Wednesday, December 9, 2015

ನರಕದ ಹೆಬ್ಬಾಗಿಲಲ್ಲಿ ದಾನಿಗಳ ಹೆಸರು ಕೆತ್ತುವ ಕವನಗಳು

ನನ್ನ ಮಸೀದಿಯ ಧ್ವಂಸಗೊಳಿಸಿದವರಿಗೆ ಕೃತಜ್ಞ(ಸೂಫಿಯ ಕಣ್ಣಲ್ಲಿ ಹನಿಗಳು)-ಕುರಿತಂತೆ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುನ್ಜಿ ಅವರ  ಮಾತುಗಳು 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ದಿನಗಳನ್ನು ವರ್ಷಗಳಂತೆ ಬದುಕುತ್ತಿರುವವರಿಗೆಲ್ಲ ‘ಪೆದಂಬು’ ಎಂಬ ಪದ, ‘ಧರ್ಮ-ದೇವರುಗಳಷ್ಟೇ’ ಪ್ರಿಯವಾದದ್ದು. ಹೊರಗಿನವರಿಗೆ ಈ ಪದವನ್ನು ಹೀಗೆಯೇ ಎಂದು ಪರಿಚಯಿಸಲಾಗುವುದಿಲ್ಲ.  ಇದನ್ನು  ‘ಕಿಚಾಯಿಸುವುದು’ ಮತ್ತು ‘ರೊಚ್ಚಿಗೆಬ್ಬಿಸುವುದು’ ಎಂಬೆರಡು ಪದಗಳ ನಡುವೆ (ನಡುವೆ ಅಂದರೆ, ನಟ್ಟ ನಡುವೆಯಲ್ಲ; ಸಂದರ್ಭ ಸಹಿತವಾಗಿ ಎಡ-ಬಲಕ್ಕೆ ಸರಿಸಬೇಕಾಗುತ್ತದೆ.) ಇರಿಸಬಹುದೇನೋ. ಬಷೀರ್ ಕವನಗಳನ್ನು ಓದುವಾಗ ಮಾತ್ರವಲ್ಲ, ಈ ಹೆಸರು ನೆನಪಾದಾಗಲೆಲ್ಲ ಬೇಡವೆಂದರೂ ಆ ಪದ ನೆನಪಾಗುತ್ತದೆ. ಬಹಳ ವರ್ಷಗಳಿಂದ ತಮ್ಮ ಹಸಿ ಹಸಿ ಸಂಕಟಗಳ ಒಲೆಯಲ್ಲಿ ಬೇಯಿಸಿದ ಪದ್ಯಗಳನ್ನು ಬಿಸಿಬಿಸಿಯಾಗಿಯೇ ಓದುಗರಿಗೆ ಬಡಿಸುತ್ತಿರುವ ಬಿ.ಎಮ್. ಬಷೀರರ, ಪ್ರಸ್ತುತ ೨೨೩ ಹನಿಗವನಗಳನ್ನೊಳಗೊಂಡ ‘ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ..’ ಎಂಬ ಈ ‘ಪೆದಂಬು’ ಕೃತಿಯ ‘ಅರ್ಪಣೆ’ಯನ್ನು ಸ್ವೀಕರಿಸಲಿರುವ ಮೌಲ್ವಿಗಳ ಸಂಕಟವನ್ನು ನೆನಪಿಸಿಕೊಂಡರೆ ಮಾತ್ರ ‘ಪೆದಂಬು’ ಎಂದರೇನೆಂಬುದು  ಸರಿಯಾಗಿ ಅರ್ಥವಾಗಬಹುದೇನೋ.  

ಬೆತ್ತ ಹಿಡಿದು ಬಲವಂತದಿಂದ ಮದ್ರಸದಿಂದ ಹೊರದಬ್ಬಲ್ಪಟ್ಟ ಕಾರಣದಿಂದ ಆಸ್ತಿಕನಾಗಿ ಬದಲಾದ ಈ ಕವಿಯ ಕಣ್ಣೀರ ಹನಿಗಳು, ಬಾಗಿಲೇ ಇರಿಸದೆ ಮನೆ ಕಟ್ಟಿದವನವನೊಬ್ಬ, ಗೋಡೆಗಳ ಕಾರಣದಿಂದ ಹೊರಬರಲಾರದೆ, ‘ಒಂದಾದರೂ ಬಾಗಿಲು ಇಡಬೇಕಾಗಿತ್ತು’ ಎಂದು ಪರಿತಪಿಸುವವನ ಬಗ್ಗೆ ಕರುಣೆದೋರುತ್ತವೆ. ಕಾಗದದ ದೋಣಿಯೇರಿ ಬೆಂಕಿಯನದಿ ದಾಟಬಯಸುವ ಕವಿಗೆ ಬೀಳುವ ಕನಸಿನ ಸ್ವರ್ಗದಲ್ಲಿ ಧರ್ಮ ಬೋಧಕರಾರೂ ಕಾಣಿಸದಾದಾಗ ಅಚ್ಚರಿಯಾಗುತ್ತದೆ. ಭೂಮಿಯ ಮೇಲೆ ಕಟ್ಟಲಾದ ಮಂದಿರ, ಮಸೀದಿ, ಚರ್ಚುಗಳನ್ನು ಹಾದು ಬರುವ ಗಾಳಿ, ಉಬ್ಬಸ ತರಿಸುತ್ತದೆ.ನಿಜಭಕ್ತ ಮುಖ ಮಾಡಿದತ್ತ ‘ಕಾಬಾ’ ತಿರುಗುತ್ತದೆ ಎಂಬ ಕನಕನಂಬಿಕೆಯ ಕವಿಗೆ, ಅರಮನೆಗೆ ಮುಖಮಾಡಿ ಪ್ರಾರ್ಥನೆ ಸಲ್ಲಿಸುವ ಪುರೋಹಿತರ ಬಗ್ಗೆ ಭಯಂಕರ ಸಿಟ್ಟಿದೆ. ‘ಎಸೆಯುವುದೇ ಆದರೆ ಹಂದಿಮಾಂಸ, ಗೋಮಾಂಸಗಳನ್ನು ಮಂದಿರ-ಮಸೀದಿಗಳ ಪ್ರಾಂಗಣಕ್ಕೆಸೆಯದೆ, ಹಸಿದವನ ಮನೆಯ ಅಂಗಳಕ್ಕೆ ಎಸೆಯಿರಿ’ ಎಂದು ಪ್ರಾರ್ಥಿಸುವ ಇವರಿಗೆ, ಬಡಭಕ್ತನಿಗೆ  ಉಣ್ಣುವುದೂ ಒಂದು ಬಗೆಯ ಪ್ರಾರ್ಥನೆಯೆಂಬ ನಂಬಿಕೆಯಿದೆ.

ನರಕದ ಹೆಬ್ಬಾಗಿಲಲ್ಲಿ ದಾನಿಗಳ ಹೆಸರು ಕೆತ್ತುವ ಬಷೀರರ ಕವನಗಳನ್ನು ಓದುವುದು ತೀರಾ ಸುಲಭ ಮತ್ತು ಬಹಳ ಕಷ್ಟ. ‘ಹಸಿದ ನಾಯಿಗೆ ತುತ್ತು ಉಣಿಸಿದಾತನಿಗೆ ನೀನು ಸ್ವರ್ಗವನಿತ್ತೆ’ ಎಂಬ ಸುದ್ದಿ ಕೇಳಿದಂದಿನಿಂದ ಹಸಿದವರ ಕಣ್ಣುಗಳಲ್ಲಿ ನನ್ನ ಮಸೀದಿಯನ್ನು ಕಾಣುತ್ತಿದ್ದೇನೆ’ ಎನ್ನುವ ಅಪರೂಪದ ಈ ಪದಮಾಂತ್ರಿಕ,  ತುಂಬಿದಷ್ಟೂ `ಬೇಕು’ ಎನ್ನುವ ಗೋರಿಗಳ ಹಸಿವು ಇಂಗಿಸಲು ಹೆಣಗುವ ಸೂಲಗಿತ್ತಿಯಂತೆ ಕಾಣಿಸುತ್ತಾರೆ. ಅಭಿನಂದನೆಗಳು. 

-ಬೊಳುವಾರು
***
ಪ್ರತಿಗಳಿಗಾಗಿ ನೇರವಾಗಿ ನನ್ನನ್ನು ಸಂಪರ್ಕಿಸಬಹುದು.
B.M. BASHEER
A/C-NO-3 0 9 2 8 2 4 1 6 9 9
STATE BANK OF INDIA
PORT ROAD, MANGALORE BRANCH
IFSC CODE-SBIN 0 0 0 0 8 7 1
MOBILE-944 8835 621
iruveprakashana@gmail.com

ಈ ಅಕೌಂಟಿಗೆ ಪುಸ್ತಕ ಹಣವನ್ನು ಜಮಾಗೊಳಿಸಿ, ತಮ್ಮ ವಿಳಾಸವನ್ನು ಈ ಮೇಲ್ ಮೂಲಕ ಅಥವಾ ಮೊಬೈಲ್ ಮೆಸೇಜ್ ಮೂಲಕ ನೀಡಿದರೆ, ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.
1. ಅಮ್ಮ ಹಚ್ಚಿದ ಒಲೆ-ಕವನ ಸಂಕಲನ- 100 ರೂ.
2. ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು -75 ರೂ. 
ಎರಡು ಪುಸ್ತಕಗಳಿಗೆ ಒಟ್ಟು 175 ರೂಪಾಯಿಯನ್ನು ನೀಡಬೇಕಾಗುತ್ತದೆ.

‘ಇರುವೆ ಪ್ರಕಾಶನ’ ನನ್ನ ಹೊಸ ಕನಸು!
ಕವನ ಸಂಕಲನಗಳು ನನ್ನ ವಿಶೇಷ ಮಕ್ಕಳು!!
ಇವೆರಡೂ ನಿಮ್ಮಿಂದ ವಿಶೇಷ ಪ್ರೀತಿಯನ್ನು ಬೇಡುತ್ತಿವೆ.


No comments:

Post a Comment