Saturday, March 26, 2016

ಒಂದು ಪ್ರಮಾದ!


ಫೂಟ್‌ಪಾತ್‌ನಲ್ಲಿ ಮಲಗಿದ್ದ ಆ ವೃದ್ಧ. ಹಸಿದು ಕಂಗಾಲಾಗಿದ್ದ ಆತ. ಉಣ್ಣದೆ, ಹೊಟ್ಟೆ ಬೆನ್ನಿಗೆ ಅಂಟಿಕೊಂಡಿತ್ತು. ಕಣ್ಣು ಮಂಜಾಗಿತ್ತು. ಅಷ್ಟರಲ್ಲಿ ಯಾರೋ ಅವನ ತಲೆ ಬದಿಯಲ್ಲಿ ಒಂದು ಕಟ್ಟು ಎಸೆದು ಹೋದರು. ನಡುಗುವ ಕೈಗಳಿಂದ ಅದನ್ನು ಮುಟ್ಟಿದ. ಬಿಸಿಯಿತ್ತು. ಅನ್ನದ ಪರಿಮಳ ಮೂಗಿಗೆ ಬಡಿಯಿತು. ಕಷ್ಟದಿಂದ ಎದ್ದು ಕೂತು, ಆತುರಾತುರದಿಂದ ಅದನ್ನು ಬಿಡಿಸಲು ಯತ್ನಿಸಿದ.  ಹಸಿವಿನಿಂದ ನಡುಗುತ್ತಿದ್ದುದರಿಂದ, ಕೈಗಳು ಸಹಕರಿಸುತ್ತಿರಲಿಲ್ಲ.  ಕೊನೆಗೂ ಕಟ್ಟು ತೆರೆದರೆ ಬಿಸಿ ಬಿಸಿ ಅನ್ನ ಹೊಗೆಯಾಡುತ್ತಿತ್ತು! ಮಾಂಸದ ತುಂಡು ಮತ್ತು ಸಾರು...ಗಮಗಮಿಸುತ್ತಿತ್ತು! ಯಾರೋ ಒಬ್ಬ ದಾನಿ ಎಸೆದು ಹೋಗಿರಬೇಕು.  ಬತ್ತಿ ಹೋಗಿದ್ದ ಅವನ ಕಣ್ಣಿನಾಳದಲ್ಲಿ ನೀರಿನ ಒಸರು ಮಿಂಚಿದಂತೆ ಬೆಳಕು. ಕಟ್ಟನ್ನು ಸಂಪೂರ್ಣ ಬಿಡಿಸಿ ಒಂದು ತುತ್ತು ತೆಗೆದು ಬಾಯಿಗಿಟ್ಟ. ಮಾಂಸದ ಪರಿಮಳ ಅವನ ನರನರವನ್ನೂ ಕೆರಳಿಸಿತ್ತು. ಇನ್ನೊಂದು ತುತ್ತು ಬಾಯಿಗಿಡಬೇಕು ಅಷ್ಟರಲ್ಲಿ...ಪಕ್ಕದ ಬಸ್‌ಸ್ಟಾಫ್‌ನಿಂದ ಯಾರೋ ಚೀರಿದರು 
‘‘ಅಯ್ಯೋ...ಅನ್ಯಾಯ...ಬೀಫ್...ಆತ ಬೀಫ್ ತಿನ್ತಿದ್ದಾನೆ...’’
ಬಸ್ ಸ್ಟಾಪ್‌ನಲ್ಲಿದ್ದವರೆಲ್ಲರ ಗಮನ ಇವನೆಡೆಗೆ ಹರಿಯಿತು ‘ಓಹ್....ಬೀಫ್...’ ಹಲವರು ಉದ್ಗರಿಸಿದರು. 
ಅವರೆಲ್ಲರು ಕಚೇರಿಗಳಿಗೆ ಕೆಲಸಕ್ಕೆಂದು ತೆರಳುತ್ತಿದ್ದವರು. ಬಸ್ಸಿಗಾಗಿ ಕಾಯುತ್ತಿದ್ದ ಸಭ್ಯ ನಾಗರಿಕರು. ಬೆಳಗ್ಗೆ ಎದ್ದು ಮಿಂದು, ಮಡಿಯುಟ್ಟು, ದೇವರ ಪೂಜೆ ಮಾಡಿ, ಸಸ್ಯಾಹಾರವನ್ನಷ್ಟೇ ಸೇವಿಸಿ, ತಮ್ಮ  ಅತ್ಯಂತ ಸಾತ್ವಿಕವಾದ ವಸ್ತ್ರಗಳನ್ನು ಧರಿಸಿ, ತಮ್ಮ ಮುದ್ದು ಮಕ್ಕಳಿಗೆ ಟಾಟಾ ಹೇಳಿ ತಮ್ಮ ಕಾಯಕಕ್ಕೆ ಹೊರಟವರು.
 ‘‘ಪೊಲೀಸರಿಗೆ ಫೋನ್ ಮಾಡಿ...’’ ಯಾರೋ ಸಲಹೆ ನೀಡಿದರು. 
‘‘ಅಷ್ಟರಲ್ಲಿ ಅವನದನ್ನು ತಿಂದು ಮುಗಿಸಬಹುದು...ಸಾಕ್ಷಿ  ಸಮೇತ ಅಪರಾಧಿಯನ್ನು ಬಂಧಿಸಬೇಕು.....ಮೊದಲು ಅವನಿಂದ ಅದನ್ನು ಕಿತ್ತುಕೊಳ್ಳಿ....’’
ಎಲ್ಲರೂ ಅವನನ್ನು ಸುತ್ತುವರಿದರು. ವೃದ್ಧ ಅವರೆಲ್ಲರನ್ನು ಗಮನಿಸದೇ ಇನ್ನೊಂದು ಮುಷ್ಟಿ ಅನ್ನವನ್ನು ಬಾಯಿಗಿಡಬೇಕು ಎನ್ನುವಷ್ಟರಲ್ಲಿ ಒಬ್ಬ ಬಂದು ಅವನ ಕೈಯನ್ನು ಹಿಡಿದುಕೊಂಡ. ಬಲಾಢ್ಯ. ಹೆಗಲಲ್ಲಿ ಕೇಸರಿ ಶಾಲು. ಹಣೆಯಲ್ಲಿ ಕೆಂಪು ನಾಮ. ‘‘ಏಯ್...ಗೋಮಾಂಸ ತಿನ್ನುತ್ತಿದ್ದೀಯ ...?’’ ಅವನ ಗರ್ಜನೆಗೆ ವೃದ್ಧ ನಡುಗಿದ. ಆದರೆ ಕೈಯಲ್ಲಿದ ಮುಷ್ಟಿ ಅನ್ನವನ್ನು ಕೆಳಗೆ ಹಾಕಲಿಲ್ಲ.
‘‘ಹೇಳು...ಗೋಮಾಂಸ ತಾನೆ?’’ ಮುದುಕನಿಗೆ ಅರ್ಥವಾಗಲಿಲ್ಲ.
 ಅವರೆಲ್ಲ ಈ ಅನ್ನದ ಜೊತೆಗೆ ಪಾಲು ಕೇಳಲು ಬಂದಿದ್ದಾರೆ ಎಂದೇ ಅವನು ತಿಳಿದುಕೊಂಡಿದ್ದ. 
‘‘ಕೊಡು ಅದನ್ನು...ಈಗ ಪೊಲೀಸರು ಬರುತ್ತಾರೆ...ಮಾಲು ಪರೀಕ್ಷೆಯಾಗಬೇಕು...’’ ಇನ್ನೊಬ್ಬ ಆದೇಶ ನೀಡಿದ.
ವೃದ್ಧ ಮುಷ್ಟಿಯಲ್ಲಿದ್ದ ಅನ್ನವನ್ನು ಕೆಳಗೆ ಹಾಕಲಿಲ್ಲ. ಒಬ್ಬ ಅವನ ಅನ್ನದ ಎಲೆಯನ್ನು ಎಳೆದುಕೊಂಡು ಜಾಗೃತವಾಗಿ ಕಟ್ಟಿಟ್ಟ. ಯಾಕೆಂದರೆ ಪೊಲೀಸರಿಗೆ ಕೊಡಲು ಸಾಕ್ಷ್ಯಗಳು ಬೇಕು. ಅನ್ಯಾಯವಾಗಿ ಯಾರಿಗೂ ಶಿಕ್ಷೆಯಾಗಬಾರದು.  ಇನ್ನಿಬ್ಬರು ಅವನ ಮುಷ್ಟಿಯಲ್ಲಿದ್ದ ಮಾಂಸದ ತುಂಡು, ಅನ್ನವನ್ನು ಬಿಡಿಸಲು ಪ್ರಯತ್ನಿಸಿದರು. ವೃದ್ಧ ಮುಷ್ಟಿಯನ್ನು ಸರ್ವ ಶಕ್ತಿ ಪ್ರಯೋಗಿಸಿ  ಬಾಯಿಯಿಡೆಗೆ ಕೊಂಡೊಯ್ಯುತ್ತಿದ್ದರೆ, ಉಳಿದಿಬ್ಬರು ಆ ಪ್ರಮಾದವನ್ನು ತಪ್ಪಿಸಲು ತಮ್ಮ ಸರ್ವಶಕ್ತಿಯನ್ನು ಪ್ರಯೋಗಿಸುತ್ತಿದ್ದರು. ವೃದ್ಧ ಎನಿಸಿದಷ್ಟು ದುರ್ಬಲನಲ್ಲ. ಇನ್ನೊಬ್ಬ ಪ್ರವೇಶ ಮಾಡಬೇಕಾಯಿತು. ಅವನ ಒಂದೊಂದೇ ಬೆರಳನ್ನು ಬಿಡಿಸಿ ಮಾಂಸವನ್ನು, ಅನ್ನವನ್ನು ಕೊನೆಗೂ  ಕೆಳಗೆ ಹಾಕುವಲ್ಲಿ ಯಶಸ್ವಿಯಾದರು. 
ಅಷ್ಟರಲ್ಲಿ ಪೊಲೀಸರ ಪ್ರವೇಶವಾಯಿತು. ವೃದ್ಧನನ್ನು ಪೊಲೀಸ್‌ ಜೀಪಲ್ಲಿ ಕುಳ್ಳಿರಿಸಿ, ಮಾಲನ್ನು ವಿಧಿವಿಜ್ಞಾನದೆಡೆಗೆ ಸಾಗಿಸುವ ಮಾತನಾಡಿದರು. ಜನರು ನಿರಾಳರಾದರು. ಒಂದು ದೊಡ್ಡ ಪ್ರಮಾದ ತಪ್ಪಿ ಹೋಯಿತು.
‘‘ಮುಕ್ಕೋಟಿ ದೇವರಿರುವ ತಾಯಿಯನ್ನು ತಿನ್ನುತ್ತಾರಲ್ಲ...ರಾಕ್ಷಸರು ರಾಕ್ಷಸರು...’’ ಯಾರೋ ಜಿಗುಪ್ಸೆ ಪಟ್ಟುಕೊಳ್ಳುತ್ತಿದ್ದರು.
ಮರು ದಿನ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು ‘‘ಗೋಮಾಂಸ ಸೇವನೆ: ಪ್ರಮಾದ ತಪ್ಪಿಸಿದ ಸಾರ್ವಜನಿಕರು’’
ಎರಡು ದಿನಗಳಲ್ಲೇ ಮಾಂಸದ ವಿಧಿ ವಿಜ್ಞಾನ ವರದಿ ಪ್ರಕಟವಾಯಿತು. 
‘ಚಿಂತೆ ಬೇಡ. ಮಾಂಸ ಎತ್ತಿನದಲ್ಲ, ಕುರಿಯದ್ದು’’ ಪೊಲೀಸರು ನಿರಾಳರಾದರು.
ಮಾಲನ್ನು ಮತ್ತೆ ಆ ವೃದ್ಧನ ಕೈಗೆ ಕೊಟ್ಟು, ಅದೇ ಫುಟ್‌ಪಾತ್‌ನಲ್ಲಿ ಬಿಟ್ಟು ಬಿಟ್ಟರು.
ಆತ ನಡುಗುವ ಕೈಗಳಲ್ಲಿ ಕಟ್ಟನ್ನು ಬಿಡಿಸಿದ. ನೋಡಿದರೆ ಅನ್ನ ಮಾಂಸದಲ್ಲಿ ಹುಳಗಳು ಓಡಾಡುತ್ತಿದ್ದವು. ಅದೇನನಿಸಿತೋ...ಯಾರಾದರೂ ಮತ್ತೆ ಕಿತ್ತುಕೊಳ್ಳಲು ಬಂದಾರೂ ಎಂಬ ಭಯದಿಂದ, ಗಬಗಬನೆ ತಿನ್ನತೊಡಗಿದ. ಮರುದಿನದ ಪತ್ರಿಕೆಯಲ್ಲಿ ಸಣ್ಣದೊಂದು ಸುದ್ದಿ 
‘‘ನಗರದಲ್ಲಿ ತೀವ್ರ ಚಳಿ: ಓರ್ವ ವದ್ಧನ ಬಲಿ’’

No comments:

Post a Comment