ " ರಾಕ್‍ಸ್ಟಾರ್" ಚಿತ್ರದ ಕಥಾ ವಸ್ತು. ಮತ್ತೆ ಮನುಷ್ಯನ ಮನಸ್ಸನ್ನು ನೇರವಾಗಿ ಹಿಡಿದುಕೊಳ್ಳುವ ಇನ್ನೊಂದು ಮಾರ್ಗ " ಸಂಗೀತ" ಅದು ಇಲ್ಲುಂಟು.ಒಟ್ಟಾರೆ ಭಗ್ನ ಪ್ರೇಮಿಗಳಲ್ಲಿ ಒಂದು ಅಲೆ ಎಬ್ಬಿಸುತ್ತದೆ.ಬಷೀರ್ ವಿಮರ್ಶೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    ReplyDelete
  2. ಬಹಳ ಇಷ್ಟ ಆಯಿತು.. ನಿಮ್ಮ ಈ ವಿಮರ್ಶೆ.. ಚಿತ್ರವನ್ನು ಒಮ್ಮೆಯಾದರು ನೋಡಬೇಕೆಂದು... ಅನಿಸುತ್ತಿದೆ... :)

    ReplyDelete
  3. ತುಂಬಾ ಚೆನ್ನಾಗಿದೆ ಸರ್ ವಿಮರ್ಶೆ.. ನೋಡಲೇಬೇಕು ಚಲನಚಿತ್ರ ಹಾಗಾದರೆ..

    ReplyDelete