Thursday, September 8, 2011

ಹಸುವಿನಂತೆ ಪ್ರೀತಿ

















ತುಂಬಾ ಹಿಂದೆ ಬರೆದ ಕವಿತೆ. ನನ್ನ ‘ಪ್ರವಾದಿಯ ಕನಸು’ ಸಂಕಲನದಲ್ಲಿ ಪ್ರಕಟವಾಗಿದೆ.


ಅಪರಿಚಿತನಿಗೆ ಪ್ರೀತಿ
ಹಸುವಿನಂತೆ
ಬೀಸಿದರೆ ಕೊಂಬು
ಎಂಬ ಚಿಂತೆ!

ಮೊದಲು ಪ್ರೀತಿಯ ನಂಬು
ಚಪ್ಪರಿಸಿ ಬೆನ್ನು
ಮುಖಕ್ಕೆ ಮುಖ ಉಜ್ಜಿ
ಇಡು ಕಣ್ಣಿಗೆ ಕಣ್ಣು
ಆರ್ದ್ರತೆಯನ್ನೆಲ್ಲ ನಿನ್ನೊಳಗೆ ತುಂಬು!

ಸರಪಳಿ ಬಿಚ್ಚು
ಪ್ರೀತಿಗೆ ಸ್ವಾತಂತ್ರವೇ ಕೆಚ್ಚು
ಒಂದು ಹಿಡಿ ಮೇವು ಸಾಕು
ಈಗ ಕೆಚ್ಚಲಿಗೇ ಬಾಯಿ ಹಚ್ಚು!

ಪ್ರೀತಿ ಹಸುವಿನಂತೆ
ಕಟುಕನ ಕತ್ತಿಗೆ ಚೂರು ಚೂರು
ಅಮ್ಮನ ಮುಂದೆ ಧಗಿಸುವ ಒಲೆ
ಒಲೆ ಮೇಲೆ
ಘಮಘಮಿಸುವ ಸಾರು!


ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

3 comments:

  1. ಹೌದು , ಪ್ರೀತಿಯನುಭವದಲ್ಲಿ ಸ್ವಾತಂತ್ರ್ಯ, ನಂಬಿಕೆ, ಮೆಚ್ಚು, ಹುಚ್ಚು ಎಲ್ಲವೂ ಇದೇ.. ಒಳ್ಳೆ ಪ್ರತಿಮೆ, ಒಳ್ಳೆ ಅಭಿವ್ಯಕ್ತಿ ಬಶೀರ್ ಭಾಯ್ :)

    ReplyDelete
  2. 'ಬಾಲ್ಯ ಕಾಲ ಸಖಿ' ಯನ್ನು ಓದಿದ್ದೆ, ಅದರ ಗುಂಗು ಹಲವುದಿನ ಕಾಡಿತ್ತು ! ಜರ್ನಲಿಸ್ಟ್ ಒಬ್ಬ ಬ್ಲಾಗರ್ ಕೂಡ ಆದರೆ ಅದು ಸಂತಸದ ವಿಷಯ, ಚೆನ್ನಾಗಿ ಬರೆಯುತ್ತೀರಿ, ಮುಂದುವರಿದು ನಿತ್ಯವೂ ರಸದೌತಣ ನಮಗೆ ಸಿಗಲಿ, ಪರವಾಗಿಲ್ಲ ನಿಮ್ಮ ಗುಜರಿ ಅಂಗಡೀಲಿ ಎಲ್ಲೂ ಸಿಗದ ಅಪರೂಪದ ಹಳೇ ಹೊಸ ಬಿಡಿಭಾಗಗಳು, ಪೂರ್ತಿಇರುವ ಒಡವೆ-ವಸ್ತುಗಳು ದೊರೆತರೆ ಅಲ್ಲೇ ಸಣ್ಣ ಗೋಣಿ ಹಾಸಿ ಕೂತು ಬೇಕಾದ್ದನ್ನೆಲ್ಲಾ ನಮ್ಮ ಕೈಚೀಲಕ್ಕೆ ತುಂಬಿಕೊಂಡು ಹೋಗುತ್ತಿರುತ್ತೇವೆ, ಮತ್ತೆ ಬರುತ್ತೇವೆ-ಮತ್ತೆ ಹೋಗುತ್ತೇವೆ, ವಾರದಾಗ ಮೂರು ಸರತಿ ಬಂದು ಹೊಗಾಂವಾ ಅಂತ ಬೇಂದ್ರೆ ಮಾಸ್ತರ್ ಹೇಳಿದ್ದಾರಲ್ಲ ಹಾಗೇ, ಧನ್ಯವಾದಗಳು.

    ReplyDelete
  3. ವೈಕ್ಕೊಂ ಮುಹಮ್ಮದ್ ಬಷೀರ್ ಅವರ ಬಾಲ್ಯ ಕಾಲ ಸಖಿ ನನ್ನ ಮೆಚ್ಚಿನ ಪುಸ್ತಕವೂ ಕೂಡ. ಬಂಗಾಳಿ ದೇವದಾಸ್ ಪಾತ್ರಕ್ಕೆ ಪರ್ಯಾಯವಾಗಿ ಮಲಯಾಳಂ ದೇವದಾಸನನ್ನು ಬಷೀರ್ ಕಟ್ಟಿ ಕೊಟ್ಟರು. ಅವರ ಪಾತುಮ್ಮನ ಆಡು ಓದಿ. ಬಹಳ ತಮಾಷೆಯಾಗಿದೆ ಮತ್ತು ಜೀವನಕ್ಕೆ ತುಂಬಾ ಹತ್ತಿರವಾಗಿದೆ. ನನ್ನ ಗುಜರಿ ಅಂಗಡಿಯ ಮೇಲೆ ಇಟ್ಟ ನಂಬಿಕೆಗೆ ವಂದನೆಗಳು ಗೆಳಯರೇ.

    ReplyDelete