Thursday, February 4, 2016

ಭಾಷೆ ಮತ್ತು ಇತರ ಕತೆಗಳು

ವಿಜ್ಞಾನಿ
‘‘ನಾನು ಖ್ಯಾತ ವಿಜ್ಞಾನಿ. ನೀವು ನನ್ನ ಹೆಸರು ಕೇಳಿರಬೇಕಲ್ಲ?’’
‘‘ಮತ್ಯಾಕೆ ಈ ಜ್ಯೋತಿಷಿಯ ಬಳಿ ಬಂದಿದ್ದೀರಿ?’’
‘‘ನಾನು ವಿಜ್ಞಾನಿಯಾಗಿದ್ದೇ ಈ ಜ್ಯೋತಿಷಿಯ ಬಲದಿಂದ...’’

ಅರಿವು

ನೆರೆ ಮನೆಯ ಹುಡುಗಿ ‘ಅಂಕಲ್’ ಎಂದದ್ದೇ ಅವನು ಬೆಚ್ಚಿ ಬಿದ್ದ.
ಕನ್ನಡಿಯಲ್ಲಿ ಮೊದಲ ಬಾರಿ ಅವನು ಮುಖದ ಸುಕ್ಕನ್ನು ಗುರುತಿಸಿದ.

ಭಾಷೆ

ಚಳಿಗಾಲದ ಸಮಯ. ಪುಟ್ಟಿ ರಂಗನ ತಿಟ್ಟುವಿಗೆ ಭೇಟಿ ನೀಡಿದ್ದಳು.
‘‘ಇಲ್ಲಿ ದೇಶ ವಿದೇಶಗಳಿಂದ ಕೊಕ್ಕರೆಗಳು ಬರುತ್ತವೆ?’’
ಅಮ್ಮ ವಿವರಿಸುತ್ತಿದ್ದಳು.
‘‘ವಿದೇಶಗಳ ಕೊಕ್ಕರೆ, ನಮ್ಮ ಕೊಕ್ಕರೆಗಳ ಜೊತೆಗೆ ಯಾವ ಭಾಷೆಯಲ್ಲಿ ಮಾತನಾಡುತ್ತವೆ?’’
ಪುಟ್ಟಿ ಅಚ್ಚರಿಯಿಂದ ಕೇಳಿದಳು. 

ದೃಷ್ಟಿ

ಬೆಳ್ಳಂಬೆಳಗ್ಗೆ ಆತ ಮನೆಯಿಂದ ಹೊರಡುವಾಗ ಮನೆಯ ಸಾಕು ಬೆಕ್ಕು ಅಡ್ಡ ಬಂತು.
ಹೋದ ಕೆಲಸವೆಲ್ಲ ಹಾಳು. ಬಾಸ್‌ನಿಂದ ಬೈಗಳು. ಬರಬೇಕಾದ ದುಡ್ಡು ಬರಲಿಲ್ಲ.
ಗೆಳೆಯರ ಜೊತೆ ವೈಷಮ್ಯ. ‘‘ಛೆ, ಆ ಬೆಕ್ಕಿನ ಮುಖ ನೋಡಿದ್ದೇ ಇಷ್ಟೆಲ್ಲ ಅನಾಹುತ. ಅದನ್ನು ಮನೆಯಿಂದ ಹೊರಹಾಕಬೇಕು’’
ಎನ್ನುವ ಸಿಟ್ಟಿನ ಜೊತೆಗೆ ಮನೆಗೆ ಮರಳಿದ.
ಗಂಡನನ್ನು ಕಂಡದ್ದೇ ಪತ್ನಿ ಹೇಳಿದಳು ‘‘ರೀ...ಬೆಳಗ್ಗೆ ಬೆಳಗ್ಗೆ ಯಾರ ಕೆಟ್ಟ ದಷ್ಟಿ ಬಿತ್ತೋ, ನೀವು ಹೋದ ಸ್ವಲ್ಪ ಹೊತ್ತಲ್ಲೇ ನಮ್ಮ ಮನೆ ಬೆಕ್ಕು ಲಾರಿ ಅಡಿಗೆ ಬಿದ್ದು ಸತ್ತು ಹೋಯಿತು’’

ಬದುಕು

‘‘ನೋಡು ನೀನು ಮನೆಗೆ ಹೋಗೋದೇ ಒಳ್ಳೆಯದು. ಹೆಚ್ಚೆಂದರೆ ನೀನು ಆರು ತಿಂಗಳು ಬದುಕಬಹುದು’’ ವೈದ್ಯರು ಅವನಿಗೆ ತಿಳಿಸಿದರು.
ಆತ ಆರು ತಿಂಗಳ ಬಳಿಕವೂ ಬದುಕಿದ. ಇದೇನಿದು ಕತೆ ಎಂದು ವೈದ್ಯರಲ್ಲಿಗೆ ವಿಚಾರಿಸಲು ಬಂದ. ಅಲ್ಲೇ ಇದ್ದ ದಾದಿ ಹೇಳಿದಳು ‘‘ಆ ವೈದ್ಯರು ತೀರಿ ಹೋಗಿ ಇಂದಿಗೆ ಆರು ತಿಂಗಳಾಯಿತು’’

ಹಬ್ಬ

ಹಳ್ಳಿಯಿಂದ ಮಗನ ನೋಡಲೆಂದು ಅಮ್ಮ ನಗರಕ್ಕೆ ಬಂದಿದ್ದಳು.
‘‘ಅಮ್ಮನನ್ನು ಫುಡ್ ಫೆಸ್ಟಿವಲ್‌ಗೆ ಕರೆದುಕೊಂಡು ಹೋಗೋಣ’’ ಮಗ ತನ್ನ ಪತ್ನಿಗೆ ಹೇಳಿದ.
‘‘ಹಾಗೆಂದರೆ ಏನಪ್ಪ?’’ ತಾಯಿ ಮಗನಲ್ಲಿ ಕೇಳಿದಳು.
‘‘ಆಹಾರದ ಹಬ್ಬ ಅಮ್ಮ. ಬಗೆ ಬಗೆಯ ಆಹಾರಗಳನ್ನು ಮಾಡಿಟ್ಟಿರುತ್ತಾರೆ ಅಮ್ಮ, ನಮಗೆ ಬೇಕಾದುದನ್ನು ತಿನ್ನಬಹುದು’’ ಮಗ ಹೇಳಿದ.
ಫುಡ್ ಫೆಸ್ಟಿವಲ್ ಮುಗಿಸಿ ಮನೆಗೆ ಬಂದ ಮಗ ಕೇಳಿದ ‘‘ಹೇಗಿತ್ತಮ್ಮ ಆಹಾರದ ಹಬ್ಬ?’’
‘‘ನಮ್ಮ ಕಾಲದಲ್ಲಿ ಹಸಿವಾದಾಗ ಆಹಾರ ಸಿಕ್ಕಿದರೆ ಅದೇ ಹಬ್ಬ. ಈಗ, ಆಹಾರವನ್ನು ಚೆಲ್ಲಾಡುವುದೇ ಹಬ್ಬ’’ ತಾಯಿ ನಿಟ್ಟುಸಿರಿಟ್ಟು ಹೇಳಿದರು.

No comments:

Post a Comment