ಜೀವಮಾನ ಪೂರ್ತಿ
ಓಡಾಡಿದ ಆ ಬೀದಿಯಲ್ಲಿ
ಇದೀಗ ಆ ವೃದ್ಧ
ಥಕ್ಕೆಂದು ನಿಂತು ಬಿಟ್ಟಿದ್ದಾನೆ
ಎಲ್ಲಿಂದ ಬಂದಿದ್ದೇನೆ
ಎಲ್ಲಿಗೆ ಹೋಗಬೇಕು ಎನ್ನೋದು
ಮರೆತು
ಅದಾಗಷ್ಟೇ ಭೂಮಿಯಿಂದ
ಮೊಳಕೆಯೊಡೆದ ಸಸಿಯಂತೆ
ಮಿಕ ಮಿಕ ನೋಡುತ್ತಿದ್ದಾನೆ
ಎಲ್ಲವು ಹೊಸತು
ಮರ, ಗಿಡ, ಓಡಾಡುವ ಜನ
ಸದ್ದು ಮಾಡುತ್ತಿರುವ ವಾಹನಗಳ
ನೋಡಿ ಬೆಕ್ಕಸ ಬೆರಗಾಗಿದ್ದಾನೆ
ಸುತ್ತ ಜನ ಸೇರಿದ್ದಾರೆ
ವಿಚಾರಣೆ ನಡೆಸುತ್ತಿದ್ದಾರೆ
ವಿಳಾಸ ಕೇಳುತ್ತಿದ್ದಾರೆ
ಅವನೋ ಈಗಷ್ಟೇ ಹುಟ್ಟಿದ ಮಗುವಿನಂತೆ
ಅವರನ್ನು ಮುಗ್ಧವಾಗಿ ನೋಡಿ
ಕಣ್ಣು ಪಿಳುಕಿಸುತ್ತಿದ್ದಾನೆ
ಪ್ರತಿದಿನ ಅವನನ್ನು ಜೋಪಾನ
ಮನೆ ತಲುಪಿಸುತ್ತಿದ್ದ
ಊರುಗೋಲು ಕೂಡ
ಈಗ ಅಪರಿಚಿತನಂತಾಡುತ್ತಿದೆ
ಅವನ ಪಾಲಿಗೆ ಎಲ್ಲವೂ
ಹೊಸದಾಗಿದೆ
ಎಲ್ಲವನ್ನೂ ಅವನೀಗ
ಹೊಸ ವಿಳಾಸದಿಂದ
ಶುರುಮಾಡಬೇಕು
No comments:
Post a Comment