Monday, June 17, 2013

ಅನುಮಾನ ಮತ್ತು ಇತರ ಕತೆಗಳು

 ಕೂಲಿಕಾರ
ಸಾಹುಕಾರನೊಬ್ಬ ಕೂಲಿಕಾರನನ್ನು ಬರ್ಬರವಾಗಿ ಥಳಿಸುತ್ತಿದ್ದ.
ಆ ದಾರಿಯಲ್ಲಿ ಹೋಗುತ್ತಿದ್ದ ಸಂತ ಅವನನ್ನು ತಡೆದು ಕೂಲಿಕಾರನನ್ನು ಬಿಡಿಸಿಕೊಂಡ.
ಸಂತ ಬಳಿಕ ಕೂಲಿಕಾರನನ್ನು ಸಂತೈಸಿ ಕೇಳಿದ ‘‘ನಿನ್ನ ಈ ಸಾಹುಕಾರ ಮೊದಲಿನಿಂದಲೂ ಹೀಗೆಯೇ ವರ್ತಿಸುತ್ತಿದ್ದಾರೆಯೆ?’’
ಕೂಲಿಕಾರ ಕೈ ಮುಗಿದು ಹೇಳಿದ ‘‘ಹಾಗೇನೂ ಇಲ್ಲ. ಮೊದಲು ತುಂಬಾ ಕ್ರೂರಿಯಾಗಿದ್ದರು. ಈ ಸ್ವಲ್ಪ ಒಳ್ಳೆಯವರಾಗಿದ್ದಾರೆ’’
‘‘ಅದು ಹೇಗೆ?’’ ಸಂತ ಅಚ್ಚರಿಯಿಂದ ಕೇಳಿದ
‘‘ಮೊದಲು ಜೋರಾಗಿ ಥಳಿಸುತ್ತಿದ್ದರು. ನೋವು ತಡೆಯಲಿಕ್ಕೆ ಆಗುತ್ತಿರಲಿಲ್ಲ. ಈಗ ಸ್ವಲ್ಪ ಮೆಲ್ಲಗೆ ಹೊಡೆಯುತ್ತಿದ್ದಾರೆ’’ ಕೂಲಿಕಾರ ಉತ್ತರಿಸಿದ.
ಸಂತ ನಕ್ಕ. ಹಾಗು ಬೆನ್ನು ತಟ್ಟಿ ಹೇಳಿದ ‘‘ನೋಡು, ಸಾಹುಕಾರ ಮೊದಲಿನಷ್ಟೇ ಜೋರಾಗಿ ಹೊಡೆಯುತ್ತಿದ್ದಾನೆ. ಅದರಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಆದರೆ ಆ ಪೆಟ್ಟಿಗೆ ನಿನ್ನ ದೇಹ ಜಡ್ಡು ಕಟ್ಟಿದೆ. ದೇಹ ಒಗ್ಗಿ ಹೋಗಿದೆ. ಆದುದರಿಂದ ನಿನಗೆ ಮೊದಲಿನಷ್ಟು ನೋವಾಗುತ್ತಿಲ್ಲ’’

ಸಾಲ
ದಿನಗಳು ಬಡ್ಡಿಯಂತೆ ಬೀಳುತ್ತಿವೆ.
ಉರುಳುತ್ತಿರುವ ವರ್ಷಗಳು ಚಕ್ರಬಡ್ಡಿಯಂತೆ ಹೆದರಿಸುತ್ತಿವೆ.
ಪಾವತಿ ಮಾಡಲಾಗದ ಸಾಲಗಳು ಕುತ್ತಿಗೆಗೆ ಬಂದಿವೆ.
ಪ್ರಾಯಕ್ಕೆ ಬಂದ ನಾಲ್ಕು ಹೆಣ್ಣು ಮಕ್ಕಳ ಬಡ ತಂದೆಯ ಅಳಲು.

ಕೂಲಿ

ದಿನವಿಡೀ ತೋಟದಲ್ಲಿ ದುಡಿದು ಆತ ಒಡೆಯನಲ್ಲಿ ಕೂಲಿಗಾಗಿ ಬಂದ. ಒಡೆಯ ಕೊಡಲೆಂದು ಹೊರಟಾಗ ಹೆಂಡತಿ ಕರೆದಳು.
‘‘ಕೂಲಿಯ ಎಲ್ಲ ಹಣ ಕೊಡಬೇಡಿ. ಕೊಟ್ರೆ ಅವನು ಸೋಮಾರಿ ಆಗ್ತಾನೆ. ನಾಳೆ ಕೆಲಸಕ್ಕೆ ಬರಲ್ಲ...’’

ಅನುಮಾನ

ನನ್ನ ಗೆಳೆಯರ ಜೊತೆಗೆ ನಾನು ಕನಸುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆ.
ಇದ್ದಕ್ಕಿದ್ದಂತೆಯೇ ನಮಗೆಲ್ಲರಿಗೂ ಅನುಮಾನ ಬರಲು ಶುರುವಾಯಿತು.
‘‘ನಾವು ಕನಸಿನಲ್ಲಿದ್ದೇವೆಯೋ ಅಥವಾ ನನಸಿನಲ್ಲಿದ್ದೇವೆಯೋ...’’

ಬಂಗಾರದ ತೆನೆ

 ಆ ಊರಲ್ಲೊಬ್ಬ ಸ್ವಾಮೀಜಿ ಬಂದ. ಅವನಲ್ಲಿ ಬಂಗಾರದ ಬೀಜಗಳಿವೆ ಎನ್ನುವುದು ಸುದ್ದಿಯಾಯಿತು. ಅದನ್ನು ಗದ್ದೆಯಲ್ಲಿ ಬಿತ್ತಿದರೆ, ಅದು ಬಂಗಾರದ ತೆನೆಯನ್ನು ಬಿಡುತ್ತದೆಯಂತೆ. ಸರಿ. ಎಲ್ಲ ರೈತರೂ ಅವನಲ್ಲಿ ಬೀಜಕ್ಕಾಗಿ ಬೇಡಿದರು. ಸ್ವಾಮಿ ಎಲ್ಲರಿಗೂ ಕೊಟ್ಟ. ಒಬ್ಬ ರೈತ ಮಾತ್ರ ತನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡತೊಡಗಿದ. ತನ್ನ ಗದ್ದೆಯಲ್ಲಿ ಭತ್ತವನ್ನು ಬಿತ್ತಿದ.
ಆ ವರ್ಷ ಎಲ್ಲರ ಗದ್ದೆಯಲ್ಲಿ ಬಂಗಾರದ ತೆನೆ. ಒಬ್ಬ ರೈತನ ಗದ್ದೆಯಲ್ಲಿ ಮಾತ್ರ ಭತ್ತದ ತೆನೆ. ಎಲ್ಲರೂ ತಮ್ಮ ಬಂಗಾರದ ತೆನೆಯನ್ನು ಕೊಯ್ದು ಭತ್ತ ಬೆಳೆದ ರೈತನ ಅಂಗಳದಲ್ಲಿ ರಾಶಿ ಹಾಕಿ ಬೇಡ ತೊಡಗಿದರು ‘‘ಉಣ್ಣುವುದಕ್ಕೆ ಅಕ್ಕಿಯಿಲ್ಲ. ಈ ಬಂಗಾರವನ್ನು ತೆಗೆದುಕೊಂಡು ಒಂದು ಸೇರು ಅಕ್ಕಿಯಾದರೂ ಕೊಡು’’

ಪತ್ರಕರ್ತ

ಶ್ರೇಷ್ಠ ಪತ್ರಕರ್ತನೊಬ್ಬನನ್ನು ಕೇಳಲಾಯಿತು.
‘‘ನಿಮ್ಮದು ಯಾವ ಪಕ್ಷ?’’
ಪತ್ರಕರ್ತ ನಕ್ಕು ಉತ್ತರಿಸಿದ ‘‘ಈ ನಾಡನ್ನು ಆಳುತ್ತಿರುವುದು ಯಾವ ಪಕ್ಷವೋ, ಅದರ ವಿರೋಧ ಪಕ್ಷ ’’

ಗಿಡ

ಯಾರೋ ಹೇಳಿದರು.
ಗಿಡ ಬೆಳೆಯಬೇಕಾದರೆ ನೀರು ಹಾಕಬೇಕು.
ಅವನು ಗಿಡ ನೆಟ್ಟು ಮಳೆಗಾಲದಲ್ಲೂ ಅದಕ್ಕೆ ನೀರು ಸುರಿಯತೊಡಗಿದ.
ಗಿಡ ಒಂದು ತಿಂಗಳಲ್ಲಿ ಕೊಳೆತು ಹೋಯಿತು.

ಕೊಡ್ತೀರಾ?
ಬಸ್ ನಿಲ್ದಾಣದಲ್ಲಿ ಒಬ್ಬ ಪುಸ್ತಕ ಓದುತ್ತಾ ಕೂತಿದ್ದ.
ಕುರುಡ ಬಾಲಕನೊಬ್ಬ ತಡವರಿಸುತ್ತಾ ಬಂದು ಅವನ ಪಕ್ಕದಲ್ಲಿ ಕೂತ.
‘‘ಸಾರ್, ಏನ್ಮಾಡ್ತಾ ಇದ್ದೀರಿ?’’ ಕುರುಡ ಬಾಲಕ ಕೇಳಿದ.
ಪುಸ್ತಕ ಓದುತ್ತಿದ್ದವನು ಅಚ್ಚರಿಯಿಂದ ಅವನ ಕಡೆಗೆ ತಿರುಗಿ ಉತ್ತರಿಸಿದ ‘‘ಪುಸ್ತಕ ಓದುತ್ತಾ ಇದ್ದೇನೆ’’
ಬಾಲಕ ಆಸೆಯಿಂದ ಕೇಳಿದ ‘‘ನಿಮ್ಮದು ಮುಗಿದ ಬಳಿಕ ನನಗೆ ಕೊಡುತ್ತೀರಾ?’’
‘‘ಯಾವುದನ್ನು, ಪುಸ್ತಕವನ್ನೇ?’’ ಅವನು ಇನ್ನಷ್ಟು ಅಚ್ಟರಿಯಿಂದ ಕೇಳಿದ.
‘‘ಅಲ್ಲ, ನಿಮ್ಮ ಕಣ್ಣನ್ನು’’ ಬಾಲಕ ಉತ್ತರಿಸಿದ.
(ಸಿಂಹಳೀ ಜಾಹೀರಾತೊಂದರ ಪ್ರೇರಣೆಯಿಂದ)

ಶಾಂತಿ
ಆ ಊರಲ್ಲೊಂದು ಭಾರೀ ಗಲಭೆಯಾಯಿತು.
ಆ ಗಲಭೆಗೆ ಕಾರಣನಾದವನನ್ನು ಬಹುಸಂಖ್ಯಾತ ಜನರು ಅವನನ್ನು ಓಟಿಗೆ ನಿಲ್ಲಿಸಿ ದಿಲ್ಲಿಗೆ ಕಳುಹಿಸಿದರು.
‘‘ಯಾಕೆ ಅವನನ್ನು ಗೆಲ್ಲಿಸಿದಿರಿ?’’ ಪತ್ರಕರ್ತನೊಬ್ಬ ಕೇಳಿದ.
‘‘ಅವನಿದ್ದರೆ ಇಲ್ಲಿ ಪ್ರತಿ ಬಾರಿ ಗಲಭೆ. ಈಗ ಅವನು ದಿಲ್ಲಿಯಲ್ಲಿದ್ದಾನೆ. ಈಗ ನೋಡಿ, ನಮ್ಮ ಗ್ರಾಮದಲ್ಲಿ ತುಂಬಾ ಶಾಂತಿ ನೆಲೆಸಿದೆ.’’

2 comments:

  1. ತುಂಬಾ ಚೆನ್ನಾಗಿವೆ ಸರ್ ಕಥೆಗಳು...

    ReplyDelete
  2. ಮನ ತಟ್ಟುವ ಮತ್ತೊದು ಬರಹ..

    ReplyDelete