Wednesday, March 12, 2014

ಏ ಬುಲ್ ಬುಲ್ ಮಾತಾಡಕಿಲ್ವಾ....?

ಉಪ್ಪಿನಂಗಡಿಯ ಪ್ರೀತಂ ಟಾಕೀಸು. 1.50 ರೂಪಾಯಿಯ ಟಿಕೆಟ್. ಮುಂದೆ ಕುಳಿತರೆ ತುಂಬಾ ಚೆನ್ನಾಗಿ ಕಾಣುತ್ತದೆ ಎಂದು ನಾನು ಮತ್ತು ನನ್ನ ಗೆಳೆಯ ಮುಂದಿನ ಗಾಂಧಿ ಕ್ಲಾಸಲ್ಲಿ ಬೆಂಚಿನ ಮೇಲೆ ಕುಳಿತು ನೋಡಿದ ಚಿತ್ರ ಅದು. ಹೆಸರು ‘ಅಂತ’. ‘‘ಕುತ್ತೇ ಕನ್ವರ್ ಲಾಲ್ ಬೋಲೋ...’’ ಎನ್ನುವ ಕನ್ವರ್ ಲಾಲ್‌ನ ಒರಟು ಧ್ವನಿ ನಮ್ಮೆದೆಯೊಳಗೆ ಗಾಜಿನ ಚೂರುಗಳಂತೆ ಇಳಿಯುತ್ತಿತ್ತು. ಹಣೆ ಯಿಂದ ಸುರಿಯುತ್ತಿರುವ ಬೆವರು ಕನ್ವರ್‌ಲಾಲ್‌ನ ಕ್ರೌರ್ಯಕ್ಕೋ, ಥಿಯೇಟರ್‌ನ ವಾತಾವರಣಕ್ಕೋ ಗೊತ್ತಿಲ್ಲ. ಇಡೀ ಚಿತ್ರವನ್ನು ನೋಡಿ ಬಂದ ನಾನು ಮನೆ ಯಲ್ಲಿ ಅದೇನೋ ದುಸ್ವಪ್ನ ಬಿದ್ದವನಂತೆ ಗುಮ್ಮನೆ ಕೂತಿದ್ದೆ. ಮನೆಯವರಾ ರಿಗೂ ಆ ಸಣ್ಣ ವಯಸ್ಸಲ್ಲಿ ನಾನು ಕದ್ದುಮುಚ್ಚಿ ಸಿನಿಮಾ ನೋಡೋದಕ್ಕೆ ಹೋಗೋದು ಗೊತ್ತಿಲ್ಲ. ಇಂದಿಗೂ ನೆನಪಿದೆ. ಅಂದು ಸುಶೀಲ್ ಕುಮಾರ್‌ನ ಚೀರಾಟ ನನ್ನ ರಾತ್ರಿಯ ನಿದ್ದೆಯನ್ನು ಅಲುಗಾಡಿಸಿತ್ತು. ಕರೆಂಟ್ ಶಾಕ್ ಮತ್ತು ಉಗುರುಗಳನ್ನು ಕೀಳುವ ಚಿತ್ರಹಿಂಸೆಗಳ ನಡುವೆ ನಾಯಕನ ಚೀರಾಟ...ಅವುಗಳ ನಡುವೆಯೂ ಆತನ ಆತ್ಮಸ್ಥೆೃರ್ಯ, ಗರ್ಭಿಣಿ ಪತ್ನಿಯನ್ನು ಸಾಯಿಸುತ್ತಿದ್ದರೂ ಅಸಹಾಯಕನಾಗಿ ನರಳುವ ಸುಶೀಲ್‌ಕುಮಾರ್, ಆತನ ಆಕ್ರಂದನ.. ಓಹ್! ಅದಾಗಲೇ ಡಾ.ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಬದಲಿಗೆ ನಾನು ನನ್ನ ನಾಯಕನನ್ನು ಆರಿಸಿ ಕೊಂಡಿದ್ದೆ. ಆತನ ಹೆಸರೇ ಅಂಬರೀಷ್!

 ಅದು ಡಾ. ರಾಜ್‌ಕುಮಾರ್ ಕನ್ನಡ ಚಿತ್ರೋದ್ಯಮವನ್ನು ಆಳುತ್ತಿದ್ದ ಕಾಲ. ಶ್ರೀಕೃಷ್ಣದೇವರಾಯ, ಮಯೂರ, ಗಂಧದಗುಡಿ ಹೀಗೆ ರಾಜ್ ಕುಮಾರ್ ಸಿನಿಮಾದಲ್ಲೇ ಒಂದು ಕಲ್ಪನೆಯ ಕನ್ನಡ ನಾಡನ್ನು ಕಟ್ಟಿದ್ದರು. ಮತ್ತು ನಾವಿಂದು ಅದೇ ಕಲ್ಪನೆಯ ನಾಡನ್ನೇ ನಮ್ಮದೆಂದು ಒಪ್ಪಿ ಕೊಂಡು ಅದರಲ್ಲಿ ಬಾಳುತ್ತಿದ್ದೇವೆ. ಇಂತಹ ಹೊತ್ತಿನಲ್ಲಿ ಗಾಂಧಿನಗರಕ್ಕೆ ನಾಗರಹಾವಿನ ಪ್ರವೇಶವಾಯಿತು. ಆತನ ಹೆಸರು ವಿಷ್ಣುವರ್ಧನ್. ಅಂದು ಯುವ ತಲೆಮಾರು ರಾಜ್‌ಕುಮಾರ್‌ನನ್ನು ಅಧಿಕತವಾಗಿ ಒಪ್ಪಿಯೇ ಬಿಟ್ಟಿತ್ತು. ಅವರಿಗೆ ಪರ್ಯಾಯ ವೆನ್ನುವುದೇ ಇರಲಿಲ್ಲ. ಇಂತಹ ಹೊತ್ತಿನಲ್ಲಿ ಕೆಲವು ಸ್ವರಗಳು ಭಿನ್ನವಾಗತೊಡಗಿ ದವು. ‘‘ನಾನು ವಿಷ್ಣುವರ್ಧನ್ ಅಭಿಮಾನಿ’’ ಎಂಬ ಬಂಡಾಯದ ಮಾತುಗಳು ಕೆಲವರ ಸಹನೆಯನ್ನು ಕೆಡಿಸತೊಡ ಗಿತು. ಶಾಲೆಗಳಲ್ಲೇ ಯುವಕರೊಳಗೆ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಗುಂಪುಗಳು ಹುಟ್ಟಿ ಕೊಂಡವು. ವಿಶೇಷವೆಂದರೆ, ರಾಜ್ ಕುಮಾರ್ ನನ್ನು ಬಿಟ್ಟು ವಿಷ್ಣುವರ್ಧನ್‌ನನ್ನು ಇಷ್ಟಪಡುವು ದೆಂದರೆ ಅದೊಂದು ರೀತಿ, ಸಂಪ್ರ ದಾಯವನ್ನು ಬಿಟ್ಟು ಹೊಸತನಕ್ಕೆ ತುಡಿಯುವ ಸಂಗತಿ ಯಾಗತೊಡಗಿತು. ಹೊಸತನ್ನು ಆಲೋಚಿ ಸುತ್ತೇವೆ ಎಂದು ಭಾವಿಸಿದವರು ವಿಷ್ಣುವರ್ಧನ್‌ನ ಫೋಟೋ ಹಾಕಿಕೊಂಡು ತಿರುಗಾಡತೊಡಗಿ ದರು. ನಮ್ಮ ನಮ್ಮ ಅಭಿಮಾನಿಗಳನ್ನು ನಾವು ಗುರುತಿಸುವುದು ಪುಸ್ತಕಕ್ಕೆ ಹಾಕುವ ಬೈಂಡ್‌ಗಳ ಮೂಲಕ. ಆಗ ‘ರೂಪತಾರ’ ಮತ್ತು ‘ವಿಜಯ ಚಿತ್ರ’ ಎನ್ನುವ ಎರಡು ಸಿನಿಮಾ ಪತ್ರಿಕೆಗಳಿದ್ದವು. ಹಾಗೆಯೇ ‘ಪ್ರಜಾಮತ’ ಎಂಬ ದೊಡ್ಡ ಸೈಜಿನ ವಾರ ಪತ್ರಿಕೆಯ ಮುಖಪುಟದಲ್ಲಿ ಸಿನಿಮಾ ತಾರೆಯರ ಫೋಟೋವನ್ನೇ ಹಾಕುತ್ತಿದ್ದರು. ಅದನ್ನು ನಾವು ನೋಟ್‌ಬುಕ್‌ಗಳಿಗೆ ಹೊದಿಸಿ ಕೊಳ್ಳುತ್ತಿದ್ದೆವು. ಆಗೆಲ್ಲ ರಾಜ್‌ಕುಮಾರ್ ಹೊದಿಕೆಗಳಿಗೆ ಬೇಡಿಕೆ ಗಳಿತ್ತು. ಆದರೆ ಏಕಾಏಕಿ ವಿಷ್ಣುವರ್ಧನ್ ವಿದ್ಯಾರ್ಥಿಗಳ ನೋಟ್‌ಬುಕ್ ಗಳಲ್ಲಿ ಕಾಣಿಸಿಕೊಳ್ಳತೊಡ ಗಿದರು. ಬಂಧನದ ಬಳಿಕವಂತೂ ಎಲ್ಲರೂ ಕ್ಯಾನ್ಸರ್ ಪೇಶಂಟ್ ಗಳಂತೆಯೇ ಕೆಮ್ಮುತ್ತಾ ಓಡಾಡುತ್ತಿ ದ್ದರು ಬಿಡಿ.


    ಇಂತಹ ಹೊತ್ತಿನಲ್ಲೇ ನಾನು ಪ್ರೀತಂ ಟಾಕೀಸ್‌ನಲ್ಲಿ ‘ಅಂತ’ ಪಿಚ್ಚರ್ ನೋಡಿದ್ದು. ಈ ಸಿನಿಮಾವೋ ಅಥವಾ ಅಂಬರೀಷ್ ಅಭಿನ ಯವೋ ನನ್ನನ್ನು ಸಂಪೂರ್ಣ ಅಲುಗಾಡಿಸಿತ್ತು. ರಾಜ್‌ಕುಮಾರ್‌ನ ಸಜ್ಜನಿಕೆ, ವಿಷ್ಣುವರ್ಧನ್‌ನ ಆಪ್ತತೆ ಎಲ್ಲಕ್ಕಿಂತಲೂ ಹೆಚ್ಚು ಇಷ್ಟವಾಯಿತು ಅಂಬರೀಷ್‌ರ ಆಕ್ರೋಶ. ಬಹುಶಃ ಅದು ಅದಾಗಲೇ ನನ್ನೊಳಗೆ ತಣ್ಣಗೆ ಮಲಗಿದ್ದ ಅರಾಜಕ ನನ್ನು ಎಚ್ಚರಿಸಿತ್ತು ಎಂದು ಕಾಣುತ್ತದೆ. ಈ ಚಿತ್ರದ ಬಳಿಕ ನಾನು ಚಕ್ರವ್ಯೆಹವನ್ನು ನೋಡಿದೆ. ಒಂದು ರೀತಿಯ ಜನಪ್ರಿಯ ರಾಜಕೀಯ ಚಿಂತನೆ ಯನ್ನು ಮೊತ್ತ ಮೊದಲಾಗಿ ಬಿತ್ತಿದ್ದು ಅಂಬರೀಷ್ ಚಿತ್ರಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜಕಾರಣಿಗಳೆಲ್ಲ ಭ್ರಷ್ಟರು. ಮತ್ತು ನಾಯಕ ಅವರ ವಿರುದ್ಧ ಹೋರಾಡುವುದು ಅನಿವಾರ್ಯ ಎನ್ನುವ ಕಪ್ಪು-ಬಿಳುಪು ರಾಜಕೀಯ ಚಿತ್ರವೊಂದು ಅಂಬರೀಷ್ ಮೂಲಕ ನನ್ನೊಳಗೆ ಅಚ್ಚೊತ್ತಿತು. ಅಂತ, ಚಕ್ರವ್ಯೆಹಗಳ ಬಳಿಕ ನಾನು ಅಂಬರೀಷ್ ಅಭಿಮಾನಿಯಾದೆ. ಇದೇ ಸಂದ ರ್ಭದಲ್ಲಿ ಅಂಬಿಕಾ ಎನ್ನುವ ನಟಿ ಅಂಬರೀಷ್ ನನ್ನು ವಿವಾಹವಾಗುತ್ತಾಳೆಯೋ ಇಲ್ಲವೋ ಎಂದು ನಾನು ತಲೆಕೆಡಿಸುತ್ತಾ ಓಡಾಡಿದೆ. ಗೆಳೆಯ ರೊಂದಿಗೆ ಆ ಬಗ್ಗೆ ಚರ್ಚಿಸುತ್ತಿದ್ದೆೆ. ಗಲಾಟೆ ಮಾಡುತ್ತಿದ್ದೆ. ಅದೇ ಸಂದರ್ಭದಲ್ಲಿ ಗೀತಾ ಮತ್ತು ಅಂಬರೀಷ್ ಜೋಡಿ ಕೂಡ ಕ್ಲಿಕ್ ಆಗಿತ್ತು. ಅಂಬರೀಷ್ ಯಾರನ್ನು ವರಿಸುತ್ತಾರೆ? ಅಂಬಿಕಾಳನ್ನೋ, ಗೀತಾಳನ್ನೋ ಎನ್ನುವುದು ನಾವು ಒಂದಿಷ್ಟು ಮಂದಿ ಕೂತು ಚರ್ಚಿಸುತ್ತಿದ್ದೆವು. ಇದೆಲ್ಲ ನಮ್ಮ ಪ್ರೌಢಶಾಲಾ ಅವಧಿಯಲ್ಲಿ ಎನ್ನು ವುದು ಮುಖ್ಯ. ಅಂಬಿಕಾಳ ಮೇಲೆ ನನಗೇಕೋ ಒಂದಿಷ್ಟು ಒಲವು. ಯಾಕೆಂದರೆ ಅಂಬರೀಷ್‌ನ ತರಹನೇ ಫೈಟ್ ಮಾಡುವುದರಲ್ಲೂ ಅಂಬಿಕಾ ಎಕ್ಸ್‌ಪರ್ಟ್. ಜೋಡಿ ಸರಿಯಾಗುತ್ತೆ ಎನ್ನುವುದು ನನ್ನ ಅನಿಸಿಕೆ. ಪತ್ರಿಕೆಗಳಲ್ಲಿ ಅದಾಗಲೇ ‘ಅಂಬ-ಅಂಬಿ’ ಜೋಡಿಗಳ ಬಗ್ಗೆ ಬಹಳಷ್ಟು ಬರೆಯಲಾಗುತ್ತಿತ್ತು. ಒಟ್ಟಿನಲ್ಲಿ ಪಠ್ಯಕ್ಕಿಂತಲೂ ಹೆಚ್ಚು ಕ್ಲಿಷ್ಟ ವಿಷಯವಾಗಿತ್ತು ಅಂಬರೀಷ್ ಮದುವೆ. ಕೊನೆಗೂ ಅವರು ಸುಮಲತಾರನ್ನು ಮದುವೆಯಾದದ್ದು ಇತಿಹಾಸ.


  ಪುಟ್ಟಣ್ಣ ಕಣಗಲ್ ಅವರ ‘ನಾಗರಹಾವು’ ಚಿತ್ರದ ಜಲೀಲ್‌ನ ಪಾತ್ರ ನಿಜಕ್ಕೂ ಅದು ಅಂಬರೀಷ್ ವ್ಯಕ್ತಿತ್ವಕ್ಕಾಗಿಯೇ ಕೆತ್ತಿಟ್ಟ ಪಾತ್ರ. ‘ಏ ಬುಲ್ ಬುಲ್, ಮಾತಾಡಕಿಲ್ವಾ...’ ಎನ್ನುವ ಅಂಬರೀಷ್ ಮತ್ತು ಅಂತಹ ವ್ಯಕ್ತಿತ್ವವಿರುವ ಪಾತ್ರಗಳು ಅಂಬರೀಷ್ ಅವರಿಗೆ ಒಪ್ಪುತ್ತಿತ್ತು. ‘ಪಡುವಾರಳ್ಳಿ ಪಾಂಡವರು’ ಚಿತ್ರದಲ್ಲೂ ಅಂಬರೀಷ್‌ಗೆ ಒಳ್ಳೆಯ ಪಾತ್ರವೇ ಸಿಕ್ಕಿತು. ಅವರ ಮುಖ ಮತ್ತು ಧ್ವನಿಯೊಳಗಿರುವ ಒರಟುತನ, ಆಕ್ರೋಶ ಮತ್ತು ಸಹಜ ಬಂಡಾಯವನ್ನು ಗುರುತಿಸಿಯೇ ಅವರು ಪಾತ್ರಗಳಿಗೆ ಆ ಸಂದ ರ್ಭದಲ್ಲಿ ಆಯ್ಕೆಯಾಗುತ್ತಿದ್ದರು. ಆ ಕಾರಣಕ್ಕೆ ಆರಂಭದಲ್ಲಿ ಅವರು ವಿಲನ್ ಆಗಿಯೂ ಕೆಲವು ಚಿತ್ರಗಳಲ್ಲಿ ಗುರುತಿಸಬೇಕಾಯಿತು. ಇದೇ ಸಂದರ್ಭದಲ್ಲಿ, ತನಗೆ ಸಿಗುತ್ತಿರುವ ಏಕತಾ ನತೆಯ ಪಾತ್ರಗಳಿಗೆ ಸವಾಲು ಹಾಕಿ ಅವರು ‘ರಂಗನಾಯಕಿ’ ಚಿತ್ರದಲ್ಲಿ ನಟಿಸಿದರು. ಇದರಲ್ಲಿ ರಂಗನಾಯಕಿ ಚಿತ್ರದ ನಾಯಕಿ ಆರತಿಗೆ ಮಾರ್ಗದರ್ಶಕ ಅಣ್ಣನಾಗಿ ಅವರು ಕಾಣಿಸಿ ಕೊಳ್ಳುತ್ತಾರೆ. ಮತ್ತು ಆರತಿಯನ್ನು ಬಿಟ್ಟರೆ ಈ ಚಿತ್ರದಲ್ಲಿ ಭಾವ ನಾತ್ಮಕವಾಗಿ ತಟ್ಟುವುದು ಅಂಬರೀಷ್ ಅವರೇ. ಅಂಬರೀಷ್‌ನ ಒಡಲಾಳದಲ್ಲಿ ಒಂದು ಒಳ್ಳೆಯತನ, ಸಜ್ಜನಿಕೆ ಇತ್ತು. ಭಾವನಾತ್ಮಕ ಪಾತ್ರದಲ್ಲಿ ಅದು ಅವರೊಳಗಿಂದ ವ್ಯಕ್ತ ವಾಗುತ್ತಿತ್ತು. ಕನ್ವರ್ ಲಾಲ್ ಪಾತ್ರವನ್ನು ನಿರ್ವಹಿಸಿದ ಅಂಬರೀಷ್ ಇವರೇನಾ ಎಂದು ಅಚ್ಚರಿ ಪಡುವಷ್ಟು ಭಾವುಕ ಸನ್ನಿವೇಶಗಳಲ್ಲಿ ಅವರು ನಮ್ಮನ್ನು ಮುಟ್ಟುತ್ತಿದ್ದರು. ಏಳು ಸುತ್ತಿನ ಕೋಟೆ, ಮಸಣದ ಹೂವು ಚಿತ್ರಗಳು ಅವರೊ ಳಗಿನ ಕಲಾವಿದನನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದ ಚಿತ್ರಗಳು. ಅಂಬರೀಷ್ ಕೌಟುಂಬಿಕ ಚಿತ್ರದಲ್ಲೂ ಮಿಂಚಿದರು. ಅವರ ಮಮತೆಯ ಮಡಿಲು, ಒಲವಿನ ಉಡುಗೊರೆ ಮತ್ತು ದೇವರೆಲ್ಲಿದ್ದಾನೆ ಚಿತ್ರಗಳು ಒಂದು ಕಾಲದಲ್ಲಿ ಎಲ್ಲ ಹೆಂಗಳೆಯರ ಕಣ್ಣೀರನ್ನು ತನ್ನದಾಗಿಸಿಕೊಂಡಿತು. ಇದರ ಯಶಸ್ಸಿನಿಂದ ಕೆಲ ಕಾಲ ಅಂಬರೀಷ್ ಮಸಾಲೆ ಚಿತ್ರ ಗಳಿಂದಲೇ ದೂರ ಉಳಿದರು. ಆದರೂ ಅಂಬರೀಷ್ ಎಂದರೆ ಇಂದಿಗೂ ಎಲ್ಲರೂ ಗುರುತಿಸು ವುದು ಅಂತ ಚಿತ್ರದ ಕನ್ವರ್‌ಲಾಲ್‌ನನ್ನೇ. ಹಾಗೆಯೇ ನಾಗರಹಾವು, ಮಗಾಲಯ, ಹದಯ ಹಾಡಿತು, ನ್ಯೂ ಡೆಲ್ಲಿ ಡೈರಿ ಚಿತ್ರಗಳು ಇಂದಿಗೂ ಕಾಡುವಂತಹವುಗಳು. ಅಂಬರೀಷ್ ಚಿತ್ರೋದ್ಯಮದಲ್ಲಿದ್ದೇ ಜನರಿಗೆ ಹತ್ತಿರವಾಗಿದ್ದರು. ತಮ್ಮ ದಾನಧರ್ಮ ಇತ್ಯಾದಿ ಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಅವರು ಯಾವ ಕಾರಣಕ್ಕೂ ರಾಜಕೀಯಕ್ಕೆ ಬರಬಾರದಿತ್ತು. ರಾಜಕೀಯಕ್ಕೆ ಬೇಕಾದ ಶಿಸ್ತು, ಸಮಯ ಪ್ರಜ್ಞೆ ಅವರಲ್ಲಿ ಇದ್ದಿರಲಿಲ್ಲ. ಕುಡಿತ ಮತ್ತು ಸ್ವೇಚ್ಛೆಯ ಬದುಕು ಅವರನ್ನು ಅದಾಗಲೇ ಮುಕ್ಕಿ ತಿಂದಿತ್ತು. ಬರೇ ಅಭಿಮಾನಿಗಳ ಹಾರೈಕೆಯಿಂದ ರಾಜಕೀಯ ಮಾಡಲು ಸಾಧ್ಯವೂ ಇಲ್ಲ. ಈ ಕಾರಣದಿಂದಲೇ ಎಂಪಿ ಯಾಗಿ ಆಯ್ಕೆಯಾದರೂ ಯಾವ ಸಾಧನೆ ಯನ್ನೂ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ಅನಾರೋಗ್ಯಕ್ಕೆ ಒಳಗಾಗುವ ಕೆಲವು ದಿನಗಳ ಮುಂಚೆ ಸ್ಪೀಕರ್ ಕೈಯಿಂದ ತರಾಟೆಗೊಳಗಾಗಿದ್ದರು. ‘‘ನಾವು ಸದನಕ್ಕೆ ಬರುವುದು ಅಪರೂಪ. ಆದುದರಿಂದ ಒಂದಿಷ್ಟು ಹೆಚ್ಚು ಮಾತನಾಡಲು ಅವಕಾಶ ನೀಡಬೇಕು’’ ಎಂಬಂತಹ ಮಾತುಗಳನ್ನು ಸ್ಪೀಕರ್ ಮುಂದೆ ಆಡಿದ್ದರು. ಕಾಗೋಡು ತಿಮ್ಮಪ್ಪ ಇದರಿಂದ ಸಿಟ್ಟುಗೊಂಡು ‘‘ಸದನದ ಗಾಂಭೀರ್ಯವನ್ನು ಕಾಪಾಡಬೇಕು’’ ಎಂದಿದ್ದರು. ಮತ್ತು ಸದನಕ್ಕೆ ಹಾಜರಾಗುವುದು ಶಾಸಕರ, ಸಚಿವರ ಕರ್ತವ್ಯ ಎಂದೂ ಕಿವಿ ಮಾತು ಹೇಳಿದ್ದರು. ಆದರೆ ಇದೀಗ ನೋಡಿದರೆ ಅಂಬರೀಷ್ ಆರೋಗ್ಯ ತೀರಾ ಹದಗೆಟ್ಟಿದೆ. ಅವರ ಅಭಿಮಾನಿಗಳೆಲ್ಲ ‘ಮಾತನಾಡಿ ಮಾತನಾಡಿ’ ಎಂದು ಹೇಳು ತ್ತಿದ್ದಾರೆ. ಆದರೆ ಅವರು ಮಾತನಾಡುವುದಕ್ಕೆ ಒಪ್ಪದೆ ಹಟ ಮಾಡುತ್ತಿದ್ದಾರೆ. ಸ್ಪೀಕರ್ ಅವರೇ ಈಗ ಜೋರಾಗಿ ಕೇಳಬೇಕು ‘ಏ ಬುಲ್ ಬುಲ್ ಮಾತಾಡಕಿಲ್ವಾ?’

3 comments:

  1. ಬಷೀರ್ ಅವರಿಗೆ -- ಅಂಬರೀಶ್ ಬಗ್ಗೆ ತಾವು ಬರೆದ ಈ ಲೇಖನ ಆಪ್ತವಾಗಿದೆ. ಆದರೆ ಅವರು ಮೂಗನ ಪಾತ್ರದಲ್ಲಿ ನಟಿಸಿದ "ಶುಭಮಂಗಳ" ಸಿನಿಮಾದ ಪ್ರಸ್ತಾಪವೊಂದು ಇಲ್ಲ. ಇರಲಿ. ಅಂಬರೀಶ್ ಅವರ ಹಿಂದಿನ ಮತ್ತು ಇಂದಿನ ಸ್ಥಿತಿ ಅದಕ್ಕೆ ಕಾರಣಗಳನ್ನು cool ಆಗಿ ಚಿತ್ರಿಸಿದ್ದೀರಿ. ಪುಟ್ಟಣ ಕಣಗಾಲ್ ಅವರಂತಹ ನಿರ್ದೇಶಕರು ಇಲ್ಲದಿರುವುದು,ಬಾಬು ರಾಜೇಂದ್ರ ಸಿಂಗ್ ಅವರ priority ಈಗ ಬೇರೆ ಹಾದಿ ಹಿಡಿದಿರುವುದು ಮತ್ತು ಭರವಸೆ ಮೂಡಿಸಿದ್ದ ಸುನೀಲ್ ಕುಮಾರ್ ದೇಸಾಯಿ ಅವರು ಚಿತ್ರರಂಗದಿಂದಲೇ ದೂರವಾಗಿರುವುದು ಇಂದಿನ ನಮ್ಮ ಕನ್ನಡ ಚಿತ್ರ ರಂಗದ ದುಸ್ಥಿತಿಗೆ ಕಾರಣ.

    ReplyDelete
  2. ಪ್ರಿಯರಾದ ಬಷೀರ್ ಅವರೇ-- ಈ ಪ್ರತಿಕ್ರಿಯೆ ಅಂಬರೀಶ್ ಅವರ ಲೇಖನಕ್ಕೆ ಸಂಬಂಧಿಸಿದ್ದಲ್ಲ. ನೀವು ನಿಮ್ಮ ಬ್ಲಾಗಿನ ಓದುಗರಿಗೆ ಪ್ರತಿಕ್ರಿಯಿಸಲು ಕೊಟ್ಟಿರುವ ಸ್ವಾತಂತ್ರ್ಯಕ್ಕೆ ತಮ್ಮನ್ನು ಅಭಿನಂದಿಸಲು ಬರೆದಿದ್ದು. ನಿಮ್ಮ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ಬಂದರೂ ಅದನ್ನು ತಾವು censor ಮಾಡದೇ ಪ್ರಕಟಿಸುತ್ತಿದ್ದೀರಿ. ''ಗುಜರಿ ಅಂಗಡಿ'' ಬ್ಲಾಗಿನ ಕೆಲವು ಲೇಖನಗಳು ನಿಮ್ಮ ಸ್ನೇಹಿತರೊಬ್ಬರ ಬ್ಲಾಗಿನಲ್ಲಿ ಆಗಾಗ ಪ್ರಕಟವಾಗುತ್ತವೆ. ಇಲ್ಲಿ ಬರೆದ ಪ್ರತಿಕ್ರಿಯೆಯನ್ನು ಅಲ್ಲಿ ಬರೆದರೆ ಪ್ರಕಟಮಾಡುವುದಿಲ್ಲ. ನಾನೇನೂ ಅಸಭ್ಯ ಭಾಷೆಯಲ್ಲಿ ಬರೆಯುವುದಿಲ್ಲ. ಇರಲಿ ಅವರಿಗೆ 'ತನ್ನಂತೆ ಇತರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ' ಎಂಬುದರಲ್ಲಿ ನಂಬಿಕೆ ಇಲ್ಲ ಎಂದು ಕಾಣುತ್ತದೆ. ಆ ಬ್ಲಾಗಿನಲ್ಲಿ ನನಗೆ ಪ್ರಿಯರಾದ 'ಕನಸಿಗೊಂದು ಕಣ್ಣು' ಖ್ಯಾತಿಯ ಶೂದ್ರ ಶ್ರೀನಿವಾಸರು ಬರೆಯುತ್ತಿದ್ದಾರೆ. ಅಷ್ಟೇ ಸಮಾಧಾನ.

    ReplyDelete
  3. ನನ್ನ ಲೇಖನಕ್ಕೆ ಕೆಲವೊಮ್ಮೆ ತೀರ ತೀರ ಕೆಟ್ಟ ಪ್ರತಿಕ್ರಿಯೆ ಬರೋದು ಇದೆ. ಅಂತ ಪ್ರತಿಕ್ರಿಯೆಗಳೂ ದಾಖಲಾಗಬೇಕು. ವರ್ತಮಾನದ ಬೇರೆ ಬೇರೆ ಮುಖಗಳನ್ನು ಅದು ಪರಿಚಯಿಸುತ್ತದೆ ಎಂದು ನಂಬಿದ್ದೇನೆ. ಒಂದು ಲೇಖನವನ್ನು ಕೆಲವೊಮ್ಮೆ ಅದಕ್ಕೆ ಬಂದ ಟೀಕೆಯೇ ಸಮರ್ಥಿಸುವ ಸಾಧ್ಯತೆ ಇರುತ್ತದೆ. ಲೇಖನಕ್ಕೆ ಸಂಬಂಧವೇ ಪಡದ ತೀರ ವೈಯಕ್ತಿಕ ಟೀಕೆ ಯನ್ನಷ್ಟೇ ಡಿಲಿಟ್ ಮಾಡ್ತೇನೆ. ವಿಚಿತ್ರ ಅಂದ್ರೆ, ಈ ಗುಜರಿ ಅಂಗಡಿಯಲ್ಲಿ ಈ ವರೆಗೆ ಯಾರ ಕಾಮೆಂಟ್ ಅನ್ನೂ ಡಿಲಿಟ್ ಮಾಡಿಲ್ಲ. ಮುಂದೆ ಗೊತ್ತಿಲ್ಲ. -b.m. basheer

    ReplyDelete