Monday, March 28, 2016

ಪ್ರಧಾನಿಯ ಮೌನದ ಹಿನ್ನೆಲೆಯಲ್ಲಿ ಅಝಾನ್!

ರವಿವಾರ ಅಝಾನ್ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣವನ್ನು ನಿಲ್ಲಿಸಿ ಮೌನವಾದರಂತೆ. ಮತ್ತು ‘‘ನಮ್ಮಿಂದಾಗಿ ಯಾರದೇ ಪ್ರಾರ್ಥನೆಗೆ ಯಾವುದೇ ತೊಂದರೆಯಾಗಬಾರದು. ಅದಕ್ಕಾಗಿ ನಾನು ಕೆಲ ಕ್ಷಣ ಭಾಷಣ ನಿಲ್ಲಿಸಿದೆ’’ ಎಂದು ಔದಾರ್ಯವನ್ನು ಮೆರೆದಿದ್ದಾರೆ. ಇದು ಒಳ್ಳೆಯ ವಿಷಯವೇ ಸರಿ. ಅವರ ಮೌನದ  ಹಿಂದಿರುವ ಆಶಯವನ್ನು ನಾನು ಈ ಸಂದರ್ಭದಲ್ಲಿ ತಿರಸ್ಕರಿಸುವುದಿಲ್ಲ. ಬದಲಿಗೆ ಗೌರವಿಸುತ್ತೇನೆ. ಮುಸ್ಲಿಮರೆಂದಲ್ಲ, ಯಾರದೇ ಪ್ರಾರ್ಥನೆ, ಆರಾಧನೆಗಳಿಗೆ ಯಾರೇ ಆಗಿದ್ದರೂ ತೊಂದರೆ ಮಾಡುವುದು ಸರಿಯಲ್ಲ. ಆದರೆ, ಕೋಮುಗಲಭೆಗಳ ಹೆಸರಲ್ಲಿ ನೂರಾರು ಮಸೀದಿ, ದರ್ಗಾಗಳನ್ನು ಧ್ವಂಸಗೊಳಿಸುವುದಕ್ಕೆ ಪರೋಕ್ಷವಾಗಿ ಕಾರಣರಾದ, ಸಾವಿರಾರು ಮುಸ್ಲಿಮ್ ಮಹಿಳೆ, ಮಕ್ಕಳ ಹತ್ಯಾಕಾಂಡದಲ್ಲಿ ಪರೋಕ್ಷ ಆರೋಪಿಯಾಗಿರುವ ಮೋದಿಯವರ ಈ ಮೌನ, ಆ ಗುಜರಾತ್‌ನ ಬಲಿಪಶುಗಳಿಗಾಗಿ ವ್ಯಕ್ತಪಡಿಸಿದ "ಶೋಕ ಮೌನ"ವಾಗಿದ್ದರೆ ಇನ್ನಷ್ಟು ಅರ್ಥ ಪೂರ್ಣವಾಗಿತ್ತೇನೋ. ಯಾಕೆಂದರೆ, ಸದ್ಯದ ಸಂದರ್ಭದಲ್ಲಿ ಪ್ರಧಾನಿಯ ‘ಮೌನ’ ದೇಶದೊಳಗೆ ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಪರವಾಗಿ ಪ್ರಧಾನಿ ಮೋದಿ ತನ್ನ ಮೌನವನ್ನು ಮುರಿಯುವ ಅಗತ್ಯವಿದೆಯೇ ಹೊರತು, ಇನ್ನಷ್ಟು ಮೌನದ ಅಗತ್ಯ ದೇಶಕ್ಕೆ, ಅದರಲ್ಲೂ ಮುಖ್ಯವಾಗಿ ಮುಸ್ಲಿಮರಿಗೆ ಖಂಡಿತಾ ಇಲ್ಲ.
 ಅಝಾನ್ ಸಂದರ್ಭದಲ್ಲಿ ತಮ್ಮ ಭಾಷಣವನ್ನು ನಿಲ್ಲಿಸಿ, ಜಾತ್ಯತೀತತೆಯನ್ನು ಮೆರೆಯುವ, ಆ ಮೂಲಕ ಮುಸ್ಲಿಮರನ್ನು ಭಾವನಾತ್ಮಕವಾಗಿ ಮರುಳು ಮಾಡುವ ಹಲವು ನಾಯಕರು ಹಲವು ಪಕ್ಷಗಳಲ್ಲಿದ್ದಾರೆ. ಅವರ ಕೊರತೆಯಂತೂ ದೇಶಕ್ಕೆ ಇಲ್ಲ.  ಆದರೆ, ಮುಸ್ಲಿಮರ ಮೂಲಭೂತ ಅಭಿವೃದ್ಧಿ ಸಂದರ್ಭದಲ್ಲಿ ಅವರ ಈ ಮೌನ ಯಾವ ಪ್ರಯೋಜನಕ್ಕೂ ಬರುವುದಿಲ್ಲ.
ಇಷ್ಟಕ್ಕೂ ಅಝಾನ್ ಎಂದರೆ ಮುಸ್ಲಿಮೇತರ ರಾಜಕಾರಣಿಗಳಲ್ಲಿ ಮಾತ್ರವಲ್ಲ, ಮುಸ್ಲಿಮರಲ್ಲೂ ತಪ್ಪು ಕಲ್ಪನೆಗಳಿವೆ. ಮುಸ್ಲಿಮೇತರರು ಆಗಾಗ ಮುಸ್ಲಿಮರಲ್ಲಿ ಕೇಳುವ ವ್ಯಂಗ್ಯ ಪ್ರಶ್ನೆಯೊಂದಿದೆ ‘‘ನಿಮ್ಮ ಅಲ್ಲಾಹನಿಗೆ ಕಿವಿ ಕೇಳಿಸುವುದಿಲ್ಲವಾ? ಮೈಕ್‌ನಲ್ಲಿ ಅಷ್ಟು ಜೋರಾಗಿ ಬೊಬ್ಬೆ ಹೊಡೆದು ಪ್ರಾರ್ಥನೆ ಮಾಡುವುದು ಯಾಕೆ?’’
ನರೇಂದ್ರ ಮೋದಿ ತಿಳಿದುಕೊಂಡಂತೆ ‘ಅಝಾನ್’ ಎಂದರೆ ಪ್ರಾರ್ಥನೆಯಲ್ಲ. ಬದಲಿಗೆ ‘ಪ್ರಾರ್ಥನೆಯ ಹೊತ್ತಾಯಿತು, ಬನ್ನಿ’ ಎಂದು ಜನರಿಗೆ ನೀಡುವ ಕರೆ ಅದು. ಈ ಅಝಾನ್ ಆರಂಭವಾದುದು, ಪ್ರವಾದಿ ಮುಹಮ್ಮದ್ ಮದೀನಾಕ್ಕೆ ವಲಸೆ ಹೋದ ಅನಂತರದ ಎರಡನೇ ವರ್ಷದಲ್ಲಿ. ಮಕ್ಕಾದಲ್ಲಿ ಅವರ ವಿರೋಧಿಗಳು ಕೊಲ್ಲೂದಕ್ಕೆ ಹೊಂಚು ಹಾಕುತ್ತಿರುವ ಹಿನ್ನೆಲೆಯಲ್ಲಿ ಅವರು ಮದೀನಕ್ಕೆ ವಲಸೆ ಹೋಗೂದು ಅನಿವಾರ್ಯವಾಯಿತು. ಮದೀನದ ಜನರು ಪ್ರವಾದಿಗೆ ಆಶ್ರಯ ನೀಡಿದ್ದೆ ಅಲ್ಲದೆ, ಅವರ ಸಂದೇಶಗಳಿಗೆ ಮನ ಸೋಲ ತೊಡಗಿದರು.  ಆರಂಭದಲ್ಲಿ ಬೆರಳೆಣಿಕೆಯಲ್ಲಿದ್ದ ಪ್ರವಾದಿಯ ಸಂಗಾತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚ ತೊಡಗಿತು. ಎಲ್ಲರೂ ಜೊತೆಯಾಗಿ ನಮಾಝ್ ನಿರ್ವಹಿಸುವುದು ಹೆಚ್ಚು ಪುಣ್ಯಕರ ಎಂದು ಇಸ್ಲಾಮ್ ಧರ್ಮ ನಂಬಿದೆ. ಆದರೆ ನಮಾಝಿನ ಸಮಯದ ಗೊಂದಲದಿಂದಾಗಿ ಅವರ ಸಂಗಾತಿಗಳಲ್ಲಿ ಒಬ್ಬೊಬ್ಬರು ಒಂದೊಂದು ಸಮಯಕ್ಕೆ ಬಂದು ನಮಾಝ್ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರವಾದಿ ಮತ್ತು ಅವರ ಸಂಗಾತಿಗಳು ನಮಾಝ್ ಸಮಯವನ್ನು ಎಲ್ಲರಿಗೂ ಗೊತ್ತು ಪಡಿಸಲು ಯಾವುದಾದರೂ ಒಂದು ಕ್ರಮವನ್ನು ಅನುಸರಿಸಬೇಕು ಎಂದು ಚರ್ಚಿಸತೊಡಗಿದರು. ಈ ಕುರಿತಂತೆ ಪ್ರವಾದಿ ಮತ್ತು ಸಂಗಾತಿಗಳ ನಡುವೆ ಒಂದು ಸಭೆ ನಡೆಯಿತು.
ಯಹೂದಿಗಳು ಪ್ರಾರ್ಥನೆಯ ಸಂದರ್ಭದಲ್ಲಿ ‘ಶಬ್ದ’ ಹೊರಡಿಸುವಂತೆ ಯಾವುದಾರೂ ಶಬ್ದ ಮಾಡಿದರೆ ಹೇಗೆ ಎಂಬ ಸಲಹೆಯನ್ನು ಕೆಲವರು ನೀಡಿದರು. ಆದರೆ ಅದು ಯಹೂದಿಗಳ ಅನುಕರಣೆಯಾಗಿ ಬಿಡುವ ಸಾಧ್ಯತೆ ಇದೆ ಎಂದು ಅದನ್ನು ನಿರಾಕರಿಸಲಾಯಿತು. ಪ್ರಾರ್ಥನೆಯ ಸಮಯವಾದಾಕ್ಷಣ ಗಂಟೆ ಬಾರಿಸಿ ಜನರನ್ನು ಎಚ್ಚರಿಸಿದರೆ ಹೇಗೆ? ಎಂದು ಕೆಲವರು ಕೇಳಿದರು. ‘ಅದು ಕ್ರಿಶ್ಚಿಯನ್ನರ ಅನುಕರಣೆಯಾಗುತ್ತದೆ’ ಎಂದು ಕೈ ಬಿಡಲಾಯಿತು. ‘ಪ್ರಾರ್ಥನೆಯ ಹೊತ್ತಿನಲ್ಲಿ ಎತ್ತರ ಪ್ರದೇಶದಲ್ಲಿ ದೊಂದಿಯನ್ನು ಹಚ್ಚಿದರೆ ಹೇಗೆ?’ ಎಂಬ ಪ್ರಸ್ತಾಪವೂ ತಿರಸ್ಕೃತವಾಯಿತು. ಯಾಕೆಂದರೆ, ಕೊನೆಯಲ್ಲಿ ಅದು ‘ಅಗ್ನಿ ಆರಾಧನೆ’ಗೆ ಕಾರಣವಾಗಬಹುದು ಎಂಬ ಭಯದಿಂದ. ಹೀಗೆ ಕೆಲವು ದಿನ ಚರ್ಚೆಗಳು ಮುಂದುವರಿದವು. ಒಂದು ದಿನ ಪ್ರವಾದಿ ಸಂಗಾತಿ ಅಬ್ದುಲ್ಲಾ ಬಿನ್ ಝೈದ್ ಒಂದು ಪ್ರಸ್ತಾಪವನ್ನಿಟ್ಟರು. ಅದೇ ಅಝಾನ್. ಈ ವರೆಗೆ ‘ಪ್ರಾರ್ಥನೆಯ ಸಮಯವಾಯಿತು ಬನ್ನಿ’ ಎಂದು ಜೋರಾಗಿ ಕೂಗಿ ಹೇಳಲಾಗುತ್ತಿತ್ತು. ಆದರೆ, ಅಬ್ದುಲ್ಲಾ ಬಿನ್ ಝೈದ್ ಅವರು ಸಂಪೂರ್ಣವಾದ  ಅಝಾನ್ ಪಠ್ಯವೊಂದನ್ನು ತೆರೆದಿಟ್ಟರು. ‘‘ದೇವರು ಸರ್ವಶಕ್ತನು, ದೇವರು ಒಬ್ಬನೇ, ಪ್ರವಾದಿ ಮುಹಮ್ಮದ್ ಅವನ ಸಂದೇಶವಾಹಕ, ನಮಾಝಿಗೆ(ಪ್ರಾರ್ಥನೆ) ಬನ್ನಿ, ಆ ಮೂಲಕ ವಿಜಯದೆಡೆಗೆ ಬನ್ನಿ, (ಮುಂಜಾವಿನ ಅಝಾನ್ ಸಂದರ್ಭದಲ್ಲಿ ‘ಮಲಗುವುದಕ್ಕಿಂತ ಪ್ರಾರ್ಥನೆ ಅತ್ಯುತ್ತಮ’ ಎನ್ನುವ ಸಾಲುಗಳು ಸೇರ್ಪಡೆಯಾಗುತ್ತದೆ), ದೇವರು ಮಹಾಮಹಿಮನು, ಅವನು ಒಬ್ಬನೇ’’ ಇದು ಅವರು ಪ್ರಸ್ತಾಪಿಸಿದ ಅಝಾನ್‌ನ ಭಾವಾನುವಾದ. ಇದನ್ನು ಪ್ರವಾದಿಯೂ ಸೇರಿದಂತೆ ಎಲ್ಲ ಸಂಗಾತಿಗಳು ಒಪ್ಪಿಕೊಂಡರು. ಮತ್ತು, ಮೊತ್ತ ಮೊದಲ ನಮಾಝ್ ಕರೆಯನ್ನು ನೀಡುವ ಹೊಣೆಗಾರಿಕೆಯನ್ನು ಬಿಲಾಲ್ ಅವರಿಗೆ ವಹಿಸಲಾಯಿತು. ( ಬಿಲಾಲ್ ಒಬ್ಬ ನೀಗ್ರೋ ಗುಲಾಮರಾಗಿದ್ದರು. ಇಸ್ಲಾಮ್ ಸ್ವೀಕರಿಸಿದ ಕಾರಣಕ್ಕಾಗಿ ಅತ್ಯಧಿಕ ದೌರ್ಜನ್ಯವನ್ನು ವಿರೋಧಿಗಳಿಂದ ಎದುರಿಸಿದವರಲ್ಲಿ ಬಿಲಾಲ್ ಒಬ್ಬರು. ಇಸ್ಲಾಮ್ ಸ್ವೀಕರಿಸಿದ ಮೊತ್ತ ಮೊದಲ ನೀಗ್ರೋ ಅವರಾಗಿದ್ದಾರೆ). ಬಿಲಾಲ್ ಮೊತ್ತ ಮೊದಲ ಬಾರಿ ನೀಡಿದ ಅಝಾನ್ ಕರೆ, ಮುಂದೆ ಸಂಪ್ರದಾಯವಾಗಿ ಮುಂದುವರಿಯಿತು.
 ಮೈಕ್‌ನ ಸಂಶೋಧನೆಯಾದ ಮೇಲೆ ಹಲವರು ಮೈಕ್ ಬಳಸುವುದಕ್ಕೆ ತೊಡಗಿದರು. ಅದೂ ತುಂಬಾ ದೂರದವರೆಗೆ ಎಲ್ಲರ ಕಿವಿಗಳನ್ನು ತಲುಪುತ್ತದೆ ಎನ್ನುವ ಕಾರಣಕ್ಕೆ ಹೊರತು ದೇವರಿಗೆ ತಲುಪುತ್ತದೆ ಎನ್ನುವ ಕಾರಣಕ್ಕಾಗಿ ಅಲ್ಲ. ಹಾಗೆ ನೋಡಿದರೆ, ನಮ್ಮೂರ ಎಷ್ಟೋ ಮಸೀದಿಗಳಲ್ಲಿ ವಿದ್ಯುತ್ ಬಂದದ್ದೇ ಮೂರು ದಶಕಗಳ ಹಿಂದೆ. ಕೆಲವು ಮಸೀದಿಗಳಲ್ಲಿ ‘ವಿದ್ಯುತ್ ಸಂಪರ್ಕ ಕೊಡಬೇಕೆ, ಬೇಡವೇ’ ಎನ್ನುವ ವಿಷಯದಲ್ಲೇ ತಕರಾರುಗಳು ನಡೆದು, ಎಷ್ಟೋ ವರ್ಷಗಳ ಬಳಿಕ ಮಸೀದಿಗಳಿಗೆ ವಿದ್ಯುತ್ ಸಂಪರ್ಕ ಬಂತು. ಮೈಕ್ ವ್ಯವಸ್ಥೆಗಳಿಗೆ ಎರಡು-ಮೂರು-ನಾಲ್ಕು ದಶಕಗಳ ಇತಿಹಾಸವಷ್ಟೇ ಇದೆ. ಆರಂಭದಲ್ಲಿ ‘ಅಝಾನ್’ ಕರೆ ನೀಡುವುದಕ್ಕೆ ಮೈಕ್ ಬಳಸುವುದು, ಸರಿಯೋ ತಪ್ಪೋ ಎಂಬ ಬಗ್ಗೆಯೂ ಚರ್ಚೆ ನಡೆದಿದ್ದವು. ಹಲವರು ಮೈಕ್ ಬಳಸುವುದನ್ನು ವಿರೋಧಿಸಿದ್ದರು ಕೂಡ. ಈಗಲೂ ಕರೆಂಟ್ ಹೋದಾಗ, ಮೈಕ್ ಇಲ್ಲದೆಯೇ ಅಝಾನ್ ನೀಡಲಾಗುತ್ತದೆ. ವಿದ್ಯುತ್ ಸಂಪರ್ಕವಿಲ್ಲದ ಎಷ್ಟೋ ಮಸೀದಿಗಳಲ್ಲಿ, ಅಝಾನ್‌ನ್ನು ಮೈಕ್ ಮೂಲಕ ಕೊಡುವುದಿಲ್ಲ. ಸಾಧಾರಣವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ ಮೂಲಕ ಅಝಾನ್ ಕೊಟ್ಟರೆ ಇತರರಿಗೆ ವಿಶೇಷ ತೊಂದರೆಯಾಗುವುದಿಲ್ಲ.  ಮುಸ್ಲಿಮೇತರರು ಕೂಡ ಹಳ್ಳಿಗಳಲ್ಲಿ ‘‘ಓ..ಮಧ್ಯಾಹ್ನದ.ಬಾಂಗ್ ಆಯಿತು ಮಾರಾಯರೆ, ನನ್ನ ಕೆಲಸ ಇನ್ನೂ ಮುಗಿಯಲಿಲ್ಲ...’’ ಎಂದು ಸಮಯ ಗುರುತಿಸುವುದಕ್ಕೂ ಬಾಂಗ್ ಅಥವಾ ಅಝಾನನ್ನು ಬಳಸುವುದಿದೆ. ಅಷ್ಟು ಅವಿನಾಭಾವವಾಗಿ ಅವರು ಅದನ್ನು ಸ್ವೀಕರಿಸಿದ್ದಾರೆ.   ಬರೇ ಒಂದು ನಿಮಿಷದ ಅಝಾನ್ ಕರೆ  ಮೈಕ್ ಮೂಲಕ ನೀಡಿದರೆ ಇಡೀ ಊರಿಗೆ ತೊಂದರೆಯಾಗುತ್ತದೆ ಎನ್ನುವ ಅಪಸ್ವರಗಳು ಕೇಳಿಸಲಾರಂಭಿಸಿರುವುದು ಇತ್ತೀಚಿನ ದಿನಗಳಲ್ಲಿ. ಅದಕ್ಕೆ ತನ್ನದೇ ಆದ ರಾಜಕೀಯ ಕಾರಣಗಳೂ ಇವೆ. ಆದರೂ, ಜನನಿಬಿಡ ನಗರಗಳಲ್ಲಿ ಎರಡೆರಡು ಮಸೀದಿಗಳು ಹತ್ತಿರವಿದ್ದಾಗ, ಕಿವಿಗೆ ಅಪ್ಪಳಿಸುವಂತೆ ಅಝಾನ್‌ಗಳು ಅಬ್ಬರಿಸಿದಾಗ ಹಲವರಿಗೆ ಕಿರಿಕಿರಿಯಾಗುವ ಸಾಧ್ಯತೆಗಳು ಖಂಡಿತ ಇವೆ. ಎರಡೆರಡು ಮಸೀದಿಗಳ ಅಝಾನ್‌ಗಳು ಮೈಕ್‌ನಲ್ಲಿ ಅಬ್ಬರಿಸುವಾಗ ಮುಸ್ಲಿಮರಿಗೆ ಅದು ಹಿತವಾಗಿಯೇ ಕಂಡರೂ, ಮುಸ್ಲಿಮೇತರರಿಗೆ, ಅದರ ಮೇಲೆ ನಂಬಿಕೆಯಿಲ್ಲದವರಿಗೆ ಕಿರಿಕಿರಿಯಾಗುವುದು ಸಹಜವೇ ಆಗಿದೆ. ಇಂತಹ ಸಂದರ್ಭದಲ್ಲಿ, ಮೈಕ್‌ನ ಸದ್ದುಗಳನ್ನು ಇಳಿಸುವ ತಂತ್ರಜ್ಞಾನವನ್ನು ಬಳಸುವುದು ಅತ್ಯಗತ್ಯ. ನಗರಗಳಲ್ಲಿ ನಮಾಝ್ ಸಮಯ ಊಹಿಸುವುದಕ್ಕೆ ಜನರು ಅಝಾನನ್ನೇ ಅವಲಂಬಿಸುವುದಿಲ್ಲ. ಕರೆಂಟ್ ಇಲ್ಲದಾಗ ಅಝಾನ್ ಕೇಳಿಸದಿದ್ದರೂ, ನಮಾಝ್ ಸಮಯ ಊಹಿಸಿ ಮಸೀದಿಗೆ  ದಾವಿಸಲು ಹಲವು ದಾರಿಗಳು ಈಗ ತೆರೆದುಕೊಂಡಿವೆ. ನಗರಗಳಲ್ಲಿರುವ ಎಲ್ಲ ಮಸೀದಿಗಳು ತಮ್ಮ ತಮ್ಮ ಮೈಕ್‌ಗಳ ಸ್ವರವನ್ನು ಇಳಿಸುವುದು ಈ ಹಿನ್ನೆಲೆಯಲ್ಲಿ ಅತ್ಯಗತ್ಯ. ಮಸೀದಿಯ ಆವರಣ, ಪರಿಸರಕ್ಕೆ ಸೀಮಿತವಾಗುವಂತೆ ಸೌಂಡ್‌ಬಾಕ್ಸ್, ಸ್ಪೀಕರ್‌ಗಳನ್ನು ಬಳಸುವುದು ಅತ್ಯುತ್ತಮ. ಹಾಗೆಯೇ ನಮಾಝ್ ಸಮಯವನ್ನು ತಿಳಿಸುವುದಕ್ಕೆ ವಾಟ್ಸಪ್, ಎಸ್‌ಎಂಎಸ್ ಸಂದೇಶ ಇವುಗಳನ್ನೆಲ್ಲ ಪರಿಣಾಮಕಾರಿಯಾಗಿ ಬಳಸಬಹುದು. ಹೇಗೆ ಆಧುನಿಕ ತಂತ್ರಜ್ಞಾನವಾದ ಮೈಕ್‌ಗಳನ್ನು ಬಳಸಿಕೊಳ್ಳಲಾಯಿತೋ, ಹಾಗೆಯೇ ಮೊಬೈಲ್, ವಾಟ್ಸಪ್ ಮೊದಲಾದವುಗಳನ್ನು ಪೂರಕವಾಗಿ ಬಳಸಿಕೊಳ್ಳಬೇಕು. ಇಲ್ಲಿ, ಪ್ರಾರ್ಥನೆಯ ಸಮಯವಾಯಿತೆಂದು ಎಚ್ಚರಿಸುವುದಕ್ಕೋಸ್ಕರ ಅಝಾನ್ ಇದೆಯೇ ಹೊರತು, ಅಝಾನ್‌ನನ್ನೇ ಪ್ರಾರ್ಥನೆ ಎಂದು ಜನರು ತಪ್ಪು ತಿಳಿದುಕೊಳ್ಳುವಂತೆ ಆಗಬಾರದು. ಹಾಗೆಯೇ, ಜನರು ನಮಾಝ್ ಸಮಯಕ್ಕೆ ಪೂರಕವಾಗಿ ಅಝಾನ್‌ನ್ನು ತಮ್ಮ ತಮ್ಮ ಮೊಬೈಲ್‌ಗಳಲ್ಲೇ ಅಳವಡಿಸಿಕೊಳ್ಳಬಹುದು. ಇದು ಅತ್ಯಂತ ಸುಲಭ ಮತ್ತು ಯಶಸ್ವೀ ಮಾರ್ಗ. ಅಝಾನ್‌ನ ಸಂದರ್ಭದಲ್ಲಿ ಕೆಲವು ಮುಸ್ಲಿಮರು ಗೌರವಪೂರ್ವಕವಾಗಿ ಮೌನವಾಗಿರುತ್ತಾರೆ. ಆದರೆ ಅದರ ಮುಖ್ಯ ಉದ್ದೇಶ, ಅಝಾನ್ ಇತರರಿಗೂ ಕೇಳಿಸಲಿ ಎನ್ನುವ ಕಾರಣಕ್ಕಾಗಿ. ಆದುದರಿಂದ, ಅಝಾನ್ ಸಂದರ್ಭದಲ್ಲಿ ಮೋದಿ ಭಾಷಣ ಮಾಡಿದರೂ ಅದರಿಂದ ಮುಸ್ಲಿಮರ ಪ್ರಾರ್ಥನೆಗೆ ಯಾವ ತೊಂದರೆಯೂ ಆಗುತ್ತಿರಲಿಲ್ಲ. ಮುಸ್ಲಿಮರಿಗೆ ಇಂದು ಬೇಕಾಗಿರುವುದು, ನರೇಂದ್ರ ಮೋದಿಯ ಔದಾರ್ಯದ ‘ಮೌನ’ವಲ್ಲ. ಬದಲಿಗೆ ಮುಸ್ಲಿಮರ ಮೇಲೆ ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಅವರು ತಮ್ಮ ವೌನ ಮುರಿಯಬೇಕು. ಹಾಗೆಯೇ ಸಂವಿಧಾನದತ್ತ ಹಕ್ಕುಗಳು ಅವರಿಗೆ ತಲುಪುವ ಕುರಿತಂತೆ ಮೋದಿ ಆಸಕ್ತಿ ವಹಿಸಬೇಕು. ಒಬ್ಬ ಪ್ರಧಾನಿಯಾಗಿ, ಅದುವೇ ಅವರು ಮಾಡಬೇಕಾಗಿರುವ ಆದ್ಯತೆಯ ಕೆಲಸ. ಈ ದೇಶದ ಮುಸ್ಲಿಮರು ಪ್ರಧಾನಿಯಿಂದ ನಿರೀಕ್ಷಿಸುವುದು ಮೌನವನ್ನಲ್ಲ, ಮಾತುಗಳನ್ನು.

Saturday, March 26, 2016

ಒಂದು ಪ್ರಮಾದ!


ಫೂಟ್‌ಪಾತ್‌ನಲ್ಲಿ ಮಲಗಿದ್ದ ಆ ವೃದ್ಧ. ಹಸಿದು ಕಂಗಾಲಾಗಿದ್ದ ಆತ. ಉಣ್ಣದೆ, ಹೊಟ್ಟೆ ಬೆನ್ನಿಗೆ ಅಂಟಿಕೊಂಡಿತ್ತು. ಕಣ್ಣು ಮಂಜಾಗಿತ್ತು. ಅಷ್ಟರಲ್ಲಿ ಯಾರೋ ಅವನ ತಲೆ ಬದಿಯಲ್ಲಿ ಒಂದು ಕಟ್ಟು ಎಸೆದು ಹೋದರು. ನಡುಗುವ ಕೈಗಳಿಂದ ಅದನ್ನು ಮುಟ್ಟಿದ. ಬಿಸಿಯಿತ್ತು. ಅನ್ನದ ಪರಿಮಳ ಮೂಗಿಗೆ ಬಡಿಯಿತು. ಕಷ್ಟದಿಂದ ಎದ್ದು ಕೂತು, ಆತುರಾತುರದಿಂದ ಅದನ್ನು ಬಿಡಿಸಲು ಯತ್ನಿಸಿದ.  ಹಸಿವಿನಿಂದ ನಡುಗುತ್ತಿದ್ದುದರಿಂದ, ಕೈಗಳು ಸಹಕರಿಸುತ್ತಿರಲಿಲ್ಲ.  ಕೊನೆಗೂ ಕಟ್ಟು ತೆರೆದರೆ ಬಿಸಿ ಬಿಸಿ ಅನ್ನ ಹೊಗೆಯಾಡುತ್ತಿತ್ತು! ಮಾಂಸದ ತುಂಡು ಮತ್ತು ಸಾರು...ಗಮಗಮಿಸುತ್ತಿತ್ತು! ಯಾರೋ ಒಬ್ಬ ದಾನಿ ಎಸೆದು ಹೋಗಿರಬೇಕು.  ಬತ್ತಿ ಹೋಗಿದ್ದ ಅವನ ಕಣ್ಣಿನಾಳದಲ್ಲಿ ನೀರಿನ ಒಸರು ಮಿಂಚಿದಂತೆ ಬೆಳಕು. ಕಟ್ಟನ್ನು ಸಂಪೂರ್ಣ ಬಿಡಿಸಿ ಒಂದು ತುತ್ತು ತೆಗೆದು ಬಾಯಿಗಿಟ್ಟ. ಮಾಂಸದ ಪರಿಮಳ ಅವನ ನರನರವನ್ನೂ ಕೆರಳಿಸಿತ್ತು. ಇನ್ನೊಂದು ತುತ್ತು ಬಾಯಿಗಿಡಬೇಕು ಅಷ್ಟರಲ್ಲಿ...ಪಕ್ಕದ ಬಸ್‌ಸ್ಟಾಫ್‌ನಿಂದ ಯಾರೋ ಚೀರಿದರು 
‘‘ಅಯ್ಯೋ...ಅನ್ಯಾಯ...ಬೀಫ್...ಆತ ಬೀಫ್ ತಿನ್ತಿದ್ದಾನೆ...’’
ಬಸ್ ಸ್ಟಾಪ್‌ನಲ್ಲಿದ್ದವರೆಲ್ಲರ ಗಮನ ಇವನೆಡೆಗೆ ಹರಿಯಿತು ‘ಓಹ್....ಬೀಫ್...’ ಹಲವರು ಉದ್ಗರಿಸಿದರು. 
ಅವರೆಲ್ಲರು ಕಚೇರಿಗಳಿಗೆ ಕೆಲಸಕ್ಕೆಂದು ತೆರಳುತ್ತಿದ್ದವರು. ಬಸ್ಸಿಗಾಗಿ ಕಾಯುತ್ತಿದ್ದ ಸಭ್ಯ ನಾಗರಿಕರು. ಬೆಳಗ್ಗೆ ಎದ್ದು ಮಿಂದು, ಮಡಿಯುಟ್ಟು, ದೇವರ ಪೂಜೆ ಮಾಡಿ, ಸಸ್ಯಾಹಾರವನ್ನಷ್ಟೇ ಸೇವಿಸಿ, ತಮ್ಮ  ಅತ್ಯಂತ ಸಾತ್ವಿಕವಾದ ವಸ್ತ್ರಗಳನ್ನು ಧರಿಸಿ, ತಮ್ಮ ಮುದ್ದು ಮಕ್ಕಳಿಗೆ ಟಾಟಾ ಹೇಳಿ ತಮ್ಮ ಕಾಯಕಕ್ಕೆ ಹೊರಟವರು.
 ‘‘ಪೊಲೀಸರಿಗೆ ಫೋನ್ ಮಾಡಿ...’’ ಯಾರೋ ಸಲಹೆ ನೀಡಿದರು. 
‘‘ಅಷ್ಟರಲ್ಲಿ ಅವನದನ್ನು ತಿಂದು ಮುಗಿಸಬಹುದು...ಸಾಕ್ಷಿ  ಸಮೇತ ಅಪರಾಧಿಯನ್ನು ಬಂಧಿಸಬೇಕು.....ಮೊದಲು ಅವನಿಂದ ಅದನ್ನು ಕಿತ್ತುಕೊಳ್ಳಿ....’’
ಎಲ್ಲರೂ ಅವನನ್ನು ಸುತ್ತುವರಿದರು. ವೃದ್ಧ ಅವರೆಲ್ಲರನ್ನು ಗಮನಿಸದೇ ಇನ್ನೊಂದು ಮುಷ್ಟಿ ಅನ್ನವನ್ನು ಬಾಯಿಗಿಡಬೇಕು ಎನ್ನುವಷ್ಟರಲ್ಲಿ ಒಬ್ಬ ಬಂದು ಅವನ ಕೈಯನ್ನು ಹಿಡಿದುಕೊಂಡ. ಬಲಾಢ್ಯ. ಹೆಗಲಲ್ಲಿ ಕೇಸರಿ ಶಾಲು. ಹಣೆಯಲ್ಲಿ ಕೆಂಪು ನಾಮ. ‘‘ಏಯ್...ಗೋಮಾಂಸ ತಿನ್ನುತ್ತಿದ್ದೀಯ ...?’’ ಅವನ ಗರ್ಜನೆಗೆ ವೃದ್ಧ ನಡುಗಿದ. ಆದರೆ ಕೈಯಲ್ಲಿದ ಮುಷ್ಟಿ ಅನ್ನವನ್ನು ಕೆಳಗೆ ಹಾಕಲಿಲ್ಲ.
‘‘ಹೇಳು...ಗೋಮಾಂಸ ತಾನೆ?’’ ಮುದುಕನಿಗೆ ಅರ್ಥವಾಗಲಿಲ್ಲ.
 ಅವರೆಲ್ಲ ಈ ಅನ್ನದ ಜೊತೆಗೆ ಪಾಲು ಕೇಳಲು ಬಂದಿದ್ದಾರೆ ಎಂದೇ ಅವನು ತಿಳಿದುಕೊಂಡಿದ್ದ. 
‘‘ಕೊಡು ಅದನ್ನು...ಈಗ ಪೊಲೀಸರು ಬರುತ್ತಾರೆ...ಮಾಲು ಪರೀಕ್ಷೆಯಾಗಬೇಕು...’’ ಇನ್ನೊಬ್ಬ ಆದೇಶ ನೀಡಿದ.
ವೃದ್ಧ ಮುಷ್ಟಿಯಲ್ಲಿದ್ದ ಅನ್ನವನ್ನು ಕೆಳಗೆ ಹಾಕಲಿಲ್ಲ. ಒಬ್ಬ ಅವನ ಅನ್ನದ ಎಲೆಯನ್ನು ಎಳೆದುಕೊಂಡು ಜಾಗೃತವಾಗಿ ಕಟ್ಟಿಟ್ಟ. ಯಾಕೆಂದರೆ ಪೊಲೀಸರಿಗೆ ಕೊಡಲು ಸಾಕ್ಷ್ಯಗಳು ಬೇಕು. ಅನ್ಯಾಯವಾಗಿ ಯಾರಿಗೂ ಶಿಕ್ಷೆಯಾಗಬಾರದು.  ಇನ್ನಿಬ್ಬರು ಅವನ ಮುಷ್ಟಿಯಲ್ಲಿದ್ದ ಮಾಂಸದ ತುಂಡು, ಅನ್ನವನ್ನು ಬಿಡಿಸಲು ಪ್ರಯತ್ನಿಸಿದರು. ವೃದ್ಧ ಮುಷ್ಟಿಯನ್ನು ಸರ್ವ ಶಕ್ತಿ ಪ್ರಯೋಗಿಸಿ  ಬಾಯಿಯಿಡೆಗೆ ಕೊಂಡೊಯ್ಯುತ್ತಿದ್ದರೆ, ಉಳಿದಿಬ್ಬರು ಆ ಪ್ರಮಾದವನ್ನು ತಪ್ಪಿಸಲು ತಮ್ಮ ಸರ್ವಶಕ್ತಿಯನ್ನು ಪ್ರಯೋಗಿಸುತ್ತಿದ್ದರು. ವೃದ್ಧ ಎನಿಸಿದಷ್ಟು ದುರ್ಬಲನಲ್ಲ. ಇನ್ನೊಬ್ಬ ಪ್ರವೇಶ ಮಾಡಬೇಕಾಯಿತು. ಅವನ ಒಂದೊಂದೇ ಬೆರಳನ್ನು ಬಿಡಿಸಿ ಮಾಂಸವನ್ನು, ಅನ್ನವನ್ನು ಕೊನೆಗೂ  ಕೆಳಗೆ ಹಾಕುವಲ್ಲಿ ಯಶಸ್ವಿಯಾದರು. 
ಅಷ್ಟರಲ್ಲಿ ಪೊಲೀಸರ ಪ್ರವೇಶವಾಯಿತು. ವೃದ್ಧನನ್ನು ಪೊಲೀಸ್‌ ಜೀಪಲ್ಲಿ ಕುಳ್ಳಿರಿಸಿ, ಮಾಲನ್ನು ವಿಧಿವಿಜ್ಞಾನದೆಡೆಗೆ ಸಾಗಿಸುವ ಮಾತನಾಡಿದರು. ಜನರು ನಿರಾಳರಾದರು. ಒಂದು ದೊಡ್ಡ ಪ್ರಮಾದ ತಪ್ಪಿ ಹೋಯಿತು.
‘‘ಮುಕ್ಕೋಟಿ ದೇವರಿರುವ ತಾಯಿಯನ್ನು ತಿನ್ನುತ್ತಾರಲ್ಲ...ರಾಕ್ಷಸರು ರಾಕ್ಷಸರು...’’ ಯಾರೋ ಜಿಗುಪ್ಸೆ ಪಟ್ಟುಕೊಳ್ಳುತ್ತಿದ್ದರು.
ಮರು ದಿನ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು ‘‘ಗೋಮಾಂಸ ಸೇವನೆ: ಪ್ರಮಾದ ತಪ್ಪಿಸಿದ ಸಾರ್ವಜನಿಕರು’’
ಎರಡು ದಿನಗಳಲ್ಲೇ ಮಾಂಸದ ವಿಧಿ ವಿಜ್ಞಾನ ವರದಿ ಪ್ರಕಟವಾಯಿತು. 
‘ಚಿಂತೆ ಬೇಡ. ಮಾಂಸ ಎತ್ತಿನದಲ್ಲ, ಕುರಿಯದ್ದು’’ ಪೊಲೀಸರು ನಿರಾಳರಾದರು.
ಮಾಲನ್ನು ಮತ್ತೆ ಆ ವೃದ್ಧನ ಕೈಗೆ ಕೊಟ್ಟು, ಅದೇ ಫುಟ್‌ಪಾತ್‌ನಲ್ಲಿ ಬಿಟ್ಟು ಬಿಟ್ಟರು.
ಆತ ನಡುಗುವ ಕೈಗಳಲ್ಲಿ ಕಟ್ಟನ್ನು ಬಿಡಿಸಿದ. ನೋಡಿದರೆ ಅನ್ನ ಮಾಂಸದಲ್ಲಿ ಹುಳಗಳು ಓಡಾಡುತ್ತಿದ್ದವು. ಅದೇನನಿಸಿತೋ...ಯಾರಾದರೂ ಮತ್ತೆ ಕಿತ್ತುಕೊಳ್ಳಲು ಬಂದಾರೂ ಎಂಬ ಭಯದಿಂದ, ಗಬಗಬನೆ ತಿನ್ನತೊಡಗಿದ. ಮರುದಿನದ ಪತ್ರಿಕೆಯಲ್ಲಿ ಸಣ್ಣದೊಂದು ಸುದ್ದಿ 
‘‘ನಗರದಲ್ಲಿ ತೀವ್ರ ಚಳಿ: ಓರ್ವ ವದ್ಧನ ಬಲಿ’’

Monday, March 21, 2016

ಕಾಮ್ರೇಡ್ ಎಂ. ಲಿಂಗಪ್ಪ ಮತ್ತು ದೇಶದ್ರೋಹ

ಕಾಮ್ರೇಡ್ ಲಿಂಗಪ್ಪ ಜೊತೆ ನಾನು 
ಶಿವಮೊಗ್ಗದ ಪತ್ರಕರ್ತರಿಗೆ ಕಾಮ್ರೇಡ್ ಎಂ. ಲಿಂಗಪ್ಪ ಹೆಸರು ಚಿರಪರಿಚಿತ. ತನ್ನ 90ನೆ ವರ್ಷದಲ್ಲೂ ತನ್ನ ಎರಡು ಪುಟದ ಕ್ರಾಂತಿ ಭಗತ್ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವವರು. ಸುಮಾರು ಮೂರು ದಶಕಗಳ ಕಾಲ ಅದನ್ನು ನಡೆಸುತ್ತಾ ಬಂದಿದ್ದಾರೆ.. ಮಾತು ಮಾತಿಗೆ ಇವರು ಕ್ರಾಂತಿಯನ್ನೇ ಘೋಷಣೆ ಮಾಡುವವರು. ಒಂದಾನೊಂದು ಕಾಲದಲ್ಲಿ ಜಾರ್ಜ್ ಫೆರ್ನಾಂಡಿಸ್ ಜೊತೆಗೆ ಓಡಾಡಿದವರಂತೆ. ಮರಾಠಿ ಕ್ರಾಂತಿಗೀತೆಗಳನ್ನು ಹಾಡುತ್ತಿದ್ದರು. ಆದರೆ ಇವರು ಹಾಡಲು ಬಾಯಿ ತೆರೆದರೆ, ಉಳಿದ ಯುವಕರು ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾರೆ. ಲಿಂಗಪ್ಪ ಮಾತನಾಡಲು ಶುರು ಹಚ್ಚಿದರೆ ಅದಕ್ಕೆ ನಿಲ್ದಾಣವೇ ಇರುತ್ತಿರಲಿಲ್ಲ. ಆದುದರಿಂದ ಇವರನ್ನು ಯಾರೂ ಬಾಯಿ ತೆರೆಯಲು ಬಿಡುತ್ತಿರಲಿಲ್ಲ. ಒಂದು ರೀತಿಯಲ್ಲಿ, ಇಂದಿನ ಕಮ್ಯುನಿಸಂನ ರೂಪಕದಂತೆ ಬದುಕುತ್ತಿದ್ದಾರೆ ಅವರೊಂದು ಅಸಹಾಯಕ, ಅಪ್ರಸ್ತುತ ಒಂಟಿ ದನಿ. ಅದು ಅವರಿಗೇ ಗೊತ್ತಿಲ್ಲ.

ಅದು ಬಿಜೆಪಿ ರಾಜ್ಯವನ್ನು ಆಳುತ್ತಿದ್ದ ಸಂದರ್ಭ. ಕೆಲವು ಸಾಹಿತಿಗಳನ್ನು, ಹೋರಾಟಗಾರರನ್ನು ಅಂದಿನ ಬಿಜೆಪಿ ಸರಕಾರ "ನಕ್ಸಲ್ ಬೆಂಬಲಿಗರು" ಎಂದು ಘೋಷಿಸಿ ಪಟ್ಟಿ ಬಿಡುಗಡೆ ಮಾಡಿದ ಸಂದರ್ಭ. ಪಟ್ಟಿಯಲ್ಲಿ ಕಡಿದಾಳ್ ಶಾಮಣ್ಣರ ಹೆಸರು ಇತ್ತು. ಪಟ್ಟಿಯನ್ನು ಓದಿದ ಲಿಂಗಪ್ಪ ಸಿಕ್ಕಾಪಟ್ಟೆ ಕೆರಳಿದರಂತೆ. ಯಾಕೆಂದರೆ ಪಟ್ಟಿಯಲ್ಲಿ ಲಿಂಗಪ್ಪ ಅವರ ಹೆಸರೇ ಇದ್ದಿರಲಿಲ್ಲ. ತನ್ನನ್ನು ಘಂಟಾ ಘೋಷವಾಗಿ ಕ್ರಾಂತಿಕಾರಿ ಎಂದು ಸ್ವಯಂ ಘೋಷಿಸಿಕೊಂಡಿದ್ದ ಲಿಂಗಪ್ಪ ಅವರಿಗೆ ಸಿಕ್ಕಾ ಪಟ್ಟೆ ಅವಮಾನ ಆಗಿತ್ತು . ಒಂದು ದಿನ ಶಿವಮೊಗ್ಗಕ್ಕೆ ಅಂದಿನ ಸಚಿವ ಈಶ್ವರಪ್ಪ ಆಗಮಿಸಿದಾಗ ಅವರನ್ನು ತಡೆದು ನಿಲ್ಲಿಸಿದ ಲಿಂಗಪ್ಪ ‘‘ನನ್ನ ಮೇಲೆ ಯಾಕೆ ನಕ್ಸಲ್ ಬೆಂಬಲಿಗ ಎಂದು ಕೇಸು ದಾಖಲಿಸಿಲ್ಲ?’’ ಎಂದು ಸಿಕ್ಕಾ ಪಟ್ಟೆ ತರಾಟೆಗೆ ತೆಗೆದುಕೊಂಡರಂತೆ. ಅವರನ್ನು ಸಮಾಧಾನಿಸಲು ವಿಫಲರಾದ ಈಶ್ವರಪ್ಪ ಕೈ ಮುಗಿದು ‘‘ಲಿಂಗಪ್ಪ ಅವರೇ, ನಿಮ್ಮ ಮೇಲೂ ಕೇಸು ದಾಖಲಿಸಲಾಗುತ್ತದೆ. ಪೊಲೀಸರು ಭರವಸೆ ನೀಡಿದ್ದಾರೆ. ಬೇಗನೆ ನಿಮ್ಮನ್ನೂ ಬಂಧಿಸುತ್ತೇವೆ’’ ಎಂದ ಬಳಿಕವಷ್ಟೇ ಲಿಂಗಪ್ಪ ನಿರುಮ್ಮಳರಾದರಂತೆ.
ಇತ್ತೀಚಿಗೆ ಕೇಂದ್ರ ಸರಕಾರ ತನ್ನ ವಿರುದ್ಧ ಮಾತನಾಡಿದವರನ್ನೆಲ್ಲ ದೇಶದ್ರೋಹಿ ಎಂದು ಕರೆದು ಪ್ರಕರಣ ದಾಖಲಿಸೋದು ಕಂಡು ಲಿಂಗಪ್ಪ ಯಾಕೋ ನೆನಪಾದರು

Tuesday, March 8, 2016

ನೀನೂ ಕೂಡ....!


ಮೈದಾನದಲ್ಲಿ ಕ್ರಿಕೆಟ್ ಮುಗಿಸಿ, ಗೆಳೆಯ ಕಬೀರ್‌ನಿಗೆ ‘ಬೈ’ ಹೇಳಿದ ಮೃತ್ಯುಂಜಯ ಪಕ್ಕದ ಬಾವಿಕಟ್ಟೆಯಲ್ಲಿ ಕೈಕಾಲು ತೊಳೆದು ತನ್ನ ಬೈಕ್ ಏರಿದ. ತಾಯಿ ಅದೇನೋ ಒಂದಿಷ್ಟು ದಿನಸಿ ತರಲು ಹೇಳಿದ್ದು ನೆನಪಾಯಿತು.ನೇರ ಅಲ್ಲಿಂದ ಪೇಟೆಗೆ ತೆರಳಿದ. ಪೇಟೆ ಯಾಕೋ ಎಂದಿನಂತಿಲ್ಲ. ಅಂಗಡಿಗಳೆಲ್ಲ ಮುಚ್ಚಿತ್ತು. ಓಣಿಗಳೆಲ್ಲ ಅಪರಿಚಿತ ಅನ್ನಿಸ ತೊಡಗಿತು ಮತ್ಯುಂಜಯನಿಗೆ. ಅಮ್ಮ ಹೇಳಿದ್ದು ನೆನಪಾಯಿತು ‘‘ಮನೆಗೆ ಬೇಗ ಬಾ ಮಗ...ಊರು ಸರಿಯಿಲ್ಲ, ಮನುಷ್ಯ ತಾನು ಮನುಷ್ಯ ಅನ್ನೋದನ್ನೇ ಮರೆತು ಬಿಟ್ಟಿದ್ದಾನೆ...’’
‘‘ನನಗೆ ಯಾರ ಜೊತೆಗೂ ಜಗಳ ಇಲ್ಲ ಅಮ್ಮ. ಎಲ್ಲರೂ ನನ್ನ ಗೆಳೆಯರೇ....ಪರಿಚಿತರೇ...ಸುಮ್ಮನೆ ಯಾರಾದರೂ ನನ್ನ ಮೇಲೆ ಬಂದು ಬೀಳುತ್ತಾರೆಯೇ?’’ ತಾಯಿಗೆ ಬುದ್ಧಿವಾದ ಹೇಳಿದ್ದ.
ಪೇಟೆಯ ರಸ್ತೆಗಳ ಇಕ್ಕೆಡೆಗಳನ್ನು ಕತ್ತಲು ನಿಧಾನಕ್ಕೆ ನುಂಗತೊಡಗಿತ್ತು. ಯಾಕೋ ‘ಬೇಗ ಮನೆ ಸೇರಬೇಕು’ ಅನ್ನಿಸಿತು ಮೃತ್ಯುಂಜಯನಿಗೆ. ಎಲ್ಲ ಅಂಗಡಿಗಳೂ ಎಂದಿಗಿಂತ ಬೇಗ ಮುಚ್ಚಿವೆ. ಇದು ಪೇಟೆಯೊಳಗೆ ಏನೋ ನಡೆದಿದೆ, ನಡೆಯಲಿದೆ ಎನ್ನುವುದರ ಸೂಚನೆ ಎಂದು ಅನ್ನಿಸಿತು ಅವನಿಗೆ. ನೇರ ಮನೆಯ ಕಡೆಗೆ ಬೈಕ್ ಓಡಿಸಿದ.
ಅರ್ಧ ಕಿಲೋಮೀಟರ್ ಹೋಗಿರಬಹುದು. ದೂರದಲ್ಲೊಂದು ರಿಕ್ಷಾ ಕಾಣಿಸಿತು ಮೃತ್ಯುಂಜಯನಿಗೆ. ಯಾರೋ ಸಹಾಯಕ್ಕೆ ಕಾಯುತ್ತಿರುವ ಹಾಗೆ. ಯಾರೋ ಕೈ ಬೀಸುತ್ತಿದ್ದ ಹಾಗೆ. ಸೀದಾ ರಿಕ್ಷಾದ ಬಳಿ ಸಾಗಿದ. ವ್ಯಕ್ತಿಯ ಮುಖ ಕಾಣುತ್ತಿಲ್ಲ. ಕೈ ಬೀಸುತ್ತಿದ್ದಾನೆ ಅಷ್ಟೇ. ಬೈಕ್ ನಿಲ್ಲಿಸಿ, ಮತ್ಯುಂಜಯ ಕೆಳಗಿಳಿದ.
ಅಷ್ಟೇ...ಎಲ್ಲಿ ಬಚ್ಚಿಟ್ಟುಕೊಂಡಿದ್ದರೋ...ಮುಖ ಮುಚ್ಚಿದ ಐವರು ಮೃತ್ಯುಂಜಯನನ್ನು ಸುತ್ತುವರಿದರು.
ಓಹ್! ಅವನೊಳಗಿನ ಶಂಕೆ ಇದೀಗ ಅವನ ಮುಂದೆಯೇ ದುತ್ತೆಂದು ಮೈತಳೆದು ನಿಂತಿವೆ. ಅವರ ಕೈಯಲ್ಲಿ ಹೊಳೆಯುತ್ತಿರುವ ತಲವಾರುಗಳು, ಅವನೊಳಗಿನ ಕರುಳನ್ನು ಒಮ್ಮೆಲೆ ಮೀಟಿದಂತಾಯಿತು.
‘‘ಯಾರು ನೀವು ? ಏನು ಬೇಕು ನಿಮಗೆ? ಯಾಕೆ ಹೀಗೆ ನಿಂತಿದ್ದೀರಿ...?’’ ಅವನು ಕೇಳಿದ.
ಅಷ್ಟರಲ್ಲಿ ಮಿಂಚಿನ ಬಳ್ಳಿಯೊಂದು ತನ್ನ ಬೆನ್ನನ್ನು ಸವರಿ ಹೋದಂತೆ....ಕತ್ತಿಯ ಅಲಗು ಸವರಿ ಹೋಯಿತು.‘ಆಹ್...’ ಎಂದ ಮತ್ಯುಂಜಯ ಬೈಕಿನತ್ತ ದಾವಿಸಿದ. ಅವರು ತಡೆದರು. ಆಳೆತ್ತರ ಜೀವ ಮೃತ್ಯುಂಜಯನದು. ಬದುಕುವುದಕ್ಕಾಗಿ ಹೋರಾಡಲೇ ಬೇಕು. ಸರ್ವ ಪ್ರಯತ್ನ ಮಾಡತೊಡಗಿದ. ಅಪರಿಚಿತನೊಬ್ಬನ ಹೊಟ್ಟೆಗೆ ಒದ್ದ. ಅವನು ಅಷ್ಟು ದೂರ ಬಿದ್ದ. ಮೂವರು ಒಮ್ಮೆಲೆ ಮತ್ಯುಂಜಯನ ಮೇಲೆ ಮುಗಿ ಬಿದ್ದರು.
ಈ ಎಳೆದಾಟದ ಸಂದರ್ಭದಲ್ಲೇ ಒಬ್ಬ ಆಗಂತುಕನ ಮುಖದ ಬಟ್ಟೆ ಸರಿದು ಹೋಯಿತು....‘‘ಓಹ್...ಕಬೀರ್...ನೀನು ಕೂಡ....?’’ ಮೃತ್ಯುಂಜಯಉದ್ಗರಿಸಿದ.
ಆ ಉದ್ಗಾರಕ್ಕೆ ಕಬೀರ್ ನಿಂತಲ್ಲೇ ಕಂಪಿಸಿದ. ಅಷ್ಟರಲ್ಲೇ ಮತ್ತೊಬ್ಬ ಮತ್ಯುಂಜಯನ ಮೇಲೆ ಎರಗಿದ. ಮತ್ಯುಂಜಯನೋ ಕಬೀರನ ಕಡೆಗೆ ದಾವಿಸುತ್ತಿದ್ದ. ಈ ಗೊಂದಲಗಳ ನಡುವೆಯೇ ಮತ್ಯುಂಜಯನಿಗೆಂದು ಬೀಸಿದ ಕತ್ತಿಯೊಂದು ಕಬೀರನ ಕೊರಳನ್ನು ಸವರಿ ಹೋಯಿತು.
ಅಪರಿಚಿರಿಬ್ಬರು ಒಟ್ಟಿಗೇ ಉದ್ಗರಿಸಿದರು ‘‘ಛೇ...ತಪ್ಪಾಯಿತು....’’
ಕಬೀರ್ ಕುಸಿದು ಬೀಳುತ್ತಿರುವುದನ್ನು ಮತ್ಯುಂಜಯ ನೋಡುತ್ತಿದ್ದ. ಅಷ್ಟರಲ್ಲೇ ಯಾರೋ ಹಿಂಬದಿಯಿಂದ ಮೃತ್ಯುಂಜಯನಿಗೆ ಚುಚ್ಚಿದಂತಾಯಿತು. ಅಪರಿಚಿತರು ಅದೇನೋ ಒದರಾಡುತ್ತಿದ್ದರು ‘‘ಓಡು ಓಡು...ಯಾರೋ ದೂರದಲ್ಲಿ ಬರುತ್ತಿದ್ದಾರೆ....’’
‘‘ಕಬೀರ್‌ನನ್ನು ಏನು ಮಾಡುವುದು?’’
‘‘ಅವನೂ ಸತ್ತಿದ್ದಾನೆ...ಮೊದಲು ಈ ಜಾಗದಿಂದ ಓಡುವ....’’
ಮೃತ್ಯುಂಜಯ ನೆಲಕ್ಕೊರಗುವಾಗಲೂ ಕಬೀರನನ್ನು ನೋಡುತ್ತಿದ್ದ. ಇಂದು ಸಂಜೆ ಮೈದಾನದಲ್ಲಿ ಜೊತೆ ಜೊತೆಯಾಗಿ ಕ್ರಿಕೆಟ್ ಆಡಿದೆವು. ಜೊತೆಯಾಗಿ ನಮ್ಮ ತಂಡಕ್ಕೆ ರನ್ ಸಂಗ್ರಹಿಸಿದೆವು. ಆ ಸಂದರ್ಭದಲ್ಲಿ ಆತನ ಕಣ್ಣುಗಳಲ್ಲಿ ಈ ಕುರಿತ ಒಂದು ಕುರುಹೂ ಇರಲಿಲ್ಲವಲ್ಲ?
ಕಬೀರ್ ತಣ್ಣಗೆ ಬಿದ್ದುಕೊಂಡಿದ್ದಾನೆ. ಮೃತ್ಯುಂಜಯ ಜೋರಾಗಿ ಚೀರುವುದಕ್ಕೆ ಪ್ರಯತ್ನಿಸಿದ. ಇಲ್ಲ...ಧ್ವನಿ ಹೊರಡುತ್ತಿಲ್ಲ....ಇಡೀ ಕತ್ತಲು ಒಟ್ಟಾಗಿ ತನ್ನ ಮೈಮೇಲೆ ಬಿದ್ದಂತಾಯಿತು ಮತ್ಯುಂಜಯನಿಗೆ.

***

ಮತ್ಯುಂಜಯ ಕಣ್ಣು ತೆರೆದ. ತನ್ನ ಸುತ್ತ ಜನ ಸೇರಿದ್ದಾರೆ. ಗೆಳೆಯರು, ಬಂಧುಗಳು.
ತಾನು ಆಸ್ಪತ್ರೆಯಲ್ಲಿದ್ದೇನೆ ಎನ್ನುವುದು ಅವನಿಗೆ ಅರಿವಾಯಿತು.
‘ಓಹ್...ನಾನಿನ್ನೂ ಬದುಕಿದ್ದೇನೆ....’ ಸುತ್ತಲಿರುವವರಲ್ಲಿ ಯಾರು ತನ್ನವರು? ಮತ್ಯುಂಜಯನಿಗೆ ಗೊಂದಲವಾಯಿತು.
ಅಮ್ಮ ತಲೆ ಪಕ್ಕದಲ್ಲೇ ಕುಕ್ಕರಿಸಿದ್ದಾಳೆ. ಅತ್ತು ಅತ್ತು ಅವಳ ಮುಖ ಜರ್ಝರಿತವಾಗಿದೆ. ಅಷ್ಟರಲ್ಲೇ ಅವನ ಕಣ್ಣ ಮುಂದೆ ಕುಸಿದು ಬೀಳುತ್ತಿರುವ ಕಬೀರನ ಮುಖ ತೇಲಿತು.
‘ಕಬೀರ್....’ ಅವನ ಬಾಯಿಯಿಂದ ಅವನಿಗರಿವಿಲ್ಲದೆ ಉದ್ಗಾರ ಹೊರಟಿತು.
ಅಷ್ಟರಲ್ಲೇ ಯಾರೋ ಅವನಿಗೆ ಹಿಂದಿನ ದಿನದ ದಿನಪತ್ರಿಕೆ ತಂದು ಕೊಟ್ಟರು. ಮತ್ಯುಂಜಯ ಅದರ ತಲೆಬರಹದ ಮೇಲೆ ಕಣ್ಣಾಯಿಸಿದ. ‘‘ಹಿಂದೂ ಗೆಳೆಯನಿಗಾಗಿ ಪ್ರಾಣ ತೆತ್ತ ಮುಸ್ಲಿಮ್ ಗೆಳೆಯ!’’
ಮೃತ್ಯುಂಜಯನಿಗೆ ಅರ್ಥವಾಗಲಿಲ್ಲ. ಇದೇನಿದು ಹಿಂದೂ ಗೆಳೆಯ! ಮುಸ್ಲಿಮ್ ಗೆಳೆಯ!
ಸುದ್ದಿಯ ಮೇಲೆ ಕಣ್ಣಾಡಿಸಿದ ‘‘ಹಿಂದೂ ಗೆಳೆಯನ ಮೇಲೆ ದಾಳಿ ನಡೆಸಿದ ಮತಾಂಧರ ಎದುರಿಸಿ, ಗೆಳೆಯನ ಪ್ರಾಣಕ್ಕಾಗಿ ತನ್ನ ಪ್ರಾಣ ಅರ್ಪಿಸಿದ ಮುಸ್ಲಿಮ್ ತರುಣ’’
‘‘ಕೋಮುದ್ವೇಷದ ನಡುವೆಯೂ ಒಂದು ಆಶಾಕಿರಣ...ಕಬೀರ್...’’
ಮೃತ್ಯುಂಜಯನ ಮೇಲೆ ದುಷ್ಕರ್ಮಿಗಳು ಎರಗಿದಾಗ ಅಲ್ಲೇ ಹತ್ತಿರದಲ್ಲಿ ಕಬೀರ್ ಗೆಳೆಯನ ನೆರವಿಗೆ ದಾವಿಸಿದ. ಗೆಳೆಯನನ್ನು ಇರಿಯಲು ಹೊರಟ ಕತ್ತಿಗೆ ತಾನು ಎದೆಯೊಡ್ಡಿದ....ತುಂಬಾ ರೋಚಕವಾಗಿ ಪತ್ರಿಕೆಗಳಲ್ಲಿ ಬರೆಯಲಾಗಿತ್ತು.
‘‘ನಿಮ್ಮ ಗೆಳೆಯ ಕಬೀರ್‌ನ ಬಗ್ಗೆ ಏನು ಹೇಳಲು ಬಯಸುತ್ತೀರಿ?’’ ಯಾರೋ ತಲೆಪಕ್ಕದಲ್ಲಿ ನಿಂತವನೊಬ್ಬ ಕೇಳಿದಂತಾಯಿತು. ಪತ್ರಕರ್ತನಿರಬೇಕು.
ಮೃತ್ಯುಂಜಯನ ಕಣ್ಣಿನಿಂದ ನೀರು ಹನಿಯಿತು. ‘‘ಯಾರಿಗಾಗಿ, ಯಾಕಾಗಿ ಈ ಕಣ್ಣೀರು...?’’ ಮೃತ್ಯುಂಜಯನ ಬಳಿ ಉತ್ತರವಿರಲಿಲ್ಲ.
‘ತನಗಾಗಿ ಪ್ರಾಣಕೊಟ್ಟ ಗೆಳೆಯನಿಗೆ ಕಣ್ಣೀರಿನ ಬಾಷ್ಪಾಂಜಲಿ’ ಮರುದಿನ ಪತ್ರಿಕೆಗಳಲ್ಲಿ ತಲೆಬರಹ ಪ್ರಕಟವಾಯಿತು.

***

‘‘ದಾರಿ ಬಿಡಿ ದಾರಿ ಬಿಡಿ. ಗಾಯಾಳುವಿನಿಂದ ಸ್ಟೇಟ್‌ಮೆಂಟ್ ತೆಗೆದುಕೊಳ್ಳಬೇಕು...ಎಲ್ಲರೂ ಹೊರಗೆ ಹೋಗಿ...’’ ಪೊಲೀಸ್ ಇನ್ಸ್‌ಪೆಕ್ಟರ್ ಕೊಠಡಿಗೆ ಪ್ರವೇಶಿಸಿದರು. ಜೊತೆಗೊಬ್ಬ ಪೊಲೀಸ್ ಪೇದೆ ಕೂಡ. ಎಲ್ಲರೂ ಹೊರ ಹೋದರು. ಪೊಲೀಸ್ ಅಧಿಕಾರಿ, ಪೇದೆ ಮತ್ತು ಹಾಸಿಗೆಯ ಮೇಲೆ ಮಲಗಿರುವ ಮೃತ್ಯುಂಜಯ ಮಾತ್ರ.
‘‘ಹೇಳಿ. ಅವತ್ತು ರಾತ್ರಿ ನಿಜಕ್ಕೂ ಏನು ನಡೆಯಿತು. ನಿಮ್ಮ ಮೇಲೆ ಯಾರೆಲ್ಲ ಹಲ್ಲೆ ನಡೆಸಿದರು. ಯಾರದ್ದಾದರೂ ಪರಿಚಯ ಇದೆಯಾ?’’
ಮೃತ್ಯುಂಜಯ ಮೌನವಾಗಿದ್ದ. ಏನು ಹೇಳಬೇಕು? ‘‘ಆರೋಪಿಗಳನ್ನು ಹುಡುಕಬೇಕಾದರೆ ನೀವು ಬಾಯಿ ತೆರೆಯಲೇ ಬೇಕು...ಹೇಳಿ...ದುಷ್ಕರ್ಮಿಗಳಲ್ಲಿ ಯಾರೆಲ್ಲ ಇದ್ದರು...ಅವರ ಗುರುತು ಇದೆಯಾ?’’
‘‘ಯಾರ ಗುರುತೂ ಇಲ್ಲ...ಅವರು ಯಾಕೆ ನನ್ನ ಮೇಲೆ ದಾಳಿ ನಡೆಸಿದ್ದಾರೆ ಎನ್ನುವುದೂ ಗೊತ್ತಿಲ್ಲ....ಗೊತ್ತಿದ್ದರೆ ಒಂದಿಷ್ಟು ನನಗೆ ಸಮಾಧಾನವಾಗುತ್ತಿತ್ತು....’’ ಮತ್ಯುಂಜಯ ಬಾಯಿ ತೆರೆದ.
‘‘ಅವತ್ತು ರಾತ್ರಿ ನಾನು ಒಂಟಿಯಾಗಿ ಬೈಕ್‌ನಲ್ಲಿ ಮನೆಯ ಕಡೆ ಹೋಗುತ್ತಿದ್ದೆ. ಅರ್ಧ ಕಿಲೋಮೀಟರ್ ಹೋಗಿರಬಹುದು. ಅಷ್ಟರಲ್ಲಿ ಒಂದು ರಿಕ್ಷಾ ಕಾಣಿಸಿತು. ಮುಖ ಮುಚ್ಚಿದ ನಾಲ್ಕೆೃದು ಜನರು. ಎಲ್ಲರೂ ನನ್ನನ್ನು ಸುತ್ತುವರಿದರು....’’
ಮೃತ್ಯುಂಜಯ ಕ್ಷಣ ಹೊತ್ತು ವೌನವಾದ. ‘‘ನಂತರ ಏನಾಯಿತು?’’ ಪೊಲೀಸ್ ಅಧಿಕಾರಿ ಪ್ರಶ್ನಿಸಿದರು.
 ‘‘ಅಷ್ಟರಲ್ಲಿ ಅದೆಲ್ಲಿದ್ದನೋ ಗೊತ್ತಿಲ್ಲ...ನನ್ನ ಗೆಳೆಯ ಕಬೀರ್....ಓಡೋಡಿ ಬಂದ. ನನಗೂ ದುಷ್ಕರ್ಮಿಗಳಿಗೂ ಅಡ್ಡವಾಗಿ ನಿಂತ. ಅವರನ್ನು ತಡೆದು, ನನ್ನನ್ನು ಕಾಪಾಡಲು ಯತ್ನಿಸಿದ. ಜೀವದ ಕೊನೆಯವರೆಗೂ ನನಗಾಗಿ ಅವರಲ್ಲಿ ಹೋರಾಡಿದ....ಈ ಸಂದರ್ಭದಲ್ಲಿ ನನಗೂ ಗಾಯಗಳಾದವು. ಅವರು ಕಬೀರ್‌ನ ಕುತ್ತಿಗೆಯನ್ನೇ ಕೊಯ್ದರು...ನಾನೂ ಕೆಳಗೆ ಬಿದ್ದಿದ್ದೆ. ನಾವು ಸತ್ತಿದ್ದೇವೆ ಎಂದು ತಿಳಿದು ಅವರು ಅಲ್ಲಿಂದ ಹೋದರು...’’ ಗೊಗ್ಗರು ಸ್ವರದಲ್ಲಿ ನಡೆದ ಘಟನೆಯನ್ನು ಮತ್ಯುಂಜಯ ವಿವರಿಸಿದ.
ಪೊಲೀಸ್ ಅಧಿಕಾರಿ ಮೃತ್ಯುಂಜಯನನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ.
‘‘ನಿಜಕ್ಕೂ ಇದೇ ನಡೆದಿರುವುದಾ?’’ ಪೊಲೀಸ್ ಅಧಿಕಾರಿ ಮತ್ತೆ ಕೇಳಿದ.
ಅಧಿಕಾರಿಯ ಕಣ್ಣಿಗೆ ಕಣ್ಣು ಕೊಡಲು ಮತ್ಯುಂಜಯನಿಗೆ ಸಾಧ್ಯವಾಗಲಿಲ್ಲ ‘‘ಹೌದು. ಕಬೀರನಿಂದ ನನ್ನ ಜೀವ ಉಳಿಯಿತು...’’
‘‘ಇನ್ನೊಮ್ಮೆ ಕೇಳುತ್ತಿದ್ದೇನೆ...ನಿಜಕ್ಕೂ ನಡೆದಿರುವುದು ಇಷ್ಟೇಯಾ?’’ ಪೊಲೀಸ್ ಅಧಿಕಾರಿ ಮತ್ತೆ ಕೇಳಿದ.
‘‘ಹೌದು. ಕಬೀರ್ ನನ್ನ ಜೀವ ಉಳಿಸಿದ. ನನಗಾಗಿ ಅವನು ಪ್ರಾಣ ಕೊಟ್ಟ’’ ಮತ್ಯುಂಜಯ ಸ್ಪಷ್ಟವಾಗಿ, ಜೋರಾಗಿ ಹೇಳಿದ. ಹಾಗೆ ಹೇಳುವಾಗ ಅವನ ಕಣ್ಣಂಚಲ್ಲಿ ನೀರು ತುಳುಕಿತು.
ಮತ್ಯುಂಜಯ ತನ್ನ ಹೇಳಿಕೆಯನ್ನು ಬಲವಾಗಿ ನಂಬಿ ಹೇಳಿದ್ದ. ಪೊಲೀಸ್ ಅಧಿಕಾರಿ ಮೃತ್ಯುಂಜಯನ ಕೈಯನ್ನು ಮೆದುವಾಗಿ ಹಿಸುಕಿದ ‘ತನಗೆಲ್ಲ ಗೊತ್ತು’ ಎಂಬಂತೆ.
ಮತ್ಯುಂಜಯ ಕಿರು ನಗೆ ನಕ್ಕ. ಇಡೀ ಆಸ್ಪತ್ರೆಯ ವೌನವನ್ನು, ಸುತ್ತಲು ಆವರಿಸಿದ  ಕತ್ತಲನ್ನು ಬೆಳಗುವ ಶಕ್ತಿ ಇತ್ತು ಕಿರು ನಗೆಗೆ. ಪೊಲೀಸ್ ಅಧಿಕಾರಿಯ ಕಣ್ಣಲ್ಲಿ ಆ ನಗು ಪ್ರತಿಫಲಿಸಿತು.
ಪೊಲೀಸ್ ಅಧಿಕಾರಿ ತನ್ನ ಟೋಪಿಯನ್ನು ತಲೆಗೇರಿಸಿಕೊಂಡ.

Sunday, March 6, 2016

ಎಲ್ಲರ ಹಾಗಲ್ಲ....!

‘‘ವಿಷಯ ಗೊತ್ತಾ?’’
‘‘ಏನು?’’
‘‘ಬೆಳ್ಳಂಬೆಳಗ್ಗೆ ನಿಮಗೆ ಗದ್ದಲ ಕೇಳಿಸಲಿಲ್ಲವಾ?’’
‘‘ಹೌದು...ವಾಹನ ಬಂದ ಸದ್ದು, ಮಾತು, ಅಳು....’’
‘‘ಅದೇ, ಕಳೆದ ವಾರ ಬಾಡಿಗೆಗೆ ಬಂದ್ರಲ್ಲ, ಅವರ ಮನೆಗೆ ಬೆಳ್ಳಂಬೆಳಗ್ಗೆ ಪೊಲೀಸರು ಬಂದಿದ್ದರು. ಮನೆಯವರನ್ನೆಲ್ಲ ಎಳ್ಕೊಂಡು ಹೋದ್ರು....’’
‘‘ಅಯ್ಯೋ...ಹೌದಾ? ಏನಂತೆ? ಯಾಕಂತೆ?’’
‘‘ಯಾರಿಗೆ ಗೊತ್ತು? ಬುರ್ಖಾ ಹಾಕಿದ ಹೆಂಗಸು ಜೋರು ಅಳುತ್ತಾ ಇತ್ತು...’’
‘‘ಅಯ್ಯೋ ದೇವ್ರೇ...ಆಕೆಯ ಗಂಡನ ಗಡ್ಡ ನೋಡಿಯೇ ನನಗೆ ಅನ್ನಿಸಿತ್ತು. ನಾನು ಓನರ್ ಜೊತೆ ಹೇಳಿದ್ದೆ....ಆ ಜಾತಿಯವ್ರಿಗೆ ಬಾಡಿಗೆಗೆ ಕೊಡ್ಬೇಡಿ...ಇಲ್ಲಿರುವ ಉಳಿದವರಿಗೆಲ್ಲ ಪ್ರಾಬ್ಲಂ ಆಗತ್ತೆ...ಅಂತ. ಕೇಳಿಲ್ಲ...ಈಗ ನಾವೆಲ್ಲರೂ ಅನುಭವಿಸಬೇಕಾಗಿದೆ...ಅದಿರ್ಲಿ...ಆ್ಯರೆಸ್ಟ್ ಆದದ್ದು ಯಾಕೆ ಗೊತ್ತಾ?’’
‘‘ಮತ್ಯಾಕೆ ಆ್ಯರೆಸ್ಟ್ ಮಾಡ್ತಾರೆ....ಅವರ ಮಗ ಒಬ್ಬ ಇದ್ದಾನಂತಲ್ಲ. ಅವನ ಬಗ್ಗೆ ಏನಾದರೂ ಅವರು ನಮ್ಮಲ್ಲಿ ಮಾತನಾಡಿದ್ದಾರ...?’’
‘‘ಓ...ಅವರಿಗೆ ಮೂರು ಹೆಣ್ಣು ಮಕ್ಕಳಲ್ಲದೆ ಒಬ್ಬ ಗಂಡು ಮಗ ಇದ್ದಾನ? ಗೊತ್ತೇ ಇರಲಿಲ್ಲ...’’
‘‘ಮೊನ್ನೆ ಬಾವಿ ಕಟ್ಟೆಯಲ್ಲಿ ನಾನು ಆ ಹೆಂಗಸಿನೊಟ್ಟಿಗೆ ಕೇಳಿದ್ದೆ, ನಿಮ್ಮ ಗಂಡು ಮಗ ಎಲ್ಲಿದ್ದಾನೆ ಅಂತ? ಅವಳು ಸರಿಯಾಗಿ ಉತ್ತರವೇ ಕೊಡಲಿಲ್ಲ...ಮುಖ ಇಷ್ಟು ದೊಡ್ಡದು ಮಾಡಿ ಹೊರಟು ಹೋದಳು...’’
‘‘ಅಂದ್ರೆ...ಟೆರರಿಸ್ಟಾ...?’’
‘‘ಮತ್ತೆಂತ್ತ? ಇಲ್ಲದಿದ್ದರೆ ಒಂದು ದಿನವಾದರೂ ಮನೆಗೆ ಬರ್ತಿರಲಿಲ್ಲವಾ? ಈಗ ಮನೆಯವರನ್ನು ಸುಮ್ನೆ ಯಾರಾದ್ರೂ ಆ್ಯರೆಸ್ಟ್ ಮಾಡಿ ಕೊಂಡೋಗ್ತಾರ? ನಮ್ಮನ್ನೆಲ್ಲ ಯಾಕೆ ಆರೆಸ್ಟ್ ಮಾಡುವುದಿಲ್ಲ...? ಅವರನ್ನೇ ಯಾಕೆ ಆ್ಯರೆಸ್ಟ್ ಮಾಡಬೇಕು?’’
‘‘ಅವಳ ಗಂಡನ ಇಷ್ಟುದ್ದ ಗಡ್ಡ ನೋಡಿಯೇ ಅನುಮಾನ ಬಂದಿತ್ತು ನನಗೆ...ಅದಲ್ಲ, ಈ ಓನರ್‌ಗಳು ಬಾಡಿಗೆ ಸಿಗ್ತದೆ ಎಂದು ಸಿಕ್ಕಿದವರಿಗೆಲ್ಲ ಮನೆ ಕೊಡ್ತಾರಲ್ಲ...ಇವರನ್ನು ಮೊದಲು ಸ್ಟೇಷನ್‌ಗೆ ಕರ್ಕೊಂಡು ಹೋಗಿ ನಾಲ್ಕು ಒದಿಸ ಬೇಕು...’’
‘‘ಅಲ್ಲ, ಹೀಗಾದ್ರೆ ನಮ್ಮಂಥವರೆಲ್ಲ ಸಮಾಜದಲ್ಲಿ ಓಡಾಡುವುದು ಕಷ್ಟ. ಜನರನ್ನು ನಂಬುವುದಾದರೂ ಹೇಗೆ?’’
‘‘ಸಂಜೆ ಮನೆ ಓನರ್ ಬಂದ ಕೂಡ್ಲೆ...ನಾವೆಲ್ಲ ಗಂಡಂದಿರ ಜೊತೆಗೆ ಹೋಗಿ ಹೇಳ್ಬೇಕು....ಇನ್ನು ಮುಂದೆ ಹೀಗೆಲ್ಲ ಆದರೆ ನಾವು ಮನೆ ಖಾಲಿ ಮಾಡ್ತೇವೆ ಅಂತ...’’
‘‘ಹೌದೌದು...ಛೆ...ಗೌರವದಿಂದ  ಬಾಳುತ್ತಿದ್ದ ನಮ್ಮ ಕಾಲನಿಗೇ ಪೊಲೀಸರು ಬರುವಂತಾಯಿತಲ್ಲ...’’
‘‘ಅನ್ನ ಕೊಟ್ಟ ನೆಲಕ್ಕೆ ದ್ರೋಹ ಬಗೆಯುವವರು...ನಂಬಲೇ ಬಾರದು ಅವರನ್ನು’’

***

‘‘ಏನು ಎಲ್ಲ ಒಟ್ಟಿಗೆ ಬಂದಿದ್ದೀರಿ....ಮನೆ ಬಾಡಿಗೆ ಏರಿಸಿರುವುದಕ್ಕ? ಏರಿಸದೇ ಉಪಾಯವೇ ಇಲ್ಲ. ಕಳೆದ ಬಾರಿ ಕೂಡ ಏರಿಸಿಲ್ಲ. ಈಗ ಎಲ್ಲ ದುಬಾರಿ ಅಲ್ಲವ?’’
‘‘ಅದಲ್ಲ...ವಿಷಯ...’’
‘‘ಮತ್ತೆಂತ?’’
‘‘ಅದೇ...ನಾವು ನಿಮ್ಮ ಕಾಲನಿಯಲ್ಲಿ ಇರಬೇಕೋ, ಬಿಟ್ಟು ಹೋಗಬೇಕೋ?’’
‘‘ಏನಾಯ್ತು? ಎಂತಾಯಿತು? ನೀರು, ಕರೆಂಟು ಎಲ್ಲ ಸರಿ ಉಂಟಲ್ಲ...’’
‘‘ಅಲ್ಲ, ಸಮಾಜದಲ್ಲಿ ಗೌರವ ಮುಖ್ಯ. ನೀವು ಹಣದಾಸೆಗೆ ಯಾರ್ಯಾರಿಗೋ ಬಾಡಿಗೆಗೆ ಮನೆ ಕೊಟ್ಟು...ಈಗ ನೋಡಿ...’’
‘‘ಎಂತ ವಿಷಯ ಹೇಳಿ...ವಿವರಿಸಿ ಹೇಳಿ...’’
‘‘ವಿವರಿಸುವುದು ಎಂತ. ನೀವು ಮುಚ್ಚಿಟ್ಟರೂ ಊರಿಗೆ ಗೊತ್ತಾಗದೇ ಇರುತ್ತದ? ಪೇಪರಿನವರು ನಿಮ್ಮನ್ನು ಹುಡುಕಿಕೊಂಡು ಬಂದದ್ದು ಗೊತ್ತಾಯಿತು. ನಾಳೆ ಇಡೀ ಪೇಪರಿನಲ್ಲಿ ಈ ಕಾಲನಿಯ ಹೆಸರು ಬರುವುದಿಲ್ಲವ? ಅವರಿಂದಾಗಿ ನಮಗೆಲ್ಲ ಅವಮಾನ ಅಲ್ಲವಾ?’’
‘‘.......?’’
‘‘ಅದೇ ಬೆಳಗ್ಗೆ ಪೊಲೀಸರು ಬಂದು ಕರೆದುಕೊಂಡು ಹೋದದ್ದು...’’
‘‘ಓ ಅದಾ? ಅದರಿಂದ ನಮಗೆ ಅವಮಾನ ಎಂತ? ನಮಗೆಲ್ಲ ಹೆಮ್ಮೆ ಅಲ್ಲವಾ?’’
‘‘ಎಂತದು ಹೆಮ್ಮೆ? ’’
‘‘ನಿಮಗೆ ಗೊತ್ತಿಲ್ಲವಾ? ಕಳೆದ ವಾರ ಪಕ್ಕದ ಮನೆಗೆ ಬಾಡಿಗೆ ಬಂದವರ ಹೆಸರು ಗಫಾರ್ ಖಾನ್ ಅಂತ. ನೀವು ಪರಿಚಯ ಮಾಡಿಕೊಳ್ಳಲಿಲ್ಲವಾ?’’
‘‘ಅವರ ಗಡ್ಡ ನೋಡಿಯೇ ನಮಗೆಲ್ಲ ಗೊತ್ತಾಗಿತ್ತು ಆಗಲೆ....’’
 ‘‘ಎಂತ ಗೊತ್ತಾದದ್ದು? ಅವರ ಹಿರಿಯ ಮಗ ಇದ್ದಾನಲ್ಲ...ಅವನ ಹೆಸರು ಮುಸ್ತಫಾ ಅಂತ...ಅವನು ಮಿಲಿಟರಿಯಲ್ಲಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಇದ್ದ. ತುಂಬಾ ಒಳ್ಳೆಯ ಹುಡುಗ...ಈ ಬಾರಿ ಮದುವೆ ಮಾಡಿ ಬಿಡಬೇಕು ಎಂದು ಹುಡುಗಿಯನ್ನು ಹುಡುಕಿ ಇಟ್ಟಿದ್ರು. ನೋಡಿದರೆ ಮೊನ್ನೆ ಗಡಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಗುಂಡು ತಾಗಿ ಮೃತಪಟ್ಟಿದ್ದಾನೆ....ಜಿಲ್ಲಾಧಿಕಾರಿಗಳಿಗೆ ನಿನ್ನೆ ಬೆಳಗ್ಗೆ ಸುದ್ದಿ ಬಂದಿದೆ. ಆದುದರಿಂದ ಬೆಳಗ್ಗೆ ಎಸ್ಪಿಯವರೇ ಬಂದು ಯೋಧನ ತಂದೆಯನ್ನು, ಕುಟುಂಬವನ್ನು ಕರೆದುಕೊಂಡು ಹೋಗಿದ್ದಾರೆ. ನಾಳೆ ಬೆಳಗ್ಗೆ ಮೃತ ದೇಹ ಬರುತ್ತದೆಯಂತೆ....ಜಿಲ್ಲಾ ಭವನದಲ್ಲಿ ವಿಶೇಷ ಕಾರ್ಯಕ್ರಮ ಇಟ್ಟಿದ್ದಾರೆ.....ನಾವೆಲ್ಲ ಹೋಗಿ ಬರೋಣ....ಆ ಹುಡುಗನ ತ್ಯಾಗ, ಬಲಿದಾನವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಅಲ್ಲವೆ?............’’
‘‘................’’
‘‘.........................’’
‘‘ಹೌದು...ನಾನು ಒಮ್ಮೆ ಅವರೊಟ್ಟಿಗೆ ಮಾತನಾಡಿದ್ದೆ....ಮೊದಲ ಮಾತಿನಲ್ಲೇ ಗೊತ್ತಾಯಿತು...ಅವರು ಆ ಜಾತಿಯ ಎಲ್ಲರ ಹಾಗಲ್ಲ...ಅಂತ. ಇವರು ಎಲ್ಲರ ಹಾಗಲ್ಲ, ತುಂಬಾ ಒಳ್ಳೆಯವರು ಎಂದು ಹೆಂಡತಿಗೆ ನಾನು ಹೇಳಿದ್ದೆ.....ಬೇಕಾದರೆ ಕೇಳಿ....’’

Thursday, February 4, 2016

ಭಾಷೆ ಮತ್ತು ಇತರ ಕತೆಗಳು

ವಿಜ್ಞಾನಿ
‘‘ನಾನು ಖ್ಯಾತ ವಿಜ್ಞಾನಿ. ನೀವು ನನ್ನ ಹೆಸರು ಕೇಳಿರಬೇಕಲ್ಲ?’’
‘‘ಮತ್ಯಾಕೆ ಈ ಜ್ಯೋತಿಷಿಯ ಬಳಿ ಬಂದಿದ್ದೀರಿ?’’
‘‘ನಾನು ವಿಜ್ಞಾನಿಯಾಗಿದ್ದೇ ಈ ಜ್ಯೋತಿಷಿಯ ಬಲದಿಂದ...’’

ಅರಿವು

ನೆರೆ ಮನೆಯ ಹುಡುಗಿ ‘ಅಂಕಲ್’ ಎಂದದ್ದೇ ಅವನು ಬೆಚ್ಚಿ ಬಿದ್ದ.
ಕನ್ನಡಿಯಲ್ಲಿ ಮೊದಲ ಬಾರಿ ಅವನು ಮುಖದ ಸುಕ್ಕನ್ನು ಗುರುತಿಸಿದ.

ಭಾಷೆ

ಚಳಿಗಾಲದ ಸಮಯ. ಪುಟ್ಟಿ ರಂಗನ ತಿಟ್ಟುವಿಗೆ ಭೇಟಿ ನೀಡಿದ್ದಳು.
‘‘ಇಲ್ಲಿ ದೇಶ ವಿದೇಶಗಳಿಂದ ಕೊಕ್ಕರೆಗಳು ಬರುತ್ತವೆ?’’
ಅಮ್ಮ ವಿವರಿಸುತ್ತಿದ್ದಳು.
‘‘ವಿದೇಶಗಳ ಕೊಕ್ಕರೆ, ನಮ್ಮ ಕೊಕ್ಕರೆಗಳ ಜೊತೆಗೆ ಯಾವ ಭಾಷೆಯಲ್ಲಿ ಮಾತನಾಡುತ್ತವೆ?’’
ಪುಟ್ಟಿ ಅಚ್ಚರಿಯಿಂದ ಕೇಳಿದಳು. 

ದೃಷ್ಟಿ

ಬೆಳ್ಳಂಬೆಳಗ್ಗೆ ಆತ ಮನೆಯಿಂದ ಹೊರಡುವಾಗ ಮನೆಯ ಸಾಕು ಬೆಕ್ಕು ಅಡ್ಡ ಬಂತು.
ಹೋದ ಕೆಲಸವೆಲ್ಲ ಹಾಳು. ಬಾಸ್‌ನಿಂದ ಬೈಗಳು. ಬರಬೇಕಾದ ದುಡ್ಡು ಬರಲಿಲ್ಲ.
ಗೆಳೆಯರ ಜೊತೆ ವೈಷಮ್ಯ. ‘‘ಛೆ, ಆ ಬೆಕ್ಕಿನ ಮುಖ ನೋಡಿದ್ದೇ ಇಷ್ಟೆಲ್ಲ ಅನಾಹುತ. ಅದನ್ನು ಮನೆಯಿಂದ ಹೊರಹಾಕಬೇಕು’’
ಎನ್ನುವ ಸಿಟ್ಟಿನ ಜೊತೆಗೆ ಮನೆಗೆ ಮರಳಿದ.
ಗಂಡನನ್ನು ಕಂಡದ್ದೇ ಪತ್ನಿ ಹೇಳಿದಳು ‘‘ರೀ...ಬೆಳಗ್ಗೆ ಬೆಳಗ್ಗೆ ಯಾರ ಕೆಟ್ಟ ದಷ್ಟಿ ಬಿತ್ತೋ, ನೀವು ಹೋದ ಸ್ವಲ್ಪ ಹೊತ್ತಲ್ಲೇ ನಮ್ಮ ಮನೆ ಬೆಕ್ಕು ಲಾರಿ ಅಡಿಗೆ ಬಿದ್ದು ಸತ್ತು ಹೋಯಿತು’’

ಬದುಕು

‘‘ನೋಡು ನೀನು ಮನೆಗೆ ಹೋಗೋದೇ ಒಳ್ಳೆಯದು. ಹೆಚ್ಚೆಂದರೆ ನೀನು ಆರು ತಿಂಗಳು ಬದುಕಬಹುದು’’ ವೈದ್ಯರು ಅವನಿಗೆ ತಿಳಿಸಿದರು.
ಆತ ಆರು ತಿಂಗಳ ಬಳಿಕವೂ ಬದುಕಿದ. ಇದೇನಿದು ಕತೆ ಎಂದು ವೈದ್ಯರಲ್ಲಿಗೆ ವಿಚಾರಿಸಲು ಬಂದ. ಅಲ್ಲೇ ಇದ್ದ ದಾದಿ ಹೇಳಿದಳು ‘‘ಆ ವೈದ್ಯರು ತೀರಿ ಹೋಗಿ ಇಂದಿಗೆ ಆರು ತಿಂಗಳಾಯಿತು’’

ಹಬ್ಬ

ಹಳ್ಳಿಯಿಂದ ಮಗನ ನೋಡಲೆಂದು ಅಮ್ಮ ನಗರಕ್ಕೆ ಬಂದಿದ್ದಳು.
‘‘ಅಮ್ಮನನ್ನು ಫುಡ್ ಫೆಸ್ಟಿವಲ್‌ಗೆ ಕರೆದುಕೊಂಡು ಹೋಗೋಣ’’ ಮಗ ತನ್ನ ಪತ್ನಿಗೆ ಹೇಳಿದ.
‘‘ಹಾಗೆಂದರೆ ಏನಪ್ಪ?’’ ತಾಯಿ ಮಗನಲ್ಲಿ ಕೇಳಿದಳು.
‘‘ಆಹಾರದ ಹಬ್ಬ ಅಮ್ಮ. ಬಗೆ ಬಗೆಯ ಆಹಾರಗಳನ್ನು ಮಾಡಿಟ್ಟಿರುತ್ತಾರೆ ಅಮ್ಮ, ನಮಗೆ ಬೇಕಾದುದನ್ನು ತಿನ್ನಬಹುದು’’ ಮಗ ಹೇಳಿದ.
ಫುಡ್ ಫೆಸ್ಟಿವಲ್ ಮುಗಿಸಿ ಮನೆಗೆ ಬಂದ ಮಗ ಕೇಳಿದ ‘‘ಹೇಗಿತ್ತಮ್ಮ ಆಹಾರದ ಹಬ್ಬ?’’
‘‘ನಮ್ಮ ಕಾಲದಲ್ಲಿ ಹಸಿವಾದಾಗ ಆಹಾರ ಸಿಕ್ಕಿದರೆ ಅದೇ ಹಬ್ಬ. ಈಗ, ಆಹಾರವನ್ನು ಚೆಲ್ಲಾಡುವುದೇ ಹಬ್ಬ’’ ತಾಯಿ ನಿಟ್ಟುಸಿರಿಟ್ಟು ಹೇಳಿದರು.

Wednesday, January 20, 2016

ವಿನಾಯಕ ಭಟ್ಟರ ಪೂಜೆಗೊಂದು ಮಂಗಳಾರತಿ!

 ರೋಹಿತ್ ಅವರ ಸಾವನ್ನು ಅನಗತ್ಯವಾಗಿ ವಿವಾದ ಮಾಡುತ್ತಿದ್ದಾರೆ ಎಂದು, ಎರಡು ದಿನಗಳ ಹಿಂದೆ ಆರಂಭವಾಗಿರುವ ಪತ್ರಿಕೆಯೊಂದರಲ್ಲಿ ವಿನಾಯಕ ಭಟ್ಟ ಮೂರೂರು ಎಂಬ ‘ಮನುಷ್ಯ’ ಹೇಳಿಕೊಂಡಿದ್ದಾರೆ.(ಅವರ ಈ ಅಂಕಣಕ್ಕೆ ‘ಪ್ರಥಮ ಪೂಜೆ’ ಎಂಬ ಹೆಸರಿರುವುದರಿಂದ, ನನ್ನ ಈ ಬರಹಕ್ಕೆ ಮಂಗಳಾರತಿ ಎಂದು ಬರೆದುಕೊಂಡಿದ್ದೇನೆ) ಅವರ ಬರಹದ ಪ್ರಕಾರ ರೋಹಿತ್ ಸಾವಿಗಾಗಿ ಕಣ್ಣೀರು ಮಿಡಿಯುವವರು ಮತ್ತು ಅದಕ್ಕೆ ಆಕ್ರೋಶ ವ್ಯಕ್ತಪಡಿಸುವವರು ಬೆತ್ತಲಾಗಿದ್ದಾರಂತೆ. ಆ ಮೂಲಕ ತಾವು, ತಮ್ಮ ಬಳಗ ಮೈತುಂಬಾ ಬಟ್ಟೆ ತೊಟ್ಟೆಕೊಂಡಿದ್ದೇವೆ ಎಂದೂ ಘೋಷಿಸಿಕೊಂಡಿದ್ದಾರೆ. ಆದರೆ ಅವರು ಇನ್ನೊಮ್ಮೆ ಕನ್ನಡಿ ನೋಡಿಕೊಂಡು, ಬೆತ್ತಲಾಗಿದ್ದು ಯಾರು ಎನ್ನುವುದನ್ನು ಅರಿತುಕೊಳ್ಳುವುದು ಒಳಿತು. ಅವರು ರೋಹಿತ್ ಆತ್ಮಹತ್ಯೆಯನ್ನು ಸಮರ್ಥಿಸಿಕೊಂಡಿದ್ದು ಹೀಗೆ.

1. ವಿಶ್ವಾದ್ಯಂತ 40 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ದೇಶದಲ್ಲಿ ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪರೀಕ್ಷೆಯ ಕಾರಣದಿಂದ ಪ್ರತಿ ವರ್ಷ 2971 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ಆತ್ಮಹತ್ಯೆಗಳಲ್ಲಿ ಇದೂ ಒಂದು. ದಲಿತ ಎನ್ನುವ ಕಾರಣಕ್ಕಾಗಿ ಇದನ್ನು ರಾಜಕೀಯಗೊಳಿಸುವುದು ತಪ್ಪು ಎನ್ನುವುದು ಅವರ ವಾದ. 

2. ಹೈದರಾಬಾದ್ ವಿವಿ.ಯಲ್ಲಿ ಈ ಹಿಂದೆಯೂ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಇವರೆಲ್ಲ ವಿದೇಶಕ್ಕೆ ರಜೆಯ ಮೇಲೆ ಹೋಗಿದ್ದರೆ?
3. ರೋಹಿತ್ ಅವರು ಸಚಿವ ಬಂಡಾರು ಅಥವಾ ಯಾರ ಮೇಲೂ ಆತ್ಮಹತ್ಯಾ ಪತ್ರದಲ್ಲಿ ಆರೋಪ ಹೊರಿಸಿಲ್ಲ. ಹೀಗಿರುವಾಗ, ಆತನ ಸಾವಿಗೆ ಸಚಿವರೇ ಹೊಣೆ ಎಂದು ಹೇಳುವುದು ಎಷ್ಟು ಸರಿ?
 4. ವೇಮುಲ ಸಿದ್ಧಾಂತದ, ಸಂಘಟನೆಯ ಚಟಕ್ಕೆ ಬಿದ್ದಿದ್ದ.
 5. ಈತ ಯಾಕೂಬ್ ಮೆಮನ್ ಗಲ್ಲಿಗೇರಿಸುವುದನ್ನು ವಿರೋಧಿಸಿದ್ದ. 

ಮೇಲಿನ ಭಟ್ಟರ ಸಮರ್ಥನೆಗಳಿಗೆ ನಾನು ಉತ್ತರಿಸುವುದು ಒಂದೇ ಕಾರಣಕ್ಕೆ. ವಿನಾಯಕ ಭಟ್ಟರ ಚಿಂತನೆ, ಮತ್ತು ಆ ಚಿಂತನೆಯೊಳಗಿರುವ ವಿಶ ಅವರ ಪ್ರಥಮ ಪೂಜೆ ಅಂಕಣಕ್ಕೆ ಪೂರಕವಾಗಿರುವಂತಹದ್ದು. ಅವರಿಂದ ಇದಕ್ಕಿಂತ ಭಿನ್ನವಾದ ಆಲೋಚನೆಗಳನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಅದನ್ನು ಓದಿದ ಬೆರಳೆಣಿಕೆಯ ಮುಗ್ಧರ ಮನಸ್ಸಿನ ಮೇಲೆ ಅದು ದುಷ್ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕಾಗಿ ಈ ಉತ್ತರವನ್ನು ಬರೆದಿದ್ದೇನೆ.


1. ವಿಶ್ವಾದ್ಯಂತ 40 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ನಿಜ. ಆದರೆ ಅವರೆಲ್ಲ ಆತ್ಮಹತ್ಯೆಗೆ ಮುನ್ನ, ವ್ಯವಸ್ಥೆಯ ವಿರುದ್ಧ ಎರಡು ವಾರಗಳ ಕಾಲ ವಿಶ್ವವಿದ್ಯಾಲಯದ ಅಥವಾ ಇನ್ನೆಲ್ಲೋ ಮುಷ್ಕರ ಹೂಡಿದವರಲ್ಲ. ತನಗೆ ಜಾತಿಯ ಕಾರಣದಿಂದ ವಿಶ್ವವಿದ್ಯಾಲಯದಲ್ಲಿ ಅನ್ಯಾಯವಾಗುತ್ತಿದೆ ಎಂದು ಹಗಲು, ರಾತ್ರಿ ವಿವಿ. ಬಯಲಲ್ಲಿ ಚಳಿ, ಬಿಸಿಲ ನಡುವೆ ನರಳಿರಲಿಲ್ಲ. ಅವರ್ಯಾರೂ, ತಮಗೆ ವಿಷ ಕೊಡಿ, ನೇಣು ಹಗ್ಗ ಕೊಡಿ ಎಂದು ಯಾರಲ್ಲೂ ಪತ್ರದ ಮುಖಾಂತರ ಯಾಚಿಸಿರಲಿಲ್ಲ. ರೋಹಿತ್‌ಗೆ ಅನ್ಯಾಯವಾಗಿರುವುದು ದಲಿತ ಎನ್ನುವ ಕಾರಣಕ್ಕಾಗಿಯೇ ಆಗಿದೆ.

2. ಹೈದರಾಬಾದ್ ವಿವಿ.ಯಲ್ಲಿ ಹಿಂದೆಯೂ 8 ಮಂದಿ ದಲಿತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಅವರೆಲ್ಲರೂ ದಲಿತರೇ ಆಗಿದ್ದರು ಎನ್ನುವ ಕಾರಣಕ್ಕಾಗಿ ಇಂದು ದೇಶಾದ್ಯಂತ ಜನರು ಭುಗಿಲೆದ್ದಿದ್ದಾರೆ. ಅದರಲ್ಲಿ ಯಾರೂ ಬ್ರಾಹ್ಮಣರು ಅಥವಾ ಮೇಲ್ಜಾತಿಯ ವಿದ್ಯಾರ್ಥಿಗಳು ಇರಲಿಲ್ಲ. ಅಂದು ಅವರದು ಒಂಟಿ ಧ್ವನಿಯಾಗಿದ್ದು. ಅದನ್ನು ಅವರು ವೈಯಕ್ತಿಕವಾಗಿ ತೆಗೆದುಕೊಂಡು ಸದ್ದುಗದ್ದಲ ಇಲ್ಲದೆ ಮೂರೂರು ಭಟ್ಟರತೆ ಯೋಚಿಸುವ ನೀಚ ಜಗತ್ತಿನಿಂದ ವಿದಾಯ ಹೇಳಿದ್ದರು. ಆದರೆ ಇಲ್ಲಿ ರೋಹಿತ್ ಕಳೆದ ಎರಡು ವರ್ಷಗಳಿಂದ ತನಗಾದ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದ. ಅವನಿಗಾದ ಅನ್ಯಾಯ ಇಡೀ ದೇಶಕ್ಕೇ ತಿಳಿದಿತ್ತು. ಮತ್ತು ಇದೀಗ ತನ್ನ ಸಾವಿನ ಮೂಲಕ ಅವನು ಹೈದರಾಬಾದ್ ವಿವಿಯಲ್ಲಿ ನಡೆಯುತ್ತಿರುವ ಜಾತಿ ಅನ್ಯಾಯವನ್ನು ವಿಶ್ವಕ್ಕೆ ಜಾಹೀರು ಪಡಿಸಿದ್ದಾನೆ. ಅವನ ಧ್ವನಿಗೆ ಧ್ವನಿ ಸೇರಿಸುವುದು ಮನುಷ್ಯರೆಲ್ಲರ ಕರ್ತವ್ಯ. ಎಂಟು ಜನ ದಲಿತರು ಜಾತೀಯತೆಯ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಾಗ ಯಾರೂ ಮಾತನಾಡಿರಲಿಲ್ಲ ಎನ್ನುವುದು ಈಗ ಮಾತನಾಡದೇ ಇರುವುದಕ್ಕೆ ಸಮರ್ಥನೆಯಾಗುತ್ತದೆಯೆ?
3. ವೇಮುಲ ಸಂಘಟನೆ, ಸಿದ್ಧಾಂತದ ಚಟಕ್ಕೆ ಬಿದ್ದಿದ್ದ. ಅದು ಚಟವಲ್ಲ, ದಲಿತರು ಇಂದು ಈ ದೇಶದಲ್ಲಿ ಉಸಿರಾಡುತ್ತಿದ್ದರೆ ಅದು ಅವರ ಸಂಘಟನೆ ಮತ್ತು ಹೋರಾಟದ ಬಲದಿಂದ ಮಾತ್ರ. ಅವನನ್ನು ಈ ದೇಶ ಮನುಷ್ಯನಂತೆ ನೋಡಲು ಕಲಿತದ್ದು, ಅವನು ಹೋರಾಟಕ್ಕೆ ಇಳಿದ ಬಳಿಕ. ಸಂಘಟನೆ ಕಟ್ಟಿದ ಬಳಿಕ. ್ಠಹೋರಾಟ, ಸಂಘಟನೆ ದುರ್ಬಲವಾದಂತೆಯೇ ದಲಿತರ ಮೇಲೆ ದೌರ್ಜನ್ಯ ಹೆಚ್ಚ ತೊಡಗುತ್ತದೆ. 
4. ಈತ ಯಾಕೂಬ್ ಮೆಮನ್ ಗಲ್ಲಿಗೇರಿಸುವುದನ್ನು ವಿರೋಧಿಸಿದ್ದ ಎನ್ನುವುದು ಭಟ್ಟರ ಮುಖ್ಯ ಆರೋಪ. ಆತ ಗಲ್ಲು ಶಿಕ್ಷೆಯನ್ನೇ ವಿರೋಧಿಸುವ ನಿಲುವನ್ನು ಹೊಂದಿದ್ದ. ಯಾಕೆಂದರೆ, ಈ ದೇಶದಲ್ಲಿ ಗಲ್ಲಿಗೇರುವವರಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಸಂಖ್ಯೆಯೇ ಮುಂಚೂಣಿಯಲ್ಲಿದೆ.(ಇದನ್ನು ಸ್ವತಃ ಬಿಜೆಪಿ ನಾಯಕರಾಗಿರುವ ವರುಣ್‌ಗಾಂಧಿ ಬಹಿರಂಗವಾಗಿ ಹೇಳಿದ್ದಾರೆ) ನಾಥೂರಾಂ ಗೋಡ್ಸೆ ಒಬ್ಬನನ್ನು ಬಿಟ್ಟರೆ ಬ್ರಾಹ್ಮಣರು ತಮ್ಮ ತಪ್ಪಿಗಾಗಿ ಗಲ್ಲಿಗೇರಿದ್ದು ಕಡಿಮೆ. ಹಾಗೆಯೇ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿರುವುದನ್ನು ಅವನು ವಿರೋಧಿಸಿದ್ದಲ್ಲ. ನ್ಯಾಯಪ್ರಕ್ರಿಯೆಯಲ್ಲಾದ ಲೋಪವನ್ನು ಅವನು ತನ್ನ ಸಂಗಡಿಗರ ಜೊತೆಗೆ ವಿರೋಧಿಸಿದ್ದ. ಇಷ್ಟಕ್ಕೂ ತಡ ರಾತ್ರಿಯವರೆಗೆ ಮೆಮನ್‌ನನ್ನು ಗಲ್ಲಿಗೇರಿಸಬಾರದು ಎಂದು ನ್ಯಾಯಮೂರ್ತಿಯ ಮನೆಯಲ್ಲಿ ವಾದಿಸಿದ ಪ್ರಶಾಂತ್ ಭೂಷಣ್, ಕಟ್ಜು, ಜೇಠ್ಮಲಾನಿಯಂತಹ ಹಿರಿಯ ನ್ಯಾಯವಾದಿಗಳು, ಹಿರಿಯ ಬ್ರಾಹ್ಮಣರು ಉಗ್ರಗಾಮಿಗಳ ಪರವಾಗಿರುವವರೇನೂ ಅಲ್ಲ. ದಿ ಹಿಂದೂ ಎನ್ನುವ ಖ್ಯಾತ ಪತ್ರಿಕೆ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ ನ್ಯಾಯ ಪ್ರಕ್ರಿಯೆಯ ಲೋಪಗಳನ್ನು ಕಟುವಾಗಿ ತನ್ನ ಸಂಪಾದಕೀಯದಲ್ಲಿ ಖಂಡಿಸಿತ್ತು. ಇಷ್ಟಕ್ಕೂ ರೋಹಿತ್‌ನನ್ನು ವಿವಿ.ಯಿಂದ ವಜಾಗೊಳಿಸಿದ್ದು ಆ ಪ್ರತಿಭಟನೆಯ ಕಾರಣಕ್ಕೆ ಅಲ್ಲವೇ ಅಲ್ಲ. ಆತ ಎಬಿವಿಪಿಯ ಕಾರ್ಯಕರ್ತರ ಜೊತೆಗೆ ಸಂಘರ್ಷಕ್ಕಿಳಿದುದನ್ನು ವಿರೋಧಿಸಿ ರೋಹಿತ್‌ನನ್ನು ವಜಾಗೊಳಿಸಲಾಗಿತ್ತು. ಇದೇ ಸಂದರ್ಭದಲ್ಲಿ ಎಬಿವಿಪಿ ನಾಯಕರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅಂದರೆ ಅವರೆಲ್ಲ ಮುಗ್ಧರು ಎನ್ನುವುದು ವಿ.ವಿ. ಅಭಿಪ್ರಾಯವಾಗಿದೆ. 
5. ತನ್ನ ಡೆತ್ ನೋಟ್‌ನಲ್ಲಿ ರೋಹಿತ್ ಯಾರ ವಿರುದ್ಧವೂ ಆರೋಪ ಮಾಡಿಲ್ಲ ಎನ್ನುವುದು ಭಟ್ಟರ ಇನ್ನೊಂದು ಸಂಭ್ರಮವಾಗಿದೆ. ಆದರೆ ರೋಹಿತ್ ಪ್ರಬುದ್ಧ ಹುಡುಗನಾಗಿದ್ದ. ಅವನು ಬರೆದ ನಿಜವಾದ ಡೆತ್ ನೋಟ್, ಡಿಸೆಂಬರ್ 18ರಂದು ವಿವಿ. ಕುಲಪತಿಗೆ ಬರೆದಿರುವ ಪತ್ರ. ಅದರಲ್ಲಿ ಅವನು ಡೆತ್ ನೋಟ್ ಬರೆದಿರುವುದಷ್ಟೇ, ತನ್ನ ಆತ್ಮಹತ್ಯೆಯನ್ನು ತಪ್ಪಿಸಲು ಅವರಿಗೆ ಸಾಕಷ್ಟು ಕಾಲಾವಕಾಶವನ್ನೂ ನೀಡಿದ್ದ. ಹಾಸ್ಟೆಲ್‌ಗಳಲ್ಲಿರುವ ಎಲ್ಲ ದಲಿತ ವಿದ್ಯಾರ್ಥಿಗಳಿಗೆ ಅಡ್ಮಿಶನ್ ಸಂದರ್ಭದಲ್ಲೇ ವಿಷವನ್ನೂ, ನೇಣು ಹಗ್ಗಗಳನ್ನು ಕೊಡಿ ಎಂದು ಅವನು ವಿನಯ ಪೂರ್ವಕವಾಗಿ ಕೇಳಿಕೊಂಡಿದ್ದ. ಅವನು ಆತ್ಮಹತ್ಯೆ ಸೂಚನೆಯನ್ನು ಆ ಪತ್ರದಲ್ಲೇ ನೀಡಿದ್ದ. ಸಾಯುವ ಸಂದರ್ಭದಲ್ಲಿ, ಅವನು ಎಲ್ಲ ವೈಷಮ್ಯಗಳನ್ನು ಮರೆತು, ಈ ಸಷ್ಟಿಯ ಘನತೆಯನ್ನು ಒಪ್ಪಿಕೊಂಡು ಅವನು ಎಲ್ಲರಿಂದ ವಿದಾಯ ಹೇಳಿದ್ದಾನೆ. ಸಾವಿನ ಸಂದರ್ಭದಲ್ಲಿ ಅವನು ಎಲ್ಲದರಿಂದ ದೂರ ನಿಂತಿದ್ದ. ಶೂನ್ಯ ಮನಸ್ಕನಾಗಿದ್ದ.
 6. ರಾಜಕಾರಣಿಗಳು ರೋಹಿತ್ ಸಾವನ್ನು ಸುದ್ದಿಯಾಗಿಸುವುದು ಭಟ್ಟರಿಗೆ ಅಸಮಾಧಾನ ತಂದಿದೆ. ಅಂದರೆ, ಈ ಕುರಿತಂತೆ ರಾಜಕಾರಣಿಗಳು ಮೌನವಾಗಿರಬೇಕು. ಇದನ್ನು ರಾಜಕೀಯ ವಿವಾದವನ್ನಾಗಿಸಬಾರದು. ಯಾರೂ ಆತನ ಮನೆಗೆ ಭೇಟಿ ನೀಡಬಾರದು. ಸಾರ್ವಜನಿಕವಾಗಿ ಪ್ರತಿಭಟನೆ ಮಾಡಬಾರದು? ಹಾಗಾದರೆ ವಿರೋಧ ಪಕ್ಷಗಳು ಎನ್ನುವುದು ಯಾಕಿರಬೇಕು? ಯಾರು ಮಾತನಾಡಬಾರದು ಎನ್ನುವುದಾದರೆ ರೋಹಿತ್ ವೇಮುಲಾಗೆ ನ್ಯಾಯ ಆಕಾಶದಿಂದ ತನ್ನಷ್ಟಕ್ಕೇ ಇಳಿದು ಬರುತ್ತದೆಯೆ? ಬದುಕಿದ್ದಾಗಲೇ ಆತನ ಧ್ವನಿಗೆ ಧ್ವನಿ ಸೇರಿಸದ ವ್ಯವಸ್ಥೆ, ಆತನ ಶಾಶ್ವದ ಮೌನಕ್ಕೆ ಸ್ಪಂದಿಸುತ್ತದೆ ಎಂದು ಭಾವಿಸಬೇಕೇ?
7. ಪರೀಕ್ಷೆಗಳ ಒತ್ತಡದಿಂದ ಸಾವಿರಾರು ವಿದ್ಯಾರ್ಥಿಗಳು ಸಾಯುತ್ತಾರೆ ಎನ್ನುವ ವಿನಾಯಕ ಭಟ್ಟ ಮತ್ತು ಅವನ ಅನುಯಾಯಿಗಳು ತಿಳಿದುಕೊಳ್ಳಬೇಕಾದ ಕೆಂಡದಂತಹ ಇನ್ನೊಂದು ಸತ್ಯವಿದೆ. ಅದೆಂದರೆ ಅತ್ಯಂತ ಪ್ರತಿಭಾವಂತನಾದ ರೋಹಿತ್ ವೇಮುಲ ಯಾವುದೇ ಮೀಸಲಾತಿಯ ಬಲದಿಂದ ವಿವಿ.ಯಲ್ಲಿ ಸ್ಥಾನ ಪಡೆದಿರಲಿಲ್ಲ. ಆತ ಸಾಮಾನ್ಯ ವರ್ಗದಿಂದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ.