Tuesday, November 27, 2012

ಭಾಷೆಯನ್ನು ಕಲಿಸಬಾರದು...ಕಲಿಯಬಾರದು....

ನನ್ನ ತಂಗಿಯ ಎರಡೂವರೆ ವರ್ಷದ ಮಗಳು ಫಿಝಾ ಕಳೆದ ಒಂದು ತಿಂಗಳು ಮನೆಯಲ್ಲೇ ಇದ್ದಳು. ಅವಳಿರುವ ಪ್ರತಿ ಘಳಿಗೆಯೂ ನನ್ನ ಪಾಲಿಗೆ ಅಮೃತ ಘಳಿಗೆ. ಅವಳು ಕೊಡುವ ಕಾಟಗಳೆಲ್ಲ ಹಿತವಾಗಿರುತ್ತದೆ. ಸುಖವಾಗಿರುತ್ತದೆ. ಇಂತಹ ಫಿಝಾಳಿಗೆ ನಾನು ಇತ್ತೀಚೆಗೆ ಸುಮ್ಮನೆ ಆಡುವುದಕ್ಕಾಗಿ ಎಬಿಸಿಡಿ ಕಾರ್ಡ್‌ಗಳನ್ನು ಕೊಟ್ಟೆ. ಸುಮ್ಮನೆ ಆಟವಾಡುತ್ತಾ ಎಬಿಸಿಡಿ ಕಾರ್ಡ್‌ಗಳನ್ನು ಗುರುತಿಸುವುದನ್ನು ಹೇಳಿಕೊಡುತ್ತಾ ಹೋದೆ. ಅವಳು ಅದನ್ನು ಆಟವೆಂದು ನಂಬಿ, ಎಬಿಸಿಡಿಯನ್ನು ಸುಲಭವಾಗಿ ಹೇಳುತ್ತಾ ಹೋದಳು. ಇತ್ತೀಚೆಗೆ ಅವಳಿಗೆ ಏಕಾಏಕಿ ನನ್ನ ಮೇಲೆ ಅನುಮಾನ ಬಂದು ಬಿಟ್ಟಿತು. ಇದು ಆಟ ಅಲ್ಲ. ಇದು ಪಾಠ ಎನ್ನುವುದು ಸ್ಪಷ್ಟವಾದದ್ದೇ ಕಾರ್ಡ್‌ಗಳನ್ನು ಮುಟ್ಟಿ ನೋಡುವುದನ್ನೇ ಬಿಟ್ಟಳು. ಎಬಿಸಿಡಿ ಎನ್ನುವಷ್ಟರಲ್ಲಿ ಓಡಿ ಹೋಗುತ್ತಿದ್ದಳು. ಆಮೇಲೆ ಅವಳಿಗೆ ಒನ್ ಟೂ ತ್ರಿಯ ಪ್ಲಾಸ್ಟಿಕ್ ಅಕ್ಷರಗಳನ್ನು ತಂದುಕೊಟ್ಟೆ. ಅದರ ಆಕರ್ಷಣೆಯಲ್ಲಿ ಒಂದೇ ವಾರದಲ್ಲಿ ಅವಳು ಹತ್ತರವರೆಗೆ ಅಂಕಿಗಳನ್ನು ಹೇಳತೊಡಗಿದಳು. ಆದರೆ ಇತ್ತೀಚೆಗೆ ಅದರ ಕುರಿತಂತೆಯೂ ಅವಳಿಗೆ ಅನುಮಾನ ಬಂತು. ನಾವು ಒನ್‌ಟೂತ್ರಿ ಕುರಿತು ಹೆಚ್ಚು ಹೆಚ್ಚು ಆಸಕ್ತಿ ವಹಿಸಿದಂತೆ ಅವಳಿಗೆ ಅದರ ಕುರಿತ ಆಸಕ್ತಿ ಕಡಿಮೆಯಾಗ ತೊಡಗಿತು. ಇತ್ತೀಚೆಗಂತೂ ಎಬಿಸಿಡಿ, ವನ್‌ಟೂತ್ರಿಗಳನ್ನು ಮುಟ್ಟಿಯೂ ನೋಡುತ್ತಿಲ್ಲ. ‘‘ಎಬಿಸಿಡಿ ಹೇಳು ಮಗಳೆ’’ ಎಂದರೆ ಅವಳಿಗೆ ಸಿಟ್ಟು ಏರುತ್ತದೆ. ಹೇಳಿಕೊಟ್ಟರೆ, ಅದನ್ನು ತಿರುಚಿ ಹೇಳಿ ಸೇಡು ತೀರಿಸಿಕೊಳ್ಳುತ್ತಿದ್ದಳು. ಇನ್ನು ಕೆಲಸ ಕೆಟ್ಟಿತು ಎಂದು ಅವಳಿಗೆ ಏನನ್ನೂ ಹೇಳಿಕೊಡುವುದಕ್ಕೆ ಹೋಗಿಲ್ಲ. ಯಾಕೆಂದರೆ, ಯಾವಾಗ ಅವಳಿಗೆ ತಾನು ಆಡುತ್ತಿಲ್ಲ, ಕಲಿಯುತ್ತಿದ್ದೇನೆ ಎನ್ನುವುದು ಒಳ ಮನಸ್ಸಿಗೆ ಗೊತ್ತಾಗಿ ಬಿಟ್ಟಿತೋ, ಎಬಿಸಿಡಿಗಳು ಅವಳಾದಾಗಲು ಸಾಧ್ಯವಿಲ್ಲ. ನಮ್ಮದಾಗಿರುವ ಎಬಿಸಿಡಿಗಳನ್ನು ಅವಳು ಯಾವತ್ತೂ ಕಲಿಯಲು ಹೋಗುವುದಿಲ್ಲ. ಅದು ಅವಳ ಜಗತ್ತಿಗೆ ಸಂಬಂಧ ಪಟ್ಟ ವಿಷಯವಾಗಿರುವವರೆಗೆ ಮಾತ್ರ ಅವಳು ಅದರ ಕುರಿತಂತೆ ಆಸಕ್ತಿ ವಹಿಸಲು ಸಾಧ್ಯ. ನಾವು ಕಲಿಯುವುದು, ಕಲಿಸುವುದು ಎನ್ನುವುದನ್ನು ಹೇರುವುದು ಎಂಬುದಾಗಿ ತಿಳಿದುಕೊಂಡಿದ್ದೇವೆ. ಹೇರುವಾಗ ಸಹಜವಾಗಿಯೇ ಪ್ರತಿಭಟನೆ ವ್ಯಕ್ತವಾಗುತ್ತದೆ. ಹೀಗೆ ಕಲಿಕೆ ಎಂಬ ಹೇರುವಿಕೆಯ ಮೂಲಕ ಒಂದು ಭಾಷೆಯನ್ನು ಮಕ್ಕಳ ಪಾಲಿಗೆ ಕಷ್ಟವಾಗಿಸಿ, ಹಿಂಸೆಯಾಗಿಸಿ ಬಿಟ್ಟಿದ್ದೇವೆ.

ಸಾಧಾರಣವಾಗಿ ನಾವು ಪ್ರಾದೇಶಿಕ ಭಾಷೆಗಳನ್ನು ಕಲಿಯುವುದಿಲ್ಲ. ಬದಲಿಗೆ ಅದರೊಂದಿಗೆ ಬದುಕುತ್ತೇವೆ. ಅದನ್ನು ನಮ್ಮ ಮೇಲೆ ಯಾರೂ ಕಲಿಸುವ ನೆಪದಲ್ಲಿ ಹೇರುವುದಿಲ್ಲ. ಅದು ನಮ್ಮ ಬಾಲ್ಯದ ವ್ಯವಹಾರಗಳಿಗೆ ಅಗತ್ಯವಾಗಿರುತ್ತದೆ. ಆದುದರಿಂದ ಅದನ್ನು ಸಹಜವಾಗಿ ನಮ್ಮದಾಗಿಸಿಕೊಳ್ಳುತ್ತೇವೆ. ಕರಾವಳಿಯಲ್ಲಿ ಒಬ್ಬ ಮುಸ್ಲಿಮ್ ಹುಡುಗ ತನ್ನ ಮನೆಯೊಳಗೆ ಬ್ಯಾರಿ ಭಾಷೆಯನ್ನು ತನ್ನದಾಗಿಸಿಕೊಳ್ಳುತ್ತಾನೆ. ಆದರೆ ಮನೆಯಿಂದ ಹೊರಗಡೆ ಕಾಲಿಟ್ಟ ಹಾಗೆ ಅವನು ತುಳು ಭಾಷೆಯನ್ನು ತನ್ನದಾಗಿಸಿಕೊಳ್ಳ ತೊಡಗುತ್ತಾನೆ. ಮಸೀದಿಯಲ್ಲಿ ಅವನಿಗೆ ತಿಳಿಯದಂತೆಯೇ ಮಲಯಾಳಂನ್ನು ತನ್ನದಾಗಿಸಿಕೊಳ್ಳುತ್ತಾನೆ. ಶಾಲೆಗೆ ಕಾಲಿಟ್ಟವನು ಅಲ್ಲಿಯ ಹುಡುಗರೊಂದಿಗೆ ಆಡುತ್ತಾ, ಜಗಳಾಡುತ್ತಾ ಕನ್ನಡವನ್ನು ತನ್ನದಾಗಿಸಿಕೊಳ್ಳುತ್ತಾನೆ. ಹೀಗೆ ತೀರ ಹತ್ತನೆ ವರ್ಷದಲ್ಲಿ ಬ್ಯಾರಿ, ತುಳು, ಮಲಯಾಳಂ, ಕನ್ನಡ ಭಾಷೆಗಳು ಅವನದಾಗಿ ಬಿಟ್ಟಿರುತ್ತವೆ. ಇವೆಲ್ಲವನ್ನು ಅವನು ಯಾವುದೇ ಮೇಷ್ಟ್ರುಗಳ ಹಂಗಿಲ್ಲದೆಯೇ ತನ್ನದಾಗಿಸಿಕೊಂಡಿರುತ್ತಾನೆ. ಆದರೆ ಇದೇ ಸಂದರ್ಭದಲ್ಲಿ ಇಂಗ್ಲಿಷ್‌ನ್ನು ತನ್ನದಾಗಿಸಿಕೊಳ್ಳುವಾಗ ಮಾತ್ರ ಅವನು ಎಡವುತ್ತಾನೆ. ಇದು ಹುಡುಗರ ಸಮಸ್ಯೆಯಂತೂ ಅಲ್ಲವೇ ಅಲ್ಲ. ಇಂಗ್ಲಿಷ್‌ನ್ನು ಅವರಿಗೆ ಪರಿಚಯಿಸುವ ರೀತಿಯಿಂದಾಗಿಯೇ ಆ ಭಾಷೆ ಕಷ್ಟವಾಗಿ ಬಿಡುತ್ತದೆ. ಅನ್ಯವಾಗಿ ಬಿಡುತ್ತದೆ. ಇಷ್ಟೂ ಭಾಷೆಗಳನ್ನು ಸುಲಭವಾಗಿ ಅವನಿಗೆ ಅರಿವಿಲ್ಲದಂತೆಯೇ ತನ್ನದಾಗಿಸಿಕೊಂಡ ವಿದ್ಯಾರ್ಥಿ, ಇಂಗ್ಲಿಷ್‌ನ್ನು ಮಾತ್ರ ‘ಕಲಿಯ’ಬೇಕಾಗುತ್ತದೆ.

ಇತ್ತೀಚೆಗೆ ಟಿವಿಯಲ್ಲಿ ಒಂದು ಕಾರ್ಯಕ್ರಮ ನೋಡುತ್ತಿದ್ದೆ. ಅದರಲ್ಲಿ ನವಿಲು ಗರಿ ಮಾರಾಟ ಮಾಡುತ್ತಿದ್ದ ಬೀದಿಯ ಹುಡುಗ ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಿರುವುದನ್ನು ‘ಅತ್ಯದ್ಭುತ’ ಎಂಬಂತೆ ತೋರಿಸುತ್ತಿದ್ದರು. ಯಾವ ಮೇಷ್ಟ್ರುಗಳೂ ಇಲ್ಲದೆ ಅವನು ಇಂಗ್ಲಿಷ್ ಕಲಿತಿದ್ದಾನೆ ಎಂಬ ವಿವರಗಳು ಬೇರೆ. ಬದುಕಿಗಿಂತ ದೊಡ್ಡ ಮೇಷ್ಟ್ರು ಇಲ್ಲವೆಂಬ ಸಂಗತಿ ಆ ಟಿವಿ ವಾಹಿನಿಯವರಿಗೆ ಗೊತ್ತೇ ಇರಲಿಲ್ಲ. ಅವನು ಇಂಗ್ಲಿಷ್‌ನ್ನು ಎಲ್ಲೂ ಕಲಿತಿರಲಿಲ್ಲ. ಬದಲಿಗೆ ತನ್ನ ಅಗತ್ಯಕ್ಕೋಸ್ಕರ ಇಂಗ್ಲಿಷ್‌ನ್ನು ತನ್ನದಾಗಿಸಿಕೊಂಡಿದ್ದ. ಅಂದರೆ, ಒಂದು ಭಾಷೆಯನ್ನು ಹೇಗೆ ತನ್ನದಾಗಿಸಿಕೊಳ್ಳಬೇಕೋ ಆ ಸಹಜದಾರಿಯಲ್ಲಿ ತನ್ನದಾಗಿಸಿಕೊಂಡಿದ್ದ. ಇಂಗ್ಲಿಷ್‌ನಲ್ಲಿ ಎಂ. ಎ ಮಾಡಿದ ವಿದ್ಯಾರ್ಥಿಗಳು ಒಂದು ವಾಕ್ಯವನ್ನು ಇಂಗ್ಲಿಷ್‌ನಲ್ಲಿ ಆಡಲು ತಡವರಿಸುವಾಗ, ಇವನು ಲೀಲಾಜಾಲವಾಗಿ ಇಂಗ್ಲಿಷ್ ಮಾತನಾಡಲು ಸಾಧ್ಯವಾದುದು, ಕಲಿಯುವುದರಿಂದಲ್ಲ, ಭಾಷೆಯ ಜೊತೆಗೆ ಬೆರೆಯುವುದರಿಂದ ಅಥವಾ ಭಾಷೆಯ ಜೊತೆಗೆ ಬದುಕುವುದರಿಂದ.


 ಇಂತಹ ಸಂದರ್ಭದಲ್ಲಿ ಒಂದು ತಿಂಗಳಲ್ಲಿ ನಿಮಗೆ ಇಂಗ್ಲಿಷ್ ಕಲಿಸುತ್ತೇವೆ ಎಂದು ಹೊರಡುವ ರ್ಯಾಪಿಡೆಕ್ಸ್ ಪುಸ್ತಕಗಳನ್ನು ನೆನಪಿಸಿಕೊಳ್ಲಿ. ಅದನ್ನು ಮುಂದಿಟ್ಟುಕೊಂಡು, ಒಂದೊಂದು ವಾಕ್ಯವನ್ನು ಬಾಯಿಪಾಠ ಕಲಿಯಲು ಯತ್ನಿಸುತ್ತಾ ಒಂದೇ ವಾರದಲ್ಲಿ ರ್ಯಾಪಿಡೆಕ್ಸ್ ಪುಸ್ತಕ ಅಟ್ಟ ಸೇರಿ ಬಿಡುತ್ತಿತ್ತು. ಅದರ ಬದಲಿಗೆ ಸುಮ್ಮನೆ ತೀರಾ ಸಹಜವಾಗಿ ಒಂದಿಷ್ಟು ಇಂಗ್ಲಿಷ್ ಕಾಮಿಕ್ಸ್‌ಗಳನ್ನು ತಂದಿಟ್ಟುಕೊಂಡು, ಸಣ್ಣದೊಂದು ಡಿಕ್ಷನರಿಯನ್ನೂ ಪಕ್ಕಕ್ಕಿಟ್ಟುಕೊಂಡಿದ್ದರೆ ಆರು ತಿಂಗಳಲ್ಲಿ ನಮ್ಮ ಇಂಗ್ಲಿಷ್ ಸುಧಾರಣೆಯಾಗಿ ಬಿಡುತ್ತಿತ್ತೇನೋ.

ಇಂಗ್ಲಿಷ್‌ನ ಒಂದು ವಾಕ್ಯವನ್ನು ನನ್ನ ತಲೆಗೆ ಹೊಗ್ಗಿಸಲು ಬೊಬ್ಬಿಡುತ್ತಿದ್ದ ರೂಫಿನಾ ಟೀಚರ್ ಈಗಲೂ ನನಗೆ ನೆನಪಾಗುತ್ತಾರೆ. ಎಲ್ಲದಕ್ಕೂ ಗೋಯಿಂಗ್, ಕಮಿಂಗ್...ಎಂದು ಇಂಗ್ ಸೇರಿಸುತ್ತಾ ಮಾತನಾಡುವಾಗ ನನ್ನ ಪ್ರಾಂಶುಪಾಲರಾದ ಅಬ್ರಹಾಂ ವರ್ಗೀಸರ ಬಿಪಿ ಜಾಸ್ತಿಯಾಗಿ ‘‘ಎಲವೋ ಇಂಗು ತಿಂದ ಮಂಗ...’’ ಎಂದು ಅಬ್ಬರಿಸುತ್ತಿರುವುದು ನೆನಪಾಗುತ್ತದೆ. ಅವರು ತಮ್ಮ ಶಕ್ತಿ ಮೀರಿ ನಮಗೆ ಇಂಗ್ಲಿಷ್ ಕಲಿಸಲು ಹೆಣಗುತ್ತಿದ್ದರು. ಆದರೆ ಒಂದು ವಾಕ್ಯವೂ ನನ್ನ ತಲೆಗೆ ಹೋಗುತ್ತಿರಲಿಲ್ಲ. ಬಹುಶಃ ಈಗ ಅರ್ಥವಾಗುತ್ತದೆ. ಹೇರುವಿಕೆಯನ್ನು ನಾನು ಬಾಲ್ಯದಲ್ಲಿ ಪ್ರತಿಭಟಿಸುತ್ತಿದೆ. ಆದುದರಿಂದಲೇ ಮಹಾ ಅಶಿಸ್ತಿನ ಹುಡುಗ ಎಂದು ಶಾಲೆಯಲ್ಲಿ ಹೆಸರುವಾಸಿಯಾಗಿದ್ದೆ. ಈ ಕಾರಣಕ್ಕೆ ಅವರ ಇಂಗ್ಲಿಷ್‌ನ್ನು ನನ್ನ ಮನಸ್ಸು ಸ್ವೀಕರಿಸುತ್ತಿರಲಿಲ್ಲ ಎಂದು ಕಾಣುತ್ತದೆ. ಇಂದು ಇಂಗ್ಲಿಷ್‌ನ್ನು ನಾವು ನಮ್ಮ ಮಕ್ಕಳಿಗೆ ಹೇರುವುದನ್ನು ನಿಲ್ಲಿಸಬೇಕಾಗಿದೆ. ಇಂಗ್ಲಿಷ್‌ನ್ನು ಮಾತ್ರವಲ್ಲ, ಯಾವುದೇ ವಿಷಯವನ್ನು ‘ಕಲಿಸುವು’ದನ್ನು ನಿಲ್ಲಿಸಬೇಕು. ಯಾಕೆಂದರೆ ಕಲಿಸುತ್ತಿದ್ದೇವೆ ಎನ್ನುವ ನಮ್ಮ ಭ್ರಮೆ, ಅಹಂಕಾರ ಕಲಿಯುವವರಿಗೆ ಹೇರಿಕೆಯಾಗಿ ಪರಿಣಮಿಸುತ್ತದೆ. ಸಾಧ್ಯವಾದರೆ, ನಾವು ಅವರೊಂದಿಗೆ ಇಂಗ್ಲಿಷ್‌ನಲ್ಲಿ ಪ್ರೀತಿಯಿಂದ ಮಾತನಾಡುತ್ತಾ, ಇಂಗ್ಲಿಷ್ ಮೂಲಕ ಆಟವಾಡುತ್ತಾ ಒಂದೊಂದು ಶಬ್ದವನ್ನು ಪರಿಚಯಿಸುತ್ತಾ ಹೋಗುವುದು ಒಳ್ಳೆಯ ಕ್ರಮ ಎನ್ನಿಸುತ್ತದೆ. ಸಹಜ ದಾರಿ ಎನ್ನಿಸುತ್ತದೆ. ಎಚ್‌ಬಿಓ ಚಾನೆಲ್‌ನಲ್ಲಿ ಇಂಗ್ಲಿಷ್ ಚಿತ್ರ ನೋಡುತ್ತಾ ನೋಡುತ್ತಾ ನನ್ನ ಇಂಗ್ಲಿಷ್‌ನ್ನು ನಾನು ನನಗೆ ತಿಳಿಯದೆಯೇ ತೀರಾ ಸಹಜವಾಗಿ ಸಣ್ಣದಾಗಿ ಸುಧಾರಿಸಿಕೊಂಡಿದ್ದೇನೆ. ಯಾವುದೇ ಭಾಷೆಯ ಅಗತ್ಯ ನಮಗೆ ಬಿತ್ತೆಂದರೆ, ಅದು ಸಹಜವಾಗಿಯೇ ನಮ್ಮದಾಗುತ್ತದೆ. ಅಗತ್ಯವಿಲ್ಲದವರಿಗೆ ಬಲವಂತವಾಗಿ ಭೂರಿಭೂಜನವನ್ನು ಉಣಿಸಿದರೂ ಅವರು ವಾಂತಿಮಾಡಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಹಸಿವಿರುವವರಿಗೆ ಗಂಜಿಚಟ್ನಿ ಬಡಿಸಿದರೂ ಗಬಗಬನೆ ಉಣ್ಣುತ್ತಾರೆ. ಉಣ್ಣುವುದು ಒಂದು ಸಹಜಕ್ರಿಯೆ. ಆದುದರಿಂದ ನಾವು ಮಕ್ಕಳಲ್ಲಿ ಮೊದಲು ಹಸಿವನ್ನು ಸೃಷ್ಟಿಸಬೇಕು. ಬಳಿಕವಷ್ಟೇ ಅವರಿಗೆ ಭೂರಿಭೋಜನ ಉಣಿಸುವ ಪ್ರಯತ್ನ ಮಾಡಬಹುದು. 


ಇದೇ ಸಂದರ್ಭದಲ್ಲಿ ಒಂದು ಸಣ್ಣ ಜೋಕು ನೆನಪಾಗತ್ತೆ. ನಗರದ ಹಿರಿಯರೊಬ್ಬರು ಇಂಗ್ಲೆಂಡಿಗೆ ಹೋಗಿ ಬಂದರು. ಅವರು ಗೆಳೆಯರೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದರು ‘‘ಇಂಗ್ಲೆಂಡ್‌ನವರು ಎಷ್ಟು ಬುದ್ಧಿವಂತರು ಎಂದರೆ, ಅಲ್ಲಿರುವ ಮೂರು ವರ್ಷದ ಮಗು ಕೂಡ ನಮಗಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತೆ’’

No comments:

Post a Comment