Sunday, November 1, 2015

ತಿತ್ಲೀ: ಕತ್ತಲೆಯ ಬದುಕನ್ನು ತೆರೆದಿಟ್ಟ ಬೆಹ್ಲ್

‘ಫ್ಯಾಮಿಲಿ!’ ಗಗನಚುಂಬಿ ಕಟ್ಟಡಗಳ ಪದತಳದಲ್ಲಿ ಹಾವುಗಳಂತೆ ತೆವಲುವ ಓಣಿಗಳ ಇಕ್ಕೆಲಗಳ ಚಾಳ್‌ಗಳ ಪುಟ್ಟ ಕೋಣೆಯೊಳಗೆ ಕುಟುಂಬವೆಂಬ ಹೆಸರಲ್ಲಿ ಸಿಲುಕಿಕೊಂಡು ಒದ್ದಾಡುವ ಜೀವಗಳು ಮತ್ತು ಆ ಕತ್ತಲಿಂದ ಪಾರಾಗಲು ನಡೆಸುವ ಒದ್ದಾಟವೇ ‘ತಿತ್ಲೀ’. ತಿತ್ಲೀ ಕಥಾನಾಯಕನ(ಶಶಾಂಕ್ ಅರೋರಾ) ಹೆಸರು. ತನ್ನ ತಂದೆ, ಇಬ್ಬರು ಸೋದರರ ನಡುವೆ ಉಸಿರುಗಟ್ಟುವ ಸಂಬಂಧಗಳಿಗೆ ಜೋತು ಬಿದ್ದು ಒದ್ದಾಡುತ್ತಿರುವ ಈತ, ಅದರಿಂದ ಪಾರಾಗಲು ನಡೆಸುವ ಹವಣಿಕೆಯೇ ಚಿತ್ರದ ಕಥಾವಸ್ತು. ಕಾನು ಬೆಹ್ಲ್ ನಿರ್ದೇಶಿಸಿದ ಮೊತ್ತ ಮೊದಲ ಚಿತ್ರ ಇದಾಗಿದ್ದರೂ, ನಗರಗಳ ತಳದಲ್ಲಿ ಒದ್ದಾಡುತ್ತಿರುವ ಬದುಕನ್ನು ಅಷ್ಟೇ ತೀವ್ರವಾಗಿ ತೆರೆದಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತಮ್ಮ ಮೊದಲ ಚಿತ್ರದಲ್ಲೇ, ಪ್ರೇಕ್ಷಕರಿಗೆ ಸಣ್ಣದೊಂದು ಶಾಕ್ ಕೊಟ್ಟಿದ್ದಾರೆ. ಯಾವುದೇ ಭಾರೀ ಬಜೆಟ್‌ಗಳಿಲ್ಲದ, ಸ್ಟಾರ್‌ಗಳಿಲ್ಲದ ಈ ಚಿತ್ರ, ನಮ್ಮನ್ನು ತಟ್ಟುವುದೇ ನಮಗೆ ಅಪರಿಚಿತವಾದ ಬದುಕನ್ನು ತೆರೆದಿಡುವ ಮೂಲಕ.

ಅಪರಾಧ, ಹಿಂಸೆ, ಕ್ರೌರ್ಯದ ಹೊಗೆಯ ನಡುವೆ ಆ ಕುಟುಂಬದ ಕೊಂಡಿಗಳು ನಿಂತಿವೆ. ಸಣ್ಣ ಚಾಳ್‌ನಲ್ಲಿ, ತಿತ್ಲೀ ತನ್ನ ಸೋದರರಾದ ವಿಕ್ರಮ್ (ರಣವೀರ್ ಶೋರೆ), ಪ್ರದೀಪ್ (ಅಮಿತ್ ಸಾಯಲ್) ಹಾಗೂ ತಂದೆ(ಲಲಿತ್ ಬೆಹ್ಲ್) ಜೊತೆಗೆ ಬದುಕುತ್ತಿರುತ್ತಾನೆ. ತಿತ್ಲೀ ಕಿರಿಯವನಾದರೆ, ಹಿರಿಯವನು ವಿಕ್ರಮ್. ಈತ ಹೆಸರಿಗೆ ಮಾಲ್ ಒಂದರಲ್ಲಿ ವಾಚ್‌ಮೆನ್. ಮಧ್ಯ ರಾತ್ರಿ ತನ್ನ ಸೋದರರ ಜೊತೆಗೆ ಒಂಟಿ ವಾಹನಗಳನ್ನು ನಿಲ್ಲಿಸಿ ದೋಚುವುದು ಕಾಯಕ. ಇಡೀ ಕುಟುಂಬ ಅದನ್ನು ದಂಧೆಯಾಗಿ ನಂಬಿಕೊಂಡಿದೆ. ಹಿಂಸೆಯ ಹೊಗೆ, ದುರ್ಬಲ ಸಂಬಂಧ, ಧೂಳುಗಳ ನಡುವೆ ಒದ್ದಾಡುತ್ತಿರುವ ಈ ಬದುಕಿನಿಂದ ಬಿಡುಗಡೆಗೊಂಡು, ತನ್ನ ಕನಸಿನ ಬದುಕೊಂದಕ್ಕೆ ಪಯಣಿಸುವ ತಹತಹಿಕೆ ತಿತ್ಲೀಯದು. ಅಣ್ಣಂದಿರ ಬಲವಂತಕ್ಕೆ ಮದುವೆಯಾಗಬೇಕಾಗುತ್ತದೆ. ಮದುಮಗಳು ನೀಲು (ಶಿವಾನಿ ರಘುವಂಶಿ) ಬೇರೊಬ್ಬ ಬಿಲ್ಡರ್ ಪ್ರಿನ್ಸ್ ಎಂಬಾತನ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ. ಆತ ತನ್ನನ್ನು ಪ್ರೀತಿಸಿದ್ದಾನೆ ಎಂದು ನಂಬಿದ್ದಾಳೆ. ಇದೇ ಸಂದರ್ಭದಲ್ಲಿ ತಾನು ಮದುವೆಯಾಗಿ ಬಂದಿರುವ ಮನೆಯ ವಾಸ್ತವ ಆಕೆಗೆ ಅರಿವಾಗುತ್ತದೆ. ತಿತ್ಲೀಗೂ ಆಕೆಯ ಮೇಲೆ ಪ್ರೀತಿಯಿಲ್ಲ. ಅವನ ಗುರಿ ಈ ಮನೆಯಿಂದ ಪಾರಾಗುವುದು. ಅವಳದು, ತನ್ನ ಪ್ರೇಮಿಯನ್ನು ಸೇರಿ ಹೊಸ ಬದುಕು ಕಂಡುಕೊಳ್ಳುವುದು. ತಿತ್ಲೀ ತನ್ನ ಪ್ರಯತ್ನಕ್ಕೆ ಪತ್ನಿಯ ಸಹಾಯ ಬಯಸುತ್ತಾನೆ. ಆಕೆಯಿಂದ ದುಡ್ಡಿನ ನೆರವು ಬಯಸುತ್ತಾನೆ. ಇದೇ ಸಂದರ್ಭದಲ್ಲಿ ಪ್ರಿನ್ಸ್‌ನನ್ನು ಸೇರಲು ತಾನು ಸಹಕರಿಸುತ್ತೇನೆ ಎಂದು ಭರವಸೆ ನೀಡುತ್ತಾನೆ. ಇವರಿಬ್ಬರು ತಮ್ಮ ತಮ್ಮ ಗುರಿಯನ್ನು ಸೇರಲು ನಡೆಸುವ ಒದ್ದಾಟ ಮತ್ತು ಕೊನೆಯಲ್ಲಿ ಇವರಿಬ್ಬರು ವಾಸ್ತವವನ್ನು ಅರಿತುಕೊಂಡು, ಮೂರನೆಯ ದಾರಿಯೊಂದನ್ನು ಆಯ್ದುಕೊಳ್ಳುವುದು ಚಿತ್ರದ ಒಟ್ಟು ಕತೆ.

ಕುಟುಂಬ ಎಂದಾಕ್ಷಣ ಬಾಲಿವುಡ್‌ನಲ್ಲಿ ನೆನಪಾಗುವುದು ಹಮ್ ಆಪ್ ಕೆ ಕೌನ್, ಹಮ್ ಸಾತ್ ಸಾತ್ ಹೇ ಅಥವಾ ಕರಣ್ ಜೋಹರ್ ಅವರ ಕಭಿ ಖುಷಿ ಕಭಿ ಗಮ್. ಆದರೆ ಇಲ್ಲಿ, ದಿಲ್ಲಿಯಂತಹ ಶಹರದ ತಳದಲ್ಲಿರುವ ಕಾಳ ಕತ್ತಲೆಯ ಅಪರಿಚಿತ ಬದುಕನ್ನು ಬೆಹ್ಲ್ ತೆರೆದಿಟ್ಟಿದ್ದಾರೆ. ಸರಳ ನೈಯ್ಗೆಯ, ಕಡಿಮೆ ಪಾತ್ರಗಳ ಚಿತ್ರ ಇದಾಗಿದ್ದರೂ, ಇದು ಕೊಡುವ ಅನುಭವ ಮಾತ್ರ ಗಾಢವಾದದ್ದು. ಮೂರು ಮುಖ್ಯ ಪಾತ್ರಗಳ ಅಭಿನಯ ಗಮನಾರ್ಹ. ತಿತ್ಲೀ ಪಾತ್ರದಲ್ಲಿ ಶಶಾಂಕ್ ಹಾಗೂ ವಿಕ್ರಮ್ ಪಾತ್ರದಲ್ಲಿ ರಣವೀರ್ ನಟನೆ ಇಡೀ ಚಿತ್ರದ ಹೆಗ್ಗಳಿಕೆ. ವಂಚನೆ, ಮೋಸ, ದ್ರೋಹ, ಹಿಂಸೆಯನ್ನು ಸುತ್ತಿಕೊಂಡ ಚಾಳ್‌ಗಳೊಳಗಿನ ಅಸಹನೀಯ ಬದುಕನ್ನು ಒಂದು ಥ್ರಿಲ್ಲರ್ ಮಿಶ್ರಿತ ಚಿತ್ರವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಪೂರ್ಣ ಯಶಸ್ವಿಯಾಗಿದ್ದಾರೆ. ಬೆಹ್ಲ್ ಅವರಿಂದ ಇನ್ನಷ್ಟು ಪರಿಣಾಮಕಾರಿಯಾದ ಚಿತ್ರಗಳನ್ನು ನಿರೀಕ್ಷಿಸಬಹುದಾಗಿದೆ.

No comments:

Post a Comment