Tuesday, December 9, 2014

ಭೂತದ ಬಾಯಲ್ಲಿ ಭಗವದ್ಗೀತೆ.....

" ಭೂತದ ಬಾಯಲ್ಲಿ ಭಗವದ್ಗೀತೆ'' ಎಂಬ ಒಂದು ಗಾದೆಯಿದೆ. ಕರಾವಳಿ ಭಾಗದಲ್ಲಿ ತುಳು ದೈವಗಳಿಗೆ "ಭೂತಗಳು'' ಎಂದು ಕರೆಯುತ್ತಾರೆ. ಭೂತದ ಕೋಲಗಳಲ್ಲಿ ದೈವಗಳು ಮನುಷ್ಯರ ಮೇಲೆಯೇ ಆವಾಹನೆಯಾಗಿ, ಭಕ್ತರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತವೆ. ಭೂತಗಳ ಇತಿಹಾಸ, ಮಹಿಮೆಗಳನ್ನು ಹೇಳುವ ಹಾಡು ಗಳನ್ನು "ಪಾಡ್ದನ'' ಎಂದು ಕರೆಯುತ್ತಾರೆ. ಭೂತಗಳು ಪಾಡ್ದನಗಳೊಂದಿಗೆ ಚೈತನ್ಯವನ್ನು ಪಡೆದುಕೊಳ್ಳುತ್ತವೆ. ಭೂತದ ಕೋಲಗಳಲ್ಲಿ ಭಗವದ್ಗೀತೆಗೆ ಯಾವ ಸಂಬಂಧವೂ ಇಲ್ಲ. ಒಂದಕ್ಕೊಂದು ಕೂಡಿಕೊಳ್ಳದ ಸಂಸ್ಕೃತಿಗಳು ಅವು. ಭೂತಸ್ಥಾನಗಳಲ್ಲಿ ಜಾಗಟೆ, ಶಂಖ, ಭಜನೆಗಳಿಗೂ ಸ್ಥಾನವಿಲ್ಲ. ಆದುದರಿಂದಲೇ "ಭೂತದ ಬಾಯಲ್ಲಿ ಭಗವದ್ಗೀತೆ'' ಎಂಬ ಗಾದೆ ಹುಟ್ಟಿತು. ಭೂತಗಳು ಭಗವದ್ಗೀತೆಯನ್ನು ಆಡು ವುದು ಎಷ್ಟು ಅಭಾಸ ಎನ್ನುವುದನ್ನು ಈ ಗಾದೆ ಧ್ವನಿಸುತ್ತದೆ. ತುಳುವರ ಧಾರ್ಮಿಕ ಬದುಕಿನಲ್ಲಿ ಬ್ರಾಹ್ಮಣರ ಪ್ರವೇಶ ಕಾಣಿಸಿಕೊಳ್ಳುತ್ತಿರುವುದು ಈಚಿನ ಶತಮಾನಗಳಲ್ಲಿ. ತುಳುವರ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ವೈದಿಕ ಹಿನ್ನೆಲೆಯಿರಲಿಲ್ಲ. ಈ ಕಾರಣದಿಂದಲೇ ಭೂತಗಳಿಗೆ ಭಗವದ್ಗೀತೆ ಬಹು ದೂರ.

ಇತ್ತೀಚೆಗೆ ಸರಕಾರ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿಸುವ ಹುನ್ನಾರಕ್ಕಿಳಿದಿದೆ. ಇಲ್ಲಿ ಪ್ರಶ್ನೆ ಕೇವಲ ಭಗವದ್ಗೀತೆ ಎನ್ನುವ ಒಂದು ಗ್ರಂಥಕ್ಕೆ ಸಂಬಂಧಿಸಿದುದು ಮಾತ್ರವಲ್ಲ. ಅದು ಪ್ರತಿಪಾದಿಸುವ ಮೌಲ್ಯಗಳಿಗೆ ಸಂಬಂಧಿಸಿದ್ದೂ ಆಗಿರುವುದರಿಂದ, ಇದನ್ನು ನಾವು ಗಂಭೀರವಾಗಿ ಸ್ವೀಕರಿಸಬೇಕಾಗಿದೆ. ಈ ದೇಶದ ಎರಡು ಮಹಾಕಾವ್ಯಗಳು ರಾಮಾಯಣ ಮತ್ತು ಮಹಾಭಾರತ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವುಗಳು ತಮ್ಮ ಕಾವ್ಯ ಶಕ್ತಿಯ ಮೂಲಕವೇ ವಿಶ್ವ ವ್ಯಾಪಿಯಾಗಿ ಹರಡಿಕೊಂಡಿವೆ. ಮೋದಿ ಅದಕ್ಕೆ ಮಾನ್ಯತೆ ನೀಡಲಿ, ನೀಡದಿರಲಿ ಅವರೆಡೂ ಕಾವ್ಯಗಳು ವಿಶ್ವಕ್ಕೆ ನೀಡಿದ ಕೊಡುಗೆ ಪ್ರಶ್ನಾತೀತ.  ಆದರೆ ಇದೇ ಸಂದರ್ಭದಲ್ಲಿ ಭಗವದ್ಗೀತೆಯನ್ನು ಈ ನೆಲದ ಜನ ಆ ದೃಷ್ಟಿಯಿಂದ ನೋಡಿಕೊಂಡು ಬಂದಿಲ್ಲ. ಭಗವದ್ಗೀತೆ ತನ್ನ ಆಳದಲ್ಲಿ ಕಾವ್ಯೇತರವಾದ ಕೆಲವು ಅಜೆಂಡಾಗಳನ್ನು ಹೊಂದಿದೆ. ಮತ್ತು ಆ ಅಜೆಂಡಾಗಳು  ಈ ದೇಶವನ್ನು ತಲೆತಲಾಂತರಗಳಿಂದ ಗುಲಾಮಗಿರಿಗೆ ಈಡು ಮಾಡುತ್ತಾ ಬಂದಿದೆ. ಅದು ಪ್ರತಿಪಾದಿಸುವ ಹಲವು ನೀತಿ ಸಂಹಿತೆಗಳು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿವೆ. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಎಂದು ಕರೆಯುವುದೆಂದರೆ, ಗೀತೆ ಪ್ರತಿಪಾದಿಸುವ ವರ್ಣಾಶ್ರಮ ವೌಲ್ಯಗಳನ್ನು ರಾಷ್ಟ್ರದ ಮೇಲೆ ಹೇರುವುದು ಎಂದೇ ಅರ್ಥ. ಅದರ ಲಾಭ ಯಾರಿಗೆ, ನಷ್ಟ ಯಾರಿಗೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಸದ್ಯಕ್ಕೆ ಆರೆಸ್ಸೆಸ್ ಬಳಗ ಭಾರತದ ಶಿಕ್ಷಣವನ್ನು ಬುಡಮೇಲು ಮಾಡುತ್ತಿರುವ ಸಂದರ್ಭದಲ್ಲೇ, ಅದಕ್ಕೆ ಪೂರಕವಾಗಿ ಭಗವದ್ಗೀತೆಯನ್ನು ನೆಲೆಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಕೇವಲ ಸರಕಾರದ ಒಂದು ರಾಜಕೀಯ ತಂತ್ರವಾಗಿರದೆ, ಆರೆಸ್ಸೆಸ್ ಅಜೆಂಡಾದ ಒಂದು ಭಾಗ ಆಗಿದೆ.


 ಭಗವದ್ಗೀತೆ ಮಹಾಭಾರತದ ಒಂದು ಭಾಗ ಎಂದು ಬ್ರಾಹ್ಮಣರು ದೇಶವನ್ನು ನಂಬಿಸಿಕೊಂಡು ಬಂದಿದ್ದಾರಾದರೂ ಇಂದಿಗೂ ಈ ಕುರಿತಂತೆ ಹಲವು ಶ್ರೇಷ್ಠ ವಿದ್ವಾಂಸರು ತಮ್ಮ ಆಕ್ಷೇಪಗಳನ್ನು ಎತ್ತಿದ್ದಾರೆ. "ಮಹಾಭಾರತ ಕಾವ್ಯ''ದೊಳಗೆ ಕಾಲಾಂತರದಲ್ಲಿ "ಭಗವದ್ಗೀತೆ''ಯನ್ನು ತುರುಕಿಸಲಾಯಿತು ಎನ್ನುವುದನ್ನು ಹಲವು ವಿದ್ವಾಂಸರು ಈಗಾಗಲೇ ಬರೆದಿದ್ದಾರೆ. ಈ ಕುರಿತಂತೆ ಚರ್ಚಿಸಿದ್ದಾರೆ. ಇರಾವತಿ ಕರ್ವೆಯವರ ಕೃತಿಯಲ್ಲೂ ಭಗವದ್ಗೀತೆ ಮಹಾಭಾರತದ ಭಾಗ ಹೌದೋ, ಅಲ್ಲವೋ ಎಂಬ ಕುರಿತಂತೆ ಚರ್ಚೆ ಬರುತ್ತದೆ. ಮಹಾಭಾರತಕ್ಕೆ ಕಾವ್ಯವೇ ಮುಖ್ಯ. ಅಲ್ಲಿ ಕಲೆಯೇ ಅಜೆಂಡಾ. ಆದರೆ ಭಗವದ್ಗೀತೆ ಕಾವ್ಯದ ಉದ್ದೇಶವನ್ನು ಮೀರಿ, ಒಂದು ನಿರ್ದಿಷ್ಟ ಸಂಹಿತೆಯನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ರಚಿತವಾಗಿರುವುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಕರ್ಮ ಸಿದ್ಧಾಂತ ಮತ್ತು ವರ್ಣಾಶ್ರಮ ಸಿದ್ಧಾಂತಗಳ ತಳಹದಿಯ ಮೇಲೆಯೇ ಇಂದು ಜಾತಿ ವ್ಯವಸ್ಥೆ ನಮ್ಮನ್ನು ವಿಷ ವಕ್ಷದಂತೆ ಸುತ್ತಿಕೊಂಡಿದೆ ಎನ್ನುವುದನ್ನು ಅರ್ಥ ಮಾಡಿಕೊಂಡಾಗಲೇ, ಭಗವದ್ಗೀತೆ ಹೇಗೆ ಮಹಾಭಾರತದೊಳಗೆ ನುಸುಳಿಕೊಂಡಿತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಭಗವದ್ಗೀತೆ ಇಡೀ ಮನುಷ್ಯ ಕುಲವನ್ನು ಚರ್ಚಿಸುತ್ತದೆ ಎಂದೋ ಅಥವಾ ಅದು ಮನುಷ್ಯ ವಿರೋಧಿಯಾಗಿದೆ ಎಂದೋ ಒಂದೇ ಏಟಿಗೆ ನಿರ್ಧರಿಸುವುದು ತಪ್ಪು. ಆದರೆ, ಅದು ಬ್ರಾಹ್ಮಣರ ಹಕ್ಕುಗಳನ್ನು, ಹಿತಾಸಕ್ತಿಗಳನ್ನು ಕಾಪಾಡುತ್ತದೆಯಾದುದರಿಂದ, ಅದು ಬ್ರಾಹ್ಮಣ ಧರ್ಮದ ಗ್ರಂಥವಾಗುತ್ತದೆ ಮತ್ತು ಅದರ ಅನುಷ್ಠಾನದ ಸರ್ವ ಲಾಭಗಳನ್ನು ತಮ್ಮದಾಗಿಸಿಕೊಂಡು ಬಂದಿರುವುದು ಈ ದೇಶದ ಬ್ರಾಹ್ಮಣರೇ ಹೊರತು, ಶೂದ್ರ, ಚಂಡಾಲ, ಮ್ಲೇಚ್ಛ ಸಮುದಾಯಗಳಲ್ಲ. ಅದು ಇಡೀ ಹಿಂದೂ ಸಮುದಾಯದ ಹಿತಾಸಕ್ತಿ ಯನ್ನು ತನ್ನದಾಗಿಸಿ ಕೊಂಡು ರಚಿಸಲ್ಪಟ್ಟಿಲ್ಲ. ಆದುದರಿಂದಲೇ ಇಂದು ಭಗವದ್ಗೀತೆಯನ್ನು ರಾಷ್ಟ್ರೀಯ ಕೃತಿಯಾಗಿ ಒಪ್ಪಲು ವ್ಯಾಪಕ ಪ್ರತಿಭಟನೆ ವ್ಯಕ್ತವಾ ಗುತ್ತಿದೆ.

  ಇಷ್ಟಕ್ಕೂ ಭಗವದ್ಗೀತೆ ರಚನೆಯಾಗಿ ಐದು ಸಾವಿರ ವರ್ಷಗಳು ಕಳೆದಿವೆ ಎಂದೂ ನಾವೆಲ್ಲ ನಂಬಿದ್ದೇವೆ ಮತ್ತು ಅದನ್ನು ಆಚರಿಸುತ್ತಿದ್ದೇವೆ. ಆದರೆ "ಹಿಂದೂ''ಎನ್ನುವ ಶಬ್ದಕ್ಕೆ ಒಂದು ಸಾವಿರಕ್ಕಿಂತ ಅಧಿಕ ವರ್ಷಗಳ ಇತಿಹಾಸವಿಲ್ಲ. ಹೊರಗಿನಿಂದ ಬಂದವರು, ಈ ನೆಲವನ್ನು ಸಮಗ್ರವಾಗಿ ಗುರುತಿಸಲು ಹಿಂದೂ ಎನ್ನುವ ಶಬ್ದವನ್ನು ಬಳಸಿದರು. ಹೀಗಿರುವಾಗ ಹಿಂದೂ ಧರ್ಮದ ಏಕೈಕ ಪವಿತ್ರ ಗ್ರಂಥವಾಗಿ ನಾವು ಭಗವದ್ಗೀತೆಯನ್ನು ಗುರುತಿಸುವುದು ಒಂದು ಅಭಾಸ. ಇಂದು ನಾವು ಗ್ರಹಿಸುವ ಹಿಂದೂ ಧರ್ಮಕ್ಕೆ ಒಂದು ನಿರ್ದಿಷ್ಟ ಧರ್ಮ ಗ್ರಂಥವೆನ್ನುವುದು ಇಲ್ಲವೇ ಇಲ್ಲ. ಅದು ನೂರಾರು ವೈವಿಧ್ಯಗಳಲ್ಲಿ ಅರಳಿ ನಿಂತ ಧರ್ಮ. ವೇದಗಳು, ಉಪನಿಷತ್‌ಗಳು, ರಾಮಾಯಣ, ಮಹಾಭಾರತಗಳು ಹೀಗೆ...ಬೇರೆ ಬೇರೆ ಗ್ರಂಥಗಳು, ತತ್ವಗಳು ಈ ಧರ್ಮವನ್ನು ರೂಪಿಸಿವೆ. ಅವೆಲ್ಲವನ್ನು ಬದಿಗೆ ತಳ್ಳಿ, ಭಗವದ್ಗೀತೆಯನ್ನು ಮುಂದಕ್ಕೆ ತಂದಿರುವುದು ಬ್ರಾಹ್ಮಣ್ಯ ಮನಸ್ಸುಗಳು. ಬ್ರಾಹ್ಮಣ್ಯದ ಹಿರಿಮೆಯನ್ನು ಎತ್ತಿ ಹಿಡಿಯುವ ಏಕೈಕ ಉದ್ದೇಶದಿಂದ ಅದನ್ನು ಮುನ್ನೆಲೆಗೆ ತರಲಾಯಿತು. ಇದೀಗ ಅದೇ ಮನಸ್ಸುಗಳು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸುವ ಮೂಲಕ, ಅದು ಪ್ರತಿಪಾದಿಸುವ ವರ್ಣಾಶ್ರಮ ವ್ಯವಸ್ಥೆಯನ್ನು ಮರು ಸ್ಥಾಪಿಸಲು ಯತ್ನಿಸುತ್ತಿವೆ.


  ದಲಿತರಿಗೆ ಮಂಟೇಸ್ವಾಮಿ ಕಾವ್ಯ ಪರಮ ವೌಲ್ಯಗಳಿಂದ ಕೂಡಿದೆ. ತುಳುವರಿಗೆ ಪಾಡ್ದನಗಳಲ್ಲಿ ಸತ್ಯಗಳಿವೆ. ಲಿಂಗಾಯತರಿಗೆ, ವೀರಶೈವ ಸಮಾಜದ ಜನರಿಗೆ ವಚನ ಸಾಹಿತ್ಯದಲ್ಲೇ ಬದುಕಿನ ಪರಮ ವೌಲ್ಯಗಳಿವೆ. ಈ ದೇಶದ ಬುಡಕ್ಕಟ್ಟು ಜನರು, ಆದಿವಾಸಿಗಳಿಗೆ ಅವರದೇ ಆದರ್ಶಗಳುಳ್ಳ ಜಾನಪದೀಯವಾಗಿರುವ ದರ್ಶನಗಳಿವೆ. ಅಂತೆಯೇ ಸಿಖ್ಖರ ಧರ್ಮಗ್ರಂಥ "ಗ್ರಂಥ ಸಾಹೇಬ'' ಅತ್ಯಂತ ವಿಶಿಷ್ಟ ವೌಲ್ಯಗಳನ್ನು ತನ್ನದಾಗಿಸಿಕೊಂಡಿದೆ. ಸೂಫಿ ಸಂತರ ಶಬದ್‌ಗಳು, ದೋಹೆಗಳ ಸಾರವೂ ಅಲ್ಲಿವೆ. ಶೇಖ್ ಫರೀದ್, ಸಂತ ಕಬೀರರಂತಹ ಮಹಾನ್ ಸಂತರ ಸಾಲುಗಳನ್ನು ತನ್ನದಾಗಿಸಿಕೊಂಡಿರುವ ಗ್ರಂಥ ಅದು. ಭಗವದ್ಗೀತೆಯೊಂದೇ ಈ ದೇಶದ ಜನರಿಗೆ ಬದುಕುವ ಮಾರ್ಗವನ್ನು ಕೊಟ್ಟುದೇ ಆಗಿದ್ದರೆ, ಈ ದೇಶಕ್ಕೆ ಪರಕೀಯರು ಆಗಮಿಸುತ್ತಲೇ ಇರಲಿಲ್ಲ. ಅಸ್ಪೃಶ್ಯತೆ ತಾಂಡವವಾಡುತ್ತಾ, ಬಹುಸಂಖ್ಯಾತ ಕೆಳ ಜಾತಿಯ ಜನರು ಬೆರಳೆಣಿಕೆ ಜನರ ಕೈಯಲ್ಲಿ ಗುಲಾಮರಾಗಿ ಕೀಳಾದ ಬದುಕನ್ನು ಬದುಕುವ ಸ್ಥಿತಿ ಬರುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ಸಂವಿಧಾನವೊಂದನ್ನು ರಚಿಸುವ ಅಗತ್ಯವೂ ಇರಲಿಲ್ಲ. ಈ ಕಾರಣದಿಂದಲೇ, ಈ ದೇಶದ ಜನರನ್ನು ಎಲ್ಲ ಧರ್ಮ ಗ್ರಂಥಗಳಿಂದ ಸ್ವತಂತ್ರಗೊಳಿಸಿದ ಸಂವಿಧಾನವೇ ರಾಷ್ಟ್ರೀಯ ಗ್ರಂಥ. ಇದಕ್ಕೆ ಪರ್ಯಾಯವಾಗಿ ಇನ್ನೊಂದು ಗ್ರಂಥವನ್ನು ತಂದಿಡುವ ಯಾವುದೇ ಹುನ್ನಾರ ಪ್ರಜಾಸತ್ತಾತ್ಮಕ ವ್ಯವಸ್ಥೆಯ ವಿರುದ್ಧ ನಡೆಸುವ ದಾಳಿಯಾಗಿದೆ.

4 comments:

  1. ನಮ್ಮ ಸಂವಿಧಾನವೇ ನಮ್ಮ ರಾಷ್ಟ್ರೀಯ ಧರ್ಮಗ್ರಂಥ ಎನ್ನುವ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ.
    ಇತ್ತೀಚೆಗೆ, ಮುಸ್ಲಿಮ್ ಹುಡುಗಿಯರು ೧೫ನೆಯ ವರ್ಷದಲ್ಲಿ ಮದುವೆಯಾಗಬಹುದು; ಯಾಕೆಂದರೆ ಇದು ಅವರ ವೈಯಕ್ತಿಕ ಕಾನೂನು (based on ಮುಸ್ಲಿಮ್ ಧರ್ಮಗ್ರಂಥ) ಎಂದು ಉಚ್ಚ ನ್ಯಾಯಾಲಯವೊಂದು ಹೇಳಿದೆ. ಒಂದು ಧರ್ಮಗ್ರಂಥದ ಕಾನೂನನ್ನು ಎತ್ತಿಹಿಡಿಯುವ ನ್ಯಾಯಾಲಯವು ಸಂವಿಧಾನವಿರೋಧಿ ಎಂದು ನಿಮಗೆ ಅನಿಸುವದಿಲ್ಲವೆ?

    ReplyDelete
  2. ಧರ್ಮ ಗ್ರಂಥ ಅದೇನೇ ಹೇಳಲಿ, ನ್ಯಾಯಾಲಯ ಏನೇ ತೀರ್ಪು ಕೊಡಲಿ, ಕಲಿಯುವ ವಯಸಿನ ಹುಡುಗಿಯ ಮದುವೆ ಮಾಡಿ ಕೊಡಲು ಹೊರಟ ಆ ಅಪ್ಪನಿಗೆ ನನ್ನ ಧಿಕ್ಕಾರವಿದೆ. ತನ್ನ ಮಗಳ ಮೇಲೆ ಪ್ರೀತಿಯಿರುವ ತಂದೆ ಮಾಡುವ ಕೆಲಸ ಇದಲ್ಲ

    ReplyDelete
  3. ರೀ ನಿಮಗೆ ತಲೆ ಕೆಟ್ತಿದೆಯರೀ... ವರ್ಣ ಅಶ್ರಾಮ ಅಂದರೆ "ಜಾತಿ" ಎಂದು ಯಾರು ನಿಮಗೆ ಹೇಳಿದ್ದು? ವರ್ಣ ಜೀವದ ಸ್ವಭಕ್ಕೆ ಸಂಭಂದ ಪಟ್ಟದ್ದು, ಹೊರತು ಹುಟ್ಟಿದ ಕುಲಕ್ಕಲ್ಲ . ಮೊದಲು ನಿಮ್ಮ ಗ್ರಂಥ ಚೆನ್ನಾಗಿ ಅಧ್ಯಾಯನ ಮಾಡಿ ಮತ್ತೆ ಬೇರೆ ಧಾರ್ಮಿಕ ಗ್ರಂಥಗಳ ಬಗ್ಗೆ ಕೈ ಹಾಕಿ.. ನಿಮ್ಮ ಬ್ಲಾಗ್ ಗಿನ ಹೆಸರಂತೆಯೇ ಇದೆ ನಿಮ್ಮ ವಿಚಾರ ದಾರೆ.

    ReplyDelete
  4. http://padmangri.blogspot.in/2013/04/blog-post_30.html
    http://www.prajavani.net/article/%E0%B2%B0%E0%B2%BE%E0%B2%B9%E0%B3%81%E0%B2%B2%E0%B3%8D-%E0%B2%B9%E0%B3%87%E0%B2%B3%E0%B2%BF%E0%B2%95%E0%B3%86-%E0%B2%A6%E0%B3%86%E0%B2%B5%E0%B3%8D%E0%B2%B5%E0%B2%A6-%E0%B2%AC%E0%B2%BE%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AD%E0%B2%97%E0%B2%B5%E0%B2%A6%E0%B3%8D%E0%B2%97%E0%B3%80%E0%B2%A4%E0%B3%86

    Ee melinavu nimma "yenoo illada" thaleyolage "sadhyavadare"thumbalu...

    ReplyDelete