Thursday, June 6, 2013

ಬಣ್ಣದ ಲೋಕದ ಕಪ್ಪು ಗುಲಾಬಿ-ರೋಸಿ

ಕೆ. ಪಿ. ರೋಸಿ.
ಇತ್ತೀಚೆಗೆ ನಾನು ಮಲಯಾಳಂ ಚಿತ್ರ ‘ಸೆಲ್ಯುಲಾಯ್ಡ’ ನೋಡಿದೆ. ಇದನ್ನು ನೋಡುವುದಕ್ಕೆ ಮುಖ್ಯ ಕಾರಣ, ಈ ಚಿತ್ರವನ್ನು ನಿರ್ದೇಶಿಸಿರುವುದು ಮಲಯಾಳಂನ ಖ್ಯಾತ ನಿರ್ದೇಶಕ ಕಮಲ್. ಕಮರ್ಶಿಯಲ್ ಮತ್ತು ಕಲಾತ್ಮಕತೆಯ ನಡುವೆ ಸಮನ್ವಯತೆಯನ್ನು ಸಾಧಿಸಿದ ನಿರ್ದೇಶಕ ಕಮಲ್. ಬದುಕಿನ ತಳಮಟ್ಟದ ಸೂಕ್ಷ್ಮಗಳನ್ನು ಹಿಡಿದಿಡುವ ಶಕ್ತಿ ಕಮಲ್‌ಗಿರುವ ಕಾರಣದಿಂದಲೇ, ನಾನು ಇವರ ಹೆಚ್ಚಿನ ಚಿತ್ರಗಳನ್ನು ನೋಡಿದ್ದೇನೆ. ‘ಸೆಲ್ಯುಲಾಯ್ಡ’ ಚಿತ್ರ ನೋಡುವುದಕ್ಕೆ ಇನ್ನೂ ಒಂದು ಕಾರಣವಿತ್ತು. ಪರೋಕ್ಷವಾಗಿ ಇದೊಂದು ಸಾಕ್ಷ ಚಿತ್ರವೂ ಹೌದು. ಜೊತೆಗೆ ಚಿತ್ರರಂಗವನ್ನೇ ಆಧರಿಸಿದ ಅದರೊಳಗಿನ, ರಾಜಕೀಯ ಮತ್ತು ದುರಂತಗಳ ಕಡೆಗೆ ಬೆಳಕು ಚೆಲ್ಲುವ ಉದ್ದೇಶದಿಂದ ಮಾಡಿದ ಚಿತ್ರ ಇದು.

ಕಮಲ್ ಅವರ ಈ ಚಿತ್ರದ ವಸ್ತು ಮಲಯಾಳಂ ಚಿತ್ರರಂಗದ ಪಿತಾಮಹ ಜೆ. ಸಿ. ಡೇನಿಯಲ್‌ನ ದುರಂತ ಬದುಕು. ಮಲಯಾಳಂ ಚಿತ್ರೋದ್ಯಮ ಕುಡಿಯೊಡೆದದ್ದು ಜೆ. ಸಿ. ಡೇನಿಯಲ್ ಮಡಿಲಿನಲ್ಲಿ. ಈತ ಮಲಯಾಳಂನ ಮೊತ್ತ ಮೊದಲ ಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ನಟ. ಈತ ಮಲಯಾಳಂಗೆ ಕೊಟ್ಟಿರುವುದು ಒಂದೇ ಒಂದು ಚಿತ್ರ. ಅದರ ಹೆಸರು ವಿಗದ ಕುಮಾರನ್. ಇದೊಂದು ಮೂಕಿ ಚಿತ್ರ. ಬಳಿಕ ಡೇನಿಯಲ್ ಬದುಕು ಕೂಡ ಒಂದು ಮೂ
ಚಿತ್ರವಾಯಿತು. ಈ ಚಿತ್ರದ ಜೊತೆಗೆ ಅವರು ನಡೆಸಿದ ಹೋರಾಟ, ಒಂದೇ ಒಂದು ಕಾಪಿ ಇಟ್ಟುಕೊಂಡು ಅದನ್ನು ಜನರೆಡೆಗೆ ತಲುಪಿಸಲು ಅವನು ನಡೆಸಿದ ಪ್ರಯತ್ನ, ಪಟ್ಟಭದ್ರ ಹಿತಾಸಕ್ತಿಗಳಿಂದ ಎದುರಾದ ವಿರೋಧ ಇವೆಲ್ಲವನ್ನು ಸೆಲ್ಯುಲಾಯ್ಡಿ ಚಿತ್ರ ಕಟ್ಟಿಕೊಡುತ್ತದೆ. ಎಲ್ಲಕ್ಕಿಂತ ದುಃಖದ ಸಂಗತಿಯೆಂದರೆ, ಇಷ್ಟೆಲ್ಲ ಮಾಡಿ ಬಿಕಾರಿಯಾದ ಡೇನಿಯಲ್‌ನನ್ನು ಮಲಯಾಳಂನ ಮೊತ್ತ ಮೊದಲ ನಿರ್ದೇಶಕ, ನಿರ್ಮಾಪಕ, ನಟ ಎಂದು ಗುರುತಿಸುವುದಕ್ಕೂ ಕೇರಳ ಸರಕಾರ ಹಿಂಜರಿಯುತ್ತದೆ. ಅದಕ್ಕೆ ಕುಂಟು ನೆಪಗಳನ್ನು ಒಡ್ಡುತ್ತದೆ. ಜೀವನದಲ್ಲಿ ಸೋತು ಸುಣ್ಣವಾದ ಡೇನಿಯಲ್ ತಮಿಳುನಾಡಲ್ಲಿ ಅಜ್ಞಾತವಾಗಿ ಬದುಕುತ್ತಿರುತ್ತಾನೆ. ಆತ ತಮಿಳ, ಕ್ರಿಶ್ಚಿಯನ್ ಎಂಬ ಕಾರಣ ಒಡ್ಡಿ, ಸರಕಾರ ಮನವಿಯನ್ನು ತಿರಸ್ಕರಿಸುತ್ತದೆ. ವೃದ್ಧಾಪ್ಯ ಕಾಲದಲ್ಲಿ ಪಿಂಚಣಿಗಾಗಿ ಕೇರಳ ಸರಕಾರದೆಡೆಗೆ ಬೊಗಸೆಯೊಡ್ಡಿದಾಗಲೂ ಸರಕಾರ ಕೈ ಚೆಲ್ಲಿತು. ‘‘ನಿಮ್ಮ ವ್ಯಾಪ್ತಿ ನಮಗೆ ಬರುವುದಿಲ್ಲ. ನೀವು ತಮಿಳು ನಾಡು ಸರಕಾರದೊಂದಿಗೆ ಕೇಳಿ’’ ಎಂದಿತು. 1975ರಲ್ಲಿ ಡೇನಿಯಲ್ ಮೃತಪಟ್ಟರು. ಇದಾದ ಬಳಿಕ ಸರಕಾರ ‘ವಿಗದಕುಮಾರನ್’ ಚಿತ್ರ ಮಲಯಾಳಂನ ಮೊತ್ತ ಮೊದಲ ಚಿತ್ರವೆಂದು ಒಪ್ಪಿಕೊಂಡಿತು. ಜೊತೆಗೆ ಡೇನಿಯಲ್‌ನನ್ನು ಕೇರಳ ಚಿತ್ರರಂಗದ ಪಿತಾಮಹ ಎಂದು ಘೋಷಿಸಿತು.

ನಾನು ಹೇಳಲು ಹೊರಟಿರುವುದು ಡೇನಿಯಲ್ ಕತೆಯನಲ್ಲ. ಡೇನಿಯಲ್ ಕತೆಯನ್ನು ಅರಸುತ್ತಾ ಹೋಗುವ ನಿರ್ದೇಶಕನಿಗೆ ಇನ್ನೊಂದು ಕಪ್ಪುಗುಲಾಬಿಯ ಪರಿಚಯವಾಗುತ್ತದೆ. ಆಕೆ ಇನ್ನಾರೂ ಅಲ್ಲ. ಕೇರಳ ಚಿತ್ರರಂಗದ ಮೊತ್ತ ಮೊದಲ ನಟಿ ಕೆ. ಪಿ. ರೋಸಿ. ನಿರ್ದೇಶಕ ಡೇನಿಯಲ್ ಅವರ 'ವಿಗದ ಕುಮಾರನ್' ಚಿತ್ರದ ನಾಯಕಿಯಾಗಿ ನಟಿಸಿ, ಬಳಿಕ ಇದ್ದಕ್ಕಿದ್ದಂತೆಯೇ ಕಣ್ಮರೆಯಾದ ರೋಸಿ ಮಲಯಾಳಂ ಚಿತ್ರರಂಗದ ಆರಂಭ ಕಾಲದ ಒಡೆದ ಕನ್ನಡಿ. ಅವಳನ್ನು ಬದುಕನ್ನು ಮುಟ್ಟ ಹೋದರೆ ನಮ್ಮ ಕೈತುಂಬಾ ಗಾಯಗಳು. ಕಮಲ್ ಅವರ
‘ಸೆಲ್ಯುಲಾಯ್ಡ’ ಚಿತ್ರದಲ್ಲಿ ನಮ್ಮನ್ನು ಡೇನಿಯಲ್‌ಗಿಂತ ಹೆಚ್ಚು ರೋಸಿ ಕಾಡುತ್ತಾಳೆ.

 ಸುಮಾರು 1928ರ ಕಾಲಘಟ್ಟದಲ್ಲಿ ತನ್ನೆಲ್ಲ ಜಮೀನನ್ನು ಮಾರಿ, ‘ವಿಗದಕುಮಾರನ್’ ಚಿತ್ರವನ್ನು ಮಾಡಲು ಹೊರಡುತ್ತಾರೆ ಡೇನಿಯಲ್. ಆಗ ಅವರಿಗೆ ಎದುರಾದ ಅತಿ ದೊಡ್ಡ ಸಮಸ್ಯೆಯೆಂದರೆ ನಟಿಯದು. ನಾಟಕ, ಚಿತ್ರದಲ್ಲಿ ನಟಿಸುವವರ ಕುರಿತಂತೆ ಅತ್ಯಂತ ಕೀಳುಭಾವನೆ ಹೊಂದಿದ ಕಾಲಘಟ್ಟವದು. ಕೇರಳದಲ್ಲಂತೂ ಮೇಲ್ವರ್ಣೀಯರ ದಬ್ಬಾಳಿಕೆ ತನ್ನ ಗರಿಷ್ಠ ಹಂತಕ್ಕೆ ತಲುಪಿದ್ದ ಸಂದರ್ಭ. ನಟಿಗಾಗಿ ಹಲವು ತಿಂಗಳುಗಳ ಕಾಲ ಹುಡುಕಾಡಿದ ಅವರಿಗೆ ಪರಿಚಯವಾದುದು ರಾಜಮ್ಮ ಎನ್ನುವ ಪುಲೆಯ ಹುಡುಗಿ. ಅಂದಿನ ಕಾಲದಲ್ಲಿ ಕೇರಳದಲ್ಲಿ ಪುಲೆಯ ಅಂದರೆ ಹೊಲೆಯ. ಕೂಲಿ ಕೆಲಸ ಮಾಡುತ್ತಾ ಬದುಕು ನಡೆಸುವ ಈ ದಲಿತ ಹುಡುಗಿಗೆ ನಾಟಕದಲ್ಲಿ ನಟಿಸುವ ಚಟವಿತ್ತು. ಒಂದೆರಡು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಳು. ಈಕೆಯ ತಂದೆ ಕೂಲಿಕೆಲಸ ಮಾಡುತ್ತಾ ಜೀವನ ಮಾಡುತ್ತಿದ್ದ. ಇನ್ನೊಬ್ಬ ದೊಡ್ಡಪ್ಪ ಒಂದು ಆಸ್ಪತ್ರೆಯಲ್ಲಿ ಶೌಚಾಲಯದಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರನ್ನು ಒಲಿಸಿದ ಡೇನಿಯಲ್, ರಾಜಮ್ಮನನ್ನು ಕೇರಳದ ಮೊತ್ತ ಮೊದಲ ನಟಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಡೇನಿಯಲ್ ಕೈಯಲ್ಲಿ ರಾಜಮ್ಮ ರೋಸಿಯಾದರು. ಶೂಟಿಂಗ್ ಸಂದರ್ಭದಲ್ಲಿ ಅವಳ ಊಟವನ್ನು ಅವಳೇ ತಂದು ಪ್ರತ್ಯೇಕವಾಗಿ ಉಣ್ಣಬೇಕಾಗಿತ್ತು. ನಟಿಸಿದ ಬಳಿಕ, ಸಂಜೆ ಕೂಲಿಕೆಲಸಕ್ಕೆ ತೆರಳಬೇಕಾಗಿತ್ತು. ಈಕೆಯ ಪಾಲಿಗೆ ನಟಿಸುವುದರ ಜೊತೆಗೆ ಸಿನಿಮಾದಲ್ಲಿ ಇನ್ನೊಂದು ರೋಮಾಂಚನ ತರುವ ವಿಷಯವಿತ್ತು. ಆಕೆ ಚಿತ್ರದಲ್ಲಿ ನಟಿಸಲಿರುವುದು ಮೇಲ್ಜಾತಿಯ ನಾಯರ್ ಹೆಣ್ಣು ಸರೋಜಾಳ ಪಾತ್ರ. ಆದರೆ ಅದೇ ಪಾತ್ರ ತನ್ನ ಬದುಕಿಗೆ ಕುತ್ತಾಗುತ್ತದೆ ಎಂದು ಅವಳು ಭಾವಿಸಿರಲಿಲ್ಲ.


 ಎಲ್ಲ ಸಂಕಷ್ಟಗಳ ನಡುವೆ ಮೊತ್ತ ಮೊದಲ ಮಲಯಾಳಂ ಮೂಕಿ ಚಿತ್ರ ಬಿಡುಗಡೆಗೆ ಸಿದ್ಧವಾಯಿತು. ದೀಪ ಹಚ್ಚುವ ಕೆಲಸಕ್ಕೆ ಹಿರಿಯ ಬ್ರಾಹ್ಮಣರೊಬ್ಬರನ್ನು ಕರೆಸಲಾಗಿತ್ತು. ತನ್ನ ಮೊತ್ತ ಮೊದಲ ಚಿತ್ರವನ್ನು ನೋಡಲು ರೋಸಿ ಸಂಭ್ರದಿಂದ ಸಿದ್ಧಳಾಗಿ ಬಂದಿದ್ದಳು. ಆದರೆ, ಕಾರ್ಯಕ್ರಮ ಉದ್ಘಾಟಿಸುವ ಹಿರಿಯರು ರೋಸಿಯನ್ನು ನೋಡಿ ಬಿಟ್ಟರು. ಆಕೆ ದಲಿತ ಹೆಣ್ಣು ಎನ್ನುವುದು ಅವರಿಗೆ ಗೊತ್ತಿತ್ತು. ಡೇನಿಯಲ್‌ನನ್ನು ಕರೆಸಿದವರೇ ‘ತಕ್ಷಣ ಆಕೆಯನ್ನು ಹೊರಗೆ ಕಳುಹಿಸಿ. ಅವಳು ಇಲ್ಲಿದ್ದರೆ ನಾನು ದೀಪಬೆಳಗಿಸುವುದಿಲ್ಲ’’ ಎಂದು ಬಿಟ್ಟರು. ಡೇನಿಯಲ್ ತಬ್ಬಿಬ್ಬಾದರು. ಸಾಲಸೋಲ ಮಾಡಿ ತಯಾರಿಸಿದ ಮೊತ್ತ ಮೊದಲ ಚಿತ್ರ. ಹೇಗಾದರೂ ಬಿಡುಗಡೆಯಾದರೆ ಸಾಕು ಎಂಬ ಸ್ಥಿತಿಯಲ್ಲಿ ಅವರಿದ್ದರು. ತಾನು ನಟಿಸಿದ ಚಿತ್ರವನ್ನು ನೋಡಲು ಹಂಬಲಿಸಿದ್ದ ರೋಸಿಯನ್ನು ಬಲವಂತವಾಗಿ ಹೊರ ಹಾಕಲಾಯಿತು. ಕೊನೆಗೂ ಹಿರಿಯರು ದೀಪ ಬೆಳಗಿಸಿದರು. ಉದ್ಘಾಟನೆಗೊಂಡು ಚಿತ್ರ ಆರಂಭವಾಯಿತು. ಮೂಕಿ ಚಿತ್ರವಾದುದರಿಂದ, ಡೇನಿಯಲ್ ಅವರೇ ಸಂದರ್ಭಗಳನ್ನು ವಿವರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ರೋಸಿ ಪಾತ್ರ ಪ್ರವೇಶವಾಯಿತು. ರೋಸಿ ನಟಿಸಿರುವುದು ಮೇಲ್ವರ್ಣದ ನಾಯರ್ ಪಾತ್ರದಲ್ಲಿ ಎನ್ನೋದು ದೀಪಬೆಳಗಿಸಿದ ಹಿರಿಯರಿಗೆ ತಿಳಿದದ್ದೇ ಕೆಂಡಾಮಂಡಲವಾದರು. ‘ದಲಿತ ಹೆಣ್ಣು ಮೇಲ್ಜಾತಿಯವರ ಪಾತ್ರ ನಿರ್ವಹಿಸುವುದೇ?’ ಚಿತ್ರ ನಿಲ್ಲಿಸಿ ಎಂದು ಅಬ್ಬರಿಸಿದರು. ಅವರೊಂದಿಗಿದ್ದ ಬೆಂಬಲಿಗರು ಗದ್ದಲವೆಬ್ಬಿಸಿದರು. ಅನಿವಾರ್ಯವಾಗಿ ಡೇನಿಯಲ್ ಪ್ರದರ್ಶನವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಹಿರಿಯರು ಅಲ್ಲಿಂದ ಎದ್ದು ಹೊರ ನಡೆದರು.
ಡೇನಿಯಲ್
 


ಇಷ್ಟರಲ್ಲೇ ದಲಿತ ಹೆಣ್ಣು ನಾಯರ್ ಪಾತ್ರವನ್ನು ನಿರ್ವಹಿಸಿರುವುದು ಬೆಂಕಿಯಂತೆ ಹರಡತೊಡಗಿತು. ರೋಸಿಯ ತಂದೆಗೆ ಬೆದರಿಕೆ ಹಾಕಲಾಯಿತು. ಪುಂಡು ಪೋಕರಿಗಳು ಆಕೆಯ ಮನೆಗೆ ಕಲ್ಲು ತೂರಾಟ ನಡೆಸುವುದು ಸಾಮಾನ್ಯವಾಯಿತು. ಮೂರನೆ ದಿನ ಮತ್ತೆ ಚಿತ್ರ ಪ್ರದರ್ಶಿಸಲು ಡೇನಿಯಲ್ ಹೊರಟರು. ಚಿತ್ರ ಪ್ರದರ್ಶನವೂ ಆಯಿತು. ಆದರೆ ಅಂದೇ ರಾತ್ರಿ ಮೇಲ್ವರ್ಣೀಯರ ಒಂದು ತಂಡ ರೋಸಿಯ ಮನೆಗೆ ಬೆಂಕಿ ಹಚ್ಚಿತ್ತು. ಆಕೆಯನ್ನು ಜೀವಂತ ದಹಿಸುವುದು ಅವರ ಉದ್ದೇಶವಾಗಿತ್ತು. ಆದರೆ ಆ ಕಾಳ ಕತ್ತಲೆಯಲ್ಲಿ ತನ್ನ ಇಬ್ಬರು ತಂಗಿಯರು ಹಾಗೂ ತಮ್ಮನ ಜೊತೆಗೆ ಪರಾರಿಯಾದಳು. ಮಲಯಾಳಂ ಚಿತ್ರರಂಗದ ರೋಸಿ ಅಲ್ಲಿಗೆ ಮುಗಿದು ಹೋದಳು. ಈ ಬಳಿಕ ಆಕೆಯನ್ನು ಮಲಯಾಳಂ ಚಿತ್ರರಂಗ ಸಂಪೂರ್ಣ ಮರೆತೇ ಬಿಟ್ಟಿತು.

ಆದರೆ ಅಂದು ಕಾಳಕತ್ತಲೆಯಲ್ಲಿ ತನ್ನ ಸೋದರಿಯರೊಂದಿಗೆ ಪರಾರಿಯಾದ ರೋಸಿ, ಹೆದ್ದಾರಿಗೆ ಬಂದಳು. ಆ ದಾರಿಯಲ್ಲಿ ಬಂದ ಒಂದು ಲಾರಿಗೆ ಕೈ ತೋರಿಸಿದಳು. ಅವಳನ್ನು ಲಾರಿಗೆ ಹತ್ತಿ ಕುಳ್ಳಿರಿಸಿದ ಲಾರಿ ಡ್ರೈವರ್ ಕೇಶವನ್ ಪಿಳ್ಳೈ ಅವಳ ಬದುಕಿನ ಉದ್ದಕ್ಕೂ ಆಸರೆಯಾದ. ರೋಸಿಯ ಕತೆ ಕೇಳಿ ಕೇಶವನ್ ಪಿಳ್ಳೈ ಆಕೆಯನ್ನು ವರಿಸಿದ. ತಮಿಳುನಾಡಿನಲ್ಲಿ ಯಾವ ಸದ್ದುಗದ್ದಲವೂ ಇಲ್ಲದ ಒಂದು ಮೂಕಿ ಚಿತ್ರದಂತೆ ತನ್ನ ಬದುಕನ್ನು ಮುಗಿಸಿದರು ರೋಸಿ. ಪದ್ಮಾ, ನಾಗಪ್ಪನ್ ಇಬ್ಬರು ಮಕ್ಕಳು ತನ್ನ ತಾಯಿಯ ಬದುಕಿಗೆ ಸಾಕ್ಷಿಯಾಗಿ ತಮಿಳುನಾಡಿನಲ್ಲಿ ಬೆಳೆಯುತ್ತಿದ್ದಾರೆ. ವಿಷಾದನೀಯ ಸಂಗತಿಯೆಂದರೆ, ಡೇನಿಯಲ್‌ನನ್ನು ಮಾನ್ಯ ಮಾಡಿದ ಕೇರಳ ಸರಕಾರ ರೋಸಿಯನ್ನು ಕೊನೆಯವರೆಗೂ ಒಪ್ಪಿಕೊಳ್ಳಲೇ ಇಲ್ಲ. ಮಲಯಾಳಂ ಚಿತ್ರರಂಗದ ಮೊತ್ತ ಮೊದಲ ಕಲಾವಿದೆ ಎನ್ನುವ ಗೌರವವನ್ನು ನೀಡಲು ಅದು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಆದರೆ ಸೆಲ್ಯುಲಾಯ್ಡಿ ತಂಡದ ಕೆಲಸದಿಂದಾಗಿ ಅದೂ ಸಾಧ್ಯವಾಯಿತು. ಮಲಯಾಳಂ ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ರೋಸಿಯ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ನೀಡಲು ಸರಕಾರ ಮುಂದಾಗಿದೆ. ಚಿತ್ರದಲ್ಲಿ ನಟಿಸಿದ ಸುಮಾರು 90 ವರ್ಷಗಳ ಬಳಿಕ ಕೇರಳ ಸರಕಾರ ರೋಸಿಯನ್ನು ಪ್ರಪ್ರಥಮ ಮಲಯಾಳಂ ನಟಿ ಎನ್ನುವುದನ್ನು ಮಾನ್ಯ ಮಾಡಿದೆ.


ಸೆಲ್ಯುಲಾಯ್ಡನಲ್ಲಿ ಹೊಸ ಮುಖವಾಗಿರುವ ಚಾಂದಿನಿ ರೋಸಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸೆಲ್ಯುಲಾಯ್ಡಾ ಚಿತ್ರ ಕೇರಳದ ಏಳು ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಬಹುಶಃ ಇದನ್ನು ನೋಡಿ ಡೇನಿಯಲ್ ಮತ್ತು ರಾಜಮ್ಮ ಯಾನೆ ರೋಸಿಯ ಆತ್ಮಗಳು ನಿಟ್ಟುಸಿರು ಬಿಟ್ಟಿರಬಹುದು.

1 comment: