Monday, March 16, 2015

ಹೂಗುಚ್ಛ ಮತ್ತು ಇತರ ಕತೆಗಳು

ಹೂಗುಚ್ಛ
ಅವರೆಲ್ಲರೂ ಅವನ ಹುಟ್ಟು ಹಬ್ಬಕ್ಕೆಂದು ಆಗಮಿಸಿದ್ದರು.
ಕೈಯಲ್ಲಿ ಹೂಗುಚ್ಛವನ್ನು ಹಿಡಿದುಕೊಂಡು.
ಆದರೆ ಅಂದೇ ಅವನು ಹದಯಾಘಾತದಿಂದ ಮತಪಟ್ಟಿದ್ದ.
ಹೂಗುಚ್ಛ ವ್ಯರ್ಥವಾಗಲಿಲ್ಲ.

ತಟ್ಟೆ
ಒಬ್ಬ ಬಿಸಿಲಲ್ಲಿ ಪೆನ್ನು ಮಾರುತ್ತಿದ್ದ.
ಇನ್ನೊಬ್ಬ ಅವನ ಪಕ್ಕದಲ್ಲೇ ಭಿಕ್ಷೆ ಬೇಡುತ್ತಿದ್ದ.
ಸಂಜೆಯಾಗುವಷ್ಟರಲ್ಲಿ ಭಿಕ್ಷುಕನ ತಟ್ಟೆ ತುಂಬಿತ್ತು.
ಪೆನ್ನು ಮಾರುವವನು ಬರಿ ಗೈಯಲ್ಲಿ ನಿಂತಿದ್ದ.
ಭಿಕ್ಷುಕನಿಗೆ ಅದೇನನ್ನಿಸಿತೋ, ಅವನಿಂದ ಹತ್ತು ಪೆನ್ನುಗಳನ್ನು ಕೊಂಡುಕೊಂಡ.

ಮುಕ್ತಾಯ
ಒಬ್ಬ ಕಾದಂಬರಿಯೊಂದನ್ನು ಬರೆದು ಸಂತನಿಗೆ ಕೊಟ್ಟ.
ಇಡೀ ಕಾದಂಬರಿಯನ್ನು ಓದಿದ ಬಳಿಕ ಸಂತ ಹೇಳಿದ.
‘‘ನೋಡು...ಒಂದು ಕಾದಂಬರಿ ಮುಗಿಯಬಾರದು. ಬೆಳೆಯಬೇಕು. ಅದಕ್ಕಾಗಿ ಮುಕ್ತಾಯದ ಕೊನೆಯ ಪುಟವನ್ನು ಹರಿದು ಬಿಡು’’

ಜೈಲು
ಇಬ್ಬರು ಸ್ವಾಮೀಜಿಗಳು ಅಪರಾಧ ಪ್ರಕರಣದಲ್ಲಿ ಜೈಲು ಸೇರಿದರು.
ಜೈಲಿನೊಳಗಿನ ಕೈದಿಗಳ ಸತ್ಯಸಂಧತೆ, ದುಡಿಮೆ, ಶಿಸ್ತು ಇವೆಲ್ಲವನ್ನು ಕಂಡು ನಿಟ್ಟುಸಿರಿಟ್ಟುಕೊಂಡು ಹೇಳಿಕೊಂಡರು
‘‘ಜೈಲು ನಮ್ಮಂಥವರಿಗಲ್ಲ’’

ಕರೆ
ವೇದಿಕೆಯ ಮೇಲೆ ನಿಂತು ‘ಹೊಡಿಯಿರಿ, ಬಡಿಯಿರಿ, ಬೆಂಕಿ ಹಚ್ಚಿ’’ ಎಂದು ಕರೆಕೊಟ್ಟವ ಭಾಷಣ ಮುಗಿಸಿ ಮನೆಗೆ ತೆರಳಿದ. ತನ್ನ ಮನೆಯನ್ನು ಹುಡುಕಾಡಿದರೆ ಅಲ್ಲೇನಿತ್ತು? ಬೆಂಕಿ ಮತ್ತು ಬೂದಿ. ಜನರು ಆತನ ಕರೆಯನ್ನು ಶಿರಸಾವಹಿಸಿ ಪಾಲಿಸಿದ್ದರು.

ಗಡಿಯಾರ
ಎಡೆ ಬಿಡದೆ ಚಲಿಸುತ್ತಿದ್ದ ಗಡಿಯಾರಕ್ಕೆ ಒಂದು ದಿನ ಜ್ಞಾನೋದಯವಾಯಿತು.
ತಾನು ಚಲಿಸದೇ ಕಾಲ ಚಲಿಸುವುದಿಲ್ಲ ಎಂದು.
ಅಂದು ಬೆಳಗ್ಗೆ ಗಡಿಯಾರ ಚಲಿಸುವುದನ್ನು ನಿಲ್ಲಿಸಿ ಬಿಟ್ಟಿತು.
ಆದರೂ ಅಂದು ಸೂರ್ಯೋದಯವಾಯಿತು.
‘ಗಡಿಯಾರ ಕೆಟ್ಟಿದೆ’ ಎಂದು ಮನೆಯೊಡೆಯ ಅದನ್ನು ಬೀದಿಗೆ ಎಸೆದ.

ತಪ್ಪು
ಕೋಮುಗಲಭೆ ನಡೆಯುತ್ತಿತ್ತು.
ನಡು ರಸ್ತೆಯಲ್ಲಿ ಅವನಿಗೆ ಇರಿಯಲಾಯಿತು.
ಬಳಿಕ ಇರಿದವರಿಗೆ ತಪ್ಪುಗೊತ್ತಾಯಿತು. ಗಾಯಾಳು ನಮ್ಮದೇ ಧರ್ಮೀಯ ಎಂದು.
ಅವರು ಅಲ್ಲಿಂದ ಓಡಿದರು.
ಇನ್ನೊಂದು ಗುಂಪು ಬಂತು. ಗಾಯಾಳು ವಿಲವಿಲ ಒದ್ದಾಡುತ್ತಿದ್ದಾನೆ. ಅವರು ಆಸ್ಪತ್ರೆಗೆ ಸೇರಿದರು.
ಬಳಿಕ ಅವರಿಗೆ ತಪ್ಪು ಗೊತ್ತಾಯಿತು. ಗಾಯಾಳು ನಮ್ಮವನಲ್ಲ ಎಂದು.

No comments:

Post a Comment