Monday, March 23, 2015

ಅನೈತಿಕ ಪೊಲೀಸ್‌ಗಿರಿಗೆ ಟಿವಿ ವಾಹಿನಿಗಳ ಜೊತೆಗಾರಿಕೆ!

 ‘ಮಂಗಳೂರು ಹೋಮ್‌ಸ್ಟೇ ಪ್ರಕರಣ’ ಪದೇ ಪದೇ ಚರ್ಚೆಗೊಳಗಾಗುತ್ತವೆ. ಬರೇ ಅನೈತಿಕ ಪೊಲೀಸ್‌ಗಿರಿಯನ್ನು ಟೀಕಿಸುವುದಕ್ಕಾಗಿಯಷ್ಟೇ ಇದು ಚರ್ಚೆಯಾಗುತ್ತಿಲ್ಲ. ‘ಈ ಸಂದರ್ಭದಲ್ಲಿ ಟಿ.ವಿ. ವಾಹಿನಿಗಳು ನಡೆದುಕೊಂಡ ರೀತಿ ಎಷ್ಟರ ಮಟ್ಟಿಗೆ ಸರಿ?’ ಎನ್ನುವುದು ಪತ್ರಕರ್ತರ ನಡುವೆಯೇ ಅನೇಕ ಬಾರಿ ಚರ್ಚೆಗೊಳಗಾಗಿವೆ. ಇತ್ತೀಚೆಗೆ ಮೊಯ್ಲಿ ಪ್ರಶಸ್ತಿಗೆ ಸಂಬಂಧಪಟ್ಟಂತೆ ಹೇಳಿಕೆ ನೀಡಿದ ಟಿ. ವಿ. ವಾಹಿನಿಯ ವರದಿಗಾರ ನವೀನ್ ಸೂರಿಂಜೆ ಎನ್ನುವ ವರದಿಗಾರರ ಬಗ್ಗೆ ಫೇಸ್‌ಬುಕ್‌ನಲ್ಲಿ ಜಗದೀಶ್ ಕೊಪ್ಪ ಅವರು, ಎರ್ರಾಬಿರ್ರಿಯಾಗಿ ಎಗರಿ ಬಿದ್ದು, ಸ್ಟೇಟಸ್‌ನ್ನು ಹಾಕಿದ್ದರು. ವೀರಪ್ಪ ಮೊಯ್ಲಿಯವರ ಮಹಾಕಾವ್ಯವನ್ನು ವಿವೇಕರೈಗಳು ಬರೆದಿದ್ದರು ಎಂದು ಸೂರಿಂಜೆ ಹಾಕಿದ ಸ್ಟೇಟಸ್‌ಗೆ ಅವರು ಅಂದು ಅಷ್ಟು ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ಕೊಪ್ಪ ಅವರು ಹಿರಿಯರು. ಅಷ್ಟು ರೋಷಾವೇಷದಿಂದ ತಮ್ಮ ಹೇಳಿಕೆಯನ್ನು ನೀಡುವ ಅಗತ್ಯವಿತ್ತೆ? ಅದೇನೇ ಹೇಳುವುದಿದ್ದರೂ ಯುವ ಪೀಳಿಗೆಗೆ ಅರ್ಥವಾಗುವ ರೀತಿಯಲ್ಲಿ ಸಹನೆಯಿಂದ ವಿವರಿಸಬಾರದಿತ್ತೆ? ಎಂದು ನನಗೆ ಅನ್ನಿಸಿತ್ತು. ರಾಮಾಯಣ ಮಹಾನ್ವೇಷಣ ಕೃತಿಯ ಕುರಿತಂತೆ ‘ಬರೆದದ್ದು ವಿವೇಕ ರೈಗಳು’ ಎಂದು ವ್ಯಂಗ್ಯವಾಗಿ ಬೀಸು ಮಾತುಗಳನ್ನು ಕೆಲವರು ಹಂಚಿಕೊಳ್ಳುತ್ತಿದ್ದರು. ಅದನ್ನೇ ಸೂರಿಂಜೆ ಅವರು ಉಲ್ಲೇಖಿಸಿರಬಹುದು. ಆದರೆ ಇದೇ ಸಂದರ್ಭದಲ್ಲಿ ಕೊಪ್ಪ ಅವರು ಪ್ರಸ್ತಾಪಿಸಿದ ಹೋಮ್ ಸ್ಟೇ ಪ್ರಕರಣವನ್ನು ಸೂರಿಂಜೆ ಅವರು ಸಮರ್ಥಿಸಿ ಮಾತನಾಡಿದರು. ಮತ್ತು ತಾನು ಮಾಡಿರುವ ಕೃತ್ಯವನ್ನು ಹೆಮ್ಮೆಯಿಂದ ಹೇಳಿಕೊಂಡರು. ಅವರ ಹೇಳಿಕೆ ಉಳಿದ ಯುವ ಟಿವಿ ವಾಹಿನಿ ವರದಿಗಾರರಿಗೆ ಮಾದರಿಯಾಗುವ ಅಪಾಯವಿರುವುದರಿಂದ ನಾನಿಲ್ಲಿ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದೇನೆ. ಹೊರತು ಯಾವುದೇ ಪೂರ್ವಗ್ರಹ ಪೀಡಿತನಾಗಿ ಅಲ್ಲ ಎನ್ನುವ ನಿರೀಕ್ಷಣಾ ಜಾಮೀನಿನ ಜೊತೆಗೇ ನನ್ನ ಅಭಿಪ್ರಾಯವನ್ನು ಮಂಡಿಸುತ್ತಿದ್ದೇನೆ. 
***
ಮಂಗಳೂರಿನಲ್ಲಿ ಎಂದಲ್ಲ ದೇಶದ ಹಲವೆಡೆ ಹೆಣ್ಣು ಮಕ್ಕಳ ಮೇಲೆ ಸಂಘಪರಿವಾರ ದುಷ್ಕರ್ಮಿಗಳು ಅನೈತಿಕ ಪೊಲೀಸರ ವೇಷದಲ್ಲಿ  ದಾಳಿ ನಡೆಸಿದಾಗ ಅವರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಟಿವಿ ವಾಹಿನಿಗಳು ಸಹಕರಿಸುತ್ತಾ ಬಂದಿವೆ. ಸ್ಪಷ್ಟವಾಗಿ ಹೇಳುವುದಾದರೆ ಅವರಿಗೆ ಜೊತೆಗಾರಿಕೆಯನ್ನು ನೀಡುತ್ತಾ ಬಂದಿವೆ. ಹಾಗೆಂದು ಟಿವಿ ವಾಹಿನಿಗಳು ಈ ಅನೈತಿಕ ಪೊಲೀಸ್‌ಗಿರಿಯ ಬೆಂಬಲಿಗರು ಎನ್ನಬೇಕಾಗಿಲ್ಲ. ಅವರಿಗೆ ರೋಚಕ ದೃಶ್ಯಗಳನ್ನು ತಮ್ಮ ನೋಡುಗರಿಗೆ ನೀಡಿ ತಮ್ಮ ಟಿಆರ್‌ಪಿಗಳನ್ನು ಹೆಚ್ಚಿಸುವ ತುರ್ತುಗಳಿವೆ. ಬ್ರೇಕಿಂಗ್ ನ್ಯೂಸ್‌ಗಳ ಬೆನ್ನು ಬೀಳುವ ಟಿವಿ ವಾಹಿನಿಗಳು ಸಂಘಪರಿವಾರದ ಅನೈತಿಕ ಪೊಲೀಸ್‌ಗಿರಿಯೊಂದಿಗೆ  ಪದೇ ಪದೇ ಭಾಗಿದಾರ ಆಗುತ್ತಾ ಬಂದಿರುವುದನ್ನು ನಾವು ನೋಡಿದ್ದೇವೆ, ಓದಿದ್ದೇವೆ. ಅನೈತಿಕ ಪೊಲೀಸ್‌ಗಿರಿಗೆ ಅದರಲ್ಲೂ ಮಹಿಳೆಯರ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಈ ದುಷ್ಕರ್ಮಿಗಳು ಮೊತ್ತ ಮೊದಲು ಸಂಪರ್ಕಿಸುವುದು ಟಿ.ವಿ. ವಾಹಿನಿಗಳನ್ನು. ಚಾನೆಲ್‌ಗಳ ವರದಿಗಾರರು ತಲುಪಿದ ಬಳಿಕವಷ್ಟೇ ಅಲ್ಲಿಗೆ, ದುಷ್ಕರ್ಮಿಗಳು ತಲುಪುತ್ತಾರೆ. ಮಂಗಳೂರಿನಲ್ಲಿ ಈ ಮೊದಲು ನಡೆದ ಪಬ್‌ದಾಳಿಯನ್ನೇ ಗಮನಿಸಿ. ಇಲ್ಲಿ ದಾಳಿಕೋರರು ದಾಳಿ ನಡೆಸುವ ಸಂದರ್ಭದಲ್ಲಿ ಟಿವಿ ವಾಹಿನಿಯ ಕ್ಯಾಮರಾಮಾನ್ ಗಳನ್ನು ಜೊತೆಗೇ ಒಯ್ದಿದ್ದರು. ಅಂದರೆ ಅವರ ಉದ್ದೇಶ ಬರೇ ದಾಳಿ ನಡೆಸುವುದು ಮಾತ್ರವಾಗಿರಲಿಲ್ಲ. ಆ ದಾಳಿಯನ್ನು ನಾಡಿನ ಉದ್ದಗಲಕ್ಕೂ ಎಚ್ಚರಿಕೆಯಾಗಿ ಹರಡುವುದು ಅವರ ಯೋಜನೆಯ ಒಂದು ಭಾಗವಾಗಿತ್ತು. ದಾಳಿ ನಡೆಸುವವರು ಕ್ರಿಮಿನಲ್ ಹಿನ್ನೆಲೆಯಿಂದ ಬಂದವರೇ ಆಗಿರುತ್ತಾರೆ. ಅವರಿಗೆ ಜೈಲು ಹೊಸದೇನೂ ಅಲ್ಲ. ಟಿವಿ ವಾಹಿನಿಯಲ್ಲಿ ಪ್ರಕಟವಾಗುತ್ತೇವೆ ಎಂದು ಗೊತ್ತಿದ್ದೇ ಅವರು ಟಿವಿ ವಾಹಿನಿಯವರಿಗೆ ಮುಂಚಿತವಾಗಿ ತಿಳಿಸಿ, ಅವರ ಕ್ಯಾಮರಾ ಆನ್ ಆದ ಬಳಿಕ ತಮ್ಮ  ದಾಳಿ ಆರಂಭಿಸುತ್ತಾರೆ. ಪಬ್‌ದಾಳಿಯಲ್ಲಿಯೂ ಇದೇ ಸಂಭವಿಸಿದೆ ಎನ್ನುವುದನ್ನು ಗಮನಿಸಬೇಕು. ದಾಳಿಯ ಯೋಜನೆ ರೂಪಿಸಿದ ನಾಯಕರು ತೆರೆಮರೆಯಲ್ಲಿರುತ್ತಾರೆ. ದಾಳಿ ನಡೆಸುವವರು ತಮ್ಮ ಕೆಲಸ ಮುಗಿಸಿ, ಅದಕ್ಕೆ ಪಡೆಯಬೇಕಾದುದನ್ನು ಪಡೆಯಬೇಕಾದವರಿಂದ ಪಡೆದು ಜೈಲು ಸೇರುತ್ತಾರೆ. ಅವರನ್ನು ಬಿಡಿಸುವುದಕ್ಕೆ  ಯೋಜನೆಗಳು ಮೊದಲೇ ರೂಪು ಗೊಂಡಿರುತ್ತವೆ ಆದುದರಿಂದ 'ದಾಳಿ ಮಾಡಿದವರನ್ನು ಪೊಲೀಸರು ಬಂಧಿಸಿದರು' ಎನ್ನುವುದರಿಂದಷ್ಟೇ, 'ಅಪರಾಧಿಗಳಿಗೆ ಶಿಕ್ಷೆಯಾಯಿತು' ಎನ್ನಲು ಬರುವುದಿಲ್ಲ.

 ಹೋಮ್ ಸ್ಟೇಯಲ್ಲಿ ಮಹಿಳೆಯರ ಮೇಲೆ ನಡೆದ ಬರ್ಬರ ದಾಳಿಯ ಪ್ರಕರಣವನ್ನೇ ತೆಗೆದುಕೊಳ್ಳೋಣ. ಆ ಸ್ಥಳಕ್ಕೆ ಮೊದಲು ತೆರಳಿದ್ದು ಟಿವಿ ವರದಿಗಾರ ನವೀನ್ ಸೂರಿಂಜೆ ಅವರು. ಬಳಿಕ ದಾಳಿಕೋರರು ಅಲ್ಲಿಗೆ ಆಗಮಿಸಿದರು. ಅರ್ಧಗಂಟೆಗೆ ಮೊದಲೇ ನವೀನ್ ಸೂರಿಂಜೆ ಅವರು ಆ ಸ್ಥಳದ ಸಮೀಪದಲ್ಲಿ ದಾಳಿಕೋರರಿಗಾಗಿ ಕಾಯುತ್ತಿದ್ದರು. ಬಹುಶಃ ಅಂದು ಮಹಿಳೆಯರ ಮೇಲೆ ದಾಳಿ ನಡೆಸಲು ದುಷ್ಕರ್ಮಿಗಳು ಬಳಸಿಕೊಂಡ ಮುಖ್ಯ ಅಸ್ತ್ರವೇ ಟಿವಿ ವಾಹಿನಿಯಾಗಿತ್ತು. ಯಾಕೆಂದರೆ, ಯಾವುದೋ ಮೂಲೆಯಲ್ಲಿ ಗುಟ್ಟಾಗಿ ನಾಲ್ಕು ಹೆಣ್ಣುಮಕ್ಕಳಿಗೆ ಥಳಿಸುವುದಷ್ಟೇ ಅವರು ಗುರಿಯಾಗಿರಲಿಲ್ಲ. ಅಲ್ಲಿರುವ ಹೆಣ್ಣು ಮಕ್ಕಳನ್ನು ಅವಮಾನಿಸಿ, ಅದನ್ನು ಟಿವಿಯಲ್ಲಿ ಪ್ರಕಟಿಸಿ, ನಾಡಿನ ಇಡೀ ಹೆಣ್ಣು ಮಕ್ಕಳಿಗೆ ಎಚ್ಚರಿಕೆಯನ್ನು ನೀಡುವುದೇ ಅವರ ಅಂದಿನ ಯೋಜನೆಯಾಗಿತ್ತು. ಆದುದರಿಂದಲೇ, ಮೊದಲು ತಮ್ಮ ಜನರ ಮೂಲಕ ಟಿವಿ ವಾಹಿನಿಯ ವರದಿಗಾರನಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ಟಿ.ವಿ. ವರದಿಗಾರರೋ ಸದಾ, ರೋಚಕ ಸುದ್ದಿಯನ್ನು ಒದಗಿಸಬೇಕಾದಂತಹ ಒತ್ತಡದಲ್ಲಿರುತ್ತಾರೆ. ವಿಪರ್ಯಾಸವೆಂದರೆ ಪಬ್ ದಾಳಿಯ ಬಳಿಕ ಟಿ.ವಿ. ವಾಹಿನಿಗಳ ಕೆಲವು ವರದಿಗಾರರು ಸಂಘಪರಿವಾರದ ಮುಖಂಡರ ಜೊತೆಗೆ ‘‘ಅಣ್ಣಾ, ದಾಳಿ ಮಾಡುವಾಗ ನಮ್ಮ ಚಾನೆಲ್‌ಗೂ ಒಂದು ಮಾಹಿತಿಯನ್ನು ತಿಳಿಸಿ’’ ಎಂದು ಗೋಗರೆದವರ ಬಗ್ಗೆ ನನಗೆ ಗೊತ್ತು. 
‘‘ನಾನೇನು ಸಿನಿಮಾ ಹೀರೋನಂತೆ ದಾಳಿ ನಡೆಯುವವರನ್ನು ತಡೆಯಬೇಕಾಗಿತ್ತೇ?’’ ಎಂದು ನವೀನ್ ಸೂರಿಂಜೆ ಕೇಳುತ್ತಾರೆ. ಆದರೆ ಘಟನೆ ನಡೆದಂದು ಇವರು ಹೋದ ಎಷ್ಟೋ ಹೊತ್ತಿನ ಬಳಿಕವಷ್ಟೇ ಸಂಘಪರಿವಾರದ ದುಷ್ಕರ್ಮಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಅದಕ್ಕೂ ಮೊದಲು ಅಲ್ಲಿರುವ ಒಂದೆರಡು ಅಮಾಯಕ ಹೆಣ್ಣು ಮಕ್ಕಳು ಮುಂದಿನ ಘಟನೆಯ ಮುನ್ಸೂಚನೆಯೇ ಇಲ್ಲದೆ ವರಾಂಡದಲ್ಲಿ ಓಡಾಡುತ್ತಿದ್ದರು. ತಮ್ಮ ಗೆಳೆಯನ ಹುಟ್ಟು ಹಬ್ಬ ಆಚರಿಸುವುದಕ್ಕಾಗಿ ಮನೆಯಿಂದ ಅನುಮತಿ ಪಡೆದು ಅಲ್ಲಿಗೆ ಅವರು ಆಗಮಿಸಿದ್ದರು. ಇದನ್ನು ಸ್ವತಃ ಸೂರಿಂಜೆಯವರೇ ಹಂಚಿಕೊಂಡಿದ್ದಾರೆ. ಒಂದು ವೇಳೆ ಅಂದು ಟಿವಿ ವಾಹಿನಿಯ ವರದಿಗಾರರು ಅಲ್ಲಿಗೆ ಸರಿಯಾದ ಸಮಯಕ್ಕೆ ತಲುಪದೇ ಇದ್ದಿದ್ದರೆ ಸಂಘಪರಿವಾರದ ದುಷ್ಕರ್ಮಿಗಳು ತಮ್ಮ ದಾಳಿಯನ್ನು ಇನ್ನೊಂದು ದಿನಕ್ಕೆ ಮುಂದೂಡುತ್ತಿದ್ದರೇನೋ. ಯಾಕೆಂದರೆ, ಮೊದಲೇ ಹೇಳಿದಂತೆ, ಕೇವಲ ಅರ್ಧ ಗಂಟೆ ದಾಳಿ ನಡೆಸುವುದಷ್ಟೇ ಅವರ ಗುರಿಯಾಗಿದ್ದಿರಲಿಲ್ಲ. ಅದನ್ನು ಚಿತ್ರೀಕರಿಸಿ ನಾಡಿನಾದ್ಯಂತ ಬಿತ್ತರಿಸಿ ಆ ಹೆಣ್ಣು ಮಕ್ಕಳ ಮಾನ ಹರಾಜು ಮಾಡುವುದು ಅವರ ದಾಳಿಯ ಒಂದು ಭಾಗವಾಗಿತ್ತು. ಆ ಬಳಿಕ ಏನು ನಡೆಯಿತು ಎನ್ನುವುದನ್ನು ಇಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಅಂದು ಆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಒಂದು ನಡೆದಿಲ್ಲ ಎನ್ನುವುದು ಬಿಟ್ಟರೆ, ಸಕಲ ವಿಕೃತ ದೌರ್ಜನ್ಯಗಳನ್ನೆಲ್ಲ ದುಷ್ಕರ್ಮಿಗಳು ಎಸಗಿದ್ದಾರೆ. ಈ ಸಂದರ್ಭದಲ್ಲಿ ವರದಿಗಾರ ತನ್ನ ಗುಪ್ತ ಕ್ಯಾಮರಾದಿಂದ ಚಿತ್ರೀಕರಣ ಮಾಡಿರಲಿಲ್ಲ. ‘‘ಅಲ್ಲಿಗೆ ತೋರಿಸು...ಇಲ್ಲಿಗೆ ತೋರಿಸು...’’ ಎಂದು ಕ್ಯಾಮರಾಮೆನ್‌ಗೆ ಬಹಿರಂಗವಾಗಿ ನಿರ್ದೇಶನ ಕೊಡುತ್ತಿರುವುದು ಅದೇ ಕ್ಯಾಮರಾದಲ್ಲಿ ದಾಖಲಾಗಿದೆ ಎನ್ನುವುದು ಗಮನಾರ್ಹ ಅಂಶ. ತಮ್ಮ ಕೃತ್ಯ ಕ್ಯಾಮರಾದಲ್ಲಿ ಚಿತ್ರೀಕರಣಗೊಳ್ಳುತ್ತಿದೆ ಎನ್ನುವುದು ಗೊತ್ತಿದ್ದೇ ದುಷ್ಕರ್ಮಿಗಳು ಬರ್ಬರ ದೌರ್ಜನ್ಯವನ್ನು ಆ ಹೆಣ್ಣು ಮಕ್ಕಳ ಮೇಲೆ ಎಸಗಿದ್ದಾರೆ ಎಂದ ಮೇಲೆ, ‘ತನ್ನಿಂದಾಗಿ ಆ ಕೃತ್ಯ ಜಗತ್ತಿಗೆ ಗೊತ್ತಾಯಿತು’ ಎಂದು ನವೀನ್ ಸೂರಿಂಜೆ ಅವರು ಹೇಳುವುದರಲ್ಲಿ ಏನು ಅರ್ಥವಿದೆ?

   ದುಷ್ಕರ್ಮಿಗಳು ತಮ್ಮ ದಾಳಿಯನ್ನು ಸುಮಾರು ಅರ್ಧ ಗಂಟೆಗಳ ಕಾಲ ನಡೆಸಿದ್ದಾರೆ. ಆದರೆ ಟಿವಿ ವಾಹಿನಿಗಳ ಮೂಲಕ ಆ ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯ? ಸುಮಾರು 48 ಗಂಟೆಗಳ ಕಾಲ ಟಿವಿ ವಾಹಿನಿಗಳಲ್ಲಿ ಅವರ ಮೇಲೆ ನಡೆದ ದೌರ್ಜನ್ಯ ಯಾವ ರೀತಿಯ ಮರೆ ಮಾಚುವಿಕೆ ಇಲ್ಲದೇ ನೇರವಾಗಿ ಪ್ರಸಾರವಾಗತೊಡಗಿತು. ಎರಡು ದಿನಗಳ ಕಾಲ ಅದನ್ನು ನೋಡುತ್ತಲೇ ಇರಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕಿದ ಆ ತರುಣಿಯರ ಮನೆಯವರು, ಅವರ ಕುಟುಂಬಸ್ಥರು, ಗೆಳೆಯರು, ಗೆಳತಿಯರ ಸ್ಥಿತಿ ಏನಾಗಬೇಕು? ಅದರ ಕ್ಲಿಪ್ಪಿಂಗ್ಸ್‌ಗಳನ್ನು ಇಟ್ಟುಕೊಂಡು ಇಂದಿಗೂ ತಮ್ಮ ವಿಕೃತ ವಾಂಛೆಗಳನ್ನು ತಣಿಸಿಕೊಳ್ಳುವ ವಿಕಾರ ಮನಸ್ಥಿತಿಗಳನ್ನು ಯಾರು ತಡೆಯಬೇಕು? ಆ ಹೆಣ್ಣು ಮಕ್ಕಳು ಮತ್ತು ಕುಟುಂಬಸ್ಥರ ಮೇಲೆ, ಸಮಾಜದ ಮೇಲೆ ಆ ಕ್ಲಿಪ್ಪಿಂಗ್ಸ್‌ಗಳುಮಾಡಿರುವ ಗಾಯ ಒಣಗುವುದಕ್ಕೆ ಸಾಧ್ಯವೆ? ಇಂದಿಗೂ ಆ ಕ್ಲಿಪ್ಪಿಂಗ್ಸ್‌ಗಳಿಗೆ ಹೆದರಿ ಬದುಕುವ ಸನ್ನಿವೇಶದಲ್ಲಿ ಆ ಹುಡುಗಿಯರಿದ್ದಾರೆ. ಆ ತರುಣಿಯರ ಗೆಳೆಯರನ್ನು ಇಂದಿಗೂ ತಲೆಯತ್ತದಂತೆ ಮಾಡಿರುವುದು ಅದೇ ಕ್ಲಿಪ್ಪಿಂಗ್ಸ್‌ಗಳು. ನಾವೆಲ್ಲ ಅದನ್ನು ನೋಡಿ ಮರೆತಿರಬಹುದು. ಆದರೆ ಅದಕ್ಕೆ ಬಲಿಯಾದವರು ಅದನ್ನು ಮರೆಯಲು ಹೇಗೆ ಸಾಧ್ಯ?

 ನವೀನ್ ಸೂರಿಂಜೆ ಜೈಲಿಗೆ ಹೋಗಿರುವುದು ದಾಳಿಯನ್ನು ತಡೆದ ಕಾರಣಕ್ಕೋ ಅಥವಾ ದಾಳಿಯನ್ನು ಪ್ರಸಾರ ಮಾಡಿದ ಕಾರಣಕ್ಕೋ ಅಲ್ಲ. ಆ ದಾಳಿಯಲ್ಲಿ ಸಹಭಾಗಿಯಾಗಿರುವುದಕ್ಕೆ ಎನ್ನುವುದನ್ನು ನಾವು ಮತ್ತು ಹೊಸ ತಲೆಮಾರಿನ ಹುಡುಗರು ಗಮನಿಸಬೇಕಾಗಿದೆ. ಪತ್ರಿಕಾ ಧರ್ಮ-ಅಧರ್ಮದ ನಡುವಿನ ಈ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳಲು ವಿಫಲವಾದಾಗ ಮಾತ್ರ ಸೂರಿಂಜೆ ಮಾಡಿರುವುದು ಒಂದು ಸಾಹಸವಾಗಿ, ರೋಚಕ ವರದಿಯಾಗಿ ನಮಗೆ ಕಾಣಲು ಸಾಧ್ಯ. ಇಷ್ಟೆಲ್ಲ ಆದ ಬಳಿಕ ಪೊಲೀಸರು ಬಂಧಿಸುತ್ತಾರೆನ್ನುವಾಗ ‘ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸುವುದು’ ಹೊಣೆಗಾರಿಕೆ. ಆದರೆ ಸೂರಿಂಜೆ ಆ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಅಂದರೆ ತಾನು ಮಾಡಿರುವುದು ಸರಿ ಎನ್ನುವ ಗಾಢ ನಂಬಿಕೆಯೇ ಅದಕ್ಕೆ ಕಾರಣವಾಗಿರಬಹುದು. ಅಥವಾ, ಟಿ.ವಿ. ಪತ್ರಕರ್ತನಾಗಿ ಕಾಲಿಟ್ಟ ಆರಂಭದ ದಿನಗಳು ಅದಾಗಿರುವುದರಿಂದ, ನಡೆಯುತ್ತಿರುವುದೆಲ್ಲ ಅವರಿಗೆ ರೋಚಕವಾಗಿ ಕಂಡಿರಬೇಕು.

  ‘‘ದಾಳಿಗೊಳಗಾದ ಕುಟುಂಬಸ್ಥರು, ಸಂತ್ರಸ್ತರು ನನ್ನ ಪರವಾಗಿ ಹೇಳಿಕೆ ನೀಡಿದ್ದಾರೆ’’ ಎಂದು ಸೂರಿಂಜೆ ಹೇಳಿಕೊಳ್ಳುತ್ತಾರೆ. ಆದರೆ ಅಂತಹದೊಂದು ಹೇಳಿಕೆಯನ್ನು ಸಂತ್ರಸ್ತರ ಬಾಯಿಯಿಂದ ಹೊರಡಿಸುವುದಕ್ಕಾಗಿ ಅವರ ಗೆಳೆಯ, ರಾಷ್ಟ್ರೀಯ ಪತ್ರಿಕೆಯೊಂದರ ವರದಿಗಾರ ಎಷ್ಟು ಕಷ್ಟಪಟ್ಟಿದ್ದಾನೆ ಎನ್ನುವುದು ಆಪ್ತ ವಲಯದ ಎಲ್ಲರಿಗೂ ತಿಳಿದಿರುವ ಸಂಗತಿ. ಆರಂಭದಲ್ಲಿ ಸಂತ್ರಸ್ತರು ನವೀನ್ ಸೂರಿಂಜೆಯ ವಿರುದ್ಧ ತಮ್ಮ ಹೇಳಿಕೆಯನ್ನು ನೀಡಿದ್ದರು. ಆದರೆ ಆ ಬಳಿಕ ‘‘ಆರೋಪಿಗಳಿಗೆ ಶಿಕ್ಷೆಯಾಗುವುದಕ್ಕೆ ಇದೊಂದು ದಾಖಲೆ. ಅವರು ನಿಮಗೆ ಸಹಾಯ ಮಾಡಿರುವುದೇ ಹೊರತು, ನಿಮ್ಮ ವಿರುದ್ಧ ಪ್ರಸಾರ ಮಾಡಿರುವುದಲ್ಲ’’ ಎಂಬಿತ್ಯಾದಿಯಾಗಿ ಅವರ ಮನವೊಲಿಸಿದ ಪರಿಣಾಮ ಕುಟುಂಬಸ್ಥರು ನವೀನ್ ಸೂರಿಂಜೆಯ ಪರವಾಗಿ ಹೇಳಿಕೆಯನ್ನು ನೀಡಿದರು. ಆ ಹೇಳಿಕೆ ಮತ್ತು ಪತ್ರಕರ್ತ ಮಿತ್ರರ ಒತ್ತಡದ ಪರಿಣಾಮವಾಗಿ ನವೀನ್ ಸೂರಿಂಜೆ ಬಿಡುಗಡೆಯಾದರು. ಹೋಮ್‌ಸ್ಟೇ ಘಟನೆ ನಡೆದ ಮರುದಿನ ವಾರ್ತಾಭಾರತಿ ಪತ್ರಿಕೆಯಲ್ಲಿ ದುಷ್ಕರ್ಮಿಗಳ ಕೃತ್ಯವನ್ನೂ, ಟಿವಿ ವಾಹಿನಿಗಳ ಕೃತ್ಯವನ್ನೂ ಜೊತೆಯಾಗಿ ಸಂಪಾದಕೀಯದಲ್ಲಿ ಖಂಡಿಸಲಾಗಿತ್ತು. ಆಗ ಸೂರಿಂಜೆಯ ಮಿತ್ರರು ಹಲವರು ‘ನೀವು ಹೀಗೆ ಬರೆದದ್ದು ಯಾಕೆ? ತುಂಬಾ ಬೇಜಾರಾಯಿತು’ ಎಂದೆಲ್ಲ ದೂರವಾಣಿಯಲ್ಲಿ ತೋಡಿಕೊಂಡಿದ್ದರು. ಆದರೆ ನವೀನ್ ಸೂರಿಂಜೆಯ ಬಂಧನವಾದಾಗ ಆ ಬಂಧನದ ವಿರುದ್ಧ ನಿರಂತರ ಸುದ್ದಿಗಳನ್ನು ಪ್ರಕಟಿಸಿದ್ದೆವು. ಅವರ ಬಂಧನವನ್ನು ಖಂಡಿಸಿದ್ದು ಮಾತ್ರವಲ್ಲ, ಬಂಧನದ ವಿರುದ್ಧದ ಸುದ್ದಿಗಳನ್ನು ಆದ್ಯತೆಯ ಮೇಲೆ ವಾರ್ತಾಭಾರತಿ ಪ್ರಕಟಿಸಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ನವೀನ್ ಸೂರಿಂಜೆಯ ಬಿಡುಗಡೆ ಆಗಲೇಬೇಕು ಎಂದು ಒತ್ತಾಯಿಸಿ ಮತ್ತೊಮ್ಮೆ ಸಂಪಾದಕೀಯವನ್ನು ಬರೆದಿದ್ದೆವು. ಅವರು ಬಿಡುಗಡೆಯಾಗುವ ಸೂಚನೆ ದೊರಕಿದಾಗ, ಅವರು ಬಿಡುಗಡೆಯಾದಾಗ ಮುಖಪುಟದಲ್ಲಿ ಸುದ್ದಿಗಳನ್ನು ಛಾಪಿಸಿ ಸಂತೋಷ ಹಂಚಿಕೊಂಡಿದ್ದೆವು. ಈಗ ‘ತಾನು ಮಾಡಿದ ಕೆಲಸ ಕೆಟ್ಟದು ಎಂದು ತಿಳಿದೂ ನೀವು ಬೆಂಬಲಿಸಿರುವುದು ನಿಜವೇ ಆಗಿದ್ದರೆ ಅಂತಹ ಬೆಂಬಲ ನನಗೆ ಬೇಡ’ ಎಂದು ನವೀನ್ ಸೂರಿಂಜೆಯವರು ನಿರಾಕರಿಸಬಹುದು.
  ವೈಯಕ್ತಿಕವಾಗಿ ನವೀನ್ ಸೂರಿಂಜೆ ಬಿಡುಗಡೆಯಾಗಬೇಕು ಎಂದು ನಾನು ಬಯಸಿದ್ದಕ್ಕೆ ಮುಖ್ಯ ಕಾರಣವಿದೆ. ನವೀನ್‌ನೊಳಗೆ ಒಳ್ಳೆಯ ಪತ್ರಕರ್ತನೊಬ್ಬನಿದ್ದಾನೆ. ನವೀನ್‌ನಂತಹ ನೂರಾರು ಪತ್ರಕರ್ತರು ನಮ್ಮ ನಡುವೆ ಹಲವು ಗೊಂದಲ, ಬಿಕ್ಕಟ್ಟುಗಳ ನಡುವೆ ಓಡಾಡುವುದನ್ನು ಆತಂಕದಿಂದ ನೋಡುತ್ತಿದ್ದೇನೆ. ನವೀನ್‌ನಂತಹ ಪತ್ರಕರ್ತರು ಬರೇ ಇಷ್ಟರಲ್ಲೇ ಮುಗಿದು ಹೋಗಬಾರದು. ಅಂಥವರನ್ನು ಮುಗಿಸುವುದಕ್ಕೆ ನಾಲ್ದಿಕ್ಕುಗಳಲ್ಲಿ ದುಷ್ಕರ್ಮಿಗಳು ಹೊಂಚಿ ಕೂತಿರುವಾಗ, ಅವರ ಸಂಕಟಗಳಲ್ಲಿ ನಮ್ಮ ಮಿತಿಯಲ್ಲಿ ಜೊತೆ ನಿಲ್ಲುವುದು ನಮ್ಮ ಕರ್ತವ್ಯ. ಹೋಮ್ ಸ್ಟೇ ಘಟನೆಯಲ್ಲಿ ನವೀನ್ ಸೂರಿಂಜೆ ನೇರ ಭಾಗೀದಾರ ಅಲ್ಲ. ಆತ ಸಂಘಪರಿವಾರದ ಹುನ್ನಾರ ಮತ್ತು ಟಿವಿ ವಾಹಿನಿಗಳ ಸುದ್ದಿಗಳ ದಾಹಕ್ಕೆ ಬಲಿಪಶುವಾದ ಒಬ್ಬ ಉದಯೋನ್ಮುಖ, ಪ್ರತಿಭಾವಂತ ವರದಿಗಾರ. ದೊಡ್ಡದಾಗಿ ಬೆಳೆಯಬೇಕಾದ ಪತ್ರಕರ್ತನ ಹಾದಿಯಲ್ಲಿ, ಅವನಿಗೆ ಮುಂದಿನ ದಿನಗಳಲ್ಲಿ ಹಲವು ಪಾಠಗಳನ್ನು ಕಲಿಸಯಬಹುದಾದ ಒಂದು ತಪ್ಪಿನ ಹೆಸರು ‘ಹೋಮ್ ಸ್ಟೇ ಪ್ರಕರಣ’. ಈ ಪ್ರಕರಣ ಯಾವ ರೀತಿಯಲ್ಲೂ ಟಿವಿ ವಾಹಿನಿಯ ಹೊಸ ವರದಿಗಾರರಿಗೆ ಮಾದರಿಯಾಗದಿರಲಿ ಎಂಬ ಆಶಯದಿಂದ ಈ ಬರಹವನ್ನು ನಿಮ್ಮ ಮುಂದಿಡಬೇಕಾಯಿತು.

1 comment: