Monday, September 26, 2011

ಸಂತೋಷ ಮತ್ತು ಇತರ ಕತೆಗಳು

ಕೊಲೆ
ಅವನೊಬ್ಬ ಕ್ರೂರಿ. ನೂರಾರು ಕೊಲೆಗಳನ್ನು ಮಾಡಿದ್ದ.
ಅವನಿಗೆ ವಯಸ್ಸಾಯಿತು. ಮುದುಕನಾಗಿ ಅವನು ನಿಶ್ಶಕ್ತನಾಗಿ ಮೂಲೆ ಸೇರಿದ.
ಆಗ ನೂರಾರು ಜನ ಅವನ ಸುತ್ತ ಸೇರಿದರು.
ಅತ್ಯಂತ ಕ್ರೂರವಾಗಿ ಥಳಿಸಿ, ಥಳಿಸಿ ಕೊಂದರು.
ಬಳಿಕ ಹೇಳಿದರು ‘‘ಅವನನ್ನು ಕೊಂದೆವು’’
ಆದರೆ ಅವನು ಸತ್ತಿರಲಿಲ್ಲ.
ಅವರೆಲ್ಲರ ರಕ್ತದ ಕಣಕಣಗಳಲ್ಲಿ ಸೇರಿ, ನಗುತ್ತಿದ್ದ.

ಪ್ರಶ್ನೆ
ಹಲವರನ್ನು ಕೊಂದ ಕಟುಕನಿಗೆ ಗಲ್ಲು ಶಿಕ್ಷೆ ಘೋಷಿಸಲಾಗಿತ್ತು.
ಗಲ್ಲು ಶಿಕ್ಷೆಯ ದಿನ ಆತನೊಂದಿಗೆ ಕೇಳಿದರು
‘‘ನಿನಗೆ ಏನಾದರೂ ಆಸೆಗಳಿವೆಯೆ?’’
ಆತ ವಿಷಾದದಿಂದ ಉತ್ತರಿಸಿದ ‘‘ಈ ಪ್ರಶ್ನೆಯನ್ನು 20 ವರ್ಷಗಳ ಹಿಂದೆ ಕೇಳಿದ್ದಿದ್ದರೆ ನೀವು ನನಗೆ ಗಲ್ಲು ಶಿಕ್ಷೆ ನೀಡುವ ಪರಿಸ್ಥಿತಿಯೇ ಒದಗುತ್ತಿರಲಿಲ್ಲ. ತುಂಬಾ ತಡಮಾಡಿದಿರಿ’’

ಚಪ್ಪಲಿ
ಒಬ್ಬ ಜಿಪುಣ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಬರಿಗಾಲಲ್ಲಿ ನಡೆದುಕೊಂಡು ಹೋಗುತ್ತಿದ್ದ.
ಬಿಸಿಲು ಸುಡುತ್ತಿದ್ದರೂ, ಚಪ್ಪಲಿ ಸವೆಯುತ್ತದೆಯಲ್ಲ ಎನ್ನುವುದು ಅವನ ಆತಂಕ.
ದಾರಿ ಹೋಕನೊಬ್ಬ ಅದನ್ನು ನೋಡಿ ಕೇಳಿದ ‘‘ಹಾಗಾದರೆ ಚಪ್ಪಲಿಯನ್ನು ಕೊಂಡುಕೊಂಡದ್ದಾದರೂ ಯಾಕೆ?’’
‘‘ನಾನೆಲ್ಲಿ ಕೊಂಡುಕೊಂಡೆ? ಇದು ನನ್ನ ಅಪ್ಪನಿಗೆ ನನ್ನ ತಾತನಿಂದ ಸಿಕ್ಕಿದ್ದು. ಅಪ್ಪನಿಂದ ನನಗೆ ಸಿಕ್ಕಿತು’’ ಜಿಪುಣ ಉತ್ತರಿಸಿದ.

ಹಣ್ಣು
ಒಬ್ಬ ಹಣ್ಣಿನ ವ್ಯಾಪಾರಿ ಸಂತೆಯಲ್ಲಿ ಕುಳಿತಿದ್ದ.
‘ಸಿಹಿಯಾದ ಹಣ್ಣು...ಸಿಹಿಯಾದ ಹಣ್ಣು ಬನ್ನಿ ಬನ್ನಿ’ ಎಂದು ಕೂಗುತ್ತಿದ್ದ.
ಅಷ್ಟರಲ್ಲಿ ಒಬ್ಬ ಸಿಟ್ಟಿನಿಂದ ಬಂದು ಹೇಳಿದ ‘‘ನೀನು ಸುಳ್ಳು ಹೇಳುತ್ತಿದ್ದೀಯ...ಅದು ಹುಳಿ ಹಣ್ಣು...ನಿನ್ನೆ ತೆಗೆದುಕೊಂಡು ಹೋಗಿ ನಾನು ಮೋಸ ಹೋದೆ...ಸುಳ್ಳುಗಾರ...’’
ವ್ಯಾಪಾರಿ ತಣ್ಣಗೆ ಹೇಳಿದ ‘‘ನೀನು ಶ್ರೀರಾಮ ಅನ್ನುವುದು ನನಗೆ ಗೊತ್ತಿದ್ದಿದ್ದರೆ ನಾನದನ್ನು ಶಬರಿಯಂತೆ ಕಚ್ಚಿ ರುಚಿ ನೋಡಿ ಕೊಡುತ್ತಿದ್ದೆ’’

ಸಂತೋಷ
ಜೋರಾದ ಬಿರುಗಾಳಿಗೆ ಸಂತನ ಆಶ್ರಮ ಬಿದ್ದು ಬಿಟ್ಟಿತು. ಶಿಷ್ಯರು ಆತಂಕದಿಂದ ಕೇಳಿದರು ‘‘ಗುರುಗಳೇ ಏನು ಮಾಡೋಣ?’’
ಸಂತ ಹೇಳಿದ ‘‘ಬೀಳುವುದಕ್ಕೆ ಇನ್ನೇನು ಇಲ್ಲವಲ್ಲ ಎಂದು ಸಂತೋಷ ಪಡೋಣ’’

ಸ್ವರ್ಗ-ನರಕ
ನರಕ-ಸ್ವರ್ಗ ಅಕ್ಕಪಕ್ಕದಲ್ಲಿದ್ದರು.
ನರಕದ ಆಕ್ರಂದನ ಸ್ವರ್ಗದವರಿಗೆ ಕೇಳುತ್ತಿತ್ತು.
ಸ್ವರ್ಗದ ಸುಖ ನರಕದವರಿಗೆ ಕಾಣುತ್ತಿತ್ತು.
ದೇವರು ಸ್ವರ್ಗದವರಲ್ಲಿ ಕೇಳಿದ ‘‘ಹೇಗಿದ ಸ್ವರ್ಗ?’’
ಸ್ವರ್ಗದವರು ಹೇಳಿದರು ‘‘ದೇವರೇ, ಈ ಆಕ್ರಂದನವನ್ನು ಕೇಳಿಕೊಂಡು ನಾವು ಸುಖ ಪಡುವುದು ಸಾಧ್ಯವೆ?’’
ದೇವರು ನರಕದವರಲ್ಲಿ ಕೇಳಿದ ‘‘ಹೇಗಿದೆ ನರಕ?’’
ಅವರು ರೋದಿಸುತ್ತಾ ಹೇಳಿದರು ‘‘ದೇವರೇ...ಸ್ವರ್ಗದವರ ಸುಖ ನಮ್ಮನ್ನು ಬೆಂಕಿಗಿಂತಲೂ ತೀವ್ರವಾಗಿ ಸುಡುತ್ತಿದೆ. ದಯವಿಟ್ಟು ಅದರಿಂದಲಾದರೂ ನಮ್ಮನ್ನು ರಕ್ಷಿಸು’’

ಗಂಡು
ಮರಣದ ನೋವನ್ನು ಅನುಭವಿಸುತ್ತಾ ಚೀರಾಡುತ್ತಿದ್ದ ಆಕೆ ಕೊನೆಗೂ ಹೆತ್ತಳು.
ದಾದಿಯರು ಸಂತೋಷದಿಂದ ಉದ್ಗರಿಸಿದರು ‘‘ಮಗು ಗಂಡು!’’
‘‘ಆ ಮರಣದ ನೋವನ್ನು ಅನುಭವಿಸುವಾಗಲೇ ನನಗೆ ಗೊತ್ತಾಗಿ ಬಿಟ್ಟಿತ್ತು, ಗಂಡು ಮಗುವಾಗಿರಬೇಕೆಂದು’’ ತಾಯಿ ತನಗೆ ತಾನೆ ನಿಟ್ಟುಸಿರಿಟ್ಟು ಹೇಳಿದರು.

ಕಳವು
ಜೇನು ನೊಣವನ್ನು ನೋಡಿ ಬರೇ ನೊಣವೊಂದು ಕೇಳಿತು ‘‘ಪ್ರತಿ ಬಾರಿ ನೀನು ತಯಾರಿಸಿದ ಜೇನನ್ನು ಮನುಷ್ಯರು ಕದಿಯುತ್ತಾರೆ. ನಿನಗೆ ದುಃಖವಾಗುವುದಿಲ್ಲವೆ?’’
ಜೇನು ನೊಣ ನಕ್ಕು ಹೇಳಿತು ‘‘ಅವರು ಜೇನನ್ನಷ್ಟೇ ಕದಿಯಬಲ್ಲರು. ಜೇನು ತಯಾರಿಸುವ ನನ್ನ ಕಲೆಯನ್ನಲ್ಲ’’.

ಮಕ್ಕಳು
ಅವರಿಬ್ಬರು ನೆರೆ-ಹೊರೆಯವರು.
ಇಬ್ಬರು ಒಟ್ಟಿಗೆ ಮದುವೆಯಾದರು.
ಅವನಿಗೊಂದು ಮಗುವಾಯಿತು.
ಇವನಿಗೋ ಮಗುವಾಗಲಿಲ್ಲ.
ಕಾದು ಸುಸ್ತಾಗಿ ಆತ ಒಂದು ತೆಂಗಿನ ಗಿಡವನ್ನು ನೆಟ್ಟು ‘ಇದೇ ನನ್ನ ಮಗು’ ಎಂದ.

ಅವನಿಗೆ ಎಷ್ಟು ಮಕ್ಕಳಾಯಿತೋ, ಇವನು ಅಷ್ಟೇ ತೆಂಗಿನ ಗಿಡಗಳನ್ನು ನೆಡುತ್ತಾ, ಅವುಗಳನ್ನು ಪ್ರೀತಿಸತೊಡಗಿದ.
ಕಾಲ ಸರಿದಂತೆ ಅವನ ಮಕ್ಕಳು, ಇವನ ಗಿಡಗಳು ಬೆಳೆದವು.
ಮಕ್ಕಳು ದಾರಿತಪ್ಪಿದರು. ಆದರೆ ತೆಂಗಿನ ಗಿಡ ಎತ್ತೆರೆತ್ತರ ಬೆಳೆದು ಫಲಬಿಡತೊಡಗಿದವು.
ಒಂದು ದಿನ ಬೆಳೆದ ಮಕ್ಕಳು ‘ಅವನ’ನ್ನು ಮನೆಯಿಂದ ಹೊರ ಹಾಕಿದರು.
ಅವನು ಬಿಕ್ಕುತ್ತಾ, ನೆರೆಯ
‘ಇವನ’ ಮನೆಗೆ ಬಂದ.
ಇವನು ತನ್ನ ತೆಂಗಿನ ಗಿಡದಿಂದ ಎಳೆನೀರನ್ನು ಕಿತ್ತು, ಅವನಿಗಿತ್ತು ಸಂತೈಸಿದ.


ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

1 comment:

  1. ಕತೆ ಅನ್ನುವದಕ್ಕಿಂತ ಸಾಲು ಅಂದ್ರೆ ಹೇಗೆ?ಹೀಗೆ ಯೋಚಿಸಿದ್ದೆ ನಿಮ್ಮ ಕತೆಯೋದಿ, ಕಥಾ ವಿಷಯ ಯೋಚಿಸುತ್ತಾ ಹೊರಟೆ ಇದು ಸಾಲುಗಳಲ್ಲಿ ವಿಶ್ಲೇಷಿಸಿದ ಅಗಾದತೆ ಎಂಬುದರ ಅರಿವಾಗಿ ಕತೆಯೇನ್ನುವದೆ ಸರಿಯೇನ್ದೆನ್ನಿಸಿತು.ಇನ್ನಷ್ಟು ಬರಲಿ ಸರ್.

    ReplyDelete