Sunday, August 11, 2013

ನಿನ್ನ ಬಳಿ ಏನನ್ನು ಬೇಡಲಿ?

 ರಮಝಾನ್‌ನಲ್ಲಿ ಪಕ್ಕಾ ಧಾರ್ಮಿಕ ಎನಿಸಿಕೊಂಡ ಗೆಳೆಯನೊಬ್ಬ ಮೊತ್ತ ಮೊದಲ ಬಾರಿಗೆ ನನ್ನಲ್ಲ್ಡೊಂದು ಆಧ್ಯಾತ್ಮಿಕ ಸಮಸ್ಯೆಯನ್ನು ಹಂಚಿಕೊಂಡ ‘‘ಇತ್ತೀಚೆಗೆ ದೇವರಲ್ಲಿ ಏನನ್ನು ಕೇಳಬೇಕು ಎನ್ನುವುದು ತಿಳಿಯದೇ ಗೊಂದಲದಲ್ಲಿದ್ದೇನೆ’’
 ‘‘ಇದು ನೀನು ದೇವರಿಗೆ ಹತ್ತಿರವಾಗಿರುವ ಸಂಕೇತ’’ ಎಂದು ಅವನನ್ನು ಸಂತೈಸಿದೆ. ಅವನ ಗೊಂದಲ ನನ್ನನ್ನು ತುಂಬಾ ತಟ್ಟಿತ್ತು. ಅದಕ್ಕೊಂದು ಕಾರಣ ಇದೆ. ದೇವರೊಂದಿಗೆ ಏನನ್ನು ಬೇಡಬೇಕು ಎನ್ನುವುದು ನನ್ನನ್ನೂ ಇತ್ತೀಚಿನ ದಿನಗಳಲ್ಲಿ ತುಂಬಾ ಕಾಡತೊಡಗಿದೆ. ದೇವರು ಹೀಗೆ, ಇಷ್ಟೇ ಎಂದು ಗೊತ್ತಿದ್ದರೆ ಅವನ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕ ಹಾಗೆ ನಮಗೆ ಬೇಡುವ ಅನುಕೂಲವಿತ್ತು. ಆದರೆ ಇಲ್ಲಿ ಹಾಗಲ್ಲ. ನಾವು ಬೆಳೆದಂತೆ ಅವನೂ ಬೆಳೆಯತೊಡಗುತ್ತಾನೆ. ನಮ್ಮ ಬೊಗಸೆ ಹಿಗ್ಗಿದಂತೆ ಅವನ ಆಕಾರವೂ ಹಿಗ್ಗತೊಡಗುತ್ತದೆ. ಕೆಲವೊಮ್ಮೆ ನಮ್ಮ ಲೌಕಿಕ ಬೇಡಿಕೆಗಳಿಂದ ಅವನನ್ನು ವೀಸಾ ಬ್ರೋಕರ್, ವೈದ್ಯ, ಫೈನಾನ್ಶಿಯರ್, ಪೊಲೀಸ್ ಅಧಿಕಾರಿಯ ಮಟ್ಟಕ್ಕೆ ಇಳಿಸಿ ಬಿಟ್ಟು ನಮ್ಮ ನಂಬಿಕೆಯನ್ನೇ ಹಾಸ್ಯಾಸ್ಪದಗೊಳಿಸಿ ಬಿಡುತ್ತೇವೆ.


 ಇದನ್ನು ಇನ್ನಷ್ಟು ಸರಳವಾಗಿ ಒಂದು ಉದಾಹರಣೆಯೊಂದಿಗೇ ವಿವರಿಸಬಹುದೇನೋ. ಸುಮಾರು 15 ವರ್ಷಗಳ ಹಿಂದಿನ ಘಟನೆಯಿದು. ಬಂಟ್ವಾಳ ಮೂಲದ ರಾಷ್ಟ್ರ ಮಟ್ಟದ ಖ್ಯಾತ ಉದ್ಯಮಿಯೊಬ್ಬರು ನಾಲ್ಕು ದಶಕಗಳ ಬಳಿಕ ತನ್ನ ಹುಟ್ಟೂರಿಗೆ ಆಗಮಿಸಿದ್ದರು. ಅವರು ಬೆಳ್ಳಂಬೆಳಗ್ಗೆ ಇಷ್ಟು ಹೊತ್ತಿಗೆ ಊರಿನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂಬ ಮಾಹಿತಿಯಿದ್ದ ಕಾರಣ, ಅವರ ಭೇಟಿಗೆ ದೇವಸ್ಥಾನದ ಅರ್ಚಕರು, ಮುಖಂಡರು ಕಾದು ನಿಂತಿದ್ದರು. ಕೊನೆಗೂ ಆ ಖ್ಯಾತ ಉದ್ಯಮಿ ಬೆಳಗ್ಗೆ ಸುಪ್ರಭಾತದ ಹೊತ್ತಿಗೆ ಊರಿಗೆ ಕಾಲಿಟ್ಟರು. ದೇವಸ್ಥಾನದಲ್ಲಿ ಪೂಜೆಯೂ ನಡೆಯಿತು. ಉದ್ಯಮಿಯೇನೋ ತುಂಬಾ ಉಲ್ಲಸಿತವಾಗಿದ್ದರು. ಹೇಳಿಯೇ ಬಿಟ್ಟರು ‘‘ಸುಮಾರು 30 ವರ್ಷಗಳ ಬಳಿಕ ಊರಿಗೆ ಕಾಲಿಟ್ಟಿದ್ದೇನೆ. ನಿಮ್ಮ ಅಗತ್ಯ ಏನಾದರೂ ಇದ್ದರೆ ಹೇಳಿ...ಮಾಡಿ ಕೊಡುವ’’
 ದೇವಸ್ಥಾನದ ಸದಸ್ಯನೊಬ್ಬ ತಕ್ಷಣ ಬಾಯಿತೆರೆದು ಕೇಳಿಯೇ ಬಿಟ್ಟ ‘‘ನಮ್ಮ ದೇವಸ್ಥಾನದ ಜನರೇಟರ್ ಒಂದು ಕೆಟ್ಟು ಹೋಗಿದೆ. ಆಗಾಗ ಕೆಡ್ತಾನೆ ಇದೆ. ಒಂದು ಹೊಸ ಜನರೇಟರ್ ತೆಗೆದುಕೊಟ್ಟಿದ್ದರೆ ದೇವಸ್ಥಾನಕ್ಕೆ ಅನುಕೂಲವಾಗುತ್ತಿತ್ತು’’. ಉದ್ಯಮಿ ತಕ್ಷಣ ಸರಿ ಅಂದು ಬಿಟ್ಟರು. ಎಂತಹ ವಿಪರ್ಯಾಸವೆಂದರೆ, ಕೇಳಬಾರದ ಮನುಷ್ಯ ಆ ಸಂದರ್ಭದಲ್ಲಿ ಕೇಳಿ ಬಿಟ್ಟ. ಒಂದು ವೇಳೆ, ಇಡೀ ಬಂಟ್ವಾಳಕ್ಕೆ ನೀರಿನ ಸಮಸ್ಯೆ ಇದೆ. ಅದನ್ನೊಂದು ಪರಿಹರಿಸಬೇಕು ಎಂದಿದ್ದರೆ ಇಡೀ ಬಂಟ್ವಾಳಕ್ಕೆ ನೀರಿನ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಅಥವಾ ಊರಿನ ಶಾಲೆಗೆ ಹೊಸ ಕಟ್ಟಡ ಬೇಕು ಎಂದರೆ ಅದಕ್ಕೂ ತಕ್ಷಣ ಒಪ್ಪಿ ಬಿಡುತ್ತಿದ್ದರು. ಯಾಕೆಂದರೆ ಕೇಳಿ ಎಂದಾಗ ಅವರು ಅದಕ್ಕಾಗಿ ಏನಿಲ್ಲವೆಂದರೂ ಒಂದೈದು ಕೋಟಿಯನ್ನು ತೆಗೆದಿಟ್ಟಿದ್ದರು. ಆದರೆ ಕೇಳಬೇಕಾದ ಮನುಷ್ಯ ಬರೇ ಐವತ್ತು ಸಾವಿರ ರೂಪಾಯಿಯ ಜನರೇಟರ್‌ನ್ನು ಕೇಳಿ ಅಲ್ಪನೆನಿಸಿಕೊಂಡ. ದೇವರೊಂದಿಗೆ ಏನು ಬೇಡಬೇಕು ಎನ್ನುವುದನ್ನು ಕಂಡುಕೊಳ್ಳುವುದೇ ದೇವರನ್ನು ತಲುಪುವ ನಿಜವಾದ ಮಾರ್ಗವಾಗಿರಬಹುದೇನೋ ಅನ್ನಿಸುವುದು ಇದೇ ಕಾರಣಕ್ಕೆ. ನಾವು ದೇವರಲ್ಲಿ ಏನನ್ನು ಕೇಳಿಕೊಳ್ಳುತ್ತೇವೆ ಎನ್ನುವುದರಲ್ಲೇ ನಮ್ಮ ನಮ್ಮ ದೇವರುಗಳ ಮಿತಿ ಮತ್ತು ವ್ಯಾಪ್ತಿಗಳಿರುತ್ತವೆ.

ಅದೇಕೋ ಗೊತ್ತಿಲ್ಲ. ಬಾಲ್ಯದಿಂದಲೂ ನಾನು ಗೆಳೆಯರ ಕೈಯಲ್ಲಿ ನಾಸ್ತಿಕ, ಕಮ್ಯುನಿಷ್ಟ್ ಎಂದು ಉಗಿಸಿಕೊಂಡಿದ್ದೇನೆ. ಅವರೊಂದಿಗೆ ಮಸೀದಿಗೆ ಹೋದರೂ ‘ಕಮ್ಯುನಿಸ್ಟ್ ಬಂದ’ ಎಂದು ವ್ಯಂಗ್ಯ ಮಾಡುವವರೂ ಇದ್ದರು. ಅವರ ಪಾಲಿಗೆ, ಕಮ್ಯುನಿಸಂ ಅಂದರೆ ತುಂಬಾ ಸುಲಭ. ದೇವರ ಬಗ್ಗೆ ಪ್ರಶ್ನೆ ಮಾಡಿದರೆ ಸಾಕು. ಆದರೆ ಬಾಲ್ಯದಲ್ಲೇ ನಾನು ನನ್ನೆದೆಯ ಖಾಸಗಿಕೋಣೆಯೊಂದರಲ್ಲಿ ದೇವರೊಂದಿಗೆ ಪಿಸುಗುಡುತ್ತಾ ಬಂದೆ. ನರಕದ ಭಯ, ಸ್ವರ್ಗದ ಆಸೆ ಇವೆರಡನ್ನೂ ಮೀರಿದ ಕಾರಣವೊಂದು ದೇವರ ಇರವನ್ನು ತನ್ನದಾಗಿಸಿಕೊಳ್ಳುವುದಕ್ಕೆ ಇದೆ ಎನ್ನುವುದನ್ನು ನಾನು ನನ್ನ ಪುಣ್ಯಕ್ಕೆ ಕಾಲೇಜು ದಿನಗಳಲ್ಲೇ ಅರ್ಧ ಮಾಡಿಕೊಳ್ಳುತ್ತಾ ಹೋದೆ. ಅದಕ್ಕೆ ಕಾರಣ, ಪುಸ್ತಕಗಳನ್ನು ಓದುವುದೂ ಆಗಿರಬಹುದು. ಅಥವಾ ಹೊರಗಿನ ಲೋಕಕ್ಕೆ ಪರಿಚಯವಿಲ್ಲದ ನನ್ನ ಅಂತರ್ಮುಖೀ ಜಗತ್ತೂ ಆಗಿರಬಹುದು. ನಾನು ತುಂಬಾ ಇಷ್ಟ ಪಡುತ್ತಿದ್ದ ಆಕಾಶ, ಕಡಲು ಮತ್ತು ನದಿ ಇವುಗಳೂ ಆಗಿರಬಹುದು. 


ಕಾಲೇಜಿನ ದಿನಗಳಲ್ಲೊಮ್ಮೆ ಒಂದು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ‘‘ದೇವರಿದ್ದಾನೆಯೇ ಇಲ್ಲವೇ’’ ಎಂಬ ವಿಷಯವನ್ನು ನೀಡಲಾಗಿತ್ತು. ನನ್ನ ಆತ್ಮೀಯ ಗೆಳೆಯನಾಗಿದ್ದ ವಿನ್ಸನ್ ಜಾನ್ ದೇವರಿಲ್ಲ ಎಂದು ವಾದಿಸಿದ್ದರೆ, ನಾನು ದೇವರಿದ್ದಾನೆ ಎಂದು ವಾದಿಸಿದ್ದೆ. ಇಬ್ಬರೂ ಪ್ರಥಮ ಬಹುಮಾನವನ್ನು ಹಂಚಿಕೊಂಡಿದ್ದೆವು. ಈಗಲೂ ನೆನಪಿದೆ. ನಮಗೆ ಸಿಕ್ಕಿದ ಬಹುಮಾನ ಎ.ಎನ್. ಮೂರ್ತಿರಾಯರ ಜನಪ್ರಿಯ ಕೃತಿ ‘ದೇವರು’. ‘ದೇವರಿಲ್ಲ ಎಂದು ಹೇಳುವುದಕ್ಕೆ ನನ್ನಲ್ಲಿ ಯಾವ ಆಧಾರವೂ ಇಲ್ಲ. ಆದುದರಿಂದ ನಾನು ದೇವರಿದ್ದಾನೆ ಎಂದು ವಾದಿಸುತ್ತಿದ್ದೇನೆ’ ಎಂಬ ವಿಚಿತ್ರ ವಾದವನ್ನು ನಾನು ಮಂಡಿಸಿದ್ದೆ. ಅಷ್ಟೇ ಅಲ್ಲ, ಮಸೀದಿ, ದೇವಸ್ಥಾನ ಇವೆಲ್ಲವುಗಳನ್ನು ಬದಿಗಿಟ್ಟು ನನ್ನದೇ ಆದ ದೇವರ ಕಲ್ಪನೆಯನ್ನು ಮಂಡಿಸಲು ಪ್ರಯತ್ನಿಸಿದ್ದೆ. ಚೆಸ್ ಆಟದಲ್ಲಿ ಪ್ರತಿಭಾವಂತನಾಗಿದ್ದ, ಒಳ್ಳೆಯ ಮಾತುಗಾರನೂ, ಫೈನ್ ಆರ್ಟ್‌ನ ನಾಯಕನೂ ಆಗಿದ್ದ ವಿನ್ಸನ್ ಜಾನ್ ನನ್ನ ಮಾತನ್ನೇ ಬಳಸಿಕೊಂಡು ‘ದೇವರಿಲ್ಲ’ ಎಂದು ವಾದಿಸಿದ್ದ. ಕಾಲದ ವಿಪರ್ಯಾಸವೆಂದರೆ, ಈಗ ನೋಡಿದರೆ ವಿನ್ಸನ್ ಜಾನ್ ಬೆಳಗಾವಿಯ ಸಮೀಪ ಪಾದ್ರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಅವನ ಈ ಆಯ್ಕೆಗೆ ಅವನದೇ ಆದ ಕಾರಣವಿರಬಹುದು. ದೇವರನ್ನು ಒಪ್ಪುತ್ತಲೇ ನಾನು ವಿನ್ಸನ್ ಜಾನ್ ಆಯ್ಕೆಯನ್ನು ಈಗಲೂ ನಿರಾಕರಿಸುತ್ತೇನೆ. ಅಂದು ನಾನು ದೇವರಿದ್ದಾನೆ ಎಂದು ವಾದಿಸಿ ಗೆದ್ದಾಗ, ಇಬ್ರಾಹಿಂ ಎಂಬ ಪಕ್ಕಾ ಧಾರ್ಮಿಕ ಗೆಳೆಯ ನನ್ನನ್ನು ವಿಚಿತ್ರವಾಗಿ ನೋಡಿ ‘‘ಬಶೀರ್ ಬಾಯಿ, ನೀವೇನೆಂದೇ ನನಗೆ ಅರ್ಥವಾಗುತ್ತಿಲ್ಲ’’ ಎಂದಿದ್ದ. ಆ ಮಾತು ಈಗಲೂ ಹೊಚ್ಚ ಹೊಸದಾಗಿ ಎಂಬಂತೆ ನನ್ನನ್ನು ಕಾಡುತ್ತಲೇ ಇದೆ. ಈವರೆಗೂ ನಾನು ಏನು ಎನ್ನುವುದು ನನಗೇ ಅರ್ಥವಾಗಿಲ್ಲ. ನಾನು ಮತ್ತು ದೇವರು ಈ ನಿಟ್ಟಿನಲ್ಲಿ ಒಂದೇ. ಅದು ನಡೆದಂತೆ ಅರ್ಥವಾಗುತ್ತಾ ಹೋಗುತ್ತದೆ. ಮುಂದೆ ಮುಂದೆ ಹೋದಂತೆ ಅದು ತನ್ನ ಅರ್ಥವನ್ನು ಬದಲಿಸಿಕೊಳ್ಳುತ್ತಾ ಹೋಗುತ್ತದೆ. ಒಂದಂತೂ ನಿಜ. ‘ದೇವರನ್ನು ನಂಬುವುದು’ ಎನ್ನುವ ಶಬ್ದದಿಂದ ನಾನು ಎಂದೋ ದೂರ ಬಂದಿದ್ದೇನೆ. ಯಾವುದರ ಉಸಿರಾಟವನ್ನು ನಾನು ಆಲಿಸುತ್ತಿದ್ದೇನೆಯೋ, ಯಾವುದು ನನ್ನ ಸ್ಪರ್ಶಕ್ಕೆ ದಕ್ಕುತ್ತಿದೆಯೋ, ಯಾವುದರ ಪರಿಮಳವನ್ನು ನಾನು ಆಘ್ರಾಣಿಸುತ್ತಿದ್ದೇನೆಯೋ ಅದನ್ನು ನಾನು ‘ನಂಬುತ್ತಿದ್ದೇನೆ’ ಎಂದು ಹೇಳುವುದು ಹೇಗೆ? ನನ್ನದೆರು ನನ್ನ ಗೆಳೆಯ ನಿಂತಿದ್ದಾನೆ. ಹೀಗಿರುವಾಗ ‘‘ನನ್ನೆದುರು ನನ್ನ ಗೆಳೆಯ ನಿಂತಿದ್ದಾನೆ ಎನ್ನುವುದನ್ನು ನಾನು ನಂಬುತ್ತೇನೆ’’ ಎನ್ನುವುದು ತೀರಾ ಕೃತಕವೆನಿಸುವುದಿಲ್ಲವೆ? ನಂಬುತ್ತೇನೆ ಎನ್ನುವುದೇ ಕೆಲವೊಮ್ಮೆ ನಂಬದೇ ಇರುವುದರ ಸೂಚಕವಾಗುವುದಿಲ್ಲವೆ? ಆದುದರಿಂದಲೇ ದೇವರಿದ್ದಾನೆ ಎನ್ನುವುದನ್ನು ನಂಬುತ್ತೇನೆ ಎನ್ನುವ ಶಬ್ದವೇ ನನ್ನ ಪಾಲಿಗೆ ಹೊರತದಾದುದು. ನಾನು ಅವನನ್ನು ಅನುಭವಿಸುತ್ತಿದ್ದೇನೆ ಎನ್ನುವುದು ತುಸು ಸರಿಯಾಗಬಹುದೇನೋ.

 ‘ಯಾವುದೇ ಧರ್ಮವನ್ನು ಅವಲಂಬಿಸದೆಯೇ ನಾವು ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದು ಸಾಧ್ಯವಿದೆಯೇ?’ ಎಂದು ಒಬ್ಬ ಗೆಳೆಯ ಫೇಸ್‌ಬುಕ್‌ನಲ್ಲಿ ನನ್ನನ್ನು ಕೇಳಿದ್ದ. ಯಾವುದೇ ಧರ್ಮವನ್ನು ಅವಲಂಬಿಸಿಯೂ ನಾವು ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದು ಸಾಧ್ಯವಿಲ್ಲದೇ ಇರುವಾಗ, ಅವಲಂಬಿಸಿದೇ ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದೂ ಸಾಧ್ಯವಿದೆ ಎಂದಿದ್ದೆ. ಇನ್ನೂ ತರುಣ ಅವ. ‘‘ಧರ್ಮ ಹುಟ್ಟುವ ಮೊದಲೂ ದೇವರಿದ್ದ ಎನ್ನುವುದು ನೀನು ಒಪ್ಪುತ್ತಿಯೆಂದಾದರೆ, ಧರ್ಮವನ್ನು ಅವಲಂಬಿಸದೆಯೂ ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದು ಸಾಧ್ಯವಿದೆ’’ ಎಂದು ಸಮಾಧಾನಿಸಿದೆ. ‘ಪೂಜೆ, ಪುನಸ್ಕಾರ ಇವುಗಳೆಲ್ಲ ನನಗೆ ಬಾಲಿಶ ಅನ್ನಿಸುತ್ತದೆ’ ಎಂದ. ‘ಹಾಗನ್ನಿಸುತ್ತದೆ ಎಂದಾದರೆ ನೀನು ದೇವರಿಗೆ ಸಮೀಪದಲ್ಲಿದ್ದೀಯ’ ಎಂದೆ. ಸರಿ, ದೇವರಿಗೆ ಇಷ್ಟವಾಗುವ ಹಾಗೆ ನಾನೇನು ಮಾಡಬೇಕು? ಅವನಿಗಿಷ್ಟವಾಗುವ ಧರ್ಮ ಯಾವುದು? ಸ್ವಾಮೀಜಿಗಳಿಗೆ ಎಸೆದಂತೆ ನನಗೆ ಪ್ರಶ್ನೆಗಳನ್ನು ಎಸೆದಿದ್ದ.


  ಸದ್ಯಕ್ಕೆ ನನಗನ್ನಿಸಿದ್ದು ಇಷ್ಟೇ. ‘‘ಇನ್ನೊಬ್ಬರಿಗೆ ಅನ್ಯಾಯವಾಗದ ಹಾಗೆ ಬದುಕುವುದು. ಹಾಗೆಯೇ ನಮ್ಮ ಮಿತಿಯಲ್ಲಿ ಇನ್ನೊಬ್ಬರಿಗೆ ನೆರವು ನೀಡುವುದು. ಇನ್ನೊಬ್ಬರೊಂದಿಗೆ ಪ್ರ್ಝೀತಿ, ಸ್ನೇಹಗಳನ್ನು ಹಂಚಿಕೊಳ್ಳುವುದು. ಇದೇ ಧರ್ಮ. ಬಹುಶಃ ದೇವರು, ಅವನ ಈ ಬ್ರಹ್ಮಾಂಡ, ಈ ಪ್ರಕೃತಿ ಮನುಷ್ಯನಿಂದ ಇದಕ್ಕಿಂತ ಹೆಚ್ಚಿನದ್ದನ್ನು ಅಪೇಕ್ಷಿಸುತ್ತಿಲ್ಲ’’
ಇಷ್ಟನ್ನು ಮಾಡಲು ದೇವರು ಶಕ್ತಿ ಕೊಟ್ಟರೆ ಅದು ಧಾರಾಳವಾಯಿತು. ಸದ್ಯಕ್ಕೆ ನಾನು ದೇವರಲ್ಲಿ ಬೇಡುವುದು ಇದನ್ನೇ. ಕಳೆದ ರಮಝಾನ್ ತಿಂಗಳ ಪೂರ್ತಿ ನಾನು ದೇವರಲ್ಲಿ ಬೇಡಿದ್ದು ಇದನ್ನೇ.

3 comments:

 1. ಇನ್ನೊಂದು ಮುಖ್ಯ ಪ್ರಶ್ನೆಯಿದೆ-ದೇವರ ಪರಿಕಲ್ಪನೆಯನ್ನು ನಿರಾಕರಿಸುತ್ತಲೇ ಧರ್ಮವನ್ನು ಅನುಸರಿಸಲು ಸಾಧ್ಯವಿಲ್ಲವೇ?
  *(‘ಯಾವುದೇ ಧರ್ಮವನ್ನು ಅವಲಂಬಿಸದೆಯೇ ನಾವು ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದು ಸಾಧ್ಯವಿದೆಯೇ?’ ಎಂದು ಒಬ್ಬ ಗೆಳೆಯ ಫೇಸ್‌ಬುಕ್‌ನಲ್ಲಿ ನನ್ನನ್ನು ಕೇಳಿದ್ದ. ಯಾವುದೇ ಧರ್ಮವನ್ನು ಅವಲಂಬಿಸಿಯೂ ನಾವು ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದು ಸಾಧ್ಯವಿಲ್ಲದೇ ಇರುವಾಗ, ಅವಲಂಬಿಸಿದೇ ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದೂ ಸಾಧ್ಯವಿದೆ ಎಂದಿದ್ದೆ. ಇನ್ನೂ ತರುಣ ಅವ. ‘‘ಧರ್ಮ ಹುಟ್ಟುವ ಮೊದಲೂ ದೇವರಿದ್ದ ಎನ್ನುವುದು ನೀನು ಒಪ್ಪುತ್ತಿಯೆಂದಾದರೆ, ಧರ್ಮವನ್ನು ಅವಲಂಬಿಸದೆಯೂ ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದು ಸಾಧ್ಯವಿದೆ’’ ಎಂದು ಸಮಾಧಾನಿಸಿದೆ)

  ReplyDelete
 2. ನಿಮ್ಮ ಬರಹ ಓದಿ ದಿಲ್ಲಿ 6 na ಅರ್ಜಿಯಾ ಸಾರಿ ಮೈ ಚೆಹೆರೆ ಪೆ ಲಿಖಕೆ ಲಾಯಾ ಹುಂ ಎಂದು ಪ್ರಸೂನ್ ಜೋಶಿ ಬರೆದ ಹಾಡು ನೆನಪಾಯಿತು.

  ReplyDelete
 3. never thought of such an imagination and concept of god from you. whatever or whomever you are i would say you are simply best as same concept and thought we can see in O MY GOD film. even iam also having same faith as like you hats off to you brother..

  ReplyDelete