ತಮಗೆ ದೊರಕಿದ ಪಂಪ ಪ್ರಶಸ್ತಿಯನ್ನು ಚಂದ್ರ ಶೇಖರ ಪಾಟೀಲ್ ಅವರು ಸರಕಾರಕ್ಕೆ ಮರಳಿಸುತ್ತಿರೋದು |
ವಸ್ತುನಿಷ್ಠ ಸಂಶೋಧಕ, ಲೇಖಕ, ವಿಚಾರವಾದಿ ಡಾ. ಎಂ. ಎಂ. ಕಲಬುರ್ಗಿ ಅವರ ಕಗ್ಗೊಲೆಯನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ದೇಶಾದ್ಯಂತ ಪಸರಿಸುತ್ತಿದೆ ಮತ್ತು ಆಕ್ರೋಶದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನ ವಿಧಾನಸೌಧದ ಮುಂಭಾಗದಿಂದ ದಿಲ್ಲಿಯ ಜಂತರ್ ಮಂತರ್‌ವರೆಗೆ ಪ್ರತಿಭಟನೆ ವಿಸ್ತರಿಸಿದೆ. ಜನಸಾಮಾನ್ಯರಿಂದ ಹಿಡಿದು ಚಿಂತಕರವರೆಗೆ ಕೊಲೆಯ ವಿರುದ್ಧ ಬೇರೆ ಬೇರೆ ರೀತಿಯಲ್ಲಿ ತಮ್ಮ ತಮ್ಮ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕಲಬುರ್ಗಿಯವರನ್ನು ಎರಡು ಗುಂಡಿನಿಂದ ಮುಗಿಸಿ ಹಾಕಬಹುದು ಎಂದು ಭಾವಿಸಿದವರು ಬೆಕ್ಕಸಗೊಳ್ಳುವಂತೆ ಕಲಬುರ್ಗಿಯವರ ವಿಚಾರಧಾರೆಗಳು ಸಮಾಜದಲ್ಲಿ ಜಾಗೃತಗೊಂಡಿವೆ. ಒಂದು ರೀತಿಯಲ್ಲಿ ತನ್ನ ಕಗ್ಗೊಲೆಯ ಬಳಿಕವೇ ಕಲಬುರ್ಗಿಯವರು ಸಮಾಜದೊಳಗೆ ಹೆಚ್ಚು ಮಾತನಾಡುತ್ತಿದ್ದಾರೆ. ಹೆಚ್ಚು ಹೆಚ್ಚು ಪರಿಣಾಮಗಳನ್ನು ಬೀರುತ್ತಿದ್ದಾರೆ.
ವ್ಯವಸ್ಥೆ ಒಬ್ಬ ಲೇಖಕನನ್ನು, ಬರಹಗಾರನನ್ನು ಮುಗಿಸಲು ಎರಡು ಮುಖ್ಯ ತಂತ್ರಗಳನ್ನು ಅನುಸರಿಸುತ್ತದೆ. ಒಂದು ಜೀವ ಬೆದರಿಕೆ, ಮುಖ್ಯವಾಗಿ ಕೊಂದು ಹಾಕುವುದು. ಸಫ್ದರ್ ಹಶ್ಮಿಯನ್ನು ಕೊಂದು ಆತನ ವಿಚಾರಧಾರೆಗಳನ್ನು ಮುಗಿಸಲು ವಿಫಲ ಪ್ರಯತ್ನ ನಡೆದಿರುವುದನ್ನು ನಾವು ಕಂಡಿದ್ದೇವೆ. ಅವರ ಗುರಿ ಕೇವಲ ಹಶ್ಮಿಯೋ, ಕಲಬುರ್ಗಿಯೋ ಅಲ್ಲ. ಜೊತೆಗೇ ಇನ್ನಿತರರನ್ನು ಬೆದರಿಸಿ ಬಾಯಿ ಮುಚ್ಚಿಸುವ ಒಳ ಅಜೆಂಡಾವನ್ನೂ ಅವರು ಹೊಂದಿದ್ದಾರೆ. ನಾಳೆ ಕಲಬುರ್ಗಿಯವರ ಸ್ಥಿತಿ ಇನ್ನಿತರರಿಗೂ ಒದಗಬಹುದು, ಆದುದರಿಂದ ಬಾಯಿ ಮುಚ್ಚಿ ಕುಳಿತಿರಿ ಎಂಬ ಬಹಿರಂಗ ಬೆದರಿಕೆಯೂ ಹೌದು. ಆದರೆ ಒಬ್ಬ ಪ್ರಾಮಾಣಿಕ, ವಸ್ತುನಿಷ್ಠ ಲೇಖಕನನ್ನು ಗುಂಡಿನಿಂದ ಕೊಂದು ಹಾಕುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಕಲಬುರ್ಗಿ ಕೊಲೆಯಿಂದಲೇ ಸಾಬೀತಾಗಿದೆ. ನಿಜಕ್ಕೂ ಒಬ್ಬ ವಿಚಾರವಾದಿಯನ್ನು ಬಾಯಿ ಮುಚ್ಚಿಸುವ ಉದ್ದೇಶದಿಂದ ಈ ಕೊಲೆ ನಡೆದಿದ್ದರೆ ಅವರು ಅದರಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಯಾಕೆಂದರೆ ಕರ್ನಾಟಕದ ಮೂಲೆ ಮೂಲೆಯಲ್ಲಿ ‘ನಾನೂ ಕಲಬುರ್ಗಿ’ ಎಂಬ ಘೋಷಣೆಗಳು ಕೇಳುತ್ತಿವೆ. ಕರ್ನಾಟಕದ ಲೇಖಕರು, ವಿಚಾರವಂತರು ಇದರಿಂದ ಬೆದರಿದಂತೆ ಕಾಣುತ್ತಿಲ್ಲ. ಬದಲಿಗೆ ಅಳಿದುಳಿದವರು ಒಂದಾಗಿ ಗಟ್ಟಿಧ್ವನಿಯಿಂದ ಕಲಬುರ್ಗಿ ಸಾವನ್ನು ಖಂಡಿಸಿದ್ದಾರೆ. ಮತ್ತು ಇನ್ನಷ್ಟು ಪರಿಣಾಮಕಾರಿಯಾಗಿ, ತೀವ್ರವಾಗಿ ತಮ್ಮ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವುದಕ್ಕೆ ಮುಂದಾಗಿದ್ದಾರೆ. ಇದು ಸಂಕಟಗಳ ನಡುವೆಯೂ ಒಂದು ಆಶಾದಾಯಕ ಸಂಗತಿಯಾಗಿದೆ.
ಇದೇ ಸಂದರ್ಭದಲ್ಲಿ ಒಬ್ಬ ಲೇಖಕನನ್ನು, ವಿಚಾರವಾದಿಯನ್ನು ಕೊಂದು ಹಾಕಲು, ಬಾಯಿಮುಚ್ಚಿಸಲು ವ್ಯವಸ್ಥೆ ಇನ್ನೊಂದು ತಂತ್ರವನ್ನು ಅನುಸರಿಸುತ್ತದೆ ಮತ್ತು ಈ ತಂತ್ರ ನಿಜಕ್ಕೂ ಅತಿ ಹೆಚ್ಚು ಅಪಾಯಕಾರಿಯಾದುದು. ಯಾಕೆಂದರೆ, ಈ ತಂತ್ರಕ್ಕೆ ಈಗಾಗಲೇ ನೂರಾರು ವಸ್ತುನಿಷ್ಠ ಲೇಖಕರು ಬಲಿಯಾಗಿದ್ದಾರೆ. ಅಥವಾ ಬಾಯಿ ಮುಚ್ಚಿಕೊಂಡುಕೂತಿದ್ದಾರೆ. ಈ ತಂತ್ರ ಇನ್ನೇನೂ ಅಲ್ಲ, ಸರಕಾರ ಅಥವಾ ಪುರೋಹಿತ ಶಾಹಿ ವ್ಯವಸ್ಥೆಗಳೇ ಮುಂದೆ ನಿಂತು ಪ್ರಾಮಾಣಿಕ ಲೇಖಕನಿಗೆ ಪ್ರಶಸ್ತಿಗಳನ್ನು, ಬಿರುದು ಗೌರವಗಳನ್ನು ನೀಡಿ ಆತನನ್ನು ಕೊಂದು ಹಾಕುವುದು. ಸರಕಾರದ ಪ್ರಶಸ್ತಿ ಅಥವಾ ಪುರೋಹಿತ ಶಾಹಿ ಮಠಮಾನ್ಯಗಳ ಪ್ರಶಸ್ತಿ ಪಡೆದ ಎಲ್ಲ ಲೇಖಕರು ವೌನವಾಗಿದ್ದಾರೆ ಅಥವಾ ಸತ್ತು ಹೋಗಿದ್ದಾರೆ ಎಂದು ಇದರರ್ಥವಲ್ಲ. ಕೆಲವರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡೂ, ವ್ಯವಸ್ಥೆಯ ವಿರುದ್ಧ ನಿಷ್ಠುರವಾಗಿ ಮಾತನ್ನಾಡುವ ಶಕ್ತಿಯನ್ನು ಉಳಿಸಿಕೊಂಡಿದ್ದಾರೆ. ಆದರೆ ಹಲವರನ್ನು ಈ ಪ್ರಶಸ್ತಿಗಳು ಕೊಂದು ಹಾಕಿವೆ ಎನ್ನುವುದು ಸುಳ್ಳಲ್ಲ. ಕಲಬುರ್ಗಿಯವರು ಬರ್ಬರವಾಗಿ ಕೊಲೆಗೀಡಾದಾಗ ಹಲವು ಶ್ರೇಷ್ಠ ಬರಹಗಾರರು ಯಾವುದೇ ಖಂಡನೆ ವ್ಯಕ್ತಪಡಿಸದೇ ಸುಮ್ಮನಿರುವುದರ ಹಿಂದೆ ಈ ಪ್ರಶಸ್ತಿ, ಸ್ಥಾನಮಾನ, ಪುರೋಹಿತಶಾಹಿಗಳ ಓಲೈಕೆ ಕೆಲಸ ಮಾಡಿರುವುದು ಸುಳ್ಳಲ್ಲ.
ಇದೇ ಸಂದರ್ಭದಲ್ಲಿ ಎರಡು ಆಶಾದಾಯಕವಾದ ಅಂಶಗಳು ಸಾಹಿತಿಗಳ ನಡುವೆಯೇ ಗೋಚರಿಸಿವೆ. ಅದರಲ್ಲಿ ಮುಖ್ಯವಾಗಿ, ಹಿಂದಿಯ ಲೇಖಕರೊಬ್ಬರು ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಿ, ತಾನು ಪಡೆದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಮರಳಿಸಲು ನಿರ್ಧರಿಸಿರೂವುದು. ಜವಾಹರಲಾಲ್ ವಿ.ವಿ.ಯ ಮಾಜಿ ಸಹಾಯಕ ಪ್ರೊಫೆಸರ್ ಉದಯ ಪ್ರಕಾಶ್ ಅವರೇ ತಮಗೆ ಸಿಕ್ಕಿದ ಪ್ರಶಸ್ತಿಯನ್ನು ಮರಳಿಸಲು ನಿರ್ಧರಿಸಿದವರು. ಇದರ ಬೆನ್ನಿಗೇ, ಕನ್ನಡದ ನಿಷ್ಠುರ ಲೇಖಕ, ವಿಮರ್ಶಕ ಚಂದ್ರಶೇಖರ ಪಾಟೀಲರು ತಮಗೆ ದೊರಕಿದ ಪಂಪ ಪ್ರಶಸ್ತಿಯನ್ನು ಮರಳಿಸಲಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಲಬುರ್ಗಿ ಹತ್ಯೆಯನ್ನು ಖಂಡಿಸಿ, ಜೊತೆಗೆ ಮೌಢ್ಯ ವಿರೋಧಿ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಚಂದ್ರಶೇಖರ ಪಾಟೀಲರು ತಮಗೆ ದೊರಕಿರುವ ಪಂಪಪ್ರಶಸ್ತಿಯನ್ನು ಸರಕಾರಕ್ಕೆ ಮರಳಿಸಲು ನಿರ್ಧರಿಸಿದ್ದಾರೆ. ಚಂಪಾ ಅವರ ಈ ನಿರ್ಧಾರ ನಿಜಕ್ಕೂ ಕವಿ ಪಂಪನಿಗೆ ನೀಡಿದ ಗೌರವವಾಗಿದೆ. ನಿರ್ಣಾಯಕ ಸಂದರ್ಭಗಳಲ್ಲಿ ಒಬ್ಬ ನಿಷ್ಠುರ ಲೇಖಕ ಏನನ್ನು ಮಾಡಬೇಕೋ ಅದನ್ನು ಚಂಪಾ ಅವರು ಮಾಡಿದ್ದಾರೆ.ಈ ಹಿಂದೆ ಕನ್ನಡ ಮಾಧ್ಯಮಕ್ಕಾಗಿ ಹಿರಿಯ ಸಾಹಿತಿ ದೇವನೂರ ಅವರು ತನ್ನ ಪ್ರಶಸ್ತಿಯನ್ನು ಮರಳಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಒಂದೆಡೆ ಲೇಖಕರು ಹಾಡಹಗಲೇ ಗುಂಡಿಗೆ ಬಲಿಯಾಗಿ ಸಾಯುವ ವಾತಾವರಣವಿರುವ ನಾಡಿನಲ್ಲಿ ಸಾಹಿತಿಗಳಿಗೆ ಸಿಗುವ ಪ್ರಶಸ್ತಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಚಂಪಾ ಅವರು ತನ್ನ ಪ್ರಶಸ್ತಿಯನ್ನು ಮರಳಿಸಲು ನಿರ್ಧರಿಸಿರುವುದು, ಸರಕಾರಕ್ಕೆ ತನ್ನ ಹೊಣೆಗಾರಿಕೆಗಳನ್ನು ಪರಿಣಾಮಕಾರಿಯಾಗಿ ನೆನಪಿಸುವಂತೆ ಮಾಡಿದೆ.
ದಿಲ್ಲಿಯ ಹಿಂದಿ ಲೇಖಕರು ಕಲಬುರ್ಗಿ ಹತ್ಯೆ ಖಂಡಿಸಿ ತನ್ನ ಪ್ರಶಸ್ತಿಯನ್ನು ಮರಳಿಸಲು ನಿರ್ಧರಿಸುವ ಮೂಲಕ, ವಿಚಾರವಾದಿಗಳಿಗೆ, ಚಿಂತಕರಿಗೆ, ಬರಹಗಾರರಿಗೆ ಭಾಷೆ, ರಾಜ್ಯಗಳ ಗಡಿಗಳಿಲ್ಲ ಎನ್ನುವುದನ್ನು ಅವರು ಸಾಬೀತುಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿ ವಿರೋಧಿ ಮಾತನಾಡುತ್ತ ತಮ್ಮ ಕನ್ನಡಾಭಿಮಾನವನ್ನು ಸಾಬೀತು ಮಾಡಲು ಹವಣಿಸುವ ಹಲವು ಲೇಖಕರು ಕಲಬುರ್ಗಿ ಕೊಲೆಯ ಬಳಿಕ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ. ಕನಿಷ್ಠ ಖಂಡನೆ ನೀಡುವುದಕ್ಕೂ ಅವರು ಮುಂದಾಗಿಲ್ಲ. ಕೆಲವರಂತೂ ಕಲಬುರ್ಗಿ ಸಾವನ್ನು ತೀರ್ಥಹಳ್ಳಿಯ ನಂದಿತಾ ಸಾವಿಗೆ ಮತ್ತು ಡಿ.ಕೆ. ರವಿಯ ಸಾವಿಗೆ ಹೋಲಿಸಿ ‘ನಾವು ಮೊದಲೇ ನ್ಯಾಯಾಧೀಶರಾಗಬಾರದು, ಪೊಲೀಸರಾಗಬಾರದು’ ಎಂದು ಬೋಧನೆ ಮಾಡುತ್ತಿದ್ದಾರೆ. . ನಂದಿತಾ ಎನ್ನುವ ಬಾಲಕಿ ಆತ್ಮಹತ್ಯೆಯನ್ನು ಕೊಲೆ, ಅತ್ಯಾಚಾರ ಎಂದು ಸಂಶಯಸಿ ಪೂರ್ವಾಗ್ರಹ ಪೀಡಿತರಾಗಿ ವರದಿ ಮಾಡಿರುವುದಕ್ಕೂ ಹಾಡಹಗಲೇ ನಡೆದ ಕಲಬುರ್ಗಿಯವರ ಕಗ್ಗೊಲೆಗೂ ವ್ಯತ್ಯಾಸವಿದೆ ಎನ್ನುವುದನ್ನು ಇವರಿಗೆ ಪ್ರತ್ಯೇಕವಾಗಿ ವಿವರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇವರ ಪ್ರಕಾರ ಆರೋಪಿಯನ್ನು ಬಂಧಿಸಿದರೂ ನಾವು ಆರೋಪಿಗಳನ್ನು ಸಾರ್ವಜನಿಕವಾಗಿ ಖಂಡಿಸುವಂತಿಲ್ಲ. ಯಾಕೆಂದರೆ ಅದು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲವಲ್ಲ? ಪೊಲೀಸರು ಈ ಹಿಂದೆ ಹಲವು ನಿರಪರಾಧಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ ಉದಾಹರಣೆಗಳೂ ಇವೆ.(ಮಾಲೆಗಾಂವ್, ಅಜ್ಮೀರ್ ಸ್ಫೋಟದಲ್ಲಿ ಇದೇ ನಡೆದಿತ್ತು. ಬಳಿಕ ನ್ಯಾಯಾಲಯದಲ್ಲಿ ಅವರು ಬಿಡುಗಡೆಯಾದರು) ಹಲವು ಕೊಲೆ ಬೆದರಿಕೆಗಳನ್ನು ಎದುರಿಸಿರುವ ಬರಹಗಾರನೊಬ್ಬನನ್ನು ಗುಂಡಿಟ್ಟು ಕೊಂದಾಗ, ಕೂದಲು ಸೀಳುವ ಕೆಲಸ ಮಾಡುತ್ತಾ ಕೂರುವ ಬದಲು, ಮೊದಲಿಗೆ ಅದನ್ನು ಖಂಡಿಸುವುದು ಒಬ್ಬ ಬರಹಗಾರನ ಮೊದಲ ಕರ್ತವ್ಯ. ಅದು ಅವನಿಗೆ ಅವನೇ ಮಾಡಿಕೊಳ್ಳುವ ಸಹಾಯವೂ ಹೌದು.
ನಂದಿತಾ, ಡಿ.ಕೆ.ರವಿ ಅವರ ಆತ್ಮಹತ್ಯೆಯನ್ನು ಕೊಲೆಯಾಗಿ ಸಂಶಯಿಸಲು ಸಂಘಪರಿವಾರ ಹರಡಿದ ವದಂತಿಗಳು ಕಾರಣವಾಗಿದ್ದವು. ಇಂದು ಕಲಬುರ್ಗಿಯವರ ಕಗ್ಗೊಲೆಯ ಕುರಿತಂತೆಯೂ ವದಂತಿಗಳನ್ನು ಹರಡುವ ಕೆಲಸ ಇದೇ ಸಂಘಪರಿವಾರ ಮಾಡುತ್ತಿದೆ ಮತ್ತು ಇನ್ನೊಂದೆಡೆ ಅವರ ಸಾವಿಗೆ ಸಂಭ್ರಮಿಸುತ್ತಿರೋದು ಆ ಸಂಘಟನೆಗಳೇ ಆಗಿವೆ. ಡಿ.ಕೆ.ರವಿ, ನಂದಿತಾ ಬಗ್ಗೆ ನಿಜಕ್ಕೂ ನಡೆದಿರುವುದು ಏನು ಎನ್ನುವುದು ಸಾರ್ವಜನಿಕವಾಗಿ ಎಲ್ಲರಿಗೂ ಗೊತ್ತಿತ್ತು. ಪ್ರತಿಭಟನೆಯ ಹೆಸರಲ್ಲಿ ಸಾರ್ವಜನಿಕ ದಾಂಧಲೆ ನಡೆಸಿರೋದು ಬಿಜೆಪಿ, ಸಂಘಪರಿವಾರ ಸಂಘಟನೆಗಳು ಮಾತ್ರ. ಕಲಬುರ್ಗಿಯ ಕೊಲೆಯ ಹಿಂದೆ ವೈಯಕ್ತಿಕ ಕಾರಣಗಳ ಬಗ್ಗೆ ಪ್ರಾಥಮಿಕ ಸುಳಿವೂ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಕೆಲವು ಲೇಖಕರು, ‘ಈಗ ಬಾಯಿಮುಚ್ಚಿ. ಪೊಲೀಸರು ಹೇಳಲಿ, ನ್ಯಾಯಾಲಯದಲ್ಲಿ ಸಾಬೀತಾಗಲಿ. ಅಲ್ಲಿಯವರೆಗೆ ಮಾತನಾಡುವುದು ಸರಿಯಲ್ಲ’ ಎಂದು ತರ್ಕಿಸುತ್ತಿರುವುದು ಅವರು ತಮಗೆ ತಾವೇ ಮಾಡಿಕೊಳ್ಳುತ್ತಿರುವ ದ್ರೋಹ. ಅದು ಅವರ ಸಮಯ ಸಾಧಕತನ, ಪಲಾಯನವಾದವನ್ನು ಬಹಿರಂಗಪಡಿಸುತ್ತದೆಯೇ ಹೊರತು ಅವರ ಪ್ರಬುದ್ಧತೆ, ವಿವೇಕವನ್ನಲ್ಲ. ಈ ಮೂಲಕ ಬರಹಗಾರನೊಬ್ಬನ ಬದುಕನ್ನು, ಆತನ ಸಾರ್ವಜನಿಕ ಅಭಿವ್ಯಕ್ತಿಯ ಹಕ್ಕನ್ನು ಇನ್ನಷ್ಟು ಆಪತ್ತಿನಲ್ಲಿ ಸಿಲುಕಿಸಲು ಈ ಲೇಖಕರೇ ಪರೋಕ್ಷವಾಗಿ ಶಾಮೀಲಾಗುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
No comments:
Post a Comment