Sunday, March 22, 2015

ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ಯಾಕೆ ಒಪ್ಪಿಸಬೇಕು?

ಶನಿವಾರ - ಮಾರ್ಚ್ -21-2015
ಕೃಪೆ-ವಾರ್ತಾಭಾರತಿ 
"ವಿರೋಧ ಪಕ್ಷದವರ ಅಪ್ರಾಮಾಣಿಕವಾದ ಹಾರಾಟ ಮೃತದೇಹದ ಮೇಲೆ ಮುಗಿಬಿದ್ದ ಹಸಿದ ರಣಹದ್ದುಗಳಂತಿದೆ. ಈ ವಿರೋಧ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಬಿಜೆಪಿಯ ನಾಯಕರು ತಮ್ಮ ಪಕ್ಷದ ಮಾಜಿ ಶಾಸಕ ರಘಪತಿ ಭಟ್ಟರ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಆತ್ಮಹತ್ಯೆ ಪ್ರಕರಣಗಳನ್ನು ಸಿಬಿಐಗೆ ವಹಿಸಲು ತಮ್ಮ ಶ್ರಮವನ್ನು ವ್ಯಯಿಸಬೇಕಾಗಿದೆ. ಈಗಾಗಲೇ ರವಿ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಲು ಮುಂದಾಗಿರುವುದರಿಂದ, ಬಿಜೆಪಿ ನಾಯಕರು ತಮ್ಮ ಮುಂದಿನ ಹೋರಾಟವನ್ನು ಈ ಹತಭಾಗ್ಯ ಮಹಿಳೆಯರ ಕಡೆಗೆ ತಿರುಗಿಸಲಿ"

ಡಿ.ಕೆ. ರವಿ ಅವರ ನಿಗೂಢ ಸಾವಿನ ಪ್ರಕರಣ ಎರಡು ಮಹತ್ವದ ತಿರುವುಗಳಲ್ಲಿ ನಿಂತಿದೆ. ಅದರಲ್ಲಿ ಮುಖ್ಯವಾದುದು, ಕೊನೆಗೂ ಜನರ ಒತ್ತಡಕ್ಕೆ ಮಣಿದು ಸರಕಾರವು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಇಂಗಿತ ವ್ಯಕ್ತಪಡಿಸಿದೆ. ಕಾಂಗ್ರೆಸ್‌ನ ಹೈಕಮಾಂಡ್ ಸೋನಿಯಾ ಗಾಂಧಿಯವರೂ ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರ್ದೇಶನ ನೀಡಿರುವುದು ಈ ಇಂಗಿತಕ್ಕೆ ಪ್ರಮುಖ ಕಾರಣವಿರಬಹುದು. ಎರಡನೆಯದಾಗಿ, ರವಿ ಅವರ ಸಾವು ಕೊಲೆಯಲ್ಲ, ಆತ್ಮಹತ್ಯೆ ಎನ್ನುವುದನ್ನು ಹೇಳುವ ಮಹತ್ವದ ದಾಖಲೆಗಳು ಹೊರ ಬಿದ್ದಿರುವುದು. ರವಿ ಈಗಾಗಲೇ ಒಬ್ಬ ಐಎಎಸ್ ಸಹೋದ್ಯೋಗಿಯೊಂದಿಗೆ ಪ್ರೇಮಕ್ಕೆ ಬಿದ್ದಿದ್ದು, ಆಕೆ ಇವರ ಪ್ರೇಮಕ್ಕೆ ಬೆಲೆ ನೀಡದೇ ಇರುವುದು ಆತ್ಮಹತ್ಯೆಗೆ ಕಾರಣ ಎಂದು ಮೂಲಗಳು ಹೇಳುತ್ತಿವೆ. ಆ ಸಹೋದ್ಯೋಗಿ ಪೊಲೀಸರಿಗೆ ನೀಡಿರುವ ದಾಖಲೆಗಳು ಈ ವಾದವನ್ನು ಪುಷ್ಟೀಕರಿಸುತ್ತಿವೆ. ಸಾಯುವ ಮುನ್ನ ರವಿ ಅವರು ಈಕೆಯ ಜೊತೆಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಕೊನೆಯ ಎಸ್‌ಎಂಎಸ್ ಸಂದೇಶವನ್ನೂ ಕಳುಹಿಸಿದ್ದಾರೆ ಮತ್ತು ಈ ದಾಖಲೆಗಳನ್ನು ಆಕೆ ಪೊಲೀಸರಿಗೆ ಒಪ್ಪಿಸಿರುವ ವಿವರಗಳೂ ದೊರಕಿವೆ. ರವಿ ಅವರು ಈ ದಾಖಲೆಗಳನ್ನು ಕಳುಹಿಸಿರುವುದು ತಮ್ಮ ಮನೆಯಿಂದಲೇ ಎನ್ನುವುದಕ್ಕೆ ಪುರಾವೆಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಈ ಪ್ರೇಮ ಪ್ರಕರಣ ಅವರ ಕುಟುಂಬದೊಳಗೆ ಬಿಕ್ಕಟ್ಟನ್ನು ಸೃಷ್ಟಿ ಮಾಡಿತ್ತು ಎಂದೂ ಹೇಳಲಾಗುತ್ತಿದೆ. ಇವೆಲ್ಲವೂ ನಿಜವೇ ಆಗಿದ್ದರೆ, ಅವರ ಸಾವನ್ನು ಪೊಲೀಸರು, ಸಿಐಡಿ ಅಕಾರಿಗಳು ಆತ್ಮಹತ್ಯೆ ಎಂದು ಘೋಷಿಸುವುದಕ್ಕೆ ಹೆಚ್ಚಿನ ಶ್ರಮದ ಅಗತ್ಯವಿಲ್ಲ.
 ಒಂದು ವೇಳೆ ಸಿಐಡಿ ಅಕಾರಿಗಳು, ರಾಜ್ಯದ ಪೊಲೀಸರು ರವಿ ಅವರ ಸಾವನ್ನು ಆತ್ಮಹತ್ಯೆಯೆಂದು ಸ್ಪಷ್ಟವಾಗಿ ಸಾಕ್ಷ ಸಮೇತ ನಿರೂಪಿಸುವಲ್ಲಿ ಯಶಸ್ವಿಯಾದರು ಎಂದಿಟ್ಟುಕೊಳ್ಳೋಣ. ಆದರೂ ನಾಡಿನ ಜನತೆ ರವಿ ಸಾವಿನ ಕುರಿತಂತೆ ಇನ್ನಷ್ಟು ತನಿಖೆಯನ್ನು ಬಯಸುತ್ತಾರೆ ಎಂದರೆ, ಅದರ ಅರ್ಥ ಅವರು ರವಿಯಂತಹ ಒಬ್ಬ ಪ್ರಾಮಾಣಿಕ ಅಕಾರಿಯ ಕುರಿತಂತೆ ಅಗಾಧ ಪ್ರೀತಿಯಿಟ್ಟಿದ್ದಾರೆ ಎಂದಾಗಿದೆ. ಆ ಪ್ರೀತಿಯನ್ನು ಗೌರವಿಸಿ, ಜನರು ಬಯಸಿದಂತೆ ಇನ್ನೂ ದೊಡ್ಡ ಮಟ್ಟದ ತನಿಖೆಯನ್ನು ನಡೆಸಿ, ರವಿಯ ಸಾವಿನ ಸತ್ಯಾಸತ್ಯತೆಯನ್ನು ಜನರ ಮುಂದಿಡುವುದು ಸರಕಾರದ ಕರ್ತವ್ಯ. ರವಿ ಅವರು ಈ ನಾಡಿನ ಮಹತ್ವದ ಹುದ್ದೆಯನ್ನು ನಿರ್ವಹಿಸಿದವರು. ಆ ಹುದ್ದೆಯಲ್ಲಿ ದಕ್ಷರಾಗಿ, ಪ್ರಾಮಾಣಿಕರಾಗಿ ಕಾರ್ಯನಿರ್ವಹಿಸಿದವರು. ಬೆಂಗಳೂರಿನ ಅತ್ಯಂತ ಬಲಾಢ್ಯ ಶಕ್ತಿಗಳನ್ನು ಎದುರು ಹಾಕಿಕೊಂಡು ಸರಕಾರಕ್ಕಾಗಿ ಕೆಲಸ ಮಾಡಿದವರು. ಅಂಥವರ ಸಾವು ಸಿಐಡಿ ಅಕಾರಿಗಳು ಬರೆಯುವ ‘ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ’ ಎಂಬ ಮೂರು ಶಬ್ದಗಳ ಷರಾದಲ್ಲಿ ಮುಗಿದು ಹೋಗಬಾರದು. ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ಕೊಡುವುದೆಂದರೆ ಅದು ಅವರ ಪ್ರಾಮಾಣಿಕ, ದಕ್ಷತೆಗೆ ಕೊಡುವ ಗೌರವ. ಸರಕಾರದ ಈ ಕ್ರಮ ಅಳಿದುಳಿದ ಪ್ರಾಮಾಣಿಕ ಅಕಾರಿಗಳ ನೈತಿಕ ಬಲವನ್ನು ಹೆಚ್ಚಿಸುತ್ತದೆ. ರವಿಯಂತೆ ಕಾರ್ಯ ನಿರ್ವಹಿಸಲು ಧೈರ್ಯ ಕೊಡುತ್ತದೆ. ಆದುದರಿಂದ ಆತ್ಮಹತ್ಯೆ ಎನ್ನುವುದು ಗೊತ್ತಿದ್ದರೂ, ಮೇಲಿನ ಕಾರಣಕ್ಕಾಗಿ ಸರಕಾರ ರವಿ ಸಾವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು.
ರವಿಯ ಸಾವನ್ನು ಸಿಬಿಐಗೆ ಕೊಡುವುದರಿಂದ ಸರಕಾರಕ್ಕೂ ಒಳಿತಿದೆ. ಆ ಮೂಲಕ ರವಿಯ ಸಾವಿನ ಕಳಂಕದಿಂದ ಸರಕಾರ ಪಾರಾಗಬಹುದು. ಒಂದು ವೇಳೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸದಿದ್ದರೆ ಅದು ಸಹಜವಾಗಿಯೇ ಜನರ ಅನುಮಾನದ ಕಣ್ಣಿಗೆ ಗುರಿಯಾಗಬೇಕಾಗುತ್ತದೆ. ಇಷ್ಟೇ ಅಲ್ಲ, ಒಂದು ವೇಳೆ ರವಿಯ ಸಾವು ಆತ್ಮಹತ್ಯೆ ಎಂದು ಸರಕಾರ ಇಷ್ಟು ಬೇಗ ಒಂದು ನಿರ್ಧಾರಕ್ಕೆ ಬಂದರೆ, ಅದು ತಮ್ಮ ವಿರುದ್ಧವಿರುವ ಪ್ರಾಮಾಣಿಕ ಅಕಾರಿಗಳನ್ನು ಕೊಲೆ ಮಾಡುವುದಕ್ಕೆ ದುಷ್ಕರ್ಮಿಗಳಿಗೆ ಪರೋಕ್ಷವಾಗಿ ಧೈರ್ಯ ನೀಡಬಹುದು. ಆದುದರಿಂದ, ರವಿಯ ಸಾವು ಬರೇ ಒಂದು ವಾರದ ತನಿಖೆಯಲ್ಲಿ ಮುಗಿದು ಹೋಗಬಾರದು. 
ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸುವುದರಿಂದ ಇನ್ನಷ್ಟು ಒಳಿತುಗಳಿವೆ. ಅದರಲ್ಲಿ ಮುಖ್ಯವಾಗಿ, ರವಿಗೆ ಬಂದಿರುವ ಫೋನ್  ಕರೆಗಳು, ಬೆದರಿಕೆ ಕರೆಗಳೆಲ್ಲವೂ ಈ ಸಂದರ್ಭದಲ್ಲಿ ವಿಚಾರಣೆಯಾಗುವ ಸಾಧ್ಯತೆಗಳಿವೆ. ಸಾವಿನ ಜೊತೆ ಸಂಬಂಧವಿರಲಿ, ಇಲ್ಲದಿರಲಿ, ರವಿಯ ಸಾವಿನಿಂದ ಒಳಗೊಳಗೇ ಖುಷಿ ಪಟ್ಟ ನೂರಾರು ದುಷ್ಟ ಶಕ್ತಿಗಳು ಬೆಂಗಳೂರಿನಲ್ಲಿವೆ. ಅವರಲ್ಲಿ ಕೆಲವರಾದರೂ ಸಿಬಿಐ ವಿಚಾರಣೆಯಿಂದಾಗಿ ಹಣೆಯ ಬೆವರೊರೆಸಿಕೊಳ್ಳುವಂತಾದರೆ ಬೆಂಗಳೂರಿಗೂ, ನಾಡಿಗೂ ಅದರಿಂದ ಒಳ್ಳೆಯದಾಗುತ್ತದೆ. ಸಿಬಿಐ ಕೇಂದ್ರದ ಆಧೀನದಲ್ಲಿರುವುದರಿಂದ ಸಿಬಿಐ ಅಕಾರಿಗಳನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ತೊಂದರೆ ಮಾಡಬಹುದೆಂಬ ಆರೋಪವಿದೆ. ಸರಕಾರ ಇಂದು ಸಿಬಿಐಗೆ ಪ್ರಕರಣವನ್ನು ಒಪ್ಪಿಸಲು ಅಂಜುತ್ತಿರುವುದು ಇದೇ ಕಾರಣಕ್ಕೆ. ರಾಜಕಾರಣಿಗಳು, ಗಣಿದೊರೆಗಳು, ಬೆಂಗಳೂರಿನ ಕ್ರಿಮಿನಲ್‌ಗಳು ರವಿಯ ಜೊತೆ ಏನಾದರೂ ವ್ಯವಹಾರ ಇಟ್ಟುಕೊಂಡಿದ್ದರೆ, ಎಡವಟ್ಟುಗಳನ್ನು ಮಾಡಿಕೊಂಡಿದ್ದರೆ ಅವರು ವಿಚಾರಣೆಯನ್ನು ಎದುರಿಸಲೇಬೇಕು. ಈ ಕೊಲೆಯ ಜೊತೆಗೆ ಸಂಬಂಧ ಇದ್ದರೂ ಇಲ್ಲದಿದ್ದರೂ ಅವರು ಸಿಬಿಐಗೆ ಮುಖಾಮುಖಿಯಾಗುವುದು ಬೆಂಗಳೂರಿನ ಆರೋಗ್ಯದ ದೃಷ್ಟಿಯಿಂದ ಉತ್ತಮ. ಹಾಗೆ ವಿಚಾರಣೆ ಎದುರಿಸುವಂತಹ ಎಡವಟ್ಟುಗಳನ್ನು ಮಾಡಿಕೊಂಡ ರಾಜಕಾರಣಿಗಳು ಸರಕಾರದೊಳಗೆ ಇದ್ದರೆ ಅವರನ್ನು ತಕ್ಷಣವೇ ದೂರ ಇರಿಸಿ ಸರಕಾರವನ್ನು, ತನ್ನನ್ನೂ ಕಾಪಾಡಿಕೊಳ್ಳುವುದು ಸಿದ್ದರಾಮಯ್ಯ ಅವರ ಕರ್ತವ್ಯ. ಸಿಬಿಐ ತನಿಖೆಯಿಂದ ಇತರರ ವ್ಯವಹಾರಗಳು ಬಹಿರಂಗವಾಗಬಹುದೆಂಬ ಭಯವಿದ್ದರೆ ಅದು ಮುಖ್ಯಮಂತ್ರಿಯ ವೈಯಕ್ತಿಕ ಸಮಸ್ಯೆಯೇ ಹೊರತು ನಾಡಿನ ಜನರದ್ದಲ್ಲ. 
ಇವೆಲ್ಲವುಗಳ ನಡುವೆ ರವಿ ಅವರು ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿದ್ದಾರೆ ಎಂದೇ ಇಟ್ಟುಕೊಳ್ಳೋಣ. ನಿಜ. ಓರ್ವ ನಾಡಿನ ಹಿರಿಯ ಅಕಾರಿಯಾಗಿದ್ದಾನೆಂಬ ಕಾರಣಕ್ಕೆ ಆತ ವೈಯಕ್ತಿಕ ಅನುಭೂತಿಗಳನ್ನು ಹೊಂದಿರಬಾರದು ಎಂದಿಲ್ಲ. ಈ ಹಿನ್ನೆಲೆಯಲ್ಲಿ, ರವಿಯ ಸಾವಿಗೆ ಪ್ರೇಮ ಪ್ರಕರಣವೇ ಕಾರಣವಾಗಿರಬಹುದು. ಆದರೆ ಅದನ್ನು ರಾಜ್ಯ ಸರಕಾರದ ಅಧೀನದಲ್ಲಿರುವ ಸಿಐಡಿ ಹೇಳುವುದಕ್ಕಿಂತ ಕೇಂದ್ರದ ಅಧೀನದಲ್ಲಿರುವ ಸಿಬಿಐ ಹೇಳುವುದೇ ಹೆಚ್ಚು ಪರಿಣಾಮಕಾರಿ. ಹೆಚ್ಚು ಸಾಧುವಾದದ್ದು. 
ಇದೇ ಸಂದರ್ಭದಲ್ಲಿ ವಿರೋಧ ಪಕ್ಷದವರ ಅಪ್ರಾಮಾಣಿಕವಾದ ಹಾರಾಟ ಮೃತದೇಹದ ಮೇಲೆ ಮುಗಿಬಿದ್ದ ಹಸಿದ ರಣಹದ್ದುಗಳಂತಿದೆ. ಈ ವಿರೋಧ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಬಿಜೆಪಿಯ ನಾಯಕರು ತಮ್ಮ ಪಕ್ಷದ ಮಾಜಿ ಶಾಸಕ ರಘಪತಿ ಭಟ್ಟರ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಆತ್ಮಹತ್ಯೆ ಪ್ರಕರಣಗಳನ್ನು ಸಿಬಿಐಗೆ ವಹಿಸಲು ತಮ್ಮ ಶ್ರಮವನ್ನು ವ್ಯಯಿಸಬೇಕಾಗಿದೆ. ಈಗಾಗಲೇ ರವಿ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಲು ಮುಂದಾಗಿರುವುದರಿಂದ, ಬಿಜೆಪಿ ನಾಯಕರು ತಮ್ಮ ಮುಂದಿನ ಹೋರಾಟವನ್ನು ಈ ಹತಭಾಗ್ಯ ಮಹಿಳೆಯರ ಕಡೆಗೆ ತಿರುಗಿಸಲಿ.

No comments:

Post a Comment