Saturday, November 5, 2011

ದಿಕ್ಕು ಮತ್ತು ಇತರ ಕಥೆಗಳು

ಮುಕ್ತಿ
ರಾಜಕಾರಣಿ ಅದೊಂದು ಸ್ಲಂಗೆ ಭೇಟಿ ನೀಡಿದ.
ಸಾವಿರಾರು ಗುಡಿಸಲುಗಳಿರುವ ಸ್ಲಂ ಅದು.
ಅಲ್ಲಿನ ಬಡತನ, ಕಷ್ಟ ಕಂಡು ರಾಜಕಾರಣಿ ತುಂಬಾ ನೊಂದುಕೊಂಡ.
ತಕ್ಷಣ ತನ್ನ ಜೊತೆಗಿದ್ದ ಅಧಿಕಾರಿಗೆ ಆದೇಶಿಸಿದ
‘‘ಈ ಬಡತನ, ನೋವಿಗೆ ಮುಕ್ತಿ ಕೊಡಿ. ಇವರನ್ನು ಮೇಲೆತ್ತಿ ಮುಂದಿನ ವರ್ಷ ಬಂದಾಗ ಇಲ್ಲಿ ಬಡತನ ಅನ್ನೋದೆ ಇರಬಾರದು’’
ಅಧಿಕಾರಿ ‘‘ಸರಿ ಸಾರ್’’ ಎಂದ.
ಮರುದಿನ ಆ ಸ್ಲಂಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಅಷ್ಟೂ ಬಡವರು ಸುಟ್ಟು ಬೂದಿಯಾದರು.
ಮುಂದಿನ ವರ್ಷ ಅಲ್ಲಿ ತಲೆಯೆತ್ತಿದ್ದ ಕಾಂಪ್ಲೆಕ್ಸ್‌ನ್ನು ಉದ್ಘಾಟಿಸಲು ಆ ರಾಜಕಾರಣಿ ಬಂದಾಗ, ಅಲ್ಲೆಲ್ಲ ಶ್ರೀಮಂತರೇ ರಾರಾಜಿಸುತ್ತಿದ್ದರು.
ರಾಜಕಾರಣಿ ಅಧಿಕಾರಿಯನ್ನು ಮೆಚ್ಚುಗೆಯಿಂದ ನೋಡಿದ.

ಗೊಬ್ಬರ
ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಸಿಟ್ಟಿನಿಂದ ಹೇಳಿದ ‘‘ನಿನ್ನ ತಲೆಯಲ್ಲಿರುವುದು ಗೊಬ್ಬರ’’
ವಿದ್ಯಾರ್ಥಿ ಸಂತೋಷದಿಂದ ಉತ್ತರಿಸಿದ
‘‘ನಿಜ. ನನ್ನ ತಲೆಯಲ್ಲಿರುವುದು ಗೊಬ್ಬರ. ಅಲ್ಲಿ ಬೀಜ ಬಿತ್ತಿ ಬೆಳೆ ತೆಗೆಯುವುದು ನಿಮ್ಮ ಕೆಲಸ. ಅದನ್ನು ಮಾಡಿ’’

ಪವಾಡ
ಸಂತ ಆಶ್ರಮದ ಗಿಡಕ್ಕೆ ನೀರೆರೆಯುತ್ತಿದ್ದ. ಆಗ ಅಲ್ಲಿಗೊಬ್ಬ ಅಪರಿಚಿತ ಬಂದು ಕೇಳಿದ ‘‘ಸ್ವಾಮಿ...ಈ ಆಶ್ರಮದ ಗುರುಗಳು ಪವಾಡ ಮಾಡುತ್ತಾರಂತೆ ಹೌದ?’’
ಸಂತ ನಕ್ಕು ‘‘ಹೌದು’’ ಎಂದ.
ಅಪರಿಚಿತನಿಗೆ ಸಂತೋಷವಾಯಿತು. ‘‘ಅವರು ಮಾಡಿರುವ ಒಂದು ಪವಾಡವನ್ನು ಹೇಳಿ...’’ ಕುತೂಹಲದಿಂದ ಕೇಳಿದ.
ಸಂತ ಹೇಳ ತೊಡಗಿದ ‘‘ನಿಜಕ್ಕೂ ಅದೊಂದು ದೊಡ್ಡ ಪವಾಡ. ಒಂದು ದಿನ ಅವರೊಂದು ಬೀಜವನ್ನು ತಂದರು. ಆಮೇಲೆ ಅದನ್ನು ಮಣ್ಣಲ್ಲಿ ಬಿತ್ತಿದರು. ಪ್ರತಿದಿನ ನೀರು ಹಾಕತೊಡಗಿದರು. ನೋಡನೋಡುತ್ತಿದ್ದಂತೆಯೇ ಒಂದು ಮಣ್ಣನ್ನು ಸೀಳಿ ಬೀಜದಿಂದ ಸಸಿಯೊಂದು ಮೊಳಕೆಯೊಡೆಯಿತು. ಪವಾಡ ಇಲ್ಲಿಗೆ ಮುಗಿಯುವುದಿಲ್ಲ...ಗುರುಗಳು ಅದಾವುದೋ ಮಂತ್ರದ ನೀರು ಹಾಕುತ್ತಿರಬೇಕು. ಸಸಿ ಕೆಲವೇ ದಿನಗಳಲ್ಲಿ ಗಿಡವಾಯಿತು. ಒಂದೆರಡು ವರ್ಷಗಳಲ್ಲೇ ಮರವಾಯಿತು. ಒಂದು ದಿನ ನೋಡಿದರೆ ಮರ ತುಂಬಾ ಹಣ್ಣುಗಳು. ಆ ಹಣ್ಣುಗಳು ಅದೆಷ್ಟು ಸಿಹಿ ಅಂತೀರಾ? ಆಹಾ...ಆ ಒಂದು ಪುಟ್ಟ ಬೀಜದೊಳಗಿಂದ ಅವರು ಒಂದು ದೊಡ್ಡ ಮರವನ್ನೇ ಹೊರತೆಗೆದರು. ಅಷ್ಟೇ ಅಲ್ಲ, ಮರದಿಂದ ಅಷ್ಟೂ ಸಿಹಿಸಿಹಿಯಾದ ಹಣ್ಣುಗಳನ್ನು ಹೊರತೆಗೆದರು. ಆ ಪವಾಡವನ್ನು ನೋಡಿ ಊರ ರೈತರೆಲ್ಲ ಅವರ ಭಕ್ತರಾದರು...’’

ಭಕ್ತಿ
ಶಿಷ್ಯ ಕೇಳಿದ ‘‘ಗುರುಗಳೇ ಭಕ್ತಿ ಎಂದರೇನು?’’
ಸಂತ ನಕ್ಕು ಹೇಳಿದ ‘‘ಭಕ್ತಿ ಎಂದರೆ ಜೂಜು. ಒಮ್ಮೆ ಈ ಜೂಜಿಗಿಳಿದರೆ ಸಾಕು, ಒಂದೊಂದನ್ನೇ ಒತ್ತೆಯಿಟ್ಟು ಕಳೆದುಕೊಳ್ಳುತ್ತಾ ಹೋಗುತ್ತೀರಿ...ಕಳೆದುಕೊಳ್ಳುವುದರಲ್ಲೇ ಈ ಜೂಜಿನ ಮಜ ಇರುವುದು’’

ಹಬ್ಬ
‘‘ನಾಳೆ ಹಬ್ಬ’’ ಆ ಶ್ರೀಮಂತ ಮನೆಯ ಹುಡುಗ ಸಂಭ್ರಮದಿಂದ ಹೇಳಿದ.
‘‘ಹೌದಾ?’’ ಬಡ ಹುಡುಗೂ ಉದ್ಗರಿಸಿದ.
ನಾಳೆ ಏನೋ ವಿಶೇಷ ಇರಬೇಕು ಎಂದು ಸಂತೋಷಪಟ್ಟ.

ಮರುದಿನ ಶ್ರೀಮಂತ ಹುಡುಗ ಬೇಸರದಿಂದ ಹೇಳಿದ ‘‘ಹಬ್ಬದಲ್ಲಿ ಏನೂ ವಿಶೇಷವೇ ಇರಲಿಲ್ಲ. ನಮ್ಮ ಮನೆಯಲ್ಲಿ ಯಾವತ್ತೂ ಬಿರಿಯಾನಿ. ನಿನ್ನೆಯೂ ಬಿರಿಯಾನಿ ಮಾಡಲಾಗಿತ್ತು. ಯಾವತ್ತೂ ಹೊಸ ಬಟ್ಟೆಯೇ ಹಾಕುತ್ತಿದ್ದೆ. ನಿನ್ನೆಯೂ ಹೊಸಬಟ್ಟೆಯನ್ನೇ ಹಾಕಿದೆ. ಏನಿದೆ ಹಬ್ಬದಲ್ಲಿ ವಿಶೇಷ?’’
ಬಡಹುಡುಗನೂ ಅಷ್ಟೇ ಬೇಸರದಿಂದ ಹೇಳಿದ
‘‘ಹೌದು, ನಮ್ಮ ಮನೆಯಲ್ಲೂ ಹಬ್ಬದಲ್ಲಿ ಏನೂ ವಿಶೇಷವೇ ಇರಲಿಲ್ಲ. ಯಾವತ್ತೂ ಗಂಜಿಯೇ ಕುಡಿಯುತ್ತಿದ್ದೆವು. ನಿನ್ನೆಯೂ ಗಂಜಿಯನ್ನೇ ಕುಡಿದೆವು. ಯಾವಾಗಲೂ ಹರಿದ ಹಳೆಯ ಬಟ್ಟೆಯೇ ಹಾಕುತ್ತಿದ್ದೆವು. ನಿನ್ನೆಯೂ ಅದನ್ನೇ ಹಾಕಿದೆವು. ಏನಿದೆ ಹಬ್ಬದಲ್ಲಿ ವಿಶೇಷ?’’


ಕೊರಗು
ಸಂತನ ಬಳಿ ಶಿಷ್ಯ ದುಃಖದಿಂದ ಹೇಳಿದ ‘‘ಗುರುಗಳೇ, ನಾನು ಇಂದು ಬೆಳಗ್ಗೆ ದೇವರ ಪ್ರಾರ್ಥನೆಯನ್ನು ಮರೆತು ನಿದ್ರಿಸಿ ಬಿಟ್ಟೆ. ನಾನೇನು ಮಾಡಲಿ?’’
ಸಂತ ಹೇಳಿದ ‘‘ದೇವರ ಪ್ರಾರ್ಥನೆ ಮಾಡಿದೆ ಎಂದು ಹೆಮ್ಮೆಯಿಂದ ತಿರುಗಾಡುವವನಿಗಿಂತ, ಪ್ರಾರ್ಥನೆ ಮಾಡಿಲ್ಲವೆಂದು ಕೊರಗುವವನೇ ದೇವರಿಗೆ ಹೆಚ್ಚು ಇಷ್ಟ. ಚಿಂತೆ ಮಾಡಬೇಡ’’

ಹಗ್ಗ
ಸಂತನ ಆಶ್ರಮದ ತೋಟಕ್ಕೆ ಕಳ್ಳನೊಬ್ಬ ನುಗ್ಗಿದ.
ಶಿಷ್ಯರೆಲ್ಲ ಸೇರಿ ಅವನನ್ನು ಹಿಡಿದರು.
ಅವನೋ ಬಲಾಢ್ಯ. ಅವನನ್ನು ಕೊತ್ವಾಲನಿಗೆ ಒಪ್ಪಿಸಲು ಕೈಕಾಲು ಕಟ್ಟುವುದು ಅಗತ್ಯವಿತ್ತು.
ಶಿಷ್ಯನೊಬ್ಬ ಆಶ್ರಮಕ್ಕೆ ಬಂದು ಹಗ್ಗಕ್ಕಾಗಿ ಹುಡುಕಾಡತೊಡಗಿದ.
ಸಂತ ಕೇಳಿದ ‘‘ಏನು ಹುಡುಕುತ್ತಿದ್ದೀಯ?’’
‘‘ಕಳ್ಳನನ್ನು ಕಟ್ಟಿ ಹಾಕಲು ಹಗ್ಗ’’
‘‘ಪ್ರೀತಿ, ಸ್ನೇಹ, ಬಂಧುತ್ವದ ಹಗ್ಗದಿಂದ ಅವನನ್ನು ಕಟ್ಟಿ ಹಾಕಿ. ಅದು ಎಂದಿಗೂ ಕಡಿಯದಷ್ಟು ಗಟ್ಟಿಯಾದ ಹಗ್ಗ’’ ಸಂತ ಸಲಹೆ ನೀಡಿದ.

ದಿಕ್ಕು
ಒಂದು ನದಿಯ ದಿಕ್ಕನ್ನು ತಿರುಗಿಸುವುದಕ್ಕೆ ಅವರು ಹೊರಟರು.
ಹಲವು ವರ್ಷಗಳ ಬಳಿಕ ದಿಕ್ಕೇನೋ ಬದಲಾಯಿತು.
ಆದರೆ ನದಿಯದ್ದಲ್ಲ, ಜನರದು.
ನದಿಯ ದಿಕ್ಕು ಎಂದಿನಂತೆ ಸಮುದ್ರದ ಕಡೆಗೇ ಇತ್ತು.
ಆದರೆ ಜನರ ದಿಕ್ಕು ಚೆಲ್ಲಾಪಿಲ್ಲಿಯಾಗಿತ್ತು.

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

3 comments:

  1. ಚಿಕ್ಕದಾದ ದೊಡ್ಡ ಅರ್ಥ ಸಂದೇಶ ನಿಡುವ ಚೊಕ್ಕದಾದ ಕಥೆಗಳು ನನಗಿಶ್ಟವಾಯ್ತು ಸರ್:)

    ReplyDelete
  2. ನ್ಯಾನೋ ಕಥೆಗಳ ಅತ್ಯುತ್ತಮ ಮೆರವಣಿಗೆ.

    ReplyDelete
  3. ಬಹಳಾನೇ ಚೆನ್ನಾಗಿವೆ... ಚಿತ್ರ ಚಿತ್ತಾರ ವರ್ಣನೆ .... ಭಾವನೆಯ ಕಲ್ಪನೆಯ ರಚನೆಯ ಶೈಲಿಯ ವಿಶಿಷ್ಟತೆ ಅದ್ಭುತವಾಗಿದೆ.. ಎಷ್ಟೋ ಸಂದೇಶಗಳು ಹೊರಹೊಮ್ಮಿದೆ.. ಇದರಲ್ಲಿ ಮನಕ್ಕೆ ಖುಷಿಯಾಗುವ ಸ್ವಲ್ಪ ಹಾಸ್ಯವೂ ಸಿಕ್ಕಿದೆ... ಒಟ್ಟಿನಲ್ಲಿ ಎಲ್ಲದರ ಮಿಶ್ರಣ .... ಸೊಗಸಾಗಿದೆ... :)

    ReplyDelete