Monday, June 25, 2012

ಈ ದೈವ ಸಾಮ್ರಾಜ್ಯವನ್ನು ನೀವು ಕಂಡಿದ್ದೀರಾ?

ಪತ್ರಕರ್ತ, ಕವಿ ದಿ.ಬಿ. ಎಂ. ರಶೀದ್  ಲಂಕೇಶ್ ಪತ್ರಿಕೆಗೆ ಬರೆದ ಕೊನೆಯ ವರದಿ ಇದು. ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಈ ಲೇಖನ  ಬಹುಷಃ 2002 ನವೆಂಬರ್ ತಿಂಗಳ ಲಂಕೇಶ್ ವಿಶೇಷಾಂಕದಲ್ಲಿ  ಪ್ರಕಟವಾಗಿದೆ. "ಪರುಶಮಣಿ'' ಸಂಕಲನದಿಂದ ಇದನ್ನು ಆಯ್ಕೆ ಮಾಡಲಾಗಿದೆ.

ನೀನು ಬರೆದ
ಸುಂದರ ಪುಸ್ತಕ ಈ ಜಗತ್ತು!
ನಿಜ, ಒಪ್ಪಿದೆ.
ಆದರೆ ದೇವರೇ
ರೋಗ, ರುಜಿನ, ದಾರಿದ್ರ, ಕಣ್ಣೀರು ಇವುಗಳು
ನಿನ್ನ ಪರೀಕ್ಷೆಗಳೇ?
ಅಥವಾ ಅಚ್ಚಿನ ತಪ್ಪುಗಳೇ?
                 - ಅಮೃತಾ ಪ್ರೀತಂ
 
 ಸಿಯೋನಾ!
ಹಿಬ್ರೂ ಭಾಷೆಯಲ್ಲಿ ಹಾಗೆಂದರೆ ದೇವರು ವಿಹರಿಸುತ್ತಿರುವ ಸ್ಥಳವೆಂದು ಅರ್ಥ. ಬೇಕಿದ್ದರೆ ದೇವರ ಸಾಮ್ರಾಜ್ಯವೆಂದೂ ಹೇಳಬಹುದು. ಇಂತಹದೊಂದು ದೇವಲೋಕ ಈ ಭೂಮಿಯ ಮೇಲೇ ಇದೆ. ಹೆಸರು ಸಿಯೋನ ಆಶ್ರಮ! ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಎಂಬಲ್ಲಿ ಈ ದೈವ ಸಾಮ್ರಾಜ್ಯ ಜೀವ ತಲೆದಿದೆ.

  ದೇವರ ಸಾಮ್ರಾಜ್ಯವೆಂದಾಗ ಇದೊಂದು ಭೋಗ ವಿಲಾಸಗಳ ತಾಣವೆಂದು ನರ ಮನುಷ್ಯರು ಆಸೆ ಪಡಬೇಕಾಗಿಲ್ಲ. ದೇವರ ಕಾರುಣ್ಯವೆಂಬುವುದು ನಾಲ್ಕು ದಿಕ್ಕುಗಳಿಂದ ಒಸರುತ್ತ್ತಿದ್ದರೂ, ಮನುಷ್ಯ ವಿಷಯಾಸಕ್ತಿಯನ್ನು ತಣಿಸುವ ತಾಣ ಮಾತ್ರ ಇದಲ್ಲ. ದೇವರ ಸೃಷ್ಟಿಯಲ್ಲಿ ಆತನದೇ ಅಚ್ಚಿನ ತಪ್ಪುಗಳಂತಿರುವ ಮನುಷ್ಯ ಜೀವಗಳ ದುರಂತಗಳಿಗೆ ಸಾಂತ್ವನ ಲಭಿಸುವಂತ ಅಭಯಾಶ್ರಮವಿದು. ಜಗತ್ತಿನ ದೈವ ಭಕ್ತರು ಪೂಜೆ,ಗದ್ದಲಗಳ ಮೂಲಕ ದೇವರನ್ನು ತಲುಪುತ್ತೇನೆಂದು ಹೊರಟಿರುವಾಗ ಯು.ಸಿ. ಪೌಲಸ್ ಎಂಬ ಅನಕ್ಷರಸ್ಥ ಕ್ರೈಸ್ತ, ಪರಿತ್ಯಕ್ತರ ಸೇವೆಯ ಮೂಲಕ ದೇವರನ್ನು ತಲುಪುತ್ತೇನೆಂದು ಹಂಬಲಿಸಿದಾಗ ಜನ್ಮ ತಾಳಿದ್ದೇ ಸಿಯೋನ ಆಶ್ರಮ.

 ಮನುಷ್ಯ ಸಾಯುವ ಮುನ್ನ ಒಮ್ಮೆ ಕಂಡು ಬಿಡಬೇಕಾಗಿರುವುದು ಪುಣ್ಯ ಕ್ಷೇತ್ರಗಳನ್ನಲ್ಲ; ಸಿಯೋನದಂತಹ ಒಂದು ಆಶ್ರಮವನ್ನು ! ಬೆಳ್ತಂಗಡಿ ಎಂಬ ಗ್ರಾಮಾಂತರ ತಾಲೂಕಿನ ಗರ್ಭದೊಳಗಿರುವ ಸಿಯೋನದಂತಹ ಆಶ್ರಮ ಮನುಷ್ಯರ ಕಣ್ಣಿಗೆ ಬೀಳುವುದು ಅಷ್ಟು ಸುಲಭವೂ ಅಲ್ಲ. ತಮ್ಮ ಆತ್ಮ ಸಾಕ್ಷಿಯನ್ನು ತಿವಿಯುವಂತಹ ಮಾನವ ದುರಂತಗಳನ್ನು ಕಾಣುವುದು ಯಾರಿಗೂ ಬೇಕಿಲ್ಲವಾದ್ದರಿಂದ ಇಂತಹ ಆಶ್ರಮಗಳು ಯಾರ ಆಸಕ್ತಿಯನ್ನೂ ಕೆರಳಿಸುವುದಿಲ್ಲ. ಸಿಯೋನಾಶ್ರಮ ಎಂಬ ಕರುಣೆಯ ಒರತೆ ಒರೆಸುವ ಜಾಗಕ್ಕೆ ತಲುಪಬೇಕಾದರೆ. ಉಜಿರೆಯಿಂದ 20. ಕಿ.ಮೀ. ದೂರದಲ್ಲಿರುವ ಗಂಡಿ ಬಾಗಿಲು ಎಂಬಲ್ಲಿಗೆ ಬರಬೇಕು. ಆಶ್ರಮದ ಒಳಹೊಕ್ಕು ನೋಡಿದರೆ ನಿಮ್ಮ ಎದೆಯೇ ಒಡೆದು ಹೋಗುವಂತಹ ವಿಭಿನ್ನ ಬಗೆಯ ಭಗ್ನ ಚಿತ್ರಗಳು. ಬದುಕಿನ ಲಯವೇ ತಪ್ಪಿ ಹೋಗಿ ಅಲ್ಲಲ್ಲಿ ಮಿಸುಕಾಡುವ ಜೀವಿಗಳಿಗೆ ಮನುಷ್ಯರೆಂಬ ಘನತೆಯನ್ನು ತಂದು ಕೊಡಲು ಅನುಕ್ಷಣವೂ ಹೋರಾಡುತ್ತಿರುವ ಯು.ಸಿ. ಪೌಲಸ್ ಮತ್ತು ಮೇರಿ ದಂಪತಿಗಳು, ಒಂದೊಂದು ಜೀವದ ಮುಂದೆಯೂ ನಿಮ್ಮನ್ನು ನಿಲ್ಲಿಸಿ ಪರಿಚಯಿಸಿ ಕೊಡುವಾಗ ನೀವು ನಿಮಗರಿವಿಲ್ಲದೇ ನಿಮ್ಮ ಆಕಾಶ ಕೋಟೆಯಿಂದ ಭೂಮಿಗಿಳಿದಿರುತ್ತೀರಿ. ನಿಮ್ಮ ಅಟ್ಟಹಾಸ, ಮದ, ಅಹಂಕಾರಗಳೆಲ್ಲವೂ ಅದೆಲ್ಲೋ ಬಾಲ ಮುದುರಿ ಅಡಗಿಕೊಳ್ಳುತ್ತವೆ. ನೀವು ನಿಮ್ಮೋಳಗೇ ಕುಸಿದು ಹೋಗಲಿಲ್ಲ ಎಂದಾದರೆ ನೀವು ಮನುಷ್ಯರೇ ಅಲ್ಲವೆಂದು ಅರ್ಥ.

  ಕುಷ್ಠರೋಗದಿಂದ ಮಂಜುಗಡ್ಡೆಯಂತೆ ಕರಗುತ್ತಿರುವವರು, ಇಹಪರದ ಅರಿವಿಲ್ಲದೆ ಶೂನ್ಯದಲ್ಲಿ ದೃಷ್ಟಿ ನೆಟ್ಟು ಹೋದ ಮತಿವಿಕಲರು, ಕಿವಿ, ಕಣ್ಣು, ಕೈಕಾಲು ಕಳೆದು ಬದುಕಿನ ಊರುಗೋಲನ್ನೇ ಕಳೆದು ಕೊಂಡವರು, ಅಂತಿಮ ಕರೆಗೆ ತಮ್ಮ ಕಿವಿಗಳನ್ನು ಆನಿಸಿ ಕೂತ ವಯೋವೃದ್ಧರು- ತಮ್ಮ ಬಂಧುಗಳಿಗೆ ಬೇಡವಾಗಿ ಬೀದಿಗೆ ಬಿದ್ದ ಇವರು ಯು.ಸಿ.ಪೌಲಸರ ಮಾತಿನಲ್ಲಿ ಸಿಯೋನಾಶ್ರಮದ ಮಕ್ಕಳು. ನಾವು ಅಂಧರ, ಅನಾಥರ, ಮತಿವಿಕಲರ ಅನೇಕ ಬಗೆಯ ಆಶ್ರಮಗಳನ್ನು ಕಂಡಿರುತ್ತೇವೆ. ಆದರೆ ಕಸದ ತೊಪ್ಪೆಯಂತೆ ಬೀದಿಯಲ್ಲಿ ಬಿದ್ದ ಮನುಷ್ಯ ಜೀವಗಳನ್ನು ಎತ್ತಿತಂದು ಪೌಲಸ್ ಮಾಡುವ ಸೇವೆಗೆ ಯಾವುದೂ ಸಾಟಿಯಿಲ್ಲ. ಕಸದ ತೊಟ್ಟಿಯಲ್ಲಿನ ಎಂಜಲೆಲೆ ನೆಕ್ಕುತ್ತಿದ್ದವರನ್ನು, ಬಸ್‌ಸ್ಟಾಂಡ್ ಕಟ್ಟೆಯಲ್ಲಿ ಮೈಯಿಡೀ ವ್ರಣಗಳಾಗಿ ಕರಗುತ್ತಿರುವವರನ್ನು, ಬೀದಿಗೆ ಬಿದ್ದು ಕಂಡವರ ತೆವಲಿಗೆ ಈಡಾಗುತ್ತಿದ್ದ ಹರೆಯದ ಮತಿಭ್ರಮಿತ ಹೆಣ್ಣು ಮಕ್ಕಳನ್ನು ವಾಸನೆ, ಮೈಲಿಗೆಗೆ ಅಂಜದೆ ಪೌಲಸರು ತನ್ನ ಎರಡೂ ಕೈಗಳಲ್ಲಿ ಎತ್ತಿತಂದು ತನ್ನ ಆಶ್ರಮದಲ್ಲಿಟ್ಟು ಸಾಕಿದ್ದಾರೆ. ಈಗಲೂ ಸಾಕುತ್ತಿದ್ದಾರೆ. ಅವರ ಘನ ಘೋರ ವ್ರಣಗಳನ್ನು ತೊಳೆದು, ವರ್ಷಗಟ್ಟಳೆ ನೀರು ಎಣ್ಣೆ ಕಾಣದ ತಲೆಯನ್ನು ಸ್ವಯಂ ತಾನೇ ನಿಂತು ಕ್ಷೌರಮಾಡಿ ಸ್ನಾನಮಾಡಿಸಿ ತನ್ನ ಮನೆಯ ಒಲೆಯಲ್ಲಿ ಬೆಂದ ಅನ್ನವನ್ನೇ ಮಕ್ಕಳಿಗೆ ಉಣಿಸುವಂತೆ ಉಣಿಸಿದ್ದಾರೆ. ಸಿಯೋನಾಶ್ರಮದಲ್ಲಿ ದೇವರಿಲ್ಲ ಎಂದಾದರೆ ಈತ ಇನ್ನೆಲ್ಲಾದರೂ ಇರುವುದಾದರು ಸಾಧ್ಯವೇ?

ಸಿಯೋನಾಶ್ರಮದ ಕೆಲವು ದೃಶ್ಯಗಳು

  ಮತಿ ವಿಕಲರು ಆಗಿದ್ದ ವೃದ್ಧ ಕರಿಯ ಶೆಟ್ಟಿ ತನ್ನ ಮನೆ ಮಂದಿಯ ನಿರ್ಲಕ್ಷದಿಂದಾಗಿ ಬೀದಿ ಪಾಲಾಗಿದ್ದರು. ಉಡುಪಿ ಮೂಲದವರಾಗಿದ್ದ ಕರಿಯ ಶೆಟ್ಟಿ ಅದೇನೋ ಕಕ್ಕಿಂಜೆಯ ಹಳೆ ಸಿಂಡಿಕೇಟ್ ಬ್ಯಾಂಕ್ ಕಟ್ಟೆಯಲ್ಲಿ ಬಂದು ಬಿದ್ದಿದ್ದರು. ಕುತ್ತಿಗೆಯ ಬಳಿಯಿದ್ದ ಕ್ಯಾನ್ಸರ್ ಗಡ್ಡೆಯಿಂದ ಕೀವೊಡೆದು ಮಾರು ದೂರಕ್ಕೆ ದುರ್ವಾಸನೆ ಹಬ್ಬಿತ್ತು. ಮೈಯಿಡೀ ಊದಿ ಕುಂಬಳಕಾಯಂತಾಗಿತ್ತು. ಮೂರು ಹಗಲು, ಮೂರು ರಾತ್ರಿ ಆ ಕಟ್ಟೆಯಲ್ಲಿ ಅನಾಥರಾಗಿ ಬಿದ್ದಿದ್ದ ಕರಿಯ ಶೆಟ್ಟಿ ಕೊನೆಗೆ ಪೌಲಸರ ಕಣ್ಣಿಗೆ ಬಿದ್ದು ಸಿಯೋನಾಶ್ರಮ ಸೇರಿದರು. ಮೂರು ತಿಂಗಳು ಕರಿಯ ಶೆಟ್ಟಿಯ ಆರೈಕೆ ಮಾಡಿದ ಪೌಲಸ್ ದಂಪತಿಗಳು ವಾಸಿಯಾದ ಬಳಿಕ ಅವರ ಮನೆಗೆ ಕಳಿಸಿಕೊಟ್ಟರು.

 ಮಂಗಳೂರಿನ ಜ್ಯೋತಿ ಸರ್ಕಲಿನಲ್ಲಿ ಮೈಗೆ ಬರೇ ಪ್ಲಾಸ್ಟಿಕ್ ಸುತ್ತಿಕೊಂಡು ಅಲೆದಾಡುತ್ತಿದ್ದ ಹುಚ್ಚಿಯೊಬ್ಬಳಿದ್ದಳು. ಕಾಸರಗೋಡಿನವಳಾದ ಈಕೆ ಅಲ್ಲಿ ಹಿಂದಿ ಟೀಚರಾಗಿದ್ದಳು. ಯಾರೋ ಒಬ್ಬ ಪ್ರೀತಿಸಿ ಕೈ ಕೊಟ್ಟಾಗ ಇವಳಿಗೆ ಮತಿ ಭ್ರಾಂತಿಯಾಯಿತು. ಮತಿ ಭ್ರಾಂತಳನ್ನು ಮನೆಯಲ್ಲಿಟ್ಟು ಚಿಕಿತ್ಸೆ ಮಾಡುವ ವ್ಯವಧಾನ ವಿಲ್ಲದ ಮನೆಯವರು ಬೀದಿಗಟ್ಟಿದರು. ಬೀದಿಗೆ ಬಿದ್ದವಳು ಇನ್ನೂ ಒಂದಷ್ಟು ಮಹನೀಯರ ತೆವಲಿಗೆ ಬಲಿಯಾಗಿ ಪೂರ್ತಿ ಪ್ರಮಾಣದ ಹುಚ್ಚಿಯಾಗಿ ಮಂಗಳೂರಿಗೆ ಬಂದು ತಲುಪಿದಳು. ತಿಪ್ಪೆಯಲ್ಲಿದ್ದ ಎಂಜಲು ಬಾಚುತ್ತಾ ಮೈಗೆ ಪ್ಲಾಸ್ಟಿಕ್ ಸುತ್ತಿಕೊಂಡು ಮಳೆ -ಗಾಳಿಯೆನ್ನದೆ ಬೀದಿಯಲ್ಲಿ ಅಲೆಯುತ್ತಿದ್ದವಳನ್ನು ಪೌಲಸ್ ತನ್ನ ಆಶ್ರಮಕ್ಕೆ ತಂದು ಅನ್ನ -ಬಟ್ಟೆ -ಔಷಧಿ ನೀಡಿದರು. ಈಗ ಗುಣಮುಖಳಾಗಿರುವ ಈಕೆ ತನ್ನ ಸೇವೆಯನ್ನು ಆಶ್ರಮಕ್ಕೇ ಮುಡಿಪಾಗಿಟ್ಟಿದ್ದಾಳೆ.

ಶಿಬಾಜೆಯ ಸೀತಾ ಎಂಬವಳಿಗೆ ಮತಿಭ್ರಮಣೆಯಾದಾಗ ಮನೆಯವರು ಅವಳನ್ನು ಬೀದಿಗಟ್ಟಿ ಬಿಟ್ಟರು. ಹುಚ್ಚಿಯನ್ನೂ ಬಿಡದ ಕೆಲವು ಪುರುಷಾಗ್ರೇಸರು ಆಕೆಗೆ ಗರ್ಭ ವನ್ನು ದಯಪಾಲಿಸಿ ಬಿಟ್ಟರು. ಸರಿಯಾದ ಪೋಷಕಾಂಶವೂ ಇಲ್ಲದ ತುಂಬು ಬಸುರಿ; ಬೀದಿಯಲ್ಲಿ ಸ್ಮೃತಿ ತಪ್ಪಿ ಬಿದ್ದವಳನ್ನು ಯಾರೋ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸೇರಿಸಿದರು. ತಾಯಿ ಮಗು ಎರಡೂ ಉಳಿಯಲಾರದು ಎಂದು ಲೆಕ್ಕಹಾಕಿದ ವೈದ್ಯರು ಮೆಲ್ಲಗೆ ಸಿಯೋನಾಶ್ರಮಕ್ಕೆ ಸಾಗಹಾಕಿದರು. ಪೌಲಸರ ಕರುಣಾಶ್ರಮದಲ್ಲಿ ತಾಯಿ - ಮಗು ಇಬ್ಬರೂ ಬದುಕಿಕೊಂಡರು. ಮಗುವಿಗೀಗ ಒಂದೂವರೆ ವರ್ಷ. ಇಷ್ಟೆಲ್ಲಾ ಆದರೂ ಆಶ್ರಮಕ್ಕೆ ಕೂಗಳತೆ ದೂರದಲ್ಲಿರುವ ಸೀತಾಳ ಮನೆಯವರು ಈ ಕಡೆ ಇಣುಕಿ ನೋಡಿಲ್ಲ.

  ಜ್ಯೋತಿ ಎಂಬ ಆರು ವರ್ಷದ ಪುಟ್ಟ ಬಾಲೆಯದ್ದು ಬೇರೆಯೇ ಒಂದು ದುರಂತ ಕಥೆ. ಐದು ತಿಂಗಳ ಹಿಂದೆ ಹಾಸನದ ಚೊಕ್ಕಪಟ್ಟಣದವರಾದ ಜ್ಯೋತಿಯ ತಂದೆ -ತಾಯಿ ಮಗಳ ಸಮೇತ ಧರ್ಮಸ್ಥಳಕ್ಕೆ ಬಂದಿದ್ದವರು, ಸ್ಥಳೀಯ ಜ್ಯೋತಿಷಿಯೊಬ್ಬನಲ್ಲಿ ತನ್ನ ಗೃಹಗತಿ ಬಗ್ಗೆ ವಿಚಾರಿಸಿದ್ದರು. ಆತ ‘ಮಗಳೇ ನಿಮ್ಮ ಕಂಟಕದ ಮೂಲ’ ಎಂದು ಬೊಗಳಿ ಬಿಟ್ಟನಂತೆ. ಪರಿಣಾಮವಾಗಿ ಆ ಮುಠ್ಠಾಳ ತಂದೆ - ತಾಯಿ ಮಗಳನ್ನು ಬಸ್ ಸ್ಟಾಂಡ್‌ನಲ್ಲಿಯೇ ಬಿಟ್ಟು ತಾವಿಬ್ಬರೇ ಹಾಸನದ ಬಸ್ಸು ಹತ್ತಿದರು. ತಮ್ಮ ಬೆನ್ನ ಹಿಂದೆಯೇ ಓಡಿ ಬಂದ ಮಗುವಿನ ಎದೆಗೆ ಒದ್ದು ದೂರ ತಳ್ಳಿದರು. ಗದ್ದಲ ಕಂಡು ವಿಚಾರಿಸಿದವರಿಗೆ, ‘ಯಾರದೋ ಬಿಕನಾಸಿ ಮಗು’ ಎಂದು ಉತ್ತರಿಸಿದರು. ಹಾಗೇ ಬಸ್‌ಸ್ಟಾಂಡ್‌ನಲ್ಲಿ ಮೂರು ದಿನ ಅನ್ನ ನೀರಿಲ್ಲದೆ ಅತ್ತು ಕರೆದು ಬಿದ್ದಿದ್ದವಳನ್ನು ಯಾರೋ ಸಿಯೋನಾಶ್ರಮಕ್ಕೆ ಸೇರಿಸಿದರು. ಪೌಲಸ್ ಎರಡೂ ಕೈ ನೀಡಿ ಮಗುವನ್ನು ಸ್ವೀಕರಿಸಿದರು. ಜ್ಯೋತಿ ಈಗ ಆಶ್ರಮದಲ್ಲಿದ್ದೇ ಒಂದನೇ ಕ್ಲಾಸು ಓದುತ್ತಿದ್ದಾಳೆ. ಕಲಿಯುವುದರಲ್ಲಿ ಚೂಟಿ.

 ಮೈಸೂರಿನ ಒಬ್ಬ ಮಹಾ ತಾಯಿಗೆ ಕಣ್ಣು -ಕಾಲು- ಬಾಯಿ ಸರಿ ಇಲ್ಲದ ಮಗು ಹುಟ್ಟಿ ಬಿಟ್ಟಿತು. ನೋಡುವಷ್ಟು ದಿನ ನೋಡಿದಳು. ಒಂದು ದಿನ ಮಗುವನ್ನು ಅನಾಮತ್ತು ನದಿಗೆತ್ತಿ ಬಿಟ್ಟಳು. ಅದ್ಯಾರೋ ಕಾಪಾಡಿ ಸಿಯೋನಾಶ್ರಮಕ್ಕೆ ತಲುಪಿದ ಬಸವರಾಜನೆಂಬ ಹೆಸರಿನ ಆ ಮಗು ಈಗ ಮಾತು ನಡಿಗೆ ಎರಡನ್ನೂ ಕಲಿಯುತ್ತ್ತಿದೆ.

   ಮನುಷ್ಯ ಜೀವನದ ಭಗ್ನ ಚಿತ್ರಗಳೇ ಲಭ್ಯವಾಗುವ ಸಿಯೋನಾಶ್ರಮದಲ್ಲಿ ಒಮ್ಮಮ್ಮೆ ವಿಶೇಷ ಘಟನೆಗಳು ನಡೆಯುವುದಿದೆ. ತಿಮ್ಮಪ್ಪ ಪೂಜಾರಿ ಬಂಟ್ವಾಳ ಕಡೆಯ ಮತಿ ಭ್ರಮಿತ ವ್ಯಕ್ತಿ. ಈತನ ಹಾವಳಿ ತಡೆಯಲಾರದ ಮನೆಯವರು ಈತನ ಕೈ ಕಾಲುಗಳನ್ನು ಕಟ್ಟಿ ಸಿಯೋನಾಶ್ರಮಕ್ಕೆ ಎಸೆದು ಹೋದರು. ಪೌಲಸ್ ದಂಪತಿಗಳ ಆರೈಕೆಯಲ್ಲಿ ಗುಣ ಮುಖವಾದ ತಿಮ್ಮಪ್ಪ ಪೂಜಾರಿ ಬಳಿಕ ಆಶ್ರಮದಲ್ಲೇ ಸೇವೆಗೆ ನಿಂತನು. ಅದೇ ಹೊತ್ತಿನಲ್ಲಿ ಕೂಳೂರಿನ ನಮಿತಾ ಎಂಬ ಕ್ರಿಶ್ಚಿಯನ್ ಹುಡುಗಿ ಮತಿಭ್ರಮಣೆಗೀಡಾದವಳನ್ನು ಯಾರೋ ಸಿಯೋನಾಶ್ರಮಕ್ಕೆ ತಂದು ಬಿಟ್ಟರು. ಅಲ್ಲಿ ಆಕೆ ಗುಣ ಮುಖಳಾದಳು. ಕ್ರಮೇಣ ತಿಮ್ಮಪ್ಪ ಪೂಜಾರಿ ಮತ್ತು ನಮಿತಾ ನಡುವೆ ಪ್ರೇಮಾಂಕುರವಾಗಿ ಮದುವೆಯಾಗುವ ಇಚ್ಛೆಯನ್ನು ಪೌಲಸ್ ಬಳಿ ಹೇಳಿಕೊಂಡರು. ಆದರೆ ಇಬ್ಬರದೂ ವಿಭಿನ್ನ ಧರ್ಮಗಳಾಗಿದುದರಿಂದ ಅವರಿಬ್ಬರ ಮನೆಯವರ ಅನುಮತಿ ಪಡೆದ ಪೌಲಸ್ ಮಂಗಳೂರು ರಿಜಿಸ್ಟ್ರಾರ್ ಆಫೀಸಿನಲ್ಲಿ ಮದುವೆ ಮಾಡಿಕೊಟ್ಟರು. ಗಂಡ ಹೆಂಡತಿ ಇಬ್ಬರೂ ಈಗ ಆಶ್ರಮದ ಸೇವೆಯಲ್ಲಿ ಭಾಗಿ. ನಮಿತಾ ಈಗ ತುಂಬಿದ ಬಸುರಿ, ಹೆರಿಗೆಗೆಂದು ತವರಿಗೆ ಹೋಗಿದ್ದಾಳೆ.

ಹೀಗೆ ಸಿಯೋನಾಶ್ರಮದಲ್ಲಿ ತಮಗೆ ದ್ರೋಹ ಬಗೆದ ವಿಧಿಯೆದುರೇ ಸಡ್ಡು ಹೊಡೆದು ಜೀವನ್ಮುಖಿಯಾಗುವ ನೂರಾರು ಜೀವಗಳ ಚಿತ್ರವಿದೆ. ಹಾಗೆಯೇ ತಪ್ಪಿ ಹೋದ ಬದುಕಿನ ತಾಳ ಇನ್ನೆಂದಿಗೂ ಸರಿಹೋಗಲಾರದೇನೋ ಎಂಬಂತಹ ನಿರಾಶದಾಯಕ ಚಿತ್ರಗಳೂ ಇವೆ. ಎಲ್ಲೆಂದರಲ್ಲಿ ಮಲ ಮೂತ್ರ ಮಾಡುವವರು, ಊಟ ಬೇಡವೆಂದು ರಚ್ಚೆ ಹಿಡಿಯುವವರು, ಅನ್ನವನ್ನು ಬಾಚಿ ಮುಕ್ಕುವವರು, ವಿನಾಃಕಾರಣ ನಗುವವರು, ಅರಚುವವರು. ಆಂಧ್ರ ಪ್ರದೇಶದ ಕಡೆಯ ಹೆಸರಿಲ್ಲದ ಅಜ್ಜಿಯೊಬ್ಬಳಿದ್ದಾಳೆ. ಸದಾ ಕೊಳಕಾಗಿರ ಬೇಕೆನ್ನುವುದೇ ಅವಳ ಹವ್ಯಾಸ. ಸ್ನಾನ ಮಾಡಿಸಿದ, ಒಗೆದ ಬಟ್ಟೆ ಹಾಕಿಸಿದ ಮರುಕ್ಷಣವೇ ಮಣ್ಣಲ್ಲಿ ಹೊರಳಾಡಿ ಎಲ್ಲವನ್ನು ಗಲೀಜು ಮಾಡಿಕೊಳ್ಳುವಳು. ಅನ್ನಕ್ಕೆ ಕಲ್ಲು ಮಣ್ಣು ಬೆರೆಸಿ ತಿನ್ನುವಳು. ಇನ್ನೊಬ್ಬ ಅನ್ನಕ್ಕೆ ಉಚ್ಚೆಯನ್ನೇ ಹೊಯ್ದು ತಿನ್ನುವನು. ಆದರೆ ಪೌಲಸ್ ದಂಪತಿಗಳ ಸಹನೆ ದೊಡ್ಡದು. ಆ ಸೀಮಾತೀತ ಸಹನೆಯ ಮುಂದೆ ಮನೋರೋಗಿಗಳ ವಿಕೃತಿ ಗೆಲ್ಲುವುದು ವಿರಳ.

 ಈ ಕಡೆಯ ಬಹುತೇಕ ಮಲಯಾಳಿ ಕ್ರೈಸ್ತರಂತೆ ಯು.ಸಿ.ಪೌಲಸರ ಪೂರ್ವಜರು ಕೇರಳದಿಂದ ವಲಸೆ ಬಂದವರು. ಪೌಲಸರ ಹೆತ್ತವರು ಗಂಡಿಬಾಗಿಲು ಎಂಬಲ್ಲಿ ನೆಲೆಯೂರಿ ಕಾಡುಕಡಿದು ಹತ್ತಿಪ್ಪತ್ತು ಎಕರೆ ಭೂಮಿಯನ್ನು ಕೃಷಿಯೋಗ್ಯ ಮಾಡಿದ್ದರು. ಬಳಿಕ ತೋಟವನ್ನೆ ನೆಚ್ಚಿಕೊಂಡು ಕುಟುಂಬದ ಪೋಷಣೆ ಮಾಡುತ್ತಿದ್ದ ಪೌಲಸ್‌ಗೆ ಸಿಯೋನದಂತಹ ಆಶ್ರಮ ಮಾಡಬೇಕೆಂದು ಉಂಟಾದ ಪ್ರೇರಣೆ ಆಕಸ್ಮಿಕವಾದುದು.

 ಮೂರುವರೆ ವರ್ಷಗಳ ಹಿಂದೆ ಕೆಲಸ ನಿಮಿತ್ತ ಪಾಲಕ್ಕಾಡ್‌ಗೆ ಹೋಗಿದ್ದ ಪೌಲಸ್ ಪಾಲಕ್ಕಾಡ್ ರೈಲ್ವೇ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆಗ ಅಲ್ಲಿದ್ದ ಹೊಟೇಲೊಂದರ ಮಾಣಿ ಎಂಜಲು ಎಲೆಗಳನ್ನು ಡಸ್ಟ್‌ಬಿನ್‌ಗೆ ತಂದು ಸುರಿದನು. ಒಮ್ಮೆಲೇ ಅದೆಲ್ಲಿದ್ದರೋ ಏಳೆಂಟು ಜನ ಹುಚ್ಚರ ದಂಡು ಡಸ್ಟ್‌ಬಿನ್‌ಗೆ ಮುಗಿ ಬಿದ್ದು ಎಂಜಲೆಲೆಯ ಕೊಳೆತ ವಸ್ತುವಿಗಾಗಿ ಕಿತ್ತಾಡತೊಡಗಿದರು. ಈ ಯಮಯಾತನೆಯ ದೃಶ್ಯವನ್ನು ಕಂಡು ತಲ್ಲಣಿಸಿ ಹೋದ ಪೌಲಸ್ ವೇದನೆಯಿಂದ ಮುಖ ಕಿವುಚಿ ಕೊಂಡರು. ಅಲ್ಲಿಂದ ಊರಿಗೆ ಮರಳಿದರೂ ಆ ದೃಶ್ಯ ಮಾತ್ರ ಪೌಲಸರ ಮನಸ್ಸಿನಿಂದ ಮರೆಯಾಗಲಿಲ್ಲ. ಕೊನೆಗೆ ಅಂಥವರಿಗಾಗಿ ಆಶ್ರಮವೊಂದನ್ನು ತೆರೆಯುವ ತನ್ನ ಯೋಜನೆಯನ್ನು ಪತ್ನಿ ಮೇರಿಯಲ್ಲಿ ಹೇಳಿಕೊಂಡರು. ಪೌಲಸರ ಪತ್ನಿಗೂ ಇದು ಸಮ್ಮತವೆಂದು ತೋಚಿತು ಪೌಲಸ್ ದಂಪತಿಗಳ ಓದುತ್ತಿದ್ದ ಮಕ್ಕಳಾದ ಶೋಭಾ, ಸುಭಾಷ್, ಸೌಮ್ಯ,ಶೈನಿಯವರು ಕೂಡ ಈ ನಿರ್ಧಾರವನ್ನು ವಿರೋಧಿಸಲಿಲ್ಲ.

 ತನ್ನ ಆಶ್ರಮದ ಆರಂಭದ ಹೆಜ್ಜೆಯಾಗಿ ಪೌಲಸ್, ಕಳಸ ಕಡೆಯ ಯಶೋಧ ಎಂಬ ಅನಾಥ ಯುವತಿಯನ್ನು ತನ್ನ ಮನೆಯಲ್ಲಿಟ್ಟು ಸಾಕತೊಡಗಿದರು. ಈ ಯಶೋಧ ಪೊಲೀಯೋದಿಂದ ಸೊಂಟದ ಕೆಳಗಿನ ಭಾಗವನ್ನೇ ಕಳೆದುಕೊಂಡಿದ್ದಳು ಬೇರೆ. ಎರಡನೆ ಸದಸ್ಯರಾಗಿ ಕಕ್ಕಿಂಜೆಯಲ್ಲಿ ಅನಾಥವಾಗಿ ಬಿದ್ದುಕೊಂಡಿದ್ದ ಕರಿಯ ಶೆಟ್ಟರ ಸೇರ್ಪಡೆಯಾಯಿತು. ಹುಚ್ಚ ರಾಮ ಸಿಯೋನಾಶ್ರಮಕ್ಕೆ ಕಾಲಿಟ್ಟ ಮೂರನೆಯ ಸದಸ್ಯ. ಹೀಗೆ ದಿನೇ ದಿನೇ ಸಿಯೋನಾಶ್ರಮದ ಸದಸ್ಯರ ಸಂಖ್ಯೆ ಏರತೊಡಗಿತು. ಪುಕ್ಕಟೆ ಸಾಕುತ್ತಾರೆಂದ ತಕ್ಷಣ ಕೊಳೆತ ತರಕಾರಿ ಎಸೆದು ಹೋದಂತೆ ಮನುಷ್ಯರನ್ನು ಎಸೆದು ಹೋಗುವವರಿಗೆ ಕಡಿಮೆಯಿರಲಿಲ್ಲ. ಹಾಗೆ ಬಿಟ್ಟು ಹೋದ ಬಂಧುಗಳನ್ನು ಮತ್ತೆ ಆಶ್ರಮದ ಪರಿಸರದಲ್ಲಿ ಕಂಡವರಿಲ್ಲ.

ಈಗ ಆಶ್ರಮದಲ್ಲಿ ಪುರುಷರೂ, ಮಹಿಳೆಯರೂ ಸೇರಿ 162 ಮಂದಿಯಿದ್ದಾರೆ. ಹಿಂದೆ ಇದ್ದ ಸೋಗೆ ಮಾಡಿನ ಕಟ್ಟಡ ಹೋಗಿ ಈಗ ಕಾಂಕ್ರೀಟ್ ಕಟ್ಟಡ ನಿರ್ಮಾಣವಾಗಿದೆ. ಅಕ್ಕಿ, ಬಟ್ಟೆ, ಔಷಧಿ ಎಂದು ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಬೀಳುತ್ತದೆ. ಎಲ್ಲವೂ ದಾನಿಗಳ ಕೃಪೆಯಿಂದ ನಡೆದಿದೆ ಎಂದು ಸ್ಮರಿಸಿಕೊಳ್ಳಲು ಪೌಲಸ್ ಮರೆಯುವುದಿಲ್ಲ.ಸರಕಾವೇನಾದರೂ ಸಹಾಯ ಮಾಡಿದರೆ ಇನ್ನೂ ವ್ಯವಸ್ಥಿತವಾಗಿ ಆಶ್ರಮ ನಡೆಸಬಹುದೆಂದು ಪೌಲಸ್ ನುಡಿಯುತ್ತಾರೆ.

ಈ ನಡುವೆ ಏರ್ವಾಡಿ ದುರಂತದಲ್ಲಿ 26 ಜನ ಸಜೀವ ದಹನಗೊಂಡ ಬಳಿಕ ಸುಪ್ರೀಂಕೋರ್ಟ್ ಇಂತಹ ಆಶ್ರಮಗಳಲ್ಲಿ ಹುಚ್ಚರನ್ನು ಸಾಕುವುದಕ್ಕೆ ಕಟ್ಟು ನಿಟ್ಟಾದ ನಿಯಮಗಳನ್ನು ಹೇರಿದೆ. ಹಾಗಾಗಿ ಇಲ್ಲಿದ್ದ 43 ಜನ ಹುಚ್ಚರನ್ನು ಈಗ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸದ್ಯಕ್ಕೆ ಪೌಲಸರು ತನ್ನ ಆಶ್ರಮಕ್ಕೆ ಹುಚ್ಚರನ್ನು ಸೇರಿಸಿ ಕೊಳ್ಳುವಂತಿಲ್ಲ. ಸುಪ್ರೀಂಕೋರ್ಟ್ ಆಗ್ರಹಿಸುವ ಸವಲತ್ತುಗಳನ್ನು ಯಾರಾದರೂ ತನಗೆ ಒದಗಿಸಿಕೊಟ್ಟಲ್ಲಿ ತಾನು ಮತಿ ವಿಕಲರನ್ನು ಸಾಕಿಕೊಳ್ಳಲು ಸಿದ್ಧನಿದ್ದೇನೆ ಎಂದು ಪೌಲಸ್ ಮಾಧ್ಯಮಗಳಿಗೆ ತಿಳಿಸುತ್ತಾರೆ. ಪೌಲಸ್ ದಂಪತಿಗಳದ್ದು ನಿರ್ಗತಿಕರ ಸೇವೆಯಲ್ಲಿ ದಣಿವು ಕಾಣದ ಜೀವ. ಪೌಲಸರ ನಾಲ್ವರು ಮಕ್ಕಳು ಕೂಡ ಬಿಡುವಿನ ವೇಳೆಯಲ್ಲಿ ಆಶ್ರಮದ ಸೇವೆಯಲ್ಲಿ ಕಾಲ ಕಳೆಯುತ್ತಾರೆ, ಪೌಲಸರ ಅನೇಕ ಬಂಧುಗಳು ಕೂಡ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆಯಲ್ಲಿ ತಲ್ಲೀನರಾಗಿದ್ದಾರೆ.

ಪೌಲಸರ ಮಾನವೀಯ ಸೇವೆಯನ್ನು ಅನುಮಾನದ ಕಣ್ಣುಗಳಿಂದ ಕಾಣುವ ವಿಕೃತರಿಗೂ ಸುತ್ತಮುತ್ತಲ ಪರಿಸರದಲ್ಲಿ ಬರವಿಲ್ಲ, ಸೇವೆಯ ಹೆಸರಿನಲ್ಲಿ ಅದೆಂಥದೋ ಲಾಭಗಳಿಸುತ್ತಿದ್ದಾರೆ ಎನ್ನುವುದು ಜನರ ಗುಮಾನಿ. ಆ ಲಾಭದ ಸ್ವರೂಪ ವೆಂತಹದೆನ್ನುವುದು ಈ ಜನರಿಗೆ ಸ್ಪಷ್ಟವಿಲ್ಲ. ಆಶ್ರಮದ ಹೆಸರಿನಲ್ಲಿ ಅದೆಲ್ಲಿಂದಲೋ ಹಣ ಸುರಿದು ಬರುತ್ತದೆನ್ನುವುದು ಕೆಲವರ ಶಂಕೆ. ಹಣ ಸಿಕ್ಕರೆ ಕಂಡವರ ವ್ರಣ ತೊಳೆಯಲು ನೀನು ಸಿದ್ಧ ನಿರುವೆಯಾ? ಎಂದು ಶಂಕಿಸಿದವನಲ್ಲಿ ಕೇಳಿದರೆ ಮಾರುತ್ತರ ಬರುವುದಿಲ್ಲ. ಇನ್ನು ಕೆಲವರದ್ದು ಪೌಲಸ್ ಸೇವೆಯ ಹೆಸರಿನಲ್ಲಿ ಮತಾಂತರ ಮಾಡುತ್ತಾನೆ ಎನ್ನುವ ಆರೋಪ. ಕೊಳೆತು ನಾರುತ್ತಿರುವ ಮಾಂಸದ ಮುದ್ದೆಗಳನ್ನು ಶುದ್ಧೀಕರಿಸಿ ಮಾನವ ರೂಪಕ್ಕೆ ತರುವ ಪೌಲಸ್, ಒಂದು ವೇಳೆ ಅಂತಹವರನ್ನು ಮತಾಂತರ ಗೊಳಿಸಿದರೆ ಅದರಲ್ಲಿ ತಪ್ಪೇನಿದೆ. ಹಾಗೆಂದು ಪೌಲಸ್ ಮತಾಂತರಗೊಳಿಸಿದ್ದಕ್ಕೆ ಯಾವ ನಿದರ್ಶನಗಳೂ ಇಲ್ಲ. ಲಾಭವಿಲ್ಲದೇ ಯಾರೂ ಯಾವುದನ್ನೂ ಮಾಡುವುದಿಲ್ಲ ಎಂಬ ವಿಕೃತಿಯನ್ನೇ ಜೀವನ ವೌಲ್ಯವನ್ನಾಗಿ ಸ್ವೀಕರಿಸಿ ಕೊಂಡ ಮನುಷ್ಯ ಇನ್ನೊಬ್ಬರಲ್ಲಿ ಒಳಿತನ್ನು ಗುರುತಿಸುವುದು ಎಂದಾದರೂ ಸಾಧ್ಯವಿದೆಯೆ?
ಸಿಯೋನಾಶ್ರಮದ ವಿಳಾಸ : ಯು.ಸಿ. ಪೌಲಸ್, ಸಿಯೋನ ಆಶ್ರಮಗಂಡಿಬಾಗಿಲು ಅಂಚೆ - 574228 ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.


 

1 comment:

 1. Any updates?? has anyone been there after this article has been published?
  I dont believe in God, but i believe in the piety of such persons as Paulus and family
  Would like to visit there once
  thanks for posting this
  malathi S

  ReplyDelete