Sunday, December 7, 2014

ಕುರ್‌ಆನ್‌ನ ಆ ಏಳು ಸಾಲುಗಳು....

ನನ್ನ ಬಾಲ್ಯವನ್ನು ರಮ್ಯಗೊಳಿಸಿದ್ದು ಮಹಾಭಾರತ, ರಾಮಾಯಣದ ಕತೆಗಳು. ನಾನು ಕುರ್‌ಆನ್ ಓದುವ ಮೊದಲೇ ರಾಮಾಯಣ, ಮಹಾಭಾರತಗಳನ್ನು ಓದಿ ಮುಗಿಸಿದ್ದೆ ಮಾತ್ರವಲ್ಲ, ಆ ರಮ್ಯ ಲೋಕದಲ್ಲಿ ನಾನೂ ಒಂದು ಪಾತ್ರವಾಗಿ ಬದುಕುತ್ತಿದ್ದೆ. ಹಾಗೆಯೇ ನನ್ನ ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಚರ್ಚ್ ಶಾಲೆಗಳಲ್ಲಿ ಮುಗಿಸಿರುವುದರಿಂದ ಕೆಲವು ಬೈಬಲ್‌ಗಳ ಕತೆಗಳನ್ನೂ ನನ್ನದಾಗಿಸಿಕೊಂಡಿದ್ದೆ. ಆದರೆ ಕುರ್‌ಆನ್ ಮಾತ್ರ ನನಗೆ ಹತ್ತಿರವಿದ್ದೂ ತುಂಬಾ ದೂರವಿತ್ತು. ಅದಕ್ಕೆ ಅದರದೇ ಕಾರಣಗಳಿದ್ದವು. ನನ್ನಿಂದ ಕುರ್‌ಆನ್ ದೂರವಿರುವುದಕ್ಕೆ ಅಂದಿನ ವೌಲ್ವಿಗಳೇ ಪ್ರಧಾನ ಕಾರಣವಾಗಿದ್ದರು ಎನ್ನುವುದೇ ಕುತೂಹಲಕರ ಅಂಶವಾಗಿತ್ತು.

 ನಾನು ಶಾಲೆಗೆ ಹೆಜ್ಜೆಯಿಡುವ ಹೊತ್ತಿನಲ್ಲೇ ಮದರಸಕ್ಕೂ ಪಾದವೂರಿದ್ದೆ. ಬೆಳ್ಳಂಬೆಳಗ್ಗೆ 6 ಗಂಟೆಗೆ ಮದರಸಕ್ಕೆ ಹೋಗಿ ಅಲ್ಲಿ ಎರಡುಗಂಟೆ ಧಾರ್ಮಿಕ ಶಿಕ್ಷಣ ಕಲಿತು ಅಲ್ಲಿಂದ ಮನೆಗೆ ತೆರಳಿ ತಿಂಡಿ ತಿಂದು ಮತ್ತೆ ಶಾಲೆಗೆ ಹೊರಡಬೇಕಾಗಿತ್ತು. ಹೀಗೆ ಆಗಿನ ಐದನೇ ತರಗತಿಯವರೆಗೆ ನಾನು ಮದರಸದಲ್ಲಿ ಕಲಿತೆನಾದರೂ ಕುರ್‌ಆನ್ ಎಂದರೆ ಏನು ಎನ್ನುವುದು ನನಗೆ ಸ್ಪಷ್ಟವಾಗದೇ ಹೋದುದಕ್ಕೆ ನನ್ನ ವೈಯಕ್ತಿಕ ಪಾಲು ಏನೂ ಇರಲಿಲ್ಲ. ಮದರಸದಲ್ಲಿ ನಮಗೆ ಕುರ್‌ಆನ್ ಕಲಿಸುತ್ತಿದ್ದ ವೌಲ್ವಿಗಳು ಕೇರಳದಿಂದ ಬಂದವರು. ಅವರು ಅರಬೀ ಅಕ್ಷರಗಳನ್ನು ಓದಲು ಮಾತ್ರ ನಮಗೆ ಕಲಿಸುತ್ತಿದ್ದರು. ಅರಬೀ ಅರ್ಥಗಳನ್ನು ಹೇಳಿಕೊಡುತ್ತಿರಲಿಲ್ಲ. ಕುರ್‌ಆನನ್ನು ರಾಗವಾಗಿ ಓದುತ್ತಿದ್ದೆನಾದರೂ ನನಗೆ ಅದರೊಳಗೆ ಏನಿದೆ ಎನ್ನುವುದು ತಿಳಿದದ್ದು ಮದರಸ ತೊರೆದ ಬಳಿಕ. ಮದರಸದಲ್ಲಿ ವೌಲ್ವಿಗಳು ಕುರ್‌ಆನನ್ನು ಓದಲು, ಕಂಠಪಾಠ ಮಾಡಲು, ಗೌರವಿಸಲು ಅಷ್ಟೇ ಕಲಿಸಿದರು. ಎಲ್ಲಾದರೂ ಅರಬೀ ಅಕ್ಷರಗಳಿದ್ದ ಕಾಗದದ ಚೂರುಗಳನ್ನು ಕಂಡರೂ ನಾವು ಅದನ್ನು ಕಣ್ಣಿಗೊತ್ತಿ ಬಾವಿಗೆ ಹಾಕಿ ಬಿಡುತ್ತಿದ್ದೆವು. ಕುರ್‌ಆನ್ ಕಾಗದದ ಚೂರುಗಳು ನೆಲ್ಲದಲ್ಲಿ, ಧೂಳಿನಲ್ಲಿ , ಹೊಲಸಿನಲ್ಲಿ ಬೆರೆತು ಹೋಗಬಾರದು ಎನ್ನುವ ಕಾರಣಕ್ಕೆ. ಅರಬೀ ಅಕ್ಷರಗಳಿರುವ ಎಲ್ಲ ಕಾಗದಗಳೂ ಕುರ್‌ಆನ್ ಎಂದೇ ಭಾವಿಸಿದ್ದೆವು. ಅರಬೀ ಅಕ್ಷರಗಳಲ್ಲಿ ಸಿನಿಮಾ ಹಾಡುಗಳನ್ನು ಬರೆಯಬಹುದು ಎನ್ನುವುದೆಲ್ಲ ನಮಗೆ ಆಗ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಕುರ್‌ಆನ್‌ನ ಗಮಕ ಹೊರತು ಪಡಿಸಿ, ಅದರೊಳಗಿರುವ ಒಂದು ಶಬ್ದದ ಅರ್ಥವೂ ನನಗೆ ಗೊತ್ತಿರಲಿಲ್ಲ. ನಾವು ಮದರಸದಲ್ಲಿ ಎಲ್ಲೂ ಸಲ್ಲದ ಒಂದು ವಿಶಿಷ್ಟ ಮಾಧ್ಯಮದಲ್ಲಿ ಕಲಿತೆವು. ನಮ್ಮ ಮನೆ ಭಾಷೆ ಬ್ಯಾರಿ. ಇದು ಮಲಯಾಳಕ್ಕಿಂತ ಭಿನ್ನ. ಆಗಿನ ಕಾಲದಲ್ಲಿ ನಮ್ಮ ಮದರಸಗಳಿಗೆ ಕೇರಳದಿಂದ ವೌಲ್ವಿಗಳನ್ನು ನೇಮಕ ಮಾಡಲಾಗುತ್ತಿತ್ತು. ನಮ್ಮೂರಿನಲ್ಲಿ ವೌಲ್ವಿ ಕಲಿತ ವಿದ್ವಾಂಸರು ಇಲ್ಲದೆ ಇರುವುದು ಅದಕ್ಕೆ ಕಾರಣವಿರಬೇಕು. ಅವರಿಗೆ ಮಲಯಾಳಂ ಬಿಟ್ಟರೆ ಬೇರೆ ಭಾಷೆಯೇ ಗೊತ್ತಿಲ್ಲ. ಆದುದರಿಂದ ನಮಗೆ ಮಲಯಾಳಂ ಮಾಧ್ಯಮದಲ್ಲೇ ಕಲಿಸುತ್ತಿದ್ದರು. ಅಕ್ಷರಗಳು ಅರೆಬಿಕ್‌ನಲ್ಲಿ ಬರೆಯಲಾಗುತ್ತಿತ್ತು. ಇದೊಂದು ರೀತಿ ಅರೇಬಿಕ್ ಮಲಯಾಳಂ ಮಾಧ್ಯಮ. ಐದನೆಯ ತರಗತಿಯವರೆಗೂ ಮದರಸದಲ್ಲಿ ಕಲಿತ ನನ್ನ ಸ್ಥಿತಿ ಇದಾಗಿತ್ತು. 


ಅದೊಂದು ದಿನ ನನ್ನ ತಂದೆಗೆ ಯಾರೋ ವೌಲವಿಯೊಬ್ಬರು ಸಿಕ್ಕಿದವರು ‘ಕುರ್‌ಆನ್‌ನ ‘ಸೂರಾ ವಾಕಿಯಾ’ ಅಧ್ಯಾಯವನ್ನು ಪ್ರತಿ ದಿನ ರಾತ್ರಿ ಪಠಿಸಿದರೆ ಆ ಮನೆಯಲ್ಲಿ ಶ್ರೀಮಂತಿಕೆ ತುಂಬಿ ತುಳುಕುತ್ತದೆ’’ ಎಂದು ಹೇಳಿದ್ದರು. ಅಂದು ರಾತ್ರಿ ಮನೆಗೆ ಬಂದವರೇ ‘‘ಇನ್ನು ಮುಂದೆ ಪ್ರತಿ ರಾತ್ರಿ ನೀನು ಸೂರಾ ವಾಕಿಯಾವನ್ನು ಓದಬೇಕು’’ ಎಂದು ಆಜ್ಞೆ ಮಾಡಿದರು. ಅಷ್ಟೇ ಅಲ್ಲ, ಪ್ರತಿ ರಾತ್ರಿ ತಮ್ಮ ಅಂಗಡಿಯಿಂದ ಬಂದವರು ತಾಯಿಯಲ್ಲಿ ‘‘ಮಗ ವಾಕಿಯಾ ಓದಿದನೋ?’’ ಎಂದು ವಿಚಾರಿಸುತ್ತಿದ್ದರು. ನನಗೋ ಹಿಂಸೆ. ಕೆಲವೊಮ್ಮೆ ಓದದೇ ಹಾಗೇ ಮಲಗಿ ಬಿಟ್ಟರೆ, ತಂದೆ ಬಂದು ನನ್ನನ್ನು ಎಬ್ಬಿಸಿ, ಗದರಿಸಿ ಓದಿಸುತ್ತಿದ್ದರು. ಸುಮಾರು ಎರಡು ಮೂರು ವರ್ಷ ನಾನು ಈ ಅಧ್ಯಾಯವನ್ನು ಪ್ರತಿ ರಾತ್ರಿ ಓದುತ್ತಿದ್ದೆ. ಈ ಅಧ್ಯಾಯ ಅದೆಷ್ಟು ಚೆನ್ನಾಗಿ ನನಗೆ ಕಂಠಪಾಠವಾಗಿತ್ತು ಎಂದರೆ, ಕುರ್‌ಆನ್ ಬಿಡಿಸದಯೇ ಈ ಅಧ್ಯಾಯವನ್ನು ಪಟಪಟ ಓದುತ್ತಿದ್ದೆ. ಒಮ್ಮೆ ಮುಗಿಸಿ ಬಿಟ್ಟರೆ ಸಾಕು ಎನ್ನುವ ಹಾಗೆ. ಆದರೆ ಈ ಅಧ್ಯಾಯ ಓದಿದ ಬಳಿಕ ತಂದೆ ಶ್ರೀಮಂತನಾದದ್ದು ನನ್ನ ಗಮನಕ್ಕೇನೂ ಬಂದಿರಲಿಲ್ಲ. ಇತ್ತೀಚೆಗೆ ಇದನ್ನು ನನ್ನ ಗೆಳೆಯರೊಬ್ಬರಲ್ಲಿ ಹೇಳಿ ನಕ್ಕಾಗ ಅವರು ಹೀಗೆ ವಿವರಿಸಿದರು ‘‘ಓದಿದ್ದು ನೀನು. ಅದರಿಂದ ನಿನಗೆ ಒಳ್ಳೆಯದಾಗಿದೆ. ನಿನ್ನ ತಂದೆ ಓದಿದ್ದರೆ ಅವರಿಗೆ ಒಳ್ಳೆಯದಾಗಿತ್ತು. ಯಾರು ಓದಿದ್ದಾರೆಯೋ ಅವರಿಗೆ ತಾನೆ ಅದರ ಫಲ’’.
 

 ವಾಕಿಯಾ ಆಧ್ಯಾಯವನ್ನು ಪಟಪಟ ಓದುತ್ತಿದ್ದೆನಾದರೂ ನನಗೆ ಅದರ ಅರ್ಥ ಏನು ಎನ್ನುವುದು ಗೊತ್ತೇ ಇರಲಿಲ್ಲ. ಅದರ ಒಳಗೆ ಏನಿರಬಹುದು? ಅದು ಏನು ಹೇಳುತ್ತಿರಬಹುದು? ಇದನ್ನು ಓದಿದರೆ ಶ್ರೀಮಂತನಾಗುವುದು ಹೇಗೆ? ಬರ್ಕತ್ತು ಬರುವುದು ಹೇಗೆ? ಎಂದೆಲ್ಲ ಆಗ ಯೋಚಿಸುತ್ತಿದ್ದೆ. ಆದರೆ ಅದರ ಅರ್ಥವನ್ನು ವಿವರಿಸುವ, ಹೇಳಿಕೊಡುವ ಯಾರೂ ನನ್ನ ಸುತ್ತಮುತ್ತಲಿರಲಿಲ್ಲ. ನನ್ನ ತಂದೆಗೂ ಅದರ ಅರ್ಥಗೊತ್ತಿರಲಿಲ್ಲ. ದಿನಾ ರಾತ್ರಿ ‘ಯಾಸೀನ್’ ಅಧ್ಯಾಯ ಓದಿ ಮಲಗುವ ಅಮ್ಮನಿಗೂ ಅದರ ಅರ್ಥಗೊತ್ತಿರಲಿಲ್ಲ. ಅರ್ಥಗೊತ್ತಿರಬೇಕಾಗಿಲ್ಲ ಎಂದು ನಾವು ಬಲವಾಗಿ ನಂಬಿದ್ದೆವು. ಎಲ್ಲಕ್ಕಿಂತ ಮುಖ್ಯವಾಗಿ ನಾವು ಅದರ ಅರ್ಥವನ್ನು ಕಲಿಯುವುದರ ಕುರಿತಂತೆಯೇ ಆ ಕಾಲದಲ್ಲಿ ಒಂದು ಋಣಾತ್ಮಕ ಭಾವನೆಯಿತ್ತು. ಅದು ವೌಲ್ವಿಗಳ ಸಂಗತಿಗಳು ಎಂದು ನಂಬಿಕೊಂಡಿದ್ದೆವು. ಅರ್ಥ ಗೊತ್ತಿಲ್ಲದ ಕಾರಣಕ್ಕಾಗಿಯೇ, ನಾವು ಅದನ್ನೊಂದು ಅತೀತ ಸಂಗತಿಯೆಂದು ತಿಳಿದು ಹೆದರಿ, ಬೆದರಿ ನಡೆಯುತ್ತಿದ್ದೆವೇನೋ.

 ನಾನು ಒಂಬತನ್ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿಗೆ ಕಾಲಿಡುವ ಹೊತ್ತಿಗೆ ಮದರಸವನ್ನು ತೊರೆದಿದ್ದೆ. ಶಾಲೆಯ ಕಡೆಗೆ ಗಮನಹರಿಸತೊಡಗಿದ್ದೆ. ನಾನು ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಕಾಲ. ಉಪ್ಪಿನಂಗಡಿಯ ಪಂಚಾಯತ್‌ನ ಹಳೆ ಕಟ್ಟಡದಲ್ಲಿರುವ ಲೈಬ್ರರಿ ಆಗ ನನ್ನ ಪ್ರೀತಿಯ ತಾಣವಾಗಿತ್ತು. ನನ್ನ ಬಹುತೇಕ ಓದಿಗೆ ಪ್ರೇರಣೆ ನೀಡಿದ ಸ್ಥಳ ಅದು. ಯಾವುದೇ ಮದರಸ, ಶಾಲೆ, ಕಾಲೇಜುಗಳು ನೀಡಿದ್ದಕ್ಕಿಂತ ದೊಡ್ಡದನ್ನು ನನಗೆ ನೀಡಿದ ಸ್ಥಳ ಅದು. ಒಂದು ದಿನ ಉಪ್ಪಿನಂಗಡಿ ಗ್ರಂಥಾಲಯದಲ್ಲಿ ಒಂದು ಬಹತ್ ಗ್ರಂಥವನ್ನು ನೋಡಿದೆ. ಕುರ್‌ಆನ್‌ನ ರೂಪವನ್ನು ಹೊಂದಿದ್ದರೂ ಅದು ಕನ್ನಡದಲ್ಲಿತ್ತು. ‘ಕನ್ನಡದಲ್ಲಿ ಕುರ್‌ಆನ್’ ಎಂದೂ ಬರೆದಿತ್ತು. ನನಗೋ ಕುತೂಹಲ. ನಾನು ಈವರೆಗೆ ಓದಿದ್ದ ಅಪೂರ್ವ ಮಂತ್ರಶಕ್ತಿಗಳುಳ್ಳ ಕುರ್‌ಆನ್ ನನಗೆ ಅರ್ಥವಾಗುವ ಕನ್ನಡದೊಳಗಿದೆ ಎನ್ನುವುದನ್ನು ನೆನೆದೇ ನಾನು ಕಂಪಿಸಿದ್ದೆ. ಅಷ್ಟೊತ್ತಿಗೆ, ನಮ್ಮೂರಿಗೂ ಈ ಜಮಾತೆ ಇಸ್ಲಾಮ್ ಎನ್ನುವ ಸಂಘಟನೆ ಕಾಲಿಟ್ಟಿತ್ತು. ಅಂದಿನ ಮುಸ್ಲಿಮ್ ಸಮಾಜ ಇವರನ್ನು ತೀವ್ರವಾಗಿ ಪ್ರತಿರೋಧಿಸುತ್ತಿತ್ತು. ಅದಕ್ಕೆ ಒಂದು ಮುಖ್ಯ ಕಾರಣ, ಇವರು ಕುರ್‌ಆನ್‌ನ್ನು ಕನ್ನಡದಲ್ಲಿ ಓದುತ್ತಾರೆ ಎನ್ನುವುದು ಕೂಡ. ಹೇಗೆ ಕರಾವಳಿಯ ಹೊರಗೆ ಉರ್ದು ಭಾಷೆಯನ್ನು ಮುಸ್ಲಿಮರ ಭಾಷೆ ಎಂದು ತಿಳಿದುಕೊಂಡಿದ್ದಾರೆಯೋ, ಹಾಗೆಯೇ ಕರಾವಳಿಯಲ್ಲಿ ಮಲಯಾಳಂ ಮಾತ್ರ ಮುಸ್ಲಿಮರ ಭಾಷೆ ಎಂದು ನಾವು ತಿಳಿದುಕೊಂಡಿದ್ದೆವು. ಕನ್ನಡ, ತುಳು ಇತ್ಯಾದಿಗಳು ಕಾಫಿರ್ ಭಾಷೆಯಾಗಿರುವುದರಿಂದ ಧಾರ್ಮಿಕವಾಗಿ ಬಳಕೆ ಮಾಡಲು ಅದು ಅನರ್ಹ ಎಂದು ಆ ಕಾಲಘಟ್ಟದಲ್ಲಿ ಮುಸ್ಲಿಮರ ನಡುವೆ ಒಂದು ಬಹುಸಂಖ್ಯಾತ ಗುಂಪು ನಂಬಿತ್ತು. ನಾವು ಈ ಜಮಾತೆ ಇಸ್ಲಾಮಿಗಳನ್ನು, ಮುಕ್ಕಾಲುಗಂಟೆ, ಭೂಗಿ ಎಂದೆಲ್ಲ ತಮಾಷೆ ಮಾಡುತ್ತಿದ್ದೆವು. ಆಗ ಉಪ್ಪಿನಂಗಡಿ ಆಸುಪಾಸಿನಲ್ಲಿ ಒಂದೆರಡು ಬೆರಳೆಣಿಕೆಯ ಕುಟುಂಬ ಜಮಾತೆ ಇಸ್ಲಾಮ್ ಸೇರಿತ್ತು. ಅವರ ಮನೆಯ ಹುಡುಗರು ನಮ್ಮ ಸಹಪಾಠಿಗಳಾಗಿದ್ದರು. ಅವರನ್ನು ಸದಾ ನಾವು ಮುಕ್ಕಾಲು ಗಂಟೆ ಎಂದು ಗೇಲಿ ಮಾಡುತ್ತಿದ್ದೆವು. ಅವರು ಅದನ್ನು ವೌನವಾಗಿ ಸಹಿಸುತ್ತಿದ್ದರು. ಜಮಾತೆ ಇಸ್ಲಾಮಿನ ಜನರನ್ನು ಮುಕ್ಕಾಲು ಗಂಟೆ ಎಂದು ಕರೆಯುವುದಕ್ಕೆ ಒಂದು ಕತೆಯಿದೆ. ಅದನ್ನು ಇಲ್ಲಿ ಬರೆದರೆ ಲೇಖನ ಇನ್ನಷ್ಟು ಉದ್ದವಾದೀತು. 

ಲೈಬ್ರರಿಯಲ್ಲಿ ಸಿಕ್ಕಿದ ಆ ಕುರ್‌ಆನನ್ನು ಅದು ಹೇಗೋ ಧೈರ್ಯ ಮಾಡಿ ಮನೆಗೆ ಕೊಂಡೊಯ್ಯುವ ನಿರ್ಧಾರ ಮಾಡಿದೆ. ಲೈಬ್ರೇರಿಯನ್ ನನಗೆ ಪರಿಚಿತರಾಗಿದ್ದುದರಿಂದ, ಆ ದೊಡ್ಡ ಗ್ರಂಥವನ್ನು ಮನೆಗೆ ಕೊಂಡೊಯ್ಯಲು ಅನುಮತಿ ಕೊಟ್ಟರು. ಬಸ್ಸಿನಲ್ಲೂ ನನಗೆ ನನ್ನ ಕೈಯಲ್ಲಿರುವ ಕುರ್‌ಆನ್‌ನ ಕುರಿತಂತೆ ಒಂದು ರೋಮಾಂಚನ. ನನ್ನ ಗೆಳೆಯರು ನನ್ನ ಕೈಯಲ್ಲಿರುವ ಕನ್ನಡದ ಕುರ್‌ಆನ್ ನೋಡಿದ್ದೇ ಆಘಾತಗೊಂಡರು. ‘‘ಎಂತದಾ? ಇದು ಎಲ್ಲಿ ಸಿಕ್ಕಿತು? ಜಮಾತೆ ಇಸ್ಲಾಮ್ ಸೇರಿದ್ದೀಯ?’ ಹೀಗೆ ವಿಚಾರಣೆಗಳು ಆರಂಭವಾದವು. ಕನ್ನಡದಲ್ಲಿ ಕುರ್‌ಆನ್ ಓದುವ ಆ ಮೊದಲ ಪಾಪ ನನ್ನನ್ನು ನಿಜಕ್ಕೂ ಕಂಪಿಸುವಂತೆ ಮಾಡಿತ್ತು. ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಅದನ್ನು ಬಿಡಿಸಿ ಓದ ತೊಡಗಿದೆ. ಯಾಕೋ ರಾಮಾಯಣ, ಮಹಾಭಾರತದಂತೆ ನೇರವಾಗಿ ಓದಿಸಿಕೊಂಡು ಹೋಗಲಿಲ್ಲ. ಓದುತ್ತಿರುವಂತೆಯೇ ಅದೇನೋ ಒಂದು ಜಾದು ತೆರೆದುಕೊಳ್ಳಬಹುದು ಎಂದುಕೊಂಡವನಿಗೆ ನಿರಾಸೆ. ಮೊತ್ತಮೊದಲು ನಾನು ಪುಟ ಬಿಡಿಸಿದ್ದು, ವಾಕಿಯಾ ಅಧ್ಯಾಯವನ್ನಾಗಿತ್ತು. ತಂದೆ ಪ್ರತಿ ದಿನ ಕೋವಿ ಹಿಡಿದು ಓದಿಸುವಂತಹದ್ದು ಅದರಲ್ಲೇನಿದೆ ಎಂಬ ಕುತೂಹಲ ನನಗೆ. ಅಲ್ಲಿ ಮುಖ್ಯವಾಗಿ ಪರಲೋಕದ ಕುರಿತಂತೆ ವಿವರಗಳಿದ್ದವು. ಸ್ವರ್ಗ, ನರಕಗಳನ್ನು ಅಲ್ಲಿ ವರ್ಣಿಸಲಾಗಿತ್ತು. ನಾನು ಅದಾಗಲೇ ಕಂಠ ಪಾಠ ಮಾಡಿದ್ದ ಯಾಸೀನ್ ಎನ್ನುವ ಅಧ್ಯಾಯವನ್ನೂ ಓದಿದೆ. ಅಲ್ಲಿಯೂ ಭೂಮಿಯಲ್ಲಿ ಅತಿರೇಕ ಎಸಗಿದವರಿಗೆ ಪರಲೋಕದಲ್ಲಿ ಎದುರಾಗುವ ಸ್ಥಿತಿಯನ್ನು ಬಣ್ಣಿಸಲಾಗಿತ್ತು. ತನ್ನನ್ನು ತಾನು ಸ್ವತಂತ್ರನು ಎಂದು ಭ್ರಮಿಸಿಕೊಳ್ಳುವ ಮನುಷ್ಯ ಮಿತಿಯನ್ನು ಎತ್ತಿ ತೋರಿಸಲಾಗಿತ್ತು. ನೀರಿನ ಒಂದು ಹನಿಯಿಂದ ಸಷ್ಟಿಸಲಾಗಿರುವ ಮನುಷ್ಯನ ಕೃತಘ್ನತೆಯ ಬಗ್ಗೆ, ಪರಲೋಕದಲ್ಲಿ ಆತನ ಅಸಹಾಯಕತೆಯ ಕುರಿತಂತೆ ಬರೆಯಲಾಗಿತ್ತು. ಯಾವ ಸಾಲುಗಳೂ ನನ್ನನ್ನು ವಿಶೇಷವಾಗಿ ಸೆಳೆದಿರಲಿಲ್ಲ. ಒಂದೆರಡು ದಿನ ಕುರ್‌ಆನನ್ನು ಬಿಡಿಸಿ, ಇದು ನನಗಲ್ಲ ಎಂದು ಹಾಗೆಯೇ ಲೈಬ್ರೇರಿಯನ್‌ಗೆ ಒಪ್ಪಿಸಿದ್ದೆ.
 

 ಆದರೆ ಇದಾದ ಬಳಿಕ ನಾನು ಲೈಬ್ರರಿಯಲ್ಲೇ ಆಗಾಗ ಆ ಕೃತಿಯ ಪುಟಗಳನ್ನು ಬಿಡಿಸುತ್ತಲೇ ಇದ್ದೆ. ಯಾಕೆಂದರೆ, ಅದನ್ನು ನಾನು ಬದುಕಿನ ಪ್ರತಿ ಘಟ್ಟದಲ್ಲೂ ಮುಖಾಮುಖಿಯಾಗಬೇಕಾಗಿತ್ತು. ಆದುದರಿಂದ ಇಡೀ ಕುರ್‌ಆನನ್ನು ಯಾವ ವಿದ್ವಾಂಸರ ಸಹಾಯವಿಲ್ಲದೇ, ಕೇವಲ ನನ್ನ ಕನ್ನಡದ ಊರುಗೋಲಿನ ಆಸರೆಯಿಂದ ಕುರುಡನಂತೆ ತಡವುತ್ತಾ ಹೋದೆ. ಮುಂದೆ ಬಿಎ ತರಗತಿಯಲ್ಲಿದ್ದಾಗ, ಇಡೀ ಗ್ರಂಥವನ್ನು ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಕೆಲವು ವ್ಯಾಖ್ಯಾನಗಳನ್ನು ತನ್ನದಾಗಿಸಿಕೊಂಡೆ. ಏಕದೇವ ವಿಶ್ವಾಸ, ಪರಲೋಕದ ಮೇಲಿನ ನಂಬಿಕೆ ಒಬ್ಬ ಶರಣನ ಪ್ರಧಾನ ಲಕ್ಷಣವೆಂದು ಕುರ್‌ಆನ್ ಹೇಳುತ್ತದೆ. ಆ ನಂಬಿಕೆಯನ್ನು ಗಟ್ಟಿಯಾಗಿಸಿಕೊಳ್ಳಲು ನಮಾಝ್‌ನ್ನು ನಿರ್ವಹಿಸಬೇಕು ಎಂದು ಆಜ್ಞಾಪಿಸುತ್ತದೆ. ಇದು ಮೇಲ್ನೋಟಕ್ಕೆ ನಾನು ಕುರ್‌ಆನನ್ನು ಗ್ರಹಿಸಿದ ರೀತಿ. ಮತ್ತೆ ಹಲವು ಬಾರಿ ಕುರ್‌ಆನ್‌ನ ಕನ್ನಡ ಅನುವಾದವನ್ನು ಓದುವ ಸಂದರ್ಭ ಒದಗಿತು. ಕುರ್‌ಆನ್‌ನಲ್ಲಿ ಅತಿ ದೊಡ್ಡ ಅಧ್ಯಾಯದ ಹೆಸರು ‘ಅಲ್ ಬಕರಾ’ ಅಂದರೆ ‘ದನ ಅಥವಾ ಹೋರಿ’ ಎಂದು ಅರ್ಥ. ಹಾಗೆಂದು ಇದು ದನದ ಮಹತ್ವವನ್ನು ಹೇಳುವ ಅಧ್ಯಾಯವೇನೂ ಅಲ್ಲ. ಈ ಅಧ್ಯಾಯ ಬದುಕನ್ನೇ ಕೇಂದ್ರವಾಗಿರಿಸಿಕೊಂಡಿದೆ. ಬದುಕುವ ನೀತಿ ಸಂಹಿತೆಗಳ ತಳಹದಿಯ ಮೇಲೆ ಇಲ್ಲಿನ ಪರಲೋಕದ ಕಲ್ಪನೆಯೂ ನಿಂತಿದೆ. ಅನಾಥರಿಗೆ ವಂಚಿಸಬಾರದು, ಅವರ ಆಸ್ತಿಯನ್ನು ಯಾರು, ಹೇಗೆ ನಿರ್ವಹಿಸಬೇಕು, ಪತ್ನಿಯೊಂದಿಗೆ ಪತಿ ಹೇಗೆ ನಡೆದುಕೊಳ್ಳಬೇಕು, ತಲಾಕ್‌ನ ನಿಯಮಗಳು, ಮೋಸ ರಹಿತ ವ್ಯಾಪಾರ, ಬಡವರ ಮೇಲಿನ ಬಡ್ಡಿಯ ನಿಷೇಧ, ಕಡ್ಡಾಯ ಝಕಾತ್ ಇವೆಲ್ಲ ನೀತಿ ಸಂಹಿತೆಗಳನ್ನು ಒಳಗೊಂಡ ದೊಡ್ಡ ಅಧ್ಯಾಯ ಇದು. ಇವೆಲ್ಲವುಗಳನ್ನೂ ಕುರ್‌ಆನ್ ಸ್ಪಷ್ಟವಾಗಿ ಹೇಳುತ್ತದೆ. ಕುರ್‌ಆನ್ ಎಂದರೆ ಯಾವುದೇ ತತ್ವ ಶಾಸ್ತ್ರಗಳಂತೆ ಜಟಿಲವಾಗಿಲ್ಲ. ‘ತಾನು ಸರಳವಾಗಿದ್ದೇನೆ’ ಎಂದು ಸ್ವಯಂ ಘೋಷಿಸಿಕೊಂಡ ಗ್ರಂಥ ಇದು. ಪರಲೋಕ, ಸ್ವರ್ಗ, ನರಕಗಳೆಲ್ಲವೂ ನಾವು ಬದುಕಿದ ರೀತಿಯ ಆಧಾರದ ಮೇಲೆ ನಿಂತುಕೊಂಡಿದೆ ಎನ್ನುವುದನ್ನು ಸ್ಪಷ್ಟವಾಗಿ ಕುರ್‌ಆನ್ ಪದೇ ಪದೇ ಹೇಳುತ್ತದೆ. ಕುರ್‌ಆನ್ ಬಡವರಿಗೆ ಶ್ರೀಮಂತರು ನೀಡಬೇಕಾದ ಸಂಪತ್ತಿನ ಪಾಲನ್ನು ಸ್ಪಷ್ಟವಾಗಿ ಹೇಳುತ್ತದೆ. ಆದರೆ ಅದು ಒಬ್ಬ ಶರಣ, ನಿರ್ವಹಿಸಬೇಕಾದ ನಮಾಝಿನ ಲೆಕ್ಕವನ್ನು ಎಲ್ಲೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎನ್ನೂವುದನ್ನೂ ನಾವು ಗಮನಿಸಬೇಕು. ಈ ಕಾರಣದಿಂದಲೇ ನಮಾಝ್ ಎಷ್ಟು ಬಾರಿ ನಿರ್ವಹಿಸಬೇಕು ಎನ್ನುವ ಕುರಿತಂತೆ ಮುಸ್ಲಿಮರಲ್ಲೇ ಭಿನ್ನಾಭಿಪ್ರಾಯಗಳಿವೆ. ಬದುಕುವ ಕ್ರಮಕ್ಕೆ ನಮಾಝ್ ಪೂರಕವಾಗಿದೆಯೇ ಹೊರತು, ನಮಾಝ್‌ಗೆ ಪೂರಕವಾಗಿ ಬದುಕು ಎಂದು ಕುರ್‌ಆನ್‌ನಲ್ಲಿ ಎಲ್ಲೂ ಪ್ರಸ್ತಾಪವಾಗಿಲ್ಲ. ನಮಾಝ್ ನಿರ್ವಹಿಸುವ ದಿಕ್ಕನ್ನು ಹೇಳುವ ಗ್ರಂಥವೇ ಮತ್ತೆ ಸ್ಪಷ್ಟಪಡಿಸುತ್ತದೆ, ನೀವು ಯಾವ ದಿಕ್ಕಿಗೆ ಮುಖಮಾಡಿ ನಮಾಝ್ ನಿರ್ವಹಿಸಿದರೂ ಅದು ನನ್ನನ್ನೇ ತಲುಪುತ್ತದೆ ಎಂದು. ಕುರ್‌ಆನ್ ಮೋಕ್ಷವನ್ನು ಪಡೆಯುವ ವಿಧಾನವನ್ನು ಚರ್ಚಿಸುವುದಿಲ್ಲ. ಆ ನೆಪದಲ್ಲಿ ಬದುಕುವ ವಿಧಾನವನ್ನು ಚರ್ಚಿಸುತ್ತದೆ. ಬಡ್ಡಿ ನಿಷೇಧ, ಮದ್ಯಪಾನ ನಿಷೇಧ, ಶ್ರೀಮಂತರ ಮೇಲೆ ವಿಧಿಸಿದ ಝಕಾತ್ ತೆರಿಗೆ, ಬಡವರ ಝಕಾತಿನ ಹಕ್ಕು(ಶ್ರೀಮಂತರ ಸಂಪತ್ತಿನಲ್ಲಿ ಪಾಲು), ಹೆಣ್ಣಿಗೆ ಪ್ರಪ್ರಥಮವಾಗಿ ಆಸ್ತಿಯ ಮೇಲೆ ಹಕ್ಕಿನ ಘೋಷಣೆ, ಹೆಣ್ಣಿಗೆ ಮೆಹರ್‌ನ ಹಕ್ಕು, ವಿಧವಾ ವಿವಾಹದ ಹಕ್ಕು, ಶಿಕ್ಷಣದ ಹಕ್ಕು, ಗುಲಾಮರ ಕುರಿತಂತೆ ಅದು ತಳೆದ ಧೋರಣೆ, ಸಹೋದರತೆ, ವಿಗ್ರಹಾರಾಧನೆಯ ನಿರಾಕರಣೆ ಅತ್ಯಾಧುನಿಕವಾದುದು. ಕ್ರಾಂತಿಕಾರಿಯಾದುದು. ಮತ್ತು ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆ ಇಂದಿಗೂ ಅವುಗಳ ಅನುಷ್ಠಾನಕ್ಕೆ ತಿಣುಕಾಡುತ್ತಿದೆ ಎನ್ನುವುದು ಮುಖ್ಯವಾದ ಅಂಶ. 

ಕುರ್‌ಆನ್ ಏಕಕಾಲದಲ್ಲಿ ದಾಖಲಿಸಲ್ಪಟ್ಟ ಗ್ರಂಥ ಅಲ್ಲ ಎನ್ನುವ ಅಂಶವನ್ನು ನಾವು ನೆನಪಿಲ್ಲಿಡಬೇಕು. ಪ್ರವಾದಿಯವರ ಇಸ್ಲಾಂ ಚಳವಳಿಯ 23 ವರ್ಷಗಳ ಅವಧಿಯಲ್ಲಿ, ಬೇರೆ ಬೇರೆ ಸಂಧರ್ಭಗಳಲ್ಲಿ ದಾಖಲಿಸಲ್ಪಟ್ಟ ಸಣ್ಣ, ದೊಡ್ಜ ಅಧ್ಯಾಯಗಳಿರುವ ಗ್ರಂಥ ಇದುು. ಪ್ರವಾದಿಯವರು ಅನಕ್ಷರಸ್ಥರಾಗಿದ್ದುದರಿಂದ ಅವರ ಮೂಲಕ ಬೇರೆ ಬೇರೆ ಸಂಗಾತಿಗಳು ಅದನ್ನು ದಾಖಲಿಸಿದ್ದರು. ಅವುಗಳನ್ನು ಒಟ್ಟುಗೂಡಿಸುವ ಕೆಲಸ ನಡೆದದ್ದು ಪ್ರವಾದಿಯವರನಂತರ ಖಲೀಫ ಅಬೂಬಕರ್ ಸಿದ್ದೀಕ್ ಅವರ ಕಾಲಘಟ್ಟದಲ್ಲಿ. ಝೈದ್‌ಬಿನ್ ಸಾಬಿತ್ ಸಂಗ್ರಹಿಸುವ  ಉಸ್ತುವಾರಿ ವಹಿಸಿಕೊಂಡರು. ಕುರ್‌ಆನ್‌ನ ಒಂದು ಸಮಗ್ರ ಮೂಲಪ್ರತಿ ನಿರ್ಮಾಣವಾದುದು ಇದೇ ಸಂದರ್ಭದಲ್ಲಿ. ಮುಂದೆ ಖಲೀಫಾ ಉಸ್ಮಾನ್ ಅವರ ಕಾಲಘಟ್ಟದಲ್ಲಿ ಅದೇ ಝೈದ್ ಬಿನ್ ಸಾಬಿದ್ ನೇತೃತ್ವದಲ್ಲಿ ಒಂದು ಸಮಿತಿ ರಚನೆಯಾಗಿ, ಮೂಲಪ್ರತಿಯ ನಕಲುಗಳನ್ನು ತಯಾರಿಸಿ, ವಿವಿಧೆಡೆ ಕಳುಹಿಸಿಕೊಡಲಾಯಿತು. ಪ್ರವಾದಿಯವರ ಬದುಕಿನ ಬೇರೆ ಬೇರೆ ಘಟ್ಟಗಳ ಜೊತೆಗೆ ನೇರ ಸಂಬಂಧವನ್ನು ಕುರ್‌ಆನ್ ಅಧ್ಯಾಯ ಹೊಂದಿದೆ. ಅವರ ಬದುಕಿನ ಸಂಕಟಗಳಲ್ಲಿ, ಸವಾಲುಗಳ ಮುಖಾಮುಖಿಯಲ್ಲಿ ಕುರ್‌ಆನ್‌ನ ಬಹುತೇಕ ಅಧ್ಯಾಯಗಳು ಉದ್ಭವವಾಗಿವೆ. ಪ್ರವಾದಿಯವರ ಬದುಕಿನ ತೀರಾ ಖಾಸಗಿ ಸಮಸ್ಯೆಗಳನ್ನು ಪರಿಹರಿಸುವ ಸಂದರ್ಭದಲ್ಲೂ ಕುರ್‌ಆನ್ ನೆರವಾಗಿದೆ. ಅದಕ್ಕೊಂದು ಅತ್ಯುತ್ತಮ ಉದಾಹರಣೆ, ಪ್ರವಾದಿ ಮಹಮ್ಮದ್ ಅವರ ಪತ್ನಿ ಆಯಿಶಾ ಅವರ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ಅಧ್ಯಾಯ. ಹೇಗೆ ರಾಮಾಯಣದಲ್ಲಿ ಸೀತೆಯ ಮೇಲೆ ಅಪವಾದ ಬಂತೋ ಅಂತೆಯೇ ಪ್ರವಾದಿಯ ಪತ್ನಿ ಆಯಿಶಾರ ಮೇಲೂ ಅಂತಹದೇ ವ್ಯಭಿಚಾರದ ಆಪಾದನೆ ಬಂತು. ರಾಮನೇನೋ ಸೀತೆಯನ್ನು ಕಾಡಿಗೆ ಕಳುಹಿಸಿದ. ಆದರೆ ಪ್ರವಾದಿಗೆ ಮಾತ್ರ ಅದು ಸಾಧ್ಯವಿರಲಿಲ್ಲ. ಆದರೆ ಪತ್ನಿಯ ಮೇಲಿನ ಈ ಆಪಾದನೆ ಪ್ರವಾದಿ ಮಹಮ್ಮದರನ್ನು ನಿಜಕ್ಕೂ ಕಂಗೆಡಿಸಿತ್ತು. ಅವರ ಇಡೀ ಬಳಗಕ್ಕೆ  ಈ ಘಟನೆ ಮಂಕು ಕವಿಸಿತ್ತು. ಕೆಲವು ದಿನ ಪ್ರವಾದಿಯವರು ಪತ್ನಿಯ ಜೊತೆ ಮಾತೇ ಆಡಲಿಲ್ಲವಂತೆ. ಇಂತಹ ಹೊತ್ತಿನಲ್ಲೇ, ಒಂದು ಹೆಣ್ಣಿನ ಮೇಲೆ ವ್ಯಭಿಚಾರ ಆಪಾದನೆ ಬಂದಾಗ ಏನು ಮಾಡಬೇಕು ಎನ್ನುವ ಅಧ್ಯಾಯ ‘ಅನ್ನೂರ್’ ಹುಟ್ಟಿಕೊಂಡಿತು. ಒಂದು ಹೆಣ್ಣಿನ ಮೇಲೆ ಸುಳ್ಳಾರೋಪ ಮಾಡುವಾತ, ಅದಕ್ಕೆ ಸಂಬಂಧ ಪಟ್ಟಂತೆ ನಾಲ್ಕು ನಿಜವಾದ ಸಾಕ್ಷಿಯನ್ನು ತರದೇ ಇದ್ದರೆ, ಎಂಭತ್ತು ಛಡಿಯೇಟುಗಳನ್ನು ಹೊಡೆಯಲು ಈ ಅಧ್ಯಾಯ ಆದೇಶಿಸುತ್ತದೆ. ಮಹಿಳೆಯ ಮೇಲೆ ಸುಳ್ಳಾರೋಪಗಳನ್ನು ಹೊರಿಸುವುದನ್ನು ತಡೆಯದವರನ್ನೂ ಈ ಅಧ್ಯಾಯ ಪ್ರಶ್ನಿಸುತ್ತದೆ. ಖಂಡಿಸುತ್ತದೆ. ಈ ಅಧ್ಯಾಯ ಆಯಿಶಾರವರನ್ನು ನಿರಪರಾಧಿಯೆಂದು ಘೋಷಿಸುತ್ತದೆ.

  ಕುರ್‌ಆನ್ ಪ್ರವಾದಿಯವರು ಬದುಕಿದ ಕಾಲದ ಸಂದರ್ಭವನ್ನು ಕೇಂದ್ರೀಕರಿಸಿ ಮಾತನಾಡುವುದರಿಂದ, ಕುರ್‌ಆನ್ ಕಾಲ ಕಾಲಕ್ಕೆ ತನ್ನ ವ್ಯಾಖ್ಯಾನಗಳನ್ನು ಹಿರಿದಾಗಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಒಂದೂವರೆ ಸಾವಿರ ವರ್ಷಗಳ ಹಿಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಅಜಗಜಾಂತರವಿರುವುದರಿಂದ, ಕುರ್‌ಆನ್‌ನ ಮಾತುಗಳನ್ನು ಇನ್ನಷ್ಟು ಸಾರ್ವಕಾಲಿಕಗೊಳಿಸಬೇಕು. ನಮ್ಮ ಬದುಕು ವಿಸ್ತಾರಗೊಂಡ ಹಾಗೆಯೇ ಕುರ್‌ಆನ್‌ನ ಅರ್ಥಗಳೂ ವಿಸ್ತಾರಗೊಳ್ಳುತ್ತದೆ. ವಿಸ್ತಾರಗೊಳ್ಳಬೇಕು. ವರ್ತಮಾನಕ್ಕೆ ಇನ್ನಷ್ಟು ಪೂರಕವಾಗಿ, ಅರ್ಥಪೂರ್ಣವಾಗಿ ಆ ವ್ಯಾಖ್ಯಾನವನ್ನು ಅಳವಡಿಸಿಕೊಳ್ಳಬೇಕು. ಮತ್ತು ಅದಕ್ಕೆ ಯಥೇಚ್ಛವಾದ ಅವಕಾಶ ಕುರ್‌ಆನ್‌ನಲ್ಲಿದೆ. ಇಲ್ಲವಾದರೆ, ಅದರ ಎಷ್ಟೋ ಸಾಲುಗಳು ನಮಗೆ ಅಪ್ರಸ್ತುತ ಎನ್ನಿಸುವ ಸಾಧ್ಯತೆಗಳಿವೆ. ಅಥವಾ ಅಂತಹ ಟೀಕೆಗಳನ್ನು ಎದುರಿಸಬೇಕಾದ ಸಂದರ್ಭಗಳಿಗೆ ಮುಸ್ಲಿಮರು ಮುಖಕೊಡಬೇಕಾಗುತ್ತದೆ. 


ಕುರ್‌ಆನ್‌ನ ಓದು ನನ್ನನ್ನು ಅಂತಿಮವಾಗಿ ತಲುಪಿಸಿದ್ದು ‘ಅಲ್ ಮಾಊನ್’ ಅಧ್ಯಾಯದ ಕಡೆಗೆ. ಅಲ್ ಮಾಊನ್ ಎಂದರೆ ಅರ್ಥ ‘ಕನಿಷ್ಟ ನೆರವು’ ಅಥವಾ ಅತ್ಯಗತ್ಯವಾದ ‘ಸಣ್ಣ ನೆರವು’. ಇದೊಂದು ಏಳು ಸಾಲುಗಳ ಒಂದು ಪುಟ್ಟ ಅಧ್ಯಾಯ. ಆದರೆ ಇಡೀ ಕುರ್‌ಆನ್‌ನ ಸಾರ ಸರ್ವಸ್ವವನ್ನೂ ತನ್ನೊಳಗೆ ಇಟ್ಟುಕೊಂಡ ಅಧ್ಯಾಯ. ಪರಲೋಕ ಮತ್ತು ನಮಾಝ್ ಅಂದರೆ ಏನು ಎನ್ನುವುದನ್ನು ಈ ಅಧ್ಯಾಯ ಅತ್ಯಂತ ಸ್ಪಷ್ಟವಾಗಿ ಹೇಳುತ್ತದೆ. ಈ ಅಧ್ಯಾಯದ ವಿಶೇಷವೆಂದರೆ, ನಮಾಝ್ ಮಾಡುವವರನ್ನು ಈ ಅಧ್ಯಾಯ ಶಪಿಸುತ್ತದೆ. ಇನ್ನೊಬ್ಬರಿಗೆ ತೀರಾ ಸಣ್ಣ ನೆರವನ್ನು ನೀಡಲೂ ಹಿಂಜರಿಯುವ ವ್ಯಕ್ತಿ ಮಾಡುವ ನಮಾಝನ್ನು ತೋರಿಕೆಯ ನಮಾಝ್ ಎಂದು ಈ ಅಧ್ಯಾಯ ಹೇಳುತ್ತದೆ. ಅಂತಹ ನಮಾಝನ್ನು ಡಂಭಾಚಾರ ಎಂದು ಕರೆಯುತ್ತಾ, ಆ ನಮಾಝ್ ನಿರ್ವಹಿಸುವವರಿಗೆ ಶಾಪವಿದೆ ಎಂದು ಘೋಷಿಸುತ್ತದೆ. ಹಾಗೆಯೇ ಪರಲೋಕದಲ್ಲಿ ನಂಬಿಕೆ ಎಂದರೆ ಏನು ಎನ್ನುವುದನ್ನೂ ಈ ಪುಟ್ಟ ಅಧ್ಯಾಯ ವಿಷದ ಪಡಿಸುತ್ತದೆ. ಅನಾಥರನ್ನು ದೂರ ದಬ್ಬುವವನು ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ನೀಡದವನೇ ಪರಲೋಕವನ್ನು ತಿರಸ್ಕರಿಸುವವನು ಎಂದು ಅಲ್‌ಮಾವೂನ್ ಎನ್ನುವ ಪುಟ್ಟ ಅಧ್ಯಾಯದ ಸಾಲುಗಳು ತೀಕ್ಷ್ಣ ವ್ಯಂಗ್ಯದಿಂದ ಸ್ಪಷ್ಟಪಡಿಸುತ್ತವೆ. ಪರಲೋಕವನ್ನು ನಂಬುವುದೆಂದರೆ ಇನ್ನೇನೂ ಅಲ್ಲ, ಅನಾಥರನ್ನು ಹತ್ತಿರವಾಗಿಸಿಕೊಳ್ಳುವುದು. ಹಾಗೆಯೇ ಬಡವರಿಗೆ, ಹಸಿದವರಿಗೆ ಉಣಿಸುವುದು. ನಮಾಝ್ ಎಂದರೆ ಇನ್ನೊಬ್ಬರಿಗೆ ನೆರವಾಗುವುದು. ಈ ಎರಡೂ ಕೆಲಸವನ್ನು ಮಾಡದವನ ನಮಾಝ್ ಡಂಭಾಚಾರವಾದುದು. ಆತನ ಪರಲೋಕದ ನಂಬಿಕೆಯೂ ಹುಸಿಯಾದುದು. ಅಲ್‌ಮಾಊನ್ ಅಧ್ಯಾಯದ ಈ ಏಳು ಸಾಲುಗಳನ್ನು ಅರ್ಥ ಮಾಡಿಕೊಂಡರೆ ಇಡೀ ಕುರ್‌ಆನ್‌ನ್ನೇ ಅರ್ಥ ಮಾಡಿಕೊಂಡಂತೆ ಎನ್ನುವುದು ನನ್ನ ಈಗಿನ ನಂಬಿಕೆ.

6 comments:

  1. ಅದ್ಭುತ ಸರ್! ಕುರ್ಆನಿನ ಕುರಿತು ನಿಮ್ಮ ಲೇಖನಿಯಿಂದ ಮತ್ತಷ್ಟು ತಿಳಿದುಕೊಳ್ಳಬೇಕೆನಿಸುತ್ತದೆ. ಮುಂದುವರಿಸಿ ಪ್ಲೀಸ್!

    ReplyDelete
  2. ತುಂಬಾ ಚೆನ್ನಾಗಿದೆ ಬಶೀರ್....

    ReplyDelete
  3. ಖುರ್ ಆನ್ ನ ಕುರಿತಾದ ಅಧ್ಬುತ ಬರಹ!!
    ನಮಾಝ್ ಕುರಿತಾಗಿಯೂ ಉತ್ತಮವಾಗಿ ಹೇಳಿದ್ದೀರ !|
    ಆದರೇ ...!

    ತಾವು ನಮಾಜ್ / ಜುಮಾ [ physical prayer ] ಕುರಿತಾಗಿ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದೀರ ..
    ಇದರ ಬಗ್ಗೆ ಸ್ಪಷ್ಟೀಕರಣ plz

    ReplyDelete
  4. ಶಹಬ್ಭಾಷ್ ಪ್ರವಾದಿಯವರು ಆಯಿಷಾರನ್ನು ಮದುವೆಯಾದಾಗ ಆಯಿಷಾರ ಹಾಗೂ ಪ್ರವಾದಿಯವರ ವಯಸ್ಸೆಷ್ಟು?

    ReplyDelete
  5. BASHIR BHAI this y u r standing always diffrent from other writters ... plz send me some more ur wriitings lyk this...

    abdulashik120@gmail.com

    ReplyDelete