Tuesday, September 9, 2014

ಬುರ್ಖಾ ಮತ್ತು ಮಹಿಳಾ ಸಬಲೀಕರಣ

ಆಫ್ಘಾನಿಸ್ತಾನದ ಅಥ್ಲೀಟ್  ಕೊಹಿಸ್ತಾನಿ
ಸೆಪ್ಟೆಂಬರ್ ೫ರಂದು ಮಂಗಳೂರಿನಲ್ಲಿ ನಡೆದ ನನ್ನ ‘ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಕೃತಿ ಬಿಡುಗಡೆಯ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಮೀನ್ ಮಟ್ಟು ಅವರು ಅತ್ಯಂತ ಪ್ರಜ್ಞಾಪೂರ್ವಕವಾಗಿ ಮಾತನಾಡಿದರು. ಇಡೀ ಭಾಷಣ ಅದ್ಭುತವಾಗಿತ್ತು. ಜೊತೆಗೆ ಭಾಷಣದಲ್ಲಿ ಅವರು ಮೊದಲೇ ಹೇಳಿಕೊಂಡಂತೆ ಆ ಮಾತುಗಳು ಪ್ರಜ್ಞಾಪೂರ್ವಕವಾಗಿಯೂ ಇತ್ತು. ಸಾಧಾರಣವಾಗಿ ಇತ್ತೀಚಿನ ದಿನಗಳಲ್ಲಿ ಅವರನ್ನು ಎಲ್ಲರೂ ‘‘ನೀವು ಬರೇ ಹಿಂದೂಗಳ ಅಥವಾ ಬ್ರಾಹ್ಮಣ ಕಂಧಾಚಾರವನ್ನಷ್ಟೇ ಟೀಕಿಸುತ್ತೀರಿ. ಆದರೆ ಮುಸ್ಲಿಮರ ಕುರಿತಂತೆ ಏನನ್ನೂ ಮಾತನಾಡುವುದಿಲ್ಲ...’’ ಟೀಕಿಸುತ್ತಿದ್ದರು. ಅಥವಾ ಆ ಹೆಸರಿನಲ್ಲಿ ಅವರ ಬಾಯಿ ಮುಚ್ಚಿಸುವನ ಪ್ರಯತ್ನವನ್ನು ಮಾಡುತ್ತಿದ್ದರು. ಆ ಕೊರತೆಯನ್ನು ಎಲ್ಲೋ ತುಂಬಿಸುವ ಉಮೇದು ಅವರ ಮಾತಿನಲ್ಲಿ ಇದ್ದುದನ್ನು ನಾನು ಕಂಡೆ. ಆದರೆ ಆ ವೇದಿಕೆಗೆ ಅವರ ಮಾತುಗಳು ತೀರ ಅಗತ್ಯವಾಗಿತ್ತು ಎನ್ನುವುದೂ ಅಷ್ಟೇ ಸತ್ಯ. ನನ್ನ ಕೆಲವು ಗೆಳೆಯರು ಅಮೀನ್ ಭಾಷಣಕ್ಕೆ ನನ್ನಿಂದ ಸ್ಪಷ್ಟೀಕರಣವೊಂದನ್ನು ಅಥವಾ ಉತ್ತರವೊಂದನ್ನು ಬಯಸಿದ್ದು ನನಗೆ ಬಳಿಕ ಗೊತ್ತಾಯಿತು. ಆದರೆ ಅಮೀನ್‌ಮಟ್ಟು ಭಾಷಣದಲ್ಲಿ ಸಣ್ಣದೊಂದು ವಿರೋಧಾಭಾಸವಿತ್ತು. ಅವರು ಬುರ್ಖಾದ ಸಮಸ್ಯೆಯನ್ನು ಎತ್ತಿಕೊಂಡರು. ಮೂಲಭೂತವಾದವೇ ಬುರ್ಖಾ ಅಸ್ತಿತ್ವದಲ್ಲಿರಲು ಕಾರಣ ಎಂದು ಕರೆದರು. ಆದರೆ ಅದು ಒಂದು ಸಮಸ್ಯೆಯೇನೂ ಅಲ್ಲ ಎಂಬ ಉತ್ತರವನ್ನೂ ತಮ್ಮ ಭಾಷಣದಲ್ಲೇ ನೀಡಿದ್ದರು. ನನ್ನ ಮಟ್ಟಿಗೆ ಅದು ಎರಡೂ ನಿಜವಾಗಿತ್ತು. ನಿಜಕ್ಕೂ ಬುರ್ಖಾ ಪೂರ್ಣವಾಗಿ ಮೂಲಭೂತವಾದದ ಫಲವೇ ಆಗಿದ್ದರೆ, ಮೂಲಭೂತವಾದಿಗಳಿಂದಲೇ ತುಂಬಿಕೊಂಡಿರುವ ಪಾಕಿಸ್ತಾನದ ಅಂದಿನ ಪ್ರಧಾನಿ ಬೆನಜ್ಹೀರ್ ಭುಟ್ಟೋ ಬುರ್ಖಾ ಹಾಕಿಕೊಂಡೇ ಓಡಾಡುವ ಸ್ಥಿತಿ ನಿರ್ಮಾಣವಾಗಿ ಬಿಡುತ್ತಿತ್ತು. ಬಾಂಗ್ಲಾದಲ್ಲಿ ಬುರ್ಖಾ ಹಾಕದೇ ಇರುವ ಹಸೀನಾ ಅಥವಾ ಖಲೀದಾ ಜಿಯಾ ಅವರು ಪಕ್ಕಾ ಸೆಕ್ಯುಲರ್ ಏನೂ ಅಲ್ಲ. ಅವರೂ ಪಕ್ಕಾ ಧಾರ್ಮಿಕ ಮನಸ್ಥಿತಿ ಇರುವ ನಾಯಕರೇ ಆಗಿದ್ದಾರೆ. ಮತ್ತು ಇಡೀ ಬಾಂಗ್ಲಾ ದೇಶ ಅವರನ್ನು ಮುಸ್ಲಿಮ್‌ ಎಂದೇ ಸ್ವೀಕರಿಸಿದೆ. ತಸ್ಲೀಮಾರ ಜೊತೆಗಿರುವ ಭಿನ್ನಮತ ಬುರ್ಖಾ ಧರಿಸದೇ ಇರುವ ಖಲೀದಾ, ಹಸೀನಾರಂತಹ ನಾಯಕಿಯರ ಜೊತೆಗೆ ಹೊಂದಿಲ್ಲ. ತಸ್ಲೀಮಾ ನಸ್ರೀನ್‌ರಂತಹ ಲೇಖಕಿಯಿಂದ ಬಾಂಗ್ಲಾದ ಮುಸ್ಲಿಮ್ ಮಹಿಳೆಯರಿಗೆ ಪ್ರಯೋಜನವಾದುದಕ್ಕಿಂತ ನಷ್ಟವಾದೇ ಅಧಿಕ. ಯಾಕೆಂದರೆ ತಸ್ಲೀಮಾ ಇಂದು ಜಗತ್ತಿನಲ್ಲಿ ಗುರುತಿಸಲ್ಪಡುತ್ತಿರುವುದು ಬಾಂಗ್ಲಾದ ಮಧ್ಯಮ ವರ್ಗದ ವಿರೋಧಗಳ ಮೂಲಕವಾಗಿದೆ. ತಸ್ಲೀಮಾ ಇಂದು ಮುಖ್ಯವಾಗುತ್ತಿರುವುದು ಬಾಂಗ್ಲಾದ ತನ್ನದೇ ಜನ ಸಮುದಾಯದ ಹೆಣ್ಣು ಮಕ್ಕಳಿಗಲ್ಲ. ಅಮೆರಿಕದ ಶಕ್ತಿಗಳಿಗೆ ತಸ್ಲೀಮಾ ಬೇಕು. ರಶ್ದಿಯೂ ಬೇಕು. ಮಧ್ಯ ಪ್ರಾಚ್ಯದ ನಿಜವಾದ ಸಮಸ್ಯೆಗಳಿಗೆ ಧ್ವನಿಯೆತ್ತುತ್ತಾ, ಅಲ್ಲಿನ ಜನರ ಶಿಕ್ಷಣ, ಸಾಮಾಜಿಕ ಅಭಿವೃದ್ಧಿಗೆ ಹೋರಾಡುತ್ತಿರುವ ನೂರಾರು ಮುಸ್ಲಿಮ್ ಬರಹಗಾರರಿಗೆ, ಕಾರ್ಯಕರ್ತರಿಗೆ ಕೊಟ್ಟ ಬೆಲೆಗಿಂತ ದೊಡ್ಡ ಗೌರವವನ್ನು ರಶ್ದಿ ಮತ್ತು ತಸ್ಲೀಮಾ ಇವರಿಗೆ ಅಮೆರಿಕ ನೀಡುವುದಕ್ಕೆ ಇದೇ ಕಾರಣ. ಹತ್ತು ಹಲವು ಹೆಣ್ಣು ಮಕ್ಕಳೊಂದಿಗೆ ಮಜಾ ಉಡಾಯಿಸುತ್ತಾ, ತಲಾಕ್ ನೀಡುತ್ತಾ, ಮತ್ತೆ ಮದುವೆಯಾಗುತ್ತಾ ಬೇಜವಾಬ್ದಾರಿ ಹೇಳಿಕೆ ನೀಡುತ್ತಾ, ಮುಸ್ಲಿಮ್‌ ಮೂಲಭೂತವಾದವನ್ನು ವಿರೋಧಿಸುವ ಹೆಸರಿನಲ್ಲೇ ಅಮೆರಿಕದ ಅಂತಃಪುರದಲ್ಲಿ ವಿಲಾಸಿ ಬದುಕನ್ನು ಕಳೆಯುತ್ತಿರುವ ರಶ್ದಿ ಸಮಯ ಸಾಧಕ ಬರಹಗಾರನಾಗಿಯಷ್ಟೇ ನನಗೆ ಭಾಸವಾಗುತ್ತಾನೆ. ತಸ್ಲೀಮಾ ನಸ್ರೀನ್ ಒಬ್ಬ ಹೆಣ್ಣು ಮಗಳು ಎನ್ನುವ ಕಾರಣಕ್ಕಾಗಿ ಮತ್ತು ಹಲವು ಸಂದರ್ಭಗಳಲ್ಲಿ ಆಕೆ ಬಾಂಗ್ಲಾದ ಹಿಂದೂ ಅಲ್ಪಸಂಖ್ಯಾತರ ಬಗ್ಗೆ ನೀಡಿದ ದಿಟ್ಟ ಪ್ರತಿಕ್ರಿಯೆಗಾಗಿ ಆಕೆಯನ್ನು ಸಂಪೂರ್ಣ ನಿರಾಕರಿಸಲು ಸಾಧ್ಯವಾಗುವುದಿಲ್ಲ. ಈ ಎಲ್ಲ ಕಾರಣಗಳಿಂದ ನನಗೆ ಬಾಂಗ್ಲಾದಂತಹ ಧಾರ್ಮಿಕ ಒಲವುಳ್ಳ ದೇಶದಲ್ಲಿ ಪ್ರಧಾನಿಯಾಗಿಯು, ವಿರೋಧ ಪಕ್ಷದ ನಾಯಕರಾಗಿಯೂ ಯಶಸ್ವಿಯಾಗಿರುವ ಶೇಖ್ ಹಸೀನಾ, ಖಲೀದಾ ಜಿಯಾ ಮೊದಲಾದ ಹೆಣ್ಣು ಮಕ್ಕಳು ಹೆಚ್ಚು ಇಷ್ಟವಾಗುತ್ತಾರೆ. ಪಾಕಿಸ್ತಾನದಲ್ಲಿ ನನಗೆ ಬೇಜನಝೀರ್ ಭುಟ್ಟೋ ಇಷ್ಟವಾಗುವುದೂ ಇದೇ ಕಾರಣಕ್ಕೆ.

 ಮೂಲಭೂತವಾದಿ ದೇಶಗಳು ಎಂದು ನಾವು ಭಾವಿಸಿಕೊಂಡಿರುವ ಪಾಕಿಸ್ತಾನ, ಬಾಂಗ್ಲಾದಲ್ಲಿ ಬುರ್ಖಾ ಹಾಕದೆಯೇ ಒಬ್ಬ ನಾಯಕಿಯಾಗಬಹುದು ಎಂದ ಮೇಲೆ, ಬುರ್ಖಾ ಎನ್ನುವುದು ಕೇವಲ ಮೂಲಭೂತವಾದಿ ಕಾರಣಗಳಿಂದಷ್ಟೇ ನೆಲೆನಿಂತಿರುವ ವ್ಯವಸ್ಥೆ ಅಲ್ಲ ಎನ್ನುವುದನ್ನು ಅಮೀನು ಮಟ್ಟು ಒಪ್ಪಿಕೊಂಡಂತೆಯೇ ಆಯಿತು. ಸಾರಾ ಅಬೂಬಕರ್ ಬುರ್ಖಾ ಹಾಕುವುದಿಲ್ಲ. ಅವರಂತೆ ನೀವೆಲ್ಲ ಯಾಕೆ ಇರಬಾರದು ಎಂದು ಕೆಲವರು ನನ್ನ ಸಮುದಾಯದ ಕೆಲವು ಬಡ ಹೆಣ್ಣು ಮಕ್ಕಳ ಬಳಿ ಕೇಳುವುದಿದೆ. ಸಾರಾ ಅಬೂಬಕರ್ ಬುರ್ಖಾ ಹಾಕುವುದಿಲ್ಲ ಎನ್ನುವ ಕಾರಣಕ್ಕಾಗಿ ಎಂದೂ ಸಮಾಜದಲ್ಲಿ ವಿವಾದಕ್ಕೊಳಗಾಗಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಕೇರಳ, ಕಾಸರಗೋಡು ಭಾಗದಿಂದ ಬಂದಿರುವ ಸಾರಾ ಅಬೂಬಕರ್ ಬುರ್ಖಾ ಹಾಕುವುದಿಲ್ಲ ಎನ್ನುವುದು ನನಗೆ ಅಚ್ಚರಿಯ ವಿಷಯವೇ ಅಲ್ಲ. ಯಾಕೆಂದರೆ ಕೇರಳದಲ್ಲಿ ಬುರ್ಖಾ ಎಂದೂ ಚರ್ಚೆಯ ವಿಷಯ ಆಗಿಲ್ಲ. ಅಲ್ಲಿ ಬುರ್ಖಾ ಧರಿಸುವವರೂ ಇದ್ದಾರೆ. ಹಾಗೆಯೇ ಬುರ್ಖಾ ಧರಿಸದೇ ದೈನಂದಿನ ಚಟುವಟಿಕೆಗಳನ್ನು ನಡೆಸುವವರೂ ಇದ್ದಾರೆ. ಹೆಚ್ಚಿನವರು ಸ್ಕಾರ್ಫ್‌ನ್ನು ಬಳಸುತ್ತಾರೆ. ಯಾರಾದರೂ ಪತ್ರಿಕೆಯವರು ಇದನ್ನು ಸುದ್ದಿಯಾಗಿ ಪ್ರಕಟಿಸಿದಾಗಷ್ಟೇ ಅದು ಚರ್ಚೆಯ, ವಿವಾದದ ವಿಷಯವಾಗುತ್ತದೆ. ‘ನೀವು ಯಾಕೆ ಬುರ್ಖಾ ಧರಿಸುತ್ತೀರಿ?’ ‘ನೀವು ಯಾಕೆ ಸ್ಕಾರ್ಫ್ ಧರಿಸುತ್ತೀರಿ?’ ಎನ್ನುವ ಪ್ರಶ್ನೆಗಳು ‘ನೀವು ಯಾಕೆ ಸ್ಕರ್ಟ್ ಧರಿಸುತ್ತೀರಿ?’ ‘ನೀವು ಯಾಕೆ ಜೀನ್ಸ್ ಧರಿಸುತ್ತೀರಿ?’ ಎನ್ನುವ ಪ್ರಶ್ನೆಯಷ್ಟೇ ಬೇಜವಾಬ್ದಾರಿತನದಿಂದ ಕೂಡಿದ್ದು.


ಬಟ್ಟೆ ಎನ್ನುವುದು ನಂಬಿಕೆಗೆ ಸಂಬಂಧಿಸಿದ ವಿಷಯವಲ್ಲ. ಅದು ಸಂವೇದನೆಗೆ ಸಂಬಂಧಿಸಿದ ವಿಷಯ. ‘ನೀನು ಯಾಕೆ ಮೈ ತುಂಬಾ ಬಟ್ಟೆ ಧರಿಸುತ್ತಿದ್ದೀಯ?’ ಎಂದು ನನ್ನ ಅಮ್ಮನ ಜೊತೆಗೆ ನಾನು ಕೇಳುವುದು ಅಥವಾ ಆ ಕುರಿತಂತೆ ಅವಳಿಗೆ ಗುಪ್ತ ಮತದಾನದ ಅವಕಾಶ ನೀಡುವುದು ಇತ್ಯಾದಿಗಳೆಲ್ಲ ಹಾಸ್ಯಾಸ್ಪದ ವಿಷಯ. ಮೈ ತುಂಬಾ ಬಟ್ಟೆ ಹಾಕುವ ಹೆಣ್ಣಿಗೆ ಜೀನ್ಸ್ ಅಥವಾ ಚೂಡಿಧಾರವನ್ನು ಕೊಟ್ಟು ‘ಇದನ್ನು ಧರಿಸಿ ನೀನು ಸಾರ್ವಜನಿಕವಾಗಿ ಓಡಾಡಬೇಕು’ ಎಂದು ಆದೇಶ ನೀಡುವುದು, ಒಬ್ಬ ಅರೆಬರೆ ಬಟ್ಟೆ ಧರಿಸುತ್ತಾ ಬದುಕನ್ನು ರೂಢಿಸಿಕೊಂಡ ಹೆಣ್ಣಿಗೆ ಜರತಾರಿ ಸೀರೆಯನ್ನು ಕೊಟ್ಟಂತೆಯೇ ಆಗಿದೆ. ಇಬ್ಬರ ಸಂವೇದನೆಯನ್ನೂ ಅದು ಘಾಸಿ ಮಾಡಬಲ್ಲುದು. ಸೀರೆ, ರವಿಕೆ ಧರಿಸುವ ಒಬ್ಬ ತಾಯಿಗೆ ಚೂಡಿಧಾರ ಧರಿಸುವಂತೆ ಒತ್ತಾಯಿಸಿದರೆ ಅದು ಎಷ್ಟು ಅಭಾಸವಾಗಬಹುದೋ ಹಾಗೆಯೇ, ಮೈ ತುಂಬಾ ಬಟ್ಟೆ ಧರಿಸಿದ ಹೆಣ್ಣಿನ ಮುಂದೆ ನಾವು ನಮ್ಮ ಇಷ್ಟದ ಬಟ್ಟೆಗಳನ್ನು ಇಟ್ಟು ‘ಧರಿಸಿಕೋ’ ಎನ್ನುವುದು ಕೂಡ. ಬಟ್ಟೆ ಎನ್ನುವುದು ಧರಿಸುವವರ ಆಯ್ಕೆಯೇ ಹೊರತು, ನೋಡುವವರ ಆಯ್ಕೆ ಅಲ್ಲ. 


ಯಾವುದು ಬುರ್ಖಾ? ಇದುವೇ ಬುರ್ಖಾ ಎನ್ನುವುದಕ್ಕೆ ಕುರ್‌ಆನ್‌ನಲ್ಲಾಗಲಿ, ಇಸ್ಲಾಮ್‌ನಲ್ಲಾಗಲಿ ಸ್ಪಷ್ಟ ವ್ಯಾಖ್ಯಾನವೇ ಇಲ್ಲ. ಇಂದಿಗೂ ದೇಶ, ಕಾಲಕ್ಕನುಗುಣವಾಗಿ ಬುರ್ಖಾಗಳಿಗೆ ಬಟ್ಟೆ ಉದ್ಯಮಗಳೇ ವ್ಯಾಖ್ಯಾನಗಳನ್ನು ನೀಡುತ್ತಾ ಬಂದಿವೆ. ಮೈ ತುಂಬಾ ಬಟ್ಟೆ ಹಾಕಿಕೊಳ್ಳುವುದಕ್ಕೆ ಇಸ್ಲಾಮ್ ಕಲಿಸುತ್ತದೆ ಎನ್ನುವುದನ್ನು ನಾನು ಓದಿದ್ದೇನೆ. ಆದರೆ ಬಟ್ಟೆಯ ಮೇಲೆ ಇನ್ನೊಂದು ಪೂರ್ಣ ಪ್ರಮಾಣದ ಬಟ್ಟೆಯನ್ನು ಹಾಕಿಕೊಳ್ಳಲಾಗಲಿ, ಮುಖವನ್ನು ಸಂಪೂರ್ಣ ಮುಚ್ಚಿಕೊಳ್ಳಲಾಗಲಿ ಎಲ್ಲೂ ಸ್ಪಷ್ಟ ಉಲ್ಲೇಖ ಇಲ್ಲ. ಬಟ್ಟೆ ಬದುಕಿನ ಭಾಗವಾಗಿ, ಸಾಂಸ್ಕೃತಿಕ ಬದಲಾವಣೆಯ ನೆಲೆಯಲ್ಲಿ ಹುಟ್ಟಿ ಬೇರೆ ಬೇರೆ ರೂಪಗಳನ್ನು ತಾಳುತ್ತಾ ಬಂದಿದೆ. ಭಾರತದ ಒಂದೊಂದು ಕಡೆ ಒಂದು ರೀತಿಯ ವಸ್ತ್ರ ಧಾರಣೆಗಳನ್ನು ಮಾಡುತ್ತಾರೆ. ಅದು ಅವರ ಸಂಸ್ಕೃತಿಯ ಭಾಗವಾಗಿದೆಯೇ ಹೊರತು ಧರ್ಮದ ಭಾಗವಾಗಿಲ್ಲ. ಬುರ್ಖಾ, ಸ್ಕಾರ್ಫ್ ಇತ್ಯಾದಿಗಳನ್ನು ತೊರೆಯುವುದು ವೈಚಾರಿಕತೆಯ ಭಾಗವೇ ಆಗಿದ್ದರೆ, ನನ್ನ ಬಾಲ್ಯದಲ್ಲಿ ನಾನು ಕಂಡ ಮರಿಯಮ್ಮಾದ, ಅವ್ವಮ್ಮಾದ, ಪಲ್ಲಿಮ್ಮಾದ ಇವರೆಲ್ಲ ಸಾರಾ ಅಬೂಬಕರ್ ಅವರಿಗಿಂತ ಮೊದಲೇ ಹುಟ್ಟಿದ ವಿಚಾರವಾದಿಗಳು. ಯಾಕೆಂದರೆ ಇವರು ಕಾಡಿಗೆ, ಗದ್ದೆಗೆ, ನದಿಗೆ ಹೋಗುವಾಗ ಬುರ್ಖಾ ಧರಿಸಿ ಹೋಗುತ್ತಿರಲಿಲ್ಲ. ತಲೆಗೊಂದು ತಲೆವಸ್ತ್ರ. ಉದ್ದ ಕೈಯ ಕುಪ್ಪಸ. ಹಸಿರು ಅಥವಾ ನೀಲಿ ಬಣ್ಣದ ಸೀರೆ. ಕೈಯಲ್ಲೊಂದು ಕತ್ತಿ. ಹಾಗೆಂದು ಇವರೇನೂ ಇಸ್ಲಾಮ್ ಧರ್ಮದಿಂದ ಬಹಿಷ್ಕೃತರೇನೂ ಆಗಿಲ್ಲ.

 ನಾನು ಬಾಲ್ಯದಲ್ಲಿರುವಾಗ ಈ ಕಪ್ಪು ಬುರ್ಖಾಗಳು ಇರಲಿಲ್ಲ. ಬದಲಿಗೆ ‘ವಲ್ಲಿ’ ಎನ್ನುವ ವಸ್ತ್ರವನ್ನು ಹೊದ್ದುಕೊಳ್ಳುತ್ತಿದ್ದರು. ಅದು ಅವರ ಸಂಸ್ಕೃತಿಯ ಭಾಗವಾಗಿತ್ತು. ಸಂವೇದನೆಯ ಭಾಗವಾಗಿತ್ತು. ಡಬಲ್ ವಲ್ಲಿ ಎನ್ನುವುದೊಂದು ಇತ್ತು. ಇದನ್ನು ಇಬ್ಬರು ಹೆಂಗಸರು ಜೊತೆಯಾಗಿ ಹೊದ್ದುಕೊಳ್ಳುತ್ತಿದ್ದರು. ಇದಾದ ಬಳಿಕ ಲಂಗ ಬುರ್ಖಾ ಬಂತು. ನನ್ನ ತಾಯಿ ತನ್ನ ಜೀವನ ಪೂರ್ತಿ ಲಂಗ ಬುರ್ಖಾ ಹಾಕುತ್ತಿದ್ದರು. ಇದಾದ ಬಳಿಕ ಇದರಲ್ಲೇ ಬಗೆ ಬಗೆಯ ಕಲರ್ ಬುರ್ಖಾ ಬಂತು. ಇದು ಮುಗಿದ ಬಳಿಕ ‘ಡಿಸ್ಕೋ ಬುರ್ಖಾ’ ಎನ್ನುವುದು ಬಂತು. ಇದರಲ್ಲೂ ಬೇರೆ ಬೇರೆ ರೀತಿಯ ವೈವಿಧ್ಯಗಳಿದ್ದವು. ಮೊಣಕಾಲಿಗಿಂತ ಮೇಲೆ ಇರುವಂತಹದು. ಹಾಗೆಯೇ ಉದ್ದ ಕೈಗಳು, ಗಿಡ್ಡ ಕೈಗಳು. ಹಾಗೆಯೇ ತಲೆಗೆ ಧರಿಸುವ ಸ್ಕಾರ್ಫ್‌ನಲ್ಲಿಯೂ ವೈವಿಧ್ಯತೆಗಳು ಇದ್ದವು. ಅಂದ ಹಾಗೆ ಲಂಗ ಬುರ್ಖಾ, ಡಿಸ್ಕೋ ಬುರ್ಖಾ ಇತ್ಯಾದಿಗಳನ್ನೆಲ್ಲ ಯಾವುದೋ ಮೌಲ್ವಿಗಳು ಫತ್ವಾ ಹೊರಡಿಸಿ ಬಿಡುಗಡೆ ಮಾಡುತ್ತಿರಲಿಲ್ಲ. ಆಯಾಯ ಕಾಲಮಾನಕ್ಕೆ ತಕ್ಕಂತೆಯೇ ಮಾರುಕಟ್ಟೆಗಳು ಇದನ್ನು ಬಿಡುಗಡೆ ಮಾಡುತ್ತಿದ್ದವು. ಬುರ್ಖಾ ಎನ್ನುವುದು ಒಂದು ದೊಡ್ಡ ಉದ್ಯಮ. ಅದರ ಹಿಂದೆ ಬೃಹತ್ ವ್ಯಾಪಾರಿಗಳಿಂದ್ದಾರೆ. ಫ್ಯಾಶನ್ ಡಿಸೈನರ್‌ಗಳಿದ್ದಾರೆ. ಅವರ್ಯಾರೂ ಮದರಸಗಳಿಂದ ಬಂದವರಲ್ಲ. ಅತ್ಯಾಧುನಿಕ ವಸ್ತ್ರವಿನ್ಯಾಸಗಳನ್ನು ಕಲಿತು ಈ ಕ್ಷೇತ್ರಕ್ಕೆ ಕಾಲಿಟ್ಟವವರು. ಹಾಗೆಯೇ ತರುಣಿಯರು ತಮ್ಮ ಅಂತಸ್ತು, ವಿದ್ಯಾಭ್ಯಾಸ ಇವುಗಳಿಗೆ ಪೂರಕವಾಗಿ ತಮ್ಮ ತಮ್ಮ ಬುರ್ಖಾಗಳನ್ನು ಸ್ಕಾರ್ಫ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

 ಇತ್ತೀಚೆಗೆ ಗಲ್ಫ್ ಶೈಲಿಯ ಬದುಕು ಒಂದು ಹೊಸ ಬುರ್ಖಾವನ್ನು ನಮ್ಮ ನಡುವೆ ತಂದಿದೆ. ಅದು ಭಾರತೀಯ ಬುರ್ಖಾಕ್ಕೆ ಭಿನ್ನವಾದುದು. ಬುರ್ಖಾ ಧರಿಸಿದ ಬಳಿಕ ಅರ್ಧ ಮುಖಕ್ಕೆ ಬಟ್ಟೆಯನ್ನು ಬಿಗಿದು ಕಟ್ಟುವುದು. ಇಷ್ಟೇ ಅಲ್ಲ. ಕೈಗೆ ಕಪ್ಪು ಗ್ಲೌಸ್‌ಗಳನ್ನು ಕೂಡ ಕೆಲವರು ಧರಿಸುತ್ತಾರೆ. ‘‘ಯಾರನ್ನೋ ಕೊಲೆ ಮಾಡಲು ಹೋಗುವುದಕ್ಕೆ ಸಿದ್ಧತೆಯಂತೆ’’ ನನಗೆ ಗ್ಲೌಸ್ ಕಂಡಿತ್ತು. ಅದೂ ತೀರಾ ಕೃತಕ ಮತ್ತು ಅತಿರೇಕದ ಎಲ್ಲ ಲಕ್ಷಣಗಳನ್ನು ಹೊಂದಿದ ಬುರ್ಖಾ ಆಗಿತ್ತು. ಯಾರನ್ನೋ ಪರೋಕ್ಷವಾಗಿ ಕೆರಳಿಸುವುದಕ್ಕಾಗಿ, ಮತ್ತು ಯಾರಿಗಾಗಿಯೋ ಧರಿಸಿದ್ದೇ ಹೊರತು ಅದು ಸಹಜವಾದ ಕ್ರಿಯೆ ಎಂದು ನನಗೆ ಅನ್ನಿಸಲಿಲ್ಲ. ವಿದೇಶದ ಹಣದ ಜೊತೆಗೆ ಬಂದ ಕೆಲವು ಸಿದ್ಧಾಂತಗಳು ತನ್ನ ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟುಕೊಂಡು ಬಂದ ಬುರ್ಖಾ ಅದಾಗಿತ್ತು. ವಿದೇಶದ ಹಣ ಮುಗಿದು ಹೋಗುವುದಕ್ಕೆ ಮುಂಚೆಯೇ ಈ ಬುರ್ಖಾ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಮೈ ತುಂಬಾ ಬಟ್ಟೆ ಧರಿಸಿದ, ಬುರ್ಖಾವನ್ನೇ ಧರಿಸದ ಎಷ್ಟೋ ಹೆಣ್ಣುಮಕ್ಕಳು ಇಂದು ನಮ್ಮ ನಡುವೆ ಬಹುಸಂಖ್ಯೆಯಲ್ಲಿದ್ದಾರೆ. ಇವರು ಯಾವ ಲೇಖಕಿಯರೂ ಅಲ್ಲ, ವೈಚಾರಿಕ ಚಿಂತಕಿಯರೂ ಅಲ್ಲ. ತಮ್ಮ ತಮ್ಮ ಬದುಕಿಗೆ ಪೂರಕವಾಗಿ ತೀರಾ ಸಹಜವಾಗಿ, ಗಿಡಗಳಲ್ಲಿ ಒಂದು ಹೂವು ಅರಳಿ, ಹಣ್ಣಾಗುವಂತೆಯೇ ಅವರು ತಮ್ಮ ತಮ್ಮ ವಸ್ತ್ರಗಳನ್ನು ಆರಿಸಿಕೊಂಡಿದ್ದಾರೆ. ಹಳತು ಹೋಗಿ ಹೊಸತು ಬಂದಿದೆ. ಆದುದರಿಂದಲೇ ಅದು ಯಾರ ಗಮನವನ್ನೂ ಸೆಳೆದಿಲ್ಲ. ಒಂದು ವೇಳೆ ಬುರ್ಖಾ ಉದುರುವುದಿದ್ದರೂ ಅದೇ ದಾರಿಯಲ್ಲಿ ಉದುರಬೇಕೇ ಹೊರತು, ಅದನ್ನು ಕಿತ್ತೆಗೆಯಲು ಹೋದಂತೆಯೇ ಅದು ಬಿಗಿಯಾಗುತ್ತಾ ಹೋಗುತ್ತದೆ. 

ಬಟ್ಟೆಗಾಗಿ ಬದುಕು ಅಲ್ಲ. ಬದುಕಿಗಾಗಿ ಬಟ್ಟೆ. ಅವರವರ ಬದುಕಿಗೆ ಪೂರಕವಾಗಿ ಬಟ್ಟೆಗಳಲ್ಲಿ ಬದಲಾವಣೆಗಳು ಕಾಣುತ್ತಾ ಹೋಗುತ್ತದೆ. ಹಿಂದೆ ಕಾಡಿಗೆ ಕಟ್ಟಿಗೆಗೆ ಹೋಗುವ ಮರಿಯಮ್ಮಾದ ಸ್ಕಾರ್ಫ್ ಧರಿಸದೇ ತಲೆವಸ್ತ್ರ ಹಿಂದಕ್ಕೆ ಕಟ್ಟಿ, ಬುರ್ಖಾ ಇಲ್ಲದೆ ಓಡಾಡುತ್ತಿದ್ದರು. ಇಸ್ಲಾಮಿನಿಂದ ಯಾರೂ ಅವರನ್ನು ಬಹಿಷ್ಕರಿಸಿರಲಿಲ್ಲ. ಅದೇ ಮರಿಯಮ್ಮಾದನ ಮಕ್ಕಳು ಮುಂದೆ ಗಲ್ಫ್‌ಗೆ ಹೋದರು. ಹಣವಾಯಿತು. ದೊಡ್ಡ ಬಂಗಲೆ ಕಟ್ಟಿದರು. ಅಲ್ಲಿಂದ ಬರುವಾಗ ಚಿತ್ರ ವಿಚಿತ್ರ ಬುರ್ಖಾವನ್ನು, ವಿಚಿತ್ರ ಬದುಕಿನ ಶೈಲಿಯನ್ನು ಹಿಡಿದುಕೊಂಡು ಬಂದರು. ಮರಿಯಮ್ಮಾದ ತನ್ನ ಜೀವನದ ಕೊನೆಯಲ್ಲಿ ಬುರ್ಖಾ ಧರಿಸುತ್ತಾ ‘ತಾನು ಕೂಡ ಎಲ್ಲರಂತೆ ಆದುದಕ್ಕೆ ಹೆಮ್ಮೆ ಪಡುತ್ತಾ’ ಬದುಕಿದರು. ಹೌದು. ಬುರ್ಖಾ ಅವರಿಗೆ ಅಂತಸ್ತಿನ ವಿಷಯವಾಗಿತ್ತು. ಮರ್ಯಾದಸ್ಥರ ವಿಷಯವಾಗಿತ್ತು. ಅವರ ಮಗ ಗಲ್ಫಿಗೆ ಹೋಗಿ ತನ್ನ ತಾಯಿಗೆ ಅದನ್ನು ತಂದುಕೊಟ್ಟಿದ್ದ. ಹಾಗೆಂದು ಮರಿಯಮ್ಮಾದನ ಮುಂದೆ ‘ಅದೆಲ್ಲ ಸುಳ್ಳು, ಅನಗತ್ಯ, ಮೂಲಭೂತವಾದ’ ಎಂದು ಅವರನ್ನು ಬುರ್ಖಾ ಧರಿಸದಂತೆ ನಾನು ಒತ್ತಾಯಿಸುವುದು ಭ್ರಾಮಕ ವೈಚಾರಿಕತೆಯ ಪರಮಾವಧಿ. ಅಂತಹ ವೈಚಾರಿಕತೆ ಈ ನೆಲದೊಂದಿಗೆ, ಶ್ರೀಸಾಮಾನ್ಯರ ಬದುಕಿನೊಂದಿಗೆ ಯಾವ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ನಂಬಿದ್ದೇನೆ.

  ಆದುದರಿಂದ ನಾನು ಧರಿಸುವ ಧಿರಿಸನ್ನು  ಬದಲಾಯಿಸುವ ಕಡೆಗೆ ಹೆಚ್ಚು ಆಸಕ್ತನಾಗಿಲ್ಲ. ಅವರ ಬದುಕಿನಲ್ಲಿ ಬದಲಾವಣೆಯಾಗಬೇಕು ಎನ್ನುವುದು ನನ್ನ ಆಶಯ. ಅವರು ಹೆಚ್ಚು ಶಿಕ್ಷಣವನ್ನು ಪಡೆಯಬೇಕು. ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಬೇಕು. ಅವರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆಯಾದಾಗ ಅವರ ವಸ್ತ್ರ ಧಾರಣೆ ಇತ್ಯಾದಿಗಳಲ್ಲೂ ಬದಲಾವಣೆಯಾಗಬಹುದು. ಅಥವಾ ಅವರಿಗೆ ವಸ್ತ್ರದಲ್ಲಿ ಬದಲಾವಣೆ ಇಷ್ಟವಿಲ್ಲದೆ ಇದ್ದರೆ, ನಾನಂತೂ ಅವರದನ್ನು ಬದಲಾಯಿಸಬೇಕು ಎಂದು ಬಯಸಲಾರೆ. ಒಂದು ಕಾಲದಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳು ಶಾಲೆ ಕಲಿಯುವುದೇ ಒಂದು ಅಪರೂಪದ ಸುದ್ದಿಯಾಗಿತ್ತು. ಸುಮಾರು 90ರ ಆರಂಭದಲ್ಲಿ ಡಿಗ್ರಿ ಮುಗಿಸಿದ ಒಂದೆಡೆರಡು ಹೆಣ್ಣು ಮಕ್ಕಳಷ್ಟೇ ಇದ್ದರು. ಆದರೆ ಇಂದು ಪದವಿ ಮಾಡದ ಹೆಣ್ಣು ಮಕ್ಕಳೇ ಇಲ್ಲ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಗ್ರಾಮೀಣ ಹೆಣ್ಣು ಮಕ್ಕಳು ಸ್ಕಾರ್ಫ್ ಹಾಕಿಕೊಂಡು, ತಮ್ಮದೇ ಒತ್ತಾಯದೊಂದಿಗೆ ಶಾಲೆಗೆ ಕಾಲಿಡತೊಡಗಿದರು. ಆಗ ಈ ಸ್ಕಾರ್ಫ್‌ನ ಕುರಿತಂತೆ ಸಂಘಪರಿವಾರ ವಿವಾದವನ್ನು ಎಬ್ಬಿಸಿತು. ಶಾಲೆಗೆ, ಕಾಲೇಜುಗಳಿಗೆ ಸ್ಕಾರ್ಫ್ ಹಾಕಿ ಪ್ರವೇಶಿಸಬಾರದು ಎಂದು ಕೆಲವರು ತಕರಾರು ತೆಗೆದರು. ಇದು ಎಷ್ಟರ ಮಟ್ಟಿಗೆ ಮುಂದೆ ಹೋಯಿತು ಎಂದರೆ ಎಷ್ಟೋ ಹೆಣ್ಣು ಮಕ್ಕಳು ಶಾಲೆ ತೊರೆಯುವಂತಹ ಸ್ಥಿತಿ ನಿರ್ಮಾಣ ಮಾಡಿತು. ಅಳಿದುಳಿದವರು ತಮ್ಮದೇ ಧಾರ್ಮಿಕ ಸಂಘಟನೆಗಳು ನಡೆಸುವ ಶಾಲಾ ಕಾಲೇಜುಗಳಿಗೆ ತೆರಳುವ ವಾತಾವರಣವನ್ನು ಸೃಷ್ಟಿಸಿತು. ಇಂತಹ ಸಂದರ್ಭದಲ್ಲಿ ಕೆಲವು ಅರೆಬೆಂದ ವಿಚಾರವಾದಿಗಳೇ ‘‘ನಿಮಗೆ ಸ್ಕಾರ್ಫ್ ಬೇಕೋ-ಶಿಕ್ಷಣ ಬೇಕೋ’’ ಎನ್ನೋ ಬ್ಲಾಕ್‌ಮೇಲ್‌ಗೆ ಇಳಿದರು. ಕೆಲವು ಹೆಣ್ಣು ಮಕ್ಕಳು ಇದನ್ನು ದಿಟ್ಟವಾಗಿ ಪ್ರತಿಭಟಿಸಿದರು. ಸ್ಕಾರ್ಫ್ ಧರಿಸದೇ ಒಬ್ಬ ಹೆಣ್ಣಿಗೆ ಹೊರಗೆ ಇಳಿಯಲು ಅಸಾಧ್ಯವಾಗುತ್ತದೆ ಎನ್ನುವುದಾದರೆ ಆ ಸಂವೇದನೆಯನ್ನು ನಾವು ಗೌರವಿಸಬೇಕು. ಹೆಣ್ಣು ಮಕ್ಕಳನ್ನು ಯಾವ ರೀತಿಯಲ್ಲಾದರೂ ಒಲಿಸಿ ಶಾಲೆ, ಕಾಲೇಜುಗಳಿಗೆ ಸೇರಿಸಿ ಎಂದು ನಮ್ಮ ಶಿಕ್ಷಣ ನೀತಿ ಹೇಳುತ್ತದೆ. ಸ್ಕಾರ್ಫ್ ಅವೈಚಾರಿಕ ಸಂಗತಿಯೇ ಆಗಿದ್ದರೆ, ಶಿಕ್ಷಣವೇ ಅವಳನ್ನು ಸ್ಕಾರ್ಫ್ ಹಾಕದಂತೆ ತಡೆಯುತ್ತದೆ. ಇಂದು ಸ್ಕಾರ್ಫ್ ಧರಿಸಿಯೇ ಡಾಕ್ಟರ್‌ಗಳಾಗಿ, ಇಂಜಿನಿಯರ್‌ಗಳಾಗಿ ನೂರಾರು ಮುಸ್ಲಿಮ್ ಮಹಿಳೆಯರು ಸಾಧನೆ ಮಾಡಿದ್ದಾರೆ. ಸ್ಕಾರ್ಫ್ ಧರಿಸಿಯೇ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಪಡೆದ ಅಥ್ಲೆಟಿಕ್‌ಗಳ ಬಗ್ಗೆ ವರದಿಯಾಗಿವೆ. ಮುಸ್ಲಿಮ್ ಮಹಿಳೆಯರನ್ನು ಮುಖ್ಯವಾಹಿನಿಗೆ ಕರೆದುಕೊಳ್ಳುವುದು ಶಿಕ್ಷಣದ ಹೆಬ್ಬಾಗಿಲನ್ನು ತೆರೆಯುವ ಮೂಲಕ. ಇಂದು ಸಂಘಪರಿವಾರವೂ ಸೇರಿದಂತೆ ಹಲವಾರು ಸಂಘಟನೆಗಳ ಅಡೆತಡೆಗಳನ್ನು ಎದುರಿಸಿ ಮುಸ್ಲಿಮ್ ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಧಾಪುಗಾಲು ಇಡುತ್ತಿದ್ದಾರೆ. ಮುಸ್ಲಿಮ್ ಮಹಿಳೆಯರೇ ಒಂದಾಗಿ ‘ಮರಳಿ ಬಾ ಶಾಲೆಗೆ’ ಎಂದು ಅಳಿದುಳಿದ ಮಹಿಳೆಯರನ್ನು ಶಿಕ್ಷಿತರನ್ನಾಗಿಸಲು ಮುಂದಾಗಿದ್ದಾರೆ. ಇದನ್ನೆಲ್ಲ ನಾವು ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾ ಹೋಗುವುದೇ ನಿಜವಾದ ಮಹಿಳಾ ಸಬಲೀಕರಣವಾಗಿದೆ.


  ಎರಡು ಘಟನೆಗಳನ್ನು ನಾನು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ನಮೂದಿಸಿದ್ದೆ. ಒಂದು, ಕಳೆದ ಎಸೆಸೆಲ್ಸಿ ಫಲಿತಾಂಶದಲ್ಲಿ ಬೆಳ್ತಂಗಡಿಯ ಮುಸ್ಲಿಮ್ ತರುಣಿಯೊಬ್ಬಳು ಸಾಧಿಸಿದ ಸಾಧನೆ. ಆಕೆ ಕನ್ನಡ ಮಾಧ್ಯಮದಲ್ಲಿ ಬರೆದು ಇಡೀ ರಾಜ್ಯಕ್ಕೆ ಎರಡನೆ ಸ್ಥಾನ ಪಡೆದಿದ್ದಳು. ಅಂದ ಹಾಗೆ ಈಕೆ ಒಬ್ಬ ಮದರಸ ಶಾಲೆಯ ವೌಲವಿಯ ಮಗಳು. ಇನ್ನೊಂದು, ಶಿವಮೊಗ್ಗದಲ್ಲಿ ನಡೆದ ಘಟನೆ. ಈಕೆಯೂ ಒಬ್ಬ ಮುಸ್ಲಿಮ್ ತರುಣಿ. ಹೆರಿಗೆಯಾದ ಮರುದಿನವೇ ಅಂಬುಲೆನ್ಸ್‌ನಲ್ಲಿ ಹೋಗಿ ಶಿಕ್ಷಕ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದಳು. ಆಕೆಯ ಕುಟುಂಬ, ಸಮಾಜ ಎಲ್ಲರೂ ಅದಕ್ಕೆ ಸಹಕರಿಸಿದ್ದರು. ಈ ಘಟನೆಗಳು ನಮ್ಮ ಭವಿಷ್ಯದ ಆಶಾಕಿರಣಗಳಾಗಿವೆ. ಇಲ್ಲಿ ‘ಆಕೆ ಬುರ್ಖಾ ಹಾಕಿದ್ದಳೋ...ಇಲ್ಲವೋ’’ ಎನ್ನುವ ಪ್ರಶ್ನೆಯೇ ಅಪ್ರಸ್ತುತ. ಅಂತಹ ಪ್ರಶ್ನೆಯನ್ನು ಯಾರೇ ಪ್ರಶ್ನಿಸಲಿ. ಅದು ಉತ್ತರಿಸುವುದಕ್ಕೆ ಅನರ್ಹವಾದ ಪ್ರಶ್ನೆ.





 ಬಳಿಕ ಸೇರಿಸಿದ ಟಿಪ್ಪಣಿ:
ಧರ್ಮದೊಳಗಿನ ಯಾವುದೇ ಮೌಡ್ಯಗಳ ಕುರಿತು ಮಾತಾಡಿದಂತೆ ಆಹಾರ ಮತ್ತು ಉಡುಪಿನ ಕುರಿತಂತೆ ಬೀಸಾಗಿ ಮಾತನಾಡೂದು ಕೆಲವೊಮ್ಮೆ ತಪ್ಪು ಧ್ವನಿಗಳನ್ನು ನೀಡಬಹುದು. ನೀವು ಬುರ್ಖಾ ಯಾಕೆ ಧರಿಸುತ್ತೀರಿ, ಸ್ಕಾರ್ಫ್ ಯಾಕೆ ಧರಿಸುತ್ತೀರಿ ? ಎಂಬ ಪ್ರಶ್ನೆ ನೀವು ಗೋಮಾಂಸ ಯಾಕೆ ಸೇವಿಸುತ್ತೀರಿ ಎಂದು ಕೆಲವರು ಕೇಳಿದಂತೆಯೇ ಧ್ವನಿಸೋದು ಇದೆ ಕಾರಣಕ್ಕೆ. (ಕೆಲವು ಹುಡುಗರು ಬುರ್ಖಾ, ಸ್ಕಾರ್ಫ್, ನಿಕಾಬ್ ಇವುಗಳ ವ್ಯತ್ಯಾಸವೇ ತಿಳಿಯದೆ ವಾದಿಸುತ್ತಿದ್ದರು). ಯಾವುದೇ ಕಾರಣಕ್ಕೆ ಒಂದು ಉಡುಪು ಧಾರಣೆ ಆರಂಭವಾಗಲಿ, ಧರಿಸುತ್ತಾ ಹೋದಂತೆ ಅದು ನಿಧಾನಕ್ಕೆ ಬದುಕಿನ, ಮೈ ಮೇಲಿನ ಸಂವೇದನೆಯ ಭಾಗವಾಗುತ್ತದೆ. ಆದುದರಿಂದಲೇ ಇದು ಯಾವುದೇ ಆದೇಶದಿಂದಲಾಗಲಿ, ನಮ್ಮಂಥವರ ಘೋಶನೆಗಳಿನ್ದಾಗಲಿ(ಬುರ್ಖಾ ಬೇಕು -ಬೇಡ) ಇಲ್ಲವಾಗಿಸೋದು ಸಾಧ್ಯವಿಲ್ಲ. ಬದಲಿಗೆ ಅವರ ಬದುಕಿನಲ್ಲಿ (ಶಿಕ್ಷಣದ ಮೂಲಕ, ಸ್ವಾವಲಂಬಿ ಸಾಧನೆಗಳ ಮೂಲಕ) ಬದಲಾವನೆಗಳಾದಾಗ ಧಿರಿಸಿನಲ್ಲೂ ಸಹಜವಾಗಿ ಬದಲಾವಾನೆ ಆಗುತ್ತದೆ. ಇದನ್ನು ನನ್ನ ಲೇಖನದಲ್ಲಿ ನಾನು ಹೇಳಿದೆ. ಆದರೆ ಇಲ್ಲಿ ಕೆಲವು ಚಿಂತಕರು ಬುರ್ಖಾ ಹೋದರೆ ಅವರ ಬದುಕಿನಲ್ಲಿ ಬದಲಾವಣೆ ಯಾಗುತ್ತೆ ಎಂದು ಚರ್ಚಿಸಿದರು. ನಾನು, ಬದುಕಿನಲ್ಲಿ ಬದಲಾವಣೆಯಾದರೆ ಧಿರಿಸಿನಲ್ಲಿ ಬದಲಾವಣೆಯಾಗುತ್ತದೆ ಎಂದೇ. ಅಷ್ಟೇ. ಇಲ್ಲಿ ಬುರ್ಖಾ ಕುರಿತಂತೆ ಮಾತನಾಡಿದ ದಿನೇಶ್ ಅಮೀನ್ ಮಟ್ಟು, ಜಿ. ಎನ್. ನಾಗಾರಾಜ್ ರಂಥವರು ಮುಸ್ಲಿಂ ಸಮುದಾಯದ ಕುರಿತಂತೆ ಇಟ್ಟಿರುವ ಕಾಳಜಿಯ ಬಗ್ಗೆ ನನಗಂತೂ ಯಾವ ಅನುಮಾನವೂ ಇಲ್ಲ. ದಲಿತರು, ಅಲ್ಪಸಂಖ್ಯಾತರು, ದುರ್ಬಲರ ಪರವಾಗಿ ಅಮೀನು ಮಟ್ಟು ತಳೆಯುತ್ತಾ ಬಂದಿರುವ ನಿಲುವು ಅತ್ಯಂತ ಶ್ರೇಷ್ಠ ವಾದುದು. ಅದರ ಬಗ್ಗೆ ಅನುಮಾನ ವ್ಯಕ್ತ ಪಡಿಸೋದು ನಮಗೆ ನಾವೇ ದ್ರೋಹ ಮಾಡಿಕೊಂಡಂತೆ. ಈ ಚರ್ಚೆಯ ಬಳಿಕ ಮಟ್ಟು, ನಾಗರಾಜ್ ಕುರಿತಂತೆ ನನ್ನ ಪ್ರೀತಿ ದುಪ್ಪಟ್ಟಾಗಿದೆ. ಉಳಿದಂತೆ ನನ್ನ ಲೇಖನದಲ್ಲಿ ಬಳಸಿದ "ಸೆರಗಿಗೆ ಕೈ ಹಾಕಿದಂತೆ" "ವೈಚಾರಿಕ ಮೂಲಭೂತವಾದಿ" ಎನ್ನೋ ಶಬ್ದ ಮಟ್ಟು ಸೇರಿದಂತೆ ಕೆಲವು ಗೆಳೆಯರಿಗೆ ತೀವ್ರ ನೋವು ಕೊಟ್ಟಿದೆ ಎಂದು ತಿಳಿಯಿತು. ಇದು ಉದ್ದೇಶ ಪೂರ್ವಕವಾಗಿ ಅಥವಾ ಯಾರಿಗೋ ವೈಯಕ್ತಿಕವಾಗಿ ಬಳಸಿದ ಶಬ್ದ ಅಲ್ಲ. ಆದರೂ ಈ ಶಬ್ದ ಬಳಕೆ ಋಣಾತ್ಮಕವಾದುದನ್ನು ಧ್ವನಿಸುತ್ತದೆ ಎಂದು ನನಗೂ ಈಗ ಅನ್ನಿಸುತ್ತಿದೆ. ಇದಕ್ಕಾಗಿ ನಾನು ವಿಷಾದಿಸುತ್ತಿದ್ದೇನೆ. ಮತ್ತು ಈ ಎರಡೂ ವಾಕ್ಯವನ್ನು ನಾನು ಹಿಂದಕ್ಕೆ ತೆಗೆದುಕೊಂಡಿದ್ದೇನೆ. ಅದಕ್ಕೆ ಕತ್ತರಿ ಹಾಕಿದ್ದೇನೆ. ನನ್ನ ಬರಹದಿಂದ ಯಾರಿಗೇ ನೋವಾಗಿದ್ದರು ಕ್ಷಮೆ ಇರಲಿ. ಈ ಚರ್ಚೆ ಒಂದು ಒಳ್ಳೆಯ ಸಮಾಜವೊಂದನ್ನು ನಿರ್ಮಿಸಲು ಪೂರಕವಾಗಲಿ ಎಂದು ನಾನು ಬಯಸುತ್ತೇನೆ. ಇಲ್ಲಿಗೆ ಈ ಕುರಿತಂತೆ ನನ್ನ ಭಾಗದ ಹೇಳಿಕೆ ಪ್ರತಿ ಹೇಳಿಕೆಗಳನ್ನು ನಿಲ್ಲಿಸಿದ್ದೇನೆ

11 comments:

  1. Most of muslim womans who wearing burka is by choice , not by force..This article justifies that..Nice Article

    ReplyDelete
  2. Alaashh!
    you failed to understand the very simple but important question Sir Dinesh Mattu raised!! Mr. Basheer, pls understand even "Mades Snana" will also dissappear with the time , education and knowledge..not by force..your own words.." ಕಿತ್ತೆಗೆಯಲು ಹೋದಂತೆಯೇ ಅದು ಬಿಗಿಯಾಗುತ್ತಾ ಹೋಗುತ್ತದೆ. .." the way you defended burkha...allow every relegion people to follow thier own style Basheer..who are you to put your hand on others life...""ಹೀಗಿರುವಾಗ ಒಬ್ಬ ಮಹಿಳೆ ಧರಿಸಿದ ಧಿರಿಸಿಗೆ ನಾವು ಕೈ ಹಾಕುವುದು ಎಂದರೆ ಪರೋಕ್ಷವಾಗಿ ಆಕೆಯ ಸೆರಗಿಗೆ ಕೈ ಹಾಕಿದಂತೆಯೇ ಹೌದು..." some relegious offerings too thier very personal... Yess i too agree it should go..but as you only said..." ಉದುರುವುದಿದ್ದರೂ ಅದೇ ದಾರಿಯಲ್ಲಿ ಉದುರಬೇಕೇ ಹೊರತು, ..".

    how difficult you felt to deffend Burkha Basheer..!! Just tell me , what new thing..new "Gyaan" you gave in this write up??? Nothing... So be sensitive with every human life & its behavioural Pattern Basheer...dont be cynic...

    P M Kathalsar.

    ReplyDelete
  3. Main difference between muslim and non-muslim women is code of dress. by maintaining her code of dress a muslim women is having liberty to undertake any permissible education or profession. vis-a-vis she can become a doctor, engineer, pilot, politician, defence personal etc. etc. here code of dress prescribed for muslim women is full dress covering head. so, that full dress need not to be only burkha...it can be anything else. in precise she has to be fuily covered that's it!

    ReplyDelete
  4. ಬುರ್ಖ ಹಾಕೋದಿದ್ರೆ ಹಾಕ್ಬೋದು, ಬೇಡ ಅನ್ನೋರು ಬಿಡಬಹುದು ಅನ್ನೋ ಥರದ ಸಮರ್ಥನೆ! ಇಸ್ಲಾಂ ಮೈತುಂಬ ಬಟ್ಟೆ ಹಾಕುವುದನ್ನಷ್ಟೇ ಹೇಳುತ್ತದೆ ಎನ್ನುವವರು ಬಟ್ಟೆಯ ಮೇಲೆ ಹಾಕುವ ಬುರ್ಖವನ್ನೇಕೆ ಸಮರ್ಥಿಸುತ್ತೀರಿ? ಬಟ್ಟೆ ಸಮಸ್ಯೆಯನರಿತು ಅಗತ್ಯ ಬಟ್ಟೆಗಳನ್ನಷ್ಟೇ ತೊಟ್ಟು ಬದುಕಿದ ಗಾಂಧಿಯೇಕೆ ನಮಗೆ ಆದರ್ಶವಾಗುವುದಿಲ್ಲ? ದಿನೇಶ್ ಅಮೀನ್ ಮಟ್ಟು ಸರ್ ಪ್ರತಿಪಾದಿಸಿದ್ದರಲ್ಲಿ ಸತ್ಯವಿದೆ, ನಮ್ಮಲ್ಲಿನ ಹುಳುಕುಗಳನ್ನು ಹೆಕ್ಕಿ ಗುಡಿಸಿಕೊಳ್ಳದ ಹೊರತು ಪರರ ಮನೆಯಂಗಳ ಹಾಗಿದೆ, ಹೀಗಿದೆ ಅನ್ನೋದು ಹಾಸ್ಯಾಸ್ಪದಬಾಗಬಹುದು.

    - ಪ್ರಸಾದ್.ಡಿ.ವಿ.

    ReplyDelete
  5. Wah! Empty logic to justify burkha!

    ReplyDelete
  6. ಅನ್ಯರ ತಪ್ಪುಗಳನ್ನು ಹುಡುಕುವಾಗ ನಿಷ್ಠುರ ನ್ಯಾಯಾದೀಶರಾಗುವ ನಾವು, ನಮ್ಮದೇ ವಿಚಾರಗಳು ಬಂದಾಗ ಬಹುಶಃ ವ್ಯತಿರಿಕ್ತವಾಗಿ ವರ್ತಿಸಿಬಿಡುತ್ತೇವೆ ಅನ್ನೋದು ನಿಜ ಆಯ್ತು ಬಿಡಿ ಸಾರ್.

    ReplyDelete
  7. ಬಷೀರ್ ಅವರಿಗೆ-- ತಮ್ಮ ಲೇಖನ ಇಂದು ಬುರ್ಖಾ ಅನಿವಾರ್ಯವೇನೂ ಅಲ್ಲ ಎಂಬ ನಿಲುವು ತಳೆಯುವುದಕ್ಕಿಂತ ಬದಲಾಗಿ ಬುರ್ಖಾ ಹಾಕಿಕೊಂಡರೆ ಇತರರಿಗೆ ಏನು ಕಷ್ಟ? ಅವರವರ ಇಷ್ಟ. ಇತರರಿಗೇಕೆ ಈ ಎಲ್ಲಾ ಉಸಾಬರಿ? ಎಂಬ ನಿಲುವನ್ನು ಬಲವಾಗಿ ಸಮರ್ಥಿಸುತ್ತಿದೆ. ಅದರ ಬದಲು ಹೆಣ್ಣಿಗೆ ಮಾತ್ರ ಏಕೆ ಬಟ್ಟೆಯ ವಿಷಯದಲ್ಲಿ restrictions? ಮುಸ್ಲಿಂ ಗಂಡಸರಿಗೆ ಏಕೆ ಇಲ್ಲ? ಇದು ಅಸಮಾನತೆ ಅಲ್ಲವೇ? ಮುಸ್ಲಿಮೇತರರು ಅವರವರ ಇಷ್ಟದಂತೆ ತಮ್ಮ ತಮ್ಮ ಆಚರಣೆಗಳನ್ನು ಆಚರಿಸುತ್ತಿದ್ದರೆ ಅದನ್ನು 'ಪ್ರಗತಿ ಪರರು', ವೈಚಾರಿಕ ಮನೋಭಾವನೆಯವರು' ವಿರೋಧಿಸುವುದೂ , ಅಸಮಾನತೆ ಎನ್ನುವುದೂ ತಪ್ಪು ಅಲ್ಲವೇ? ಎಂಬ ಒಂದೆರೆಡು ಸಾಲು ನಿಮ್ಮ ಲೇಖನದಲ್ಲಿದ್ದರೆ ನಿಮ್ಮದು ಸಮ ತೂಕದ ಮಾತುಗಳಾಗುತ್ತಿತ್ತು. ಆದರೆ ನಿಮ್ಮ ಲೇಖನ ಹಾಗೆ ಆಗಿಲ್ಲ . ಈ ಲೇಖನದಲ್ಲಿನ ತಮ್ಮ ಒಂದೆರೆಡು ಅಭಿಪ್ರಾಯಗಳ ಬಗ್ಗೆ ----
    (೧)>>>'ಬಟ್ಟೆ ಎನ್ನುವುದು ಧರಿಸುವವರ ಆಯ್ಕೆಯೇ ಹೊರತು, ನೋಡುವವರ ಆಯ್ಕೆ ಅಲ್ಲ >>>' ಈ ಮಾತು ಅತಾರ್ಕಿಕ . ಮದುವೆ , ಗೃಹ ಪ್ರವೇಶ, ಕಾಲೇಜಿನ get together , ಇತ್ಯಾದಿ ಒಂದು ಶುಭ ಸಮಾರಂಭದಲ್ಲಿ ಗಂಡಾಗಲಿ ಹೆಣ್ಣಾಗಲಿ ಧರಿಸುವ ಬಟ್ಟೆ ನೋಡುವವರ ಆಯ್ಕೆಯೇ ಆಗಿರುತ್ತದೆ. ಅಲ್ಲಿ ಎಷ್ಟು grand ಆಗಿ ಹೋದರೂ ಚೆನ್ನವೇ. ಆದರೆ ಸಾವಿನ ಸೂತಕದ ಮನೆಗೆ ಹೋಗುವುದು ಸತ್ತವರ ಸಂಬಂಧಿಕರನ್ನು ಸಂತೈಸಲಿಕ್ಕಾಗಿಯೇ ಹೊರತು ನಾವು ಧರಿಸುವ ಬಟ್ಟೆಯ ಪ್ರದರ್ಶನಕ್ಕಲ್ಲ. ಸಾವಿನ ಮನೆಗೆ ಹೋಗುವಾಗ ನಾವು ತುಂಬಾ ಸರಳವಾಗಿರಬೇಕಾದ್ದು ಮುಖ್ಯ.
    (೨)>>> 'ಬಟ್ಟೆಗಾಗಿ ಬದುಕು ಅಲ್ಲ. ಬದುಕಿಗಾಗಿ ಬಟ್ಟೆ'>>> ಮುಸ್ಲಿಮೇತರ ಹೆಣ್ಣು ಮಕ್ಕಳು, ವಯಸ್ಕರು ಬುರ್ಖಾ ಇಲ್ಲದೆ ಬದುಕು ಸಾಗಿಸುತ್ತಿರುವಾಗ ಮುಸ್ಲಿಂ ಹೆಣ್ಣು ಮಕ್ಕಳನ್ನು ಬುರ್ಖಾ ಧರಿಸುವಂತೆ ಒತ್ತಾಯಿಸುತ್ತಿರುವ 'ಶಕ್ತಿ' ಯಾವುದು? ಧರ್ಮವೇ? ಸಂಸ್ಕೃತಿಯೇ? ಆಚರಣೆಯೇ? ರೂಢಿಯೇ? ಅಥವಾ ಮೂಢ ನಂಬಿಕೆಯೇ? ಇವುಗಳಲ್ಲಿ ಕನಿಷ್ಠ ಯಾವುದಾದರೊಂದರ "ಒತ್ತಾಯ" ಇರಲೇಬೇಕಲ್ಲವೇ? ಅದು ಯಾವುದು? ಬುರ್ಖಾ ಧರಿಸದೆ ಬದುಕುವುದು ಮುಸ್ಲಿಂ ಸಮಾಜದಲ್ಲಿ ಕಷ್ಟ ಆಗುವುದು ಏಕೆ? ( ರಾಜಕೀಯ,ಕ್ರೀಡೆ,ಸಿನಿಮಾ ಇತ್ಯಾದಿ ರಂಗಗಳಲ್ಲಿರುವ celebrity ಗಳನ್ನು ಹೊರತುಪಡಿಸಿ)
    (೩)>>>'ನಾನು ಧರಿಸುವ ಧಿರಿಸನ್ನು ಬದಲಾಯಿಸುವ ಕಡೆಗೆ ಹೆಚ್ಚು ಆಸಕ್ತನಾಗಿಲ್ಲ '>>> ಏಕೆ? ನಿಮ್ಮದು ಒಂಟಿ ದನಿ ಆಗುತ್ತದೆ ಎಂಬ ಕಳವಳವೇ? ಅನಗತ್ಯವಾಗಿ ನಿಮ್ಮ ಸಮಾಜದಲ್ಲಿ, ಬಂಧು-ಬಾಂಧವರಲ್ಲಿ ನಿಮಗೆ ಆಗುವ ಇರಿಸು ಮುರಿಸನ್ನು ತಪ್ಪಿಸುವುದಕ್ಕೊಸ್ಕರವೇ?
    ----ಮು ಅ ಶ್ರೀರಂಗ ಬೆಂಗಳೂರು

    ReplyDelete
  8. ಈ ಮಾತನ್ನು ಒಬ್ಬ ಬುರ್ಕಾ ತೊಡುವ ಮಹಿಳೆ ಹೇಳಿ ವಾದ ಮಾಡಿದ್ದರೆ ಅದಕ್ಕೆ ಮೌಲ್ಯ ಬರುತ್ತಿತ್ತು. ಪುರುಷ ಪ್ರಧಾನ ಸಮಾಜದ ಧೋರಣೆ ಇಲ್ಲೂ ಒಬ್ಬ ಪ್ರಗತಿ ಪರ ಅನ್ನಿಸಿಕೊಂಡ ಬರಹಗಾರನಿಂದ ಬಂದಿರೋದು ವಿಷಾದದ ಸಂಗತಿ. ದಿನೇಶ್ ರಂಥ ಉದಾರವಾದಿಗಳು ಸಮಾಜದ ಆರೋಗ್ಯ ಸುಧಾರಿಸಲು ಹೇಳಿದ ಒಂದು ಸಂಧರ್ಬೋಚಿತ ಮಾತಿನ ಹೆಳೆಯನ್ನು ಎಳೆದು ತನ್ನ ಧರ್ಮದ ಅಂಧಕಾರದ ಪ್ರದರ್ಶನ ತೋರುವ ಅಗತ್ಯ ಇರಲಿಲ್ಲ.

    ReplyDelete
  9. ಅಮೀನ್ ಅಹ್ಸನ್September 10, 2014 at 9:56 PM

    ಹುಡುಗಿ ಪುತ್ತೂರು ತಾಲೂಕಿನವಳು. ಯಾಕೆ ನಿಮ್ಮ ತಾಲೂಕನ್ನು ಕಡೆಗಣಿಸುತ್ತಿದ್ದೀರಿ.?

    ReplyDelete
  10. ಧರ್ಮದೊಳಗಿನ ಯಾವುದೇ ಮೌಡ್ಯಗಳ ಕುರಿತು ಮಾತಾಡಿದಂತೆ ಆಹಾರ ಮತ್ತು ಉಡುಪಿನ ಕುರಿತಂತೆ ಬೀಸಾಗಿ ಮಾತನಾಡೂದು ಕೆಲವೊಮ್ಮೆ ತಪ್ಪು ಧ್ವನಿಗಳನ್ನು ನೀಡಬಹುದು. ನೀವು ಬುರ್ಖಾ ಯಾಕೆ ಧರಿಸುತ್ತೀರಿ, ಸ್ಕಾರ್ಫ್ ಯಾಕೆ ಧರಿಸುತ್ತೀರಿ ? ಎಂಬ ಪ್ರಶ್ನೆ ನೀವು ಗೋಮಾಂಸ ಯಾಕೆ ಸೇವಿಸುತ್ತೀರಿ ಎಂದು ಕೆಲವರು ಕೇಳಿದಂತೆಯೇ ಧ್ವನಿಸೋದು ಇದೆ ಕಾರಣಕ್ಕೆ. (ಕೆಲವು ಹುಡುಗರು ಬುರ್ಖಾ, ಸ್ಕಾರ್ಫ್, ನಿಕಾಬ್ ಇವುಗಳ ವ್ಯತ್ಯಾಸವೇ ತಿಳಿಯದೆ ವಾದಿಸುತ್ತಿದ್ದರು). ಯಾವುದೇ ಕಾರಣಕ್ಕೆ ಒಂದು ಉಡುಪು ಧಾರಣೆ ಆರಂಭವಾಗಲಿ, ಧರಿಸುತ್ತಾ ಹೋದಂತೆ ಅದು ನಿಧಾನಕ್ಕೆ ಬದುಕಿನ, ಮೈ ಮೇಲಿನ ಸಂವೇದನೆಯ ಭಾಗವಾಗುತ್ತದೆ. ಆದುದರಿಂದಲೇ ಇದು ಯಾವುದೇ ಆದೇಶದಿಂದಲಾಗಲಿ, ನಮ್ಮಂಥವರ ಘೋಶನೆಗಳಿನ್ದಾಗಲಿ(ಬುರ್ಖಾ ಬೇಕು -ಬೇಡ) ಇಲ್ಲವಾಗಿಸೋದು ಸಾಧ್ಯವಿಲ್ಲ. ಬದಲಿಗೆ ಅವರ ಬದುಕಿನಲ್ಲಿ (ಶಿಕ್ಷಣದ ಮೂಲಕ, ಸ್ವಾವಲಂಬಿ ಸಾಧನೆಗಳ ಮೂಲಕ) ಬದಲಾವನೆಗಳಾದಾಗ ಧಿರಿಸಿನಲ್ಲೂ ಸಹಜವಾಗಿ ಬದಲಾವಾನೆ ಆಗುತ್ತದೆ. ಇದನ್ನು ನನ್ನ ಲೇಖನದಲ್ಲಿ ನಾನು ಹೇಳಿದೆ. ಆದರೆ ಇಲ್ಲಿ ಕೆಲವು ಚಿಂತಕರು ಬುರ್ಖಾ ಹೋದರೆ ಅವರ ಬದುಕಿನಲ್ಲಿ ಬದಲಾವಣೆ ಯಾಗುತ್ತೆ ಎಂದು ಚರ್ಚಿಸಿದರು. ನಾನು, ಬದುಕಿನಲ್ಲಿ ಬದಲಾವಣೆಯಾದರೆ ಧಿರಿಸಿನಲ್ಲಿ ಬದಲಾವಣೆಯಾಗುತ್ತದೆ ಎಂದೇ. ಅಷ್ಟೇ. ಇಲ್ಲಿ ಬುರ್ಖಾ ಕುರಿತಂತೆ ಮಾತನಾಡಿದ ದಿನೇಶ್ ಅಮೀನ್ ಮಟ್ಟು, ಜಿ. ಎನ್. ನಾಗಾರಾಜ್ ರಂಥವರು ಮುಸ್ಲಿಂ ಸಮುದಾಯದ ಕುರಿತಂತೆ ಇಟ್ಟಿರುವ ಕಾಳಜಿಯ ಬಗ್ಗೆ ನನಗಂತೂ ಯಾವ ಅನುಮಾನವೂ ಇಲ್ಲ. ದಲಿತರು, ಅಲ್ಪಸಂಖ್ಯಾತರು, ದುರ್ಬಲರ ಪರವಾಗಿ ಅಮೀನು ಮಟ್ಟು ತಳೆಯುತ್ತಾ ಬಂದಿರುವ ನಿಲುವು ಅತ್ಯಂತ ಶ್ರೇಷ್ಠ ವಾದುದು. ಅದರ ಬಗ್ಗೆ ಅನುಮಾನ ವ್ಯಕ್ತ ಪಡಿಸೋದು ನಮಗೆ ನಾವೇ ದ್ರೋಹ ಮಾಡಿಕೊಂಡಂತೆ. ಈ ಚರ್ಚೆಯ ಬಳಿಕ ಮಟ್ಟು, ನಾಗರಾಜ್ ಕುರಿತಂತೆ ನನ್ನ ಪ್ರೀತಿ ದುಪ್ಪಟ್ಟಾಗಿದೆ. ಉಳಿದಂತೆ ನನ್ನ ಲೇಖನದಲ್ಲಿ ಬಳಸಿದ "ಸೆರಗಿಗೆ ಕೈ ಹಾಕಿದಂತೆ" "ವೈಚಾರಿಕ ಮೂಲಭೂತವಾದಿ" ಎನ್ನೋ ಶಬ್ದ ಮಟ್ಟು ಸೇರಿದಂತೆ ಕೆಲವು ಗೆಳೆಯರಿಗೆ ತೀವ್ರ ನೋವು ಕೊಟ್ಟಿದೆ ಎಂದು ತಿಳಿಯಿತು. ಇದು ಉದ್ದೇಶ ಪೂರ್ವಕವಾಗಿ ಅಥವಾ ಯಾರಿಗೋ ವೈಯಕ್ತಿಕವಾಗಿ ಬಳಸಿದ ಶಬ್ದ ಅಲ್ಲ. ಆದರೂ ಈ ಶಬ್ದ ಬಳಕೆ ಋಣಾತ್ಮಕವಾದುದನ್ನು ಧ್ವನಿಸುತ್ತದೆ ಎಂದು ನನಗೂ ಈಗ ಅನ್ನಿಸುತ್ತಿದೆ. ಇದಕ್ಕಾಗಿ ನಾನು ವಿಷಾದಿಸುತ್ತಿದ್ದೇನೆ. ಮತ್ತು ಈ ಎರಡೂ ವಾಕ್ಯವನ್ನು ನಾನು ಹಿಂದಕ್ಕೆ ತೆಗೆದುಕೊಂಡಿದ್ದೇನೆ. ಅದಕ್ಕೆ ಕತ್ತರಿ ಹಾಕಿದ್ದೇನೆ. ನನ್ನ ಬರಹದಿಂದ ಯಾರಿಗೇ ನೋವಾಗಿದ್ದರು ಕ್ಷಮೆ ಇರಲಿ. ಈ ಚರ್ಚೆ ಒಂದು ಒಳ್ಳೆಯ ಸಮಾಜವೊಂದನ್ನು ನಿರ್ಮಿಸಲು ಪೂರಕವಾಗಲಿ ಎಂದು ನಾನು ಬಯಸುತ್ತೇನೆ. ಇಲ್ಲಿಗೆ ಈ ಕುರಿತಂತೆ ನನ್ನ ಭಾಗದ ಹೇಳಿಕೆ ಪ್ರತಿ ಹೇಳಿಕೆಗಳನ್ನು ನಿಲ್ಲಿಸಿದ್ದೇನೆ

    ReplyDelete