Saturday, June 30, 2012

ದಿ ಅಮೇಝಿಂಗ್ ಸ್ಪೈಡರ್‌ಮ್ಯಾನ್: ಕಾಣೆಯಾಗಿರುವ ಭಾವ ಸಮೃದ್ಧತೆ

ಹೀಗೊಂದು ಟೈಂಪಾಸ್ ವಿಮರ್ಶೆ

ಸ್ಪೈಡರ್ ಮ್ಯಾನನ್ನು ಮತ್ತೊಮ್ಮೆ ಹೊಸದಾಗಿ ಕಟ್ಟಿಕೊಡುವ ಅಥವಾ ಮರು ನಿರೂಪಿಸುವ ಪ್ರಯತ್ನವನ್ನು ನಿರ್ದೇಶಕ ಮಾರ್ಕ್‌ವೆಬ್ ಮಾಡಿದ್ದಾರೆ. ಇದನ್ನು ನಾವು ಸ್ಪೈಡರ್ ಭಾಗ-4 ಎನ್ನುವಂತಿಲ್ಲ. ಸಾಧ್ಯವಾದರೆ ನಿರ್ದೇಶಕ ಮಾರ್ಕ್‌ವೆಬ್‌ನ ಸ್ಪೈಡರ್‌ಮ್ಯಾನ್ ಎಂದು ಕರೆಯಬಹುದು. ಯಾಕೆಂದರೆ ಇಲ್ಲಿ ಕತೆ ಆರಂಭದಿಂದಲೇ ಅಂದರೆ ಹೊಸ ಸ್ಪೈಡರ್‌ಮ್ಯಾನ್‌ನ ಹುಟ್ಟಿನೊಂದಿಗೇ ಶುರುವಾಗುತ್ತದೆ. ಹಾಗೆಯೇ ಇಲ್ಲಿ ಹೊಸ ಸ್ಪೈಡರ್‌ಮ್ಯಾನ್ ಆಂಡ್ರೂಗಾರ್‌ಫೀಲ್ಡ್ ಅವರು ಟಾಬಿ ಮಕ್ವೆರ್‌ನ ಮುಗ್ಧ ಮುಖ ಹಾಗೂ ಭಾವತೀವ್ರತೆಯನ್ನು ಕಳೆದುಕೊಂಡಿದ್ದಾನೆ. ಒಂದಿಷ್ಟು ತುಂಟನಾಗಿಯೂ, ಯುವಕನಾಗಿಯೂ ಬೆಳೆದಂತೆ ಕಾಣುತ್ತಾನೆ. ಮೊತ್ತ ಮೊದಲ ಸ್ಯಾಮ್ ರೇಮಿ ನಿರ್ದೇಶನದ ಸ್ಪೈಡರ್‌ಮ್ಯಾನ್‌ಗೂ ಇದಕ್ಕೂ ಹಲವು ಹೋಲಿಕೆಗಳಿದ್ದರೂ, ಭಿನ್ನ ನಾಯಕ-ನಾಯಕಿಯರು ಹಾಗೂ ತ್ರೀಡಿ ಸಾಹಸಗಳಿಂದ ಹೊಸ ಚಿತ್ರ ‘ಅಮೇಝಿಂಗ್’ ಆಗಿ ಕಾಣಿಸಿಕೊಳ್ಳುತ್ತದೆ. ಹೋಲಿಕೆ-ವ್ಯತ್ಯಾಸಗಳಾಚೆಗೆ ಹೊಸ ಸ್ಪೈಡರ್‌ಮ್ಯಾನ್‌ನ್ನು ಯಾವ ನಿರಾಸೆಯೂ ಇಲ್ಲದೆ ಸ್ವೀಕರಿಸಬಹುದಾಗಿದೆ.

  ಹಿಂದಿನ ಚಿತ್ರವು ತರುಣ ಪೀಟರ್ ಪಾರ್ಕರ್‌ನಿಂದ ಕತೆ ಆರಂಭವಾದರೆ, ಇದು ಅವನ ಬಾಲ್ಯದೊಂದಿಗೆ ನಂಟನ್ನು ಹೊಂದಿದೆ. ಆತನ ವಿಜ್ಞಾನಿ ತಂದೆ ತಾಯಿಗಳು ಯಾವುದೋ ಅಪಾಯ ಎದುರಾದಾಗ, ತಮ್ಮ ಮಗನನ್ನು ಅಜ್ಜನ ಬಳಿ ಒಪ್ಪಿಸಿ ಹೋಗುತ್ತಾರೆ. ಇದಾದ ಬಳಿಕ ಒಂದು ಅಪಘಾತದಲ್ಲಿ ತಂದೆ ತಾಯಿಗಳು ಸಾಯುತ್ತಾರೆ. ತನ್ನ ಬಾಲ್ಯ ಮತ್ತು ಸಾವಿನ ನಿಗೂಢತೆಯನ್ನು ಹುಡುಕುವ ಸಂದರ್ಭದಲ್ಲಿ ಆತನಿಗೆ ಡಾ. ಕರ್ಟ್(ರಿಸ್‌ಇಫಾನ್ಸ್) ಎದುರಾಗುತ್ತಾರೆ. ಆತನ ಸಂಶೋಧಾಲಯಕ್ಕೆ ಅಕ್ರಮವಾಗಿ ನುಗ್ಗಿದಾಗ ಪೀಟರ್ ಪಾರ್ಕರ್‌ಗೆ ಜೇಡವೊಂದು ಕಚ್ಚುತ್ತದೆ. ಅದು ಆತನಿಗೆ ಅಸಾಮಾನ್ಯ ಶಕ್ತಿಯನ್ನು ನೀಡುತ್ತದೆ. ಇಲ್ಲಿಂದ ಡಾ. ಕರ್ಟ್ ಮತ್ತು ಪೀಟರ್ ಪಾರ್ಕರ್ ನಡುವಿನ ಮುಖಾಮುಖಿ ಆರಂಭವಾಗುತ್ತದೆ.

 ವಿಚಿತ್ರ ದೈತ್ಯ ಪ್ರಾಣಿಯ ಸೃಷ್ಟಿಗೆ ಕಾರಣವಾಗುವ ಕರ್ಟ್, ಆ ಮೂಲಕ ಅನಾಹುತಗಳನ್ನು ಮಾಡುತ್ತಿದ್ದಾಗ ಅದನ್ನು ತಡೆಯುವ ಹೊಣೆಗಾರಿಕೆ ಸ್ಪೈಡರ್ ಮ್ಯಾನ್ ಹೆಗಲಿಗೆ ಬೀಳುತ್ತದೆ. ಇಲ್ಲಿ ಸ್ಪೈಡರ್ ಮ್ಯಾನ್‌ಗೆ ಆತನ ಸಂಗಾತಿ ಗ್ವೆನ್ ಸ್ಟಾಸಿ(ಎಮ್ಮಾ ಸ್ಟೋನ್) ನೆರವಾಗುತ್ತಾರೆ. ಆಕೆಯ ತಂದೆಯೂ ಈ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಸಾಹಸದ ಮಟ್ಟಿಗೆ ಹೇಳುವುದಾದರೆ ಹಿಂದಿನ ಸ್ಪೈಡರ್‌ಮ್ಯಾನ್‌ಗಿಂತಲೂ ಒಂದು ಕೈ ಮಿಗಿಲಾಗಿದ್ದಾರೆ ಗಾರ್‌ಫೀಲ್ಡ್. ಇರ್ಫಾನ್ ಖಾನ್‌ಗೆ ಸಿಕ್ಕಿರುವುದು ಸಣ್ಣ ಪಾತ್ರವಾದರೂ ಅದನ್ನು ಚೊಕ್ಕವಾಗಿ ನಿರ್ವಹಿಸಿದ್ದಾರೆ. ಪಾತ್ರಕ್ಕೇ ವಿಶೇಷ ವ್ಯಾಪ್ತಿ ಇಲ್ಲದೇ ಇರುವಾಗ, ಇರ್ಫಾನ್ ಅವರಿಂದ ಹೆಚ್ಚು ನಿರೀಕ್ಷಿಸುವುದು ಸರಿಯಲ್ಲ.

ನಿರ್ದೇಶಕ ಮಾರ್ಕ್‌ವೆಬ್ ಮತ್ತು ಸ್ಯಾಮ್ ಸ್ಪೈಡರ್‌ಮ್ಯಾನ್‌ಗಳ ನಡುವೆ ಒಂದು ಮುಖ್ಯ ವ್ಯತ್ಯಾಸವನ್ನು ಗುರುತಿಸಲೇಬೇಕು. ಮೊತ್ತ ಮೊದಲ ಸ್ಯಾಮ್ ಸ್ಪೈಡರ್ ಮ್ಯಾನ್‌ನಲ್ಲಿ ಒಂದು ರೀತಿಯ ಮುಗ್ಧತೆಯಿತ್ತು. ಆ ಮುಗ್ಧತೆ ಈ ಸ್ಪೈಡರ್ ಮ್ಯಾನ್‌ನಲ್ಲಿ ಕಾಣುವುದಿಲ್ಲ. ಬದಲಿಗೆ ಒಂದು ರೀತಿಯ ತುಂಟತನ ಮತ್ತು ಒರಟುತನ ಆ ಸ್ಥಾನವನ್ನು ತುಂಬಿದೆ. ಈ ಅಮೇಝಿಂಗ್ ಸ್ಪೈಡರ್‌ಮ್ಯಾನ್‌ನಲ್ಲಿ ಆತನ ಸಂಗಾತಿಗೆ ವಿಶೇಷ ವ್ಯಕ್ತಿತ್ವವಿಲ್ಲ. ಆದರೆ ಆರಂಭದ ಸ್ಯಾಮ್‌ನ ಸ್ಪೈಡರ್‌ಮ್ಯಾನ್‌ನಲ್ಲಿ ನಾಯಕಿ ಮೇರಿ ಜೇನ್‌ಗೆ ಒಂದು ಸ್ವತಂತ್ರ ವ್ಯಕ್ತಿತ್ವವಿತ್ತು. ಅವಳೊಳಗಿನ ಪ್ರೇಮ, ತಾರುಣ್ಯ, ತಳಮಳವನ್ನು ನಿರ್ದೇಶಕರು ಸುಂದರವಾಗಿ, ಹೃದ್ಯವಾಗಿ ಕಟ್ಟಿಕೊಟ್ಟಿದ್ದರು. ಇಬ್ಬರು ಗೆಳೆಯರಲ್ಲಿ ಯಾರನ್ನು ಆರಿಸಬೇಕು ಎಂಬ ಗೊಂದಲ, ಪೀಟರ್ ಪಾರ್ಕರನೇ ಸ್ಪೈಡರ್ ಮ್ಯಾನ್ ಎಂದು ತಿಳಿಯದೆಯೇ ಸ್ಪೈಟರ್‌ನ ತುಟಿಯನ್ನಷ್ಟೇ ಮುಖವಾಡದಿಂದ ಕಳಚಿ ಅದಕ್ಕೆ ಚುಂಬಿಸುವುದು...ಪಾರ್ಕರ್‌ನನ್ನು ಎದುರಾಗುವಾಗ ಆಕೆಯಲ್ಲಿ ಉಂಟಾಗುವ ತಳಮಳ, ಮೇರಿಜೇನ್‌ಳನ್ನು ಪ್ರೀತಿಸಿಯೂ ಅದನ್ನು ಹೇಳಲಾಗದ ಪೀಟರ್‌ಪಾರ್ಕರ್‌ನ ಒದ್ದಾಟ....ಇವೆಲ್ಲ ಆರಂಭದ ಸ್ಪೈಡರ್‌ಮ್ಯಾನ್‌ನ ಹೆಗ್ಗಳಿಕೆಯಾಗಿತ್ತು. ಒಂದು ರೀತಿಯಲ್ಲಿ ಸ್ಯಾಮ್ ರೇಮಿ ಅವರ ಸ್ಪೈಡರ್ ಮ್ಯಾನ್ ಕೇವಲ ಸಾಹಸಚಿತ್ರವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಅದು ಪ್ರೇಕ್ಷಕರನ್ನು ಸೆಳೆದಿತ್ತು. ಇಲ್ಲಿ ಅಂತಹ ದಟ್ಟವಾದ ಭಾವನಾತ್ಮಕ ಅಂಶಗಳನ್ನು ಕಾಣಲಾಗುವುದಿಲ್ಲ. ಒಂದು ರೀತಿಯಲ್ಲಿ ಸ್ಪೈಡರ್ ಮ್ಯಾನ್‌ನ ಒಳಗಿನ ತಳಮಳಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನಿರ್ದೇಶಕರು ಕೊಟ್ಟಿಲ್ಲ. ತ್ರೀಡಿ ಮಾರ್ಕ್ ವೆಬ್ ಸ್ಪೈಡರ್ ಮ್ಯಾನ್‌ನ ಇನ್ನೊಂದು ಹೆಗ್ಗಳಿಕೆ. ಆದರೆ ಸ್ಯಾಮ್ ರೆಮಿ ಅವರ ಸ್ಪೈಡರ್ ಮ್ಯಾನ್ ಮನುಷ್ಯನ ತಾಕಲಾಟಗಳನ್ನು ತೆರೆದಿಡುವ ಮೂಲಕ ತ್ರಿಡಿಯಿಲ್ಲದೆಯೇ ಪ್ರೇಕ್ಷಕರನ್ನು ಅಲುಗಾಡಿಸುತ್ತಾನೆ. ಮಗುವಿನ ಮುಖದ ಮುಗ್ಧ ಟೋಬಿ ಮ್ಯಾಕ್ವರ್ ತನ್ನ ಮುಗ್ಧ ಪ್ರೀತಿಗಾಗಿ ಹಂಬಲಿಸುವ ರೀತಿ ಮನಸ್ಸನ್ನು ಕಲಕುತ್ತದೆ. ಪ್ರೀತಿ, ತ್ಯಾಗ, ಹೊಣೆಗಾರಿಕೆ ಇವೆಲ್ಲವುಗಳಿಂದ ಹಿಂದಿನ ಸ್ಪೈಡರ್ ಮ್ಯಾನ್ ಸಮೃದ್ಧವಾಗಿದೆ. ಈ ಸ್ಪೈಡರ್ ಮ್ಯಾನ್‌ನಲ್ಲಿ ಆ ಸಮೃದ್ಧತೆ ಕಾಣುತ್ತಿಲ್ಲ. ಉಳಿದಂತೆ ಹೊಸ ಸ್ಪೈಡರ್‌ಮ್ಯಾನ್ ಕೊಟ್ಟ ದುಡ್ಡಿಗೆ ರಂಜಿಸುತ್ತಾನೆ. ಇದರಲ್ಲಿ ಸಂಶಯವಿಲ್ಲ.

1 comment:

  1. Superb review..i just loved your writing style..i was planning to go for this movie..after reading this no need to go i guess...!

    ReplyDelete