Saturday, June 23, 2012

ಗ್ಯಾಂಗ್ಸ್ ಆಫ್ ವಸ್ಸೇಪುರ್: ಕಲ್ಲಿದ್ದಲ ಗಣಿಯ ಕತ್ತಲ ಕೂಪದಲ್ಲಿ....

ಹೀಗೊಂದು ಚಿತ್ರ ವಿಮರ್ಶೆ 

 ‘ಗ್ಯಾಂಗ್ಸ್ ಆಫ್ ವಸ್ಸೇಪುರ್’ ವಸ್ಸೇಪುರ್ ಮತ್ತು ಧನಬಾದ್‌ನ ಸ್ವಾತಂತ್ರ ಪೂರ್ವ ರಕ್ತಸಿಕ್ತ ದಾಖಲೆಗಳು. ದಂಡಕಾರಣ್ಯದಂತಿರುವ ವಸ್ಸೇಪುರ್ ಮತ್ತು ಧನ್‌ಬಾದ್ ಜನರ ಬದುಕಿನ ಕಪ್ಪು ರೂಪಕ ಇಲ್ಲಿನ ಕಲ್ಲಿದ್ದಲು ಗಣಿಗಳು. ಕಲ್ಲಿದ್ದಲು, ರಕ್ತ ಮತ್ತು ಸೇಡು ಇಲ್ಲಿಯ ಜನರ ಭಾಷೆ. ಸ್ವಾತಂತ್ರಪೂರ್ವದಿಂದ ಹಿಡಿದು 90ರ ದಶಕದ ವರೆಗಿನ ಇಲ್ಲಿನ ಬದುಕನ್ನು ಬಿಡಿ ಬಿಡಿಯಾಗಿ ಸಂಗ್ರಹಿಸುತ್ತಾ, ಅದನ್ನು ಸೇಡಿನ ಕರುಳಮಾಲೆಯಲ್ಲಿ ಬೆಸೆಯುತ್ತಾ ಹೋಗುತ್ತಾರೆ ಅನುರಾಗ್ ಕಶ್ಯಪ್. ಸ್ವಯಂ ನಿರ್ದೇಶಕರೇ ಈ ಚಿತ್ರವನ್ನು ವಸ್ಸೇಪುರ್‌ನ ಮುಸ್ಲಿಮರ ಮಹಾಭಾರತ ಇದು ಎಂದು ಕರೆದಿದ್ದಾರೆ.
    
 ಹಾಗೆ ನೋಡಿದರೆ ಈ ಚಿತ್ರಕ್ಕೆ ಒಂದು ಕತೆಯೇ ಇಲ್ಲ. ಸೇಡು ಇಲ್ಲಿನ ಮುಖ್ಯವಸ್ತು. ಆರಂಭದಲ್ಲಿ ವಸ್ಸೇಪುರ್ ಮತ್ತು ಧನ್‌ಬಾದ್‌ನ್ನು ಸುತ್ತುವರಿದಿರುವ ಕಲ್ಲಿದ್ದಲು ಮಾಫಿಯಾ ಮತ್ತು ಅದನ್ನು ಬೆಸೆದಿರುವ ಇಲ್ಲಿನ ಪಠಾಣ್ ಮತ್ತು ಖುರೇಷಿ ಮುಸ್ಲಿಮರ ರಕ್ತಸಿಕ್ತ ವಂಶಾವಳಿಗಳ ಪುಟಗಳನ್ನು ಅಸವಸರವಾಗಿ ಬಿಡಿಸುತ್ತಾ ಹೋಗುತ್ತಾರೆ. ಅದಕ್ಕೆ ಒತ್ತಿಕೊಂಡ ಲೂಟಿ, ಡಕಾಯಿತಿ, ರಾಜಕೀಯಗಳನ್ನು ಕಪ್ಪುಬಿಳುಪಿನಲ್ಲಿ ತೆರೆದಿಡುತ್ತಾರೆ. ಅಲ್ಲಿನ ಅರಣ್ಯ ಕಾನೂನನ್ನು ಸಣ್ಣ ಸಣ್ಣ ಘಟನೆಗಳ ಮೂಲಕ ಎದೆ ಝಲ್ಲೆನಿಸುವಂತೆ ಮುಂದಿಡುತ್ತಾರೆ. ಹೀಗೆ ಮೊದಲ ಮೂವತ್ತು ನಿಮಿಷ ಹತ್ತು ಹಲವು ಹೆಸರುಗಳು, ಪಾತ್ರಗಳು ನಮ್ಮ ಮುಂದೆ ಪಟಪಟನೆ ಸರಿಯುತ್ತಾ ಹೋಗುತ್ತವೆ. ಕಟ್ಟಕಡೆಗೆ ಚಿತ್ರ ಶಾಹಿದ್ ಖಾನ್‌ನ ಮಗ ಸರ್ದಾರ್ ಖಾನ್(ಮನೋಜ್ ಭಾಜ್‌ಪೈ)ಯಲ್ಲಿಗೆ ಬಂದು ನಿಲ್ಲುತ್ತದೆ. ವಸ್ಸೇಪುರ್ ಡಕಾಯಿತಿ ಬದುಕಿನಿಂದ ಕಳಚಿಕೊಂಡು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಶಾಹಿದ್ ಖಾನ್(ಜೈದೀಪ್ ಅಹ್ಲಾವತ್) ತನ್ನ ಪತ್ನಿಯ ಹೆರಿಗೆಯ ಸಮಯದಲ್ಲಿ, ಪತ್ನಿಯನ್ನು ಭೇಟಿಮಾಡಲು ಅವಕಾಶ ನೀಡದ ಗಣಿ ಮಾಲಿಕರ ವಿರುದ್ಧ ತಿರುಗಿ ನಿಲ್ಲುತ್ತಾನೆ. ಬಳಿಕ ಅಲ್ಲಿನ ಕಾರ್ಮಿಕರನ ಜೊತೆ ನಿಂತು ಮಾಲಿಕರಿಗೆ ಸೆಡ್ಡು ಹೊಡೆಯುತ್ತಾನೆ. ಮುಂದೆ ಇದೇ ಗಣಿಯ ಮಾಲಿಕ ರಾಮ್‌ಧೀರ್ ಸಿಂಗ್(ತಿಗ್ಮಾಂಶು ಧುಲಿಯಾ), ಶಾಹಿದ್‌ನನ್ನು ತನ್ನ ಬಲಗೈ ಬಂಟನನ್ನಾಗಿಸಿ ಕಾರ್ಮಿಕರನ್ನು ಬಗ್ಗು ಬಡಿಯುತ್ತಾನೆ. ಕಾಲ ಸರಿದಂತೆ ಬಂಟ ಶಾಹಿದ್ ಮುಂದೊಂದು ದಿನ ತನಗೆ ಮುಳುವಾಗಬಹುದು ಎಂದು ರಾಮ್‌ಧೀರ್ ಸಿಂಗ್ ಆತನನ್ನು ಕೊಲ್ಲಿಸುತ್ತಾನೆ. ಶಾಹಿದ್‌ನ ಪುಟ್ಟ ಮಗನ ಜೊತೆಗೆ ಆತನ ಸಹಾಯಕ ಅಲ್ಲಿಂದ ಪರಾರಿಯಾಗುತ್ತಾನೆ. ಮುಂದೆ ಶಾಹಿದ್‌ನ ಪುಟ್ಟಮಗ ಸರ್ದಾರ್ ಖಾನ್ ಬೆಳೆದು ರಾಮ್‌ಧೀರ್‌ನ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಅಣಿಯಾಗುತ್ತಾನೆ. ಮೇಲ್ನೋಟಕ್ಕೆ ಇಡೀ ಕತೆ ರಾಮ್‌ಧೀರ್ ಮತ್ತು ಸರ್ದಾರ್ ಖಾನ್‌ನ ನಡುವಿನ ಸೇಡಿನ ಕತೆಯಂತೆ ಭಾಸವಾದರೂ, ಅದನ್ನಿಟ್ಟುಕೊಂಡು ವಸ್ಸೇಪುರ್-ಧನ್‌ಬಾದ್ ಮುಸ್ಲಿಮರೊಳಗಿನ ಕ್ರೌರ್ಯವನ್ನೇ ಧಾತುವಾಗಿಸಿಕೊಂಡ ರಕ್ತಸಿಕ್ತ ಬದುಕನ್ನು ನಿರೂಪಿಸುತ್ತಾ ಹೋಗುತ್ತಾರೆ ಅನುರಾಗ್ ಕಶ್ಯಪ್. 

1941ರ ಕಾಲಘಟ್ಟದಲ್ಲಿ ಕಲ್ಲಿದ್ದಲ ಗಣಿಯಿಂದ ಭುಗಿಲೆದ್ದ ದ್ವೇಷದ ಬೆಂಕಿ ಇಡೀ ವಸ್ಸೇಪುರ್‌ನ್ನು ಕೌಟುಂಬಿಕವಾಗಿ, ರಾಜಕೀಯವಾಗಿ ಹಬ್ಬುತ್ತಾ ಹೋಗುತ್ತದೆ. ಕುರೇಶಿಗಳು ಮತ್ತು ಫಠಾಣ್ ಮುಸ್ಲಿಮರ ನಡುವಿನ ಈ ದ್ವೇಷ ಮತ್ತು ಹಿಂಸೆಯ ಬೆಂಕಿ ಮೂರು ತಲೆಮಾರುಗಳಳವರೆಗೂ ಹಿಂಬಾಲಿಸುತ್ತದೆ. ಕತ್ತಲು, ಮಳೆ, ರಕ್ತ ಮತ್ತು ಕಲ್ಲಿದ್ದಲು ಇವುಗಳನ್ನೆಲ್ಲ ಕಶ್ಯಪ್ ಅತ್ಯದ್ಭುತವಾಗಿ ಬಳಸಿಕೊಂಡಿದ್ದಾರೆ. ವಸ್ಸೇಪುರ್‌ನ ಇತಿಹಾಸವನ್ನು ಮಂಡಿಸುವಾಗ ಆರಂಭದಲ್ಲಿ ಪಾತ್ರಗಳ ಕುರಿತಂತೆ ಗೊಂದಲಗಳು ಎದುರಾಗುತ್ತವೆಯಾದರೂ ಸರ್ದಾರ್ ಖಾನ್‌ಗೆ ಬಂದು ನಿಂತ ತಲೆಮಾರಿನ ಕತೆ, ಕೊನೆಗೂ ನಿರ್ದಿಷ್ಟ ಉದ್ದೇಶಕ್ಕೆ ಬರುತ್ತದೆ. 

ಚಿತ್ರದ ಮುಖ್ಯಪಾತ್ರ(ಸರ್ದಾರ್‌ಖಾನ್)ದಲ್ಲಿ ನಟಿಸಿರುವ ಮನೋಜ್ ಬಾಜ್‌ಪೈ ಈಗಷ್ಟೇ ಕಲ್ಲಿದ್ದಲ ಗಣಿಯಿಂದ ಎದ್ದು ಬಂದವನ ಕಾಠಿಣ್ಯವನ್ನು, ಕ್ರೌರ್ಯವನ್ನು, ಅರಾಜಕತೆಯನ್ನು ಮೈಗೂಡಿಸಿಕೊಂಡು ನಟಿಸಿದ್ದಾರೆ. ಸತ್ಯ ಚಿತ್ರದಲ್ಲಿ ಬಿಕ್ಕೂ ಭಾಯಿಯಾಗಿ ಚಿರಪರಿಚಿತರಾದ ಭಾಜ್‌ಪೈಯ ಚಿತ್ರ ಬದುಕಿನ ಇನ್ನೊಂದು ಮಗ್ಗುಲು ಸರ್ದಾರ್ ಪಾತ್ರದ ಮೂಲಕ ತೆರೆದುಕೊಂಡಿದೆ. ಸರ್ದಾರ್ ಪಾತ್ರ ಚಿತ್ರದ ಹೆಗ್ಗಳಿಕೆಯಾಗಿದೆ. ಮಹಾಭಾರತದ ಧುರ್ಯೋಧನ ಮತ್ತು ಭೀಮನ ವ್ಯಕ್ತಿತ್ವಗಳನ್ನು ಹೋಲುವ ಈತನೊಳಗಿನ ಕ್ರೌರ್ಯ, ಹೆಣ್ಣುಬಾಕತನ, ಸೇಡು ಹಾಗೂ ಪ್ರೀತಿ ಇಡೀ ವಸೇಪುರ್‌ನ ಅರಾಜಕ ಗುಣಲಕ್ಷಣಗಳಿಗೆ ಪೂರಕವಾಗಿದೆ. ಆತನ ಮೊದಲ ಹೆಂಡತಿ ನಗ್ಮಾ ಪಾತ್ರದಲ್ಲಿ ರಿಚಾ ಚಡ್ಡಾ ಕೂಡ ಅಷ್ಟೇ ಸ್ಫೋಟಕವಾಗಿ ಕಾಣುತ್ತಾಳೆ. ಸರ್ದಾರ್ ಖಾನ್‌ಗೆ ಸರಿಸಾಟಿಯಾಗಿ ನಟಿಸಿರುವ ರಿಚಾ, ವಸ್ಸೇಪುರ್‌ನ ಕಲ್ಲಿದ್ದಲ ಗಣಿಯಿಂದ ಚಿಮ್ಮಿದ ಸ್ಫೋಟಕಗಳ ಚೂರಿನಂತೆ ಪ್ರತಿ ದೃಶ್ಯಗಳಲ್ಲಿ ಚಲಿಸುತ್ತಾಳೆ. ದುರ್ಗಾ ಪಾತ್ರದಲ್ಲಿ ರಿಮಾಸೇನ್‌ನ ವೌನ-ಸಿಟ್ಟು ಕೂಡ ಚಿತ್ರವನ್ನು ಇನ್ನಷ್ಟು ತೀವ್ರವಾಗಿಸುತ್ತದೆ. ಸರ್ದಾರ್ ಖಾನ್‌ನ ಓರ್ವ ಮಗನಾಗಿ ನವಾಝುದ್ದೀನ್ ಸಿದ್ದೀಕ್ ಪಾತ್ರ ಸಣ್ಣದಾದರು ಬಹಳಷ್ಟು ಕಾಡುವಂತಹದ್ದು. ಬಹುಶಃ ಚಿತ್ರದ ಮುಂದಿನ ಭಾಗದಲ್ಲಿ ಈ ಪಾತ್ರ ಇನ್ನಷ್ಟು ಬೆಳೆಯುವ ಸಾಧ್ಯತೆಗಳಿವೆ. ಅದಕ್ಕಾಗಿಯೇ ನಿರ್ದೇಶಕ ಈ ಪ್ರತಿಭಾವಂತನನ್ನು ಆಯ್ಕೆ ಮಾಡಿಕೊಂಡಿರಬೇಕು. ಚಿತ್ರದ ಇನ್ನೊಂದು ಮುಖ್ಯಪಾತ್ರದಲ್ಲಿ ತಿಗ್‌ಮಾಂಶು ದುಲಿಯಾ ಕಾಣಿಸಿಕೊಂಡಿದ್ದಾರೆ. ರಾಮ್‌ಧೀರ್ ಸಿಂಗ್‌ನ ಗಾಂಭೀರ್ಯ, ತಣ್ಣಗಿನ ಕೌರ್ಯವನ್ನು ದುಲಿಯಾ ಪಳಗಿದ ನಟನಂತೆ ವ್ಯಕ್ತಪಡಿಸಿದ್ದಾರೆ.

ಜಿ.ವಿ. ಪ್ರಕಾಶ್ ಅವರ ಹಿನ್ನೆಲೆ ಸಂಗೀತ, ಸ್ನೇಹ ಖಾನ್‌ವಾಲ್ಕರ್ ಅವರ ಜಾನಪದ ಸಂಗೀತದ ಸೊಗಡು ಚಿತ್ರವನ್ನು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿಸುತ್ತದೆ. ಕತೆಗೆ ಹಾಡು ಪೂರಕವಾಗಿದೆ. ಸಂಗೀತದ ಮೂಲಕ ವಸ್ಸೇಪುರ್ ಇನ್ನಷ್ಟು ಆಳಕ್ಕೆ ಇಳಿಯುತ್ತದೆ. ನಮ್ಮೆಳಗಿನ ಒಳ್ಳೆಯತನ, ನಯ, ವಿನಯಗಳನ್ನೆಲ್ಲವನ್ನೂ ಒಂದು ಕ್ಷಣ ಅಲುಗಾಡಿಸಿ ಬಿಡುವ ಈ ಚಿತ್ರ ದುರ್ಬಲ ಹೃದಯದವರಿಗಲ್ಲ. ಚಿತ್ರ ಮುಗಿದಾಗಲೂ ಕತೆ ಮುಗಿಯುವುದಿಲ್ಲ. ಸೇಡಿನ ಹೆಡೆ ಮತ್ತೆ ಬಿಚ್ಚಿ ನಿಲ್ಲುತ್ತದೆ. ಇನ್ನೇನು ನಮ್ಮನ್ನು ಕಚ್ಚಿಯೇ ಬಿಡಬೇಕು ಎನ್ನುವಷ್ಟರಲ್ಲಿ ಸಿನಿಮಾಮಂದಿರದೊಳಗೆ ಬೆಳಕಾಗುತ್ತದೆ. ಕಲ್ಲಿದ್ದಲ ಗಣಿಯ ಆಳದ ಕತ್ತಲಿಂದ ಹೊರಬಂದಂತೆ ನಾವು ನಿಟ್ಟಿಸಿರುಡುತ್ತೇವೆ. ಚಿತ್ರ ಮುಗಿಯುವುದು ಮುಂದಿನ ಭಾಗಕ್ಕೆ ನಮ್ಮನ್ನು ತಯಾರು ಮಾಡುವ ಮೂಲಕ. ಈ ಚಿತ್ರವನ್ನು ನೋಡಿದವರು, ಇದರ ಮುಂದಿನ ಭಾಗಕ್ಕಾಗಿ ಚಿತ್ರಮಂದಿರದ ಬಾಗಿಲಲ್ಲೇ ಕುಕ್ಕರು ಕೂತರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಏನೇ ಇರಲಿ. ವಸ್ಸೇಪುರ್ ಗ್ಯಾಂಗ್‌ಗಳನ್ನು ಮುಖಾಮುಖಿಯಾಗುವ ಮುನ್ನ ನಿಮ್ಮ ಎಚ್ಚರದಲ್ಲಿ ನೀವಿರಿ.

No comments:

Post a Comment