Monday, March 24, 2014

ಚಿತ್ತಾಲ-ಸಾಹಿತ್ಯ ಲೋಕದ ಆಲ

ಜಯಂತ್ ಕಾಯ್ಕಿಣಿ ಮತ್ತು ಚಿತ್ತಾಲರು. ಬಾಲ್ಕನಿಯಲ್ಲಿ ಕಂಡದ್ದು (ಚಿತ್ರ ಕೃಪೆ-ಸ್ಮಿತಾ ಕಾಯ್ಕಿಣಿ)
ಒಂದು ಹೂವಿನ ಪಕಳೆಯಷ್ಟು ಮೃದುವಾಗಿಯೂ, ಸೂಕ್ಷ್ಮವಾಗಿಯೂ ಬದುಕಿದವರು ಯಶವಂತ ಚಿತ್ತಾಲರು. ಬೆರಳ ತುದಿಯ ಸಣ್ಣ ಒರಟು ಸ್ಪರ್ಶಕ್ಕೂ ಆತಂಕಗೊಳ್ಳುವ ಅವರ ಒಳಗಿನ ಸ್ಥಿತಿಯೇ ಅವರಿಂದ ‘ಶಿಕಾರಿ’ ಕಾದಂಬರಿಯನ್ನು ಬರೆಸಿರಬೇಕು. ಮುಂಬೈಯನ್ನು ಕರ್ಮಭೂಮಿಯಾಗಿ ಆರಿಸಿಕೊಂಡರೂ ಆ ಶಹರದ ಗಲ್ಲಿಗಳಲ್ಲಿ ತನ್ನ ಉತ್ತರಕನ್ನಡದ ಹನೇಹಳ್ಳಿಯ ಒಳದಾರಿಗಳನ್ನು ಕಂಡು ಕೊಳ್ಳಲು ಅವರು ಹಪಹಪಿಸುತ್ತಿದ್ದರು. ಅವರ ಸೃಜನಶೀಲ ಕೃತಿಗಳೆಲ್ಲವುಗಳ ಸ್ಫೂರ್ತಿಯೂ ಅವರ ಹುಟ್ಟು ನೆಲವಾದ ಹನೇಹಳ್ಳಿಯಾಗಿತ್ತು. ಮನುಷ್ಯನ ಬದುಕುವ ಶೈಲಿಯಲ್ಲೇ ಸುತ್ತಿಕೊಂಡಿರುವ ಹಾವಿನಂತಹ ಕ್ರೌರ್ಯವನ್ನು ಗೆಲ್ಲುವುದಕ್ಕೆ ಅವರು ಬರಹವನ್ನು ಮಾಧ್ಯಮವಾಗಿಸಿಕೊಂಡರು. ಮನುಷ್ಯನ ಹೊರಗಿನ ಜಗತ್ತನ್ನು ನೆಪವಾಗಿಟ್ಟು ಕೊಂಡು ಅವನ ಒಳಗಿನ ಬದುಕನ್ನು ತನ್ನ ಎಲ್ಲ ಕಾದಂಬರಿಗಳಲ್ಲಿ, ಕತೆಗಳಲ್ಲಿ ಬರೆದರು. ಅವರ ಕಾದಂಬರಿಗಳನ್ನು ಸತತವಾಗಿ ಓದುತ್ತಾ ಹೋದರೆ, ಮನುಷ್ಯನನ್ನು ನೋಡುವ ನಮ್ಮ ದೃಷ್ಟಿ, ನೋಟವೇ ಬದಲಾಗಿ ಬಿಡುತ್ತದೆ. ಅವರ ಬರಹಗಳ ಶಕ್ತಿಯೇ ಹಾಗೆ. ಅದು ನೇರವಾಗಿ ಯಾವ ಅಪ್ಪಣೆಯನ್ನೂ ಬೇಡದೆ ನಮ್ಮ ಎದೆಯೊಳಗೆ ನುಗ್ಗಿ ಬಿಡುತ್ತದೆ.

ಬೊಮ್ಮಿಯ ಹುಲ್ಲು ಹೊರೆಯಿಂದ ಆರಂಭಗೊಂಡ ಚಿತ್ತಾಲರ ಮನುಷ್ಯನ ಮುಖಾಮುಖಿಯ ಪಯಣ ತಿರುವು ಪಡೆದದ್ದು ‘ಆಟ’ ಕತೆಯ ಮೂಲಕ. ನವ್ಯ ಜಗತ್ತು ಕಾಮದ ಸುತ್ತ ತಿರುಗುತ್ತಿರುವಾಗಲೇ ಚಿತ್ತಾಲರು ‘ಆಟ’ ಕತೆಯ ಮೂಲಕ ಸಾವು ಮತ್ತು ಮನುಷ್ಯನ ನಡುವಿನ ಕಣ್ಣು ಮುಚ್ಚಾಲೆಯನ್ನು ತನ್ನ ಬರಹಗಳಲ್ಲಿ ಕಟ್ಟಿಕೊಟ್ಟರು. ನವ್ಯದೊಳಗಿದ್ದುಕೊಂಡು ಅವರು ನವ್ಯದವರಿಗಿಂತ ಭಿನ್ನರಾಗುತ್ತಾ ಹೋದದ್ದೇ ಹೀಗೆ. ಅವರ ಪಾತ್ರಗಳೆಲ್ಲ ಪೂರ್ವನಿರ್ಧರಿತವಾದವುಗಳಲ್ಲ. ಪಾತ್ರಗಳ ಜೊತೆಗೆ ಬದುಕುತ್ತಾ ಬದುಕುತ್ತಾ ಅವುಗಳಿಗೆ ಜೀವ ತುಂಬುತ್ತಾ ಹೋಗುವುದು ಚಿತ್ತಾಲರ ಕಲೆಗಾರಿಕೆಯಾಗಿತ್ತು. ಅವರ ಕತೆಗಳಲ್ಲಿ ಅರ್ಧ ಬದುಕಿದ ಪಾತ್ರ ಇನ್ನೊಂದು ಕಾದಂಬರಿಯೊಳಗೆ ಮತ್ತೆ ತನ್ನ ಬದುಕನ್ನು ಪೂರ್ಣಗೊಳಿಸುವ ಹಟದಲ್ಲಿ ಜನ್ಮ ಪಡೆಯುತ್ತದೆ. ಅವರ ಎಲ್ಲ ಕಾದಂಬರಿಗಳನ್ನೂ, ಕತೆಗಳನ್ನೂ ಓದುತ್ತಾ ಹೋದ ಹಾಗೆ, ಈ ಪಾತ್ರಗಳನ್ನು ಇನ್ನೆಲ್ಲೋ ಭೇಟಿ ಮಾಡಿದ್ದೇನಲ್ಲ ಎಂದು ಅನ್ನಿಸುವುದು ಇದೇ ಕಾರಣಕ್ಕೆ. ಅವರ ಒಂದು ಕತೆ ಹಿಂದಿನ ಕತೆಯ ಮುಂದುವರಿಕೆಯೋ ಎಂದೆನ್ನಿಸುವುದೂ ಇದೇ ಕಾರಣಕ್ಕೆ. ಅವರ ಮನೆಗೆ ಭೇಟಿಕೊಟ್ಟರೆ, ಅವರು ‘ಶಿಕಾರಿ’ ಕಾದಂಬರಿಯ ನಾಗಪ್ಪನ ವ್ಯಕ್ತಿತ್ವವನ್ನು ಒಬ್ಬ ಗೆಳೆಯನೋ, ಆತ್ಮಬಂಧುವೋ ಎಂಬಂತೆ ವಿವರಿಸುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತಾ, ಈ ನಾಗಪ್ಪ ಒಂದು ಕತೆಯ ಪಾತ್ರ ಆಗಿರಲಿಕ್ಕಿಲ್ಲ. ಇವರ ಮನೆಯ ಸದಸ್ಯನೊಬ್ಬನ ಕುರಿತಂತೆ ಮಾತನಾಡುತ್ತಿರಬೇಕು ಎಂದೆನ್ನಿಸುತ್ತಿತ್ತು. ಅವರ ಬಾಲ್ಕನಿಯಲ್ಲೋ, ಅವರು ಕುಳಿತ ಸೋಫಾದಲ್ಲೋ ಆ ಪಾತ್ರ ನಮ್ಮನ್ನ್ನು ನೋಡುತ್ತಿದೆ ಎಂಬಂತೆಯೇ ಅವರು ನಾಗಪ್ಪನನ್ನು ವಿವರಿಸುತ್ತಿದ್ದರು. ಆದುದರಿಂದ, ಚಿತ್ತಾಲರ ಮನೆಗೆ ಹೋಗುವಾಗ, ಜೊತೆಗೆ ನಮ್ಮ ಮನದ ಜೋಳಿಗೆಯನ್ನು ಖಾಲಿ ಹೊತ್ತೊಯ್ಯುತ್ತಿದ್ದೆವು. ಅಲ್ಲಿ ಅವರೊಬ್ಬರೇ ಮಾತನಾಡುತ್ತಿದ್ದರು. ನಮಗೆ ಕೇಳುವ ಕೆಲಸ ಮಾತ್ರ ಅಲ್ಲಿರುತ್ತಿತ್ತು.

ಒಂದು ಕಾದಂಬರಿಯನ್ನು ಬರೆಯುವ ಮುನ್ನವೇ ಅವರು ಘೋಷಿಸುತ್ತಿದ್ದರು. ಅವರ ಒಂದು ಕಾದಂಬರಿಯ ಮುಕ್ತಾಯವೆಂದರೆ ಇನ್ನೊಂದು ಕಾದಂಬರಿಯ ಹುಟ್ಟು ಎಂದೇ ಹೇಳಬೇಕು. ಅದು ಸರಪಣಿಯಂತೆ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಈ ಕಾರಣದಿಂದಲೇ, ಅವರು ಮುದ್ರಣಗೊಂಡ ಕಾದಂಬರಿಯಲ್ಲೇ ತನ್ನ ಹೊಸ ಕಾದಂಬರಿಯ ಹೆಸರನ್ನು ಘೋಷಿಸಿ ಬಿಡುತ್ತಿದ್ದರು. ಬರೆಯುವ ಮೊದಲೇ ಹೆಸರನ್ನು ಪ್ರಕಟಿಸುತ್ತಿದ್ದರು. ಬಳಿಕ ಬರೆಯುವುದಕ್ಕೆ ಕೂರುತ್ತಿದ್ದರು. ಈ ಕಾರಣದಿಂದಲೇ ‘ಮೂರು ದಾರಿಗಳು’ ಕಾದಂಬರಿಯಲ್ಲಿ, ಬರಲಿರುವ ಕಾದಂಬರಿ ಛೇದ ಎಂದು ಮುದ್ರಣಗೊಳ್ಳುತ್ತಿತ್ತು. ಶಿಕಾರಿ ಕಾದಂಬರಿಯಲ್ಲಿ ಪುರುಷೋತ್ತಮ ಕಾದಂಬರಿ ಬರಲಿದೆ ಎಂದು ಘೋಷಿಸುತ್ತಿದ್ದರು. ಕೇಂದ್ರವೃತ್ತಾಂತ ಕಾದಂಬರಿಯನ್ನು ಮುಗಿಸಿ ‘ದಿಗಂಬರ’ವನ್ನು ಘೋಷಿಸಿದ ಸಂದರ್ಭದಲ್ಲಿ ನಾನು ನನ್ನ ಗೆಳೆಯರ ಜೊತೆಗೆ ಅವರ ಮನೆಗೆ ಹೋಗಿದ್ದೆ. ಆಗ ಅವರೊಂದಿಗೆ ಈ ಕುರಿತಂತೆ ಕೇಳಿದ್ದೆವು. ‘ಆ ಪಾತ್ರದ ಬಗ್ಗೆ ಸ್ವಲ್ಪ ವಿವರಿಸಿ’ ಎಂದಾಗ ಅವರು ಹೇಳಿದ ಮಾತು ಚಿತ್ತಾಲರಿಗೆ ತಕ್ಕ ಹಾಗೆಯೇ ಇತ್ತು. ‘‘ನೋಡಿ...ನನ್ನ ಮುಂದೆ ಒಂದು ವ್ಯಕ್ತಿತ್ವ ಇದೆ. ಅದು ಏನು ಎನ್ನುವುದು ನನಗೂ ಗೊತ್ತಿಲ್ಲ. ನಾನು ಆ ದೊಡ್ಡ ವ್ಯಕ್ತಿತ್ವಕ್ಕೆ ದಿಗಂಬರ ಎಂದು ಹೆಸರಿಟ್ಟಿದ್ದೇನೆ. ಬರೆಯುವುದೆಂದರೆ ಆ ವ್ಯಕ್ತಿತ್ವವನ್ನು ನಿಧಾನಕ್ಕೆ ತನ್ನದಾಗಿಸಿಕೊಳ್ಳುತ್ತಾ ಹೋಗುವುದು. ಬರೆಯುತ್ತಾ ಹೋದ ಹಾಗೆಯೇ ಅದು ಸ್ಪಷ್ಟವಾಗುತ್ತಾ ಹೋಗುತ್ತದೆ...’’

 ಅವರು ತನ್ನ ಬರಹಗಳಿಗೆ ಅದೆಷ್ಟು ಬದ್ಧರಾಗಿದ್ದರು ಮತ್ತು ತನ್ನ ಪಾತ್ರಗಳನ್ನು ಅದೆಷ್ಟು ಹಚ್ಚಿಕೊಳ್ಳುತ್ತಿದ್ದರು ಎಂದರೆ ಒಂದು ಸಣ್ಣ ವಿಮರ್ಶೆ, ಸಣ್ಣ ವ್ಯಂಗ್ಯಕ್ಕೂ ನಲುಗಿ ಹೋಗುತ್ತಿದ್ದರು. ಹಲವರಿಗೆ ಈ ಕುರಿತಂತೆ ಸಿಟ್ಟೂ ಇತ್ತು. ‘‘ಚಿತ್ತಾಲರು ವಿಮರ್ಶೆಯನ್ನು ಸಹಿಸಿಕೊಳ್ಳುವುದಿಲ್ಲ’’ ಎಂಬ ಸಿಟ್ಟು ಅದಾಗಿತ್ತು. ‘‘ಕಾಫ್ಕಾನ ಪ್ರಭಾವ ಬಿಟ್ಟರೆ ಚಿತ್ತಾಲರಲ್ಲಿ ಇನ್ನೇನಿದೆ?’’ ಎಂದಾಗಲೂ ಚಿತ್ತಾಲರು ವ್ಯಗ್ರರಾಗಿದ್ದರು. ನವ್ಯದ ಉತ್ಕರ್ಷದ ಹಂತದಲ್ಲಿ, ಕಾಫ್ಕಾನನ್ನು ಚಿತ್ತಾಲರಿಗೆ ತಗಲಿ ಹಾಕುವ ಪ್ರಯತ್ನ ನಡೆದಿತ್ತು.ಫ್ರಾಂಜ್ ಕಾಫ್ಕಾನ ಟ್ರಯಲ್ ಕಾದಂಬರಿಯ ಪ್ರಭಾವ ಚಿತ್ತಾಲರ ಶಿಕಾರಿ ಮೇಲಿದೆ ಎನ್ನೋದೇ ಇದಕ್ಕೆ ಕಾರಣ. ಶಿಕಾರಿಯ ನಿರೂಪಣೆಯ ತಂತ್ರದ ಮೇಲೆ ಟ್ರಯಲ್ ಕಾದಂಬರಿ ತನ್ನ ಪ್ರಭಾವ ಬೀರಿರಬಹುದು. ಆದರೆ ಟ್ರಯಲ್ ಕಾದಂಬರಿ ನೀಡುವ  ಒಳನೋಟವೆ ಬೇರೆ. ಶಿಕಾರಿ ಕಾದಂಬರಿ ಕೊಡುವ ಬದುಕಿನ ಒಳನೋಟವೆ ಬೇರೆ. ಕಾಫ್ಕಾನ ಹೆಚ್ಚಿನ ವಸ್ತುಗಳಲ್ಲಿ ಒಂದು ಸಿನಿಕತನ ಕೆಲಸ ಮಾಡಿದೆ. ಚಿತ್ತಾಲರು ಬದುಕಿನ ಮೇಲೆ ಅಪಾರ ಭರವಸೆ ಇಟ್ಟು ಬರೆದವರು  ಚಿತ್ತಾಲರ ಕಾದಂಬರಿಗಳ ಪಾತ್ರಗಳೊಳಗಿನ ಸಂಘರ್ಷದ ಅಂತಿಮ ಉದ್ದೇಶವೇ ಮನುಷ್ಯನೊಳಗಿರುವ ಪುರುಷೋತ್ತಮನ ಹುಡುಕಾಟ. ಅವರ ಕಾದಂಬರಿಗಳಲ್ಲಿ ಸಿನಿಕತೆಗೆ ಎಳ್ಳಷ್ಟೂ ಅವಕಾಶವಿರಲಿಲ್ಲ.

 ಒಮ್ಮೆ ಲಂಕೇಶರು ಯಶವಂತ ಚಿತ್ತಾಲರ ಬರಹಗಳ ಕುರಿತಂತೆ ಅದೇನೋ ಬರೆದು ಬಿಟ್ಟಿದ್ದರು. ಅದರಲ್ಲಿ ಚಿತ್ತಾಲರ ಕುರಿತಂತೆ ಸಣ್ಣದಾಗಿ ವೈಯಕ್ತಿಕ ಟೀಕೆಯೂ ಇತ್ತು. ಚಿತ್ತಾಲರದು ಇಳಿ ವಯಸ್ಸು. ಆರೋಗ್ಯವೂ ಆಗಾಗ ಕೆಡುತ್ತಿತ್ತು. ಆಗ ಇಡೀ ಮುಂಬೈಯ ಕನ್ನಡಿಗರು ಚಿತ್ತಾಲರಿಗೆ ಲಂಕೇಶ್ ಪತ್ರಿಕೆ ದೊರಕದಂತೆ ನೋಡಿಕೊಂಡಿದ್ದರು. ಆದರೂ ಅದಾರೋ ಕೊನೆಗೂ ಚಿತ್ತಾಲರಿಗೆ ಅದನ್ನು ತಲುಪಿಸಿದ್ದರು. ಆ ಸುದ್ದಿಯನ್ನು ಮುಚ್ಚಿಟ್ಟ ಆತ್ಮೀಯರೊಂದಿಗೂ ಅವರು ಆ ಬಳಿಕ ಜಗಳವಾಡಿದ್ದರು. ಹಾಗೆಯೇ ಅದನ್ನು ಹಲವು ತಿಂಗಳ ಕಾಲ ಒಳಗಿಟ್ಟುಕೊಂಡು ನೊಂದುಕೊಂಡಿದ್ದರು.

ಚಿತ್ತಾಲರಿಗೆ ತರುಣರು ಮನೆಗೆ ಬರುವುದೆಂದರೆ ಸಂಭ್ರಮ. ಮೊದಲೇ ಸಮಯವನ್ನು ಹೇಳಿ, ನಿಗದಿ ಪಡಿಸಿ ನಾವು ಅವರ ಮನೆ ಬಾಗಿಲು ತಟ್ಟುತ್ತಿದ್ದೆವು. ಇಳಿವಯಸ್ಸು, ಅನಾರೋಗ್ಯ ಏನೇ ಇರಲಿ. ಬರಹಗಳ ಬಗ್ಗೆ, ಸಾಹಿತ್ಯದ ಬಗ್ಗೆ ಮಾತನಾಡುವಾಗ ಅವರು ಒಂದಿಷ್ಟೂ ದಣಿಯುತ್ತಿರಲಿಲ್ಲ. ಬಂದವರಿಗೆ ಪುಸ್ತಕವನ್ನೂ ಕೊಡುತ್ತಿದ್ದರು. ಒಮ್ಮಿಮ್ಮೆ ನಾವು ಕಾವ್ಯಗಳನ್ನು ಬರೆದು ಅವರಲ್ಲಿಗೆ ಕೊಂಡೊಯ್ಯುವುದೂ ಇತ್ತು. ವಿಶೇಷವೆಂದರೆ, ಕಾವ್ಯದ ಕುರಿತಂತೆ ಅವರಿಗೆ ಅಗಾಧ ಅಚ್ಚರಿಯಿತ್ತು. ಅಷ್ಟೂ ಕಾದಂಬರಿ, ಕತೆಗಳನ್ನು ಬರೆದವರಾದರೂ, ‘ಕಾವ್ಯ ನನಗೆ ಒಗ್ಗುವುದಿಲ್ಲ’ ಎಂದು ಹಿಂಜರಿಯುತ್ತಿದ್ದರು. ಆದರೂ ಅವರು ಕಾವ್ಯಗಳನ್ನು ಕೆಲ ಕಾಲ ಬರೆದರು. ಆದರೆ ಅದನ್ನು ಕಾವ್ಯವೆಂದು ಕರೆಯಲು ಹಿಂಜರಿದರು. ಅದಕ್ಕಾಗಿಯೇ ಅವರು ‘ಲಯ ಬದ್ಧ ಸಾಲುಗಳು’ ಎಂಬ ಹೊಸ ಹೆಸರಿಟ್ಟರು. ಚಿತ್ತಾಲರ ‘ಲಬಸಾ’ ಎಂದೇ ಅದು ಮುಂದೆ ಮುದ್ರಣಗೊಂಡವು. ಆದರೆ ಕಾದಂಬರಿ ಕತೆಗಳು, ಕೈ ಹಿಡಿದಂತೆ ಕವಿತೆಗಳು ಅವರ ಕೈ ಹಿಡಿಯಲಿಲ್ಲ.

ಚಿತ್ತಾಲರ ಅತಿ ಚರ್ಚಿತ ಕತೆಗಳಲ್ಲಿ ಕತೆಯಾದಳು ಹುಡುಗಿ ಒಂದು. ತನ್ನ ಮಗುವಿನ ದುರಂತವನ್ನು ಕತೆಗಾರನೊಬ್ಬ ಕತೆಯಾಗಿಸಲು ಹೊರಟು, ಆ ಕ್ರೌರ್ಯದೊಳಗೆ ತಾನೇ ನಲುಗುವ ಕತೆ ಇದು. ಛೇದ ಅವರ ಪುಟ್ಟ ಕಾದಂಬರಿ. ಅನಗತ್ಯ ಭಯ ಸಂಶಯಗಳಿಂದ ನಾವು ಸಂಬಂಧಗಳನ್ನು ಹೇಗೆ ಕೊಂದು ಕೊಳ್ಳುತ್ತೇವೆ ಎನ್ನುವುದನ್ನು ಛೇದ ಹೃದಯ ಛೇದಿಸುವಂತೆ ನಮ್ಮ ಮುಂದಿಡುತ್ತದೆ. ವೃದ್ಧ ಪಾರ್ಸಿ ಪೊಚಖಾನವಾಲಾ ಇದರ ಕೇಂದ್ರ ಪಾತ್ರ. ಈತ ದ್ವೇಷಿಸುವ, ಭಯಪಡುವ ಕಿಡಿಗಾರುವ ವ್ಯಕ್ತಿ ಈ ಜಗತ್ತಲ್ಲಿ ಬದುಕಿಯೇ ಇರುವುದಿಲ್ಲ. ಅವನೆಂದೋ ಒಂದು ದುರಂತದಲ್ಲಿ ಕೊಲೆಯಾಗಿರುತ್ತಾನೆ. ಬರೇ ಆತನ ನೆರಳನ್ನೇ ದ್ವೇಷಿಸುತ್ತಾ, ಭಯಪಡುತ್ತಾ, ಕಿಡಿಗಾರುತ್ತಾ ಇರುವ ಪೊಚಖಾನವಾಲಾನಿಗೆ ಸತ್ಯ ತಿಳಿಯುವ ಹೊತ್ತಿಗೆ ಎಲ್ಲ ಮುಗಿದಿರುತ್ತದೆ. ಎಂದೂ ಸರಿಪಡಿಸಲಾಗದ ಒಡೆದ ಮನಸಷ್ಟೇ ಅಲ್ಲಿ ಉಳಿದಿರುತ್ತದೆ. ‘ಶಿಕಾರಿ’ ಹೇಗೆ ನಗರದಲ್ಲಿ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಬೇಟೆಯಾಡುತ್ತಾನೆ ಎನ್ನುವುದನ್ನು ವಸ್ತುವಾಗಿಸಿಕೊಂಡಿದೆ ಮತ್ತು ಅದರಿಂದ ಪಾರಾಗಲು ನಾಗಪ್ಪ ನಡೆಸುವ ಹೋರಾಟ ಶಿಕಾರಿಯ ನಿಜವಾದ ಕತೆ. ಪುರುಷೋತ್ತಮ ಚಿತ್ತಾಲರ ಮತ್ತೊಂದು ಮಹತ್ವದ ಕೃತಿ. ದಾಯಾದಿ ಕಲಹ, ತಿಕ್ಕಾಟಗಳನ್ನು ಹೇಳುತ್ತಲೇ, ಆ ಮೂಲಕ ನಾಯಕ ಪುರುಷೋತ್ತಮನಾಗಿ ರೂಪುಗೊಳ್ಳುವ ಬಗೆಯನ್ನು ಕಟ್ಟಿಕೊಡುತ್ತಾರೆ. ಚಿತ್ತಾಲರು ಕತೆ ಹೇಳುವ ಸಂದರ್ಭದಲ್ಲಿ ಪತ್ತೆದಾರಿಗೆ ಸಮಾನವಾದ ಒಂದು ತಂತ್ರವನ್ನು ಬಳಸಿಕೊಳ್ಳುತ್ತಾರೆ. ಛೇದ ಮತ್ತು ಶಿಕಾರಿಯಲ್ಲಿ ಆ ತಂತ್ರ ನಮ್ಮಾಳಗೆ ವಿಸ್ಮಯವನ್ನು ಉಂಟು ಮಾಡುತ್ತದೆ. ತನ್ನ ಅಣ್ಣನನ್ನು ಹುಡುಕುತ್ತಾ ಮುಂಬೈಗೆ ಬರುವ ಒಬ್ಬ ತರುಣನ ಮೂಲಕ ಛೇದ ಕತೆ ತೆರೆದುಕೊಳ್ಳುತ್ತದೆ. ನಿಗೂಢ ಕಾರಣಕ್ಕಾಗಿ ನಾಗಪ್ಪನನ್ನು ರಜೆಯ ಮೇಲೆ ಕಳುಹಿಸಿ, ಆತನನ್ನು ಕಂಪೆನಿ ವಿಚಾರಣೆಗೆ ಒಳಪಡಿಸುತ್ತದೆ. ಈ ಸಂದರ್ಭದಲ್ಲಿ ತನ್ನನ್ನು ಬೇಟೆಯಾಡುತ್ತಿರವವರನ್ನು ಕಂಡುಕೊಳ್ಳುವುದು ಮತ್ತು ತನ್ನನ್ನು ತಾನು ಉಳಿಸಿಕೊಳ್ಳುವುದು ಶಿಕಾರಿಯ ಕತೆ.


ದಿಗಂಬರನನ್ನು ಪೂರ್ಣವಾಗಿ ಕಡೆದು ನಿಲ್ಲಿಸಲು ಅವರಿಗೆ ಸಾಧ್ಯವಾಗಲೇ ಇಲ್ಲ. ಆ ಕಾದಂಬರಿ ಅರ್ಧದಲ್ಲೇ ಉಳಿದಿದೆ. ಸಾಹಿತ್ಯದ ಕುರಿತಂತೆ ಅವರು ಏನು ಹೇಳಿದ್ದರೋ, ಯಾವ ನಿಲುವನ್ನು ತಳೆದಿದ್ದರೋ ಅವುಗಳಿಗೆ ಒಂದು ರೂಪಕವಾಗಿ ದಿಗಂಬರ ಅರ್ಧದಲ್ಲೇ ನಿಂತಿದೆ. ಉಳಿದರ್ಧ ನಮ್ಮ ನಮ್ಮಳಗೆ ಪೂರ್ತಿಯಾಗಬೇಕಾಗಿದೆ. ಎಲ್ಲವನ್ನೂ ತಾನೇ ಪೂರ್ತಿ ಮಾಡಿದರೆ ಅದು ಸಾಹಿತ್ಯ ಹೇಗಾದೀತು ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟು ಚಿತ್ತಾಲರು ನಮ್ಮಿಂದ ದೂರವಾಗಿದ್ದಾರೆ. ತನ್ನ ಶಾಶ್ವತವಾದ ಹನೇಹಳ್ಳಿಗೆ.

1 comment:

  1. ಯಶವಂತ ಚಿತ್ತಾಲರು ನನ್ನ ಮೆಚ್ಚಿನ ಕಾದ೦ಬರಿಕಾರರು. ಅವರು ಬರೆಯುತ್ತಿದ್ದ ರೀತಿಯೇ ಅನನ್ಯ. ಸಾರ್ಥಕ ಬದುಕನ್ನು ಬಾಳಿದ ಅವರ ಬಗ್ಗೆ ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

    ReplyDelete