Thursday, July 4, 2013

ಹಸಿವು ಮತ್ತು ಇತರ ಕತೆಗಳು

 ಸಂಶೋಧನೆ
‘‘ಸಾರ್, ನನಗೆ ಹಸಿವಾಗುತ್ತಿದೆ’’ ಅವನು ಗೋಗರೆದ.
ಸಂಶೋಧಕ ನುಡಿದ ‘‘ಹಸಿವಿನ ಬಗ್ಗೆ ನಾನು ಹೆಚ್ಚು ಓದಿಲ್ಲ, ಅಧ್ಯಯನ ಮಾಡಿಲ್ಲ. ಆದುದರಿಂದ ಅದರ ಕುರಿತಂತೆ ನಾನು ಯಾವ ಹೇಳಿಕೆಯನ್ನು ನೀಡಲಾರೆ’’

ಕೊರತೆ
ಹೀಗೊಂದು ಸುದ್ದಿ.
ವಿಧಾನಸಭೆಯಲ್ಲಿ ಕಸದ ಬುಟ್ಟಿಯ ಕೊರತೆ.
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಜನಸಾಮಾನ್ಯರ ಅರ್ಜಿಗಳು.

ಸಮಯ
‘ಡೀಸೆಲ್ ಬೆಲೆಯನ್ನು ಮಧ್ಯರಾತ್ರಿಯಲ್ಲೇ ಯಾಕೆ ಏರಿಸುತ್ತಾರೆ?’
‘ಕಳ್ಳರು ಮನೆಗೆ ನುಗ್ಗಲು ಆಯ್ಕೆ ಮಾಡುವ ಸಮಯ ಮಧ್ಯರಾತ್ರಿಯಲ್ವೆ?’

ಮರ
ಮಗ ಮನೆಯಂಗಳದ ಮರವನ್ನು ಕಡಿಯಲು ನಿರ್ಧರಿಸುತ್ತಿದ್ದ.
‘‘ಯಾಕೋ ಮಗಾ, ಅದನ್ನು ಕಡಿಯುವುದು’’ ತಾಯಿ ಖೇದದಿಂದ ಕೇಳಿದಳು.
‘‘ಸುಮ್ನೆ ಯಾಕೆ ಮನೆ ಮುಂದೆ ಕಾವಲುಗಾರನಂತೆ ನಿಂತಿರಬೇಕು. ಮೊದಲಿನ ಹಾಗೆ ಫಲ ಬಿಡುತ್ತಿಲ್ಲ. ಅಂಗಳ ತುಂಬಾ ಕಸ. ಇಂದೋ ನಾಳೆ ಬೀಳೋ ಮರ. ತಲೆ ಮೇಲೆ ಬೀಳೋ ಮೊದಲು ನಾವೇ ಕಡಿದು ಹಾಕುವ ಅಂತ...’’
ಅಂದು ರಾತ್ರಿ ವಯಸ್ಸಾದ ಆ ತಾಯಿಗೆ ನಿದ್ದೆಯೇ ಬರಲಿಲ್ಲ.

ನೆರವು
ಪ್ರವಾಹದಲ್ಲಿ ಒಬ್ಬ ಕೊಚ್ಚಿ ಕೊಂಡು ಹೋಗುತ್ತಿದ್ದ. ‘‘ದೇವರೆ ನೆರವು ಕೊಡು’’
ಮೊರೆ ಇಡ ತೊಡಗಿದ.
ಒಂದು ದೊಡ್ಡ ಮರ ತೇಲುತ್ತಾ ಬರುತ್ತಿತ್ತು. ಅವನು ಈಜಿ ಅದನ್ನು ಹತ್ತಿ ಕೂತ.
ಅಷ್ಟರಲ್ಲಿ ಇನ್ನೊಬ್ಬ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿದ. ಅವನು ನೆರವಿಗಾಗಿ ಮರದ ಬಳಿಗೇ ಈಜುತ್ತಾ ಬರುತ್ತಿದ್ದ.
ಮರದ ಮೇಲೆ ಕೂತವನು ಹೇಳಿದ ‘‘ಇದು ನನ್ನ ಮರ. ಇದನ್ನು ಮುಟ್ಟಬೇಡ’’

ಬೋರು
‘ಯಾಕೆ ಕೊಲೆ ಮಾಡಿದೆ?’ ನ್ಯಾಯಾಲಯದಲ್ಲಿ ಆ ವಿದ್ಯಾವಂತ ಯುವಕನಲ್ಲಿ ನ್ಯಾಯಾಧೀಶರು ಪ್ರಶ್ನಿಸಿದರು.
‘‘ಬದುಕು ತುಂಬಾ ಬೋರಾಗ್ತಾ ಇತ್ತು,. ಅದಕ್ಕೆ’’ ಯುವಕ ಉತ್ತರಿಸಿದ

ಫೇಸ್‌ಬುಕ್
ಫೇಸ್‌ಬುಕ್‌ನಲ್ಲಿ ಅವನಿಗೆ ಸಹಸ್ರಾರು ಮಿತ್ರರು.
ಒಂದು ದಿನ ಅವನು ಸತ್ತು ಹೋದ.
ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಭಾರೀ ಹಾಲ್ ಬುಕ್ ಮಾಡಲಾಯಿತು.
ಸಂಜೆಯವರೆಗೆ ಕಾದರೂ ಕುಟುಂಬದವರನ್ನು ಬಿಟ್ಟರೆ ಇನ್ನಾರ ಪತ್ತೆಯೂ ಇಲ್ಲ.
ಸತ್ತವನ ಮಿತ್ರರು ಫೇಸ್‌ಬುಕ್‌ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ‘ಲೈಕ್’ ಮಾಡುತ್ತಿದ್ದರು.

ಹಸಿವು

‘‘ಸಾರ್ ನನಗೆ ಹಸಿವಾಗ್ತಿದೆ’’ ಆತ ಗೋಗರೆದ.
ಸಂಶೋಧಕ ವಿವರಿಸಿದ ‘‘ನೋಡು...ನಮ್ಮ ಸಂಶೋಧನೆಯಲ್ಲಿ ನಿನಗೆ ಹಸಿವಾಗುವುದಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದೇವೆ...’’
‘‘ಆದರೆ ನನಗೆ ಹಸಿವಾಗ್ತಾ ಇದೆ ಸಾರ್...’’
‘‘ಅದು ನಿನ್ನ ಭ್ರಮೆ ಮತ್ತು ಅಜ್ಞಾನ. ನಾನು ಬರೆದ ಎರಡು ಪುಸ್ತಕಗಳನ್ನು ಮೊದಲು ಓದು...ಆಗ ನಿನಗೇ ಗೊತ್ತಾಗುತ್ತದೆ ಹಸಿವಾಗುವುದಿಲ್ಲ ಎಂದು...’’

5 comments:

  1. This comment has been removed by the author.

    ReplyDelete
  2. Wow!! As usual- thought provoking!
    malathi S

    ReplyDelete
  3. ವಯಸ್ಸಾದ ಹಸು ಕಡಿಯುವುದೂ, ಬೋಳಾದ ಮರಕಡಿಯುವುದೂ, ವಯಸ್ಸಾದ ತಾಯಿಯನ್ನು ಎತ್ತಂಗಡಿ ಮಾಡುವುದೂ ಒಂದೇ ಅಂತನ್ನು ತಮ್ಮಿಂದ ಇಂತಹ ತತ್ವ ಬೋಧನೆ....ಅದೇನೋ ಅಂತಾರಲ್ಲ ಭೂತದ ಬಾಯಲ್ಲಿ....

    ReplyDelete