Wednesday, June 12, 2013

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ವಕ್ಫ್ ಆಸ್ತಿಯ ನೆಲದಲ್ಲಿ ನಿಂತಿರುವ ವಿನ್ಸರ್ ಮ್ಯಾನರ್ ಹೋಟೆಲ್ ಬೆಂಗಳೂರ್
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಇಂದಿಗೂ ಇಲ್ಲಿನ ಮುಸ್ಲಿಮರನ್ನು ರಾಜಕೀಯ ನಾಯಕರು ನಂಬಿಸುತ್ತಿದ್ದಾರೆ. ವರ್ಷಗಳ ಹಿಂದೆ ಅಲಹಾಬಾದ್ ನ್ಯಾಯಾಲಯ ತನ್ನ ‘ಕಟ್ಟೆ ಪಂಚಾಯತಿ’ ತೀರ್ಪಿನಲ್ಲಿ ಈ ಜಾಗವನ್ನು ಮೂರು ಗುಂಪುಗಳಿಗೆ ಹಂಚಿಕೆ ಮಾಡಿತು. ಒಂದು ವೇಳೆ ಇಲ್ಲಿರುವ ಅಷ್ಟೂ ಸೆಂಟ್ಸ್ ಭೂಮಿಯನ್ನು ನ್ಯಾಯಾಲಯ ಮುಸ್ಲಿಮರಿಗೇ ನೀಡಿತು ಎಂದು ಭಾವಿಸೋಣ. ಅದರಿಂದ ಈ ದೇಶದ ಮುಸ್ಲಿಮರ ಬದುಕಿನಲ್ಲಿ ಏನು ಬದಲಾವಣೆಯಾಗಬಹುದು? ಹೆಚ್ಚೆಂದರೆ ಅಲ್ಲೊಂದು ಮಸೀದಿ ನಿರ್ಮಾಣವಾಗಬಹುದು. ಈ ದೇಶದಲ್ಲಿ ಮುಸ್ಲಿಮರಿಗೆ ಮಸೀದಿಗಳ ಕೊರತೆಯಿದೆಯೆ?  ಬಾಬರ್ ಯಾವ ಧರ್ಮ ಪ್ರಚಾರಕನೂ ಅಲ್ಲ. ಅವನು ಒಬ್ಬ ರಾಜನಾಗಿ ಭಾರತಕ್ಕೆ ಕಾಲಿಟ್ಟ. ಅದೂ ಇಲ್ಲಿನ ರಾಜನೊಬ್ಬನ ಆಹ್ವಾನದ ಮೇರೆಗೆ. ಬಾಬರಿ ಮಸೀದಿ ಮುಸ್ಲಿಮರ ಧಾರ್ಮಿಕ ಕ್ಷೇತ್ರವೂ ಅಲ್ಲ. ಎಲ್ಲಿ ನಮಾಝ್ ಸಲ್ಲಿಸಲಾಗುತ್ತದೋ ಅದಷ್ಟೇ ಮುಸ್ಲಿಮರಿಗೆ ಮಸೀದಿ. ಇಲ್ಲದಿದ್ದರೆ ಅದು ಬರಿದೇ ಕಟ್ಟಡ. ಬಾಬರಿ ಮಸೀದಿ ಈ ದೇಶದ ಇತಿಹಾಸವನ್ನು ಹೇಳುವ ಅತ್ಯಮೂಲ್ಯ ಪ್ರಾಚ್ಯವಸ್ತು ವಾಗಿ ಪರಿಗಣಿಸಬಹುದು.

ನನಗನಿಸುವ ಮಟ್ಟಿಗೆ ಬಾಬರಿ ಮಸೀದಿ ಧ್ವಂಸ ಮತ್ತು ಅಲ್ಲಿರುವ ಜಾಗದ ವಿವಾದ ಈ ದೇಶದ ಸಂವಿಧಾನ ಮತ್ತು ಪ್ರಜಾಸತ್ತೆಯ ಸಮಸ್ಯೆ. ಇದು ಕೇವಲ ಮುಸ್ಲಿಮರೊಂದಿಗೆ ತಳಕು ಹಾಕಿಕೊಂಡಿರುವ ವಿವಾದವಲ್ಲ. ಬಾಬರಿ ಮಸೀದಿಯ ಜೊತೆಗೆ ಈ ದೇಶದ ಸಂವಿಧಾನವೂ ಧ್ವಂಸವಾಯಿತು. ಬಾಬರಿ ಮಸೀದಿಯನ್ನು ಯಾಕೆ ಪುನರ್‌ನಿರ್ಮಾಣ ಮಾಡಿಕೊಡಬೇಕು ಎಂದರೆ ಆ ಮೂಲಕ ಧ್ವಂಸಗೊಂಡ ಸಂವಿಧಾನ ಪುನರ್‌ನಿರ್ಮಾಮಾಣವಾದಂತಾಗುತ್ತದೆ.ದುರ್ಬಲಗೊಂಡ ಈ ದೇಶದ ಪ್ರಜಾಸತ್ತೆ ಮತ್ತೆ ಸದೃಢವಾಗುತ್ತದೆ. ಅಲ್ಪಸಂಖ್ಯಾತರಲ್ಲಿ ಆವರಿಸಿ ಕೊಂಡಿರುವ ಅಭದ್ರತೆಗೆ ಮುಖ್ಯ ಕಾರಣ ಬಾಬರಿ ಮಸೀದಿಯ ಅತಿಕ್ರಮಣವಲ್ಲ. ದುರ್ಬಲಗೊಂಡಿರುವ ಹಾಗೂ ಫ್ಯಾಶಿಸ್ಟ್ ಶಕ್ತಿಗಳಿಂದ ದಮನಕ್ಕೀಡಾಗುತ್ತಿರುವ ಈ ದೇಶದ ಸಂವಿಧಾನ. ಆದುದರಿಂದಲೇ, ಬಾಬರಿಮಸೀದಿ ಪುನರ್‌ನಿರ್ಮಾಣ, ಭಾರತದ ಪ್ರಜಾಸತ್ತೆ ಮತ್ತು ಸಂವಿಧಾನದ ಮೇಲೆ ನಂಬಿಕೆಯಿರುವ ಸರ್ವ ಭಾರತೀಯರ ಅಪೇಕ್ಷೆಯೇ ಹೊರತು, ಇದರೊಂದಿಗೆ ಮುಸ್ಲಿಮರ ಧಾರ್ಮಿಕ ಭಾವನೆ ತಳಕು ಹಾಕಿಕೊಂಡಿರುವುದು ಅತ್ಯಲ್ಪ.ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಈ ದೇಶದ ಮುಸ್ಲಿಮರು ತೀರಾ ಭಾವುಕವಾಗಿ ಹಚ್ಚಿಕೊಳ್ಳು ವುದನ್ನು ಬಿಟ್ಟು, ವಾಸ್ತವದೆಡೆ ಕಣ್ಣು ಹೊರಳಿಸುವ ಸಮಯ ಇದೀಗ ಬಂದಿದೆ.

ಬಾಬರಿ ಮಸೀದಿಗೆ ಸೇರಿದ ಒಟ್ಟು ಜಾಗ ಕೇವಲ ಎರಡೂವರೆ ಎಕರೆ. ಇದು ಮರಳಿ ದೊರಕಿದರೆ ಅದನ್ನು ನಾವು ರಾಜಕೀಯ ಲಾಭ ವೆಂದು ಪರಿಗಣಿಸಬಹುದು. ಫ್ಯಾಶಿಸ್ಟ್ ಶಕ್ತಿಗಳ ಸೋಲಾಗಿ ಪರಿಗಣಿಸಿ, ವಿಜಯೋತ್ಸವ ಆಚರಿಸಬಹುದು. ಆದರೆ ಮುಸ್ಲಿಮರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಬದುಕಿನಲ್ಲಿ ಈ ಎರಡೂವರೆ ಎಕರೆ ಭೂಮಿಯ   ಪಾತ್ರ ಏನೇನೂ ಇಲ್ಲ.ಆದರೆ ಈ ಬಾಬರಿ ಮಸೀದಿ ಭೂ ವಿವಾದದ ಗದ್ದಲದಲ್ಲಿ, ಮುಸ್ಲಿಮರ ತಳ ಮಟ್ಟದ ಬದುಕಿನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದೇ ಮೀಸಲಿಟ್ಟ ಸುಮಾರು ನಾಲ್ಕು ಲಕ್ಷ  ಎಕರೆ ಭೂಮಿ ನರಿ, ನಾಯಿಗಳ ಪಾಲಾಗಿರುವುದನ್ನು ಮುಸ್ಲಿಮರಿಂದ ಮುಚ್ಚಿಡ ಲಾಗುತ್ತಿದೆ. ಈ ನಾಲ್ಕು ಲಕ್ಷ ಎಕರೆ ಭೂಮಿಗಾಗಿ ಹೋರಾಟ ನಡೆಸಬೇಕು, ಅದನ್ನು ವಶಪಡಿಸಿ ಕೊಂಡು ಮುಸ್ಲಿಮರ ಏಳಿಗೆಗೆ ಬಳಸಬೇಕು ಎಂದು ಯಾವ ಮುಸ್ಲಿಮ್ ನಾಯಕರಿಗೂ  ಯೋಚನೆ ಬಂದಿಲ್ಲ. ಬಂದರೂ ಅದನ್ನು ರಾಜಕೀಯವಾಗಿ ಬಳಸುವುದಕ್ಕೆ ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ? ಕೇರಳದ ದೇವಸ್ಥಾನವೊಂದರಲ್ಲಿ ಬಡವರಿಗೆ ಸೇರಬೇಕಾದ ಚಿನ್ನ ಸಂಪತ್ತು ಕೊಳೆಯುತ್ತಾ ಬಿದ್ದಿರುವಂತೆಯೇ ಮುಸ್ಲಿಮರ ಅಭಿವೃದ್ಧಿಯಲ್ಲಿ ಅಪಾರ ಪಾತ್ರ ವಹಿಸಬಹುದಾಗಿದ್ದ ಕೋಟ್ಯಂತರ ಬೆಲೆಬಾಳುವ ಭೂಮಿಯನ್ನು ಕೆಲವೇ ಕೆಲವು ಶ್ರೀಮಂತರು ಅನುಭೋಗಿಸುತ್ತಿದ್ದಾರೆ. ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಈ ನಾಲ್ಕು ಲಕ್ಷ ಎಕರೆ ಭೂಮಿಯನ್ನು ತಮ್ಮ ಕೈವಶ ಮಾಡಿಕೊಂಡು ಅನುಭವಿಸುತ್ತಿರುವುದು ಯಾರೋ ಸಂಘ ಪರಿವಾರದ ಜನರಲ್ಲ. ಇವರಲ್ಲಿ ಬಹು ಸಂಖ್ಯಾತರು ಮುಸ್ಲಿಮ್ ಶ್ರೀಮಂತರೇ ಆಗಿ ದ್ದಾರೆ. ಹಾಗೆಯೇ ಅಂಬಾನಿಯಂತಹ ಕುಳ ಗಳೂ ಯಾವ ಸಂಕೋಚವೂ ಇಲ್ಲದೆ ಮುಸ್ಲಿಮ್ ಬಡವರಿಗೆ ಸೇರಬೇಕಾದ ಆಸ್ತಿಯನ್ನು ತಮ್ಮದಾಗಿಸಿಕೊಂಡು ಅನುಭವಿಸುತ್ತಿದ್ದಾರೆ.

ನಮ್ಮ ರಾಜ್ಯದಲ್ಲಿ ವಕ್ಫ್  ಎನ್ನುವ ಒಂದು ಖಾತೆಯಿದೆ. ಸಾಧಾರಣವಾಗಿ ರಾಜ್ಯದ ಮುಸ್ಲಿಮರಿಗೆ ಯಾವ ಖಾತೆ ಸಿಗದೇ ಇದ್ದರೂ ವಕ್ಫ್ ಖಾತೆಯೊಂದು ತಮಗಿದ್ದೇ ಇದೆ ಎನ್ನುವ ಸಂತೃಪ್ತಿಯಿದೆ. ಇರುವಷ್ಟು ದಿನ ಈ ವಕ್ಫ್‌ನ ಹೆಸರಿನಲ್ಲಿ ಗೂಟದ ಕಾರಿನಲ್ಲಿ ತಮ್ಮ ಸಮುದಾಯದ ನಾಯಕರೂ ತಿರುಗಾಡಿದರು ಎನ್ನುವ ಸಂತೃಪ್ತಿ ಬಿಟ್ಟರೆ ಈ ನಾಡಿನ ಬಡ ಮುಸ್ಲಿಮರಿಗೆ ವಕ್ಫ್ ಸಚಿವರುಗಳಿಂದಾದ ಪ್ರಯೋಜನ ತೀರಾ ಕಡಿಮೆ.ವಕ್ಫ್‌ನ ನೇರ ಅರ್ಥ ದತ್ತಿ ನೀಡುವುದು. ಅಂದರೆ ದೇವರ ಹೆಸರಿನಲ್ಲಿ ಭೂಮಿಯನ್ನು ದತ್ತಿಯಾಗಿ ಸಮಾಜಕ್ಕೆ ಅರ್ಪಿಸುವುದು. ಈ ರೀತಿ ದಾನಿಗಳು ಮುಸ್ಲಿಮ್ ಸಮಾಜದ ಬಡವರ ಉದ್ಧಾರಕ್ಕಾಗಿ ನೀಡಿದ ಭೂಮಿಯೇ ಈ ವಕ್ಫ್ ಆಸ್ತಿ. ಸುಮಾರು ೮೦೦ಕ್ಕೂ ಅಧಿಕ ವರ್ಷಗಳ ಇತಿಹಾಸ ಈ ವಕ್ಫ್‌ಗಿದೆ. ರಾಜರು ಮಾತ್ರವಲ್ಲ, ಮುಸ್ಲಿಮ್ ಜಮೀನ್ದಾರರು ಮತ್ತು ಮುಸ್ಲಿಮ್ ಶ್ರೀಮಂತರು ಸಮುದಾಯದ ಅಭಿವೃದ್ಧಿಗಾಗಿ ದಾನವಾಗಿ ನೀಡಿದ ಆಸ್ತಿ ಇದು. ದೇಶಾದ್ಯಂತ ೩ ಲಕ್ಷ ವಕ್ಫ್ ಆಸ್ತಿಗಳು ನೋಂದಣಿ ಯಾಗಿವೆ. ಸುಮಾರು ನಾಲ್ಕು ಲಕ್ಷ ಎಕರೆ ಭೂಮಿ ಮುಸ್ಲಿಮ್ ಬಡವರ ಅಭಿವೃದ್ಧಿ ಗಾಗಿಯೇ ವಕ್ಫ್ ಮಾಡಲ್ಪಟ್ಟಿದೆ.ರೈಲ್ವೆ ಮತ್ತು ರಕ್ಷಣಾ ಖಾತೆಗಳ ಬಳಿಕ ಅತ್ಯಧಿಕ ಆಸ್ತಿ ವಕ್ಪ್ ಇಲಾಖೆಯ ಬಳಿಯಿದೆ. ಎಂದರೆ ಅದಕ್ಕಿಂತ ದೊಡ್ಡ ಕೊಡುಗೆ ಈ ದೇಶದ ಮುಸ್ಲಿಮರಿಗೆ ಇನ್ನೇನು ಬೇಕು? ಆದರೆ ದುರದೃಷ್ಟವಶಾತ್ ಈ ಆಸ್ತಿ ಎಷ್ಟರ ಮಟ್ಟಿಗೆ ಮುಸ್ಲಿಮರ ಅಭಿವೃದ್ಧಿಗಾಗಿ ಬಳಕೆಯಾಗುತ್ತಿದೆ ಎಂದು ತನಿಖೆಗಿಳಿದರೆ ಆಘಾತಕಾರಿ ಅಂಶಗಳು ಹೊರಬರುತ್ತವೆ. ಒಂದು ಮೂಲದ ಪ್ರಕಾರ ಕೇವಲ ಕರ್ನಾಟಕ ದಲ್ಲೇ ೨೭ ಸಾವಿರ ಎಕರೆ ವಕ್ಫ್‌ಭೂಮಿಯ ಅತಿಕ್ರಮಣ ನಡೆದಿದ್ದು ಅದೆಲ್ಲ ಸದ್ಯ ಯಾರ‍್ಯಾರದೋ ಕೈಯಲ್ಲಿದೆ. ಇಂದು ದೇಶದ ಅತಿ ದೊಡ್ಡ ಭೂ ಹಗರಣ  ವಕ್ಫ್ ಭೂಮಿಯ ಹಗರಣ. ಇದನ್ನು ಔಟ್‌ಲುಕ್ ಆಂಗ್ಲ ಪತ್ರಿಕೆ ಮುಖಪುಟದಲ್ಲಿ ಮುಖ್ಯ ಸುದ್ದಿಯಾಗಿ ವರದಿ ಮಾಡಿತ್ತು. ಒಂದೆಡೆ ಒತ್ತುವರಿ. ಇನ್ನೊಂದೆಡೆ ಅತ್ಯಂತ ಕಡಿಮೆ ಬೆಲೆಗೆ ವಕ್ಫ್ ಆಸ್ತಿಯ ಮಾರಾಟ. ಮಗದೊಂದೆಡೆ, ಒಂದು ಕಾಲದಲ್ಲಿ ಅಲ್ಪ ಬೆಲೆಗೆ ಲೀಸಿಗೆ ಭೂಮಿ ಪಡೆದುಕೊಂಡು ಅದೇ ಚಿಲ್ಲರೆ ಹಣವನ್ನು ಪಾವತಿಸುತ್ತಾ ಭೂಮಿ ಅನುಭೋಗಿ ಸುತ್ತಿರುವ ಶ್ರೀಮಂತರು, ಜೊತೆಗೆ ವಕ್ಫ್ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡಿರುವ ಬೆಂಗಳೂರಿನ ಭೂಮಾಫಿಯಾ. ಮುಸ್ಲಿಮ್ ಬಡವರ ಆಸ್ತಿಯನ್ನು ಲೂಟಿ ಹೊಡೆದ ವಂಚನೆಯಲ್ಲಿ ಮುಖೇಶ್ ಅಂಬಾನಿಯಂಥ ವರು ಮಾತ್ರವಲ್ಲ, ಮುಸ್ಲಿಮ್ ಸಮುದಾಯಕ್ಕೇ ಸೇರಿದ ಹಲವು ಬೃಹತ್ ಶ್ರೀಮಂತರು ಹಾಗೂ ರಾಜಕಾರಣಿಗಳು ಒಳಗೊಂಡಿರುವುದು ದುರಂತ. ಈ ಕಾರಣದಿಂದಲೇ ಈ ಪರಿಯ ಅನ್ಯಾಯದ ವಿರುದ್ಧ ಧ್ವನಿಯೆತ್ತಲು ಯಾರೂ ನೇತೃತ್ವ ವಹಿಸುತ್ತಿಲ್ಲ. ಹಾಗೆ ನೇತೃತ್ವ ವಹಿಸಲು ಮುಂದಾದರೂ ಆ ಧ್ವನಿಯನ್ನು ಅಲ್ಲೇ ಅಮುಕಿ ಬಿಡಲಾಗುತ್ತದೆ.

ವಕ್ಫ್ ಬೋರ್ಡಿನ ಆಸ್ತಿ ಹೇಗೆ ಕಂಡವರ ಪಾಲಾಗುತ್ತಿದೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೊಟೇಲ್ ಪ್ರಕರಣ.1.65 ಲಕ್ಷ ಚದರ ಅಡಿ ವಿಸ್ತೀರ್ಣದ ಈ ಭೂಮಿಗೆ ಈ ಹೊಟೇಲ್ ನೀಡುತ್ತಾ ಬಂದಿದ್ದ ಲೀಸ್‌ನ ಹಣ ಎಷ್ಟು ಗೊತ್ತೆ? ತಿಂಗಳಿಗೆ ಬರೇ ಒಂದೂವರೆ ಸಾವಿರ ರೂಪಾಯಿ.  ಈ ಭೂಮಿ ಮುಸ್ಲಿಮ್ ಬಡವರಿಗೆ ದೇವರ ಹೆಸರಲ್ಲಿ ೧೯೬೫ರಲ್ಲಿ ಸರ್ ಮಿರ್ಝಾ ಇಸ್ಮಾಯೀಲ್  ವಕ್ಫ್ ಮಾಡಿದ್ದರು.೧೯೭೩ರಲ್ಲಿ ವಕ್ಫ್‌ನಿಂದ ಹೊಟೇಲ್ ಉದ್ಯಮಿ ಗಳು ಈ ಭೂಮಿಯನ್ನು ತಮ್ಮದಾಗಿಸಿಕೊಂಡು ೯೦ ವರ್ಷದ ಲೀಸನ್ನು ಬರೆಸಿಕೊಂಡರು. ಆರಂಭದಲ್ಲಿ 30 ವರ್ಷಕ್ಕೆ ಲೀಸ್ ಮಾಡಿ ಕೊಂಡಿದ್ದ ಅವರು ಬಳಿಕ ಅದನ್ನು ವಿಸ್ತರಿಸಿದರು. ೭೦ರ ದಶಕದ ದರವನ್ನೇ ಇತ್ತೀಚಿನವರೆಗೂ ಈ ಹೊಟೇಲ್ ಯಾವ ನಾಚಿಕೆಯೂ ಇಲ್ಲದೆ ಪಾವತಿಸಿಕೊಂಡು ಬಂದಿದೆ. ವಕ್ಫ್ ಮಾಡುವು ದೆಂದರೆ ದೇವರ ಹೆಸರಲ್ಲಿ ಬಡವರಿಗೆ ಮಾಡಿದ ದಾನ. ಅದನ್ನು ಅನುಭೋಗಿಸುತ್ತಿರುವವರು ಪರೋಕ್ಷವಾಗಿ ಬಡವರ ಹಣವನ್ನೇ ದೋಚು ತ್ತಿದ್ದಾರೆ ಎನ್ನುವ ಅರಿವು ಅವರಿಗಿರಬೇಕು.  ಆದರೆ ಇದರ ವಿರುದ್ಧ ಯಾವುದೇ ಧಾರ್ಮಿಕ ಮೌಲ್ವಿಗಳಾಗಲಿ, ರಾಜಕೀಯ ಮುಖಂಡರಾಗಲಿ ಮಾತನಾಡದೇ ತೆಪ್ಪಗಿರುವುದು ಈ ದೇಶದ ಬಡ ಮುಸ್ಲಿಮರ ದೌರ್ಭಾಗ್ಯವೇ ಸರಿ.

ಅದೇನೇ ರಾಜಕೀಯ ಕಾರಣ ಇರಲಿ. ಕರ್ನಾಟಕದಲ್ಲಿ ವೊತ್ತ ವೊದಲಾಗಿ ಬಿಜೆಪಿ ಸರಕಾರ ವಕ್ಫ್ ಆಸ್ತಿಯ ಅಕ್ರಮಗಳ ವರದಿ ಯೊಂದನ್ನು ತಯಾರಿಸಲು ತನಿಖಾ ಆಯೋಗ ವನ್ನು ನೇಮಿಸಿತು. ಆದರೆ ಮುಸ್ಲಿಮರ ದುರದೃಷ್ಟಕ್ಕೆ, ಅದೂ ಕೂಡ ಕೆಟ್ಟ ರಾಜಕೀಯಕ್ಕೆ ಬಳಕೆ ಯಾಯಿತು. ಅಧಿಕಾರ ಲಾಲಸೆಯಿಂದ ಆರೆಸ್ಸೆಸ್‌ನ್ನು ಮೆಚ್ಚಿಸಲಿಕ್ಕಾಗಿ ನಿತ್ಯ ಹಲವು ಬಗೆಯ ಕೋತಿಯಾಟವನ್ನು ಆಡುವ ಕುಖ್ಯಾತ ಮರಿ ಪುಡಾರಿಯೊಬ್ಬರನ್ನು   ಈ ತನಿಖೆಗೆ ಮುಖ್ಯಸ್ಥ ನನ್ನಾಗಿ ಮಾಡಲಾಯಿತು.  ಈ ವರದಿಯೊಳ ಗಿರುವ ಹಲವು ಲೋಪಗಳು, ಪೂರ್ವಗ್ರಹಗಳು, ಬಿಜೆಪಿ ಪ್ರೇರಿತ ಆರೋಪಗಳು ಇವೆಲ್ಲ ಅದರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿವೆ.ಇಂದು ಆ ಕಾರಣವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಸರಕಾರ ವರದಿಯನ್ನು ತಿರಸ್ಕರಿಸು ವುದಕ್ಕೆ ಮುಂದಾಗಿದೆ. ಆದರೆ ಕಾಂಗ್ರೆಸ್ ಸರಕಾರ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಜೆಪಿ ಸರಕಾರ ಬಹು ದೊಡ್ಡ ಹಗರಣವೊಂದರ ತನಿಖೆಗೆ ಒಂದು ಪೀಠಿಕೆಯನ್ನಾದರೂ ಹಾಕಿತು. ಅವರ ವರದಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಹೆಗಲು ಕೊಡವಿಕೊಂಡರೆ, ಅದು ಈ ನಾಡಿನ ಬಡ ಮುಸ್ಲಿಮರಿಗೆ ಮಾಡುವ ದೊಡ್ಡ ಅನ್ಯಾಯವಾದೀತು.ಮೊದಲು ನಾಡಿನಾದ್ಯಂತವಿರುವ ವಕ್ಫ್ ಆಸ್ತಿಯ ಸರ್ವೇ ಕಾರ್ಯವನ್ನು ಹಮ್ಮಿಕೊಳ್ಳಬೇಕು. ಅದಾದ ಬೆನ್ನಿಗೆ, ಯಾರ‍್ಯಾರಿಂದ ಎಷ್ಟೆಷ್ಟು ಎಕರೆ ವಕ್ಫ್ ಆಸ್ತಿ ಅತಿಕ್ರಮಣವಾಗಿದೆ ಎನ್ನುವ ವರದಿ ಸಿದ್ಧವಾಗಬೇಕು. ಅದನ್ನು  ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕು. ಇದೆಲ್ಲ ಕಾಂಗ್ರೆಸ್‌ನ ಹೊಣೆ.ಮುಖ್ಯವಾಗಿ, ಅಲ್ಪಸಂಖ್ಯಾತರ ಬಗ್ಗೆ ಒಲವುಳ್ಳ ಸಿದ್ದರಾಮಯ್ಯನವರ ಹೊಣೆ. ಈ ವರದಿ ಬರಲೇ ಬೇಕಾಗಿದೆ. ಒತ್ತುವರಿಯಾಗಿರುವ, ಅಕ್ರಮವಾಗಿ ನರಿ ನಾಯಿಗಳ ಪಾಲಾಗಿರುವ ವಕ್ಫ್ ಆಸ್ತಿ ಮತ್ತೆ ಅಲ್ಲಾಹನ ಹೆಸರಿನಲ್ಲಿ ಬಡವರಿಗೆ ಸೇರಬೇಕು.ಬಡ ಮುಸ್ಲಿಮರ ಅಭಿವೃದ್ದಿಗೆ ಯಾವುದೇ ಪಕ್ಷದ ಭಿಕ್ಷೆ ಬೇಕಾಗಿಲ್ಲ. ಅವರದೇ ಆಸ್ತಿ, ಸಂಪತ್ತನ್ನು ಅವರಿಗೆ ಮರಳಿಸಿದರೂ ಸಾಕು. ಈ ಮೂಲಕ ಈ ದೇಶದ ಶೇ. ೫೦ರಷ್ಟು ಬಡ ಮುಸ್ಲಿಮರಿಗೆ ಶಾಲೆ, ವಸತಿ, ಆರೋಗ್ಯ ಇತ್ಯಾದಿಗಳನ್ನು ಒದಗಿಸಬಹುದು. ವೇದಿಕೆ ಏರಿದಾಕ್ಷಣ ಸಾಚಾರ್ ವರದಿಯ ಪ್ರತಿಯನ್ನು ಹಿಡಿದು ಅರಚಾಡುವ ಕೂಗುವ ರಾಜಕಾರಣಿಗಳು-ಅದರಲ್ಲೂ ಮುಸ್ಲಿಮ್ ನಾಯಕರು -ಬಡ ಮುಸ್ಲಿಮರ ಹಕ್ಕನ್ನು, ಅಕ್ರಮಿಗಳಿಂದ ಕಿತ್ತು ಬಡವರಿಗೆ ತಲುಪಿಸುವ ಕೆಲಸದಲ್ಲಿ ಮುಂಚೂಣಿಯನ್ನು ವಹಿಸಬೇಕು. ವಕ್ಫ್ ಆಸ್ತಿಯೆಂದರೆ ಅಲ್ಲಾಹನ ಹೆಸರಲ್ಲಿ ದಾನ ಮಾಡಲಾದ ಆಸ್ತಿ. ಆ ಆಸ್ತಿಯನ್ನು ಕಾನೂನು, ಕಾಯ್ದೆ ಇತ್ಯಾದಿಗಳ ಹೆಸರಿನಲ್ಲಿ ಮೋಸದಿಂದ ಲಪಟಾಯಿಸಿ ಅನುಭೋಗಿಸುವುದೆಂದರೆ, ಅಲ್ಲಾಹನಿಗೆ ದ್ರೋಹ ಬಗೆದಂತೆ.

ಕುರ್‌ಆನ್‌ನಲ್ಲಿ ಹೀಗೊಂದು ಕ್ರಾಂತಿಕಾರಿ ಸವಾಲಿದೆ ‘ನಿಮಗೇನಾಗಿದೆ?........ ವೊರೆ ಇಡುತ್ತಿರುವ ಮರ್ದಿತ ಪುರುಷರು, ಸ್ತ್ರೀಯರು ಮತ್ತು ಮಕ್ಕಳ ಪರವಾಗಿ ನೀವೇಕೆ ಹೋರಾಡುವುದಿಲ್ಲ?” ಈ ಪ್ರಶ್ನೆಗೆ ಪ್ರತಿಕ್ರಿಯಿಸುವ ಸಮಯ ಬಂದಿದೆ. ದುರ್ಬಲ ವರ್ಗದ ಜನರ ಸಂಪತ್ತನು ಮೋಸದಿಂದ ತಮದಾಗಿಸಿಕೊಂಡು ಅನುಭೋಗಿಸುತ್ತಿರುವ ಶ್ರೀಮಂತರ ವಿರುದ್ಧ ಜನಚಳವಳಿ ನಡೆಯಬೇಕಾಗಿದೆ. ಬಡವರ ಸಂಪತ್ತು ಮತ್ತೆ ಬಡವರ ಕೈ ಸೇರಬೇಕಾಗಿದೆ. ಈ ಹೋರಾಟಕ್ಕಾಗಿ ಶೋಷಿತ ಮುಸ್ಲಿಮ್ ಸಮುದಾಯವು ನಾಯಕನೊಬ್ಬನ ನಿರೀಕ್ಷೆಯಲ್ಲಿದೆ.

11 comments:

 1. Bekkige Gante Kattuwawaru Yaaru?

  ReplyDelete
 2. ಬಾಬರೀ ಮಸೀದಿಯನ್ನು ಯಾಕೆ ಬದಿಗಿಡಬೇಕು ಎಂದು ಒಬ್ಬರು ಕೇಳಿದ್ದಾರೆ. ಅದು ಎಲ್ಲ ಮುಸ್ಲಿಮರ ಪ್ರಶ್ನೆ, ಕಳವಳವೂ ಹೌದು. ಅದಕ್ಕಿಲ್ಲಿ ಉತ್ತರಿಸಿದ್ದೇನೆ

  ಮೊದಲ ಕಾರಣ -ಬಾಬರಿ ಮಸೀದಿ ಭೂಮಿ ಬರೆ 2 ಎಕರೆ. ವಕ್ಫ್ ಭೂಮಿ 1 4 ಲಕ್ಷ ಎಕರೆ.
  ಎರಡನೇ ಕಾರಣ- ಬಾಬರಿ ಮಸೀದಿ ಭೂಮಿಯಿಂದ ಲಾಭ ಮಾಡಿಕೊಂಡವರು, ಮಾಡುತ್ತಿರುವರು ರಾಜಕಾರಣಿಗಳು. ನಮ್ಮ ಗಮನ ಈ ವಕ್ಫ್ ಭೂಮಿ ಕಡೆ ಬರಬಾರದು ಎಂದೇ ಅವರು ಬಾಬ್ರಿ ಮಸೀದಿ ಕುರಿತು ಬೊಬ್ಬೆ ಹೋದೀತ ಇರ್ತಾರೆ.
  ಮೂರನೇ ಕಾರಣ-1 4 ಲಕ್ಷ ಎಕರೆಯಲ್ಲಿ ಅರ್ಧದಷ್ಟು ಸದುಪಯೋಗವಾದರು ಈ ದೇಶದ ಮುಸ್ಲಿಮರ ಅರ್ಧದಷ್ಟು ಸಮಸ್ಯೆ ಪರಿಹಾರವಾಗುತ್ತದೆ
  ನಾಲ್ಕನೇ ಕಾರಣ-ಬಾಬರೀ ಮಸೀದಿ ಸಂವಿಧಾನದ ಮೇಲೆ ನಂಬಿಕೆಯಿರುವ ಎಲ್ಲ ಭಾರತೀಯರ ಸಮಸ್ಯೆ
  ವಕ್ಫ್ ಆಸ್ತಿ ಬರೆ ಮುಸ್ಲಿಮರೆ ಹೋರಾಟ ನಡೆಸಬೇಕಾದ ಸಮಸ್ಯೆ
  5 ನೆ ಕಾರಣ - ಬಡವರ ಮೇಲೆ ಅಕ್ರಮ ನಡೆಯೋವಾಗ ನೀವೇಕೆ ಮಾತನಾಡುದಿಲ್ಲ ಎಂದು ಅಲ್ಲಾಹನು ಕುರ್ಆನ್ನಲ್ಲಿ ಕೇಳಿದ್ದಾನೆ. ಅದಕ್ಕೆ ಪ್ರತಿಕ್ರಿಯಿಸೂದು ಪ್ರತಿ ಮುಸ್ಲಿಮರ ಕರ್ತವ್ಯ.
  6 ನೆ ಕಾರಣ- ಸಂಗಪರಿವಾರ ಮುಸ್ಲಿಮರ ಶತ್ರುಗಳು ಎಂದು ಬಿಂಬಿತವಾದವರು. ವಕ್ಫ್ ಆಸ್ತಿ ನಮ್ಮವರು ಅಂದರೆ ಮುಸ್ಲಿಂ ಶ್ರಿಮಂತರಿಂದಲೇ ಹೆಚ್ಚು ಆಕ್ರಮಿಸಲ್ಪಟ್ಟಿದೆ. ಶತ್ರುಗಳು ಮಾಡುವ ದ್ರೋಹಕ್ಕಿಂತ ನಮ್ಮವರು ಮಾಡುವ ದ್ರೋಹ ಹೆಚ್ಚಿನದು. ನಾವು ನಮ್ಮೊಳಗಿನ ಶತ್ರುಗಳನ್ನು ಎದುರಿಸಿ ಬಡವರು ಅನುಭವಿಸ ಬೇಕಾದ ವಕ್ಫ್ ಭೂಮಿಯನ್ನು ಬಡವರಿಗೆ ಮರಳಿಸಲು ಹೋರಾಟ ನಡೆಸಬೇಕಾಗಿದೆ.
  7 ನೆ ಕಾರಣ- ನಾನು ಬಾಬರಿ ಮಸೀದಿಯನ್ನು ಮರೆಯಬೇಕು ಎಂದು ಹೇಳಿಲ್ಲ. ಬದಿಗಿಡಿ ಎಂದು ಹೇಳಿದೆ

  ReplyDelete
  Replies
  1. ನೀವು ಎದುರಿರಿಸಿದ ಮಾನದಂಡಗಳನ್ನು ನಾನು ಬೆಂಬಲಿಸುತ್ತೇನೆ,ಅರ್ಥಪೂರ್ಣ ವಿಚಾರ..

   Delete
  2. Chandrashekhara DamleJune 15, 2013 at 5:00 AM

   When you say this I feel people may accept it as really rational view point. Your arguments are justifiable and so valuable also. I feel a team of rational Muslims should come forward to circulate this viewpoint beyond the wall created by the rich Muslims.

   Delete
  3. This comment has been removed by the author.

   Delete
 3. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ನಾವೇ ಜೊತೆ ಸೇರಿ ಕಟ್ಟೋಣ. ಮೊದಲು ಈ ಕುರಿತು ಜನರಿಗೆ ಮನವರಿಕೆ ಮಾಡುವ ಕೆಲಸ ನಡೆಯಬೇಕು

  ReplyDelete
 4. superb article khanditha idondu dodda issue aagbeku

  ReplyDelete
 5. ನನಗೆ ವಕ್ಫ್ ಎಂಬ ಪದದ ಸರಿಯಾದ ಅರ್ಥ ತಿಳಿಯಿತು.ಧನ್ಯವಾದಗಳು, ಬಶೀರ್ ಅವರೇ

  ReplyDelete
 6. ninage yaaru heliddu maaaraya raajyada muslimarige yaavude khaate sigolla anta. omme sari kannu bittu nodu.......

  ReplyDelete
 7. nimma abhipraya nija basher. adare bekkige ghante kattuvavaru yaru?

  ReplyDelete
 8. Why don't you be that leader?

  ReplyDelete