Tuesday, September 22, 2015

ನಮ್ಮೊಳಗೆ ಉಸಿರಾಡುವ ಮಹಾಭಾರತ

"ಮಹಾಭಾರತ’ ದ ಕುರಿತಂತೆ ಕೆಲವು ಹಿರಿಯ ಲೇಖಕರು, ಚಿಂತಕರು ಆಡಿರುವ ಮಾತುಗಳು ವಿವಾದಕ್ಕೀಡಾಗಿವೆ. ಮಹಾಭಾರತ ವ್ಯಭಿಚಾರವನ್ನು ಬೋಧಿಸುತ್ತದೆ, ಅತ್ಯಾಚಾರಕ್ಕೆ ಪ್ರೇರೇಪಿಸುತ್ತದೆ ಮೊದಲಾದ ಮಾತುಗಳು ಕೆಲವು ವೇದಿಕೆಗಳಿಂದ ಹೊರಬಿದ್ದಿವೆ. ಅವರು ನಿಜಕ್ಕೂ ಅಂತಹ ಮಾತುಗಳನ್ನಾಡಿದ್ದಾರೆಯೋ, ಅಥವಾ ಮಾಧ್ಯಮಗಳಲ್ಲಿ ಸುದ್ದಿ ರೂಪ ಪಡೆಯುವಾಗ ಅವರ ಮಾತುಗಳು ಬೇರು, ಬುಡಗಳನ್ನು ಕಳೆದುಕೊಂಡು ಆ ರೂಪವನ್ನು ಪಡೆದುಕೊಂಡಿದೆಯೋ ಗೊತ್ತಿಲ್ಲ. ಮಹಾಭಾರತ ನಿಜಕ್ಕೂ ಕೆಲವು ವೈದಿಕ ಶಕ್ತಿಗಳು ಹೇಳುವಂತೆ ಧರ್ಮಗ್ರಂಥವೇ ಆಗಿದ್ದರೆ ಈ ಚಿಂತಕರ ಹೇಳಿಕೆಗಳು ಅವುಗಳಿಗೆ ಅನ್ವಯವಾಗುತ್ತಿತ್ತೋ ಏನೋ. ಆದರೆ ಮಹಾಭಾರತ ವಿಶ್ವದ ಮಹಾಕಾವ್ಯಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ನಾವು ರಾಮಾಯಣ ಮತ್ತು ಮಹಾಭಾರತಗಳನ್ನು ನೋಡಿದರೆ, ಅವುಗಳನ್ನು ಸಾರಾಸಗಟಾಗಿ ನಿರಾಕರಿಸುವುದು, ತಿರಸ್ಕರಿಸುವುದು ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ.

ಈ ದೇಶ ಮಹಾಭಾರತವನ್ನು ಧರ್ಮಗ್ರಂಥವಾಗಿ ನೋಡಿದ್ದೇ ಇಲ್ಲ. ಭಗವದ್ಗೀತೆ ಮಹಾಭಾರತದ ಒಂದು ಭಾಗವಾಗಿರುವುದರಿಂದ, ಮಹಾಭಾರತಕ್ಕೂ ಧಾರ್ಮಿಕ ಗುಣಗಳನ್ನು ವೈದಿಕರು ಆರೋಪಿ ಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯ ಕಾರಣಗಳಿಗಾಗಿ ಮಹಾಭಾರತವನ್ನು ಧಾರ್ಮಿಕಗೊಳಿಸಲಾಗುತ್ತಿದೆ. ಆದರೆ ಭಗವದ್ಗೀತೆ ಮಹಾಭಾರತದ ಭಾಗ ಅಲ್ಲ ಎನ್ನುವುದನ್ನು ಹಲವು ಸಂಶೋಧಕರು ತಮ್ಮ ಲೇಖನಗಳಲ್ಲಿ ಬಹಿರಂಗಪಡಿಸಿದ್ದಾರೆ. ಹಿರಿಯ ಮರಾಠಿ ಲೇಖಕಿ ಇರಾವತಿ ಕರ್ವೆ ತಮ್ಮ ‘ಯುಗಾಂತ’ ಎನ್ನುವ ಮಹತ್ತರ ಕತಿಯಲ್ಲಿ ಭಗವದ್ಗೀತೆ ಮಹಾಭಾರತಕ್ಕೆ ಮತ್ತೆ ಸೇರಿಸಲ್ಪಟ್ಟಿದೆ ಎಂದು ಹಲವು ದಶಕಗಳ ಹಿಂದೆಯೇ ನಿರೂಪಿಸಿದ್ದಾರೆ. ಹಾಗೆ ನೋಡಿದರೆ ಮಹಾ ಭಾರತದಲ್ಲಿ ಕೃಷ್ಣನ ಪಾತ್ರ ಆಗಮಿಸುವುದೇ ತೀರಾ ತಡವಾಗಿ. ಮೊತ್ತ ಮೊದಲು ದ್ರೌಪದಿ ಸ್ವಯಂವರದಲ್ಲಿ ಸಣ್ಣದಾಗಿ ಕಾಣಿಸಿಕೊಳ್ಳುತ್ತಾನೆ. ಬಳಿಕ ಪಾಂಡವರು ವನವಾಸದಲ್ಲಿರುವ ಒಮ್ಮೆ ಅವರನ್ನು ಭೇಟಿಯಾ ಗುತ್ತಾನೆ. ಯಾದವ ಕುಲ ಮತ್ತು ಪಾಂಡವರ ಸಂಪರ್ಕ ಮಹತ್ವವನ್ನು ಪಡೆಯುವುದು ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ. ಇಂದು ವಿಚಾರವಾದಿಗಳು, ಚಿಂತಕರೇ ಮಹಾಭಾರತಕ್ಕೆ ಧಾರ್ಮಿಕ ಆರೋಪಗಳನ್ನು ಹೊರಿಸಿ ಅದನ್ನು ಬಹಿಷ್ಕರಿಸಿದರೆ, ತಿರಸ್ಕರಿಸಿದರೆ ನಾವು ಕಳೆದುಕೊಳ್ಳುವುದು ವಿಶ್ವದ ಅತಿ ದೊಡ್ಡ ಮಹಾಕಾವ್ಯವನ್ನು ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ. ಆದುದರಿಂದ ಮಹಾಭಾರತವನ್ನು ಮಹಾ ಕಾವ್ಯವಾಗಿ ಉಳಿಸಿಕೊಳ್ಳುವುದು, ಸೃಜನಶೀಲ ಲೇಖಕರೆನಿಸಿಕೊಂಡಿರುವ ಎಲ್ಲರ ಹೊಣೆಗಾರಿಕೆಯಾಗಿದೆ. 


ಮಹಾಭಾರತವಿರಲಿ, ರಾಮಾಯಣವಿರಲಿ ಅದು ಅಕ್ಷರ ರೂಪಕ್ಕಿಳಿಯುವ ಮೊದಲೂ ಈ ದೇಶದಲ್ಲಿ ಬೇರೆ ಬೇರೆ ರೂಪಗಳಲ್ಲಿ ಹರಡಿಕೊಂಡಿತ್ತು ಎನ್ನುವುದಕ್ಕೆ ನೂರಾರು ಉದಾಹರಣೆಗಳಿವೆ. ಮಹಾ ಭಾರತವನ್ನು ವ್ಯಾಸ ಬರೆದನೋ ಅಥವಾ ಅದಕ್ಕೆ ಸಂಗ್ರಹ ರೂಪಕೊಟ್ಟನೋ ಎನ್ನುವುದು ಈ ಹಿಂದೆಯೂ ಚರ್ಚೆಯಾಗಿದೆ. ಯಾಕೆಂದರೆ ಇಲ್ಲಿ ವ್ಯಾಸ ಅಥವಾ ವಾಲ್ಮೀಕಿ ಬರೆದ ಮಹಾಭಾರತ, ರಾಮಾಯಣಗಳಷ್ಟೇ ಇರುವುದಲ್ಲ. ಆಯಾ ಪ್ರದೇಶಕ್ಕೆ ತಕ್ಕಂತೆ, ಜನಾಂಗಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುವ ನೂರಾರು ರಾಮಾಯಣ, ಮಹಾ ಭಾರತ ಕತೆಗಳಿವೆ. ಎ.ಕೆ. ರಾಮಾನುಜನ್ ಇಂತಹ ನೂರಾರು ರಾಮಾಯಣಕತೆಗಳನ್ನು ಗುರುತಿಸಿ ಅದನ್ನು ಸಂಪಾದಿಸಿದ್ದರು. ಮತ್ತು ದಿಲ್ಲಿಯ ಇತಿಹಾಸ ವಿಭಾಗದಲ್ಲಿ ಇದು ಪಠ್ಯ ಪುಸ್ತಕವಾಗಿಯೂ ಆಯ್ಕೆಯಾಗಿತ್ತು. ಸಂಘ ಪರಿವಾರದ ಕಾರ್ಯಕರ್ತರು ಈ ಪಠ್ಯದ ವಿರುದ್ಧ ವಿಶ್ವವಿದ್ಯಾಲಯದಲ್ಲಿ ಗಲಭೆಯನ್ನೂ ಎಬ್ಬಿಸಿದ್ದರು. ಬುಡಕಟ್ಟು ಸಮುದಾಯಗಳು ತಮ್ಮದೇ ಆದ ರಾಮಾಯಣ ಕತೆಗಳನ್ನು ಹೊಂದಿವೆ. ಅತ್ಯಂತ ವಿವಾದಾತ್ಮಕ ಬುಡಕಟ್ಟು ರಾಮಾಯಣಗಳಿವೆ. ರಾವಣನನ್ನು ನಾಯಕನನ್ನಾಗಿಸುವ, ಸೀತೆಯ ವನವಾಸಕ್ಕೆ ಬೇರೆ ಬೇರೆ ಕಾರಣಗಳನ್ನು ನೀಡುವ ರಾಮಾಯಣಗಳನ್ನು ನಾವು ಓದಬಹುದಾಗಿದೆ. ನಾವು ರಾಮಾಯಣವನ್ನಾಗಲಿ, ಮಹಾಭಾರತವನ್ನಾಗಲಿ ಸಂಪೂರ್ಣ ಇತಿಹಾಸವಾಗಿ ನೋಡಲು ಹವಣಿಸುವುದು ಅಥವಾ ಒಂದು ಶಾಸ್ತ್ರಗ್ರಂಥವಾಗಿಸಲು ಯತ್ನಿಸುವುದು ಪರೋಕ್ಷವಾಗಿ ದೇಶಕ್ಕೆ ಮಾಡುವ ನಷ್ಟ. ಹಾಗೆಂದು ಮಹಾಭಾರತದಲ್ಲಿ ಇತಿಹಾಸ ಇಲ್ಲವೆಂದೂ ಅಲ್ಲ. ಭಾರತದ ಇತಿಹಾಸವು ರೂಪಕಗಳಾಗಿ ಮಹಾಭಾರತ, ರಾಮಾಯಣಗಳಲ್ಲಿ ಬಚ್ಚಿಟ್ಟುಕೊಂಡಿವೆ. ಆ ರೂಪಕಗಳನ್ನು ಒಡೆಯುವ ಮತ್ತು ಅದರಲ್ಲಿ ಇತಿಹಾಸವನ್ನು ನೋಡುವ ಪ್ರಯತ್ನವನ್ನು ಹಲವರು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದಾರೆ. ಕೆಲವರು ತಮ್ಮ ರಾಜಕೀಯ ಕಾರಣಗಳಿಗಾಗಿ ಆ ರೂಪಕಗಳನ್ನೇ ಯಥಾವತ್ ಇತಿಹಾಸವಾಗಿ ಘೋಷಿಸಿ, ವರ್ತಮಾನವನ್ನು ಅನಾಹುತಗಳಿಗೆ ತಳ್ಳಿದ್ದಾರೆ. ರಾಮಸೇತುವೆ, ರಾಮಜನ್ಮಭೂಮಿ ಮೊದಲಾದವುಗಳು ಹುಟ್ಟಿಕೊಂಡಿರುವುದು ಈ ಸಂಚುಕೋರರ ಕಾರಣಗಳಿಂದಲೇ ಆಗಿವೆ. ಇದೇ ಸಂದರ್ಭದಲ್ಲಿ, ಇವೆಲ್ಲ ಬೇಡವೇ ಬೇಡ ಎಂದು ಕೆಲವು ಚಿಂತಕರು ಮಹಾಭಾರತ,ರಾಮಾಯಣವನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕವೂ ಅನಾಹುತಗಳನ್ನು ಮಾಡುತ್ತಿದ್ದಾರೆ. ಮಹಾಭಾರತ, ರಾಮಾಯಣಗಳನ್ನು ನಾವು ಶಾಸ್ತ್ರವಾಗಿಸುವ, ಧರ್ಮಗ್ರಂಥವಾಗಿಸುವ ಅಥವಾ ಇತಿಹಾಸ ಗ್ರಂಥವಾಗಿಸುವ ಸಂಚುಗಳನ್ನು ವಿಫಲಗೊಳಿಸಿ, ಈ ವಿಶ್ವದ ಎರಡು ಮಹಾಕಾವ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ. ಆ ಮೂಲಕ ನಮ್ಮ ಸಮಾಜವನ್ನೂ ರಕ್ಷಿಸಿಕೊಳ್ಳಬೇಕಾಗಿದೆ. ಇಂದು ನಾವು ಮಹಾಭಾರತ ಕತೆಗಳೆಂದು ನಂಬಿರುವ ಎಷ್ಟೋ ಕತೆಗಳು ಮೂಲ ವ್ಯಾಸ ಬರೆದ ಮಹಾಭಾರತದಲ್ಲಿ ಇಲ್ಲವೇ ಇಲ್ಲ. ಕರ್ಣನಿಗೆ, ದ್ರೋಣನಿಗೆ, ದುರ್ಯೋಧನನಿಗೆ ಸಂಬಂಧಿ ಸಿದ ಅದೆಷ್ಟೋ ಉಪ ಕತೆಗಳು ಜನರಿಂದ ಜನರಿಗೆ ವೌಖಿಕವಾಗಿ ಹರಡಿ ದವುಗಳಾಗಿವೆ. ಮಹಾಭಾರತವನ್ನು ತಿರಸ್ಕರಿಸಿ ಎಂದು ಕೆಲವು ಚಿಂತಕರು ಸಾರ್ವಜನಿಕವಾಗಿ ನೀಡುವ ಘೋಷಣೆಗಳು, ಪರೋಕ್ಷವಾಗಿ ಮಹಾಭಾರತವನ್ನು ಒಂದು ಶಿಷ್ಟ ಕೃತಿಯಾಗಿ, ಶಾಸ್ತ್ರವಾಗಿ ಸ್ಥಾಪಿಸಲು ಹವಣಿಸುವ ಸಂಚುಕೋರರಿಗೆ ಅನುಕೂಲವಾಗಿ ಪರಿಣಮಿಸಬಹುದು. 


ಈ ದೇಶದಲ್ಲಿ ವ್ಯಾಸನ ಭಾರತ ಮಾತ್ರ ಇರುವುದಲ್ಲ. ಪಂಪನ ಭಾರತವಿದೆ. ರನ್ನನ ಭಾರತವಿದೆ. ರಾಮಾಯಣಗಳೂ ಅಷ್ಟೇ. ಇತ್ತೀಚೆಗೆ ಕುವೆಂಪು ಬರೆದಿರುವ ‘ರಾಮಾಯಣ ದರ್ಶನಂ’ ಮೂಲ ವಾಲ್ಮೀಕಿಯ ರಾಮಾಯಣದೊಂದಿಗೆ ಸಂಘರ್ಷಕ್ಕಿಳಿಯುತ್ತದೆ. ಅಷ್ಟೇ ಏಕೆ, ಕರಾವಳಿಯ ಯಕ್ಷಗಾನ ಮಹಾಭಾರತದ ಹಲವು ಪಾತ್ರಗಳಿಗೆ ಹೊಸ ರೂಪವನ್ನು ಕೊಟ್ಟಿದೆ. ಕೆಲವು ಕಲಾವಿದರು, ಮಹಾಭಾರತದ ಕೆಲವು ಪಾತ್ರಗಳಿಗಾಗಿಯೇ ಗುರುತಿಸಲ್ಪಡುತ್ತಿದ್ದರು. ಇಂಥವರ ಭೀಮ, ಇಂಥವರ ದುರ್ಯೋಧನನ ಪಾತ್ರ ಚೆನ್ನಾಗಿರುತ್ತದೆ ಎಂದು ಆಡಿಕೊಳ್ಳುವಷ್ಟು, ಪುರಾಣ ಪಾತ್ರಗಳನ್ನು ಹೊಸದಾಗಿ ಕಟ್ಟಿದ ಪಾತ್ರಧಾರಿಗಳಿದ್ದಾರೆ. ಅಂದರೆ, ವ್ಯಾಸ ಹುಟ್ಟುವ ಮೊದಲೂ ಈ ನೆಲದಲ್ಲಿ ಮಹಾ ಭಾರತವಿತ್ತು. ಮೌಖಿಕವಾಗಿ. ವ್ಯಾಸ ಅಳಿದ ಬಳಿಕವೂ ಈ ದೇಶದಲ್ಲಿ ಮಹಾಭಾರತ ಮತ್ತೆ ಮತ್ತೆ ಹುಟ್ಟಿಕೊಂಡಿತು. ಹಲವು ಬಾರಿ, ಹಲವು ಕವಿಗಳ ಮೂಲಕ ಅದನ್ನು ಮುರಿದು ಕಟ್ಟುವ ಕೆಲಸ ನಡೆಯಿತು. ಒಂದು ಧಾರ್ಮಿಕ ಗ್ರಂಥವನ್ನು ಹೀಗೆ ಮುರಿದು ಕಟ್ಟುವುದಕ್ಕೆ ಸಾಧ್ಯವಿಲ್ಲ. ಈ ದೇಶದಲ್ಲಿ ಭಗವದ್ಗೀತೆಯನ್ನು ಯಾರೂ ಬೇರೆ ಬೇರೆ ರೂಪದಲ್ಲಿ ಹೊಸದಾಗಿ ಬರೆದಿಲ್ಲ. ಆದರೆ ಮಹಾಭಾರತವನ್ನು ಬರೆದರು. ಕಾವ್ಯವಷ್ಟೇ ಹೀಗೆ ಕಾಲದಿಂದ ಕಾಲಕ್ಕೆ ಬೆಳೆಯುತ್ತಾ ಹೋಗುವುದಕ್ಕೆ ಸಾಧ್ಯ. ಮಹಾಭಾರತ, ಹಾಗೆ ಬೆಳೆಯುತ್ತಾ ಹೋದ ಒಂದು ಅದ್ಭುತ ಕಾವ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. 


ನನ್ನ ಬಾಲ್ಯವನ್ನು ರಮ್ಯವಾಗಿಸಿದ್ದು ಮಹಾಭಾರತ ಕಾವ್ಯ. ಉಪ್ಪಿನಂಗಡಿಯ ಮುರುಕು ಗ್ರಂಥಾಲಯ ನನಗೊಂದು ರಮ್ಯ ತಾಣವೆನಿಸಿದ್ದು, ಅದರ ಧೂಳಿನ ಪರಿಮಳ ನನಗೆ ಇಷ್ಟವಾಗುವುದಕ್ಕೆ ಕಾರಣವಾಗಿದ್ದು ಮಹಾಭಾರತದ ಕತೆಗಳು. ಪ್ರತಿ ಪಾತ್ರ ನನ್ನ ಕಲ್ಪನಾ ಶಕ್ತಿಯನ್ನು ಹಿಗ್ಗಿಸುತ್ತಿತ್ತು. ಹಾಗೆ ನೋಡಿದರೆ ರಾಮಾಯಣ ಕತೆ ನನಗೆ ಈ ಅನುಭವವನ್ನು ನೀಡುತ್ತಿರಲಿಲ್ಲ. ರಾಮಾಯಣಕ್ಕೆ ಒಂದು ನಿರ್ದಿಷ್ಟವಾದ, ಸಂಕುಚಿತವಾದ ಹರಿವು ಇದೆ. ಮಾರ್ಗ ಇದೆ. ಅಲ್ಲಿ ನಾಯಕನಿದ್ದಾನೆ, ಖಳನಾಯಕನಿದ್ದಾನೆ. ನಾಯಕಿಯಿದ್ದಾಳೆ. ಆದರೆ ಮಹಾಭಾರತ ಹಾಗಲ್ಲ. ಅಲ್ಲಿ ನಾಯಕನೇ ಇಲ್ಲ. ಅಥವಾ ಅಲ್ಲಿರುವ ಪಾತ್ರಗಳೆಲ್ಲವೂ ತಮಗೆ ತಾವೇ ನಾಯಕರು. ಈ ಕಾರಣದಿಂದಲೇ ಪಂಪನಿಗೆ ಅರ್ಜುನ ನಾಯಕನಾಗಿದ್ದರೆ, ರನ್ನನಿಗೆ ದುರ್ಯೋಧನ ನಾಯಕ. ಅಮರ ಚಿತ್ರ ಕತೆಗಳಿಂದ ಆರಂಭವಾಗುವ ಮಹಾಭಾರತದ ಓದು, ಬಳಿಕ ವ್ಯಾಸನ 18 ಪರ್ವಗಳನ್ನು ದಾಟಿ, ಕುಮಾರವ್ಯಾಸನ ಭಾರತ, ಇರಾವತಿ ಕರ್ವೆ ಅವರ ಯುಗಾಂತ, ಎಸ್. ಎಲ್. ಭೈರಪ್ಪ ಅವರ ಪರ್ವ, ವಿ.ಸಾ. ಖಾಂಡೇಕರ್ ಅವರ ಯಯಾತಿ...ಹೀಗೆ ಓದು ಬೆಳೆದಂತೆ ಅದು ಕೊಡುವ ಅನುಭವಗಳು ಬೇರೆ ಬೇರೆಯಾದುದು. ಅದೆಷ್ಟು ಬಾರಿ ಮಹಾಭಾರತವನ್ನು ನಾವು ಓದುತ್ತೇವೆಯೋ, ಅಷ್ಟೂ ಬಾರಿ ಅದು ಬೇರೆ ಬೇರೆ ಅನುಭವಗಳನ್ನು ನೀಡುತ್ತವೆ. ಈ ದೇಶದ ಎಲ್ಲ ಕತೆಗಳೂ ಮಹಾಭಾರತದಲ್ಲಿ ಸೇರಿ ಹೋಗಿವೆ. ನಾವೀಗ ಯಾವ ಕತೆಯನ್ನು ಹೊಸತೆಂದು ಬರೆಯುತ್ತೇವೆಯೋ, ಅದನ್ನು ಮಹಾಭಾರತ ದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹೇಳಿ ಮುಗಿಸಿ ಆಗಿದೆ.


  ಮಹಾಭಾರತ ವ್ಯಭಿಚಾರದ ಕತೆ ಎಂದು ಲೇಖಕರೊಬ್ಬರು ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೌದು. ಮಹಾಭಾರತ ವ್ಯಭಿಚಾರದ ಕತೆ. ಆದರೆ ಅದು ಕೇವಲ ವ್ಯಭಿಚಾರದ ಕತೆಯಷ್ಟೇ ಅಲ್ಲ. ಅಲ್ಲಿ ಶೌರ್ಯವಿದೆ. ಶೃಂಗಾರವಿದೆ. ತ್ಯಾಗವಿದೆ. ವಿಷಾದವಿದೆ. ಛಲವಿದೆ. ಸೇಡು, ಪ್ರತೀಕಾರವಿದೆ. ತಂತ್ರವಿದೆ. ವಂಚನೆ, ದ್ರೋಹಗಳಿವೆ. ದುರಂತಗಳಿವೆ. ಒಂದು ಕಾವ್ಯಕ್ಕೆ ಬೇಕಾಗಿರುವ ಎಲ್ಲವೂ ಅದರೊಳಗಿವೆ. ಯಾವುದೂ ಸಿದ್ಧ ಪಾತ್ರಗಳಲ್ಲ. ಉದ್ದೇಶಪೂರ್ವಕ ತಂದ ಪಾತ್ರಗಳಲ್ಲ. ಮುಟ್ಟಿದರೆ ಬೆಳೆಯುವ ಪಾತ್ರಗಳು ಅವು. ಎಲ್ಲ ಪಾತ್ರಗಳಿಗೂ ಸ್ವಂತಿಕೆಯಿದೆ. ನಾವು ದುರ್ಯೋಧನನ್ನು ಕೇಂದ್ರವಾಗಿಟ್ಟು ಕತೆ ಹೇಳಬಹುದು. ಹಾಗೆಯೇ ಕಷ್ಣನನ್ನು ಕೇಂದ್ರವಾಗಿಟ್ಟೂ ಕತೆ ಹೇಳಬಹುದು. ಭೀಮ, ಅರ್ಜುನ, ದ್ರೌಪದಿ... ಹೀಗೆ ಯಾರನ್ನು ಕೇಂದ್ರವಾಗಿಟ್ಟುಕೊಂಡೂ ಮಹಾಭಾರತವನ್ನು ನೋಡಬಹುದು. ಪ್ರಾಚೀನ ಕವಿಗಳು ಹಾಗೆ ನೋಡಿದ್ದಾರೆ ಕೂಡ. ಅಷ್ಟೇ ಯಾಕೆ, ಪಂಪ ತಾನು ಬರೆದ ಭಾರತದಲ್ಲಿ ತನ್ನ ಅರಸನನ್ನೇ ಅರ್ಜುನನಿಗೆ ಹೋಲಿಸಿದ. ಇಂತಹ ಕೆಲಸವನ್ನು ಹಲವು ಕವಿಗಳು ಮಾಡಿದ್ದಾರೆ. ಪುರಾಣವನ್ನು ವರ್ತಮಾನವನ್ನೂ ರೂಪಕಗಳ ಮೂಲಕ ಜೋಡಿಸಿದ್ದಾರೆ.


 ಒಂದು ರೀತಿಯಲ್ಲಿ ಪ್ರತಿ ಮನುಷ್ಯನೊಳಗೂ ಮಹಾಭಾರತದ ಪಾತ್ರಗಳು ಬಚ್ಚಿಟ್ಟುಕೊಂಡಿರುತ್ತವೆ. ದುರ್ಯೋಧನನ ಛಲ, ಕರ್ಣನ ತ್ಯಾಗ, ಭೀಮನ ರೊಚ್ಚು, ಧರ್ಮರಾಯನ ಸಜ್ಜನಿಕೆ, ಶಕುನಿಯ ತಂತ್ರ...ನಮ್ಮ ಕಣ ಕಣಗಳಲ್ಲೂ ಉಸಿರಾಡುತ್ತಿವೆ. ಮಹಾಭಾರತವನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅದರ ಕತೆಗಳು ನಮ್ಮೊಂದಿಗೆ ಬೆಸೆದುಕೊಂಡಿವೆ. ವೈದಿಕ ಜಾತೀಯತೆಗಳನ್ನು, ಮೌಢ್ಯಗಳನ್ನು ತಿರಸ್ಕರಿಸುವ ಭರದಲ್ಲಿ ಮಹಾಭಾರತವನ್ನು ತಿರಸ್ಕರಿಸಿ ಎಂದು ಕೆಲವು ಲೇಖಕರು ಹೇಳಿರಬಹುದು. ನಾವು ತಿರಸ್ಕರಿಸಬೇಕಾಗಿರುವುದು ಮಹಾಭಾರತವನ್ನಲ್ಲ. ಆ ಕೃತಿಯನ್ನು ಧರ್ಮಗ್ರಂಥವಾಗಿಸುವ, ಶಾಸ್ತ್ರವಾಗಿಸುವ, ಸಂಚುಗಳನ್ನು ತಿರಸ್ಕರಿಸಬೇಕಾಗಿದೆ. ಆ ಮೂಲಕ ಮಹಾಭಾರತವೆನ್ನುವ ಮಹಾಕಾವ್ಯವನ್ನು ಉಳಿಸಿಕೊಳ್ಳಬೇಕಾಗಿದೆ.

No comments:

Post a Comment