Thursday, July 25, 2013

ಒಂದು ‘ಮೋಸ್ಟ್ ವಾಂಟೆಡ್’ ಕವಿತೆ

 ಇದನ್ನು ಹೇಗೆ ಬರೆಯಬೇಕು ಎನ್ನುವುದು ನನಗೆ ತಿಳಿಯದಾಗಿದೆ. ಒಂದು ವಿಶ್ವವಿದ್ಯಾನಿಲಯ ಕಳೆದ ಎರಡು ವರ್ಷಗಳಿಂದ ಒಂದು ಕವಿತೆಯನ್ನು ಕಲಿಸುತ್ತಿತ್ತು. ಗ್ವಾಂಟನಾಮೋದಲ್ಲಿ ಚಿತ್ರಹಿಂಸೆ ಅನುಭವಿಸಿದ ಒಬ್ಬ ಸಂತ್ರಸ್ತ ಬರೆದ ಕವಿತೆ ಅದು. ಬಹಳಷ್ಟು ಜನರ ಹೃದಯವನ್ನು ದ್ರವವಾಗಿಸಿರುವ ಆ ಕವಿತೆಯ ಹೆಸರು ‘ಓಡ್ ಟು ದ ಸೀ’. ಈ ಕವಿತೆಯನ್ನು ಬರೆದ ಕವಿಯ ಹೆಸರು ಇಬ್ರಾಹಿಂ ಅಲ್ ರುಬೈಶ್. ಈ ಕವಿತೆಯನ್ನು ಪಠ್ಯವಾಗಿ ಪ್ರಕಟಿಸಿದ ವಿಶ್ವವಿದ್ಯಾನಿಲಯ ಇನ್ನಾವುದೂ ಅಲ್ಲ. ಕೇರಳದ ಕಲ್ಲಿಕೋಟೆ ವಿಶ್ವವಿದ್ಯಾನಿಲಯ. ಪಾಬ್ಲೋ ನೆರೂಡ, ಕಮಲಾದಾಸ್, ಸೆಲ್ವಿಯಾ ಫಾತ್‌ರಂತಹ ಶ್ರೇಷ್ಟ ಕವಿಗಳ ಕವಿತೆಗಳಿರುವ ಪಠ್ಯದಲ್ಲಿ ಇವನ ಕವಿತೆಯೂ ಸೇರಿ ಹೋಗಿತ್ತು. ಆದರೆ ಇದೀಗ ಎರಡು ವರ್ಷಗಳ ಬಳಿಕ, ವಿಶ್ವವಿದ್ಯಾನಿಲಯದಲ್ಲೊಂದು ಸ್ಫೋಟವಾಗಿದೆ. ಅದೇನೆಂದರೆ, ಈ ಕವಿತೆಯನ್ನು ಬರೆದ ಅಲ್ ರುಬೈಶ್ ಓರ್ವ ಉಗ್ರಗಾಮಿ. ಆತನಿಗೂ ಅಲ್‌ಖಾಯಿದಾಕ್ಕೂ ಸಂಬಂಧವಿದೆ. ಸೌದಿ ದೊರೆಗಳು, ಆತನ ತಲೆಗಾಗಿ ಕಾಯುತ್ತಿದ್ದಾರೆ. ಇಂಡಿಯಾ ಟುಡೇಯಲ್ಲಿ ಈ ಅಂಶ ಪ್ರಕಟವಾದ ಬೆನ್ನಿಗೇ ವಿಶ್ವ ವಿದ್ಯಾಲಯವು ವಿವಾದದಿಂದ ಹಿಂದೆ ಸರಿಯುವುದಕ್ಕೆ ಯೋಚಿಸಿದೆ. ಈ ಕವಿತೆಯನ್ನು ಪಠ್ಯದಿಂದ ತೆಗೆದುಹಾಕಲು ಒಪ್ಪಿಕೊಂಡಿದೆ.
ಮೂಲತಃ ಸೌದಿಯ ರುಬಾಯಿಶ್ ತನ್ನ ವಿಚಾರಗಳ ಮೂಲಕ ಸೌದಿ ದೊರೆಗಳ ಹಾಗೆಯೇ ಅಮೆರಿಕದ ವಿರೋಧಗಳನ್ನು ಏಕಕಾಲದಲ್ಲಿ ಕಟ್ಟಿಕೊಂಡಿದ್ದ. ಅವನನ್ನು ಪಾಕಿಸ್ತಾನ-ಅಫ್ಘಾನಿಸ್ತಾನದ ಗಡಿಯಲ್ಲಿ ಬಂಧಿಸಲಾಯಿತು ಎಂದು ಮೂಲಗಳು ತಿಳಿಸುತ್ತವೆ. ಸುಮಾರು ಐದು ವರ್ಷ ಗ್ವಾಂಟೆನಾಮೋ ಜೈಲಿನಲ್ಲಿ ಬರ್ಬರ ಬದುಕನ್ನು ಕಳೆದು ಬಂದಿದ್ದ ರುಬಾಯಿಶ್, ಐದು ವರ್ಷದ ಬಳಿಕ ಬಿಡುಗಡೆಗೊಂಡಿದ್ದ. ಇದಾದ ಮೇಲೆ ಆತ ಅಲ್‌ಖಾಯಿದಾ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡತೊಡಗಿದ ಎಂದೂ ಹೇಳುತ್ತಾರೆ. ಆತ ತಲೆಮರೆಸಿಕೊಂಡಿದ್ದಾನೆ ಎಂದೂ ಕೆಲವು ಮೂಲಗಳು ಹೇಳುತ್ತವೆ. ಅಥವಾ ಆತ ಸತ್ತೇ ಹೋಗಿರಬಹುದು ಎನ್ನುವವರೂ ಇದ್ದಾರೆ. ಆದರೆ ಅವನು ಬರೆದ ಕವಿತೆಯೊಂದು ಕೇರಳದ ವಿಶ್ವವಿದ್ಯಾನಿಲಯದ ಪಠ್ಯ ಪುಸ್ತಕದ ನಡುವೆ ನವಿಲುಗರಿಯಂತೆ ಹುಟ್ಟಿ ಅವನೊಳಗೆ ಕವಿಗೆ ಜೀವಕೊಟ್ಟಿತು. ರುಬಾಯಿಷ್ ಉಗ್ರನಾಗಿರಲಿ ಅಥವಾ ಅಲ್ಲದೇ ಇರಲಿ. ಆದರೆ ಈ ಕವಿತೆಗೆ ಆತನ ಮೂಲದ ಅಗತ್ಯವಿಲ್ಲ. ಹಾಗೆ ನೋಡಿದರೆ, ಯಾವ ಕವಿತೆಗಳ ಮೂಲವನ್ನೂ ಹುಡುಕ ಬಾರದು. ಅಲ್ಲವೆ?
 ನಕ್ಸಲ್ ಮುಖಂಡ ಸಾಕೇತ್ ರಾಜನ್‌ನ ದುರಂತವನ್ನು ಸ್ಮರಿಸಬಹುದಾಗಿದೆ. ಈತ ಎರಡು ಅತ್ಯಮೂಲ್ಯ ಇತಿಹಾಸ ಪುಸ್ತಕವನ್ನು ಬರೆದಿದ್ದ. ಒಂದು ಸಂದರ್ಭದಲ್ಲಿ ಆತ ಬರೆದ ‘ಮೇಕಿಂಗ್ ಹಿಸ್ಟರಿ’ ಮಂಗಳೂರು ವಿಶ್ವವಿದ್ಯಾನಿಲಯದಿಂದ ಅಧ್ಯಯನ ಪುಸ್ತಕವಾಗಿಯೂ ಪರಿಗಣಿತವಾಗಿತ್ತು. ಅದರಲ್ಲಿ ಆತನ ಹೆಸರನ್ನು ‘ಸಾಕಿ’ ಎಂದಷ್ಟೇ ಬರೆಯಲಾಗಿತ್ತು. ಆದರೆ, ಕೆಲವೇ ವರ್ಷಗಳಲ್ಲಿ ಪ್ರೇಮ್ ಎನ್ನುವ ನಕ್ಸಲ್ ಮುಖಂಡ ಪಶ್ಚಿಮಘಟ್ಟದಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ಬರ್ಬರವಾಗಿ ಸತ್ತು ಬಿದ್ದಾಗ ಗೊತ್ತಾಯಿತು, ಸಾಕಿ ಮತ್ತು ಪ್ರೇಮ್ ಒಬ್ಬನೇ ಎನ್ನುವುದು. ಸಾಕೇತ್ ರಾಜನ್ ಎನ್ನುವ ಲವಲವಿಕೆಯ ತರುಣನ ಕುರಿತಂತೆ ಗದ್ಗದವಾಗದ ಕಂಠವಿರಲಿಲ್ಲ. ಇಂದಿಗೂ ಸಾಕಿ ಬರೆದ ಮೇಕಿಂಗ್ ಹಿಸ್ಟರಿ ಭಾಗ-1 ಮತ್ತು 2 ಜೀವಂತವಾಗಿದೆ. ಸಾಕಿಯನ್ನೂ ಜೀವಂತವಾಗಿರಿಸಿದೆ. ಕರ್ನಾಟಕ ಇತಿಹಾಸದ ಕುರಿತಂತೆ ಅಪರೂಪದ ದಾಖಲೆಗಳು ಈ ಎರಡು ಕೃತಿಗಳಲ್ಲಿವೆ.
  ರುಬಾಯಿಶ್ ಅಲ್‌ಖಾಯಿದಾ ಉಗ್ರನೇ ಆಗಿರಬಹುದು. ಆದರೆ ಅವನು ತನ್ನ ಕಣ್ಣಿಂದ ಒರೆಸಿ ಎಸೆದ ಈ ಕವಿತೆಯನ್ನು ನಾವು ಎನ್‌ಕೌಂಟರ್ ಮಾಡಿ ಕೊಂದು ಹಾಕುವುದು ಹೇಗೆ? ಇದನ್ನು ಓದದೇ ಇರುವುದು ಅಥವಾ ಓದಿ ಮರೆಯುವುದಕ್ಕೆ ಪ್ರಯತ್ನಿಸುವುದಷ್ಟೇ ನಮ್ಮ ಮುಂದಿರುವ ಆಯ್ಕೆ. ಅಂದ ಹಾಗೆ ಈ ಕವಿತೆ, ಆಮ್ನೆಸ್ಟಿ ಇಂಟರ್ ನ್ಯಾಶನಲ್ ಹೊರತಂದ ಕವನ ಸಂಕಲನ ‘ಪೊಯೆಮ್ಸ್ ಫ್ರಮ್ ಗ್ವಾಂಟನಾಮೋ-ದಿ ಡಿಟೈನೀಸ್ ಸ್ಪೀಕ್’ ಸಂಗ್ರಹದಲ್ಲಿ ಪ್ರಕಟಗೊಂಡಿದೆ. ಇದನ್ನೇ ಎತ್ತಿ, ಕೇರಳ ವಿಶ್ವವಿದ್ಯಾಲಯ ತನ್ನ ಪಠ್ಯಕ್ಕೆ ಆಯ್ಕೆ ಮಾಡಿತ್ತು. ನಾನಿಲ್ಲಿ ಆ ಕವಿತೆಯನ್ನು ನನಗೆ ಸಾಧ್ಯವಾದ ಮಟ್ಟಿಗೆ ಕನ್ನಡಕ್ಕಿಳಿಸಿದ್ದೇನೆ.


ಸಮುದ್ರವನ್ನು ಉದ್ದೇಶಿಸಿ...
 

ಓ ಸಮುದ್ರದ ಅಲೆಗಳೇ, ನನ್ನ ಪ್ರೀತಿಪಾತ್ರರ ಸುದ್ದಿಗಳನ್ನು ತನ್ನಿ...

ಈ ಅಪನಂಬಿಕೆಗಳ ಸಂಕಲೆಯೊಂದು ಇಲ್ಲದಿದ್ದರೆ ನಾನು ನಿನ್ನೊಳಗೆ ಹಾರುತ್ತಿದ್ದೆ
ನನ್ನ ಪ್ರೀತಿಯ ಕುಟುಂಬದ ಮಡಿಲನ್ನು ಸೇರುತ್ತಿದ್ದೆ ಅಥವಾ ನಿನ್ನ ಒಡಲಲ್ಲೇ ಪ್ರಾಣ ಬಿಡುತ್ತಿದ್ದೆ.

ಓ ಸಮುದ್ರವೇ,
ನಿನ್ನ ದಂಡೆಗಳು ದುಃಖ, ಬಂಧನ, ನೋವು ಮತ್ತು ಅನ್ಯಾಯದ ಒಡಲುಗಳಾಗಿವೆ
ನಿನ್ನ ಕಟುಕತನ ನನ್ನ ತಾಳ್ಮೆಯನ್ನು ಕುಕ್ಕಿ ತಿನ್ನುತ್ತಿದೆ

ನಿನ್ನ ಪ್ರಶಾಂತತೆ ಸಾವಿನಂತಿದೆ, ನಿನ್ನ ಅಲೆಗಳ ವೈಖರಿಯೇ ವಿಚಿತ್ರ
ನಿನ್ನೊಡಲಿನಿಂದ ಎದ್ದು ಬರುವ ವೌನದ ತೆಕ್ಕೆಯಲಿ ಘಾತಕತನವಿದೆ

ನಿನ್ನ ನಿರಂತರ ನಿಶ್ಚಲತೆ ಕಫ್ತಾನನ್ನೇ ಕೊಂದು ಹಾಕುತ್ತದೆ
ಮತ್ತು ಅದೆಷ್ಟೋ ನಾವಿಕರು ನಿನ್ನ ತಳ ಸೇರಿದ್ದಾರೆ

ಮೃದುವಾಗುವೆ, ಕಿವಿಗಡಚಿಕ್ಕುವೆ, ವೌನತಳೆಯುವೆ, ಉಪೇಕ್ಷಿಸುವೆ ಮತ್ತು ಚಂಡಮಾರುತವಾಗುವೆ..
ಹಾಗೂ ಸಮಾಧಿಗಳನ್ನು ಹೊತ್ತು ಸಾಗುವೆ...

ಗಾಳಿ ನಿನ್ನನ್ನು ಕೆಣಕಿತೋ ನಿನ್ನ ಅನ್ಯಾಯಕ್ಕೆ ಪಾರವೇ ಇಲ್ಲ
ಗಾಳಿ ನಿನ್ನನ್ನು ಸುಮ್ಮನಾಗಿಸಿದರೆ ಆಗ ಕೇವಲ ಏರಿಳಿತ ಮಾತ್ರ.

ಓ ಸಮುದ್ರವೇ, ನಮ್ಮ ಸಂಕಲೆಗಳು ನಿನ್ನನ್ನು ಕೆಣಕುತ್ತವೆಯೇ?
ನಾವು ಪ್ರತಿ ದಿನ ಬಂದು ಹೋಗುವುದು ನಮಗೆ ಅನಿವಾರ್ಯ

ನಾವು ಮಾಡಿದ ಪಾಪಗಳೇನು ಬಲ್ಲೆಯ?
ನಮ್ಮ ದುಃಖದ ಕಾರಣ ನಿನಗೆ ತಿಳಿದಿದೆಯೇ?

ನಮ್ಮ ಸಂಕಲೆಗಳನ್ನು ಅಣಕಿಸುವ ಓ ಸಮುದ್ರವೇ...
ನಮ್ಮ ಶತ್ರುಗಳ ಜೊತೆ ಸೇರಿ, ಅಮಾನುಷವಾಗಿ ನಮ್ಮ ಕಾವಲು ಕಾಯುತಿರುವೆ

ತಮ್ಮ ಮೇಲೆ ನಡೆದ ದೌರ್ಜನ್ಯದ ಕತೆಯನ್ನು ಬಂಡೆಗಳು ನಿನಗೆ ಹೇಳುವುದಿಲ್ಲವೇ?
ಕ್ಯೂಬ ತನ್ನ ವಿಜಯದ ಕತೆಗಳನ್ನು ನಿನಗೆ ಅನುವಾದಿಸುವುದಿಲ್ಲವೆ?

ಮೂರು ವರ್ಷಗಳಿಂದ ನೀನು ನಮ್ಮ ಜೊತೆಗಿರುವೆ, ಮತ್ತು ನೀನು ಏನು ಪಡೆದೆ?
ಸಮುದ್ರದ ಕುರಿತು ದೋಣಿಗಟ್ಟಲೆ ಕವನಗಳು; ಉರಿಯುತ್ತಿರುವ ಹೃದಯದಲ್ಲಿ ಸಮಾಧಿಯಾದ ಬೆಳಕು

ಕವಿಯ ಮಾತುಗಳೇ ನಮ್ಮ ಚೈತನ್ಯದ ಚಿಲುಮೆ;
ಆತನ ಸಾಲುಗಳೇ ನಮ್ಮ ಉರಿಯುವ ಹೃದಯಗಳಿಗೆ ಮುಲಾಮು....

4 comments:

 1. ಕವಿ ಉಗ್ರನೇ ಆಗಿರಬಹುದು, ಕೊಲೆಗಡುಕನೇ ಆಗಿರಬಹುದು, ಅವನೊಳಗೆ ತುಡಿಯುವ ಕವಿಯೊಬ್ಬ ಮನುಷ್ಯ, ಶುದ್ಧ ಮನುಷ್ಯ! ಅವನೊಳಗೆ ಕುದಿಯುತ್ತಿರುವ ಸಿಟ್ಟಿರಬಹುದು, ಕೊರೆಯುತ್ತಿರುವ ನೋವಿರಬಹುದು, ದುಃಖವಿರಬಹುದು, ಪ್ರೆಮದ ಸೆಳೆತವಿರಬಹುದು. ಇವೆಲ್ಲ ಕಾವ್ಯವಾಗಿ ಹೊರಹೊಮ್ಮಿದಾಗ ಅವು ಉಗ್ರನ ದನಿಯಾಗದೇ ಕೇವಲ ಒಬ್ಬ ಕ್ರಿಯಾಶೀಲ ಮನು ಷ್ಯನ ಸೂಕ್ಸ್ಮ ಸ೦ವೇದನೆಗಳಾಗಿರುತ್ತವೆ. ರುಬಾಯಿಶ್ ತನ್ನ ತಲ್ಲಣಗಳನ್ನ ಸಮುದ್ರದ ರೂಪಕದ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾನೆ. ಕವಿ ರುಬಾಯಿಶ್ ಗೆ ನನ್ನ ಗೌರವಗಳು ಸಲ್ಲುತ್ತವೆ. ಇ೦ತಹ ಒ೦ದು ಅಪರೂಪದ ಕವಿತೆಯನ್ನು ಓದುವ ಅವಕಾಶ ಮಾಡಿಕೊಟ್ಟ ಭಶೀರ್ ಗೆ ನನ ಧನ್ಯವಾದಗಳು.

  ReplyDelete
  Replies
  1. ಸರ್ ತುಂಬಾ ಒಳ್ಳೆ ಕವಿತೆಯನ್ನು ಅನುವಾದಿಸಿ ಓದಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಅಭಿನಂದನೆಗಳು. ಕವಿಯ ವ್ಐಯಕ್ತಿಕ್ಕಿಂತ ಅವರು ಕಾವ್ಯದಲ್ಲಿ ಬಿಂಬಿಸಿದ ವಾಸ್ಥವ ಸ್ಥಿತಿಯನ್ನು ಗಮನಿಸುವುದು ಮುಖ್ಯವೆನಿಸುತ್ತದೆ. ಕ್ಯೂಬಾದ ಕಥೆಗಳು ನಿನಗೆ ಅನುವಾದಿಸಿ ಹೇಳಿಲ್ಲವೇ? ಎನ್ನುವುವ ಕವಿಯ ಹೋರಾಟದ ಮನೋಭಾವನೆಗಳು ತುಂಬಾ ದೀಘ್ರವಾಗಿ ಕಾಡುತ್ತದೆ.

   - ಪಂಪಾರಡ್ಡಿ ಅರಳಹಳ್ಳಿ.

   Delete
 2. Kavi hridayada kaviteyannu pattyadinda kittu haakuvudaralli arthavilla.
  Adhikaara shakthiyinda komu galabheyendu daanaveeya dourjanyakke kummakku needi samarthisi kolluva vyakthi deshada pradhaniyaaguva kanasu kaana bahudaada naadinalli kavanavannu kolluva yathna haasyaaspada.
  Kavitheya mulavannu - " An Ode to The sea " - illi kottiddare chennithu, Basheer.

  -- Shyamala.

  ReplyDelete
 3. ಇಂತಹ ಒಂದು ಅದ್ಭುತ ಕವಿತೆ ಆ ಉಗ್ರ ಎನ್ನು ಪಟ್ಟಕಟ್ಟಿಕೊಂಡಿರುವನ ಮನಸ್ಸಿನಿಂದ ಹೊರಬಂದಿದೆ ಎಂದರೆ ಆತನು ಆ ಜೈಲಿನಲ್ಲಿ ಎಂತಹ ನರಕಯಾತನ ಅನುಭವಿಸಿರಬಹುದು ಎನ್ನುವುದು ಮುಖ್ಯವಾಗುತ್ತದೆ. ಬಹುಶ ಯಾರೆನಲ್ಲ ಉಗ್ರರು ಎಂದು ಕರೆಯುತ್ತೇವೆಯೋ ಅವರು ಹೃದಯಗಳಲ್ಲಿ ಇಂತಹ ಕವಿತೆಗಳು ಹುಟ್ಟಿ ಸತ್ತು ಹೋಗಿರಬಹುದು ನೀವೆ ಲೆಕ್ಕ ಹಾಕಿ.

  ReplyDelete