Sunday, November 29, 2015

ಅಲ್ಲಲ್ಲಿ ಮುಗ್ಗರಿಸುವ ಫಸ್ಟ್ ರ‍್ಯಾಂಕ್ ರಾಜು

ಶಿಕ್ಷಣ ವ್ಯವಸ್ಥೆಯನ್ನು ವ್ಯಂಗ್ಯ ಮಾಡಿ, ಟೀಕಿಸಿ, ವಿಮರ್ಶಿಸಿ ಹತ್ತು ಹಲವು ಚಿತ್ರಗಳು ಬಂದಿವೆ. ಹಿಂದಿಯಲ್ಲಿ ಮುನ್ನಾ ಭಾಯಿ ಎಂಬಿಬಿಎಸ್ ಮತ್ತು ತ್ರೀ ಈಡಿಯಟ್ ಸಿನಿಮ ವ್ಯಂಗ್ಯದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಶಿಕ್ಷಣವ್ಯವಸ್ಥೆಯನ್ನು ಕಟ್ಟಿಕೊಟ್ಟಿವೆ.  ಒಂದು ಗಂಭೀರ ವಿಷಯವನ್ನು ಲವಲವಿಕೆಯ  ಮೂಲಕ ಹೇಗೆ ನಿರೂಪಿಸಬಹುದು ಎನ್ನುವುದಕ್ಕೆ ಈ ಎರಡು ಚಿತ್ರಗಳೇ ಅತ್ಯುತ್ತಮ ಉದಾಹರಣೆ. ಈ ಚಿತ್ರದ ಯಶಸ್ವಿಗೆ ಕಾರಣವಾದುದು ಗಟ್ಟಿಯಾದ ಚಿತ್ರಕತೆ. ಇಲ್ಲಿ ಎಲ್ಲೂ ಭಾಷಣಗಳಿಲ್ಲ. ಬರೇ ಘಟನೆಗಳ ಮೂಲಕವೇ ವಿಷಯವನ್ನು ಪ್ರೇಕ್ಷಕರ ಎದೆಗೆ ದಾಟಿಸುವ ನಿರ್ದೇಶಕನ ಜಾಣ್ಮೆ, ಚಿತ್ರದ ಯಶಸ್ಸಿಗೆ ಕಾರಣವಾಯಿತು. ಎಲ್ಲ ವರ್ಗದ ಪ್ರೇಕ್ಷಕರನ್ನೂ ಈ ಚಿತ್ರ ಸೆಳೆಯಿತು. 
ಕನ್ನಡದಲ್ಲೂ ಶಿಕ್ಷಣವ್ಯವಸ್ಥೆಯನ್ನು ವಸ್ತುವಾಗಿಟ್ಟುಕೊಂಡು ಹತ್ತು ಹಲವು ಚಿತ್ರಗಳು ಬಂದಿವೆ. ಆದರೆ ಅದು ಯಶಸ್ವಿಯಾಗಿರುವುದು ಕಡಿಮೆ. ಈ ಹಿನ್ನೆಲೆಯಲ್ಲಿ ‘ಫಸ್ಟ್ ರ‍್ಯಾಂಕ್ ರಾಜು’ ಹಲವು ಕಾರಣಗಳಿಗಾಗಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿತ್ತು. ಮೊದಲನೆಯದಾಗಿ ನರೇಶ್ ಅವರ ಮೊದಲ ನಿರ್ದೇಶನದ ಚಿತ್ರ ಇದು. ಜೊತೆಗೆ ಗುರುನಂದನ್ ಎನ್ನುವ ನವ ಯುವ ನಾಯಕ ನಟಿಸಿದ ಚಿತ್ರ. ಚಿತ್ರದ ಹೆಸರೂ ವಿಭಿನ್ನವಾದುದು. ಜೊತೆಗೆ ಶಿಕ್ಷಣವೆನ್ನುವ ಗಂಭೀರ ವಿಷಯವನ್ನು ಹಾಸ್ಯಮಯವಾಗಿ ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕರು. ಅಲ್ಲದೇ, ರಾಘವೇಂದ್ರ ರಾಜ್‌ಕುಮಾರ್‌ರಿಂದ ಹಿಡಿದು ಅನಂತನಾಗ್‌ವರೆಗೂ ಹಿರಿಯರೆನಿಸಿಕೊಂಡವರೆಲ್ಲ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ‘ರ‍್ಯಾಂಕ್ ಸ್ಟೂಡೆಂಟ್’ ಮಾಧ್ಯಮಗಳಲ್ಲಿ ಒಂದಿಷ್ಟು ಚರ್ಚೆಯಲ್ಲಿದ್ದ.
ಶಾಲೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ರ‍್ಯಾಂಕ್ ಗಳಿಸಿದಾಕ್ಷಣ ಆತ ಎಲ್ಲವನ್ನೂ ತಿಳಿದವನಾಗುವುದಿಲ್ಲ. ಶಾಲೆಯಲ್ಲಿ ಮೊದಲು ಪಾಠ ಕಲಿಸಲಾಗುತ್ತದೆ. ಕೊನೆಯಲ್ಲಿ ಎಕ್ಸಾಂ ಪಾಸ್ ಮಾಡಬೇಕಾಗುತ್ತದೆ. ಆದರೆ ಬದುಕು ಎನ್ನುವ ಪರೀಕ್ಷೆಯಲ್ಲಿ ಮೊದಲು ಎಕ್ಸಾಂ ಬರೆಯಬೇಕು. ಬಳಿಕ ಪಾಠ ಕಲಿಯಬೇಕು. ಈ ಸಾಲಿನ ತಳಹದಿಯ ಮೇಲೆ ಫಸ್ಟ್ ರ‍್ಯಾಂಕ್ ರಾಜು ಸಿನೆಮಾವನ್ನು ಮಾಡಲಾಗಿದೆ. ಇಲ್ಲಿ ಫಸ್ಟ್  ರ‍್ಯಾಂಕ್ ಗಳಿಸುವ ರಾಜು ಕಾಲೇಜಿನ ಹೊರಗಡೆ, ವಾಸ್ತವ ಬದುಕಿನ ಮುಂದೆ ಸದಾ ನಗೆಪಾಟಲಿಗೀಡಾಗಬೇಕಾಗುತ್ತದೆ. ಸದಾ ಫಸ್ಟ್  ರ‍್ಯಾಂಕ್‌ನ ಕಿರೀಟವಿಟ್ಟುಕೊಂಡೇ ಬೆಳೆದಿದ್ದ ಈತನಿಗೆ, ಮೊದಲ ಬಾರಿ ಸಂದರ್ಶನವೊಂದರಲ್ಲಿ ಭಾರೀ ಮುಖಭಂಗವುಂಟಾಗುತ್ತದೆ. ಎಲ್ಲ ಅರ್ಹತೆಯಿದ್ದರೂ ಆತ ಸಂದರ್ಶನದಲ್ಲಿ ತಿರಸ್ಕೃತನಾಗುತ್ತಾನೆ. ಅಲ್ಲಿಂದ ಆತ ಹೊರಗಿನ ಬದುಕಿನ ಪರೀಕ್ಷೆಗೆ ಕೂತು ಪಾಸಾಗುವುದಕ್ಕೆ ಹವಣಿಸುವುದೇ ಕತೆಯ ಮುಖ್ಯ ವಸ್ತು.
ಇದೊಂದು ಅಪ್ಪಟ ಹಾಸ್ಯಮಯ ಚಿತ್ರ. ರ‍್ಯಾಂಕ್ ಸ್ಟೂಡೆಂಟ್ ಆಗಿ ಆ ಪಾತ್ರವನ್ನು ಗುರುನಂದನ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ ಚಿತ್ರಕತೆ ಬಿಗಿಯಾಗಿಲ್ಲ. ಚಿತ್ರವನ್ನು ಇನ್ನಷ್ಟು ಕುತೂಹಲಕಾರಿಯಾಗಿ, ಲವಲವಿಕೆಯಿಂದ ಪ್ರೇಕ್ಷಕರ ಮುಂದಿಡುವ ಅವಕಾಶವನ್ನು ದುರ್ಬಲ ಚಿತ್ರಕತೆಯ ದೆಸೆಯಿಂದ ನಿರ್ದೇಶಕರು ಕಳೆದುಕೊಂಡಿದ್ದಾರೆ.  ಚಿತ್ರದ ಮೊದಲರ್ಧ ಒಂದಿಷ್ಟು ಹಾಸ್ಯಮಯವಾಗಿಯೇ ಓಡುತ್ತದೆ. ರಾಜುವಿನ ತಂದೆಯಾಗಿ ಅಚ್ಯುತ್ ಅವರ ಅಭಿನಯ ಚಿತ್ರಕ್ಕೆ ಪೂರಕವಾಗಿದೆ. ತಂದೆ ಮಗನ ಸಂಬಂಧವನ್ನು ಚಿತ್ರದಲ್ಲಿ ಆತ್ಮೀಯವಾಗಿ ಕಟ್ಟಿ ಕೊಡಲಾಗಿದೆ.  ಪೆದ್ದು ಪೆದ್ದು ರಾಜು,  ಬಳಿಕ ಸ್ಟೈಲ್‌ಕಿಂಗ್ ರಾಜ್ ಆಗಿ ಬದಲಾದಾಗಲೂ ಅಷ್ಟೇ ಇಷ್ಟವಾಗುತ್ತಾನೆ. ಗುರುನಂದನ್ ಮುದ್ದು ಮುಖಕ್ಕೆ ಗಾಂಧಿ ನಗರದಲ್ಲಿ ಭವಿಷ್ಯವಿದೆ. ಭವಿಷ್ಯದಲ್ಲಿ ದಿಗಂತ್‌ನ ಸ್ಥಾನವನ್ನು ಈತ ತುಂಬುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ. ಕೆಲವು ಭಾವನಾತ್ಮಕ ಸನ್ನಿವೇಶದಲ್ಲಿ ನಂದನ್ ಸೋತಂತೆ ಕಂಡರೂ ಶ್ರಮ ಈತನನ್ನು ಇನ್ನಷ್ಟು ಬೆಳೆಸುವುದರಲ್ಲಿ ಅನುಮಾನವಿಲ್ಲ. ಹಾಡು, ಸಂಗೀತ ಚಿತ್ರಕ್ಕೆ ಪೂರಕವಾಗಿದೆ. 
ಸಿನೆಮಾ ಯಾವತ್ತೂ ಭಾಷಣವಾಗಬಾರದು. ಚಿತ್ರದ ಕ್ಲೈಮಾಕ್ಸ್‌ನಲ್ಲಿ ನಾಯಕನ ಬಾಯಿಯಿಂದ ಶಿಕ್ಷಣದ ಕುರಿತಂತೆ ಭಾಷಣ ಹೊಡೆಸುವುದು ಹಿಂಸೆ ಎನಿಸುತ್ತದೆ. ಹಾಗೆಯೇ, ತಂದೆ ತನ್ನ ಮಗನಿಗೆ ಪ್ರೇಮ ಪಾಠವನ್ನು ಹೇಳಿಕೊಡುವುದು, ಅದಕ್ಕಾಗಿ ಸಾಧುಕೋಕಿಲನಂತಹ ಶನಿ ಪಾತ್ರಗಳನ್ನು ಬಳಸುವುದೆಲ್ಲ ಅತಿರೇಕವೆನಿಸುತ್ತದೆ. ಅಲ್ಲಲ್ಲಿ ಚಿತ್ರ ಎಡವುತ್ತ, ಮುಗ್ಗರಿಸುತ್ತಾ ಸಾಗುತ್ತದೆ. ಕೆಲವೆಡೆ ಬೋರ್ ಅನ್ನಿಸುತ್ತದೆ. ಕೆಲವೆಡೆ ಚಿತ್ರದ ಸನ್ನಿವೇಶಗಳು ಮನಸ್ಸನ್ನು ಥಕ್ ಎಂದು ಆವರಿಸಿಕೊಳ್ಳುತ್ತವೆ. ನಿರ್ದೇಶಕ ನರೇಶ್ ಅವರು ಇನ್ನಷ್ಟು ಪ್ರಯತ್ನ ಪಟ್ಟಿದ್ದರೆ, ಚಿತ್ರಕತೆಯಲ್ಲಿ ಇನ್ನಷ್ಟು ಶ್ರದ್ಧೆ ಕಾಳಜಿಯನ್ನು ತೋರಿಸಿದ್ದರೆ ಕನ್ನಡಕ್ಕೆ ಒಂದು ಒಳ್ಳೆಯ, ಸದಭಿರುಚಿಯ ಹಾಸ್ಯಮಯ ಚಿತ್ರ ದೊರಕಿದಂತಾಗುತ್ತಿತ್ತು.

No comments:

Post a Comment